ಮತ್ತೆ ನಂಜು ಕಾರುತ್ತಿರುವ ಬಿಜೆಪಿ ನಾಯಕರು
‘‘ಕಾರ್ಯಾಂಗವು ವ್ಯಕಿಯೋರ್ವನನ್ನು ದೋಷಿ ಎಂಬುದಾಗಿ ಘೋಷಿಸುವಂತಿಲ್ಲ. ಕೇವಲ ಆರೋಪದ ಆಧಾರದಲ್ಲಿ ಕಾರ್ಯಾಂಗವು ವ್ಯಕ್ತಿಯೊಬ್ಬರ ಮನೆಯನ್ನು ಧ್ವಂಸಗೊಳಿಸಿದರೆ ಅದು ಕಾನೂನಿನ ಆಡಳಿತದ ತತ್ವವನ್ನೇ ಬುಡಮೇಲುಗೊಳಿಸುತ್ತದೆ. ಕಾರ್ಯಾಂಗ ನ್ಯಾಯಾಧೀಶರಾಗುವಂತಿಲ್ಲ ಮತ್ತು ಆರೋಪಿಗಳ ಮನೆಗಳನ್ನು ಧ್ವಂಸಗೊಳಿಸುವಂತಿಲ್ಲ’’ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮತ್ತು ಆ ಮನಸ್ಥಿತಿಯವರ ‘ಬುಲ್ಡೋಜರ್ ಸಂಸ್ಕೃತಿ’ ಕಾನೂನುಬಾಹಿರ ಎನ್ನುವುದು ನ್ಯಾಯಪೀಠ ಸ್ಪಷ್ಟಪಡಿಸಿದೆ. ನ್ಯಾಯಪೀಠ ತನ್ನ ಆದೇಶದಲ್ಲಿ ‘‘ಮಹಿಳೆಯರು, ಮಕ್ಕಳು ಮತ್ತು ಕಾಯಿಲೆ ಪೀಡಿತರನ್ನು ರಾತ್ರೋರಾತ್ರಿ ರಸ್ತೆಗಳಿಗೆ ದಬ್ಬುವ ದೃಶ್ಯಗಳು ಸಂತೋಷದ ದೃಶ್ಯಗಳಲ್ಲ’’ ಎಂದು ಮಾನವೀಯತೆಯ ಪಾಠ ಮಾಡಿದೆ. ಯೋಗಿ ಆದಿತ್ಯನಾಥರ ಅಮಾನವೀಯ ಕೃತ್ಯವನ್ನು ಮಹಾನ್ ಸಾಹಸದ ಕಾರ್ಯವೆಂದು ಹೊಗಳಿ ಮಾತನಾಡುತ್ತಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ಈಗಲಾದರೂ ಮನುಷ್ಯತ್ವ ಎಂದರೇನು ಎಂಬುದನ್ನು ಅರ್ಥ ಮಾಡಿಕೊಳ್ಳಲಿ. ಗೋರಖನಾಥ ಪರಂಪರೆಯ ವಾರಸುದಾರ ಎಂದು ಬಡಾಯಿ ಕೊಚ್ಚಿಕೊಳ್ಳುವ ಯೋಗಿ ಆದಿತ್ಯನಾಥರು ಮುಸ್ಲಿಮ್ ದ್ವೇಷವನ್ನು ಒಂದು ಸಿದ್ಧಾಂತವನ್ನಾಗಿ ಸ್ವೀಕರಿಸಿದ್ದು ನಾಥ ಪಂಥದ ದುರಂತ.
ಬಾಬರಿ ಮಸೀದಿಯನ್ನು ಕಾನೂನು ಬಾಹಿರವಾಗಿ ಧ್ವಂಸ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿದ್ದರೆ ಅಡ್ವಾಣಿ, ಮುರಳೀ ಮನೋಹರ ಜೋಶಿಯವರ ನಂತರದ ಪೀಳಿಗೆಗೆ ಕಾನೂನು ಮತ್ತು ನ್ಯಾಯ ಪರಿಪಾಲನೆಯ ಭಯವಾದರೂ ಇರುತ್ತಿತ್ತು. ಮನೆ, ಮನ ಮತ್ತು ಮಸೀದಿಗಳನ್ನು ಧ್ವಂಸಗೊಳಿಸುವುದು, ವಿಕೃತ ಸಂತೋಷ ಅನುಭವಿಸುವುದು, ಬಿಜೆಪಿ ಮತ್ತು ಸಂಘ ಪರಿವಾರದ ಜಾಯಮಾನವೇ ಆಗಿಬಿಟ್ಟಿದೆ. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಮಂತ್ರ ಜಪಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆದಿಯಾಗಿ ಬಿಜೆಪಿಯ ಪ್ರತಿಯೊಬ್ಬರೂ ಮುಸ್ಲಿಮ್ ದ್ವೇಷವನ್ನು ಉಸಿರಾಗಿಸಿಕೊಂಡಂತಿದೆ. ಬೇರೆ ದೇಶಗಳಿಗೆ ಹೋಗಿ ಯುದ್ಧ ವಿರೋಧಿ ಮಾತುಗಳನ್ನಾಡುವ ನರೇಂದ್ರ ಮೋದಿಯವರಿಗೆ ತನ್ನ ದೇಶದಲ್ಲಿನ ಒಂದು ಸಮುದಾಯವನ್ನು ದ್ವೇಷಿಸುವುದು ಸಂವಿಧಾನ ಬಾಹಿರ ನಿಲುವೆಂದು ಅನ್ನಿಸುತ್ತಿಲ್ಲ. ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ಕಳೆದ ಹತ್ತು ವರ್ಷಗಳಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಅವರ ತತ್ವ ಸಿದ್ಧಾಂತಗಳ ಬಗ್ಗೆ ಹೆಚ್ಚು ಮಾತನಾಡಿದ್ದಾರೆ. ಅವರ ತತ್ವಾದರ್ಶಗಳನ್ನು ಹೇಳುತ್ತಲೇ ಕಾಂಗ್ರೆಸ್ ಮತ್ತು ಮುಸ್ಲಿಮ್ ಸಮುದಾಯವನ್ನು ಅಕ್ಷರಶಃ ವಿಲನ್ ಮಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮಾತ್ರ ಬಿಜೆಪಿ ರಾಜಕೀಯ ತಂತ್ರಗಾರಿಕೆಗೆ ಸಮರ್ಥ ಪ್ರತಿತಂತ್ರ ರೂಪಿಸುವಲ್ಲಿ ಇನ್ನೂ ಪರದಾಡುತ್ತಿದೆ. ಮಲ್ಲಿಕಾರ್ಜುನ ಖರ್ಗೆ ಅವರು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಬಿಜೆಪಿ ಮತ್ತು ಸಂಘ ಪರಿವಾರದ ಹುನ್ನಾರಗಳಿಗೆ ಪ್ರತ್ಯುತ್ತರ ನೀಡಲಾಗುತ್ತಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತವರ ಪ್ರಚಾರದ ತಂಡ ರಾಮ ಮಂದಿರ, ಮುಸ್ಲಿಮ್ ದ್ವೇಷ ಮತ್ತು ಅಭಿವೃದ್ಧಿ ಕುರಿತಾದ ಹಸಿ ಸುಳ್ಳುಗಳನ್ನು ಮಾತ್ರ ನಂಬಿಕೊಂಡಿತ್ತು. 2014ರಲ್ಲಿ ಮೊದಲ ಬಾರಿಗೆ ನರೇಂದ್ರ ಮೋದಿಯವರು ‘ಸಬ್ ಕಾ ಸಾಥ್ ಸಬ್‌ಕಾ ವಿಕಾಸ್’ ಘೋಷಣೆ ಮಾಡಿದಾಗ ಭಾರತದ ಯುವ ಸಮುದಾಯ ‘ಅಚ್ಛೇ ದಿನ’ಗಳು ಬಂದೇ ಬಿಟ್ಟವು ಎಂದು ಕನಸು ಕಾಣತೊಡಗಿದ್ದರು. ಅಲ್ಲಿಯವರೆಗೆ ಬಿಜೆಪಿಯ ಚುನಾವಣಾ ಪ್ರಣಾಳಿಕೆ ‘ಧರ್ಮ’ ಕೇಂದ್ರಿತವಾಗಿತ್ತು. ಆದರೆ ಮೋದಿಯವರು ಅಭಿವೃದ್ಧಿ ಎಂಬ ಮಾತು ಮುಂದು ಮಾಡಿ ಧರ್ಮಾಧಾರಿತ ರಾಜಕಾರಣವನ್ನು ಹಿಡನ್ ಅಜೆಂಡವನ್ನಾಗಿಸಿಕೊಂಡರು. ಭಾರತದ ಯುವ ಸಮುದಾಯ ಮೋದಿಯವರ ಮಾತಿನ ಮೋಡಿಗೆ ಮರುಳಾಯಿತು. ಭಾರತೀಯ ಜನತಾ ಪಕ್ಷ ಅಟಲ್ ಬಿಹಾರಿ ವಾಜಪೇಯಿಯವರ ಉದಾರವಾದಿ ಮುಖವಾಡ ಮುಂದು ಮಾಡಿ ಚುನಾವಣೆ ಎದುರಿಸಿದಾಗಲೂ ಇನ್ನೂರರ ಗಡಿದಾಟಲು ಸಾಧ್ಯವಾಗಿರಲಿಲ್ಲ. ಆದರೆ ಮೋದಿಯವರ ಮಾತಿಗೆ ಮರುಳಾದ ಮತದಾರರು ಸರಳ ಬಹುಮತದ ಸರಕಾರ ರಚಿಸಲು ಅವಕಾಶ ಮಾಡಿಕೊಟ್ಟರು. 10 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸುವ ಅವಕಾಶ ಪಡೆದ ನರೇಂದ್ರ ಮೋದಿಯವರು ಭಾರತವನ್ನು ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿಪಡಿಸಲೇ ಇಲ್ಲ.
ಒಳ್ಳೆಯದು ಮಾಡುವ ಬದಲಿಗೆ ನೋಟು ಬಂಧಿ ಜಾರಿಗೊಳಿಸಿ, ದುಡಿದು ತಿನ್ನುವ ಜನರನ್ನು ಬೀದಿಪಾಲು ಮಾಡಿದರು. ಬಡವರು, ಮಧ್ಯಮ ವರ್ಗದವರ ನೋಟು ಬಂಧಿಯ ಕಾರಣಕ್ಕೆ ಉದ್ಯೋಗ ಕಳೆದುಕೊಂಡರು. ಅಚ್ಛೇ ದಿನಗಳ ನಿರೀಕ್ಷೆಯಲ್ಲಿದ್ದ ಕೋಟಿ ಕೋಟಿ ಯುವಕರು ನಿರುದ್ಯೋಗದ ಬಿಸಿ ಅನುಭವಿಸಬೇಕಾಯಿತು. ದೇಶದ ಪ್ರಧಾನಿಯೇ ಪಕೋಡ ಮಾರಿ ಬದುಕಲು ಕರೆ ನೀಡಿದರು. ಡಿಜಿಟಲ್ ಪೇಮೆಂಟ್‌ನಂತಹ ಸುಧಾರಣೆ ತಂದ ನರೇಂದ್ರ ಮೋದಿಯವರು ಆದಾಯದ ಮೂಲಗಳನ್ನೇ ಇಲ್ಲವಾಗಿಸಿದರು. ಮೋದಿ ಅವರು ಮಂಡಿಸಿದ ಎಲ್ಲಾ ಬಜೆಟ್‌ಗಳು ದೇಶವನ್ನು ಅಭಿವೃದ್ಧಿ ಪಡಿಸುವ ಕನಸು ಹೊಂದಿರಲಿಲ್ಲ. ಅದಾನಿ, ಅಂಬಾನಿ ಕಂಪೆನಿಗಳಿಗೆ ಲಾಭ ಮಾಡಿಕೊಡುವ ಯೋಜನೆಗಳೇ ಆಯವ್ಯಯದ ಪ್ರಧಾನ ಕಾಳಜಿಯಾಗಿರುತ್ತಿತ್ತು. ತೋರಿಕೆಗೆ ಸ್ಟಾರ್ಟ್ ಅಪ್‌ಗಳು, ಮುದ್ರಾದಂತಹ ಸಾಲ ಯೋಜನೆಗಳನ್ನು ನಿರುದ್ಯೋಗಿಗಳ ಕಣ್ಣೊರೆಸುವ ತಂತ್ರವಾಗಿ ಸೇರಿಸುತ್ತಿದ್ದರು. ಆ ಯೋಜನೆಗಳ ಫಲಾನುಭವಿಗಳ ಸಂಖ್ಯೆ ಬಹಳ ಕಡಿಮೆ. ರೈತ ವಿರೋಧಿ ಕಾನೂನುಗಳು ಆ ಸಮುದಾಯವನ್ನು ಕಂಗೆಡಿಸಿದ್ದರಿಂದ ರೈತರು ಜೀವದ ಹಂಗು ತೊರೆದು ಬೀದಿಗಿಳಿದು ಹೋರಾಡಿದರು. ರೈತರ ಉಗ್ರ ಸ್ವರೂಪದ ಹೋರಾಟಕ್ಕೆ ಮಣಿದು ರೈತ ವಿರೋಧಿ ಕಾನೂನುಗಳನ್ನು ಹಿಂಪಡೆದರು. ಆದರೆ ರೈತ ವಿರೋಧಿ ಧೋರಣೆ ಮುಂದುವರಿಸಿದರು. ಕೋವಿಡ್ ಕಾಲದಲ್ಲಿ ನರೇಂದ್ರ ಮೋದಿ ಮಾತಿನ ಮೂಲಕ ಮಂತ್ರಿಸಿದರೇ ಹೊರತು ಜನಸಾಮಾನ್ಯರಿಗೆ ಒಳ್ಳೆಯದಾಗುವ ಒಂದೇ ಒಂದು ಉತ್ತಮ ಕಾರ್ಯಕ್ರಮ ರೂಪಿಸಲಿಲ್ಲ. ಜನ ಕೋವಿಡ್ ಕಾಯಿಲೆಗಿಂತ ನೋಟು ಬಂಧಿಯ ಹೊಡೆತದಿಂದ ಸಾವನ್ನಪ್ಪಿದ್ದರು. ಮೋದಿ ಅವಲಂಬಿತ ಬಂಡವಾಳ ಶಾಹಿ ಟೀಮ್ ಕೋವಿಡ್‌ನಲ್ಲಿ ಕೋಟಿ ಕೋಟಿ ಹಣ ಮಾಡಿಕೊಂಡಿತು. ಸಾವಿನ ಮನೆಯಲ್ಲಿ ಗಳ ಹಿರಿಯಿತು. ಮಂತ್ರಿಗಳು, ಅಧಿಕಾರಿಗಳು, ಔಷಧಿ ವ್ಯಾಪಾರಿಗಳು ಹಣ ಮಾಡಿದ್ದು ಸಾವಿನ ಮನೆಯಲ್ಲೇ.
ನರೇಂದ್ರ ಮೋದಿ ಸರಕಾರ ಹತ್ತು ವರ್ಷಗಳ ಕಾಲಾವಧಿಯಲ್ಲಿ ಭಾರತೀಯರ ಏಳಿಗೆಗಾಗಿ ಏನನ್ನೂ ಮಾಡಲಿಲ್ಲ, ಆದರೆ ಹೋದಲ್ಲಿ ಬಂದಲ್ಲಿ ಬಡಾಯಿ ಕೊಚ್ಚಿಕೊಳ್ಳುವುದು ಜಾಸ್ತಿಯಾಯಿತು. ಭಾರತದ ಅರ್ಥ ವ್ಯವಸ್ಥೆ ಬಲಿಷ್ಠವಾಗಿದೆ. ಬ್ರಿಟಿಷ್ ಸರಕಾರದ ಆರ್ಥಿಕತೆಯನ್ನು ಮೀರಿ ಬೆಳೆದಿದ್ದೇವೆ ಎಂದು ಸುಳ್ಳು ಪ್ರಚಾರ ಮಾಡುತ್ತಲೇ ಹೋದರು. ದಕ್ಷಿಣ ಭಾರತದ ರಾಜ್ಯಗಳಿಂದ ಅತಿ ಹೆಚ್ಚು ತೆರಿಗೆ ಪಡೆದು ಆ ರಾಜ್ಯಗಳಿಗೆ ಕಡಿಮೆ ಅನುದಾನ ನೀಡಿ ನಿರಂತರ ವಂಚಿಸಿದರು. ಕರ್ನಾಟಕದಲ್ಲಿ ‘ಡಬಲ್ ಇಂಜಿನ್’ ಬಿಜೆಪಿ ಸರಕಾರ ಇದ್ದಾಗಲೂ ಕರ್ನಾಟಕಕ್ಕೆ ನಿರಂತರ ವಂಚಿಸಿದರು. ಬಿಜೆಪಿಯೇತರ ಸರಕಾರಗಳನ್ನು ಆಪರೇಷನ್ ಕಮಲದ ಮೂಲಕ ಕೆಡವಿ ಬಿಜೆಪಿ ಸರಕಾರಗಳು ಅಸ್ತಿತ್ವಕ್ಕೆ ಬರಲು ಹಲವು ಕುತಂತ್ರಗಳನ್ನು ಮಾಡಲಾಯಿತು. 10 ವರ್ಷಗಳ ಮೋದಿ ಆಡಳಿತ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ನಿರಂತರ ಸುಳ್ಳು ಪ್ರಚಾರ ಮಾಡಿಕೊಳ್ಳತೊಡಗಿತು. ಭಾರತದಲ್ಲಿ ಬಡತನ, ನಿರುದ್ಯೋಗ ತಾಂಡವವಾಡುತ್ತಿದ್ದರೂ ವಿದೇಶಗಳಲ್ಲಿ ಮೋದಿ ಬಡಾಯಿ ಕೊಚ್ಚಿಕೊಳ್ಳುವುದನ್ನು ನಿಲ್ಲಿಸಲಿಲ್ಲ. ಭಾರತದಲ್ಲಿನ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಮೋದಿಯವರು ವಿದೇಶಿಯರ ಪ್ರಮಾಣ ಪತ್ರಗಳನ್ನು ಬಳಸಿಕೊಳ್ಳುತ್ತಿದ್ದರು. ವಿದೇಶಿ ಪ್ರಸಾರ ಸಂಸ್ಥೆಯಾದ ಬಿಬಿಸಿ ಮೋದಿ ಕುರಿತು ಸತ್ಯವಾದ ವರದಿ ಮಾಡಿದಾಗ ಅವರಿಗೆ ಅರಗಿಸಿಕೊಳ್ಳಲಾಗಲಿಲ್ಲ. ಅದನ್ನು ಬ್ಯಾನ್ ಮಾಡಿದರು.
ಭಾರತದಲ್ಲಿ ಮೋದಿ ಟೀಕಾಕಾರರಿಗೆ ಕಿರುಕುಳ ನೀಡತೊಡಗಿದರು. ಮೊದಲು ಮಾಧ್ಯಮಗಳನ್ನು ಗುರಿಯನ್ನಾಗಿಸಿದರು. ಸಾಹಿತಿ, ಬುದ್ಧಿಜೀವಿ ಹೋರಾಟಗಾರರ ಟೀಕೆಗಳಿಗೆ ಉತ್ತರಿಸಲಾಗದ ಮೋದಿ ಅವರಿಗೆ ನಗರ ನಕ್ಸಲೀಯರು ಎಂದು ಹಣೆಪಟ್ಟಿ ಕಟ್ಟಿದರು. ತಮಗೆ ಬೇಡವಾದ ಮಾಧ್ಯಮ ಸಂಸ್ಥೆಗಳಿಗೆ ಕಿರುಕುಳ ನೀಡಿ ಮುಚ್ಚಿಸಲು ಯತ್ನಿಸಲಾಯಿತು. ಮೋದಿ ಆಡಳಿತ ವೈಖರಿ ಬಗ್ಗೆ ಸತ್ಯ ಮಾತನಾಡುತ್ತಿದ್ದ ಪತ್ರಕರ್ತರನ್ನು ಅವರ ಕೆಲಸ ಮಾಡುತ್ತಿದ್ದ ಮಾಧ್ಯಮ ಸಂಸ್ಥೆಗಳಿಂದಲೇ ಹೊರಹಾಕಿಸಲಾಯಿತು. ಮೋದಿ ಪ್ರಧಾನಮಂತ್ರಿ ಕಚೇರಿಯಲ್ಲಿ ಕೂತು ದೇಶದ ಅಭಿವೃದ್ಧಿ ಬಗ್ಗೆ ಚಿಂತಿಸಿದ್ದು, ಯೋಜನೆ ರೂಪಿಸಿದ್ದು ಕಡಿಮೆ. ದೇಶಕ್ಕಿಂತಲೂ ವಿದೇಶಗಳಲ್ಲಿ ಸುತ್ತಾಡಿ ಬಡಾಯಿ ಹೇಳಿಕೊಂಡಿದ್ದೇ ಜಾಸ್ತಿ. ಕೋವಿಡ್‌ನಲ್ಲಿ ಸತ್ತವರ ಸಂಖ್ಯೆಯನ್ನು ಮುಚ್ಚಿಟ್ಟರು. ಮೋದಿಯೆಂದರೆ ಸುಳ್ಳಿಗೆ ಪರ್ಯಾಯ ನಾಮವಾದರು. ಕೇಂದ್ರದಲ್ಲಿ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ದಿನದಿಂದ ಬಿಜೆಪಿ ಮತ್ತು ಸಂಘ ಪರಿವಾರದ ಅಡ್ನಾಡಿಗಳು ಮುಸ್ಲಿಮ್ ವಿರೋಧಿ ಹೇಳಿಕೆ ಕೊಡುವುದು, ಮತೀಯ ಗಲಭೆ ಸೃಷ್ಟಿಸುವುದನ್ನು ಒಂದು ಧಂದೆಯನ್ನಾಗಿಸಿಕೊಂಡರು. ಹಿಂದೂ-ಮುಸ್ಲಿಮ್ ಧ್ರುವೀಕರಣ ಮಾಡುವುದು ಅವರ ಗುರಿಯಾಗಿತ್ತು. ನರೇಂದ್ರ ಮೋದಿ ಬಾಯಲ್ಲಿ ಸಬ್‌ಕಾ ಸಾಥ್ ಸಬ್‌ಕಾ ವಿಕಾಸದ ಮಾತುಗಳನ್ನಾಡುತ್ತಲೇ ಸಂಘ ಪರಿವಾರದ ಅಂಗಸಂಸ್ಥೆಗಳಾದ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನಂತಹ ಸಂಘಟನೆಗಳ ನಿರಂತರ ಕೋಮುಗಲಭೆಗಳಿಗೆ ಮೌನವಾಗುತ್ತಿದ್ದರು. ಮುಸ್ಲಿಮ್ ವಿರೋಧಿ ಚಟುವಟಿಕೆಗಳಿಗೆ ಕೇಂದ್ರ ಸರಕಾರ ಕಡಿವಾಣ ಹಾಕಲೇ ಇಲ್ಲ. ಭಾರತ ದೇಶದುದ್ದಕ್ಕೂ ಮತೀಯ ಗಲಭೆ ನಡೆಸುವವರಿಗೆ ರಕ್ಷಣೆ ದೊರೆಯ ತೊಡಗಿತು.
ಅಟಲ್ ಬಿಹಾರಿ ವಾಜಪೇಯಿಯವರು ಕೇಂದ್ರದಲ್ಲಿ ಪ್ರಧಾನ ಮಂತ್ರಿಯಾಗಿದ್ದಾಗ ಗುಜರಾತ್ ರಾಜ್ಯ ಕೋಮು ಗಲಭೆಯಿಂದ ಹೊತ್ತಿ ಉರಿಯಿತು. ವಾಜಪೇಯಿಯವರು ಅಲ್ಲಿ ರಾಜ ಧರ್ಮ ಪಾಲನೆ ಆಗುತ್ತಿಲ್ಲ ಎಂದು ಗಂಭೀರವಾಗಿ ಪ್ರತಿಕ್ರಿಯಿಸಿದ್ದರು. ಆದರೆ ಪ್ರಧಾನ ಮಂತ್ರಿ ಮೋದಿ ಒಂದು ಬಾರಿಯೂ ಸಂವೇದನಾಶೀಲರಾಗಿ ರಾಜಧರ್ಮ ಪಾಲನೆಯ ಬಗ್ಗೆ ಮಾತನಾಡಲೇ ಇಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಬುಲ್ಡೋಜರ್ ಸಂಸ್ಕೃತಿಯನ್ನು ಕಾನೂನುಬಾಹಿರವಾಗಿ ಜಾರಿಗೊಳಿಸಿದಾಗಲೂ ರಾಜಧರ್ಮ ಪಾಲನೆಯಾಗುತ್ತಿಲ್ಲ ಎಂದು ಪ್ರಧಾನ ಮಂತ್ರಿ ಹೇಳಲೇ ಇಲ್ಲ. ಮಣಿಪುರ ಹೊತ್ತಿ ಉರಿಯಿತು. ಮಹಿಳೆಯರನ್ನು ಬೆತ್ತಲೆಗೊಳಿಸಿ ಅಮಾನುಷವಾಗಿ ಅತ್ಯಾಚಾರ ಮಾಡಲಾಯಿತು. ಒಮ್ಮೆಯೂ ಪ್ರಧಾನಿ ಬಾಯಿ ಬಿಡಲಿಲ್ಲ. ಬಿಜೆಪಿ ಶಾಸಕರು, ಸಂಸದರು, ಸಂಘ ಪರಿವಾರದ ಅನೇಕರು ಮುಸ್ಲಿಮ್ ಸಮುದಾಯದ ಕುರಿತು ಅಪಮಾನಕರವಾಗಿ ಮಾತನಾಡಿದ ಮೇಲೂ ಭಾರತದ ಪ್ರಧಾನಿ ‘‘ಈ ದೇಶ ಎಲ್ಲರಿಗೂ ಸೇರಿದ್ದು. ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್ ನನ್ನ ಸ್ಲೋಗನ್, ಆ ಸ್ಲೋಗನಿನ ಆಶಯಕ್ಕೆ ವಿರುದ್ಧವಾಗಿ ಯಾರೇ ಮಾತನಾಡಿದರೂ ಶಿಕ್ಷಾರ್ಹ ಅಪರಾಧವಾಗುತ್ತದೆ’’ ಎಂದು ಒಮ್ಮೆಯೂ ಹೇಳಲಿಲ್ಲ. ಬಿಜೆಪಿ ಸಂಸದ, ಮಾಜಿ ಮಂತ್ರಿ ಅನಂತ ಕುಮಾರ್ ಹೆಗಡೆ ಸಂವಿಧಾನ ಬದಲಾಯಿಸುವ ಮಾತು ಆಡಿದಾಗಲೂ ಅದು ರಾಜಧರ್ಮ ಉಲ್ಲಂಘಿಸುವ ಮಾತು ಎಂದು ಹೇಳಲಿಲ್ಲ.
ನರೇಂದ್ರ ಮೋದಿ ಅವರ ಆಳದ ನಂಬಿಕೆ ಮತೀಯ ರಾಜಕಾರಣ. ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಎಂಬುದು ಯುವ ಸಮುದಾಯವನ್ನು ಸೆಳೆಯಲು ಬಳಸಿದ ಒಂದು ರಾಜಕೀಯ ಸ್ಲೋಗನ್ ಅಷ್ಟೆ. ಅದರಾಚೆ ಆ ಮಾತಿಗೆ ಯಾವ ಅರ್ಥ ಕಲ್ಪಿಸಿಕೊಳ್ಳಲೇ ಬಾರದು. ಅಷ್ಟಕ್ಕೂ ಮೋದಿಯವರಿಗೆ ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಸ್ಲೋಗನ್ ಮೇಲೆ ಎಳ್ಳು ಕಾಳಷ್ಟೂ ನಂಬಿಕೆ ಇರಲಿಲ್ಲ. ಒಂದು ವೇಳೆ ಆ ಸ್ಲೋಗನ್ ಮೇಲೆ ಅವರಿಗೆ ನಂಬಿಕೆ ಇದ್ದಿದ್ದರೆ ಅವರು 2024ರ ಲೋಕಸಭಾ ಚುನಾವಣೆಯನ್ನು ಅಭಿವೃದ್ಧಿಯ ಹೆಸರಿನಲ್ಲಿ ಎದುರಿಸುತ್ತಿದ್ದರು. ಆದರೆ ಅವರು ಹಾಗೆ ಮಾಡಲಿಲ್ಲ. ಯಾಕೆಂದರೆ ಮತದಾರರ ನಿರೀಕ್ಷೆಗೆ ತಕ್ಕ ಅಭಿವೃದ್ಧಿ ಮಾಡಿಲ್ಲ ಎಂಬ ಕಟುವಾಸ್ತವ ಅವರಿಗೆ ಗೊತ್ತಿತ್ತು. ಆ ಕಾರಣಕ್ಕೆ ರಾಮಮಂದಿರ ನಿರ್ಮಾಣ ಮತ್ತು ಉದ್ಘಾಟನಾ ಸಮಾರಂಭಕ್ಕೆ ವ್ಯಾಪಕ ಪ್ರಚಾರ ನೀಡಿದರು. ಒಂದೂವರೆ ವರ್ಷ ಮೊದಲೇ ಟಿವಿಯಲ್ಲಿ ಸುಳ್ಳು ಸಮೀಕ್ಷೆಗಳನ್ನು ಪ್ರಸಾರ ಮಾಡಲಾಯಿತು. ಎಲ್ಲಾ ಸಮೀಕ್ಷೆಗಳಲ್ಲೂ ಮೋದಿ ಮುಂದಿನ ಪ್ರಧಾನಿ ಎಂದು ಪ್ರಚಾರ ಮಾಡಲಾಯಿತು. ಆ ಯಾವೊಂದು ಸಮೀಕ್ಷೆಗೂ ವೈಜ್ಞಾನಿಕ ತಳಹದಿ ಇರಲಿಲ್ಲ.
ರಾಮಮಂದಿರ ಸಮಾರಂಭಕ್ಕೆ ಯಾವ ಪರಿ ಪ್ರಚಾರ ಕೊಟ್ಟರೆಂದರೆ ಭಾರತದಲ್ಲಿ ರಾಮ ಒಬ್ಬನೇ ದೇವರು ಎಂಬಂತೆ ಬಿಂಬಿಸಲಾಯಿತು. ರಾಮ ಮಂದಿರದ ಅಬ್ಬರದ ಪ್ರಚಾರ, ಮುಸ್ಲಿಮ್ ವಿರೋಧಿ ಅಪಪ್ರಚಾರ ವ್ಯಾಪಕವಾಗಿ ನಡೆಸಲಾಯಿತು. ಲೋಕಸಭೆ ಚುನಾವಣಾ ಪ್ರಚಾರದಲ್ಲೇ ಮೋದಿ ತಾನೊಬ್ಬ ಪ್ರಧಾನಿ ಎಂಬುದನ್ನೂ ಮರೆತು ‘‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತಾರೆ’’ ಎಂದು ಬಹಿರಂಗ ಸಭೆಯಲ್ಲಿ ಹೇಳತೊಡಗಿದರು. ಮೋದಿ ಬದಲಾಗಿಲ್ಲ ಎಂಬ ಸತ್ಯ ದೇಶದ ಜನತೆಗೆ ಗೊತ್ತಾಯಿತು. ಗುಜರಾತ್‌ನಲ್ಲಿನ ಮೋದಿಯೇ ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ದ ಮುಖವಾಡ ಧರಿಸಿಕೊಂಡು ಯಾಮಾರಿಸುತ್ತಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಂಡರು. 10 ವರ್ಷಗಳ ಕಾಲ ಅಭಿವೃದ್ಧಿ ಮಾಡದೆ ಬರೀ ಮಾತಿನಲ್ಲಿ ಮರುಳು ಮಾಡುತ್ತಿದ್ದಾರೆ ಎಂಬುದು ಖಾತ್ರಿಯಾಯಿತು. ಪ್ರಜ್ಞಾವಂತ ಮತದಾರರು ಮೋದಿಯ ಮನದ ಮಾತನ್ನು ತಿರಸ್ಕರಿಸಿದರು. ‘ಚಾರ್ ಸೌ ಪಾರ್’ ಸ್ಲೋಗನ್‌ನೊಂದಿಗೆ ಹೊರಟ ಮೋದಿಗೆ, ದೇಶದ ಮತದಾರರು ಸರಳ ಬಹುಮತವನ್ನೂ ನೀಡಲಿಲ್ಲ. ಅವರಿವರ ಬೆಂಬಲದ ಹಂಗಿನ ಸರಕಾರ ನಡೆಸುತ್ತಿದ್ದಾರೆ. ಹಾಗೆ ನೋಡಿದರೆ ‘ಇಂಡಿಯಾ’ ಕೂಟದ ಮುಖಂಡರು ಮತ್ತಷ್ಟು ಒಗ್ಗಟ್ಟು ಪ್ರದರ್ಶಿಸಿ ಆತ್ಮವಿಶ್ವಾಸದಿಂದ ಚುನಾವಣೆ ಎದುರಿಸಿದ್ದರೆ ಮೋದಿ ಮನೆಯಲ್ಲಿರುತ್ತಿದ್ದರು. ಮೋದಿಯವರನ್ನು ಮತದಾರರು ತಿರಸ್ಕರಿಸಿದ್ದಾರೆ.
ಅದಕ್ಕೆ ಈಗ ಮೋದಿ, ಅಮಿತ್ ಶಾ, ಯೋಗಿ ಆದಿತ್ಯನಾಥ್ ಮುಸ್ಲಿಮ್ ಸಮುದಾಯದ ವಿರುದ್ಧ ನಂಜು ಕಾರುತ್ತಿದ್ದಾರೆ. ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆ ಗೆಲ್ಲಲು ಮುಸ್ಲಿಮ್ ವಿರೋಧಿ ಭಾವನೆ ಕೆರಳಿಸಲು ಯತ್ನಿಸುತ್ತಿದ್ದಾರೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಹೈದರಾಬಾದಿನ ನಿಝಾಮರ ಬಗ್ಗೆ, ರಜಾಕಾರರ ಬಗ್ಗೆ ಕನಿಷ್ಠ ತಿಳುವಳಿಕೆ ಇಲ್ಲ. ಮಲ್ಲಿಕಾರ್ಜುನ ಖರ್ಗೆಯವರ ತಾಯಿ ಮತ್ತು ತಂಗಿ ಇದ್ದ ಮನೆಗೆ ಬೆಂಕಿ ಹಚ್ಚಿದವರು, ಅವರ ಸಾವಿಗೆ ಕಾರಣರಾದವರು ಗಲಭೆಕೋರ ರಜಾಕಾರರೇ ಹೊರತು ಮುಸ್ಲಿಮರಲ್ಲ. ಹಿಂದೂ ಸಂಘಟನೆಯ ಹೆಸರಿನಲ್ಲಿ ಮತೀಯ ಗಲಭೆ ಸೃಷ್ಟಿಸುವವರು, ಜೀವ ಹಾನಿಗೆ ಕಾರಣರಾಗುವವರು ಕೋಮುವಾದಿ ಶಕ್ತಿಯ ಪ್ರತಿನಿಧಿಗಳೇ ಹೊರತು ಅವರನ್ನು ಹಿಂದೂ ಧರ್ಮದ ಪ್ರತಿನಿಧಿಗಳೆಂದು ಭಾವಿಸಲಾಗದು. ಯೋಗಿ ಆದಿತ್ಯನಾಥ್, ಅಮಿತ್ ಶಾ, ಬಿ.ಎಲ್. ಸಂತೋಷ್ ಅವರಿಗಿಂತ ಪ್ರಧಾನಿ ನರೇಂದ್ರ ಮೋದಿಯವರು ಯಾವ ರೀತಿಯಲ್ಲೂ ಭಿನ್ನರಲ್ಲ ಎನ್ನುವುದು ರುಜುವಾತು ಪಡಿಸಿದ್ದಾರೆ.
ಅಲ್ಪಮತದ ಸರಕಾರದ ಪ್ರಧಾನ ಮಂತ್ರಿಯಾದ ಮೇಲೆ ನರೇಂದ್ರ ಮೋದಿಯವರು ‘ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್’ ಎಂಬ ಮಾತನ್ನು ಮರೆತಿದ್ದಾರೆ. ಕಾಂಗ್ರೆಸ್‌ನವರ ಮಿತಿಗಳನ್ನು ಬಳಸಿಕೊಂಡು ಹರ್ಯಾಣ ಚುನಾವಣೆಯೇನೋ ಗೆದ್ದರು. ಆದರೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಳನ್ನು ಗೆಲ್ಲುವುದು ಸರಳವಿಲ್ಲ ಎಂದು ಅರಿತೇ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಪ್ರಯತ್ನಿಸುತ್ತಿದ್ದಾರೆ. ಶಿಗ್ಗಾಂವಿ, ಚನ್ನಪಟ್ಟಣ, ಸಂಡೂರು ಉಪಚುನಾವಣೆಯಲ್ಲೂ ವಕ್ಫ್ ಆಸ್ತಿ ವಿವಾದ ಬಳಸಿಕೊಂಡು ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಕೈಹಾಕಿದ್ದಾರೆ. ಅದೇ ತಂತ್ರಗಾರಿಕೆ ಮಹಾರಾಷ್ಟ್ರ, ಜಾರ್ಖಂಡ್ ಚುನಾವಣೆಗಳಲ್ಲೂ ಬಳಸುತ್ತಿದ್ದಾರೆ. ಮೋದಿಯವರು ಅಭಿವೃದ್ಧಿ ಹೆಸರಿನಲ್ಲಿ ಮತ ಕೇಳುವ ನೈತಿಕತೆ ಉಳಿಸಿಕೊಂಡಿಲ್ಲ. 2024ರ ಲೋಕಸಭಾ ಚುನಾವಣೆಯಲ್ಲಿ ಭಾರತದ ಮತದಾರರು ಮಂದಿರ, ಮಸೀದಿ ಮತ್ತು ಹಿಂದುತ್ವದ ಮತೀಯ ರಾಜಕಾರಣವನ್ನು ತಿರಸ್ಕರಿಸಿದ್ದಾರೆ. ಭಾರತ ಎಲ್ಲರ ದೇಶ. ಎಲ್ಲರ ಮತಗಳು ದಕ್ಕಿದಾಗಲೇ ಜನಪ್ರತಿನಿಧಿಯಾಗಲು ಸಾಧ್ಯ. ಹಿಂದುತ್ವದ ರಾಜಕಾರಣವೇ ಗತಿ ಎಂದು ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ದ್ವೇಷದ ಭಾಷಣ ಮಾಡುತ್ತಾ ಹೋದರೆ ಬಿಜೆಪಿಯನ್ನು ಮತದಾರರು ಮೊದಲಿನ ಸ್ಥಿತಿಗೆ ತಂದು ನಿಲ್ಲಿಸಿದರೂ ಆಶ್ಚರ್ಯವಿಲ್ಲ. ಭಾರತ ದೇಶ ಬಹುತ್ವದ ಸಮರ್ಥ ಪ್ರತಿನಿಧಿ. ಇದು ಗುಜರಾತ್‌ನಂತಹ ಒಂದು ರಾಜ್ಯದಂತಲ್ಲ. ಗುಜರಾತಿನಲ್ಲಿ ಮಾಡಿದ ಪ್ರಯೋಗಗಳು ಇಡೀ ಭಾರತದಲ್ಲಿ ನಡೆಸಿ ಯಶಸ್ವಿಯಾಗಲು ಸಾಧ್ಯವಿಲ್ಲ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಕಾಸದ ಮುಖವಾಡ ಕಳಚಿದೆ. ರಾಮನೂ ಅವರನ್ನು ಕಾಪಾಡಲಿಲ್ಲ. ಮೋದಿಯವರ ಅಭಿವೃದ್ಧಿಯಿಂದ ಜನ ಬೀದಿ ಪಾಲಾಗಿದ್ದಾರೆ. ಮೋದಿಯ ವರ್ಚಸ್ಸು, ಅಭಿವೃದ್ಧಿಯ ಸುಳ್ಳಿನ ಕಂತೆ ಮತದಾರರು ನಂಬುವುದಿಲ್ಲ ಎಂದು ಗೊತ್ತಾಗಿಯೇ ಕೊನೆಯ ಅಸ್ತ್ರವಾಗಿ ಹಿಂದೂ-ಮುಸ್ಲಿಮ್ ಧ್ರುವೀಕರಣದ ಹಳೆಯ ತಂತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್‌ನವರು ತುಸು ಯಾಮಾರಿದರೂ ಬಿಜೆಪಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಎಲ್ಲಕ್ಕೂ ಮಿಗಿಲಾಗಿ ಭಾರತ ಮತೀಯ ರಾಜಕಾರಣವನ್ನು ಒಪ್ಪುವುದಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ವಿಕಾಸದ ಮುಖವಾಡ ಕಳಚಿದೆ. ರಾಮನೂ ಅವರನ್ನು ಕಾಪಾಡಲಿಲ್ಲ. ಮೋದಿಯವರ ಅಭಿವೃದ್ಧಿಯಿಂದ ಜನ ಬೀದಿ ಪಾಲಾಗಿದ್ದಾರೆ. ಮೋದಿಯ ವರ್ಚಸ್ಸು, ಅಭಿವೃದ್ಧಿಯ ಸುಳ್ಳಿನ ಕಂತೆ ಮತದಾರರು ನಂಬುವುದಿಲ್ಲ ಎಂದು ಗೊತ್ತಾಗಿಯೇ ಕೊನೆಯ ಅಸ್ತ್ರವಾಗಿ ಹಿಂದೂ-ಮುಸ್ಲಿಮ್ ಧ್ರುವೀಕರಣದ ಹಳೆಯ ತಂತ್ರ ಬಳಸುತ್ತಿದ್ದಾರೆ. ಕಾಂಗ್ರೆಸ್‌ನವರು ತುಸು ಯಾಮಾರಿದರೂ ಬಿಜೆಪಿ ಲಾಭ ಮಾಡಿಕೊಳ್ಳುವ ಸಾಧ್ಯತೆ ಇದೆ. ಎಲ್ಲಕ್ಕೂ ಮಿಗಿಲಾಗಿ ಭಾರತ ಮತೀಯ ರಾಜಕಾರಣವನ್ನು ಒಪ್ಪುವುದಿಲ್ಲ.