ಯೆಮನ್ | ಹೌದಿಗಳಿಂದ ಮನೆ ಸ್ಫೋಟ, 7 ಮಕ್ಕಳ ಸಹಿತ 9 ಮಂದಿ ಮೃತ್ಯು
ಸಾಂದರ್ಭಿಕ ಚಿತ್ರ | Photo | NDTV
ಸನಾ: ಯೆಮನ್ ರಾಜಧಾನಿ ಸನಾದ ಆಗ್ನೇಯದಲ್ಲಿರುವ ಪಟ್ಟಣದಲ್ಲಿ ಇರಾನ್ ಬೆಂಬಲಿತ ಹೌದಿಗಳು ಮನೆಯೊಂದನ್ನು ಸ್ಫೋಟಿಸಿದ್ದರಿಂದ 7 ಮಕ್ಕಳ ಸಹಿತ ಒಂದೇ ಕುಟುಂಬದ 9 ಮಂದಿ ಮೃತಪಟ್ಟಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಮನೆಯ ಮಾಲಿಕ ಇಬ್ರಾಹಿಂ ಅಲ್- ಝಲೇಯ್ ರೂಪಿಸಿದ್ದ ಹೊಂಚುದಾಳಿಯಲ್ಲಿ ಇಬ್ಬರು ಹೌದಿ ಹೋರಾಟಗಾರರು ಹತರಾಗಿದ್ದರು ಎಂದು ಆರೋಪಿಸಿ ಮನೆಯನ್ನು ಸ್ಫೋಟಿಸಲಾಗಿದೆ. ಸ್ಫೋಟದಿಂದ ಕುಸಿದು ಬಿದ್ದ ಮನೆಯ ಅವಶೇಷಗಳಡಿ ಇನ್ನೂ ಕೆಲವರು ಸಿಲುಕಿರುವ ಸಾಧ್ಯತೆಯಿದೆ. ಅಕ್ಕಪಕ್ಕದ ಹಲವು ಮನೆಗಳಿಗೂ ಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಮನೆಯನ್ನು ಸ್ಫೋಟಿಸಿರುವುದು ಭದ್ರತಾ ಪಡೆಯ ಬೇಜವಾಬ್ದಾರಿ ನಡೆಯಾಗಿದ್ದು ಈ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಹೌದಿ ನೇತೃತ್ವದ ಆಂತರಿಕ ಸಚಿವಾಲಯ ಹೇಳಿದೆ.
2014ರ ಅಂತರ್ಯುದ್ಧದ ಬಳಿಕ ಯೆಮನ್ ರಾಜಧಾನಿ ಸನಾ ಸೇರಿದಂತೆ ಬಹುತೇಕ ಪ್ರದೇಶಗಳು ಹೌದಿಗಳ ನಿಯಂತ್ರಣದಲ್ಲಿವೆ.
Next Story