ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಗೆ ಕ್ಸಿಜಿಂಪಿಂಗ್ ಒತ್ತಾಯ
► ಗಾಝಾಕ್ಕೆ 69 ದಶಲಕ್ಷ ಡಾಲರ್ ನೆರವಿನ ಘೋಷಣೆ ►ಚೀನಾ-ಅರಬ್ ಸಹಕಾರ ವೇದಿಕೆಯ ಶೃಂಗಸಭೆಗೆ ಚಾಲನೆ
Xi Jinping. | Photo: PTI
ಬೀಜಿಂಗ್: ಸ್ವತಂತ್ರ ಫೆಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸುವ ಒತ್ತಾಯವನ್ನು ಪುನರುಚ್ಚರಿಸಿರುವ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್, ಗಾಝಾದ ಜನತೆಗೆ ಇನ್ನಷ್ಟು ಮಾನವೀಯ ನೆರವು ಒದಗಿಸಲು ಚೀನಾ ಬದ್ಧ ಎಂದು ಘೋಷಿಸಿದ್ದಾರೆ.
ಬೀಜಿಂಗ್ನಲ್ಲಿ ಗುರುವಾರ ಚೀನಾ-ಅರಬ್ ದೇಶಗಳ ಶೃಂಗಸಭೆಗೆ ಚಾಲನೆ ನೀಡಿ ಮಾತನಾಡಿದ ಜಿಂಪಿಂಗ್ ` ಕಳೆದ ಅಕ್ಟೋಬರ್ನಿಂದ ಫೆಲೆಸ್ತೀನ್-ಇಸ್ರೇಲ್ ಸಂಘರ್ಷವು ತೀವ್ರವಾಗಿ ಉಲ್ಬಣಗೊಂಡಿದ್ದು ಜನರಿಗೆ ಅಪಾರ ಸಂಕಷ್ಟ ತಂದಿದೆ. ಯುದ್ಧವು ಅನಿರ್ಧಿಷ್ಟವಾಗಿ ಮುಂದುವರಿಯಬಾರದು' ಎಂದರು.
ಎರಡು ರಾಷ್ಟ್ರಗಳ ಪರಿಹಾರ ಸೂತ್ರವನ್ನು ಚೀನಾ ಬೆಂಬಲಿಸುತ್ತದೆ ಎಂದ ಅವರು, ಗಾಝಾಕ್ಕೆ ಮಾನವೀಯ ನೆರವಿನ ರೂಪದಲ್ಲಿ 69 ದಶಲಕ್ಷ ಡಾಲರ್ ನೆರವು ಹಾಗೂ ಇಸ್ರೇಲ್-ಹಮಾಸ್ ಯುದ್ಧದಲ್ಲಿ ನಿರಾಶ್ರಿತರಿಗೆ ನೆರವು ಒದಗಿಸುವ ವಿಶ್ವಸಂಸ್ಥೆಯ ಏಜೆನ್ಸಿಗೆ 3 ದಶಲಕ್ಷ ಡಾಲರ್ ನೆರವು ಒದಗಿಸುವುದಾಗಿ ಘೋಷಿಸಿದರು.
ಈ ಹಿಂದಿನಿಂದಲೂ ಫೆಲೆಸ್ತೀನ್ ಅನ್ನು ಬೆಂಬಲಿಸುತ್ತಾ ಬಂದಿರುವ ಚೀನಾವು ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ವಸಾಹತು ನಿರ್ಮಿಸುವುದನ್ನು ಖಂಡಿಸಿದೆ. ಆದರೆ, ಚೀನಾವು ಇಸ್ರೇಲ್ನೊಂದಿಗೆ ಆರ್ಥಿಕ ಸಂಬಂಧಗಳನ್ನು ಬೆಳೆಸುತ್ತಿದೆ.
ಚೀನಾದ ಜತೆಗೆ ವ್ಯಾಪಾರ, ಶುದ್ಧ ಇಂಧನ, ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಆರೋಗ್ಯ ರಕ್ಷಣೆ ಕ್ಷೇತ್ರಗಳಲ್ಲಿ ಇನ್ನಷ್ಟು ಆಳವಾದ ಸಹಕಾರ ಸಂಬಂಧಕ್ಕೆ ಕ್ಸಿಜಿಂಪಿಂಗ್ ಕರೆ ನೀಡಿದರು.
ಈ ವಲಯದಲ್ಲಿ ಚೀನಾ ಮುಖ್ಯವಾಗಿ ಆರ್ಥಿಕ ಕ್ಷೇತ್ರಕ್ಕೆ ಆದ್ಯತೆ ನೀಡುತ್ತದೆ. ಇತ್ತೀಚಿನ ವರ್ಷಗಳಲ್ಲಿ ಗಲ್ಫ್ ರಾಷ್ಟ್ರಗಳೊಂದಿಗೆ ಸ್ಥಾಪಿಸಲಾದ ಸಹಕಾರ ಸಂಬಂಧದ ಆವೇಗವನ್ನು ಮುಂದುವರಿಸಲು ಮತ್ತು ವ್ಯಾಪಾರ, ತಂತ್ರಜ್ಞಾನ ಹಾಗೂ ಇತರ ಸೈಬರ್ ಉಪಕ್ರಮಗಳಲ್ಲಿ ತನ್ನ ಹೂಡಿಕೆಯನ್ನು ವಿಸ್ತರಿಸಲು ಬಯಸಿದೆ. ಜತೆಗೆ ಪಾಶ್ಚಿಮಾತ್ಯ ಶಕ್ತಿಗಳಿಗೆ ತನ್ನನ್ನು ಪರ್ಯಾಯವೆಂದು ಹಾಗೂ ವಿಶ್ವಸನೀಯ ಪಾಲುದಾರನೆಂದು ಬಿಂಬಿಸಲು ಬಯಸುತ್ತಿದೆ ಎಂದು ವಿಶ್ಲೇಷಿಸಲಾಗಿದೆ.
ಈಜಿಪ್ಟ್ ಅಧ್ಯಕ್ಷ ಅಬ್ದುಲ್ ಫತಾಹ್ ಅಲ್-ಸಿಸಿ, ಟ್ಯುನೀಷಿಯಾದ ಅಧ್ಯಕ್ಷ ಕಯಾಸ್ ಸಯೀದ್, ಎಮಿರೇಟ್ಸ್ನ ಅಧ್ಯಕ್ಷ ಶೇಖ್ ಮುಹಮ್ಮಸ್ ಝಾಯೆದ್ ಅಲ್ ನಹ್ಯಾನ್ ಮತ್ತು ಬಹ್ರೇನ್ ದೊರೆ ಹಮದ್ ಬಿನ್ ಇಸಾ ಅಲ್ಖಲೀಫಾ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ವ್ಯಾಪಾರ ಸಂಬಂಧಗಳನ್ನು ವಿಸ್ತರಿಸುವ ಜತೆಗೆ ಈ ವಲಯದಲ್ಲಿ ರಾಜತಾಂತ್ರಿಕ ಪಾತ್ರವನ್ನು ನಿರ್ವಹಿಸಲು ಚೀನಾ ಬಯಸಿದೆ. ಇದುವರೆಗೆ ರಾಜತಾಂತ್ರಿಕ ವಲಯದಲ್ಲಿ ಜಾಗತಿಕ ಪ್ರಮುಖ ಶಕ್ತಿಗಳಾಗಿ ಅಮೆರಿಕ ಮತ್ತು ರಶ್ಯ ಮಾತ್ರ ಗುರುತಿಸಿಕೊಳ್ಳುತ್ತಿದ್ದು, ಈ ದೇಶಗಳಿಗೆ ಪರ್ಯಾಯ ಶಕ್ತಿಯಾಗಿ ಗುರುತಿಸಿಕೊಳ್ಳುವುದು ಚೀನಾದ ಉದ್ದೇಶವಾಗಿದೆ. 2023ರಲ್ಲಿ ಚೀನಾದ ಮಧ್ಯಸ್ಥಿಕೆಯಲ್ಲಿ ಸೌದಿ ಅರೆಬಿಯಾ ಮತ್ತು ಇರಾನ್ ತಮ್ಮ ರಾಜತಾಂತ್ರಿಕ ಸಂಬಂಧಗಳನ್ನು ಮರುಸ್ಥಾಪಿಸಿವೆ.
ವಾರ್ತಾ ಭಾರತಿ ವಾಟ್ಸ್ ಆ್ಯಪ್ ಚಾನೆಲ್ ಗೆ ಸೇರಲು https://whatsapp.com/channel/0029VaA8ju86LwHn9OQpEq28 ಈ ಲಿಂಕ್ ಕ್ಲಿಕ್ ಮಾಡಿ, Follow ಮಾಡುವ ಮೂಲಕ ಕ್ಷಣಕ್ಷಣದ ಅಪ್ಡೇಟ್ ಪಡೆಯಿರಿ.