ಭಾರತ ‘ಸಂವಿಧಾನ’ದ ಪ್ರಸ್ತಾವನೆಗೆ ಪುಸ್ತಕ ಅರ್ಪಿಸಿದ ಇಂಗ್ಲೆಂಡ್‌ನ ಆರ್ನೆಸ್ಟ್ ಬಾರ್ಕರ್

ಇದೀಗ ಭಾರತದಾದ್ಯಂತ ಜನವರಿ 26ರ ಗಣರಾಜ್ಯೋತ್ಸವವನ್ನು ಆಚರಿಸಿ ಭಾರತದ ಸಾಂವಿಧಾನಿಕ ಮೌಲ್ಯಗಳನ್ನೂ, ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಕೊಡುಗೆಯನ್ನೂ ಚರ್ಚಿಸುವ ಮೂಲಕ ಮತ್ತೆ ನೆನಪಿಸಿಕೊಂಡಿದ್ದೇವೆ. ಇದೇ ಹೊತ್ತಲ್ಲಿ ಮತ್ತೊಂಡೆದೆ ಹಿಂದೂ ರಾಷ್ಟ್ರಕ್ಕೆ ಸಂವಿಧಾನ ಸಿದ್ಧಗೊಂಡಿದೆ, ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ವಸಂತ ಪಂಚಮಿಯ ಫೆ.3ರಂದು ಈ ಸಂವಿಧಾನ ಬಹಿರಂಗವಾಗುತ್ತಿದೆ ಎನ್ನುವ ಸುದ್ದಿ ಹಬ್ಬುತ್ತಿದೆ. ಅಂದರೆ ಅಖಂಡ ಭಾರತ ಸಂವಿಧಾನ ರಚನಾ ಸಮಿತಿಯ ಸದಸ್ಯರನ್ನು ಒಳಗೊಂಂಡಂತೆ ಡಾ. ಬಿ.ಆರ್. ಅಂಬೇಡ್ಕರ್ ಸಮಗ್ರ ಭಾರತೀಯರ ಸಮತೆಯ ಕಣ್ಣೋಟದಲ್ಲಿ ರಚಿಸಿದ ಸಂವಿಧಾನಕ್ಕೆ ಪರ್ಯಾಯವಾಗಿ ಮನುಸ್ಮತಿಯನ್ನು ಆಧರಿಸಿದ ಸನಾತನ ಸಂವಿಧಾನದ ಸಿದ್ಧತೆಗಳು ನಡೆಯುತ್ತಿರುವುದನ್ನು ಇದು ಸೂಚಿಸುತ್ತಿದೆ. ಇದೊಂದು ಆಘಾತಕಾರಿ ಮತ್ತು ಭಾರತದ ಸಂವಿಂಧಾನವನ್ನು ಅವಮಾನಿಸುವ ದೇಶದ್ರೋಹದ ವಿದ್ಯಮಾನವಾಗಿದೆ. ಇದೇ ಸಂದರ್ಭದಲ್ಲಿ ಭಾರತದ ಎಲ್ಲಾ ದಲಿತ, ದಮನಿತ, ಆದಿವಾಸಿ, ಅಲೆಮಾರಿ ಬುಡಕಟ್ಟು, ಧಾರ್ಮಿಕ ಮತ್ತು ಲಿಂಗತ್ವ ಅಲ್ಪಸಂಖ್ಯಾತ ಸಮುದಾಯಗಳು ಎಚ್ಚೆತ್ತುಕೊಳ್ಳಬೇಕಾದ ಸಂದರ್ಭವೂ ಇದಾಗಿದೆ.
ಸನಾತನಿಗಳು ಭಾರತದ ಸಂವಿಧಾನವನ್ನು ಬದಲಿಸುವ ಕನಸು ಕಾಣುತ್ತಿರುವ ಈ ಹೊತ್ತಿನಲ್ಲಿ, ಭಾರತದ ಸಂವಿಧಾನವನ್ನು ಹೊರ ಜಗತ್ತು ಹೇಗೆ ಪರಿಭಾವಿಸಿದೆ ಎನ್ನುವುದರ ಚರ್ಚೆಯೂ ನಡೆಯಬೇಕಾಗಿದೆ. ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ಅವರು ಭಾರತದ ಸಂವಿಧಾನ ಮತ್ತು ಅಂಬೇಡ್ಕರ್ ಅವರ ಬಗ್ಗೆ ಹೀಗೆ ಹೇಳುತ್ತಾರೆ. ‘‘ಭಾರತದ ಸಂವಿಧಾನವು ದಕ್ಷಿಣ ಆಫ್ರಿಕಾದ ಸಂವಿಧಾನ ರಚಿಸಲು ಆಧಾರ ಸ್ತಂಭವೂ, ಪ್ರೇರಣೆಯೂ ಆಗಿದೆ. ನಮಗೆ ನಂಬಿಕೆ ಇದೆ, ನಮ್ಮ ಹೊಸ ಸಂವಿಧಾನ ರಚನೆಯಲ್ಲಿನ ನಮ್ಮ ಶ್ರಮವು ಭಾರತದ ಹೆಮ್ಮೆಯ ಪುತ್ರನಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಅಪಾರ ಶ್ರಮ ಮತ್ತು ಬೌದ್ಧಿಕತೆಯ ಪ್ರತಿಬಿಂಬವಾಗಿದೆ. ಅಂಬೇಡ್ಕರ್ ಅವರ ಕೊಡುಗೆ ಎಂಥದ್ದೆಂದರೆ, ತುಳಿತಕ್ಕೊಳಗಾದ ಎಲ್ಲರೂ ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವ ಎತ್ತಿಹಿಡಿಯಲು ಸ್ಫೂರ್ತಿಯಾಗಿದ್ದಾರೆ’’ ಎನ್ನುತ್ತಾ ಮಂಡೇಲಾ ಅವರು ಭಾರತದ ಸಂವಿಧಾನವನ್ನು ನೆನೆಯುತ್ತಾ, ಅಂಬೇಡ್ಕರ್ ಅವರನ್ನೂ ಗೌರವದಿಂದ ಸ್ಮರಿಸುತ್ತಾರೆ. ಈ ಅಭಿಪ್ರಾಯದಂತೆ ಭಾರತದ ಸಂವಿಧಾನ ಬರಿ ಭಾರತಕ್ಕಷ್ಟೇ ಅಲ್ಲ ಜಗತ್ತಿನ ತುಳಿತಕ್ಕೊಳಗಾದ ಎಲ್ಲರ ಸಾಮಾಜಿಕ ನ್ಯಾಯ ಮತ್ತು ಆತ್ಮಗೌರವವನ್ನು ಎತ್ತಿಹಿಡಿಯುತ್ತದೆ ಎನ್ನುವುದರ ಕಾಣ್ಕೆಯಾಗಿದೆ.
ಇಂಗ್ಲೆಂಡ್‌ನ ಶ್ರೇಷ್ಠ ರಾಜ್ಯಶಾಸ್ತ್ರಜ್ಞರೂ ಮತ್ತು ಆಕ್ಸ್ ಫರ್ಡ್ ಹಾಗೂ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕರೂ ಆಗಿದ್ದ ಆರ್ನೆಸ್ಟ್ ಬಾರ್ಕರ್ ಅವರು 1951ರಲ್ಲಿ ಪೀಪಲ್ಸ್ ಆಫ್ ಸೋಷಿಯಲ್ ಆ್ಯಂಡ್ ಪೊಲಿಟಿಕಲ್ ಥಿಯರಿ ಎಂಬ ಸಂಶೋಧನಾ ಗ್ರಂಥವನ್ನು ಪ್ರಕಟಿಸಿದರು. ಈ ಪುಸ್ತಕವು 1938-39ರ ಸಾಲಿನಲ್ಲಿ ಬಾರ್ಕರ್ ಅವರು ಕೇಂಬ್ರಿಜ್ ವಿಶ್ವವಿದ್ಯಾನಿಲಯದಲ್ಲಿ ಮಾಡಿದ ಸರಣಿ ಉಪನ್ಯಾಸಗಳ ಪರಿಷ್ಕೃತ ರೂಪವಾಗಿದೆ. ಈ ಪುಸ್ತಕದ ಪರಿವಿಡಿಯ ನಂತರ ಭಾರತ ಸಂವಿಧಾನದ ಪ್ರಸ್ತಾವನೆಯ ಉಲ್ಲೇಖದೊಂದಿಗೆ ಪುಸ್ತಕ ಆರಂಭವಾಗುತ್ತದೆ. ಒಂದು ರೀತಿಯಲ್ಲಿ ಅವರು ತನ್ನ ಕೃತಿಯನ್ನು ಭಾರತದ ಸಂವಿಧಾನದ ಪ್ರಸ್ತಾವನೆಗೆ ಅರ್ಪಿಸಿದ್ದಾರೆ.
ಆ ಗ್ರಂಥದ ಪ್ರಸ್ತಾವನೆಯಲ್ಲಿ ಆರ್ನೆಸ್ಟ್ ಬಾರ್ಕರ್ ಹೀಗೆ ಹೇಳುತ್ತಾರೆ, ‘‘ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ನನ್ನ ಪುಸ್ತಕದ ಬರಹ ಆರಂಭಕ್ಕೂ ಮುನ್ನ ಏಕೆ ಪ್ರಕಟಿಸಿದ್ದೇನೆ ಎನ್ನುವುದನ್ನು ಹೇಳಬೇಕು. ನಾನು ಈ ಪ್ರಸ್ತಾವನೆಯನ್ನು ಓದಿದಾಗ ನನ್ನ ಪುಸ್ತಕದ ಸಾರರೂಪದ ಸಂಕ್ಷಿಪ್ತ ತಾತ್ವಿಕ ಪ್ರಮೇಯವೇ ಈ ಪ್ರಸ್ತಾವನೆ ಅನ್ನಿಸಿತು. ನನ್ನ ಪುಸ್ತಕದ ಓದಿನ ಪ್ರವೇಶಕ್ಕೆ ಈ ಪ್ರಸ್ತಾವನೆ ಒಂದು ಪರಿಣಾಮಕಾರಿ ಟಿಪ್ಪಣಿಯಂತೆ ಕೆಲಸ ಮಾಡುತ್ತದೆ. ಭಾರತೀಯರು ಪಾಶ್ಚಿಮಾತ್ಯ ರಾಜಕೀಯ ತತ್ವಗಳನ್ನು ಆಧರಿಸಿ ತಮ್ಮ ಸ್ವತಂತ್ರ ಜೀವನವನ್ನು ಆರಂಭಿಸಬೇಕು ಎಂದು ಭಾವಿಸಿದ್ದೆ, ಆದರೆ ಪಾಶ್ಚಿಮಾತ್ಯ ರಾಜಕೀಯ ತತ್ವಗಳಿಗಿಂತಲೂ ಉನ್ನತ ಮೌಲ್ಯದೊಂದಿಗೆ ಸ್ವತಂತ್ರ ಜೀವನ ಆರಂಭಿಸುತ್ತಿರುವ ಬಗ್ಗೆ ನನಗೆ ಹೆಮ್ಮೆ ಇದೆ’’. ಅಂದರೆ ಬಾರ್ಕರ್ ಅವರು ‘ಪೀಪಲ್ಸ್ ಆಫ್ ಸೋಷಿಯಲ್ ಆ್ಯಂಡ್ ಪೊಲಿಟಿಕಲ್ ಥಿಯರಿ’ ಕೃತಿಯಲ್ಲಿ ಬಹುತೇಕ ಯುರೋಪಿಯನ್ ಜನರನ್ನು ಪರಿಗಣಿಸಿ ವಿಶ್ಲೇಷಿಸಿದ್ದಾರೆ. ಆದರೂ ‘‘ಭಾರತದ ಸಂವಿಧಾನದ ಪ್ರಸ್ತಾವನೆ ನನ್ನ ಚಿಂತನೆಯ ಸಂಕ್ಷಿಪ್ತ ರೂಪವಿದ್ದಂತಿದೆ’’ ಎನ್ನುತ್ತಿದ್ದಾರೆ. ಅಂದರೆ ಭಾರತದ ಸಂವಿಧಾನ ಜಾಗತಿಕ ಮನುಷ್ಯರ ಸಮತೆಯನ್ನೂ ಕನಸುತ್ತಿದೆ ಎನ್ನುವುದರ ಸಂಕೇತವಾಗಿದೆ.
ಆರ್ನೆಸ್ಟ್ ಬಾರ್ಕರ್ (1874-1960) ಇಂಗ್ಲೆಂಡಿನ ಪ್ರಸಿದ್ಧ ರಾಜಕೀಯ ತಜ್ಞ. ಅರಿಸ್ಟಾಟಲ್ ಮತ್ತು ಪ್ಲೇಟೋ ಅವರ ರಾಜಕೀಯ ಸಿದ್ಧಾಂತವನ್ನು ಅಧ್ಯಯನ ಮಾಡಿದವರು. ಗ್ರೀಕ್ ಮತ್ತು ಯುರೋಪಿನ ರಾಜಕೀಯ ಚರಿತ್ರೆಯನ್ನು ಆಳವಾಗಿ ಅರಿತವರು. ಡಾ.ಅಂಬೇಡ್ಕರ್ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಓದುವ ಸಂದರ್ಭದಲ್ಲಿ ಬಾರ್ಕರ್ ಕೂಡ ಕೆಲಕಾಲ ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನಲ್ಲಿ ಕೆಲಸ ಮಾಡಿದ್ದರು. ಉಳಿದಂತೆ ಬಹುಕಾಲ ಲಂಡನ್‌ನ ಕಿಂಗ್ಸ್ ಕಾಲೇಜಿನ ಪ್ರಾಂಶುಪಾಲರೂ ಆಗಿದ್ದರು. ನಿಖರ ದಾಖಲೆಗಳು ಇಲ್ಲವಾದರೂ ಬಾರ್ಕರ್ ಮತ್ತು ಅಂಬೇಡ್ಕರ್ ಜತೆಗೆ ಸಂವಾದ ಏರ್ಪಟ್ಟಿರಬಹುದು. ಬಾರ್ಕರ್ ಭಾರತದಲ್ಲಿಯೂ ತಮ್ಮ ಉಪನ್ಯಾಸಗಳನ್ನು ಮಂಡಿಸಿದ್ದಾರೆ. ವರ್ಗ ತಾರತಮ್ಯದ ಬಗ್ಗೆ ಅವರ ಬರಹಗಳಲ್ಲಿ ಮತ್ತೆ ಮತ್ತೆ ವಿಶ್ಲೇಷಿಸಿದ್ದಾರೆ. ಹಾಗಾಗಿ ಸಹಜವಾಗಿ ಭಾರತದ ಜಾತಿ ಪದ್ಧತಿಯ ಬಗ್ಗೆಯೂ ತಿಳಿದಿರಲಿಕ್ಕೆ ಸಾಧ್ಯವಿದೆ. ಈ ಕಾರಣಕ್ಕಾಗಿ ಭಾರತದ ಸಂವಿಧಾನವನ್ನು ಅಧ್ಯಯನ ಮಾಡಿದ್ದಾರೆ. ಹೀಗಾಗಿಯೇ ಭಾರತದ ಸಂವಿಧಾನದ ಪ್ರಸ್ತಾವನೆಯನ್ನು ತಮ್ಮ ಕೃತಿಯ ಆರಂಭಕ್ಕೆ ಉಲ್ಲೇಖಿಸುತ್ತಾರೆ. ಇದು ಭಾರತದ ಸಂವಿಧಾನಕ್ಕೆ, ಆ ಮೂಲಕ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಸಲ್ಲಿಸಿದ ಗೌರವವಾಗಿದೆ.
ಇಂದು ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ಮತ್ತೆ ಮತ್ತೆ ಚರ್ಚಿಸುವ, ಸಂವಾದಿಸುವ, ಅರ್ಥೈಸಿಕೊಳ್ಳುವ ಸಂಗತಿಗಳಾಗಿವೆ. ಒಂದೆಡೆ ಜಗತ್ತಿನಾದ್ಯಂತ ವಿದ್ವತ್ ಲೋಕ ಅಂಬೇಡ್ಕರ್ ಅವರನ್ನು ಓದತೊಡಗಿದೆ. ಕರ್ನಾಟಕ ಸರಕಾರ 2017ರಲ್ಲಿ ಆಯೋಜಿಸಿದ ಅಂಬೇಡ್ಕರ್ ಬಗೆಗಿನ ಅಂತರ್‌ರಾಷ್ಟ್ರೀಯ ಸೆಮಿನಾರ್ ‘ದ ಕ್ವೆಸ್ಟ್ ಫಾರ್ ಇಕ್ವಿಟಿ ರೀ ಕ್ಲೈಮಿಂಗ್ ಸೋಷಿಯಲ್ ಜಸ್ಟಿಸ್’ನಲ್ಲಿ ಜಗತ್ತಿನ 350ಕ್ಕಿಂತ ಹೆಚ್ಚಿನ ವಿದ್ವಾಂಸರು ಈ ಸೆಮಿನಾರ್‌ಗೆ ಬಂದು ಡಾ. ಅಂಬೇಡ್ಕರ್ ಜಾಗತಿಕವಾಗಿ ಬೀರಿದ ಪರಿಣಾಮಗಳ ಬಗ್ಗೆ ಚರ್ಚಿಸಿದ್ದರು. ವಿದ್ವತ್ ಪೂರ್ಣ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದರು. ಈ ಎಲ್ಲಾ ಪ್ರಬಂಧಗಳನ್ನು ಆಯ್ದು ಆಕ್ಸ್‌ಫರ್ಡ್ ಯುನಿವರ್ಸಿಟಿ ಫ್ರೆಸ್ (ಒಯುಪಿ ಇಂಡಿಯಾ) ಆಕಾಶ ಸಿಂಗ್ ರಾಥೋರ್ ಸಂಪಾದಕತ್ವದಲ್ಲಿ ‘ಡಾ.ಅಂಬೇಡ್ಕರ್ ಕ್ವೆಸ್ಟ್ ಫಾರ್ ಜಸ್ಟಿಸ್’ ಹೆಸರಿನಲ್ಲಿ ಐದು ಸಂಪುಟಗಳನ್ನು ಪ್ರಕಟಿಸಿದೆ. ಈ ಸಂಪುಟಗಳಲ್ಲಿ ಡಾ. ಅಂಬೇಡ್ಕರ್ ಜಗತ್ತನ್ನು ಪ್ರಭಾವಿಸಿದ ಮತ್ತು ಜಗತ್ತು ಅಂಬೇಡ್ಕರ್ ಅವರ ವಿಚಾರಧಾರೆಯಿಂದ ಪ್ರಭಾವಕ್ಕೆ ಒಳಗಾಗಬೇಕಾದ ನೆಲೆಗಳನ್ನು ಹೊಂದಿವೆ.
ಸಂಪುಟ ಒಂದರಲ್ಲಿ ನಿರ್ದಿಷ್ಟವಾಗಿ ರಾಜಕೀಯ ನ್ಯಾಯದ ವಿಷಯದ ಮೇಲೆ ಕೇಂದ್ರೀಕರಿಸಿದರೆ, ಸಂಪುಟ ಎರಡು ಸಾಮಾಜಿಕ ನ್ಯಾಯದ ಪ್ರಮುಖ ಸಮಸ್ಯೆಗಳನ್ನು ಪರಿಶೀಲಿಸುತ್ತದೆ. ವಿಶೇಷವಾಗಿ ಭಾರತೀಯ ಪ್ರಜಾಪ್ರಭುತ್ವದ ಪರಿಭಾಷೆಯಲ್ಲಿ ಅಂಬೇಡ್ಕರ್ ಅವರ ವಿಶ್ಲೇಷಣೆಯ ದೃಷ್ಟಿಕೋನಗಳನ್ನು ಒದಗಿಸುತ್ತದೆ. ಸಂಪುಟ ಮೂರರಲ್ಲಿ ಕಾನೂನು ಮತ್ತು ಆರ್ಥಿಕ ನ್ಯಾಯವನ್ನು ಒಳಗೊಂಡಿದೆ. ಮೊದಲ ಭಾಗವು ಭಾರತದ ಸಂವಿಧಾನ ಮತ್ತು ಅದರ ಸಂಸ್ಥೆಗಳು, ಸಾಂವಿಧಾನಿಕ ನೈತಿಕತೆ, ಹಕ್ಕುಗಳು ಮತ್ತು ಕಾನೂನಿನ ನಿಯಮ ಮತ್ತು ಅಂಬೇಡ್ಕರ್ ನ್ಯಾಯಶಾಸ್ತ್ರದ ಕಲ್ಪನೆಯ ಸಾಹಿತ್ಯವನ್ನು ಪರಿಶೋಧಿಸುತ್ತದೆ. ಎರಡನೇ ಭಾಗದಲ್ಲಿ ಅಂಬೇಡ್ಕರ್ ಅವರ ಆರ್ಥಿಕ ತತ್ವಶಾಸ್ತ್ರದಲ್ಲಿ ಆಧಾರವಾಗಿರುವ ಆರ್ಥಿಕ ನ್ಯಾಯದ ವಿವಿಧ ಸಮಸ್ಯೆಗಳ ಬಗೆಗೆ ಚರ್ಚೆಗಳಿವೆ. ಸಂಪುಟ ನಾಲ್ಕರಲ್ಲಿ ಲಿಂಗ ನ್ಯಾಯ ಮತ್ತು ಜನಾಂಗೀಯ ನ್ಯಾಯದ ಕುರಿತ ವಿಶ್ಲೇಷಣೆಗಳಿವೆ. ಸ್ತ್ರೀವಾದಿಯಾಗಿ ಅಂಬೇಡ್ಕರ್ ಅವರ ವ್ಯಾಖ್ಯಾನಗಳನ್ನು ವಿಶ್ಲೇಷಿಸುತ್ತವೆ. ಸಂಪುಟ ಐದರಲ್ಲಿ ಧಾರ್ಮಿಕ ನ್ಯಾಯ ಮತ್ತು ಸಾಂಸ್ಕೃತಿಕ ನ್ಯಾಯದ ನೆಲೆಗಳನ್ನು ಶೋಧಿಸಲಾಗಿದೆ. ನವಯಾನ ಬೌದ್ಧಧರ್ಮ ಮತ್ತು ದಲಿತರ ವಿಮೋಚನೆ ವಿಷಯಗಳನ್ನು ಒಳಗೊಂಡಿದೆ. ಅಂಬೇಡ್ಕರ್ ಅವರ ಕ್ರಿಯಾಶೀಲತೆ ಮತ್ತು ಹೋರಾಟಗಳಿಂದ ಪ್ರೇರಿತವಾದ ಸಾಂಸ್ಕೃತಿಕ ವಿಶ್ಲೇಷಣೆಗಳನ್ನು ಪರಿಶೀಲಿಸಲಾಗಿದೆ. ಈ ಮೂಲಕ ಜಾಗತಿಕ ವಿದ್ವತ್ ಲೋಕ ಅಂಬೇಡ್ಕರ್ ಅವರ ಚಿಂತನೆಗಳ ಜತೆ ಒಂದು ವಿಶ್ವಾತ್ಮಕ ಮುಖಾಮುಖಿಯಾಗಿರುವುದನ್ನು ಗಮನಿಸಬಹುದು.
ಆಕಾಶ್ ಸಿಂಗ್ ರಾಥೋರ್ ಅವರು ‘ಅಂಬೇಡ್ಕರ್ ಪ್ರಿಯಾಂಬಲ್’ ‘ಬಿಕಮಿಂಗ್ ಬಾಬಾ ಸಾಹೇಬ’ ಪ್ರಕಟಿಸಿ ಜಗತ್ತಿನ ಗಮನ ಸೆಳೆದಿದ್ದಾರೆ. ಅಶೋಕ ಗೋಪಾಲ್ ಅವರ ‘ಎ ಪಾರ್ಟ್ ಅಪಾರ್ಟ್’ ಕೃತಿ ಅಂಬೇಡ್ಕರ್ ಕುರಿತ ಹಲವು ಗೈರುಹಾಜರಿಗಳನ್ನು ದಾಖಲು ಸಮೇತ ವಿಶ್ಲೇಷಣೆ ಮಾಡಿದೆ. ಈಚಿನ ಆನಂದ್ ತೇಲ್ತುಂಬ್ಡೆ ಅವರ ‘ಐಕನೋಕ್ಲಾಸ್ಟ್’ ಕೃತಿಯಲ್ಲಿ ಅಂಬೇಡ್ಕರ್ ಅವರ ಬಗೆಗೆ ಸೂಕ್ಷ್ಮವಿಶ್ಲೇಷಣೆಗಳಿವೆ. ಹೀಗೆ ಅಂಬೇಡ್ಕರ್ ಮತ್ತು ಅವರ ಕನಸಿನ ಸಂವಿಧಾನಕ್ಕೆ ಜಾಗತಿಕ ವ್ಯಾಪ್ತಿ ಇರುವ ಸಂದರ್ಭದಲ್ಲಿಯೇ ಭಾರತದಲ್ಲಿ ಸಂವಿಧಾನವನ್ನು ದಮನಿಸುವ ಹುನ್ನಾರಗಳು ನಡೆಯುತ್ತಿರುವುದು ವಿಪರ್ಯಾಸವಾಗಿದೆ.