ಸರಕಾರಿ ಶಾಲಾ ಕಾಲೇಜುಗಳಲ್ಲಿ ಅವ್ಯವಸ್ಥೆ
ಉತ್ತರ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿದ ರಾಜ್ಯ ಎನಿಸಿಕೊಳ್ಳುತ್ತದೆ. ಆದರೆ ಪಕ್ಕದ ಪುಟ್ಟ ರಾಜ್ಯ ಕೇರಳದ ಸಾಧನೆಗೆ ಹೋಲಿಸಿದರೆ ಸಾಧಿಸಬೇಕಾದದ್ದು ಬಹಳಷ್ಟು ಇದೆ ಎನಿಸುತ್ತದೆ. ಒಂದು ಕಾಲಕ್ಕೆ ಕರ್ನಾಟಕದ ಶಾಲಾ-ಕಾಲೇಜುಗಳು ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದ್ದವು. ಖಾಸಗಿ ಶಿಕ್ಷಣ ಸಂಸ್ಥೆಗಳು ನಾಯಿ ಕೊಡೆಗಳಂತೆ ತಲೆಯೆತ್ತ ತೊಡಗಿದಂತೆ, ಪೋಷಕರಲ್ಲಿ ಇಂಗ್ಲಿಷ್ ಮೋಹ ಆವರಿಸಿಕೊಳ್ಳುತ್ತಿದ್ದಂತೆ ಸರಕಾರಿ ಶಾಲಾ- ಕಾಲೇಜುಗಳು ಸ್ಪರ್ಧಿಸುವ ಚೈತನ್ಯವನ್ನೇ ಕಳೆದುಕೊಂಡವು. ಜಾಗತೀಕರಣದ ನಂತರ ಗ್ರಾಮೀಣ ಆರ್ಥಿಕತೆಯಲ್ಲಿ ಭಾರೀ ಪ್ರಮಾಣದಲ್ಲಿ ಸ್ಥಿತ್ಯಂತರ ಕಾಣಿಸಿಕೊಳ್ಳ ತೊಡಗಿತು. ಆಂಗ್ಲ ಮಾಧ್ಯಮದ ಪರ ನ್ಯಾಯಾಲಯಗಳ ತೀರ್ಪು ಹೊರಬರ ತೊಡಗಿದಂತೆ ಸರಕಾರಿ ಶಾಲಾ -ಕಾಲೇಜುಗಳು ಆಕರ್ಷಣೆ ಕಳೆದುಕೊಳ್ಳತೊಡಗಿದವು. ಕನ್ನಡ ಶಾಲೆಗಳನ್ನು ಮುಚ್ಚುವುದು, ವಿಲೀನಗೊಳಿಸುವ ಪ್ರಕ್ರಿಯೆ ತೀವ್ರಗೊಳ್ಳುತ್ತಿದ್ದಂತೆ ಸರಕಾರಿ ಶಾಲಾ-ಕಾಲೇಜುಗಳು ಅವ್ಯವಸ್ಥೆಯ ಆಗರವಾಗ ತೊಡಗಿದವು. ಕೇಂದ್ರ ಸರಕಾರದ ವ್ಯಾಪ್ತಿಯ ನವೋದಯ ಶಾಲೆಗಳು, ಕೇಂದ್ರೀಯ ವಿದ್ಯಾನಿಲಯಗಳು, ಅಷ್ಟೇ ಯಾಕೆ ಐಐಟಿ-ಕೇಂದ್ರೀಯ ವಿಶ್ವವಿದ್ಯಾನಿಲಯಗಳು ಈ ಹೊತ್ತಿಗೂ ಗುಣಮಟ್ಟದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿವೆ.
ಕರ್ನಾಟಕ ಸರಕಾರದ ವ್ಯಾಪ್ತಿಯ ಪ್ರಾಥಮಿಕ, ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಅಷ್ಟೇ ಯಾಕೆ ಪದವಿ ಕಾಲೇಜುಗಳೂ ಮೂಲಭೂತ ಸೌಕರ್ಯಗಳ ಕೊರತೆಯಿಂದ ತಮ್ಮ ಮೊದಲಿನ ವೈಭವವನ್ನು ಕಳೆದುಕೊಂಡಿವೆ. ಸರಕಾರಿ ವ್ಯವಸ್ಥೆಯ ಭಾಗವಾಗಿರುವ ವಸತಿ ನಿಲಯಗಳು, ಅಲ್ಲಿನ ಊಟ-ಉಪಾಹಾರದ ಗುಣಮಟ್ಟ ಪ್ರಾಣಿಗಳಿಗೂ ಇಷ್ಟವಾಗುವುದಿಲ್ಲ. ಸರಕಾರಿ ವ್ಯವಸ್ಥೆ ಮತ್ತು ಖಾಸಗಿ ವ್ಯವಸ್ಥೆಗಳ ಪರಸ್ಪರ ಪೈಪೋಟಿಯಲ್ಲಿ ಖಾಸಗಿ ಶಿಕ್ಷಣ ವ್ಯವಸ್ಥೆ ಮೇಲುಗೈ ಸಾಧಿಸಿದೆ. ನವೋದಯ ಮತ್ತು ಮೊರಾರ್ಜಿ ವಸತಿ ಶಾಲಾ ವ್ಯವಸ್ಥೆಯನ್ನು ಹೋಲಿಸಲಾಗದಷ್ಟು ವ್ಯತ್ಯಾಸ ಎದ್ದು ಕಾಣುತ್ತದೆ. ಬೀದರ್‌ನಿಂದ ಚಾಮರಾಜನಗರವರೆಗಿನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಎಷ್ಟೊಂದು ಹದಗೆಟ್ಟಿದೆಯೆಂದರೆ ಶಿಕ್ಷಣ ಮಂತ್ರಿಯಾದವರೂ ‘ಸರಿಪಡಿಸಲಾಗದು’ ಎಂದು ಕೈ ಚೆಲ್ಲಿ ಕುಳಿತುಕೊಳ್ಳುವಂತಾಗಿದೆ. ಹಾಗೆ ನೋಡಿದರೆ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಪ್ರತಿಭಾವಂತ ಶಿಕ್ಷಕರನ್ನು ನೇಮಿಸಿಕೊಂಡಿರುತ್ತಾರೆ. ಆ ಪ್ರತಿಭಾವಂತರಿಂದ ಕೆಲಸ ಮಾಡಿಸುವ ವ್ಯವಸ್ಥೆಯೇ ನಿರ್ಮಾಣವಾಗಿಲ್ಲ. ಖಾಸಗಿ ಶಾಲಾ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹೆಚ್ಚು ಪ್ರತಿಭಾವಂತರಿರುವುದಿಲ್ಲ. ಆದರೆ ಅಲ್ಲಿ ಬಿಗಿಯಾದ ಆಡಳಿತ ವ್ಯವಸ್ಥೆ ಇರುವುದರಿಂದ ತಂತಾನೇ ಶಿಸ್ತು ಕಾಣಿಸಿಕೊಳ್ಳುತ್ತದೆ. ಇದ್ದುದರಲ್ಲಿ ಕರಾವಳಿ ಕರ್ನಾಟಕದ ಸರಕಾರಿ ಶಾಲಾ-ಕಾಲೇಜುಗಳು ಅತ್ಯುತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಸರಕಾರಿ ಶಾಲಾ- ಕಾಲೇಜುಗಳ ಶಿಕ್ಷಕರಿಗೆ ಅತ್ಯುತ್ತಮ ಸಂಬಳ ಇರುತ್ತದೆ. ಆದರೆ ಖಾಸಗಿ ಶಾಲಾ-ಕಾಲೇಜುಗಳ ಅಧ್ಯಾಪಕರು ಕಡಿಮೆ ಸಂಬಳದಲ್ಲಿ ಹೆಚ್ಚು ದುಡಿಯುತ್ತಾರೆ. ಸರಕಾರಿ ಶಾಲಾ ಕಾಲೇಜುಗಳಲ್ಲಿ ನೌಕರಿಗೆ ಸೇರುವ ಮುನ್ನ ಶಿಕ್ಷಕರು ಪ್ರತಿಭಾವಂತರೂ, ಕ್ರಿಯಾಶೀಲರೂ ಆಗಿರುತ್ತಾರೆ. ಒಮ್ಮೆ ಖಾಯಂ ನೌಕರಿ ದೊರೆತ ಮೇಲೆ ಅವರ ಕ್ರಿಯಾಶೀಲತೆ ಕುಗ್ಗುತ್ತದೆ. ಸೋಂಬೇರಿಗಳಾಗುತ್ತಾರೆ. ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಮೈಗಳ್ಳ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಲು ಹೆದರುತ್ತಾರೆ. ಒಂದು ವೇಳೆ ಕ್ರಮ ಜರುಗಿಸಿದರೂ ಮೇಲಧಿಕಾರಿಯ ಬೆಂಬಲ ಪಡೆದು ಬಚಾವ್ ಆಗುತ್ತಾರೆ. ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಕೇವಲ ಶಿಕ್ಷಕರನ್ನು ಮಾತ್ರ ಕಟಕಟೆಯಲ್ಲಿ ನಿಲ್ಲಿಸಿದರೆ ಸಾಲದು. ಮಂತ್ರಿಯಿಂದ ಹಿಡಿದು ಎಲ್ಲ ಸ್ತರಗಳ ಅಧಿಕಾರಿಗಳು ಸಂವೇದನಶೀಲರೂ, ಜವಾಬ್ದಾರಿಯುತವಾಗಿಯೂ ನಡೆದುಕೊಳ್ಳುವ ಅಗತ್ಯವಿದೆ. ಖಾಸಗಿ ಶಾಲಾ-ಕಾಲೇಜುಗಳು ಮೂಲಭೂತ ಸೌಕರ್ಯಗಳಿಗೆ ಮೊದಲ ಆದ್ಯತೆ ಕೊಡುತ್ತವೆ. ಅತ್ಯುತ್ತಮ ಶಾಲಾ ಕಟ್ಟಡಗಳು, ಸುಸಜ್ಜಿತ ಕೊಠಡಿಗಳು, ಶೌಚಾಲಯ ವ್ಯವಸ್ಥೆ, ಅತ್ಯುತ್ತಮ ಗ್ರಂಥಾಲಯ, ವಸತಿ ಶಾಲೆಗಳಾದರೆ ಅತ್ಯುತ್ತಮ ಊಟ, ವಸತಿ ಕಲ್ಪಿಸಿರುತ್ತಾರೆ. ಆಡಳಿತ ವ್ಯವಸ್ಥೆ ಬಿಗಿಯಾಗಿರುವುದರಿಂದ ಎಲ್ಲ ಸಿಬ್ಬಂದಿ ಕರ್ತವ್ಯ ಪಾಲನೆಯಲ್ಲಿ ಲೋಪಗಳಿಗೆ ಅವಕಾಶ ಕೊಡುವುದಿಲ್ಲ. ತಮ್ಮದೇ ಮನೆಯ ಕೆಲಸ ಎಂಬ ಭಾವದಲ್ಲಿ ದುಡಿಯುತ್ತಾರೆ. ನೌಕರಿಯ ಭದ್ರತೆ ಅತ್ಯುತ್ತಮ ನಿರ್ವಹಣೆಯನ್ನು ಅವಲಂಬಿಸಿರುವುದರಿಂದ ಯಾರೂ ಕೆಲಸ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ. ಅಷ್ಟಕ್ಕೂ ಖಾಸಗಿಯವರು ಹಣಕ್ಕಾಗಿ ಶಿಕ್ಷಣ ನೀಡುತ್ತಿರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ತೃಪ್ತಿಪಡಿಸಲು ಹೆಣಗಾಡುತ್ತಿರುತ್ತಾರೆ. ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ಬರುವ ಶಾಲೆಗಳತ್ತ ಆಕರ್ಷಿತರಾಗುವುದರಿಂದ ಶಿಕ್ಷಕ ಸಮುದಾಯ ಫಲಿತಾಂಶವನ್ನೇ ಗುರಿಯಾಗಿಟ್ಟುಕೊಂಡು ಹಗಲಿರುಳು ಶ್ರಮಿಸುತ್ತಿರುತ್ತಾರೆ. ಖಾಸಗಿ ಶಿಕ್ಷಣ ಸಂಸ್ಥೆಯು ಕೆಲವೇ ಜನರ ಮೇಲುಸ್ತುವಾರಿಯಲ್ಲಿ ಕ್ರಿಯಾಶೀಲವಾಗಿರುತ್ತದೆ. ಅಷ್ಟು ಮಾತ್ರವಲ್ಲ ಕೆಳಸ್ತರದ ಎಲ್ಲರಿಗೂ ಹೊಣೆಗಾರಿಕೆಯನ್ನು ನಿಗದಿಪಡಿಸುವುದರಿಂದ ಅವರವರ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಯತ್ನಿಸುತ್ತಾರೆ. ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಇದ್ದಾಗ ಕಠಿಣ ಕ್ರಮ ಜರುಗಿಸುವ ಸಾಧ್ಯತೆ ಇರುತ್ತದೆ. ಉದ್ಯೋಗ ಕಳೆದುಕೊಳ್ಳುವ ಭೀತಿ ಇರುವುದರಿಂದ ಯಾರೂ ಉಡಾಫೆಯಿಂದ ಕರ್ತವ್ಯ ನಿರ್ವಹಿಸುವುದಿಲ್ಲ.
ಖಾಸಗಿ ಶಿಕ್ಷಣ ಸಂಸ್ಥೆಯ ಮಾಲಕರು, ಆಡಳಿತ ಮಂಡಳಿಗೆ ತಮ್ಮ ಸಂಸ್ಥೆಯ ರೆಪ್ಯುಟೇಶನ್ ಉಳಿಸಿಕೊಳ್ಳುವುದು ಮೊದಲ ಆದ್ಯತೆ ಯಾಗಿರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಗುಣಮಟ್ಟದ ಸ್ಪರ್ಧೆ ಇರುವುದರಿಂದ ಪ್ರತೀ ಶಿಕ್ಷಣ ಸಂಸ್ಥೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುತ್ತಿರುವುದಾಗಿ ಬಡಾಯಿ ಕೊಚ್ಚಿಕೊಳ್ಳಲು ನಿತ್ಯ ಹವಣಿಸುತ್ತಿರುತ್ತದೆ. ಪ್ರಚಾರ ಮಾಡಿಕೊಂಡಷ್ಟು ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗದಿದ್ದರೂ ತೋರಿಕೆಗಾದರೂ ಗುಣಮಟ್ಟ ಕಾಯ್ದುಕೊಳ್ಳಬೇಕಾಗುತ್ತದೆ. ಪ್ರತೀ ವರ್ಷ ಶೈಕ್ಷಣಿಕ ಚಟುವಟಿಕೆ ಆರಂಭಿಸುವ ಮುನ್ನ ಪರೀಕ್ಷೆ ಫಲಿತಾಂಶವನ್ನು ಡಂಗುರ ಸಾರಿ ವಿದ್ಯಾರ್ಥಿಗಳನ್ನು ಸೆಳೆಯಬೇಕಾಗುತ್ತದೆ. ಶ್ರೀಮಂತ ವಿದ್ಯಾರ್ಥಿಗಳು ಪ್ರವೇಶ ಪಡೆದರೇನೇ ಹಣ ಹರಿದು ಬರುತ್ತದೆ. ಉತ್ತಮ ಫಲಿತಾಂಶ ಬರಬೇಕೆಂದರೆ ಶಿಕ್ಷಕರು ಪಾಠಗಳನ್ನು ಮನನ ಮಾಡಿಸಬೇಕು. ಶಿಕ್ಷಣ ತಜ್ಞರು ಎನಿಸಿಕೊಂಡವರು ಉತ್ತಮ ಫಲಿತಾಂಶಕ್ಕಾಗಿ ಅನುಸರಿಸಬೇಕಾದ ಕಲಿಕಾ ವಿಧಾನಗಳನ್ನು ಹೇಳಿಕೊಡುತ್ತಾರೆ. ಮೂಲಭೂತ ಸೌಕರ್ಯಗಳ ಜೊತೆಗೆ ಅತ್ಯುತ್ತಮ ಕಲಿಕಾ ಪದ್ಧತಿಗಳನ್ನು ಅಳವಡಿಸಿಕೊಂಡರೆ ನಿರೀಕ್ಷಿತ ಫಲಿತಾಂಶ ಬಂದೇ ಬರುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕರನ್ನು ಪಾಠ ಪ್ರವಚನದಲ್ಲಿ ಮಾತ್ರ ತೊಡಗಿಸಿರುತ್ತಾರೆ. ಅಷ್ಟೇನೂ ಪ್ರತಿಭಾವಂತರಲ್ಲದ ಶಿಕ್ಷಕರು ನಿರಂತರ ತೊಡಗಿಸಿಕೊಳ್ಳುವಿಕೆಯಲ್ಲಿ ಪರಿಪೂರ್ಣವಾಗುತ್ತಾರೆ. ಯಂತ್ರದಂತೆ ದುಡಿಯುವುದರಿಂದ ಮತ್ತು ಫಲಿತಾಂಶವನ್ನು ಬೆನ್ನಟ್ಟಿ ಓಡುವುದರಿಂದ ಗುರಿ ಸಾಧನೆ ಸರಳವಾಗುತ್ತದೆ.
ಸರಕಾರಿ ಶಾಲಾ ಕಾಲೇಜುಗಳಲ್ಲಿ ಒಂದು ವ್ಯವಸ್ಥೆ ಎಂಬುದೇ ಇರುವುದಿಲ್ಲ. ಎಲ್ಲಾ ಶಾಲಾ-ಕಾಲೇಜುಗಳು ಅವ್ಯವಸ್ಥೆಯ ಆಗರವಾಗಿವೆ ಎಂದು ಹೇಳಲಾಗದು. ಆದರೆ ಬಹುಪಾಲು ಸರಕಾರಿ ಶಾಲಾ-ಕಾಲೇಜುಗಳಲ್ಲಿ ಅರಾಜಕತೆ ತಾಂಡವವಾಡುತ್ತಿರುತ್ತದೆ. ಮುಖ್ಯಸ್ಥರ ಮಾತು ಶಿಕ್ಷಕರು ಕೇಳದಿದ್ದರೆ ಅಲ್ಲಿ ಕಠಿಣ ಕ್ರಮ ಜರುಗಿಸುವ ವ್ಯವಸ್ಥೆ ಇರುವುದಿಲ್ಲ. ಮೇಲಧಿಕಾರಿಗಳ ಮಿತಿಮೀರಿದ ಭ್ರಷ್ಟಾಚಾರ ಮೈಗಳ್ಳ ಶಿಕ್ಷಕರಿಗೆ ವರವಾಗಿ ಪರಿಣಮಿಸುತ್ತದೆ. ಸೇವಾ ಮನೋಭಾವದಿಂದ ದುಡಿಯುವ ಶಿಕ್ಷಕರು ಇದ್ದಾರೆಂದೇ ಭಾವಿಸೋಣ; ಅಲ್ಲಿ ಮೂಲಭೂತ ಸೌಕರ್ಯಗಳು ಇರುವುದಿಲ್ಲ. ನಮ್ಮ ಜನಪ್ರತಿನಿಧಿಗಳು ತಮ್ಮ ಸ್ವಂತ ಮನೆ ಕಟ್ಟಿಸುವಾಗ ತೋರುವ ಕಾಳಜಿ ಸರಕಾರಿ ಶಾಲಾ-ಕಾಲೇಜು ಕಟ್ಟಡ ನಿರ್ಮಿಸುವಾಗ ತೋರುವುದಿಲ್ಲ. ಎಷ್ಟೋ ಕಡೆ ಕಟ್ಟಡವನ್ನು ಬೇಕಾಬಿಟ್ಟಿಯಾಗಿ, ನಿಜ ಹೇಳಬೇಕೆಂದರೆ ಗುತ್ತಿಗೆದಾರರ ಲಾಭಕ್ಕಾಗಿ ಕಟ್ಟಿರುತ್ತಾರೆ. ಖಾಸಗಿ ಶಾಲಾ-ಕಾಲೇಜುಗಳ ಕಟ್ಟಡಕ್ಕೂ ಸರಕಾರಿ ಕಟ್ಟಡಕ್ಕೂ ಅಜಗಜಾಂತರವಿರುತ್ತದೆ. ಸರಕಾರಿ ಶಾಲಾ-ಕಾಲೇಜು ಕಟ್ಟಡಗಳು ಕಟ್ಟಿದ ಒಂದೆರಡು ವರ್ಷಗಳಲ್ಲಿ ಶಿಥಿಲಾವಸ್ಥೆಗೆ ತಲುಪುತ್ತವೆ. ಸೌಂದರ್ಯ ಪ್ರಜ್ಞೆ ಅಲ್ಲಲ್ಲಿ ಸಂಪೂರ್ಣ ಗೈರುಹಾಜರಾಗಿರುತ್ತದೆ. ಸರಕಾರಿ ಶಾಲಾ-ಕಾಲೇಜು ಕಟ್ಟಡಗಳನ್ನು ವಿದ್ಯಾದೇಗುಲಗಳು ಎಂಬ ಪವಿತ್ರ ಭಾವನೆಯಿಂದ ನಿರ್ಮಿಸಿರುವುದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಕಮಿಷನ್ ಆಸೆಗಾಗಿ ಕಾಟಾಚಾರದ ಕಟ್ಟಡ ನಿರ್ಮಿಸಿರುತ್ತಾರೆ. ಶೌಚಾಲಯ ವ್ಯವಸ್ಥೆ ಕಲ್ಪಿಸಿದರೂ ನೀರು ಸರಬರಾಜು ಇರುವುದಿಲ್ಲ. ಆ ಶಾಲಾ ಪರಿಸರವೇ ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಸೋಂಬೇರಿಯನ್ನಾಗಿಸುತ್ತದೆ. ಸರಕಾರಿ ಶಾಲಾ-ಕಾಲೇಜು ಶಿಕ್ಷಕರನ್ನು ಕೇವಲ ಕಲಿಕೆಗೆ ಮಾತ್ರ ಸೀಮಿತಗೊಳಿಸುವುದಿಲ್ಲ. ಸರಕಾರ ನಿಗದಿಪಡಿಸುವ ಎಲ್ಲಾ ಕೆಲಸಗಳನ್ನೂ ಒಪ್ಪಿಕೊಳ್ಳಲೇಬೇಕು. ಎಲ್ಲಕ್ಕೂ ಮೀರಿದ್ದು ಶಿಕ್ಷಣ ಇಲಾಖೆಯಲ್ಲಿನ ಭ್ರಷ್ಟಾಚಾರ. ಒಂದು ಇನ್‌ಕ್ರಿಮೆಂಟ್ ಪಡೆದುಕೊಳ್ಳಲು ಶಿಕ್ಷಕರಾದವರು ಪರದಾಡಬೇಕು. ಇಲ್ಲ ಮೇಲಧಿಕಾರಿಗಳಿಗೆ ಲಂಚ ಕೊಡಬೇಕು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗಳನ್ನು ಕಲಿಕಾ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿ ನೀಡುವುದಿಲ್ಲ. ಶಾಸಕ, ಮಂತ್ರಿಗಳ ಶಿಫಾರಸನ್ನು ಆಧರಿಸಿ ಪ್ರಶಸ್ತಿ ನೀಡುವ ಪರಿಪಾಠ ಇರುವುದರಿಂದ ರಾಜಕಾರಣಿಗಳಿಗೆ ಬೇಕಾದವರು ಪಾಠ ಮಾಡದೆಯೂ ಅತ್ಯುತ್ತಮ ಶಿಕ್ಷಕರು ಎನಿಸಿಕೊಳ್ಳುತ್ತಾರೆ.
ನಿಜವಾಗಿಯೂ ನಿಯಮಿತವಾಗಿ ಅತ್ಯುತ್ತಮ ಪಾಠ ಮಾಡುವವರು ಪ್ರಶಸ್ತಿಗಳಿಂದ ವಂಚಿತರಾಗುವುದರಿಂದ ಕ್ರಮೇಣ ಅವರಲ್ಲಿ ನಿರಾಸಕ್ತಿ ಆವರಿಸಿಕೊಳ್ಳುತ್ತದೆ. ಪ್ರತಿಭಾವಂತರೂ, ಕ್ರಿಯಾಶೀಲರೂ ಆಗಿರುವ ಶಿಕ್ಷಕರಿಗೆ ಪ್ರೋತ್ಸಾಹ, ಉತ್ತೇಜನ ಇಲ್ಲದಿರುವುದರಿಂದ ಅವರೂ ಜಡ್ಡುಗಟ್ಟಿದ ವ್ಯವಸ್ಥೆಯ ಭಾಗವಾಗುತ್ತಾರೆ. ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಶಾಲಾ-ಕಾಲೇಜು ಕಟ್ಟಡ, ಎಲ್ಲಾ ಸವಲತ್ತುಗಳು, ಉತ್ತಮ ಪಾಠ ಮಾಡುವ ಶಿಕ್ಷಕರು ಇದ್ದಾರೆಂದೇ ಭಾವಿಸೋಣ. ಆಗ ವಿದ್ಯಾರ್ಥಿಗಳ ಕೊರತೆ ಎದ್ದು ಕಾಣುತ್ತದೆ. ವಿಶೇಷವಾಗಿ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಜನ ಕೆಲಸ ಹುಡುಕಿ ಗೋವಾ, ಮುಂಬೈ, ಬೆಂಗಳೂರಿಗೆ ವಲಸೆ ಹೋಗುವುದರಿಂದ ‘ಡ್ರಾಪ್ ಔಟ್’ ಪ್ರಮಾಣ ಹೆಚ್ಚುತ್ತದೆ. ಸರಕಾರಿ ಶಾಲಾ-ಕಾಲೇಜುಗಳಿಗೆ ಬಡವರ ಮಕ್ಕಳು ಮಾತ್ರ ಪ್ರವೇಶ ಪಡೆದಿರುತ್ತಾರೆ. ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಿದರೆ ಸರಕಾರಿ ಶಾಲಾ-ಕಾಲೇಜುಗಳು ತುಂಬಿ ತುಳುಕಬಹುದೆಂದೇ ಶಿಕ್ಷಣ ಇಲಾಖೆಯ ಅಧಿಕಾರಿಗಳು ಬಲವಾಗಿ ನಂಬಿದ್ದರು. ಈಗ ಸರಕಾರಿ ಶಾಲಾ-ಕಾಲೇಜುಗಳು ಆಂಗ್ಲ ಮಾಧ್ಯಮದ ಶಾಲೆಗಳಾಗಿವೆ. ಪರಿಸ್ಥಿತಿಯೇನೋ ಸುಧಾರಿಸಿಲ್ಲ. ಆಂಗ್ಲ ಮಾಧ್ಯಮದಲ್ಲಿ ಪಾಠ ಮಾಡುವವರು ಸರಕಾರಿ ಶಾಲಾ-ಕಾಲೇಜುಗಳಲ್ಲಿ ದೊರೆಯುವುದಿಲ್ಲ. ಈಗಾಗಲೇ ನೇಮಕಗೊಂಡ ಶಿಕ್ಷಕರು ಆ ಕೆಲಸ ಮಾಡುತ್ತಿದ್ದಾರೆ. ಸರಕಾರಿ ಶಾಲೆ, ಕಾಲೇಜು, ಆಸ್ಪತ್ರೆಗಳ ಬಗೆಗಿನ ದೃಷ್ಟಿಕೋನ ಬದಲಾಗಬೇಕಾಗಿದೆ. ಅಲ್ಲಿಯ ಗುಣಮಟ್ಟ ಕುಸಿಯುವುದಕ್ಕೆ ಕಾರಣ; ಅವುಗಳ ಬಗೆಗೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇಲ್ಲದಿರುವುದರಿಂದ.
ಶಾಸಕರು, ಮಂತ್ರಿಗಳು, ಜಿ.ಪಂ. ಸದಸ್ಯರು, ಅಷ್ಟೇ ಯಾಕೆ ಸರಕಾರಿ ಶಾಲಾ-ಕಾಲೇಜುಗಳ ಶಿಕ್ಷಕರೇ ತಮ್ಮ ಮಕ್ಕಳನ್ನು ಅಲ್ಲಿ ಓದಿಸಲು ಇಷ್ಟಪಡುವುದಿಲ್ಲ. ಯಾವೊಬ್ಬ ಹಿರಿಯ ಅಧಿಕಾರಿಯೂ ಕಾಯಿಲೆ ಬಂದಾಗ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗುವುದಿಲ್ಲ. ಮೊದಲು ಜನಪ್ರತಿನಿಧಿಗಳು, ಸರಕಾರಿ ಅಧಿಕಾರಿಗಳು ಸರಕಾರಿ ಶಾಲಾ-ಕಾಲೇಜುಗಳಲ್ಲಿ ತಮ್ಮ ಮಕ್ಕಳನ್ನು ದಾಖಲು ಮಾಡಿದರೆ ಶಿಕ್ಷಕ ಸಮುದಾಯ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗುತ್ತಾರೆ. ಬಹುತೇಕ ರಾಜಕಾರಣಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲಕರಾಗಿರುವುದರಿಂದ ಸಹಜವಾಗಿಯೇ ಸರಕಾರಿ ಶಾಲಾ-ಕಾಲೇಜುಗಳು ಅವಜ್ಞೆಗೆ ಈಡಾಗುತ್ತವೆ. ಕೇರಳದಲ್ಲಿ ಸರಕಾರಿ ಶಾಲಾ-ಕಾಲೇಜುಗಳು ಮತ್ತು ಆಸ್ಪತ್ರೆಗಳು ಜನಸಾಮಾನ್ಯರನ್ನು ಆಕರ್ಷಿಸುವಷ್ಟು ಗುಣಮಟ್ಟ ಕಾಯ್ದುಕೊಂಡಿವೆ. ಕರ್ನಾಟಕದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಮತ್ತು ಪದವಿ ಶಿಕ್ಷಣಕ್ಕಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡುತ್ತಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಸಾವಿರಾರು ಹಾಸ್ಟೆಲ್‌ಗಳಿವೆ. ಅದಕ್ಕೂ ಕೋಟಿ ಕೋಟಿ ಹಣವನ್ನು ವ್ಯಯ ಮಾಡುತ್ತಿದ್ದಾರೆ. ಹಾಸ್ಟೆಲ್‌ಗಳ ವ್ಯವಸ್ಥೆಯನ್ನು ಪರಿಶೀಲಿಸಲು ಡಾ. ಎಚ್.ಸಿ. ಮಹದೇವಪ್ಪ, ಶಿವರಾಜ ತಂಗಡಗಿಯವರು ಅದೆಷ್ಟು ಬಾರಿ ಭೇಟಿ ನೀಡಿದ್ದಾರೋ? ಅವರ ಮನೆಯ ಮಕ್ಕಳು ತಿನ್ನಬಹುದಾದ ಊಟ ಅಲ್ಲಿ ಸಿಗುವುದಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಯವರು ನಡೆಸುವ ವಿದ್ಯಾರ್ಥಿ ನಿಲಯಗಳು ಅತ್ಯುತ್ತಮ ಗುಣಮಟ್ಟದ ಊಟ-ಉಪಾಹಾರ ಕೊಡಲು ಸಾಧ್ಯವಾಗುತ್ತದೆಯೆಂದರೆ; ಸರಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಯಾಕೆ ಕೊಡಲು ಸಾಧ್ಯವಾಗುತ್ತಿಲ್ಲ? ಯಾಕೆಂದರೆ ಅಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಧಿಕಾರಿಗಳ ವರ್ಗಾವಣೆಗೂ ಲಂಚ. ಲಂಚ ಕೊಟ್ಟಾತ ಮಕ್ಕಳ ಅನ್ನಕ್ಕೂ ಬಾಯಿ ಹಾಕುತ್ತಾನೆ.
ಈ ಹೊತ್ತಿಗೂ ಕೇಂದ್ರ ಸರಕಾರದ ಅಧೀನದಲ್ಲಿ ಕಾರ್ಯನಿರ್ವ ಹಿಸುತ್ತಿರುವ ನವೋದಯ ಶಾಲೆಗಳು ಯಾವ ಖಾಸಗಿಯವರಿಗೂ ಕಮ್ಮಿ ಇಲ್ಲದಂತೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿದೆ. ಅವು ವಸತಿ ಸಹಿತ ಶಾಲೆಗಳು. ಗುಣಮಟ್ಟದ ಆಹಾರ ನೀಡುತ್ತಾರೆ. ಸರಕಾರಿ ಶಾಲೆ, ಕಾಲೇಜು, ಆಸ್ಪತ್ರೆ ಸೇರಿದಂತೆ ಸರಕಾರಿಮಯವಾದ ಎಲ್ಲವೂ ಕಳಪೆ ಗುಣಮಟ್ಟದ್ದು ಆಗಲು ಸರಕಾರಗಳೇ ಕಾರಣ. ನವೋದಯ ಶಾಲೆಗಳನ್ನು ಸ್ವಂತ ಮನೆ ಕಟ್ಟಿದ ಹಾಗೆ ಕಟ್ಟುತ್ತಾರೆ. ಮಧು ಬಂಗಾರಪ್ಪ, ಎಂ.ಸಿ. ಸುಧಾಕರ್ ಅವರು ಒಮ್ಮೆ ಎಲ್ಲಾ ಸರಕಾರಿ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಲಿ. ಅಲ್ಲಿ ತಮ್ಮ ಮನೆಯ ಮಕ್ಕಳು ಓದಬಹುದೇ ಎಂದು ಪ್ರಶ್ನಿಸಿಕೊಳ್ಳಲಿ. ಮೊದಲೆಲ್ಲ ಬಡವರ ಮಕ್ಕಳು, ಅಧಿಕಾರಿ, ಶಾಸಕರ ಮಕ್ಕಳು ಸರಕಾರಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪೂರೈಸುತ್ತಿದ್ದರು.
ಈಗಲೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಎಲ್ಲಾ ಮಂತ್ರಿಗಳು ಸರಕಾರಿ ಶಾಲಾ-ಕಾಲೇಜು, ಆಸ್ಪತ್ರೆ ಸೇರಿದಂತೆ ಎಲ್ಲಾ ಸರಕಾರಿ ವ್ಯವಸ್ಥೆಯ ಬಗೆಗಿನ ದೃಷ್ಟಿಕೋನ ಬದಲಿಸಬಹುದಾಗಿದೆ. ಜನ ಪ್ರತಿನಿಧಿಗಳಿಗೆ ಅವುಗಳಲ್ಲಿ ನಂಬಿಕೆ ಇರಬೇಕು. ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಜ್ಞಾನ ದೇಗುಲಗಳ ನಿರ್ಮಾಣದಲ್ಲಿ ಲಂಚ ಹೊಡೆಯುವುದು ನಿಲ್ಲಿಸಿದರೆ ಸರಕಾರಿ ಶಾಲಾ-ಕಾಲೇಜುಗಳಿಗೆ ನವೋದಯ ಶಾಲೆಗಳಿಗಿಂತಲೂ ಹೆಚ್ಚು ಬೇಡಿಕೆ ಬರುತ್ತದೆ. ಬೆಂಗಳೂರಿನ ಜಯದೇವ ಆಸ್ಪತ್ರೆಯೂ ‘ಸರಕಾರಿ’. ಅಲ್ಲಿ ಗುಣಮಟ್ಟವನ್ನು ಎಲ್ಲಾ ಹಂತಗಳಲ್ಲಿ ಕಾಪಾಡಿಕೊಳ್ಳಲಾಗಿದೆ. ಅದೇ ಮಾದರಿಯಲ್ಲಿ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸಿ ನಿರ್ವಹಣೆ ಮಾಡಬಹುದಲ್ಲವೇ? ಕೇರಳದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಹೆಚ್ಚು ಜನ ಅವಲಂಬಿಸಿದ್ದಾರೆ. ಬೆಂಗಳೂರು ಜಯದೇವ ಗುಣಮಟ್ಟವನ್ನು ಕಲಬುರಗಿಯಲ್ಲಿ ಕಾಯ್ದುಕೊಂಡಿಲ್ಲ. ಕಲಬುರಗಿ, ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲರ ಊರು. ಅಲ್ಲಿಯ ಜಯದೇವ ಆಸ್ಪತ್ರೆಯ ದುರ್ಗತಿಗೆ ಯಾರು ಹೊಣೆ?
‘ಸರಕಾರಿ ಕೆಲಸ ದೇವರ ಕೆಲಸ’ ಎಂದು ವಿಧಾನಸೌಧದ ಮೇಲ್ಭಾಗದಲ್ಲಿ ಬರೆಯಲಾಗಿದೆ. ಸರಕಾರಿ ಶಾಲಾ-ಕಾಲೇಜು, ಆಸ್ಪತ್ರೆ ಹಾಗೂ ಇನ್ನಿತರ ಸರಕಾರಿ ಕಟ್ಟಡಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ ನಿರ್ಮಿಸುವುದು, ನಿರ್ವಹಿಸುವುದು ದೇವರ ಕೆಲಸವೇ. ತಮ್ಮ ಮನೆಯ ನಿರ್ಮಾಣದಲ್ಲಿ ತೋರುವ ಆಸಕ್ತಿ, ಪ್ರೀತಿ, ಸೌಂದರ್ಯ ಪ್ರಜ್ಞೆ ಸರಕಾರಿ ಕಟ್ಟಡಗಳ ನಿರ್ಮಾಣಗಳಲ್ಲಿ ವ್ಯಕ್ತವಾದರೆ ಎಲ್ಲರೂ ಸರಕಾರಿ ವ್ಯವಸ್ಥೆಯನ್ನೇ ಅವಲಂಬಿಸುತ್ತಾರೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಸಾಧ್ಯವಾದದ್ದು ಎಲ್ಲರಿಗೂ ಸಾಧ್ಯವಾಗಬೇಕು.