ಶ್ವೇತಭವನದಲ್ಲಿ ನಡೆದ ಘಟನೆಗೆ ಝೆಲೆನ್ಸ್ಕಿ ಕ್ಷಮೆ ಯಾಚನೆ: ಅಮೆರಿಕ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್

ಝೆಲೆನ್ಸ್ಕಿ , ಡೊನಾಲ್ಡ್ ಟ್ರಂಪ್ | PC : PTI
ವಾಷಿಂಗ್ಟನ್: ಕಳೆದ ತಿಂಗಳು ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ಮಾತುಕತೆ ಸಂದರ್ಭ ನಡೆದ ಮಾತಿನ ಚಕಮಕಿ ಘಟನೆಗೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಕ್ಷಮೆ ಯಾಚಿಸಿ ಪತ್ರ ಬರೆದಿದ್ದಾರೆ ಎಂದು ಅಮೆರಿಕದ ವಿಶೇಷ ಪ್ರತಿನಿಧಿ ಸ್ಟೀವ್ ವಿಟ್ಕಾಫ್ ಹೇಳಿದ್ದಾರೆ.
`ಝೆಲೆನ್ಸ್ಕಿ ಅಧ್ಯಕ್ಷರಿಗೆ ಪತ್ರವನ್ನು ರವಾನಿಸಿದ್ದಾರೆ. ಶ್ವೇತಭವನದ ಓವಲ್ ಕಚೇರಿಯಲ್ಲಿ ನಡೆದ ಎಲ್ಲಾ ಘಟನೆಗೂ ಅವರು ಕ್ಷಮೆ ಯಾಚಿಸಿದ್ದಾರೆ. ಇದೊಂದು ಮಹತ್ವದ ನಡೆ ಎಂದು ಭಾವಿಸುತ್ತೇನೆ ಮತ್ತು ಇದೀಗ ಅಮೆರಿಕ, ಉಕ್ರೇನ್ ಹಾಗೂ ಯುರೋಪಿಯನ್ ತಂಡಗಳ ನಡುವೆ ಹಲವಾರು ಮಾತುಕತೆಗಳು ನಡೆದಿವೆ ಎಂದವರು ಹೇಳಿದ್ದಾರೆ.
ಕಳೆದ ವಾರ ಅಮೆರಿಕ ಸಂಸತ್ನ ಜಂಟಿ ಅಧಿವೇಶನವನ್ನು ಉಲ್ಲೇಖಿಸಿ ಮಾತನಾಡಿದ್ದ ಟ್ರಂಪ್ `ಝೆಲೆನ್ಸ್ಕಿಯಿಂದ ಪತ್ರ ಬಂದಿದೆ' ಎಂದಿದ್ದರು. ಮಾತುಕತೆಗೆ ಉಕ್ರೇನ್ನ ಬದ್ಧತೆಯನ್ನು ಝೆಲೆನ್ಸ್ಕಿ ಪುನರುಚ್ಚರಿಸಿದ್ದಾರೆ. ಶಾಶ್ವತ ಶಾಂತಿಗಾಗಿ ಸಾಧ್ಯವಾದಷ್ಟು ಬೇಗ ಸಂಧಾನದ ಮೇಜಿಗೆ ಬರಲು ಉಕ್ರೇನ್ ಆಸಕ್ತಿ ಹೊಂದಿದೆ ಎಂದು ಟ್ರಂಪ್ ಹೇಳಿದ್ದರು.
ಶ್ವೇತಭವನದ ಘಟನೆಗೆ ಸಂಬಂಧಿಸಿ ಝೆಲೆನ್ಸ್ಕಿ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಉಕ್ರೇನ್ನ ಉನ್ನತ ಅಧಿಕಾರಿ ಮಿಖಾಯಿಲೊ ಪೊಡೊಲ್ಯಾಕ್ ಈ ಹಿಂದೆ ಹೇಳಿದ್ದರು.