‘ಜನಸ್ಪಂದನ’ ಕಳೆದುಕೊಂಡ ಭ್ರಷ್ಟ ವ್ಯವಸ್ಥೆ
‘‘ಭ್ರಷ್ಟಾಚಾರವೇನೂ ಹೊಸ ಸಂಗತಿ ಅಲ್ಲ. ಬೇರೆಲ್ಲ ದೇಶಗಳಲ್ಲಿ ಇರುವಂತೆ ಭಾರತದಲ್ಲಿ ಅದು ಅನಾದಿಕಾಲದಿಂದಲೂ ಇದೆ. ಚಿಲ್ಲರೆ ಲಂಚದಿಂದ ಆರಂಭಿಸಿ ದೊಡ್ಡ ದೊಡ್ಡ ಯೋಜನೆಗಳಲ್ಲಿ ಹಗರಣಗಳ ತನಕ ಈ ಭ್ರಷ್ಟಾಚಾರದ ಅವತಾರಗಳು ಹಲವು. ಭ್ರಷ್ಟಾಚಾರ ನಿವಾರಿಸಲು ಹೆಚ್ಚಿನ ಪಾರದರ್ಶಕತೆ ಮತ್ತು ಪ್ರಬಲವಾದ ನಿಯಂತ್ರಕ ಚೌಕಟ್ಟು ಅಗತ್ಯವಿದೆ.’’
-ಮೊಂಟೆಕ್ ಸಿಂಗ್ ಅಹ್ಲುವಾಲಿಯ, ಖ್ಯಾತ ಅರ್ಥಶಾಸ್ತ್ರಜ್ಞರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇಬೇಕು. ಅವರು ಎರಡು ಅಪರೂಪದ ಕೆಲಸಗಳನ್ನು ಮಾಡಿದ್ದಾರೆ. ಅದಕ್ಕಾಗಿ ಅಭಿನಂದನೆಗಳು. ಒಂದು: ದಿ. 27.11.2023ರಂದು ಬೆಳಗ್ಗೆಯಿಂದ ರಾತ್ರಿಯವರೆಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಿ ಜನಸಾಮಾನ್ಯರ ಸಮಸ್ಯೆಗಳಿಗೆ ಸಂವೇದನಾಶೀಲರಾಗಿ ಸ್ಪಂದಿಸಿದ್ದು. ಎರಡನೆಯದು ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್ ಅವರನ್ನು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದು. ಈ ಭ್ರಷ್ಟ ವ್ಯವಸ್ಥೆಯಲ್ಲೂ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಹಂಬಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಿದೆ ಎಂಬುದು ಈ ಎರಡು ಕೆಲಸಗಳಿಂದ ಮನವರಿಕೆಯಾಗುತ್ತದೆ. ಅಂದು ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾವಿರಾರು ಜನ ರಾಜ್ಯದ ವಿವಿಧ ಮೂಲೆಗಳಿಂದ ಆಗಮಿಸಿದ್ದರು. ಸ್ಥಳೀಯ ಮಟ್ಟದಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲವೆಂದು ನಾಡಿನ ಮುಖ್ಯಮಂತ್ರಿಯ ಬಳಿ ಅಳಲು ತೋಡಿಕೊಂಡರು. ಆ ಎಲ್ಲ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಒಟ್ಟು ಸ್ವರೂಪ ಒಂದೇ ಬಗೆಯದು. ತಾಲೂಕು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳ ಹಂತದಲ್ಲೇ ಇತ್ಯರ್ಥ ಪಡಿಸಬಹುದಾದ ಕೆಲಸಗಳು ಮುಖ್ಯಮಂತ್ರಿ ಬಳಿ ಪರಿಹಾರ ಕೋರಿದ್ದವು. ಸಿದ್ದರಾಮಯ್ಯನವರು ಅತ್ಯಂತ ತಾಳ್ಮೆಯಿಂದ ಜನರ ಸಮಸ್ಯೆಗಳನ್ನು ಆಲಿಸಿ ತಕ್ಷಣವೇ ಕೆಲಸ ಮಾಡಿ ಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಕೆಲವೊಮ್ಮೆ ಗುಡುಗಿದರು, ಕಿವಿ ಮಾತು ಹೇಳಿದರು, ಅಧಿಕಾರಿಗಳ ಕರ್ತವ್ಯ ಕುರಿತು ಪಾಠ ಮಾಡಿದರು.
ಜನಸ್ಪಂದನ ಕಾರ್ಯಕ್ರಮದಲ್ಲಿ ಸರಕಾರಿ ವ್ಯವಸ್ಥೆಯ ವಿವಿಧ ರೂಪಗಳು ಅನಾವರಣಗೊಂಡವು. ಜನಸಾಮಾನ್ಯರ ಆಳದ ನೋವು, ತೊಳಲಾಟ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ಬಂದವು. ಅಷ್ಟು ಮಾತ್ರವಲ್ಲ ಸರಕಾರಿ ಅಧಿಕಾರಿಗಳು ಜನಸಾಮಾನ್ಯರ ಕಷ್ಟ-ಸುಖಗಳಿಗೆ ಸ್ಪಂದಿಸುತ್ತಿಲ್ಲ ಎಂಬ ಕಟು ಸತ್ಯ ಎಲ್ಲರಿಗೂ ಗೊತ್ತಾಯಿತು. ಆಧುನಿಕ ಪರಿಭಾಷೆಯಲ್ಲಿ ಹೇಳಬೇಕೆಂದರೆ ‘ಗುಡ್ ಗವರ್ನನ್ಸ್’ ಇನ್ನೂ ಜನಸಾಮಾನ್ಯರಿಗೆ ಮರೀಚಿಕೆಯಾಗಿಯೇ ಉಳಿದಿದೆ ಎನ್ನುವುದು ತಿಳಿದು ಬಂತು. ಜನಸ್ಪಂದನ ಕಾರ್ಯಕ್ರಮದಿಂದ ಸಮಸ್ಯೆಗಳ ಮೂಲ, ಆಳ-ಅಗಲ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಈ ಪ್ರಯತ್ನವನ್ನು ಇತ್ಯಾತ್ಮಕವಾಗಿಯೇ ನೋಡಬೇಕು. ಹಾಗಂತ ಕೇವಲ ಜನಸ್ಪಂದನ ಕಾರ್ಯಕ್ರಮ ಆಯೋಜಿಸುವುದರಿಂದ ಜನಸಾಮಾನ್ಯರಿಗೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಕ್ಕೇ ಬಿಡುತ್ತದೆ ಎಂದು ಯಾರೂ ಭಾವಿಸಬೇಕಿಲ್ಲ. ಜನಸ್ಪಂದನ ಕಾರ್ಯಕ್ರಮದಿಂದ ಆರೋಗ್ಯ, ಕಂದಾಯ, ಪೊಲೀಸ್ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯನ್ನು, ಜಿಲ್ಲಾಧಿಕಾರಿ, ತಹಶೀಲ್ದಾರ್ ಅವರ ಹೊಣೆಗೇಡಿತನವನ್ನು ಅರ್ಥ ಮಾಡಿಕೊಳ್ಳಬಹುದು. ಇಂತಹ ಕಾರ್ಯವೈಖರಿಯ ಮೂಲ ಅರಿಯದಿದ್ದರೆ ಜನಸಾಮಾನ್ಯರ ಗೋಳಿಗೆ ಕೊನೆಯೇ ಇರುವುದಿಲ್ಲ. ಹುತ್ತವ ಬಡಿದರೆ ಹಾವು ಸಾಯುವುದಿಲ್ಲ.
ಜನಸಾಮಾನ್ಯರ ಸಮಸ್ಯೆಗಳಿಗೆ ‘ಅಧಿಕಾರಿಗಳಿಂದ’ ಸ್ಪಂದನೆ ದೊರೆಯದೆ ಇರುವುದಕ್ಕೆ ಮೂಲ ಕಾರಣ ಭ್ರಷ್ಟಾಚಾರ. ಸರಕಾರದ ಎಲ್ಲಾ ಹಂತಗಳಲ್ಲೂ ಭ್ರಷ್ಟಾಚಾರ ವ್ಯಾಪಿಸಿದೆ. ಇಲ್ಲಿ ಕಾಂಗ್ರೆಸ್, ಬಿಜೆಪಿ, ಜನತಾದಳ ಯಾವುದೇ ಪಕ್ಷದ ಸರಕಾರ ಬಂದರೂ ಭ್ರಷ್ಟ ವ್ಯವಸ್ಥೆಯ ಭಾಗವಾಗಿಯೇ ಕಾರ್ಯ ನಿರ್ವಹಿಸುತ್ತಾರೆ. ವ್ಯತ್ಯಾಸ ಇರುವುದು ತುಸು ಹೆಚ್ಚು-ತುಸು ಕಡಿಮೆ ಎನ್ನುವುದರಲ್ಲಿ. ಸಿದ್ದರಾಮಯ್ಯ, ಯಡಿಯೂರಪ್ಪ, ಬೊಮ್ಮಾಯಿ, ಕುಮಾರಸ್ವಾಮಿ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲರಿಗೂ ವ್ಯಕ್ತಿಗತ ತತ್ವಾದರ್ಶಗಳು ಇದ್ದರೂ ‘ಭ್ರಷ್ಟ’ ವ್ಯವಸ್ಥೆಯ ಭಾಗವಾದಾಗ ಆದರ್ಶಗಳು ಗೌಣವಾಗುತ್ತದೆ. ಸರಕಾರಿ ವ್ಯವಸ್ಥೆಯ ‘ಶೋ ರನ್’ ಮಾಡಲೇಬೇಕಾದ ಒತ್ತಡಕ್ಕೆ ಒಳಗಾಗುತ್ತಾರೆ. ಭ್ರಷ್ಟ ವ್ಯವಸ್ಥೆಯ ಎಲ್ಲಾ ಮಗ್ಗಲುಗಳನ್ನು ಬಲ್ಲವರು ಎಲ್ಲೂ ಸಿಕ್ಕಿಹಾಕಿಕೊಳ್ಳದೆ ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುತ್ತಾರೆ. ಅರ್ಧಂಬರ್ಧ ತಿಳುವಳಿಕೆ ಉಳ್ಳವರು ಭ್ರಷ್ಟಾಚಾರ ಮಾಡಲು ಹೋಗಿ ಸಿಕ್ಕಿ ಬೀಳುತ್ತಾರೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾರೆ. ಭ್ರಷ್ಟ ಇಮೇಜ್ ಹೊತ್ತು ಪರಿತಪಿಸುತ್ತಾರೆ.
ಭ್ರಷ್ಟಾಚಾರದಿಂದ ಹಣ ಮಾತ್ರ ಮಾಡಿಕೊಳ್ಳುವುದಿಲ್ಲ. ಭ್ರಷ್ಟಾಚಾರವನ್ನು ಒಂದು ಅಸ್ತ್ರವನ್ನಾಗಿ ಮಾಡಿಕೊಂಡು ರಾಜಕೀಯ ಲಾಭ ಮಾಡಿದ ನೂರಾರು ನಿದರ್ಶನಗಳು ನಮ್ಮಲ್ಲಿವೆ. 2004ರಿಂದ 2014ರ ವರೆಗೆ ಕೇಂದ್ರದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಆಡಳಿತ ನಡೆಸುತ್ತಿತ್ತು. ಪ್ರಧಾನಮಂತ್ರಿಯಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಅತ್ಯಂತ ಪ್ರಾಮಾಣಿಕ ವ್ಯಕ್ತಿ. ಭಾರತದ ಅಭ್ಯುದಯಕ್ಕಾಗಿ ಹಗಲಿರುಳು ದುಡಿದರು. ಆದರೆ ಅವರ ಕಾಲದಲ್ಲಿನ ಭ್ರಷ್ಟಾಚಾರ ಪ್ರಕರಣಗಳನ್ನು ‘ಬಂಡವಾಳ’ ಮಾಡಿಕೊಂಡು ನರೇಂದ್ರ ಮೋದಿಯವರು ವ್ಯಾಪಕವಾಗಿ ಅಪಪ್ರಚಾರ ಮಾಡಿ ಅನಾಯಾಸವಾಗಿ ಕೇಂದ್ರದಲ್ಲಿ ಅಧಿಕಾರ ಹಿಡಿದು ಪ್ರಧಾನಿ ಹುದ್ದೆ ಅಲಂಕರಿಸಿದರು. 10 ವರ್ಷಗಳ ಕಾಲ ಕೇಂದ್ರದಲ್ಲಿ ಆಳ್ವಿಕೆ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು ಯುಪಿಎ ಕಾಲದ ಹಗರಣಗಳ ಸಮಗ್ರ ತನಿಖೆ ಮಾಡಿಸಿ ತಾರ್ಕಿಕ ಅಂತ್ಯ ಕಾಣಿಸಲಿಲ್ಲ. ಮೋದಿಯವರಿಗೆ ಭ್ರಷ್ಟಾಚಾರವನ್ನು ಚುನಾವಣಾ ಅಸ್ತ್ರವನ್ನಾಗಿ ಮಾಡಿಕೊಂಡು ಸಮೃದ್ಧವಾದ ರಾಜಕೀಯ ಫಸಲು ತೆಗೆಯುವ ಇರಾದೆ ಇತ್ತೇ ಹೊರತು ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತೆಸೆಯುವ ಕನಸು ಇರಲಿಲ್ಲ.
ಎಂದಿನಂತೆ ನರೇಂದ್ರ ಮೋದಿಯವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ಅವ್ಯಾಹತವಾಗಿ ಮುಂದುವರಿದಿದೆ. ಆದರೆ ಅದರ ಸ್ವರೂಪ ಬದಲಾಗಿದೆ. ಸರಕಾರಿ ಭ್ರಷ್ಟಾಚಾರವನ್ನು ಬೇಗ ಪತ್ತೆಹಚ್ಚಬಹುದು. ಆದರೆ ಕಾರ್ಪೊರೇಟರ್ ಶೈಲಿಯ ಭ್ರಷ್ಟಾಚಾರವನ್ನು ಪತ್ತೆಹಚ್ಚಲಾಗದು. ಭಾರತೀಯ ಜನತಾ ಪಕ್ಷಕ್ಕೆ ಬಂದ ದೇಣಿಗೆಯ ಮೂಲ ಸಿಕ್ಕರೆ ಭ್ರಷ್ಟಾಚಾರದ ವಿರಾಟ್ ಸ್ವರೂಪ ಅರ್ಥವಾಗುತ್ತದೆ. ಈ.ಡಿ., ಸಿಬಿಐನಂತಹ ತನಿಖಾ ಸಂಸ್ಥೆಗಳು ಕೇಂದ್ರ ಸರಕಾರದ ಕೈ ಗೊಂಬೆಗಳಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಕೇಂದ್ರ ಸರಕಾರದ ಭ್ರಷ್ಟಾಚಾರ ಹೊರ ಬರುತ್ತಿಲ್ಲ.
ಕಾಂಗ್ರೆಸ್ ಮತ್ತು ಇನ್ನಿತರ ರಾಜಕೀಯ ಪಕ್ಷಗಳು ಮೋದಿ ಸರಕಾರದಲ್ಲಿನ ಭ್ರಷ್ಟಾಚಾರವನ್ನು ಬಯಲು ಮಾಡುವಲ್ಲಿ ವಿಫಲವಾಗಿದೆಯೇ ಹೊರತು ವ್ಯವಸ್ಥೆ ಸಂಪೂರ್ಣ ಶುದ್ಧವಾಗಿದೆ ಎಂದು ಭಾವಿಸುವಂತಿಲ್ಲ. ಜಾಣಭ್ರಷ್ಟರು ಹೆಚ್ಚು ಅಪಾಯಕಾರಿ. ಚುನಾವಣಾ ತಂತ್ರಗಾರಿಕೆ ಎಂಬುದೇ ಮೋಸದ ಬಲೆ. ಸರಕಾರದ ಹುಳುಕುಗಳನ್ನು-ಭ್ರಷ್ಟಾಚಾರವೂ ಸೇರಿದಂತೆ ಮುಚ್ಚಿಕೊಳ್ಳುವ ಈ ತಂತ್ರಗಾರಿಕೆ ಮೋದಿ-ಅಮಿತ್ ಶಾ ಜೋಡಿಗೆ ಚೆನ್ನಾಗಿ ಗೊತ್ತು. ಭ್ರಷ್ಟಾಚಾರದ ಮೂಲ; ಚುನಾವಣೆಗಳ ದುಬಾರಿ ಖರ್ಚು-ವೆಚ್ಚ. ಚುನಾವಣಾ ಭ್ರಷ್ಟಾಚಾರ ಎಂಬುದು ರಾಷ್ಟ್ರೀಯ ವಿದ್ಯಮಾನ. ರಾಜ್ಯಗಳ ಸರಕಾರಿ ವ್ಯವಸ್ಥೆ ಸಂಪೂರ್ಣ ಭ್ರಷ್ಟಗೊಳ್ಳಲು ಚುನಾವಣಾ ಭ್ರಷ್ಟಾಚಾರ, ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ವರ್ಗಾವಣೆ ದಂಧೆ ಎಂಬ ಆಯಕಟ್ಟಿನ ಜಾಗಕ್ಕೆ ನಡೆಸುವ ಭ್ರಷ್ಟಾಚಾರ. ಇದು ತುದಿ ಮೊದಲಿಲ್ಲದ ಭ್ರಷ್ಟ ವ್ಯವಸ್ಥೆಯನ್ನು ಹುಟ್ಟು ಹಾಕಿದೆ. ರಾಜಕೀಯ ಭಾಷಣಗಳು, ಆರೋಪ-ಪ್ರತ್ಯಾರೋಪಗಳು ತಾತ್ಕಾಲಿಕ ಫಸಲು ತೆಗೆಯುವ ತಂತ್ರಗಾರಿಕೆಯ ಭಾಗವಾಗಿರುತ್ತವೆಯೇ ಹೊರತು ಭ್ರಷ್ಟಾಚಾರವನ್ನು ಬೇರು ಸಹಿತ ನಿರ್ಮೂಲನೆ ಮಾಡುವ ದೊಡ್ಡ ಸಂಕಲ್ಪ ಹೊಂದಿರುವುದಿಲ್ಲ.
ಕರ್ನಾಟಕವನ್ನೇ ಗಮನಿಸಿ; ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಶೇ. 40 ಕಮಿಷನ್ ಸರಕಾರ ಎಂದು ಬಿಜೆಪಿ ಸರಕಾರದ ಮೇಲೆ ಗಂಭೀರ ಸ್ವರೂಪದ ಆರೋಪದ ಮಾಡಿತ್ತು ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಗಾರಿಕೆ ತಂಡ ‘ಪೇಸಿಎಂ’ ಅಭಿಯಾನವನ್ನೇ ಕೈಗೊಂಡಿತ್ತು. ಜನಸಾಮಾನ್ಯರು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರದ ಸಮಜಾಯಿಸಿಯನ್ನು ನಂಬಲಿಲ್ಲ. ಅದು ಕಾಂಗ್ರೆಸ್‌ಗೆ ವರವಾಗಿ ಪರಿಣಮಿಸಿತು. 135 ಶಾಸಕ ಬಲದೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ, ಡಿ.ಕೆ. ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾಗಿ ಪೂರ್ಣ ಪ್ರಮಾಣದ ಸಚಿವ ಸಂಪುಟದೊಂದಿಗೆ ರಾಜ್ಯಭಾರ ನಡೆಸುತ್ತಿದ್ದಾರೆ. ಈ ಸರಕಾರದಿಂದ ಜನಸಮಾನ್ಯರಿಗಾದ ಲಾಭವೆಂದರೆ ಐದು ಗ್ಯಾರಂಟಿಗಳು. ಗ್ಯಾರಂಟಿಗಳ ಅನುಷ್ಠಾನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಬಿಜೆಪಿ-ಜೆಡಿಎಸ್‌ನವರು ಅತ್ಯಂತ ಸಾರ್ವಕಾಲಿಕ ಸತ್ಯವಾಗಿರುವ ಭ್ರಷ್ಟಾಚಾರ ವಿಷಯ ಮುಂದು ಮಾಡಿ ಹೋರಾಟ ನಡೆಸುತ್ತಿದ್ದಾರೆ. ಕಾಂಗ್ರೆಸ್ ಸರಕಾರವನ್ನು ಶೇ. 50 ಕಮಿಷನ್ ಸರಕಾರ ಎಂದು ಮೂದಲಿಸುತ್ತಿದ್ದಾರೆ. ಬಿಜೆಪಿ-ಜೆಡಿಎಸ್ ಆರೋಪವನ್ನು ಸಂವೇದನಾಶೀಲರಾದ ಯಾರೂ ತಳ್ಳಿಹಾಕಲಾರರು. ಈ ಹಿಂದೆ ಸರಕಾರ ನಡೆಸಿದವರು ಅನುಭವದ ಮಾತನ್ನೇ ಹೇಳುತ್ತಿದ್ದಾರೆ. ಈ ಹಿಂದೆ ಶೇ. 40 ಇತ್ತು ಎಂದು ಒಪ್ಪಿಕೊಂಡೇ ಶೇ. 10ರಷ್ಟು ಹೆಚ್ಚಾಗಿರಬಹುದು ಎಂದು ಊಹೆ ಮಾಡಿ ಶೇ. 50 ಕಮಿಷನ್ ಸರಕಾರ ಎಂದು ಆರೋಪಿಸುತ್ತಿದ್ದಾರೆ. ಒಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಂಗ್ರೆಸ್ ಸರಕಾರ ಶೇ. 80 ಕಮಿಷನ್ ಸರಕಾರ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಯಡಿಯೂರಪ್ಪ, ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದಾಗ ವಿಜಯೇಂದ್ರರೇ ಎಲ್ಲಾ ಡೀಲ್‌ಗಳನ್ನು ಮಾಡುತ್ತಿದ್ದರು. ಆಗ ಅವರು ಶೇ. 70 ಕಮಿಷನ್ ಪಡೆದಿರಬಹುದು: ವಾಡಿಕೆಯ ಶೇ. 40 ಮೀರಿ. ಹಾಗಾಗಿಯೇ ಕಾಂಗ್ರೆಸ್‌ಸರಕಾರವನ್ನು ಶೇ. 80 ಕಮಿಷನ್ ಸರಕಾರ ಎಂದು ದೂರುತ್ತಿದ್ದಾರೆ.
ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೂರ್ಣ ಪ್ರಮಾಣದ ಸಚಿವ ಸಂಪುಟ ರಚಿಸಿದ ಮೊದಲ ದಿನವೇ ‘ರಾಜಕೀಯ ಭ್ರಷ್ಟಾಚಾರ’ ಇವರ ವ್ಯಾಪ್ತಿ ಮೀರಿದ ಸಂಗತಿ ಎಂಬುದು ಮನವರಿಕೆಯಾಗಿತ್ತು. ಸಮಾಜವಾದಿ ಹಿನ್ನೆಲೆಯಿಂದ ಬಂದ, ಮೂಲತಃ ಸಂವೇದನಾಶೀಲರಾಗಿರುವ, ಜನಸಾಮಾನ್ಯರಿಗೆ ಒಳ್ಳೆಯದು ಮಾಡಬೇಕೆಂಬ ತುಡಿತ ಇರುವ ಸಿದ್ದರಾಮಯ್ಯನವರು ತಮ್ಮ ಸಚಿವ ಸಂಪುಟದಲ್ಲಿ ಕೆಲವರಿಗೆ ಸ್ಥಾನ ಕಲ್ಪಿಸಿ ತೂಕದ ಖಾತೆ ನೀಡುತ್ತಿರಲಿಲ್ಲ. ಅವರೆಲ್ಲ ಇಲಾಖೆಗಳಲ್ಲಿ ಉತ್ತಮ ಕೆಲಸ ಮಾಡುತ್ತಾರೆ ಎಂಬುದಕ್ಕಿಂತ ಅತ್ಯುತ್ತಮ ‘ಫಂಡ್‌ರೈಸರ್ಸ್’ ಎಂಬುದು ಮೇಲ್ನೋಟಕ್ಕೆ ಅರ್ಥವಾಗುವ ಸತ್ಯ. ಅದನ್ನು ಎತ್ತಿ ತೋರರಿಸಿ ಟೀಕಿಸುವುದರಲ್ಲಿ ಅರ್ಥವಿಲ್ಲ.
ಸಿದ್ದರಾಮಯ್ಯನವರಿಂದ ನಿರೀಕ್ಷಿಸಬಹುದಾದ ವಲಯಗಳೆಂದರೆ ಜನಸಾಮಾನ್ಯರ ಒಡನಾಟಕ್ಕೆ ಬರುವ ಆರೋಗ್ಯ, ಕಂದಾಯ, ಶಿಕ್ಷಣ, ಪೊಲೀಸ್ ಇಲಾಖೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳಲಿ ಎಂದು. ಜನಸ್ಪಂದನ ಕಾರ್ಯಕ್ರಮದಲ್ಲಿ ಹೆಚ್ಚು ದೂರು-ದುಮ್ಮಾನಗಳು ಮೇಲಿನ ಇಲಾಖೆಗಳ ಕುರಿತೇ ಇದ್ದವು. ಜನಸಾಮಾನ್ಯರ ನೇರ ಸಂಪರ್ಕಕ್ಕೆ ಬರುವ ಇಲಾಖೆಗಳಲ್ಲಿ ಹುದ್ದೆ ಭರ್ತಿ ಮಾಡುವಾಗ ಲಂಚಕ್ಕೆ ಆಸ್ಪದ ಕೊಡದಿದ್ದರೆ ಅಷ್ಟರ ಮಟ್ಟಿಗೆ ಆ ಇಲಾಖೆಯ ಅಧಿಕಾರಿಗಳನ್ನು ನೈತಿಕ ನೆಲೆಯಲ್ಲಿ ಕಟ್ಟಿ ಹಾಕಬಹುದು. ಪಾರದರ್ಶಕ ವರ್ಗಾವಣೆಯೂ ಅಧಿಕಾರಿಗಳು ಭ್ರಷ್ಟರಾಗದಂತೆ ನಿಯಂತ್ರಿಸಬಹುದು. ರಾಜ್ಯದಲ್ಲಿ ಭ್ರಷ್ಟಾಚಾರದ ಮೂಲ ಇರುವುದೇ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಇನ್ನಿತರ ನೇಮಕಾತಿ, ಪ್ರಾಧಿಕಾರಗಳ ಅಕ್ರಮ ನೇಮಕಾತಿಯಲ್ಲಿ. ಜೊತೆಗೆ ಆಯಕಟ್ಟಿನ ಜಾಗದ ಪೈಪೋಟಿಯ ವರ್ಗಾವಣೆ ದಂಧೆಯಲ್ಲಿ. ಎರಡು ಕಡೆ ವ್ಯವಸ್ಥೆಯನ್ನು ಶುದ್ಧೀಕರಿಸಿದರೆ ಅಧಿಕಾರಶಾಹಿಗೆ ನೈತಿಕ ಪಾಠ ಹೇಳಬಹುದು. ಬಡವರ ರಕ್ತ ಹೀರುವ ವ್ಯವಸ್ಥೆಗೆ ಕಾಯಕಲ್ಪ ನೀಡುವುದರಲ್ಲೇ ನಿಜವಾದ ಜನಸ್ಪಂದನ ಇದೆ. ಆಧುನಿಕ ತಂತ್ರಾಂಶ ಬಳಸಿದ ಮೇಲಂತೂ ಸರ್ವರ್ ಪ್ರಾಬ್ಲಮ್ ಹೆಸರಲ್ಲಿ ಹೆಚ್ಚು ಹಣ ಪೀಕುವ ವ್ಯವಸ್ಥೆ ನಿರ್ಮಾಣವಾಗಿದೆ.
ಹುದ್ದೆ ಗಿಟ್ಟಿಸಲು ಲಂಚ, ಆಯಕಟ್ಟಿನ ಜಾಗಕ್ಕೆ ಹೋಗಲು ಲಂಚ ನೀಡುವ ಅಧಿಕಾರಿ ಸೇವಾ ಮನೋಭಾವ ಹೊಂದಿರುವುದು ಸಾಧ್ಯವೇ ಇಲ್ಲ. ಇನ್ನು ಮನುಷ್ಯನಾಗಿರುವುದು ದೂರದ ಮಾತು. ಜನಸ್ಪಂದನ ಆಡಳಿತ ವ್ಯವಸ್ಥೆ ರೂಪಿಸಲು ಲಂಚವಿಲ್ಲದ ನೌಕರಿ ಮತ್ತು ವರ್ಗಾವಣೆ ನೀತಿ ಅನಿವಾರ್ಯ. ಈ ಹಿನ್ನೆಲೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅರ್ಹರಿಗೆ ಸರಕಾರಿ ಉದ್ಯೋಗಗಳನ್ನು ದೊರಕಿಸಿಕೊಡಲು, ಕಟ್ಟುನಿಟ್ಟಿನ ಪರೀಕ್ಷಾ ವಿಧಾನ, ಪಾರದರ್ಶಕ ನೇಮಕಾತಿ ಪ್ರಕ್ರಿಯೆ ಅಳವಡಿಕೆ ಮಾಡಲು ಬೆಳಗಾವಿ ಅಧಿವೇಶನದಲ್ಲಿ ಹೊಸ ಮಸೂದೆ ಮಂಡಿಸಲಿದ್ದಾರೆ. ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ಭ್ರಷ್ಟಾಚಾರ ಮತ್ತು ಅಕ್ರಮ ವಿಧಾನಗಳ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ-2023ಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದುಕೊಂಡಿದ್ದಾರೆ. ಜನಸಾಮಾನ್ಯರ ಸಂಪರ್ಕಕ್ಕೆ ಬರುವ ಇಲಾಖೆಗಳಲ್ಲಿ ಲಂಚ ರಹಿತ ವ್ಯವಸ್ಥೆ ನಿರ್ಮಿಸಿದರೆ ಸಹಜವಾಗಿಯೇ ‘ಜನಸ್ಪಂದನ’ ಆಡಳಿತ ವ್ಯವಸ್ಥೆ ರೂಪುಗೊಳ್ಳುತ್ತದೆ.
ನಾಡಿನ ಯುವ ಜನಾಂಗದ ಭವಿಷ್ಯ ರೂಪಿಸುವ ಉನ್ನತ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಭ್ರಷ್ಟಗೊಂಡಿದೆ. ಕುಲಪತಿ ನೇಮಕಕ್ಕೆ ಸಾಮಾಜಿಕ ನ್ಯಾಯ ಆಧರಿತ ಪ್ರತಿಭಾವಂತರನ್ನು ಗುರುತಿಸಲು ನಿರ್ದಿಷ್ಟ ಮಾನದಂಡಗಳೇ ಇಲ್ಲ. ಲಂಚ ಕೊಟ್ಟು ಕುಲಪತಿ, ಕುಲ ಸಚಿವರಾಗುವವರು ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣದಿಂದ ಹಿಡಿದು ಅಕ್ರಮ ನೇಮಕಾತಿಗಳ ಮೂಲಕ ಹಣ ಸಂಪಾದಿಸುತ್ತಾರೆ. ಲಂಚ ಕೊಟ್ಟು ಪ್ರಾಧ್ಯಾಪಕನಾಗುವವನು ಇಡೀ ಶೈಕ್ಷಣಿಕ ವ್ಯವಸ್ಥೆ ಹಾಳು ಮಾಡುತ್ತಾನೆ. ಗುಣಮಟ್ಟದ ಪಾಠ-ಪ್ರವಚನ, ಸಂಶೋಧನೆ ವಿದ್ಯಾರ್ಥಿಗಳಿಗೆ ಮರೀಚಿಕೆಯಾಗುತ್ತದೆ. ಜನಸ್ಪಂದನ ಸಾರ್ವಜನಿಕ ಬದುಕಿನ ಭಾಗವಾಗಬೇಕಾದರೆ ಸಾಧ್ಯವಾದಷ್ಟು ಮಟ್ಟಿಗೆ ಭ್ರಷ್ಟಾಚಾರ ನಿವಾರಣೆಯಾಗಲೇಬೇಕು