ಕೋವಿಡ್ ಸಾಂಕ್ರಾಮಿಕಕ್ಕೆ ವುಹಾನ್ ಲ್ಯಾಬ್ ಸೋರಿಕೆ ಕಾರಣ: ಅಮೆರಿಕದ ಮಾಜಿ ಅಧಿಕಾರಿ ಹೇಳಿಕೆ
ಸಾಂದರ್ಭಿಕ ಚಿತ್ರ | Photo: PTI
ವಾಷಿಂಗ್ಟನ್: ಚೀನಾದ ವುಹಾನ್ ನಲ್ಲಿನ ಪ್ರಯೋಗಾಲಯದ ಸೋರಿಕೆಯಿಂದ ಕೋವಿಡ್-19 ಸಾಂಕ್ರಾಮಿಕ ರೋಗ ಹೊರಹೊಮ್ಮಿರುವ ಸಾಧ್ಯತೆಯಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮಾಜಿ ವಿಶೇಷ ಸಹಾಯಕ ಡಾ. ರಾಜ್ ಪಂಜಾಬಿ ಹೇಳಿದ್ದಾರೆ.
ನ್ಯೂಯಾರ್ಕ್ ನಲ್ಲಿ ಇತ್ತೀಚೆಗೆ ನಡೆದ ಆರೋಗ್ಯ ಸಮಾವೇಶದಲ್ಲಿ ಮಾತನಾಡಿದ ಅವರು ‘ಪ್ರಯೋಗಾಲಯ ಸೋರಿಕೆ ವರದಿ’ಯನ್ನು ನಿರಾಕರಿಸಲಾಗದು. ವಿಶ್ವದಾದ್ಯಂತದ ಸರಕಾರಗಳು ಪ್ರಯೋಗಾಲಯಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು. 2050ರ ವೇಳೆಗೆ ಮತ್ತೊಂದು ಸಾಂಕ್ರಾಮಿಕ ಕಾಣಿಸಿಕೊಳ್ಳುವ ಸಾಧ್ಯತೆ 50:50ರಷ್ಟಿದೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ಕಡಿಮೆ ನಿಧಿ ಲಭಿಸುತ್ತಿರುವುದು ಅಪಾಯದ ಪ್ರಮಾಣವನ್ನು ಹೆಚ್ಚಿಸಿದೆ ಎಂದವರು ಕಳವಳ ವ್ಯಕ್ತಪಡಿಸಿದರು.
ವುಹಾನ್ ಪ್ರಯೋಗಾಲಯ ಕೋವಿಡ್ ಸಾಂಕ್ರಾಮಿಕದ ಮೂಲ ಎಂದು 2020ರ ಮೇ ತಿಂಗಳಿನಲ್ಲಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆಯನ್ನು ಅಧ್ಯಕ್ಷ ಜೋ ಬೈಡನ್ ಖಂಡಿಸಿದ್ದರು ಮತ್ತು ಕೋವಿಡ್ ಸಾಂಕ್ರಾಮಿಕದ ಮೂಲ ಇನ್ನೂ ಅನಿಶ್ಚಿತವಾಗಿದೆ ಎಂದಿದ್ದರು. ಸಾಂಕ್ರಾಮಿಕ ಹೇಗೆ ಆರಂಭಗೊಂಡಿದೆ ಎಂಬ ಪ್ರಶ್ನೆಗೆ ಇದುವರೆಗೆ ಯಾವುದೇ ಖಚಿತ ಉತ್ತರ ಲಭಿಸಿಲ್ಲ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾಕ್ ಸುಲಿವಾನ್ ಹೇಳಿದ್ದರು.