ಗಡಿಯಲ್ಲಿ ಭದ್ರತೆ ಹೆಚ್ಚಿಸಲು ಝೆಲೆನ್ಸ್ಕಿ ಆದೇಶ
Photo: PTI
ಕೀವ್: ರಶ್ಯ ಅಧ್ಯಕ್ಷ ಪುಟಿನ್ ವಿರುದ್ಧ ಬಂಡೆದ್ದಿದ್ದ ವ್ಯಾಗ್ನರ್ ಗುಂಪು ಈಗ ಬೆಲಾರುಸ್ಗೆ ಸ್ಥಳಾಂತರಗೊಂಡಿರುವ ಹಿನ್ನೆಲೆಯಲ್ಲಿ ಉಕ್ರೇನ್-ಬೆಲಾರುಸ್ ಗಡಿಭಾಗದಲ್ಲಿ ಭದ್ರತೆಯನ್ನು ಹೆಚ್ಚಿಸುವಂತೆ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಆದೇಶಿಸಿದ್ದಾರೆ.
ಬೆಲಾರುಸ್ನಲ್ಲಿ ಈಗ ಇರುವ ಪರಿಸ್ಥಿತಿಯ ಬಗ್ಗೆ ಉಕ್ರೇನ್ನ ಗುಪ್ತಚರ ಪಡೆ, ವಿದೇಶದ ಗುಪ್ತಚರ ಪಡೆ ಮತ್ತು ಗಡಿಭದ್ರತಾ ಪಡೆ ತನಗೆ ಮಾಹಿತಿ ನೀಡಿದೆ. ಬಳಿಕ ಸೇನಾಪಡೆ ಮುಖಂಡರೊಂದಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಈ ಮಧ್ಯೆ, ಬೆಲಾರುಸ್ಗೆ ಸ್ಥಳಾಂತರಗೊಳ್ಳಲು ಬಯಸುವ ವ್ಯಾಗ್ನರ್ ಯೋಧರಿಗೆ ಸುರಕ್ಷಿತ ಅವಕಾಶ ಒದಗಿಸುವ ವಾಗ್ದಾನವನ್ನು ಈಡೇರಿಸುವುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಪುನರುಚ್ಚರಿಸಿದ್ದಾರೆ.
ಬಂಡೆದ್ದಿರುವ ವ್ಯಾಗ್ನರ್ ಯೋಧರಿಗೆ ರಶ್ಯ ಮೂರು ಆಯ್ಕೆಯನ್ನು ನೀಡಿತ್ತು. ರಶ್ಯದ ರಕ್ಷಣಾ ಇಲಾಖೆಯ ಜತೆಗಿನ ಗುತ್ತಿಗೆ ಕರಾರಿಗೆ ಸಹಿ ಹಾಕುವುದು, ಬೆಲಾರುಸ್ಗೆ ಗಡಿಪಾರು ಆಗುವುದು ಅಥವಾ ನಾಗರಿಕ ಬದುಕಿಗೆ ಮರಳುವುದು ಎಂಬ ಮೂರು ಆಯ್ಕೆಯಲ್ಲಿ ಬಂಡುಗೋರರು ಸೂಕ್ತ ಆಯ್ಕೆ ಮಾಡಿಕೊಂಡಿರುವುದನ್ನು ಸ್ವಾಗತಿಸುವುದಾಗಿ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪುಟಿನ್ ಹೇಳಿದ್ದಾರೆ.