ಝೆಲೆನ್ಸ್ಕಿ ಹತ್ಯೆಗೆ ಸಂಚು ಪ್ರಕರಣ | ಉಕ್ರೇನ್ ರಾಷ್ಟ್ರೀಯ ಭದ್ರತಾ ಪಡೆ ಮುಖ್ಯಸ್ಥನ ವಜಾ
ವೊಲೊದಿಮಿರ್ ಝೆಲೆನ್ಸ್ಕಿ | PHOTO: NDTV
ಕೀವ್: ತನ್ನ ಹತ್ಯೆಗೆ ಸಂಚು ರೂಪಿಸಿದ್ದ ತಂಡದಲ್ಲಿ ರಾಷ್ಟ್ರೀಯ ಭದ್ರತಾ ಪಡೆಯ ಇಬ್ಬರು ಸದಸ್ಯರೂ ಶಾಮೀಲಾಗಿದ್ದಾರೆ ಎಂಬ ವರದಿಯ ಹಿನ್ನೆಲೆಯಲ್ಲಿ ಉಕ್ರೇನ್ ರಾಷ್ಟ್ರೀಯ ಭದ್ರತಾ ಪಡೆಯ ಮುಖ್ಯಸ್ಥನನ್ನು ಅಧ್ಯಕ್ಷ ವೊಲೊದಿಮರ್ ಝೆಲೆನ್ಸ್ಕಿ ವಜಾಗೊಳಿಸಿರುವುದಾಗಿ `ಅಲ್ ಜಝೀರಾ' ವರದಿ ಮಾಡಿದೆ.
ಅಧ್ಯಕ್ಷರು ಹಾಗೂ ಇತರ ಉನ್ನತ ಮುಖಂಡರ ಭದ್ರತೆಯ ಹೊಣೆ ವಹಿಸಿಕೊಂಡಿರುವ ರಾಷ್ಟ್ರೀಯ ಭದ್ರತಾ ಪಡೆ(ಎಸ್ಬಿಯು)ಯ ಇಬ್ಬರು ಸದಸ್ಯರು ಝೆಲೆನ್ಸ್ಕಿಯನ್ನು ಒತ್ತೆಸೆರೆಯಲ್ಲಿ ಇರಿಸಿಕೊಂಡು ಬಳಿಕ ಹತ್ಯೆ ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಈ ಸಂಚನ್ನು ಬಯಲಿಗೆಳೆಯಲಾಗಿದೆ ಎಂದು ಎಸ್ಬಿಯು ಈ ವಾರದ ಆರಂಭದಲ್ಲಿ ಹೇಳಿತ್ತು. ಈ ಹಿನ್ನೆಲೆಯಲ್ಲಿ ಎಸ್ಬಿಯು ಮುಖ್ಯಸ್ಥ ಸೆಹ್ರಿ ರುಡ್ರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿದ ವರದಿ ಹೇಳಿದೆ.
ಎಸ್ಬಿಯು ಉನ್ನತ ಅಧಿಕಾರಿ ವ್ಯಾಸಿಲ್ ಮಲಿಯುಕ್ ಮತ್ತು ಮಿಲಿಟರಿ ಗುಪ್ತಚರ ವಿಭಾಗದ ಮುಖ್ಯಸ್ಥ ಕಿರಿಲೊ ಬುಡನೋವ್ ಅವರನ್ನೂ ಹತ್ಯೆಗೈಯಲು ನಿರ್ಧರಿಸಲಾಗಿತ್ತು. ಈ ಪ್ರಕರಣದಲ್ಲಿ ಉಕ್ರೇನ್ನ ಇಬ್ಬರು ಭದ್ರತಾ ಅಧಿಕಾರಿಗಳನ್ನು ಬಂಧಿಸಲಾಗಿದ್ದು `ಹಣ ಪಡೆದು ಉಕ್ರೇನ್ಗೆ ವಿರುದ್ಧ ವಿಧ್ವಂಸಕ ಚಟುವಟಿಕೆ ನಡೆಸುತ್ತಿದ್ದ ಆರೋಪ ಹೊರಿಸಲಾಗಿದೆ. ಬಂಧಿತರ ವಿರುದ್ಧ ದೇಶದ್ರೋಹ ಮತ್ತು ಭಯೋತ್ಪಾದಕ ಕೃತ್ಯಕ್ಕೆ ಸಿದ್ಧತೆ ನಡೆಸುತ್ತಿದ್ದ ಪ್ರಕರಣ ದಾಖಲಿಸಲಾಗಿದೆ ಎಂದು ಉಕ್ರೇನ್ನ ನ್ಯಾಯಾಲಯದ ಮೂಲಗಳು ಹೇಳಿವೆ.