ಐಪಿಎಲ್ ಹರಾಜು: ನಾಯಕತ್ವ ಗುಣ ಹೊಂದಿದ ಸ್ಟಾರ್ ಆಟಗಾರರು ಸಜ್ಜು
ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ PC: x.com/THEGOATBUMRAH
ಮುಂಬೈ: ಐಪಿಎಲ್ ಆಟಗಾರರ ಮೆಗಾ ಹರಾಜಿಗಾಗಿ ಎಲ್ಲ 10 ಐಪಿಎಲ್ ಫ್ರಾಂಚೈಸಿಗಳು ಸೌದಿ ಅರೇಬಿಯಾದ ರಿಯಾದ್ ನಲ್ಲಿ ಈ ತಿಂಗಳ 24 ಮತ್ತು 25ರಂದು ಸಮಾವೇಶಗೊಳ್ಳಲು ಸಿದ್ಧತೆ ನಡೆಸುತ್ತಿರುವ ನಡುವೆಯೇ ಸಂಭಾವ್ಯ ನಾಯಕತ್ವ ಗುಣಗಳನ್ನು ಹೊಂದಿರುವ ಮೂವರು ಭಾರತೀಯ ಆಟಗರರನ್ನು ಉಳಿಸಿಕೊಳ್ಳಬಹುದಾಗಿದೆ. ದೀಪಾವಳಿ ಸಂದರ್ಭದಲ್ಲಿ ತಂಡದಲ್ಲೇ ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ಫ್ರಾಂಚೈಸಿಗಳು ಬಿಡುಗಡೆ ಮಾಡಿದ್ದು, ರಿಷಭ್ ಪಂತ್, ಶ್ರೇಯಸ್ ಅಯ್ಯರ್ ಮತ್ತು ಕೆ.ಎಲ್.ರಾಹುಲ್ ಹರಾಜಿಗೆ ಲಭ್ಯರಿರುತ್ತಾರೆ.
ಪಂತ್ ಡೆಲ್ಲಿ ಕ್ಯಾಪಿಟಲ್ಸ್ ಜತೆಗಿನ ಒಂಬತ್ತು ವರ್ಷಗಳ ಸಹಯೋಗವನ್ನು ಕೊನೆಗೊಳಿಸಿದ್ದು, ಕೊಲ್ಕತ್ತಾ ನೈಟ್ ರೈಡರ್ಸ್ ಮೂರು ಬಾರಿ ಪ್ರಶಸ್ತಿ ವಿಜೇತ ನಾಯಕನನ್ನು ಬಿಡುಗಡೆ ಮಾಡಿದೆ. ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್, ಆರ್ ಸಿಬಿ ಮತ್ತು ಎಲ್ಎಸ್ ಜಿ ಅಯ್ಯರ್ ಮೇಲೆ ಕಣ್ಣಿಟ್ಟಿದ್ದರೆ, ಅಯ್ಯರ್ ಅವರನ್ನು ಉಳಿಸಿಕೊಳ್ಳಲು ಕೆಕೆಆರ್ ನಡೆಸಿದ ಪ್ರಯತ್ನ ವಿಫಲವಾಗಿದೆ.
2024ರ ಐಪಿಎಲ್ ಚಾಂಪಿಯನ್ ಕೆಕೆಆರ್ ತಂಡ ವೆಸ್ಟ್ಇಂಡೀಸ್ ಆಲ್ ರೌಂಡರ್ ಆ್ಯಂಡ್ರೂ ರಸೆಲ್ ಮತ್ತು ಸುನೀಲ್ ನರೇನ್ (ತಲಾ 12 ಕೋಟಿ) ಉಳಿಸಿಕೊಂಡಿದ್ದು, ರಿಂಕು ಸಿಂಗ್ (13 ಕೋಟಿ) ವರುಣ್ ಚಕ್ರವರ್ತಿ (12 ಕೋಟಿ) ಅವರನ್ನು ಉಳಿಸಿಕೊಂಡಿದೆ. ಜತೆಗೆ ಇದುವರೆಗೆ ತಂಡವನ್ನು ಪ್ರತಿನಿಧಿಸದ ರಮಣದೀಪ್ ಸಿಂಗ್ (4 ಕೋಟಿ) ಮತ್ತು ವೇಗಿ ಹರ್ಷಿತ್ ರಾಣ (4 ಕೋಟಿ) ತಂಡದಲ್ಲಿ ಉಳಿದುಕೊಂಡಿದ್ದಾರೆ.
2024ರಲ್ಲಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನ ಗಳಿಸಿದರೂ, ಮುಂಬೈ ಇಂಡಿಯನ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ನಾಯಕನಾಗಿ ಉಳಿಸಿಕೊಂಡಿದೆ. ಪ್ರಮುಖ ಆಟಗಾರರಾದ ಜಸ್ಪ್ರೀತ್ ಬೂಮ್ರಾ (18 ಕೋಟಿ), ಸೂರ್ಯಕುಮಾರ್ ಯಾದವ್ (16.35 ಕೋಟಿ), ಹಾರ್ದಿಕ್ ಪಾಂಡ್ಯ (16.35 ಕೋಟಿ) ತ್ತು ರೋಹಿತ್ ಶರ್ಮಾ (16.3 ಕೋಟಿ) ಅವರು ತಂಡದಲ್ಲಿ ಮುಂದುವರಿಯಲಿದ್ದಾರೆ.
ಅಕ್ಷರ್ ಪಟೇಲ್, ಕುಲದೀಪ್ ಯಾದವ್, ದಕ್ಷಿಣ ಆಫ್ರಿಕಾ ಬ್ಯಾಟರ್ ಟ್ರಿಸ್ಟನ್ ಸ್ಟಬ್ಸ್ ಹಾಗೂ ಅಭಿಷೇಕ್ ಪೊರೆಲ್ ಕ್ರಮವಾಗಿ 16.5 ಕೋಟಿ, 13.25 ಕೋಟಿ, 10 ಕೋಟಿ ಮತ್ತು 4 ಕೋಟಿ ಸಂಭಾವನೆಯೊಂದಿಗೆ ಉಳಿದುಕೊಂಡಿದ್ದಾರೆ. ಅಕ್ಷರ್ ಪಟೇಲ್ ನಾಯಕತ್ವದ ಹೊಣೆ ವಹಿಸಿಕೊಳ್ಳುವ ಸಾಧ್ಯತೆ ಇದೆ.
ಲಕ್ನೋ ಸೂಪರ್ ಜೈಂಟ್ಸ್ ನಿಕೋಲಸ್ ಪೂರನ್ (21 ಕೋಟಿ) ಅವರನ್ನು ಅತ್ಯಧಿಕ ಮೊತ್ತಕ್ಕೆ ಖರೀದಿಸಿದೆ. ಚೆನ್ನೈ ಸೂಪರ್ ಕಿಂಗ್ಸ್ ಎಂ.ಎಸ್.ಧೋನಿ (4 ಕೋಟಿ), ಋತುರಾಜ್ ಗಾಯಕ್ವಾಡ್ (18 ಕೋಟಿ), ರವೀಂದ್ರ ಜಡೇಜಾ (18 ಕೋಟಿ) ಶಿವಂ ದುಬೆ (12 ಕೋಟಿ) ಮತ್ತು ಶ್ರೀಲಂಕಾದ ಮತೀಶಾ ಪತಿರಾಣಾ (13) ಕೋಟಿ ಅವರನ್ನು ಉಳಿಸಿಕೊಂಡಿದೆ.
ಸನ್ ರೈಸರ್ಸ್ ಹೈದರಾಬಾದ್, ದಕ್ಷಿಣ ಆಫ್ರಿಕಾದ ಹೆನರಿಚ್ ಕ್ಲಾಸನ್ (23 ಕೋಟಿ) ಅವರನ್ನು ಉಳಿಸಿಕೊಂಡಿದೆ. ನಾಯಕ ಪ್ಯಾಟ್ ಕಮಿನ್ಸ್ (18 ಕೋಟಿ) ಅಭಿಷೇಕ್ ಶರ್ಮಾ (14 ಕೋಟಿ), ಟ್ರಾವಿಸ್ ಹೆಡ್ (14 ಕೋಟಿ) ಮತ್ತು ನಿತೀಶ್ ರೆಡ್ಡಿ (6 ಕೋಟಿ) ಉಳಿದುಕೊಂಡಿರುವ ಇತರ ಆಟಗಾರರು.
ಇಂಗ್ಲೆಂಡ್ ಸ್ಟಾರ್ ಆಟಗಾರ ಜೋಸ್ ಬಟ್ಲರ್ ಅವರನ್ನು ರಾಜಸ್ಥಾನ ರಾಯಲ್ಸ್ ಉಳಿಸಿಕೊಂಡಿಲ್ಲ. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾನ್, ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿರ್ಮೋನ್ ಹೆಟ್ಮಿಯರ್, ಸಂದೀಪ್ ಶರ್ಮಾ ಸ್ಥಾನ ತಳಿಸಿಕೊಂಡಿದ್ದಾರೆ. ಟ್ರೆಂಟ್ ಬೋಲ್ಟ್, ಯಜುರ್ವೇದ ಚಹಾಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರನ್ನು ತಂಡ ಬಿಡುಗಡೆ ಮಾಡಿದೆ.