ತಾರಕಕ್ಕೇರಿದ ಬಿಜೆಪಿ ಒಳಜಗಳ
ಸದ್ಯ ಬಿಜೆಪಿಯ ಒಳಜಗಳ ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ಶಿಸ್ತಿನ ಪಕ್ಷದಲ್ಲಿ ಈ ಪರಿ ಆಶಿಸ್ತು ಇರುವುದು ಯಾರೂ ಊಹಿಸಿರಲಿಲ್ಲ. ಬಿಜೆಪಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವುದು ಎಂದೋ ನಿಲ್ಲಿಸಿದೆ. ಸಿದ್ದರಾಮಯ್ಯ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳದಿದ್ದರೆ, ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಅವಕಾಶ ಇದೆ. ಒಳಜಗಳ, ಭಿನ್ನಮತ, ಕಿತ್ತಾಟವನ್ನು ಕರ್ನಾಟಕದ ಜನ ಯಾವತ್ತೂ ಸಹಿಸಲ್ಲ. ಬಿಜೆಪಿ ತನ್ನ ಗೋರಿ ತಾನೇ ತೋಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯವಾಗಿದೆ.
ಕರ್ನಾಟಕದ ಮತದಾರ ಏನು ಬೇಕಾದರೂ ಸಹಿಸಿಕೊಳ್ಳಬಲ್ಲ. ಆದರೆ ಪಕ್ಷಗಳ ಒಳಜಗಳವನ್ನು ಸಹಿಸಿಕೊಳ್ಳುವುದಿಲ್ಲ ಮತ್ತು ಕ್ಷಮಿಸುವುದಿಲ್ಲ. ಒಂದು ಪಕ್ಷವಾಗಿ ಒಗ್ಗಟ್ಟು ಪ್ರದರ್ಶಿಸದವರು ಮುಂದೆ ಆಡಳಿತದ ಚುಕ್ಕಾಣಿ ಹಿಡಿದಾಗ ಅತ್ಯುತ್ತಮ ಸರಕಾರ ನೀಡುತ್ತಾರೆಂದು ನಂಬುವುದಾದರೂ ಹೇಗೆ? ಕರ್ನಾಟಕದಲ್ಲಿ ಕಾಂಗ್ರೆಸ್, ಜನತಾಪಕ್ಷ, ಜನತಾದಳ, ಭಾರತೀಯ ಜನತಾಪಕ್ಷಗಳು ಬಹುದೊಡ್ಡ ಸಮಾವೇಶಗಳಲ್ಲಿ ಜನರೆದುರು ಕೈ ಕೈ ಹಿಡಿದು ಒಗ್ಗಟ್ಟು ಪ್ರದರ್ಶಿಸಿ, ಚುನಾವಣಾ ಫಲಿತಾಂಶ ಹೊರ ಬೀಳುವವರೆಗೂ ಒಗ್ಗಟ್ಟಿನಿಂದ ಇದ್ದಾಗಲಷ್ಟೇ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಾಗಿದೆ.
ಪಕ್ಷದ ಮುಖಂಡರು ಪರಸ್ಪರ ಕಾಲು ಎಳೆಯುತ್ತ, ಹಾದಿಬೀದಿಯಲ್ಲಿ ಜಗಳ ಆಡುತ್ತ ಇದ್ದಾಗ ಅಂಥ ಪಕ್ಷ ಮತ್ತು ಮುಖಂಡರನ್ನು ಜನತೆಯೇ ತಕ್ಕ ಪಾಠ ಕಲಿಸಿದ ಹತ್ತಾರು ನಿದರ್ಶನಗಳಿವೆ. ಹಾಗೆ ನೋಡಿದರೆ ಕಾಂಗ್ರೆಸ್, ಹೈಕಮಾಂಡ್ ಹಿಡಿತದಲ್ಲಿರುವ ಪಕ್ಷ. ಅಲ್ಲಿ ಸಾಮಾನ್ಯವಾಗಿ ಬೀದಿರಂಪ, ಒಳಜಗಳಕ್ಕೆ ಹೆಚ್ಚು ಅವಕಾಶ ಇರುವುದಿಲ್ಲ. ಅಷ್ಟಕ್ಕೂ ಕಾಂಗ್ರೆಸ್ ಕೇಂದ್ರ ನಾಯಕತ್ವ ಸ್ಥಳೀಯ ಪ್ರಬಲ ಜನನಾಯಕರನ್ನು ವಿಶ್ವಾಸದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತ ಬಂದಿದೆ. ದಿ. ದೇವರಾಜ ಅರಸು ಅವರು ಎಪ್ಪತ್ತರ ದಶಕದ ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಅತ್ಯಂತ ಪ್ರಭಾವಿ ಜನನಾಯಕರು. ಅಷ್ಟೇ ಅಲ್ಲ, ಅಂದಿನ ಹೈಕಮಾಂಡ್‌ನ ಸಂಪೂರ್ಣ ವಿಶ್ವಾಸಕ್ಕೆ ಪಾತ್ರರಾದ ರಾಜಕಾರಣಿಯೂ ಹೌದು. 1972 ಮತ್ತು 1978ರ ವಿಧಾನಸಭಾ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಯಾರಿಗೆ ಮಂತ್ರಿಗಿರಿ ಕೊಡಬೇಕು ಎನ್ನುವುದನ್ನು ದೇವರಾಜ ಅರಸು ಅವರೇ ನಿರ್ಧರಿಸುತ್ತಿದ್ದರು. ಅವರ ಎಲ್ಲ ನಿರ್ಧಾರಗಳಿಗೆ ಅಂದಿನ ಕಾಂಗ್ರೆಸ್ ಹೈಕಮಾಂಡ್ ದಿ. ಶ್ರೀಮತಿ ಇಂದಿರಾಗಾಂಧೀಯವರು ಮರು ಮಾತಿಲ್ಲದೆ ಬೆಂಬಲಿಸುತ್ತಿದ್ದರು. ಹೈಕಮಾಂಡ್ ಬಲದ ಮೇಲೆಯೇ ದೇವರಾಜ ಅರಸು ಅವರು ಎಲ್ಲ ಬಗೆಯ ಆಂತರಿಕ ಭಿನ್ನಮತವನ್ನು ಬಹಿರಂಗ ಅಪಸ್ವರಕ್ಕೆ ಅವಕಾಶ ಮಾಡಿಕೊಡದಂತೆ ನಿಭಾಯಿಸುತ್ತಿದ್ದರು. ಯಾವಾಗ ದಿ. ದೇವರಾಜ ಅರಸು ಅವರ ಮೇಲೆ ಹೈಕಮಾಂಡ್ ವಿಶ್ವಾಸ ಕಳೆದುಕೊಂಡಿತೋ ಆಗ ಚಾಡಿಕೋರರ ಕೈ ಮೇಲಾಯಿತು.ಅರಸು ಅವರು ಕಾಂಗ್ರೆಸ್ ಬಿಟ್ಟು ಬೇರೆ ಪಕ್ಷ ಕಟ್ಟಬೇಕಾಯಿತು. ದಿ. ಆರ್. ಗುಂಡೂರಾವ್ ಜನನಾಯಕ ಆಗಿರಲಿಲ್ಲ. ಹೈಕಮಾಂಡ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿಯಾದರು. ಅಂದಿನಿಂದ ಕಾಂಗ್ರೆಸ್ ಒಡೆದ ಮನೆಯಾಯಿತು ಮತ್ತು ಅದರ ಅವಸಾನ ಶುರು ಆಯಿತು.ಒಂದು ವೇಳೆ ದೇವರಾಜ ಅರಸು ಅವರು ಕಾಂಗ್ರೆಸ್ ಪಕ್ಷದ ಜೊತೆಗೆ ಇದ್ದು 1983ರ ಕರ್ನಾಟಕ ವಿಧಾನಸಭಾ ಚುನಾವಣೆಯನ್ನು ಎದುರಿಸಿದ್ದರೆ ಆ ಪಕ್ಷದ ಸರಕಾರವೇ ಆಡಳಿತ ನಡೆಸುವಂತಾಗುತ್ತಿತ್ತು. ಸ್ಥಳೀಯ ಪ್ರಬಲ ನಾಯಕನನ್ನು ದುರ್ಬಲಗೊಳಿಸಿ ಹೈಕಮಾಂಡ್ ಏನೇ ತಂತ್ರಗಾರಿಕೆ ರೂಪಿಸಿದರೂ ಯಶಸ್ವಿಯಾಗುವುದಿಲ್ಲ ಎನ್ನುವುದಕ್ಕೆ ದೇವರಾಜ ಅರಸು ಅವರದು ಬಹುದೊಡ್ಡ ನಿದರ್ಶನ.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪರ್ಯಾಯವಾಗಿ ಅಧಿಕಾರಕ್ಕೆ ಬಂದ ಜನತಾ ಪಕ್ಷದ ಸರಕಾರ 1983ರಿಂದ 1985ರವರೆಗೆ ಅತ್ಯುತ್ತಮ ಆಡಳಿತ ನೀಡಿತ್ತು. ಒಳಜಗಳವೂ ಇರಲಿಲ್ಲ. ಹಾಗಾಗಿ 1985ರ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜನತಾಪಕ್ಷಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದರು. ದಿ. ರಾಮಕೃಷ್ಣ ಹೆಗಡೆಯವರ ನಾಯಕತ್ವ ಅಪಾರ ಜನ ಪ್ರೀತಿ ಗಳಿಸಿತ್ತು. ಜನತಾ ಪಕ್ಷದ ಎಲ್ಲಾ ನಾಯಕರು ಪರಸ್ಪರ ಕಾಲು ಎಳೆಯುವ ಪ್ರವೃತ್ತಿ ಬಿಟ್ಟು ಒಗ್ಗಟ್ಟಿನಿಂದ ಇದ್ದಿದ್ದರೆ 1989ರ ವಿಧಾನಸಭಾ ಚುನಾವಣೆಯಲ್ಲೂ ಅವರೇ ಜನತೆಯ ಪ್ರೀತಿಗೆ ಪಾತ್ರರಾಗುತ್ತಿದ್ದರು. ಮುಖ್ಯವಾಗಿ ರಾಮಕೃಷ್ಣ ಹೆಗಡೆ ಮತ್ತು ಎಚ್. ಡಿ. ದೇವೇಗೌಡರ ನಡುವಿನ ಜಗಳ ಜನತಾ ಪರಿವಾರವನ್ನು ಇಬ್ಭಾಗ ಮಾಡಿತು. ದೇವೇಗೌಡರು ಬೇರೆ ಪಕ್ಷ ಕಟ್ಟಿಕೊಂಡು 1989ರ ಚುನಾವಣೆ ಎದುರಿಸಿದ್ದರಿಂದ ಹೀನಾಯವಾಗಿ ಮುಗ್ಗರಿಸಿದರು. ರಾಮಕೃಷ್ಣ ಹೆಗಡೆಯವರ ಜನತಾ ಪರಿವಾರದ ಸಂಖ್ಯಾ ಬಲ ಗಣನೀಯವಾಗಿ ಕುಸಿಯಿತು. ಆಗ ದಿ. ವೀರೇಂದ್ರ ಪಾಟೀಲ್ ನೇತೃತ್ವದ ಕಾಂಗ್ರೆಸ್ ಪಕ್ಷ ಒಗ್ಗಟ್ಟು ಪ್ರದರ್ಶಿಸಿದ್ದರಿಂದ ಮತದಾರರು 178 ಶಾಸಕರನ್ನು ಗೆಲ್ಲಿಸಿಕೊಟ್ಟರು. ಹಾಗೆ ನೋಡಿದರೆ ಆ ಒಗ್ಗಟ್ಟು ಹೈಕಮಾಂಡ್ ಭಯದ ಕಾರಣಕ್ಕೆ ಮೂಡಿತ್ತು. ಬಂಗಾರಪ್ಪ, ಎಸ್.ಎಂ. ಕೃಷ್ಣ, ವೀರಪ್ಪ ಮೊಯ್ಲಿ, ಕಾಗೋಡು ತಿಮ್ಮಪ್ಪ ಮತ್ತು ಆಗಿನ ಕೆಪಿಸಿಸಿ ಅಧ್ಯಕ್ಷರಾಗಿದ್ದ ವೀರೇಂದ್ರ ಪಾಟೀಲ್‌ರ ನಡುವೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದವು. ಆದರೆ ಹೈಕಮಾಂಡ್ ಒಗ್ಗಟ್ಟಿನ ಮಂತ್ರ ಹೇಳಿಕೊಟ್ಟಿತ್ತು. ಅಧಿಕಾರ ಹಿಡಿದ ಕೂಡಲೇ ಒಳಜಗಳ ಬಯಲಿಗೆ ಬಂತು. ಎಲ್ಲರೂ ಅವಕಾಶಕ್ಕಾಗಿ ಕಾಯುತ್ತಿದ್ದರು. ನೋಡನೋಡುತ್ತಿದ್ದಂತೆ ವೀರೇಂದ್ರ ಪಾಟೀಲ್‌ರ ಜಾಗಕ್ಕೆ ಎಸ್. ಬಂಗಾರಪ್ಪ ಬಂದರು. ಅವರನ್ನು ವಿರೋಧಿಸುವ ಗುಂಪು ಕಾಂಗ್ರೆಸ್ ಹೈಕಮಾಂಡ್ ಮೊರೆ ಹೋಗಿ ವೀರಪ್ಪ ಮೊಯ್ಲಿ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದ್ದರು. ಭಿನ್ನಮತ ಮತ್ತಷ್ಟು ವಿಕೋಪಕ್ಕೆ ಹೋಗಬಾರದೆಂದು ಎಸ್.ಎಂ. ಕೃಷ್ಣ ಅವರನ್ನು ಉಪ ಮುಖ್ಯಮಂತ್ರಿ ಮಾಡಿದರು. ಅಲ್ಲಿಯವರೆಗೆ ಕರ್ನಾಟಕದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಯನ್ನು ಯಾರಿಗೂ ನೀಡಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಒಳಜಗಳದಿಂದ ತತ್ತರಿಸಿ ಹೋಗಿತ್ತು. ಅನಾಯಕತ್ವ ಸೃಷ್ಟಿಯಾಯಿತು. ಬಂಗಾರಪ್ಪ ಬೇರೊಂದು ಪಕ್ಷ ಕಟ್ಟಿಕೊಂಡು ಚುನಾವಣೆ ಎದುರಿಸಿದರು. ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ 1994ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದ ಸಂಖ್ಯಾ ಬಲ 178ರಿಂದ 34ಕ್ಕೆ ಕುಸಿಯಿತು. ಜನತಾ ಪಕ್ಷ ಹೊಸರೂಪ ತಾಳಿ ಜನತಾ ದಳ ಆಯಿತು. ರಾಮಕೃಷ್ಣ ಹೆಗಡೆ, ದೇವೇಗೌಡ ಮುಂತಾದ ಜನತಾ ಪರಿವಾರದ ಎಲ್ಲಾ ನಾಯಕರು ಭಿನ್ನಮತ ಮರೆತು ಒಂದಾದರು. ಜಗಳ ಮಾಡಿಕೊಂಡಿದ್ದಕ್ಕೆ ಮತದಾರರಿಗೆ ಕ್ಷಮೆ ಕೇಳಿದರು. ಪರಸ್ಪರ ಕೈ ಕೈ ಹಿಡಿದು ಜನರೆದುರು ಕೈ ಮೇಲೆತ್ತಿ ನಾವೆಲ್ಲಾ ಒಂದು ಎನ್ನುವುದು ದೃಢಪಡಿಸಿದರು. ಜನತಾ ಪರಿವಾರದವರ ತೋರಿಕೆಯ ಒಗ್ಗಟ್ಟಿನ ಪ್ರದರ್ಶನವನ್ನು ನಂಬಿದರು. 1994ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ದಳ ಅಧಿಕಾರ ಹಿಡಿಯುವಂತಾಯಿತು. ಸರಕಾರ ರಚಿಸುವಷ್ಟು ಸರಳ ಬಹುಮತ ದೊರೆಯುತ್ತಲೇ ಜನತಾ ಪರಿವಾರದ ನಾಯಕರು ಹಳೆ ಚಾಳಿಯನ್ನು ಪರಸ್ಪರ ಚಪ್ಪಲಿ ಎಸೆತ ಮಾಡಿಕೊಳ್ಳುವ ಮೂಲಕ ತೋರಿಸಿಕೊಟ್ಟರು. ಐದು ವರ್ಷ ಪೂರೈಸುವಷ್ಟರಲ್ಲಿ ಜನತಾದಳ ಮುರಾಬಟ್ಟೆಯಾಯಿತು. ಒಗ್ಗಟ್ಟು ಪ್ರದರ್ಶಿಸಿದ ಕಾರಣಕ್ಕೆ 1996ರ ಲೋಕಸಭಾ ಚುನಾವಣೆಯಲ್ಲಿ ಜನತಾದಳ ಮೊದಲ ಬಾರಿಗೆ ಐತಿಹಾಸಿಕ ಗೆಲುವು ಸಾಧಿಸಿತ್ತು. ಜನತಾದಳದಿಂದ 16 ಜನ ಸಂಸದರು ಲೋಕಸಭೆಗೆ ಆಯ್ಕೆಯಾಗಿದ್ದರು. ಎಚ್.ಡಿ. ದೇವೇಗೌಡರು ಆಕಸ್ಮಿಕವಾಗಿ ಈ ದೇಶದ ಪ್ರಧಾನ ಮಂತ್ರಿಯೂ ಆದರು. ದೊಡ್ಡ ಹುದ್ದೆ ಸಿಕ್ಕ ಮೇಲೆ ಜನತಾ ದಳ ಮತ್ತಷ್ಟು ಒಗ್ಗಟ್ಟಿನಿಂದ ಇರಬೇಕಿತ್ತು. ಮತ್ತೆ ಹೆಗಡೆ, ದೇವೇಗೌಡರ ಬಣಗಳು ಕಿತ್ತಾಡಿಕೊಂಡು ಎರಡು ಪಕ್ಷಗಳಲ್ಲಿ ಹಂಚಿ ಹೋದರು. ಆಷ್ಟೊತ್ತಿಗೆ ರಾಮಕೃಷ್ಣ ಹೆಗಡೆಯವರು ತೀರಿ ಹೋಗಿದ್ದರಿಂದ ಅವರ ಬಹುಪಾಲು ಅನುಯಾಯಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಗೂಡು ಸೇರಿಕೊಂಡರು. ಜನತಾ ಪರಿವಾರದ ಅವಸಾನ ಬಿಜೆಪಿ ಪ್ರವರ್ಧಮಾನಕ್ಕೆ ಬರಲು ಅವಕಾಶ ಮಾಡಿಕೊಟ್ಟಿತು.
ಹಾಗಾಗಿಯೇ 2004ರ ವಿಧಾನ ಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರ ಮೊದಲ ಬಾರಿಗೆ ಬಿಜೆಪಿಗೆ 79 ಶಾಸಕರ ಬಲ ನೀಡಿದರು. ಇಷ್ಟಾಗಿಯೂ ಬಿಜೆಪಿಗೆ ಭವಿಷ್ಯ ಇದೆಯೆಂದು ಯಾರಿಗೂ ಅನಿಸಿರಲಿಲ್ಲ. ಬಹುದೊಡ್ಡ ತತ್ವ ಆದರ್ಶಗಳಲ್ಲಿ ನಂಬಿಕೆ ಇಟ್ಟವರಂತೆ ಕಾಂಗ್ರೆಸ್ ಮತ್ತು ಜೆಡಿಎಸ್‌ನವರು ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ಹೊರಗಿಡಲು ಒಂದಾದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂತು. ಕಾಂಗ್ರೆಸ್‌ನ ಧರಂಸಿಂಗ್ ಮುಖ್ಯಮಂತ್ರಿ, ಜೆಡಿಎಸ್‌ನ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರು. ನಿಜವಾಗಿಯೂ ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದವರು ಒಗ್ಗಟ್ಟು ಪ್ರದರ್ಶಿಸುತ್ತಿದ್ದರು. ದೇವೇಗೌಡರ ಪುತ್ರ ಕುಮಾರಸ್ವಾಮಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇಪ್ಪತ್ತು ತಿಂಗಳು ಪೂರೈಸುತ್ತಲೇ ಬಿಜೆಪಿಯತ್ತ ವಾಲಿದರು. ಬಿಜೆಪಿಯೊಂದಿಗೆ ಪಕ್ಷದ ಸೈದ್ಧಾಂತಿಕ ಗಡಿಗೆರೆ ಮೀರಿ ಕೂಡಿಕೆ ಮಾಡಿಕೊಂಡರು. ಅದು ಕೂಡ ಕೊನೆ ಮುಟ್ಟಲಿಲ್ಲ. ಇಪ್ಪತ್ತು ತಿಂಗಳಲ್ಲಿ ಮೈತ್ರಿ ಹಳಸಿತು. ಕುಮಾರಸ್ವಾಮಿ ಸರಕಾರದಲ್ಲಿ ಉಪಮುಖ್ಯಮಂತ್ರಿ ಮತ್ತು ಹಣಕಾಸು ಖಾತೆ ಹೊಂದಿದ್ದ ಯಡಿಯೂರಪ್ಪ ಅವರಿಗೆ ಒಪ್ಪಂದದಂತೆ ಮುಂದಿನ ಇಪ್ಪತ್ತು ತಿಂಗಳಿಗೆ ಜೆಡಿಎಸ್ ಮುಖ್ಯಮಂತ್ರಿ ಹುದ್ದೆ ಬಿಟ್ಟು ಕೊಡಲಿಲ್ಲ. ಸೈದ್ಧಾಂತಿಕ ಮೈತ್ರಿ, ಸಿದ್ಧಾಂತ ಮೀರಿದ ಮೈತ್ರಿ ಯಾವುದೂ ಬಾಳಿಕೆ ಬರಲಿಲ್ಲ. ಪರಸ್ಪರ ಕಾಲು ಎಳೆಯುವುದು, ಜಗಳ ಮೇಲುಗೈ ಸಾಧಿಸಿದವು. ಆ ಅವಧಿಯ ಸರಕಾರ ಐದು ವರ್ಷ ಪೂರೈಸಲಿಲ್ಲ.
2008ರಲ್ಲಿ ಕರ್ನಾಟಕ ಮತ್ತೆ ವಿಧಾನಸಭಾ ಚುನಾವಣೆ ಎದುರಿಸಬೇಕಾಯಿತು. ಯಡಿಯೂರಪ್ಪ; ಜೆಡಿಎಸ್‌ನವರು ಕೊಟ್ಟ ಮಾತಿಗೆ ತಪ್ಪಿದರು ಎಂದು ಮತ್ತು ತಾನೊಬ್ಬ ಬಲಿಪಶು ಅಂತ ಬಿಂಬಿಸಿಕೊಂಡು ಮೊದಲ ಬಾರಿಗೆ ಲಿಂಗಾಯತ ಸಮುದಾಯದ ಮತ ಪಡೆಯುವಲ್ಲಿ ಯಶಸ್ಸು ಪಡೆದರು.
ಹಾಗೆ ನೋಡಿದರೆ 2008ರ ಚುನಾವಣೆಯಲ್ಲಿ ಬಿಜೆಪಿಗಿಂತಲೂ ಕಾಂಗ್ರೆಸ್ ಪಕ್ಷಕ್ಕೇ ಹೆಚ್ಚು ಅವಕಾಶಗಳಿದ್ದವು. ಮಲ್ಲಿಕಾರ್ಜುನ ಖರ್ಗೆಯವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಆಗ ತಾನೆ ಜೆಡಿಎಸ್ ತೊರೆದು ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸೇರಿಕೊಂಡಿದ್ದರು. ಆದರೆ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಯಾವ ಹುದ್ದೆಯೂ ನೀಡಿರಲಿಲ್ಲ. ಎಸ್.ಎಂ. ಕೃಷ್ಣ ಅವರು ಸಕ್ರಿಯ ರಾಜಕಾರಣದಲ್ಲಿ ಆಸಕ್ತರಾಗಿದ್ದರು. ಕಾಂಗ್ರೆಸ್‌ನ ಎಲ್ಲಾ ಮುಖಂಡರು ಆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಅಧಿಕಾರ ಹಿಡಿಯುತ್ತಿದ್ದರು. ಖರ್ಗೆಯವರಿಗೆ ಸರಳ ಬಹುಮತಗಿಂತಲೂ ಜೆಡಿಎಸ್ ಜೊತೆಗೆ ಸೇರಿ ಮೈತ್ರಿ ಸರಕಾರ ಮಾಡಬೇಕೆಂಬ ಇರಾದೆ ಇತ್ತೇನೋ? ಕಾಂಗ್ರೆಸ್ ಶಾಸಕರ ಸಂಖ್ಯೆ ಎಂಭತ್ತಕ್ಕೆ ನಿಂತಿತು. ಜೆಡಿಎಸ್ ನಿರೀಕ್ಷಿತ ಪ್ರಮಾಣದಲ್ಲಿ ಗೆಲುವು ಸಾಧಿಸಲಿಲ್ಲ. ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿ ಇರುವ ಕೆಲವು ಸ್ವತಂತ್ರ ಶಾಸಕರು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿದರು. ಅಂದು ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದರೆ ಬಿಜೆಪಿಗೆ ಅವಕಾಶವೇ ಇರಲಿಲ್ಲ.
ಯಡಿಯೂರಪ್ಪ ನೇತೃತ್ವದ ಬಿಜೆಪಿ 2008ರ ಹೊತ್ತಿಗೆ ಸೈದ್ಧಾಂತಿಕ ಬದ್ಧತೆಯ ಪಕ್ಷವಾಗಿ ಉಳಿದಿರಲಿಲ್ಲ. ಜನತಾ ಪರಿವಾರದ ಅನೇಕ ಹಿರಿಯ ನಾಯಕರು ಬಿಜೆಪಿಗೆ ಬಂದರು. ಬರುವಾಗ ಒಳಜಗಳ, ಪರಸ್ಪರ ಕಾಲೆಳೆಯುವ, ಬೆನ್ನಿಗೆ ಚೂರಿ ಹಾಕುವ ಜನತಾ ಪರಿವಾರದ ಕೆಲವು ಕೆಟ್ಟ ಗುಣ ಸ್ವಭಾವಗಳನ್ನು ಜೊತೆಗೆ ತಂದರು. ಅಲ್ಲಿಯವರೆಗೆ ಶಿಸ್ತಿನ ಪಕ್ಷ ಎನಿಸಿಕೊಂಡಿದ್ದ ಬಿಜೆಪಿ ಥೇಟ್ ಜನತಾ ಪರಿವಾರದಂತೆ ಜಗಳಗಂಟ ಪಕ್ಷವಾಗಿ ಬದಲಾಯಿತು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಆರೆಸ್ಸೆಸ್ ಹೆಚ್ಚು ಕ್ರಿಯಾಶೀಲವಾಯಿತು. ತನ್ನ ತತ್ವ ಸಿದ್ಧಾಂತವನ್ನು ಆಡಳಿತದಲ್ಲಿ ಜಾರಿಗೊಳಿಸುವುದು, ಸಂಘ ಪರಿವಾರದ ಕಾರ್ಯಕರ್ತರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸುವುದು ಮೊದಲ ಆದ್ಯತೆಯಾಯಿತು. ಬಿಜೆಪಿ ಒಳಜಗಳ ಸರಿಪಡಿಸುವುದೂ ಸಂಘ ಪರಿವಾರಕ್ಕೆ ಬೇಡದ ವಿಷಯವಾಗಿತ್ತು. ಮೊದಲ ಬಾರಿಗೆ ಕರ್ನಾಟಕದಲ್ಲಿ ಜನತೆ ಅಧಿಕಾರ ನೀಡಿದ್ದಾರೆ, ಅತ್ಯುತ್ತಮ ಆಡಳಿತ ನೀಡಬೇಕೆಂಬ ಕನಿಷ್ಠ ಕಾಳಜಿಯೂ ಆ ‘ದೇಶಭಕ್ತ’ರಿಗೆ ಇರಲಿಲ್ಲ. ಅನಂತಕುಮಾರ್ ಬಣ, ಆರೆಸ್ಸೆಸ್ ಬೆಂಬಲಿತ ಬಿ.ಎಲ್. ಸಂತೋಷ್ ಬಣ, ಸುಷ್ಮಾ ಸ್ವರಾಜ್ ಬೆಂಬಲಿತ ರೆಡ್ಡಿ ಸಹೋದರರ ಬಣಗಳು ಚುದುರಂಗದಾಟದಲ್ಲಿ ತೊಡಗಿದ್ದವು. ಮೊದಲು ರೆಡ್ಡಿ ಸಹೋದರರ ಬಣ ಯಡಿಯೂರಪ್ಪ ಕುರ್ಚಿ ಅಲುಗಾಡಿಸಲು ನೋಡಿತು. ಆನಂತರ ಅನಂತಕುಮಾರ್ ಮತ್ತು ಸಂತೋಷ್ ಬಣಗಳು ಹೇಗಾದರೂ ಮಾಡಿ ಯಡಿಯೂರಪ್ಪ ಅವರನ್ನು ಮನೆಗೆ ಕಳಿಸುವುದೇ ಪರಮ ಗುರಿ ಮಾಡಿಕೊಂಡವು. ಪಕ್ಷವನ್ನು, ಸರಕಾರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಳ್ಳಬೇಕೆಂದು ಅನಂತಕುಮಾರ್, ಸಂತೋಷ್ ಪ್ರಯತ್ನಿಸುತ್ತಲೇ ಇದ್ದರು. ಆಗಿನ ಬಿಜೆಪಿ ಹೈಕಮಾಂಡ್ ಅನಂತಕುಮಾರ್ ಆಣತಿಯಂತೆ ಕಾರ್ಯ ನಿರ್ವಹಿಸುತ್ತಿತ್ತು. ಅನಂತಕುಮಾರ್ ಹೈಕಮಾಂಡ್ ಮಟ್ಟದಲ್ಲಿ ಅತ್ಯಂತ ಪ್ರಭಾವಿ ನಾಯಕರಾಗಿದ್ದರು. ಅವರಿಗೂ ಮುಖ್ಯಮಂತ್ರಿ ಹುದ್ದೆ ಅಲಂಕರಿಸುವ ಆಸೆ ಇತ್ತು. ಅನಂತಕುಮಾರ್-ಯಡಿಯೂರಪ್ಪ ರಾಜಕೀಯ ಮೇಲಾಟದಲ್ಲಿ ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಹೆಚ್ಚು ಶ್ರಮಿಸಿದವರು ಅನಂತಕುಮಾರ್. ಅವರಿಗೆ ಕಡೆಗೂ ಮುಖ್ಯಮಂತ್ರಿಯಾಗುವ ಅವಕಾಶ ಸಿಗಲೇ ಇಲ್ಲ. ಯಡಿಯೂರಪ್ಪ ಸರಕಾರದ ಮೊದಲ ಅವಧಿ ಜಗಳ, ಭಿನ್ನಮತ, ಹಗರಣ, ಸೆರೆವಾಸ, ಸ್ವಜನ ಪಕ್ಷಪಾತದಲ್ಲೇ ಕೊನೆಗೊಂಡಿತು. ಬಿಜೆಪಿ ಮುಖಂಡರು ಪರಸ್ಪರ ರಾಜಕೀಯ ಕೊನೆಗಾಣಿಸುವ ಹಂತ ತಲುಪಿದರು. ದೇಶ ಭಕ್ತರ ನೈಜ ಬಣ್ಣ ಮೊದಲ ಬಾರಿಗೆ ಬಯಲಾಯಿತು. ಪಕ್ಷದ ನಾಯಕರೇ ಪರಸ್ಪರ ಮುಗಿಸಲು ಯತ್ನಿಸುವ ಚಾಳಿ ರೂಢಿಸಿಕೊಂಡಿದ್ದರು. ಅವರು ಜನಸಾಮಾನ್ಯರ ಹಿತವೇನು ಕಾಯಬಲ್ಲರು...? ಮೇಲಾಗಿ ಹಿಂದೂ-ಮುಸ್ಲಿಮ್ ದ್ವೇಷದ ರಾಜಕಾರಣ ಬೇರೆ. ವಿಚಿತ್ರವೆಂದರೆ ಸದಾ ಪಕ್ಷವಿರೋಧಿ ಚಟುವಟಿಕೆಯಲ್ಲಿ ನಿರತರಾದವರು ಹೈಕಮಾಂಡ್‌ಗೆ ಇಷ್ಟ. ಮೊದಲ ಅವಧಿಯಲ್ಲೇ ಯಡಿಯೂರಪ್ಪ, ಈಶ್ವರಪ್ಪ, ಸದಾನಂದ ಗೌಡ, ರೆಡ್ಡಿ ಸಹೋದರರು, ಸಂತೋಷ್, ಜಗದೀಶ್ ಶೆಟ್ಟರ್ ಪರಸ್ಪರ ಎಷ್ಟೊಂದು ಗಾಯ ಮಾಡಿಕೊಂಡಿದ್ದರೆಂದರೆ ಆ ಗಾಯಗಳು ಈ ಜನ್ಮದಲ್ಲಿ ಮಾಯವಾಗುವ ಲಕ್ಷಣ ಕಾಣುತ್ತಿಲ್ಲ. ಯಡಿಯೂರಪ್ಪ ಕರ್ನಾಟಕ ಜನತಾ ಪಕ್ಷ ಕಟ್ಟಿ ಬಿಜೆಪಿಯಲ್ಲಿನ ತನ್ನ ಪರಮ ಶತ್ರುಗಳನ್ನು ಅಡ್ಡಡ್ಡ ಮಲಗಿಸಿ ಬಿಟ್ಟರು. 2013ರ ಚುನಾವಣೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಅಧಿಕಾರಕ್ಕೆ ಬರುವಲ್ಲಿ ಬಿಜೆಪಿಯ ಭಿನ್ನಮತ, ಕಚ್ಚಾಟ, ಬೀದಿಜಗಳ ಪ್ರಮುಖ ಕಾರಣ. ಕೆ.ಜೆ.ಪಿ. ಬಿಜೆಪಿಯ ಸುಮಾರು ನಲವತ್ತಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ನೇರ ಹಣಾಹಣಿಯಲ್ಲಿ ಸೋಲಿಸಿತು. ಬಿಜೆಪಿಯವರನ್ನು ನಾಶ ಮಾಡಲು ಬೇರೆ ಯಾರೂ ಬೇಕಾಗಿಲ್ಲ, ಬಿಜೆಪಿಯ ಭೂಪರೆ ಸಾಕು. ಕರ್ನಾಟಕದ ಜನತೆ ಬಿಜೆಪಿಯವರ ಸಹವಾಸವೇ ಬೇಡ ಎನ್ನುವಷ್ಟು ಬೇಸತ್ತಿದ್ದರು. ಸಿದ್ದರಾಮಯ್ಯ ಅವರು ಮೊದಲ ಅವಧಿಯಲ್ಲಿ ಅತ್ಯುತ್ತಮ ಆಡಳಿತ ನೀಡಿಯೂ ಕೆಲವು ತಪ್ಪುಗಳಿಂದ ಬಿಜೆಪಿಗೆ ಅವಕಾಶ ಮಾಡಿಕೊಟ್ಟರು. ಆ ಸತ್ಯ ಗೊತ್ತಿರುವುದರಿಂದಲೇ ಬಿಜೆಪಿ ಹೈಕಮಾಂಡ್ 2018ರ ಚುನಾವಣೆಯಲ್ಲಿ ಅತಿಯಾಗಿ ಯಡಿಯೂರಪ್ಪ ಅವರನ್ನೇ ಅವಲಂಬಿಸಿದ್ದರು. ಆಗ ಯಡಿಯೂರಪ್ಪ ಬಿಜೆಪಿಗೆ ಮರಳಿ ಬಾರದೆ ಹೋಗಿದ್ದರೆ 104 ಸೀಟು ಗೆಲ್ಲುವುದು ಕಷ್ಟವಿತ್ತು. ಯಡಿಯೂರಪ್ಪ ಕಾರಣಕ್ಕೆ 2019ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ 25 ಸ್ಥಾನಗಳಲ್ಲಿ ಗೆಲ್ಲುವಂತಾಯಿತು. ಬಿಜೆಪಿ ಒಗ್ಗಟ್ಟು ಸಾಧಿಸಿದಾಗಲೆಲ್ಲ ಉತ್ತಮ ಫಲಿತಾಂಶ ಪಡೆದುಕೊಂಡಿದೆ. ಒಳಜಗಳದಿಂದ ಹಾಳಾಗಿದೆ.
2018ರ ಚುನಾವಣೆಯಲ್ಲಿ ಬಿಜೆಪಿಯನ್ನು ಮತದಾರ ಸಂಪೂರ್ಣ ಒಪ್ಪಿಕೊಂಡಿರಲಿಲ್ಲ. ಹಾಗಾಗಿಯೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿತ್ತು. ಕುಮಾರಸ್ವಾಮಿ ಬದಲಿಗೆ ಆಗಲೇ ಖರ್ಗೆಯವರನ್ನು ಮುಖ್ಯಮಂತ್ರಿ ಮಾಡಿದ್ದರೆ ಬಿಜೆಪಿ ಅಧಿಕಾರದ ಕನಸು ಕಾಣಲೂ ಸಾಧ್ಯವಾಗುತ್ತಿರಲಿಲ್ಲ. ಯಡಿಯೂರಪ್ಪ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವುದು ಬಿಜೆಪಿಯ ಸಂತೋಷ್, ಈಶ್ವರಪ್ಪ ಮುಂತಾದವರಿಗೆ ಇಷ್ಟ ಇರಲಿಲ್ಲ. ಮೋದಿ-ಅಮಿತ್‌ಶಾ ಕಾರಣಕ್ಕೆ ಯಡಿಯೂರಪ್ಪ ಎರಡನೇ ಅವಧಿಗೆ ಮುಖ್ಯಮಂತ್ರಿಯಾದರು. ಹುದ್ದೆ ಅಲಂಕರಿಸಿದ ಮರುಕ್ಷಣದಿಂದಲೇ ಬಿಜೆಪಿಯೊಳಗಿನ ಸಂತೋಷ್ ಬಣ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಕಾರ್ಯ ಪ್ರವೃತ್ತವಾಗಿತ್ತು. ಹರಸಾಹಸ ಮಾಡಿ ಎರಡು ವರ್ಷಗಳ ನಂತರ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ವಿರೋಧಿ ಬಣ ಯಶಸ್ವಿಯಾಯಿತು. ಸತತ ಎರಡು ವರ್ಷ ಕಷ್ಟ ಪಟ್ಟ ಸಂತೋಷ್ ಬಣಕ್ಕೆ ರಾಜಕೀಯ ಲಾಭ ಸಿಗಲಿಲ್ಲ. ಯಡಿಯೂರಪ್ಪ ಅವರನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾದ ಸಂತೋಷ್ ಬಣ ತನಗೆ ಬೇಕಾದ ವ್ಯಕ್ತಿಯನ್ನು ಮುಖ್ಯಮಂತ್ರಿ ಹುದ್ದೆಯಲ್ಲಿ ನೋಡಲು ಸಾಧ್ಯ ಆಗಲಿಲ್ಲ.
ವಿಚಿತ್ರವೆಂದರೆ: ಬಸವರಾಜ ಬೊಮ್ಮಾಯಿ ಮೇಲ್ನೋಟಕ್ಕೆ ಯಡಿಯೂರಪ್ಪ ಆಯ್ಕೆಯ ಮುಖ್ಯಮಂತ್ರಿ. ಆದರೆ ಎರಡು ವರ್ಷಗಳ ಕಾಲ ಬೊಮ್ಮಾಯಿ, ಬಿ.ಎಲ್. ಸಂತೋಷ್ ನೆರಳಿನಂತೆ ಕಾರ್ಯ ನಿರ್ವಹಿಸಿದರು. ಸಂತೋಷ್ ಆಶಯದಂತೆ ಸರಕಾರ ನಡೆಯುತ್ತಿತ್ತು. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಅನುಕೂಲವಾಗಿದ್ದು ಬೊಮ್ಮಾಯಿ ಸರಕಾರದ ಅತ್ಯಂತ ಕೆಟ್ಟ ಆಡಳಿತ. ಟಿಕೆಟ್ ಹಂಚಿಕೆಯಲ್ಲಿ ಸಂತೋಷ್ ಅವರಿಗೆ ಸಂಪೂರ್ಣ ಹೊಣೆ ನೀಡಿದ್ದು ಬಿಜೆಪಿಯ ಹೀನಾಯ ಸೋಲಿಗೆ ಕಾರಣವಾಯಿತು. ಸಂತೋಷ್ ಕೆಡಿಸುವುದರಲ್ಲಿ ಪಳಗಿದವರು ಹೊರತು ಜನರ ಮನಸ್ಸು ಗೆಲ್ಲಲು ಅವರಿಂದ ಸಾಧ್ಯ ಇಲ್ಲ ಎಂಬುದು ಸಾಬೀತಾಯಿತು.
ಹಾಗಾಗಿಯೇ ಬಿಜೆಪಿ ಹೈಕಮಾಂಡ್ ಕಸದ ಬುಟ್ಟಿಯಲ್ಲಿದ್ದ ಯಡಿಯೂರಪ್ಪ ಅವರಿಗೆ ಪ್ರಾಮುಖ್ಯತೆ ನೀಡಿ ಅವರ ದಡ್ಡ ಮಗನನ್ನು ಬಿಜೆಪಿ ರಾಜ್ಯ ಅಧ್ಯಕ್ಷರನ್ನಾಗಿ ಮಾಡಿತು. ವಿಜಯೇಂದ್ರ ವಿರುದ್ಧ ಸಂತೋಷ್ ಬಣ ಮೊದಲ ದಿನದಿಂದಲೇ ಅಪಪ್ರಚಾರ ಮಾಡುತ್ತಿದೆ. ಆತನನ್ನು ಕೆಳಗಿಳಿಸುವುದೇ ಅವರ ಗುರಿ. ಇದನ್ನೆಲ್ಲಾ ವಿಜಯೇಂದ್ರ ಅರಿತಿದ್ದರೆ ಅವರ ಕಾರ್ಯ ವೈಖರಿ ಭಿನ್ನವಾಗಿರುತ್ತಿದ್ದರು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾಯಕರಾಗಲು ಯತ್ನಿಸುತ್ತಿದ್ದರು. ಆತ ದಿನೇ ದಿನೇ ನಾಲಾಯಕ್ ಎಂಬುದು ರುಜುವಾತು ಮಾಡಿದರು. ಬಿಜೆಪಿ ಒಳಜಗಳ ಮುಗಿಲು ಮುಟ್ಟಿದೆ. ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರರನ್ನು ರಾಜ್ಯ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಿದರೆ ಸಂತೋಷ್ ಬಣ ಮತ್ತಷ್ಟು ಕುತಂತ್ರದ ಬಲೆ ಹೆಣೆದು ಬಿಜೆಪಿ ಅಧಿಕಾರಕ್ಕೆ ಬರದಂತೆ ಏನು ಮಾಡಬೇಕೋ ಅದೆಲ್ಲ ಮಾಡುತ್ತದೆ. ಬೇರೆಯವರನ್ನು ಅಧ್ಯಕ್ಷ ಸ್ಥಾನದಲ್ಲಿ ಅದರಲ್ಲೂ ಸಂತೋಷ್ ಬಣದವರಿಗೆ ಮಣೆ ಹಾಕಿದರೆ, ಉಳಿದವರು ಆಟ ಕೆಡಿಸುತ್ತಾರೆ. ಕಳೆದ ಹದಿನೈದು ವರ್ಷಗಳಿಂದ ಬಿಜೆಪಿಯೊಳಗಿನ ಬಣಗಳು ಆಳವಾದ ಗಾಯಗಳನ್ನು ಮಾಡಿಕೊಂಡಿವೆ. ಅಶೋಕ್ -ಸಿ. ಟಿ. ರವಿ, ಜೋಡಿ ಸೇರಿದಂತೆ ಪರಸ್ಪರ ಮುಗಿಸುವ, ಅಸ್ತಿತ್ವಕ್ಕಾಗಿ ಏನು ಬೇಕಾದರೂ ಮಾಡಬಲ್ಲ ಹತ್ತಾರು ಗುಂಪುಗಳು ಬಿಜೆಪಿಯಲ್ಲಿವೆ. ಸದ್ಯ ಬಿಜೆಪಿಯ ಒಳಜಗಳ ನಿಲ್ಲುವ ಸ್ಥಿತಿಯಲ್ಲಿ ಇಲ್ಲ. ಶಿಸ್ತಿನ ಪಕ್ಷದಲ್ಲಿ ಈ ಪರಿ ಆಶಿಸ್ತು ಇರುವುದು ಯಾರೂ ಊಹಿಸಿರಲಿಲ್ಲ. ಬಿಜೆಪಿ ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯ ನಿರ್ವಹಿಸುವುದು ಎಂದೋ ನಿಲ್ಲಿಸಿದೆ. ಸಿದ್ದರಾಮಯ್ಯ ಮತ್ತು ಇನ್ನಿತರ ಕಾಂಗ್ರೆಸ್ ನಾಯಕರು ಅಧಿಕಾರಕ್ಕಾಗಿ ಕಿತ್ತಾಡಿಕೊಳ್ಳದಿದ್ದರೆ, ಮುಂಬರುವ ಚುನಾವಣೆಯಲ್ಲಿಯೂ ಕಾಂಗ್ರೆಸ್‌ಗೆ ಅವಕಾಶ ಇದೆ. ಒಳಜಗಳ, ಭಿನ್ನಮತ, ಕಿತ್ತಾಟವನ್ನು ಕರ್ನಾಟಕದ ಜನ ಯಾವತ್ತೂ ಸಹಿಸಲ್ಲ. ಬಿಜೆಪಿ ತನ್ನ ಗೋರಿ ತಾನೇ ತೋಡಿಕೊಳ್ಳುತ್ತದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರಿಕೆಯ ಹೆಜ್ಜೆ ಇಡುವುದು ಅಗತ್ಯವಾಗಿದೆ.