ಯೆಮನ್: ವಲಸಿಗರ ಕೇಂದ್ರದ ಮೇಲೆ ಅಮೆರಿಕದ ದಾಳಿ; 35 ಮಂದಿ ಮೃತ್ಯು

ಸನಾ: ಯೆಮನ್ ನಲ್ಲಿ ಹೌದಿಗಳ ನಿಯಂತ್ರಣದಲ್ಲಿರುವ ಸಾಡ ನಗರದಲ್ಲಿರುವ ವಲಸಿಗರ ಕೇಂದ್ರವನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 35 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಆಫ್ರಿಕನ್ ವಲಸಿಗರ ಬಂಧನ ಕೇಂದ್ರವನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ಕೇಂದ್ರದ ಕಟ್ಟಡ ನೆಲಸಮಗೊಂಡಿದ್ದು ಕಟ್ಟಡದ ಅವಶೇಷಗಳಡಿಯಿಂದ 35 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಬಂಧನ ಕೇಂದ್ರದಲ್ಲಿ 115 ವಲಸಿಗರಿದ್ದರು. ಸಾವು-ನೋವಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ. ನಾಗರಿಕ ರಕ್ಷಣಾ ತಂಡಗಳು ಮತ್ತು ರೆಡ್ಕ್ರೆಸೆಂಟ್ ತಂಡ ದಾಳಿ ನಡೆದ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿವೆ ಎಂದು ಹೌದಿ ನಿಯಂತ್ರಣದ ಅಲ್-ಮಸೀರಾ ಟಿವಿ ಸೋಮವಾರ ವರದಿ ಮಾಡಿದೆ.
ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿ ಪ್ರದೇಶದಲ್ಲಿ ಸಾಗುವ ಹಡಗುಗಳಿಗೆ ಹೌದಿಗಳಿಂದ ಎದುರಾಗಿರುವ ಬೆದರಿಕೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ಮಾರ್ಚ್ 15ರಿಂದ ಅಮೆರಿಕ ಆರಂಭಿಸಿರುವ `ರಫ್ ರೈಡರ್' ಕಾರ್ಯಾಚರಣೆಯಲ್ಲಿ ಇದುವರೆಗೆ ಯೆಮನ್ ನ ಹೌದಿಗಳ 800ಕ್ಕೂ ಅಧಿಕ ನೆಲೆಗಳ ಮೇಲೆ ನಡೆಸಿರುವ ದಾಳಿಯಲ್ಲಿ 100ಕ್ಕೂ ಅಧಿಕ ಹೌದಿ ಬಂಡುಕೋರರನ್ನು ಹತ್ಯೆ ಮಾಡಿರುವುದಾಗಿ ಅಮೆರಿಕದ ಮಿಲಿಟರಿ ರವಿವಾರ ಹೇಳಿದೆ.