ಅಮೆರಿಕದ ಸಮರ ನೌಕೆ ಮೇಲೆ ಹೌದಿಗಳಿಂದ ಕ್ಷಿಪಣಿ, ಡ್ರೋನ್ ದಾಳಿ
ಗುರಿತಪ್ಪಿದೆಯೆಂದು ಅಮೆರಿಕ ಸ್ಪಷ್ಟನೆ
Photo File: US Navy via AP
ಹೊಸದಿಲ್ಲಿ: ಕಳೆದ ನಲ್ವತ್ತೆಂಟು ತಾಸುಗಳಲ್ಲಿ ಉತ್ತರ ಕೆಂಪು ಸಮುದ್ರದಲ್ಲಿ ಅಮೆರಿಕದ ಸಮರನೌಕೆಗಳ ಮೇಲೆ ಮೂರು ಬಾರಿ ದಾಳಿ ನಡೆಸಿರುವುದಾಗಿ ಯಮನ್ನ ಹೌದಿ ಹೋರಾಟಗಾರರು ತಿಳಿಸಿದ್ದಾರೆ.
ಯುಎಸ್ಎಸ್ ಹ್ಯಾರಿ ಎಸ್.ಟ್ರೂಮ್ಯಾನ್ ಕ್ಯಾರಿಯರ್ ಗ್ರೂಪ್ ಸಮರನೌಕೆಯನ್ನು ಗುರಿಯಿರಿಸಿ ಕ್ಷಿಪಣಿಗಳು ಹಾಗೂ ಡ್ರೋನ್ಗಳಿಂದ ದಾಳಿ ನಡೆಸಿರುವುದಾಗಿ ಇರಾನ್ ಬೆಂಬಲಿತ ಹೌದಿ ಹೋರಾಟಗಾರರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಲ್ಲಿ ತಾವು ಅಮೆರಿಕದ ಮೇಲೆ ನಡೆಸಿದ ಮೂರನೇ ದಾಳಿ ಇದಾಗಿದೆಯೆಂದು ಅವರು ಹೇಳಿದ್ದಾರೆ.
ಈ ಮಧ್ಯೆ ಅಮೆರಿಕದ ರಕ್ಷಣಾ ಇಲಾಖೆಯ ಅಧಿಕಾರಿಯೊಬ್ಬರು ಹೇಳಿಕೆಯೊಂದನ್ನು ನೀಡಿ, ‘‘ಹೌದಿಗಳು ಸುಳ್ಳುಗಳು ಹಾಗೂ ತಪ್ಪು ಮಾಹಿತಿಯನ್ನು ಹರಡುವುದನ್ನು ಮುಂದುವರಿಸಿದ್ದಾರೆ. ಇರಾನ್ ಬೆಂಬಲಿತ ಈ ಗುಂಪು ನಾವು ನಡೆಸಿದ ದಾಳಿಗಳನ್ನು ನಿಕೃಷ್ಟಗೊಳಿಸಿ ಹೇಳುವುದರಲ್ಲಿ ಹಾಗೂ ಅವರ ಯಶಸ್ಸನ್ನು ಉತ್ಪ್ರೇಕ್ಷೆ ಮಾಡಿ ಬಣ್ಣಿಸುವಲ್ಲಿ ಸಿದ್ಧಹಸ್ತರಾಗಿದ್ದಾರೆ’’ ಎಂದು ಅವರು ಹೇಳಿದ್ದಾರೆ.
ಅಮೆರಿಕದ ಸಮರನೌಕೆಯ ಮೇಲೆ ದಾಳಿ ನಡೆಸಿರುವುದಾಗಿ ಹೌದಿಗಳ ಹೇಳಿಕೆ ದೃಢಪಟ್ಟಿಲ್ಲವೆಂದು ಅಮೆರಿಕದ ವಾಯುಪಡೆಯ ಲೆಫ್ಟಿನೆಂಟ್ ಜನರಲ್ ಅಲೆಕ್ಸಸ್ ಗಿಂಕೆವಿಚ್ ಸುದ್ದಿಗಾರರಿಗೆ ತಿಳಿಸಿದು. ಹೌದಿ ಬಂಡುಕೋರರ ಗುರಿಯು 100 ಮೈಲುಗಳಷ್ಟು ದೂರದಿಂದಲೇ ತಪ್ಪಿದೆ ಎಂದವರು ಹೇಳಿದ್ದಾರೆ.
ಇದಕ್ಕೂ ಮುನ್ನ ಹೌದಿ ಹೋರಾಟಗಾರರನ್ನು ಬೆಂಬಲಿಸಿ ಯೆಮನ್ನ ರಾಜಧಾನಿ ಸಾನಾದಲ್ಲಿ ನಡೆದ ಪ್ರತಿಭಟನೆಯಲ್ಲಿ 50 ಸಾವಿರಕ್ಕಿಂತಲೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಶನಿವಾರದಿಂದ ಯೆಮನ್ನಲ್ಲಿರುವ ಹೌದಿ ನೆಲೆಗಳ ಮೇಲೆ ಅಮೆರಿಕವು ಹೊಸದಾಗಿ ವಾಯುದಾಳಿಗಳನ್ನು ನಡೆಸಿದ ಬಳಿಕ ಪ್ರತಿಭಟನೆಗಳು ಭುಗಿಲೆದ್ದಿವೆ.
ಇಸ್ರೇಲ್ ಗಾಝಾದ ಮೇಲೆ ದಾಳಿ ನಡೆಸಿದ ಬಳಿಕ ಫೆಲೆಸ್ತೀನಿಯರೊಂದಿಗೆ ಏಕತೆಯನ್ನು ಪ್ರದರ್ಶಿಸುತ್ತಿರುವ ಹೌದಿ ಹೋರಾಟಗಾರರು ಕೆಂಪು ಸಮುದ್ರದಲ್ಲಿರುವ ಅಮೆರಿಕದ ನೌಕೆಗಳ ಮೇಲೆ ದಾಳಿಯನ್ನು ನಡೆಸುತ್ತಿದೆ.