ಯುದ್ಧ ಸನ್ನದ್ಧತೆಯನ್ನು ಹೆಚ್ಚಿಸಲು ಚೀನಿ ಪಡೆಗಳಿಗೆ ಕ್ಸಿ ಜಿನ್ ಕರೆ
ಕ್ಸಿಜಿನ್ಪಿಂಗ್ | PC ; PTI
ಶಾಂಘೈ: ಯುದ್ಧ ಸನ್ನದ್ಧತೆಯನ್ನು ಬಲಪಡಿಸುವಂತೆ ಚೀನಾ ಅಧ್ಯಕ್ಷ ಕ್ಸಿಜಿನ್ಪಿಂಗ್ ಅವರು ಚೀನಿ ಪಡೆಗಳಿಗೆ ಕರೆ ನೀಡಿದ್ದಾರೆಂದು ಸರಕಾರಿ ಮಾಧ್ಯಮವೊಂದು ಶನಿವಾರ ವರದಿ ಮಾಡಿದೆ.
ದ್ವೀಪರಾಷ್ಟ್ರ ತೈವಾನ್ನ ಸುತ್ತಲಿನ ಸಮುದ್ರಪ್ರದೇಶದಲ್ಲಿ ಚೀನಿ ಪಡೆಗಳು ದೊಡ್ಡ ಪ್ರಮಾಣದಲ್ಲಿ ಸೇನಾ ಕವಾಯತನ್ನು ನಡೆಸಿದ ಕೆಲವೇ ದಿನಗಳ ಚೀನಾ ಅಧ್ಯಕ್ಷರು ಈ ಕರೆ ನೀಡಿರುವುದು ಹೆಚ್ಚಿನ ಮಹತ್ವವನ್ನು ಪಡೆದಿದೆ.
ಚೀನಾದ ಜನತಾ ವಿಮೋಚನಾ ಸೇನೆ (ಪಿಎಲ್ಎ)ಯ ರಾಕೆಟ್ ದಳದ ಬ್ರಿಗೇಡ್ಗೆ ಭೇಟಿ ನೀಡಿದ ಸಂದರ್ಭ ಕ್ಸಿಜಿನ್ಪಿಂಗ್ ಈ ಹೇಳಿಕೆ ನೀಡಿದ್ದಾರೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಸಿಸಿಟಿವಿ ವರದಿ ಮಾಡಿದೆ. ಸೇನಾಪಡೆಗಳು ಯುದ್ಧಕ್ಕಾಗಿ ಸಮಗ್ರ ತರಬೇತಿ ಹಾಗೂ ಸಿದ್ಧತೆಯನ್ನು ಬಲಪಡಿಸಬೇಕು ಎಂದು ಸಿಸಿಟಿವಿ ವರದಿ ಮಾಡಿದೆ.
ಯೋಧರು ತಮ್ಮ ಆಯಕಟ್ಟಿನ ಪ್ರತಿರೋಧ ಹಾಗೂ ಕದನ ಸಾಮರ್ಥ್ಯವನ್ನು ಹೆಚ್ಚಿಸಬೇಕಾಗಿದೆಯೆಂದು ಕ್ಸಿ ಅವರು ಕರೆ ನೀಡಿದ್ದಾರೆಂದು ವರದಿ ಹೇಳಿದೆ.
ತೈವಾನ್ ತನ್ನ ಪ್ರಾಂತದ ಭಾಗವೆಂದು ಪ್ರತಿಪಾದಿಸುತ್ತಿರುವ ಚೀನಾವು, ಇತ್ತೀಚಿನ ವರ್ಷಗಳಲ್ಲಿ ಆ ದ್ವೀಪರಾಷ್ಟ್ರದ ಸುತ್ತಲೂ ತನ್ನ ಸೇನಾಬಲಪ್ರದರ್ಶನವನ್ನು ತೀವ್ರಗೊಳಿಸಿದೆ. ಸೋಮವಾರದಂದು ಚೀನಾವು, ತೈವಾನ್ನ ಸುತ್ತಲೂ ಫೈಟರ್ ಜೆಟ್ಗಳು, ಡ್ರೋನ್ಗಳು, ಸಮರನೌಕೆಗಳು ಹಾಗೂ ತಟರಕ್ಶಣಾ ದಳದ ನೌಕೆಗಳನ್ನು ನಿಯೋಜಿಸಿ, ಸೇನಾಕವಾಯತವನ್ನು ನಡೆಸಿದ್ದವು.
ತೈವಾನ್ನನ್ನು ಚೀನಾದ ನಿಯಂತ್ರಣಕ್ಕೆ ತರಲು ಬಲಪ್ರದರ್ಶನದ ಸಾಧ್ಯತೆಯನ್ನು ತಾನು ತಳ್ಳಿಹಾಕುವುದಿಲ್ಲವೆಂದು ಚೀನಾ ಆಡಳಿತವು ಹೇಳುತ್ತಲೇ ಬಂದಿದೆ.