ಬಿಜೆಪಿ-ಜೆಡಿಎಸ್ ಬಿಕ್ಕಟ್ಟು ಎಂಬ ಕಪಟ ನಾಟಕ
ಇನ್ನೇನು ಬಿಜೆಪಿ-ಜೆಡಿಎಸ್ ಮೈತ್ರಿ ಮುರಿದು ಬೀಳುತ್ತದೆ ಎಂದೇ ಹಲವರು ಭಾವಿಸಿದ್ದರು. ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಸಿ.ಪಿ. ಯೋಗೇಶ್ವರ್ ಅವರನ್ನು ಕಣಕ್ಕಿಳಿಸಬೇಕೆಂದು ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ ಬಣ ಉತ್ಸುಕವಾಗಿತ್ತು. ಯಾಕೆಂದರೆ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಯೋಗೇಶ್ವರ್ ಕ್ರಿಯಾಶೀಲ ಪಾತ್ರ ವಹಿಸಿದ್ದರು. 2018ರ ಚುನಾವಣೆಯಲ್ಲಿ ಯೋಗೇಶ್ವರ್ ಹೀನಾಯವಾಗಿ ಸೋತಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಮೇಲಿನ ವೈಯಕ್ತಿಕ ಜಿದ್ದಿನ ಕಾರಣಕ್ಕೆ ಯೋಗೇಶ್ವರ್ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸುವ ಟೀಮಿನಲ್ಲಿದ್ದರು. ಭಿನ್ನಮತೀಯ ಶಾಸಕರ ಜೊತೆಗೆ ಮುಂಬೈಗೂ ಹೋಗಿದ್ದರು. ಆಪರೇಷನ್ ಕಮಲದ ಒಂದಷ್ಟು ಜವಾಬ್ದಾರಿಯನ್ನೂ ಹೊತ್ತಿದ್ದರು. 2019ರಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಯೋಗೇಶ್ವರ್ ಮತ್ತು ವಿಜಯೇಂದ್ರ ನಡುವಿನ ಸಂಬಂಧದಲ್ಲಿ ಬಿರುಕು ಕಾಣಿಸಿಕೊಂಡಿತು. ದಿನಕಳೆದಂತೆ ಬಿರುಕು ಹೆಚ್ಚುತ್ತಾ ಹೋದಂತೆ ಯೋಗೇಶ್ವರ್ ಸಂತೋಷ್ ಬಣ ಸೇರಿಕೊಂಡರು. ಆ ಬಣದ ಬಲದ ಮೇಲೆಯೇ ಅವರು ಎಂಎಲ್‌ಸಿ ಹುದ್ದೆ ಗಿಟ್ಟಿಸಿಕೊಂಡರು. ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸಲೇಬೇಕೆಂದು ಸಂಘಟಿತವಾದ ಚಾಡಿಕೋರರ ಟೀಮ್‌ನ ಕ್ರಿಯಾಶೀಲ ಸದಸ್ಯರಾಗಿ ಕಾರ್ಯ ನಿರ್ವಹಿಸಿದರು.
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಇಳಿಸುವಲ್ಲಿ ಸಂತೋಷ್ ಬಣ ಯಶಸ್ಸು ಸಾಧಿಸಿತು. ಆದರೆ ಅವರ ಪ್ರಾಮುಖ್ಯತೆ ಮತ್ತು ಶಕ್ತಿಯನ್ನು ಕುಗ್ಗಿಸುವಲ್ಲಿ ವಿಫಲವಾಯಿತು. ಯಡಿಯೂರಪ್ಪ ಆಣತಿಯಂತೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದರು. ಬೊಮ್ಮಾಯಿ ಮುಖ್ಯಮಂತ್ರಿ ಆಗಿ ಮಹತ್ತರ ಸಾಧನೆಯನ್ನೇನೂ ಮಾಡಲಿಲ್ಲ. ಆಡಳಿತದ ಎಲ್ಲಾ ಹಂತಗಳಲ್ಲೂ ಬಿ.ಎಲ್. ಸಂತೋಷ್ ಮಾತಿಗೆ ಮನ್ನಣೆ ನೀಡಿ, ವೈಯಕ್ತಿಕ ನೆಲೆಯಲ್ಲಿ ಯಡಿಯೂರಪ್ಪ ಕುಟುಂಬವನ್ನೂ ಸಂಭಾಳಿಸಿ ಅತ್ಯಂತ ಕೆಟ್ಟ ಹಾಗೂ ಅರಾಜಕ ಆಡಳಿತ ನೀಡಿ ಜನರ ಕಣ್ಣಲ್ಲಿ ಜೀರೋ ಆದರು. ಹಾಗೆ ನೋಡಿದರೆ ಬಸವರಾಜ ಬೊಮ್ಮಾಯಿ ಕೋಮುವಾದಿ ಮನಃಸ್ಥಿತಿಯವರಲ್ಲ. ಆದರೆ ಆಡಳಿತದ ಎಲ್ಲಾ ಹಂತದಲ್ಲೂ ಕೋಮುವಾದಿ ಅಜೆಂಡಾ ವಿಜೃಂಭಿಸುವಂತೆ ಮಾಡಿದ್ದರು. ಪಠ್ಯಪುಸ್ತಕದಲ್ಲಿ ಬಸವಣ್ಣ, ಕುವೆಂಪು ವ್ಯಕ್ತಿ ಚಿತ್ರಗಳನ್ನು ತಿರುಚಿ ಆಯಾ ಸಮುದಾಯಗಳ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಮತಾಂತರ ನಿಷೇಧ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ, ರೈತ ವಿರೋಧಿ ಎಪಿಎಂಸಿ ಕಾಯ್ದೆ ಜಾರಿಗೊಳಿಸಿ ಆರೆಸ್ಸೆಸ್‌ನ ಕೆಲವರ ಸಂತೋಷಕ್ಕೆ ಕಾರಣರಾದರು. ಆರೆಸ್ಸೆಸ್ ಮೂಲದಿಂದ ಬಂದ ಯಡಿಯೂರಪ್ಪ ಕೂಡ ಮತಾಂತರ ನಿಷೇಧ ಕಾಯ್ದೆ ತರಲು ಮನಸ್ಸು ಮಾಡಿರಲಿಲ್ಲ. ಕರಾವಳಿಯನ್ನು ಕೋಮುಗಲಭೆಯ ಪ್ರಯೋಗ ಶಾಲೆಯನ್ನಾಗಿಸಿ ಆರೆಸ್ಸೆಸ್‌ನವರು ಯಶಸ್ವಿಯಾಗಿದ್ದರು. ಬಿಜೆಪಿಗೆ ಅತ್ಯುತ್ತಮ ಫಸಲು ತಂದು ಕೊಟ್ಟಿದ್ದರು. ಅದೇ ಮಾದರಿಯಲ್ಲಿ ಮಂಡ್ಯ, ಮೈಸೂರು, ಹಾಸನ ಭಾಗದಲ್ಲಿ ಧರ್ಮಾಧರಿತ ಮತ ಧ್ರುವೀಕರಣಕ್ಕೆ ಮತೀಯ ಗಲಭೆಯ ಯೋಜನೆ ರೂಪಿಸಿದರು.
2023ರ ಚುನಾವಣೆಗೆ ಸಾಕಷ್ಟು ಸಮಯಾವಕಾಶ ಇರುವಾಗಲೇ ಟಿಪ್ಪು ವಿರೋಧಿ ಪ್ರಚಾರ ಆರಂಭಿಸಿದರು. ಉರಿಗೌಡ, ನಂಜೇಗೌಡ ಕಾಲ್ಪನಿಕ ಪಾತ್ರಗಳನ್ನು ಸೃಷ್ಟಿ ಮಾಡಿದರು. ಹಲಾಲ್ ಕಟ್, ಜಟಕಾ ಕಟ್ ಎಂಬ ಹೊಸ ಪರಿಭಾಷೆಗಳು ಚಲಾವಣೆಗೆ ಬಂದವು. ಬಿ.ಎಲ್. ಸಂತೋಷ್ ರಚಿಸಿದ ಕೋಮುವಾದಿ ಪ್ರಹಸನದ ಸ್ಕ್ರಿಪ್ಟ್‌ನ ಮೂಲ ಉದ್ದೇಶವೇ ಹಳೆ ಮೈಸೂರು ಭಾಗದಲ್ಲಿ ಧರ್ಮಾಧಾರಿತ ಮತಗಳ ಧ್ರುವೀಕರಣ ಮಾಡುವುದು. ಜಾತ್ಯತೀತ ಜನತಾದಳದ ಅಸ್ತಿತ್ವ ಅಳಿಸಿ ಹಾಕಿ ಆ ಜಾಗದಲ್ಲಿ ಬಿಜೆಪಿಯನ್ನು ಪ್ರತಿಷ್ಠಾಪಿಸುವುದಾಗಿತ್ತು. ಸಂತೋಷ್ ಬಣದ ಹುನ್ನಾರವನ್ನು ತಿಳಿದುಕೊಂಡೇ ಕುಮಾರಸ್ವಾಮಿಯವರು ಚಿತ್ಪಾವನ ಬ್ರಾಹ್ಮಣರಾದ ಜೋಶಿಯವರನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ಪ್ರತಿಷ್ಠಾಪಿಸುವ ಪ್ರಯತ್ನಗಳು ಗಂಭೀರವಾಗಿ ನಡೆಯುತ್ತಿವೆ ಎಂಬ ಅಭಿಪ್ರಾಯವನ್ನು ತೇಲಿಬಿಟ್ಟರು. ವಿಶೇಷವಾಗಿ ಲಿಂಗಾಯತ ಮತಗಳು ಬಿಜೆಪಿಯಿಂದ ದೂರವಾಗಲಿ ಎಂಬ ಇರಾದೆ ಅವರ ಮಾತುಗಳಲ್ಲಿ ಇತ್ತು. ಅಷ್ಟೊತ್ತಿಗೆ ಸಿ.ಎನ್. ಅಶ್ವತ್ಥ್‌ನಾರಾಯಣ್, ಸಿ.ಟಿ. ರವಿ, ಸಿ.ಪಿ. ಯೋಗೇಶ್ವರ್‌ರಂತಹ ಒಕ್ಕಲಿಗ ಸಮುದಾಯದ ನಾಯಕರು ಹಳೆ ಮೈಸೂರು ಭಾಗದಲ್ಲಿ ಹೆಚ್ಚು ಓಡಾಡತೊಡಗಿದ್ದರು. 2023ರ ವಿಧಾನಸಭೆಯ ಚುನಾವಣೆಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಬಿ.ಎಲ್. ಸಂತೋಷ್ ಕೈ ಮೇಲಾಯಿತು. ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವರಿಗೆ ಟಿಕೆಟ್ ಸಿಗಲಿಲ್ಲ. ಪರಿಣಾಮವಾಗಿ ಬಿ.ಎಲ್. ಸಂತೋಷ್ ಅವರನ್ನು ಲಿಂಗಾಯಿತ ವಿರೋಧಿ ಎನ್ನುವಂತೆ ವ್ಯಾಪಕವಾಗಿ ಪ್ರಚಾರ ಮಾಡಲಾಯಿತು. ಕಾಂಗ್ರೆಸ್ ಶೆಟ್ಟರ್, ಸವದಿಯಂತಹವರನ್ನು ಸೆಳೆದು ‘ಲಿಂಗಾಯತ ವಿರೋಧಿ’ ಬಿಜೆಪಿ ಎಂಬ ಭಾವನೆಯನ್ನು ಗಟ್ಟಿಗೊಳಿಸಿ ಲಾಭ ಮಾಡಿಕೊಳ್ಳಲು ಯತ್ನಿಸಿತು.
ಹಲಾಲ್ ಕಟ್, ಜಟಕಾ ಕಟ್, ಹಿಜಾಬ್, ಪಠ್ಯಪುಸ್ತಕ ವಿವಾದ, ಸಂತೋಷ್ ಲಿಂಗಾಯತರನ್ನು ತುಳಿಯುತ್ತಿದ್ದಾರೆ ಎಂಬ ಅಭಿಪ್ರಾಯಗಳು ಪ್ರಚಾರಗೊಂಡು ಬಿಜೆಪಿ ನಿರೀಕ್ಷೆಗೂ ಮೀರಿ ಹೀನಾಯ ಸೋಲನ್ನು ಅನುಭವಿಸಿತು. ತಾನು ಮಾತ್ರ ಸೋಲು ಅನುಭವಿಸಲಿಲ್ಲ. ಹಳೆ ಮೈಸೂರು ಭಾಗದಲ್ಲಿ ಜಾತ್ಯತೀತ ಜನತಾದಳದ ಸಂಖ್ಯಾಬಲವನ್ನು ಗಣನೀಯ ಪ್ರಮಾಣದಲ್ಲಿ ಕುಸಿಯುವಂತೆ ಮಾಡಿತ್ತು. ಜೆಡಿಎಸ್ ಸಂಖ್ಯಾಬಲ ಕುಸಿಯುವಲ್ಲಿ ಡಿ.ಕೆ. ಶಿವಕುಮಾರ್ ‘ಮುಖ್ಯಮಂತ್ರಿ’ಯಾಗಬಹುದೆಂಬ ಅಂಶವೂ ಸೇರಿಕೊಂಡಿತ್ತು. ಏಕಕಾಲಕ್ಕೆ ದೇವೇಗೌಡ, ಕುಮಾರಸ್ವಾಮಿ ಜಾತ್ಯತೀತ ಜನತಾದಳ ಹಾಗೂ ಬಿ.ಎಸ್. ಯಡಿಯೂರಪ್ಪ ನಾಯಕತ್ವವನ್ನು ಹಿನ್ನೆಲೆಗೆ ಸರಿಸುವುದು ಸಂತೋಷ್ ಬಣದ ಹೆಗ್ಗುರಿಯಾಗಿತ್ತು. ರಾಮದಾಸ್, ಅರವಿಂದ ಲಿಂಬಾವಳಿ, ರಘುಪತಿ ಭಟ್, ಕೆ.ಎಸ್. ಈಶ್ವರಪ್ಪ ಮುಂತಾದ ಸಂಘ ಮೂಲದವರನ್ನು ಹಿನ್ನೆಲೆಗೆ ಸರಿಸಲು ಅವರಿಗೆ ಸಂತೋಷ್ ಟಿಕೆಟ್ ನಿರಾಕರಿಸಿದ್ದರು. ಆದರೆ ಎಲ್ಲ ಪಕ್ಷಗಳಲ್ಲಿ ತಿರುಗಾಡಿ ಬಂದ ಸಿ.ಪಿ. ಯೋಗೇಶ್ವರ್ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಉಳಿಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಯೋಗೇಶ್ವರ್ ನೇರ ಅಮಿತ್ ಶಾ ಅವರ ಜೊತೆ ಒಡನಾಟ ಹೊಂದುವಷ್ಟು ಹತ್ತಿರವಾಗಿದ್ದರು. ಸಂತೋಷ್ ಬಣದ ವೈಫಲ್ಯವನ್ನು ಎದುರು ನೋಡುತ್ತಾ, ಸಿ.ಟಿ. ರವಿಯಂತಹವರ ಸೋಲಿಗೆ ಖೆಡ್ಡಾ ತೋಡಿದ್ದ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದರು. ನೆಪಮಾತ್ರಕ್ಕೆ ನಾಯಕರಾಗಿದ್ದ ಬಸವರಾಜ ಬೊಮ್ಮಾಯಿ ಶಿಗ್ಗಾಂವಿಯೊಂದನ್ನು ಉಳಿಸಿಕೊಂಡರೆ ಸಾಕೆಂದು ಚುನಾವಣೆಗೂ ಮುನ್ನ ಸೋಲನ್ನೊಪ್ಪಿಕೊಂಡಿದ್ದರು. ಕರ್ನಾಟಕ ಬಿಜೆಪಿಯನ್ನು ವಶಕ್ಕೆ ತೆಗೆದುಕೊಳ್ಳುವ ಭರದಲ್ಲಿ ಸಂತೋಷ್ ಶತ್ರುಗಳ ಸಂಖ್ಯೆ ಹೆಚ್ಚಿಸಿಕೊಂಡರು. ಅಷ್ಟು ಮಾತ್ರವಲ್ಲ ಅತಿಯಾದ ಹಿಂದುತ್ವದ ಕಾರಣಕ್ಕೆ ಮುಗ್ಗರಿಸಿದರು.
ಕೇವಲ 19 ಸೀಟುಗಳಲ್ಲಿ ಗೆಲುವು ಸಾಧಿಸಿ ಭಾರೀ ಹಿನ್ನಡೆ ಅನುಭವಿಸಿದ್ದ ಜಾತ್ಯತೀತ ಜನತಾದಳ ಮತ್ತದರ ವರಿಷ್ಠ ನಾಯಕ ದೇವೇಗೌಡರು ತಮ್ಮ ನೆಲೆ ಗಟ್ಟಿಗೊಳಿಸಿಕೊಳ್ಳುವುದು ಹೇಗೆಂದು ಗಂಭೀರವಾಗಿ ಚಿಂತಿಸಿದರು. ಹಿನ್ನಡೆಗೆ ಕಾರಣವಾದ ಅಂಶಗಳನ್ನು ಪತ್ತೆಹಚ್ಚಿದರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆ ವಿಸ್ತರಿಸುವಲ್ಲಿ ಬಿ.ಎಲ್. ಸಂತೋಷ್ ಪಾತ್ರವಿರುವುದು ಮನಗಂಡರು. ಅತ್ತ ಯಡಿಯೂರಪ್ಪ ಮಗ ವಿಜಯೇಂದ್ರರ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. ಶತ್ರು ಸಂಹಾರಕ್ಕೆ ಲೋಕಸಭಾ ಚುನಾವಣೆಯನ್ನು ಬಹುದೊಡ್ಡ ಅಸ್ತ್ರವನ್ನಾಗಿಸಿಕೊಳ್ಳಬಹುದೆಂದು ಆಲೋಚಿಸಿದ ಯಡಿಯೂರಪ್ಪ ಹೈಕಮಾಂಡ್ ಜೊತೆ ಬಾರ್ಗೇನ್ ಮಾಡಿ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿಸಿಕೊಂಡರು. ‘ಇಂಡಿಯಾ’ ಕೂಟದಿಂದ ತಿರಸ್ಕೃತಗೊಂಡಿದ್ದ ದೇವೇಗೌಡರು ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯ ಎಂದು ಭಾವಿಸಿದ್ದರು. ಬಿಜೆಪಿ-ಜೆಡಿಎಸ್ ಮೈತ್ರಿ ಸೂತ್ರದಲ್ಲಿ ಸಂತೋಷ್ ಆಟಕ್ಕೆ ಬ್ರೇಕ್ ಬೀಳುವ ಮುನ್ಸೂಚನೆ ಇತ್ತು. ದೇವೇಗೌಡರನ್ನು ನಖಶಿಖಾಂತ ವಿರೋಧಿಸುತ್ತಿದ್ದ ಯಡಿಯೂರಪ್ಪ ಮೈತ್ರಿಗೆ ಒಪ್ಪಿಕೊಂಡರು. ಲೋಕಸಭಾ ಚುನಾವಣೆಯಲ್ಲಿ ಬಿ.ಎಲ್. ಸಂತೋಷ್ ಅವರನ್ನು ಸಂಪೂರ್ಣವಾಗಿ ಹೊರಗಿಟ್ಟು ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ, ವಿಜಯೇಂದ್ರ ಟೀಮ್ ಮೈತ್ರಿಕೂಟದ ಸುಗಮ ಕಾರ್ಯಕ್ಕೆ ಸಂಧಾನ ಸೂತ್ರ ಮಾಡಿಕೊಂಡು ಯಶಸ್ವಿಯೂ ಆದರು. ಬೆಂಗಳೂರು ಗ್ರಾಮಾಂತರದಲ್ಲಿ ಡಿ.ಕೆ. ಸುರೇಶ್ ಅವರನ್ನು ರಾಜಕೀಯಕ್ಕೆ ಹೊಸಬರಾದ ಡಾ. ಸಿ.ಎನ್. ಮಂಜುನಾಥ್ ಅವರ ಮೂಲಕ ಸೋಲಿಸುತ್ತಾರೆಂದರೆ ದೇವೇಗೌಡ-ಯಡಿಯೂರಪ್ಪ ಯಾವ ಮಟ್ಟದಲ್ಲಿ ಕಾರ್ಯನಿರ್ವಹಿಸಿರಬಹುದು?
ಸಂತೋಷ್ ಬಣದ ಅವಕೃಪೆಗೆ ಒಳಗಾಗಿ ಟಿಕೆಟ್ ವಂಚಿತರಾಗಿದ್ದ ಜಗದೀಶ್ ಶೆಟ್ಟರ್ ಬಿಜೆಪಿ ಮೇಲೆ ಮಣ್ಣು ತೂರಿ ಕಾಂಗ್ರೆಸ್ ಸೇರಿಕೊಂಡಿದ್ದರು. ಕಾಂಗ್ರೆಸ್ ನಾಯಕರು ಕೂಡ ತರಾತುರಿಯಲ್ಲಿ ಶೆಟ್ಟರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದರು. ಜನಸಂಘದಿಂದ ಬಂದ ನಾಯಕ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳಲು ಸಾಧ್ಯವೇ ಎನ್ನುವುದು ಯಾರೂ ಗಮನಿಸಲಿಲ್ಲ. ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಟಿಕೆಟ್ ನೀಡಿ ಎಲ್ಲಾ ರೀತಿಯ ಸಹಕಾರ ಕೊಟ್ಟರು. ಜಗದೀಶ್ ಶೆಟ್ಟರ್ ಅವರಿಗೆ ತಮ್ಮ ಸ್ವಕ್ಷೇತ್ರದಲ್ಲೇ ಗೆಲ್ಲಲು ಸಾಧ್ಯವಾಗಲಿಲ್ಲ. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಕಾಂಗ್ರೆಸ್ ಅಲೆ ಜೋರಾಗಿತ್ತು. ಲಿಂಗಾಯತ ಸಮುದಾಯ ಬಿ.ಎಲ್. ಸಂತೋಷ್ ಕಾರ್ಯವೈಖರಿಗೆ ಬೇಸತ್ತು ಕಾಂಗ್ರೆಸ್ ಪರ ನಿಂತಿತ್ತು. ಅಂತಹ ಪೂರಕ ವಾತಾವರಣದಲ್ಲಿ ಶೆಟ್ಟರ್‌ಗೆ ಗೆಲುವು ಸಾಧಿಸಲಾಗಲಿಲ್ಲ. ಸೋತರೂ ಅವರಿಗೆ ಗೌರವ ನೀಡಿ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿದರು. ಶೆಟ್ಟರ್ ಜೊತೆಗೇ ಕಾಂಗ್ರೆಸ್ ಸೇರಿಕೊಂಡಿದ್ದ ಲಕ್ಷ್ಮಣ ಸವದಿ ಅಥಣಿಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರು. ಕಾಲಚಕ್ರ ತಿರುಗಿತು. ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ವಶಕ್ಕೆ ತೆಗೆದುಕೊಂಡಿದ್ದ ಸಂತೋಷ್ ಲೋಕಸಭಾ ಚುನಾವಣೆಯ ವೇಳೆ ಹಿನ್ನೆಲೆಗೆ ಸರಿದರು. ಯಡಿಯೂರಪ್ಪ, ಮಗ ವಿಜಯೇಂದ್ರ ಮೇಲುಗೈ ಸಾಧಿಸಿದರು. ಬಿಜೆಪಿಯ ಅಪ್ಪ-ಮಕ್ಕಳಿಗೆ ಜೆಡಿಎಸ್ ಅಪ್ಪ-ಮಕ್ಕಳು ಬಲ ನೀಡಿದರು. ಅಪ್ಪ ಮಕ್ಕಳ ಜೋಡಿಗೆ ಸಾಮಾನ್ಯ ಶತ್ರುವಾದ ಬಿ.ಎಲ್. ಸಂತೋಷ್ ಲೋಕಸಭಾ ಚುನಾವಣಾ ಪ್ರಕ್ರಿಯೆಯಿಂದಲೇ ಹೊರತಳ್ಳಲ್ಪಟ್ಟರು. ಯಾಕೆಂದರೆ; ‘ಇಂಡಿಯಾ’ ಕೂಟದ ದಾಳಿಗೆ ಮೋದಿ ಟೀಮ್ ತತ್ತರಿಸಿ ಹೋಗಿತ್ತು. ದೇವೇಗೌಡ-ಯಡಿಯೂರಪ್ಪ ಅವರನ್ನು ಆಪದ್ಬಾಂಧವರೆಂದೇ ಭಾವಿಸಿದ್ದರು. ಅವರಿಬ್ಬರನ್ನು ಅಪಾರವಾಗಿ ಅವಲಂಬಿಸಿದ್ದರು. ಜೆಡಿಎಸ್‌ನ ಡಾ. ಸಿ.ಎನ್. ಮಂಜುನಾಥ್ ಬಿಜೆಪಿ ಟಿಕೆಟ್ ಮೇಲೆ ಕಣಕ್ಕಿಳಿಯುತ್ತಾರೆ ಎಂಬ ಸೂತ್ರಕ್ಕೂ ತಲೆದೂಗಿದರು. ಹುಬ್ಬಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಅತ್ಯಂತ ಕಿರಿಯ ಅಭ್ಯರ್ಥಿ ವಿರುದ್ಧ ಹೀನಾಯವಾಗಿ ಸೋತಿದ್ದ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿಗೆ ಕರೆತಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಯಡಿಯೂರಪ್ಪ ಅವರ ಯೋಜನೆಯನ್ನು ಬಿಜೆಪಿ ಹೈಕಮಾಂಡ್ ಮರುಮಾತಿಲ್ಲದೆ ಒಪ್ಪಿಕೊಂಡಿತ್ತು. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಆ ಪಕ್ಷ ಸೇರಿ ಸ್ಪರ್ಧಿಸಿ ಸೋತು ಎಂಎಲ್‌ಸಿಯಾಗಿ ನೇಮಕಗೊಂಡಿದ್ದ ಜಗದೀಶ್ ಶೆಟ್ಟರ್ ಬಿಜೆಪಿಗೆ ಅನಿವಾರ್ಯವಾಗಿರಲಿಲ್ಲ. ಆದರೆ ಯಡಿಯೂರಪ್ಪ ಅವರು ಬಿ.ಎಲ್. ಸಂತೋಷ್‌ಗೆ ತಮ್ಮ ಭುಜಬಲದ ಪರಾಕ್ರಮ ತೋರಿಸಬೇಕಿತ್ತು. ಕಾಂಗ್ರೆಸ್ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡಿದ್ದ ಜಗದೀಶ್ ಶೆಟ್ಟರ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಯನ್ನು ಅಪ್ಪಿಕೊಂಡರು. ಅಷ್ಟು ಮಾತ್ರವಲ್ಲ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿ ಬೀಗಿದರು.
ಶೆಟ್ಟರ್ ಜೊತೆಗೆ ಕಾಂಗ್ರೆಸ್ ಸೇರಿದ ಲಕ್ಷ್ಮಣ ಸವದಿಯೂ ಬಿಜೆಪಿ ಸೇರಲು ಆಸೆ ಪಟ್ಟರು. ಅವರಿಗೆ ಆ ಭಾಗ್ಯ ದೊರೆಯಲಿಲ್ಲ. ಯಾಕೆಂದರೆ; ಸವದಿ ಬಿ.ಎಲ್. ಸಂತೋಷ್ ಅವರ ಖಾಸಾ ಶಿಷ್ಯ. ಯಡಿಯೂರಪ್ಪ-ವಿಜಯೇಂದ್ರ ಬಿಜೆಪಿಯಲ್ಲಿ ಸಕ್ರಿಯವಾಗಿರುವವರೆಗೂ ಕಾಂಗ್ರೆಸ್ ತತ್ವ ಸಿದ್ಧಾಂತ ಒಪ್ಪಿಕೊಂಡು ಆ ಪಕ್ಷದ ಟಿಕೆಟ್ ಮೇಲೆ ಸ್ಪರ್ಧಿಸಿ ಅಥಣಿ ಶಾಸಕರಾಗಿರುವ ಲಕ್ಷ್ಮಣ ಸವದಿಗೆ ಬಿಜೆಪಿ ಸೇರುವ ಅವಕಾಶ ಸಿಗುವುದಿಲ್ಲ. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿಗೆ ಅತ್ಯಂತ ಆತ್ಮೀಯವಾಗಿರುವ ಅಮಿತ್ ಶಾ ಸಂಪರ್ಕದಲ್ಲಿರುವ ಸಿ.ಪಿ. ಯೋಗೇಶ್ವರ್ ಅವರಿಗೆ ಚನ್ನಪಟ್ಟಣ ಟಿಕೆಟ್ ಸರಳವಾಗಿ ಸಿಗಬೇಕಿತ್ತು. ಆದರೆ ಯೋಗೇಶ್ವರ್‌ಗೆ ಟಿಕೆಟ್ ಸಿಗುವುದಿಲ್ಲ. ದೇವೇಗೌಡ-ಕುಮಾರಸ್ವಾಮಿ, ಯಡಿಯೂರಪ್ಪ-ವಿಜಯೇಂದ್ರ ಅಪ್ಪ-ಮಕ್ಕಳ ಜೋಡಿಗೆ ಬಿ.ಎಲ್. ಸಂತೋಷ್ ಶಿಷ್ಯನಿಗೆ ಟಿಕೆಟ್ ಕೊಡುವುದು ಸುತರಾಂ ಇಷ್ಟವಿಲ್ಲ. ಕುಮಾರಸ್ವಾಮಿ ತರ್ಕ; ಚನ್ನಪಟ್ಟಣದಲ್ಲಿ ಸತತ ಮೂರು ಅವಧಿಗೆ ಜೆಡಿಎಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಅದು ಅವರ ಕ್ಷೇತ್ರ. ಚನ್ನಪಟ್ಟಣವೊಂದನ್ನು ಬಿಟ್ಟುಕೊಟ್ಟರೆ ಹಳೆ ಮೈಸೂರು ಪ್ರಾಂತದಲ್ಲಿ ಆವರಿಸಿಕೊಳ್ಳಲು ಬಿ.ಎಲ್. ಸಂತೋಷ್‌ಗೆ ಅವಕಾಶ ಸಿಗುತ್ತದೆ. ಬಿಜೆಪಿ ಒಳಜಗಳ ದೇವೇಗೌಡ-ಕುಮಾರಸ್ವಾಮಿಯವರಿಗೆ ವರವಾಗಿ ಪರಿಣಮಿಸಿದೆ. ಕುಮಾರಸ್ವಾಮಿಯವರ ಬಿಗಿಪಟ್ಟು ಯಡಿಯೂರಪ್ಪ- ವಿಜಯೇಂದ್ರ ಜೋಡಿಗೆ ಶತ್ರು ಸಂಹಾರ ಮಾಡಲು ಅಸ್ತ್ರವಾಗಿ ಸಿಕ್ಕಿದೆ.
ರಾಜ್ಯ ಕಾಂಗ್ರೆಸ್ ನಾಯಕರು ನಿಜಕ್ಕೂ ಜಾಣರಾಗಿದ್ದರೆ ಪಕ್ಷಕ್ಕಾಗಿ ಹದಿನೈದು ಇಪ್ಪತ್ತು ವರ್ಷಗಳಿಂದ ದುಡಿಯುತ್ತಿರುವ ಕ್ರಿಯಾಶೀಲತೆಯೊಂದಿಗೆ ವಿಶ್ವಾಸಾರ್ಹತೆ ಉಳಿಸಿಕೊಂಡಿರುವ ನಿಷ್ಠಾವಂತ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳಬೇಕಿತ್ತು. ಡಿ.ಕೆ. ಸುರೇಶ್ ಅವರಿಗೆ ಟಿಕೆಟ್ ನೀಡಿದ್ದರೂ ಪಕ್ಷಕ್ಕೆ ಒಳ್ಳೆಯದಾಗುತ್ತಿತ್ತು. ನಿನ್ನೆ ಮೊನ್ನೆಯವರೆಗೂ ಅಮಿತ್ ಶಾ, ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿಯವರ ಸೂಚನೆಯಂತೆ ಕಾರ್ಯನಿರ್ವಹಿಸುತ್ತಿದ್ದ ಸಿ.ಪಿ. ಯೋಗೇಶ್ವರ್ ವಿರುದ್ಧ ಚನ್ನಪಟ್ಟಣದ ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ಮಾಡಿರುತ್ತಾರೆ. ಅವರ ಮೆಗಾ ಸಿಟಿ ಅಕ್ರಮಗಳ ವಿರುದ್ಧ ಪತ್ರಿಕೆ ಹೇಳಿಕೆ ಕೊಟ್ಟಿರುತ್ತಾರೆ. ಕೆರಗೋಡು ಹನುಮಧ್ವಜ ವಿವಾದದ ಸಂದರ್ಭದ ಕೋಮು ವೇಷಧಾರಿಯಾಗಿರುವ ಯೋಗೇಶ್ವರ್ ವಿರುದ್ಧ ಧಿಕ್ಕಾರ ಕೂಗಿರುತ್ತಾರೆ. ಹಲಾಲ್ ಕಟ್, ಜಟಕಾ ಕಟ್, ಹಿಜಾಬ್, ಟಿಪ್ಪು ವಿರೋಧಿ ಹೋರಾಟದಲ್ಲಿ ಯೋಗೀಶ್ವರ್ ಪಾತ್ರಧಾರಿಯಾಗಿದ್ದರು. ಉರಿಗೌಡ, ನಂಜೇಗೌಡರಿಗೆ ಬಣ್ಣ ಹಚ್ಚಿ ಕೋಮು ಅಖಾಡಕ್ಕೆ ಅವರೇ ಇಳಿಸಿರುತ್ತಾರೆ. ಅದರ ವಿರುದ್ಧ ಸೈದ್ಧಾಂತಿಕ ಹೋರಾಟದಲ್ಲಿ ಪಾಲ್ಗೊಂಡ ಕಾಂಗ್ರೆಸ್ ಕಾರ್ಯಕರ್ತರಿಗೆ ಯೋಗೇಶ್ವರ್ ಪರ ಮತಯಾಚನೆ ಮಾಡಲು ಆತ್ಮಸಾಕ್ಷಿ ಒಪ್ಪುತ್ತದೆಯೇ? ಬಿಜೆಪಿ ಟಿಕೆಟ್ ನಿರಾಕರಿಸಿದೆ; ಮೈತ್ರಿ ಧರ್ಮ ಪಾಲನೆಯ ನೆಪವೊಡ್ಡಿ. ಅದಕ್ಕೆ ಸಿ.ಪಿ. ಯೋಗೇಶ್ವರ್ ‘ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ಒಪ್ಪಿಕೊಂಡು’ ಪಕ್ಷಾಂತರ ಮಾಡಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ಸಾಧಿಸಿದರೆ; ಮುಂದಿನ ಮೂರುವರೆ ವರ್ಷ ಕಾಂಗ್ರೆಸ್ ಪಕ್ಷದಲ್ಲೇ ಮುಂದುವರಿಯುತ್ತಾರೆ. ಸೋತರೆ ಮತ್ತೆ ಬಿಜೆಪಿ ಸೇರಿಕೊಳ್ಳುವುದಿಲ್ಲ ಎಂಬ ಗ್ಯಾರಂಟಿ ಯಾರು ಕೊಡುತ್ತಾರೆ? ಮೊದಲೇ ಯೋಗೇಶ್ವರ್ ಅವರನ್ನು ‘ಜಂಪಿಂಗ್ ಸ್ಟಾರ್’ ಎಂದು ಕರೆಯುತ್ತಾರೆ. ಸದ್ಯ ಮೋದಿ-ಅಮಿತ್ ಶಾ ಜೊತೆಗೆ ದೇವೇಗೌಡ, ಯಡಿಯೂರಪ್ಪ ಉತ್ತಮ ಸಂಬಂಧ ಹೊಂದಿದ್ದಾರೆ. ರಾಜಕೀಯ ಸಮೀಕರಣ ಬದಲಾಗಿ ಬಿ.ಎಲ್. ಸಂತೋಷ್ ಮುನ್ನೆಲೆಗೆ ಬಂದರೆ ಯೋಗೇಶ್ವರ್ ನಿಯತ್ತು ಖಂಡಿತ ಬದಲಾಗುತ್ತದೆ. ಜನಸಂಘ ಕಾಲದಿಂದ ಆರೆಸ್ಸೆಸ್ ತತ್ವ ಸಿದ್ಧಾಂತಗಳನ್ನು ಉಸಿರಾಗಿಸಿಕೊಂಡಿದ್ದ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನೂ ನೀಡಿತ್ತು. ಅವರಿಗೆ ಸಿಕ್ಕಷ್ಟು ಅವಕಾಶ ಆ ಪಕ್ಷದಲ್ಲಿ ಬೇರೆ ಯಾರಿಗೂ ಸಿಕ್ಕಿರಲಿಲ್ಲ. ಟಿಕೆಟ್ ತಪ್ಪಿತು ಎಂಬ ಒಂದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಆ ಪಕ್ಷಕ್ಕೆ ಸೇರಿದರು. ಬಿಜೆಪಿಗೆ ಹೋದರೆ ಮಂತ್ರಿಯಾಗಬಹುದೆಂದು ಬಟ್ಟೆ ಬದಲಾಯಿಸಿದಷ್ಟೇ ಸರಳವಾಗಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ತೊರೆದು ಮರಳಿ ಗೂಡಿಗೆ ಸೇರಿದರು.
ಜಂಪಿಂಗ್ ಸ್ಟಾರ್ ಯೋಗೇಶ್ವರ್ ಅವರಿಗೆ ಯಾವ ತತ್ವ ಸಿದ್ಧಾಂತವೂ ಇಲ್ಲ. ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಳ್ಳುವುದು ಅಷ್ಟು ಸರಳ ಸಂಗತಿಯಲ್ಲ. ಅವರಿಗೆ ಮೆಗಾಸಿಟಿಯ ಅಕ್ರಮಗಳ ಕಳಂಕ ತೊಳೆದುಕೊಳ್ಳಲು ಸಾಧ್ಯವಾಗಿಲ್ಲ.
ಬಿಜೆಪಿ-ಜೆಡಿಎಸ್ ಮೈತ್ರಿ ಗಟ್ಟಿಗೊಳಿಸಿಕೊಳ್ಳಲೆಂದೇ ದೇವೇಗೌಡ- ಯಡಿಯೂರಪ್ಪ ಸಿ.ಪಿ. ಯೋಗೇಶ್ವರ್‌ಗೆ ಟಿಕೆಟ್ ನಿರಾಕರಿಸಿದ್ದಾರೆ. ಕೇಂದ್ರದಲ್ಲಿ ಪ್ರಭಾವಿ ಖಾತೆಯ ಮಂತ್ರಿ ಆಗಿರುವ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣ ಒಂದರ ಟಿಕೆಟ್‌ಗಾಗಿ ಮೈತ್ರಿ ಕಡಿದುಕೊಳ್ಳುವಷ್ಟು ಮೂರ್ಖರಲ್ಲ. ಯೋಗೇಶ್ವರ್ ಅವರನ್ನು ಬಿಜೆಪಿಯಿಂದ ಹೊರಹಾಕಬೇಕಿತ್ತು. ಅದಕ್ಕೆ ಟಿಕೆಟ್ ತಪ್ಪಿಸಿ ಹೊರಗೆ ಹಾಕಿದ್ದಾರೆ. ಭಾರತೀಯ ಜನತಾ ಪಕ್ಷ ಆಳದಲ್ಲಿ ಅತ್ಯಂತ ಕೋಮುವಾದಿ ಪಕ್ಷ. ಆದರೆ ಅವಕಾಶಕ್ಕಾಗಿ ನಿತೀಶ್ ಕುಮಾರ್, ದೇವೇಗೌಡ ಅವರನ್ನು ಅಪ್ಪಿಕೊಳ್ಳಲು ಹಿಂದೇಟು ಹಾಕುವುದಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಆರೆಸ್ಸೆಸ್ ಮೂಲದ ರಾಜಕಾರಣಿ. ಅವರು ಡಿಎಂಕೆ ಮತ್ತು ಫಾರೂಕ್ ಅಬ್ದುಲ್ಲಾ ಅವರ ಪಕ್ಷದೊಂದಿಗೂ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದರು. ಚಂದ್ರಬಾಬು ನಾಯ್ಡು ಅದೆಷ್ಟು ಬಾರಿ ಬಿಜೆಪಿ ಮತ್ತು ಮೋದಿಯವರನ್ನು ಸೈದ್ಧಾಂತಿಕ ನೆಲೆಯಲ್ಲಿ ಟೀಕಿಸಿಲ್ಲ? ಎಚ್.ಡಿ. ದೇವೇಗೌಡರಂತೂ ಮೋದಿ ಪ್ರಧಾನಿಯಾದರೆ...ಏನೇನೋ ಹೇಳಿದ್ದರು. ದುರಂತ ನೋಡಿ; ಈಗ ಅವರ ಮಗ ಮೋದಿ ಮತ್ತು ಸಂಘ ಪರಿವಾರದ ಗುಣಗಾನ ಮಾಡುತ್ತಾರೆ. ಪ್ರಹ್ಲಾದ್ ಜೋಶಿಯವರ ಜೊತೆಗೆ ಸಂಪುಟದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಂಗ್ರೆಸ್‌ನ ಎಂಎಲ್‌ಸಿಗಿರಿ ತೊರೆದು ಬಿಜೆಪಿಯನ್ನು ಸೇರಿ ಜಿದ್ದಿನಿಂದ ಸಂಸದರಾದ ಜಗದೀಶ್ ಶೆಟ್ಟರ್, ವಿ. ಸೋಮಣ್ಣ ಮಂತ್ರಿಯಾಗಿದ್ದು ನೋಡಿ ಒಳಗೊಳಗೇ ಕುದಿಯುತ್ತಿರುತ್ತಾರೆ.
ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ, ವಿಜಯೇಂದ್ರ ಮಹಾನ್ ಅವಕಾಶವಾದಿ ರಾಜಕಾರಣಿಗಳು ಎನ್ನುವುದು ಜಗಜ್ಜಾಹೀರಾಗಿದೆ. ಯಡಿಯೂರಪ್ಪ-ದೇವೇಗೌಡ ಹಾವು ಮುಂಗುಸಿಯಂತಿದ್ದವರು ಈಗ ಒಟ್ಟಾಗಿ ಮೈತ್ರಿಧರ್ಮ ಪಾಲನೆ ಮಾಡುತ್ತಿದ್ದಾರೆ. ಭಂಡತನಕ್ಕೆ ಹೆಸರಾದವರನ್ನು ಪಕ್ಕಕ್ಕಿಡಿ; ಸಮಯ ಸಾಧಕ ಶೆಟ್ಟರ್ ಕಾಂಗ್ರೆಸ್ ತೊರೆದು ಹೋದ ಮೇಲಾದರೂ ಆ ಪಕ್ಷದ ಹಿರಿಯ ನಾಯಕರು ತತ್ವ ಸಿದ್ಧಾಂತದ ರಾಜಕಾರಣ ಮಾಡಬೇಕಾಗಿತ್ತು. ಸಿ.ಪಿ. ಯೋಗೇಶ್ವರ್ ಕಳಂಕಿತ ಮಾತ್ರವಲ್ಲ ಒಂದಷ್ಟು ಕಾಲ ಕೋಮುವಾದಿ ರಾಜಕಾರಣದ ತಿಪ್ಪೆಗುಂಡಿಯಲ್ಲಿ ಬಿದ್ದು ಹೊರಳಾಡಿದವರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಿ ಹೊರಗಿನವರಿಗೆ ಮನೆ ಹಾಕುವುದನ್ನು ಕಾಂಗ್ರೆಸ್ ಪಕ್ಷ ಈಗಲಾದರೂ ನಿಲ್ಲಿಸಬೇಕು. ಯೋಗೇಶ್ವರ್ ಅವರ ಪರ ಮತ ಕೇಳುವುದು ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಮುಜುಗರವಾಗುತ್ತದೆ. ಕಾಂಗ್ರೆಸ್ ಪಕ್ಷವನ್ನು ತತ್ವ ಸಿದ್ಧಾಂತಗಳ ಆಧಾರದಲ್ಲಿ ಮರುರೂಪಿಸುವ ಇರಾದೆ ಇದ್ದರೆ ನಿಷ್ಠಾವಂತರಿಗೆ ಟಿಕೆಟ್ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಅವಕಾಶವಾದಿ ರಾಜಕಾರಣ ಕೊನೆಗೊಳ್ಳಬೇಕು.