ಸಿದ್ದರಾಮಯ್ಯ ವಿರುದ್ಧ ‘ಷಡ್ಯಂತ್ರ’!!
ಸಿದ್ದರಾಮಯ್ಯನವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಶಾಸಕರ ಸಂಖ್ಯೆ 122 ಇತ್ತು. ಆಗ ಕೇಂದ್ರದಲ್ಲಿ ಸರಳ ಬಹುಮತದ ಬಿಜೆಪಿ ಸರಕಾರವಿತ್ತು. ನರೇಂದ್ರ ಮೋದಿಯವರ ಜನಪ್ರಿಯತೆ ಈ ಗಿನಕ್ಕಿಂತ ಜಾಸ್ತಿ ಇತ್ತು. ಯುಪಿಐ ಸರಕಾರ ನೇಮಿಸಿದ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರ ಅಧಿಕಾರಾವಧಿ ಜೂನ್, 28 2014 ಕ್ಕೆ ಮುಗಿದಿತ್ತು. ಭಾರದ್ವಾಜ್ ಅವರ ಜಾಗದಲ್ಲಿ ಕೇಂದ್ರದ ಮೋದಿ ಸರಕಾರ ಗುಜರಾತ್ ರಾಜ್ಯದ ವಜೂಬಾಯಿ ವಾಲಾ ಅವರನ್ನು ಕೂರಿಸಿತ್ತು. ಅಷ್ಟಕ್ಕೂ ವಜೂಬಾಯಿ ವಾಲಾ ಅವರು ಮೋದಿಯವರ ಪರಮಾಪ್ತ ಬೇರೆ. ಸಿದ್ದರಾಮಯ್ಯನವರು ನಾಲ್ಕು ವರ್ಷಗಳ ಕಾಲ ಕೇಂದ್ರದ ಅದರಲ್ಲೂ ಮೋದಿಯವರ ಇಷಾರೆಯ ಮೇರೆಗೆ ಕಾರ‌್ಯನಿರ್ವಹಿಸುವ ರಾಜ್ಯಪಾಲರ ಜೊತೆಗೆ ಏಗಬೇಕಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ಯಶಸ್ವಿಯಾಗಿ ಅಧಿಕಾರಾವಧಿ ಪೂರ್ಣಗೊಳಿಸಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಸಂಸದರ ಬಲ 44ಕ್ಕೆ ಕುಸಿದಿತ್ತು. ಅದರಲ್ಲಿ ಕರ್ನಾಟಕದ 9 ಸಂಸದರು ಸೇರಿದ್ದರು. ಸಂಖ್ಯಾಬಲ ಕಡಿಮೆ ಇರುವುದರಿಂದ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಮಾನವೂ ದೊರೆತಿರಲಿಲ್ಲ. ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆಯವರು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಆಯ್ಕೆಯಾಗಿದ್ದರು.
ಮೊದಲ ಅವಧಿಯಲ್ಲಿ ಸಿದ್ದರಾಮಯ್ಯನವರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿತ್ತು. ಯಾರನ್ನ್ನೂ ಉಪಮುಖ್ಯಮಂತ್ರಿಯನ್ನಾಗಿ ಮಾಡಿರಲಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ಕಾರ‌್ಯನಿರ್ವಹಿಸಿದ್ದ ಡಾ.ಜಿ. ಪರಮೇಶ್ವರ್ ಅವರು ಚುನಾವಣೆಯಲ್ಲಿ ಸೋತಿದ್ದರಿಂದ ಮಂತ್ರಿಯೂ ಆಗಿರಲಿಲ್ಲ . ಗೆದ್ದಿದ್ದ ಡಿ.ಕೆ.ಶಿವಕುಮಾರ್ ಅವರಿಗೂ ಆರಂಭದ ದಿನಗಳಲ್ಲಿ ಮಂತ್ರಿ ಗಿರಿ ದೊರೆತಿರಲಿಲ್ಲ. ನಂತರ ಪರಮೇಶ್ವರ್ ಮತ್ತು ಡಿ.ಕೆ. ಶಿವಕುಮಾರ್ ಅವರು ಸಿದ್ದರಾಮಯ್ಯ ಸಂಪುಟ ಸೇರಿಕೊಂಡರು. ಹಾಗೆ ನೋಡಿದರೆ 40 ಶಾಸಕ ಬಲದ ಜಾತ್ಯತೀತ ಜನತಾದಳ ಅಧಿಕೃತ ವಿರೋಧ ಪಕ್ಷದ ನಾಯಕ ಸ್ಥಾನ ಹೊಂದಿತ್ತು. ಆ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರೇ ಕೆಲಕಾಲ ಅಧಿಕೃತ ವಿರೋಧ ಪಕ್ಷದ ನಾಯಕರಾಗಿದ್ದರು. ದಾಖಲೆ ಹೊರತೆಗೆಯುವುದರಲ್ಲಿ ನಿಸ್ಸೀಮರಾಗಿದ್ದ ಕುಮಾರಸ್ವಾಮಿಯವರು ಆಗ ಸಿದ್ದರಾಮಯ್ಯನವರನ್ನು ಕಟ್ಟಿ ಹಾಕಲು ಸಾಧ್ಯವಾಗಲೇ ಇಲ.್ಲ ಸಿದ್ದರಾಮಯ್ಯನವರು ಧರಿಸಿದ್ದ ರೂ. 70ಲಕ್ಷ ಮೌಲ್ಯದ ಹ್ಯೂಬ್ಲೊಟ್ ಗಡಿಯಾರ ಪ್ರಕರಣ ದೊಡ್ಡದಾಗಿ ಸದ್ದು ಮಾಡಿತು. ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆ ದುಬಾರಿ ಗಡಿಯಾರವನ್ನು ವಿಧಾನ ಸಭಾ ಸ್ಪೀಕರ್ ಕಛೇರಿಗೆ ಒಪ್ಪಿಸಿದ್ದರಿಂದ ಪ್ರಕರಣ ಅಲ್ಲಿಗೆ ಕೊನೆಗೊಂಡಿತು . ಬಿಜೆಪಿ -
ಕೆಜೆಪಿ ಒಂದಾದ ಮೇಲೆ ಬಿಜೆಪಿಯ ಜಗದೀಶ್ ಶೆಟ್ಟರ್ ಅಧಿಕೃತ ವಿರೋಧ ಪಕ್ಷದ ನಾಯಕರಾದರು. ಸರಕಾರದ ,
ಮಂತ್ರಿಗಳ ಕಾರ‌್ಯ ವೈಖರಿ ವಿರುದ್ಧ ಪ್ರತಿಪಕ್ಷಗಳು ನಿರಂತರ ಸಮರ ಸಾರುತ್ತಿದ್ದವು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಗಂಭೀರ ಪ್ರಯತ್ನ ನಡೆದಿರಲಿಲ್ಲ.
ಆಗ ಗ್ಯಾರಂಟಿಗಳ ಹೊರೆ ಸರಕಾರದ ಮೇಲೆ ಇರಲಿಲ್ಲವಾದ್ದರಿಂದ ಸಿದ್ದರಾಮಯ್ಯನವರು ಆಡಳಿತ ಪಕ್ಷದ ಶಾಸಕರು ಮಾತ್ರವಲ್ಲ ಪ್ರತಿಪಕ್ಷಗಳ ಶಾಸಕರಿಗೆ ಸಾಕಷ್ಟು ಅನುದಾನ ನೀಡಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಹಲವು ಭಾಗ್ಯಗಳ ಪರಿಣಾಮಕಾರಿ ಅನುಷ್ಠಾನದಿಂದ ಜನ ಸಾಮಾನ್ಯರ ಪಾಲಿಗೂ ಅಚ್ಚುಮೆಚ್ಚಿನವರಾಗಿದ್ದರು. ‘ರಿಡೂ’ದ ಪ್ರಕರಣ ಸದನದಲ್ಲಿ ಸದ್ದು ಮಾಡಿತ್ತಾದರೂ ಕೆಂಪಣ್ಣ ಆಯೋಗ ರಚನೆಯಾಗಿದ್ದರಿಂದ ತಣ್ಣಾಗಾಗಿತ್ತು. ಪ್ರತಿ ಪಕ್ಷಗಳ ಕೆಲಸವೇ ಆಡಳಿತ ಪಕ್ಷದ ಕಾರ‌್ಯ ವೈಖರಿಯ ಮೇಲೆ ಹದ್ದಿನ ಕಣ್ಣು ಇಡುವುದು, ಮುಖ್ಯಮಂತ್ರಿ ಮತ್ತು ಸಚಿವರ ಹಗರಣಗಳನ್ನು ಹೊರ ತೆಗೆದು ರಾಜೀನಾಮೆಗೆ ಒತ್ತಾಯಿಸುವುದು ಕಾಂಗ್ರೆಸ್, ಬಿಜೆಪಿ , ಜೆಡಿಎಸ್ ಯಾವುದೇ ಪಕ್ಷದ ಸರಕಾರವಿರಲಿ ವಿಧಿ ಕ್ರಿಯೆಯಂತೆ ಪಾಲಿಸುತ್ತಲೇ ಇರುತ್ತಾರೆ. ಆಡಳಿತದ ಚುಕ್ಕಾಣಿ ಹಿಡಿದಿರುವವರು ಎಷ್ಟು ಸಾಧ್ಯವೋ ಅಷ್ಟು ಜಾಗರೂಕರಾಗಿ ಕಾರ‌್ಯನಿರ್ವಹಿಸುತ್ತಿರುತ್ತಾರೆ. ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಛಾಪಾಕಾಗದ ಹಗರಣ, ಅಕ್ಕಿ ಹಗರಣಗಳು ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದವು. ಆದರೆ ಅವುಗಳಿಂದ ಮುಖ್ಯಮಂತ್ರಿ ಕುರ್ಚಿಗೆ ಕಂಟಕ ಬರಲಿಲ್ಲ. ಛಾಪಾ ಕಾಗದ ಹಗರಣಕ್ಕೆ ಹೋಲಿಸಿದರೆ ಸಿದ್ದರಾಮಯ್ಯನವರನ್ನು ಸುತ್ತುವರಿದಿರುವ’ ಮುಡಾ ಪ್ರಕರಣ ಏನೇನೂ ಅಲ್ಲ. ಸ್ವರೂಪ, ಮೌಲ್ಯ ಮತ್ತು ವ್ಯಾಪ್ತಿಯಲ್ಲಿ ಛಾಪಾ ಕಾಗದ ಹಗರಣ ದೊಡ್ಡದಾಗಿತ್ತು. ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಪ್ರತಿಪಕ್ಷಗಳು ಸುದ್ದಿ ಮಾಡಿದವೇ ಹೊರತು ಅದರ ಝಳವೂ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೆ ತಾಕಲಿಲ್ಲ. ಅಷ್ಟಕ್ಕೂ ಕಾಂಗ್ರೆಸ್ ಹೈಕಮಾಂಡ್ ಎಸ್.ಎಂ.ಕೃಷ್ಣ ಬೆಂಬಲಕ್ಕೆ ಬಂಡೆಕಲ್ಲಿನಂತೆ ನಿಂತಿತ್ತು. ಬಿಜೆಪಿ ನಾಯಕ ಅನಂತಕುಮಾರ್ ಜೊತೆಗೆ ಎಸ್.ಎಂ.ಕೃಷ್ಣ ಅತ್ಯತ್ತಮ ಸಂಬಂಧ ಹೊಂದಿದ್ದರು. ಕೃಷ್ಣ ಅವರು ಜಾಣ ಮುಖ್ಯಮಂತ್ರಿ. ಸಿದ್ದರಾಮಯ್ಯನವರ ಹಾಗೆ ಜನನಾಯಕರೇನೂ ಆಗಿರಲಿಲ್ಲ. ಆದರೂ ರಾಜ್ಯಪಾಲರಿಂದ ತೊಂದರೆ ಅನುಭವಿಸದೆ ಅಧಿಕಾರಾವಧಿ ಪೂರ್ಣಗೊಳಿಸಿದ್ದರು.
ಸಿದ್ದರಾಮಯ್ಯನವರ ಮೊದಲ ಅವಧಿಯ ಮುಖ್ಯಮಂತ್ರಿಗಿರಿ ಆರಂಭವಾದದ್ದೇ ಅಭಿನವ ಅರಸು ಪ್ರಶ್ನಾತೀತ ನಾಯಕ, ಕಾಂಗ್ರೆಸ್ ಪಕ್ಷದ ಏಕೈಕ ಜನನಾಯಕ ಎಂಬ ಇತ್ಯಾತ್ಮಕ ಅಭಿಪ್ರಾಯಗಳಿಂದ. ಸಿದ್ದರಾಮಯ್ಯನವರು ಉತ್ತರ ಕೊಡಲು ಸದನದಲ್ಲಿ ಎದ್ದು ನಿಂತರೆ ಪ್ರತಿಪಕ್ಷಗಳ ಜಂಗಾಬಲವೇ ಉಡುಗಿ ಹೋಗುತ್ತಿತ್ತು. ಅಧಿಕೃತ ಅಂಶಗಳೊಂದಿಗೆ ಭಾಷಣಕ್ಕೆ ನಿಂತರೆ ಸದನವೇ ತಲೆದೂಗುತ್ತಿತ್ತು. ಅವರ ಅನುಭವ ಪ್ರಸ್ತುತಪಡಿಸುವ ರೀತಿ ವಿಶಿಷ್ಟ ಕಾರ‌್ಯಶೈಲಿಗೆ ಮ್ಯಾಚ್ ಮಾಡುವ ನಾಯಕರು ಕಾಂಗೆಸ್‌ನಲ್ಲಾಗಲಿ, ಪ್ರತಿಪಕ್ಷಗಳಲ್ಲಾಗಲಿ ಇರಲೇ ಇಲ್ಲ. ಹಾಗೆ ನೋಡಿದರೆ ಈಗಲೂ ಅವರಿಗೆ ಸರಿಗಟ್ಟುವ ನಾಯಕರು ಇಲ್ಲ. 2023ರ ವಿಧಾನಸಭೆ ಚುಣಾವಣೆ ಹೊತ್ತಿಗೆ ನಮಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ ಎಂದು ಬಿಂಬಿಸಿಕೊಳ್ಳಲು ಯತ್ನಿಸತೊಡಗಿದರು. ಕಾಂಗ್ರೆಸ್ ಹೈಕಮಾಂಡ್ ಕೂಡಾ ಅಂತಹ ಭಾವನೆಗಳನ್ನು ಪರೋಕ್ಷವಾಗಿ ಪೋಷಿಸತೊಡಗಿತು. ಚುಣಾವಣಾ ಹೊತ್ತಿನಲ್ಲಿ ಡಿ.ಕೆ.ಶಿವಕುಮಾರ್ ಬದಲಿಗೆ ಎಂ.ಬಿ.ಪಾಟೀಲ್, ಈಶ್ವರ್ ಖಂಡ್ರೆ, ಕೃಷ್ಣ ಭೈರೇಗೌಡರು ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರೂ 136ರ ಆಸುಪಾಸಿನಲ್ಲೇ ಕಾಂಗ್ರೆಸ್ ಶಾಸಕರು ಗೆದ್ದು ಬರುತ್ತಿದ್ದರು. ಮುಖ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಜನಾಕರ್ಷಣೆಯ ವ್ಯಕ್ತಿತ್ವ ಮತ್ತು ಓಟು ತರುವ ಸಾಮರ್ಥ್ಯ ಇರುವುದು ಸಿದ್ದರಾಮಯ್ಯನವರಿಗೆ ಮಾತ್ರ. ಅಹಿಂದ ಸಮುದಾಯಗಳಿಗೆ ಸಿದ್ದರಾಮಯ್ಯ ಈಗಲೂ ಸಹಜ ನಾಯಕ. ಆದರೆ ಉತ್ತರ ಕರ್ನಾಟಕದ ಲಿಂಗಾಯುತರಿಗೂ ಸಿದ್ದರಾಮಯ್ಯನವರೇ ನಾಯಕ. ಸಿದ್ದರಾಮಯ್ಯನವರಿಗೆ ಎಲ್ಲರಂತೆ ಜಾತಿ ಪ್ರೀತಿ ಇದೆ. ಆದರೆ ಅವರ ಬೆಂಬಲಕ್ಕೆ ನಿಂತ ಜಾತಿ-ಸಮುದಾಯಗಳಿಗೆ ಪೂರ್ವಾಗ್ರಹಪೀಡಿತವಾಗದೇ ಅನುಕೂಲ ಮಾಡಿಕೊಡುತ್ತಾರೆ. ಅನ್ಯ ಜಾತಿಗಳನ್ನು ದ್ವೇಷಿಸುವುದಿಲ್ಲ .
ಉತ್ತರ ಕರ್ನಾಟಕದ ಎಲ್ಲ ಕಾಂಗ್ರೆಸ್ ಶಾಸಕರ ಗೆಲುವಿನಲ್ಲಿ ಸಿದ್ದರಾಮಯ್ಯನವರ ಬಹುದೊಡ್ಡ ಪಾತ್ರವಿದೆ. ಅದರಲ್ಲೂ ಲಿಂಗಾಯತ ಅಭ್ಯರ್ಥಿಗಳ ಗೆಲುವಿಗೆ ಅವರ ಮಾತೇ ನಿರ್ಣಾಯಕ. ಬಾಗಲಕೋಟೆ ಜಿಲ್ಲೆಯ ಬೀಳಗಿ ಮತಕ್ಷೇತ್ರದಲ್ಲಿ ಬಿಜೆಪಿಯ ಮುರುಗೇಶ್ ನಿರಾಣಿ ಹೆಚ್ಚು ಜನಪ್ರಿಯ ಮತ್ತು ಹಣವಂತ. ಆ ಮತ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮತಗಳು ಗಣನೀಯ ಪ್ರಮಾಣದಲ್ಲಿವೆ. ಕಾಂಗ್ರೆಸ್ ಅಭ್ಯರ್ಥಿ ಜೆ.ಟಿ.ಪಾಟೀಲ್ ಹಣ ಖರ್ಚು ಮಾಡದಿದ್ದರೂ ಸಿದ್ದರಾಮಯ್ಯನವರ ಕಾರಣಕ್ಕೆ ಅತ್ಯಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ. ಬಿಜೆಪಿಯ ಶ್ರೀರಾಮುಲು ಸೇರಿದಂತೆ ಅನೇಕ ಘಟಾನುಘಟಿಗಳು ಸೋತಿದ್ದು ಸಿದ್ದರಾಮಯ್ಯನವರ ಪ್ರಭಾವದಿಂದ. ಅವರು ಕಾಂಗ್ರೆಸ್ ನೇತೃತ್ವ ವಹಿಸದೇ ಹೋಗಿದ್ದರೆ ಶಾಸಕರ ಸಂಖ್ಯೆ ನೂರರ ಗಡಿ ದಾಟುತ್ತಿರಲಿಲ್ಲ .
ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯನವರು ಏಕೈಕ ನಾಯಕ. ಚಾಮರಾಜನಗರದಿಂದ ಬೀದರ್‌ವರೆಗೆ, ಚಿಕ್ಕಮಗಳೂರದಿಂದ ಬೆಳಗಾವಿಯವರೆಗೆ ಎಲ್ಲ ಸಮುದಾಯಗಳ ಮತದಾರರನ್ನು ಸೆಳೆಯುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯನವರಿಗೆ ಮಾತ್ರ ಇದೆ. ಸಿದ್ದರಾಮಯ್ಯನವರ ಜನಪ್ರಿಯತೆಯ ಅರಿವಿದ್ದೇ ಕಾಂಗ್ರೆಸ್ ಹೈಕಮಾಂಡ್ 2023ರ ವಿಧಾನ ಸಭೆ ಚುನಾವಣೆಯ ನೇತೃತ್ವ ವಹಿಸಿತ್ತು. ಸಿದ್ದರಾಮಯ್ಯನವರ ಮಾತುಗಳನ್ನು ಮತದಾರರು ನಂಬುತ್ತಾರೆ. ಅವರು ಯಾವತ್ತೂ ಮುಖ್ಯಮಂತ್ರಿಯ ಗತ್ತಿನಲ್ಲಿ ವ್ಯವಹರಿಸುವುದಿಲ್ಲ. ಸಹಜ ಮತ್ತು ನ್ಯಾಯಯುತ ಭಾವದಲ್ಲಿ ಆಡಳಿತ ನಡೆಸುತ್ತಿರುವುದರಿಂದಲೋ ಕಾಂಗ್ರೆಸ್ ಶಾಸಕರು ಮಾತ್ರವಲ್ಲ ಬೇರೆ ಪಕ್ಷದವರೂ ಆರಾಧಿಸುತ್ತಾರೆ.
ಎರಡನೇ ಅವಧಿಗೆ ಸಿದ್ದರಾಮಯ್ಯನವರು ಅಧಿಕಾರ ಸ್ವೀಕರಿಸುವ ಹೊತ್ತಿಗೆ ಕಾಂಗ್ರೆಸ್ ಪಕ್ಷದೊಳಗೆ ‘ಚೌಕಾಸಿ’ ರಾಜಕಾರಣ ನಡೆಯುತ್ತಿತ್ತೇನೋ ಎಂಬ ಅಭಿಪ್ರಾಯಗಳನ್ನು ಬೇಕೆಂತಲೇ ಬಿತ್ತಲಾಯಿತು. ಅಧಿಕಾರ ವಹಿಸಿಕೊಂಡು ನಾಲ್ಕೈದು ತಿಂಗಳಲ್ಲೇ ‘ಇವರು ಪೂರ್ಣಾವಧಿ’ ಮುಖ್ಯಮಂತ್ರಿಯಲ್ಲ ಎಂಬ ಅಭಿಪ್ರಾಯ ಮೂಡಿಸುವ ಪ್ರಯತ್ನಗಳು ನಡೆದವು. ಸಿದ್ದರಾಮಯ್ಯನವರ ಪರ ಇರುವ ಶಾಸಕರು ಅಭಿಮಾನದಿಂದ ‘ ಇವರೇ ಪೂರ್ಣಾವಧಿ ಮುಖ್ಯಮಂತ್ರಿ’ ಎಂದು ಹೇಳಿದಾಗಲೆಲ್ಲ ಕಾಂಗ್ರೆಸ್ ವಲಯದಲ್ಲಿ ವ್ಯಾಪಕ ಅನುಮೋದನೆ ದೊರೆಯಲಿಲ್ಲ. ಅದನ್ನೆಲ್ಲ ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂಬ ಜಾಣಮಾತುಗಳು ಜವಾಬ್ದಾರಿ ಸ್ಥಾನದಲ್ಲಿರುವವರ ಬಾಯಲ್ಲಿ ಕೇಳಿಬರುತ್ತಿದ್ದವು. ಹೆಚ್ಚುವರಿ ಉಪ ಮುಖ್ಯಮಂತ್ರಿ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದವರೆಲ್ಲ್ಲ ಸಿಎಂ ಆಪ್ತ ವಲಯದವರೇ. ಲಿಂಗಾಯತ, ದಲಿತ ,ಅಲ್ಪ ಸಂಖ್ಯಾತ ಅಥವಾ ಎಸ್‌ಟಿ ಉಪಮುಖ್ಯಮಂತ್ರಿ ಪ್ಲ್ಯಾನ್ ಅನುಷ್ಠಾನಗೊಂಡಿದ್ದರೆ, ನಿಶ್ಚಿತವಾಗಿ ಕಾಂಗ್ರಸ್ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಏನಿಲ್ಲವೆಂದರೂ ಹದಿನೈದು ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿತು. ಆ ಚಿಂತನೆಯನ್ನು ಹೈಕಮಂಡ್ ಯಾಕೆ ಒಪ್ಪಿಕೊಳ್ಳಲಿಲ್ಲ ಎಂಬುದು ಈಗಲೂ ನಿಗೂಢ. ಕಾಂಗ್ರೆಸ್ ಪಕ್ಷದಲ್ಲಿ ಒಡಕಿನ ಎಳೆಗಳು ಇದ್ದಿದ್ದರಿಂದಲೇ ಮೂರು ಭಾಗವಾಗಿರುವ ಬಿಜೆಪಿ ನಾಯಕರು ಬಲವಂತದ ಒಗ್ಗಟ್ಟು ಪ್ರದರ್ಶಿಸುತ್ತಿರಲಿಲ್ಲ. ಬಿಜೆಪಿಗೆ ಜನಹಿತ, ಸಾರ್ವಜನಿಕ ಆಸ್ತ್ತಿಪಾಸ್ತಿ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಪೇ ಸಿಎಂ ಅಭಿಯಾನ ಶುರುವಾದಾಗಲೇ ಮುಖ ಉಳಿಸಿಕೊಳ್ಳಲಾದರೂ ‘ ಮುಡಾ ಪ್ರಕರಣದ ಬಗ್ಗೆ ಮಾತನಾಡಬಹುದಿತ್ತು. ಆಗ ಸುಮ್ಮನಿದ್ದು ಈಗ ದಿಢೀರನೇ ಷಡ್ಯಂತ್ರದ ಭಾಗವಾಗಿ ‘ ಮುಡಾ ಪ್ರಕರಣ’ವನ್ನು ಎದ್ದು ನಿಲ್ಲಿಸಿದ್ದಾರೆ.
ರಾಜ್ಯಪಾಲರು ಸಿಎಂ ವಿರುದ್ಧ ವಿಚಾರಣೆಗೆ ಅನುಮತಿ ಕೊಡುವ ಹಂತಕ್ಕೆ ಪ್ರಕರಣವನ್ನು ಕೊಂಡ್ಯೂಯುತ್ತಾರೆಂದರೆ, ಬಿಜೆಪಿ-ಜೆಡಿಎಸ್ ವಲಯದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ಪಿತೂರಿ ಹೆಣೆಯಲಾಗಿದೆಯೆಂದೇ ಭಾವಿಸಬೇಕು. ಕಾಂಗ್ರೆಸ್ ಪಕ್ಷದ ಒಬ್ಬಿಬ್ಬರು ಈ ವ್ಯವಸ್ಥಿತ ಷಡ್ಯಂತ್ರದ ಭಾಗವಾಗದೇ ಹೋಗಿದ್ದರೇ ಮುಡಾ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಮುಡಾ ಪ್ರಕರಣದ ವಕ್ತಾರಿಕೆ ವಹಿಸಿಕೊಂಡ ಟಿ.ಜೆ.ಅಬ್ರಹಾಂ, ಸ್ನೇಹಮಹಿ ಕೃಷ್ಣ ಮತ್ತು ಸುಧೀರ್ ಅವರು ಪ್ರಬಲ ಶಕ್ತಿಯ ಒತ್ತಾಸೆ ಇಲ್ಲದಿದ್ದರೆ ದುಬಾರಿ ವಹಿವಾಟಿನ ಭಾಗವಾಗುತ್ತಿರಲಿಲ್ಲ. ಕೆಳಹಂತದ ನ್ಯಾಯಾಲಯದಲ್ಲಿನ ಖರ್ಚುವೆಚ್ಚಗಳಿಂದ ಹಿಡಿದು ಸುಪ್ರೀಂಕೋರ್ಟ್ ವಕೀಲರ ಫೀಸನ್ನು ಲಾಭವಿಲ್ಲದೇ ಯಾರೂ ಭರಿಸಲಾರರು. ಈ ಪ್ರಕರಣದಲ್ಲಿ ಸಿದ್ದರಾಮಯ್ಯನವರು ಕೆಳಗಿಳಿದರೆ ತಕ್ಷಣ ಲಾಭವಾಗುವುದು ಕಾಂಗ್ರೆಸ್ ಪಕ್ಕದಲ್ಲಿಯ ಒಬ್ಬರಿಗೆ. ಕುಮಾರಸ್ವಾಮಿ ಮತ್ತು ಬಿಜೆಪಿಯವರಿಗೆ 136 ಶಾಸಕರ ಬಲದ ಕಾಂಗ್ರೆಸ್ ಕೋಟೆಗೆ ನುಗ್ಗಿ ಅಧಿಕಾರ ಪಡೆದುಕೊಳ್ಳುವುದು ಅಸಾಧ್ಯದ ಮಾತು. ಹೆಚ್ಚೆಂದರೆ ಕೋಮುವಾದಿ ಶಕ್ತಿಗಳ ವಿರುದ್ಧ ಸೈದ್ಧಾಂತಿಕ ಸ್ಪಷ್ಟತೆಯೊಂದಿಗೆ ಗಟ್ಟಿ ಧ್ವನಿಯಲ್ಲಿ ರಾಜಕಾರಣ ಮಾಡುತ್ತಿರುವ ಸಿದ್ದರಾಮಯ್ಯನವರನ್ನು ಕೆಳಗಿಳಿಸಿದ ವಿಕೃತ ಆನಂದ ಅನುಭವಿಸಬಹುದಷ್ಟೆ. ಷಡ್ಯಂತ್ರ ರೂಪಿಸಿದವರಿಗೇ ಫಲ ದೊರೆಯುತ್ತದೆ ಎಂದು ಹೇಳಲಾಗದು. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸುವಲ್ಲಿ ಹೆಚ್ಚು ಶ್ರಮಿಸಿದವರು ಅನಂತಕುಮಾರ್. ಆದರೆ ಅವರಿಗೆ ಫಲದೊರೆಯಲಿಲ್ಲ.
ಮುಖ್ಯಮಂತ್ರಿಯಾಗುವ ಅವಕಾಶ ಲಭಿಸಿದ್ದು, ಏನೂ ಶ್ರಮ ಹಾಕದ ಸದಾನಂದ ಗೌಡ ಮತ್ತು ಜಗದೀಶ್ ಶೆಟ್ಟರ್‌ಗೆ, ಎರಡನೇ ಬಾರಿಗೆ ಯಡಿಯೂರಪ್ಪರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದು, ಬಿ.ಎಲ್. ಸಂತೋಷ್, ಅನಾಯಾಸವಾಗಿ ಮುಖ್ಯಮಂತ್ರಿ ಹುದ್ದೆಗೆ ಏರಿದ್ದು ಬಸವರಾಜ ಬೊಮ್ಮೊಯಿ.
ಮುಡಾ ಪ್ರಕರಣದ ಮೂಲಕ ಸಿದ್ದರಾಮಯ್ಯನವರನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸುತ್ತಿರುವ ಹೊರ ಮತ್ತು ಒಳಗಿನ ಶತ್ರುಗಳ ಪಿತೂರಿಯನ್ನು ನ್ಯಾಯಾಲಯದಲ್ಲೇ ವಿಫಲಗೊಳಿಸಬೇಕು. ನ್ಯಾಯಾಲಯದ ತೀರ್ಪು ಏನೇ ಬರಲಿ ಕಾಂಗ್ರೆಸ್ ಹೈಕಮಾಂಡ್ ಮಾತ್ರ ಸಿದ್ದರಾಮಯ್ಯನವರ ಪರ ಗಟ್ಟಿಯಾಗಿ ನಿಲ್ಲಬೇಕು. ಕಾಂಗ್ರೆಸ್ ಪಕ್ಷದೊಳಗಿನ ಯಾರದೋ ಮಹತ್ವಕಾಂಕ್ಷೆಯನ್ನು ಪೋಷಿಸುತ್ತಿದ್ದರೆ ಹೈಕಮಾಂಡ್ ಈ ಕ್ಷಣವೇ ನಿಲ್ಲಿಸಬೇಕು. ನೇರವಾಗಿ ಹೇಳಬೇಕೆಂದರೆ ಸಿದ್ದರಾಮಯ್ಯನವರನ್ನು ಮುಖ್ಮಮಂತ್ರಿ ಹುದ್ದೆಯಿಂದ ಇಳಿಸಲು ಕಾಂಗ್ರೆಸ್ ಹೈಕಮಾಂಡ್ ಪರೋಕ್ಷವಾಗಿ ಬೆಂಬಲಿಸಿದರೂ ಪಕ್ಷ ಸರ್ವನಾಶವಾದಂತೆ. ಬಿಜೆಪಿ - ಜೆಡಿಎಸ್ ಮತ್ತು ರಾಜ್ಯಪಾಲರ ಕಚೇರಿ ಪಿತೂರಿಗೆ ತಕ್ಷಣವೇ ಕಡಿವಾಣ ಬೀಳಬೇಕೆಂದರೆ ‘‘ಸಿದ್ದರಾಮಯ್ಯನವರೇ ಪೂರ್ಣಾವಧಿ’’ ಮುಖ್ಯಮಂತ್ರಿ ಎಂಬ ಸಂದೇಶ ರವಾನಿಸಿದರೆ ಮಹತ್ವಾಕಾಂಕ್ಷಿ ನಾಯಕರು ಕನಸು ಕಾಣುವುದನ್ನು ನಿಲ್ಲಿಸುತ್ತಾರೆ. ಸಿದ್ದರಾಮಯ್ಯನವರನ್ನು ಇಳಿಸಲು ಸಾಧ್ಯವಿಲ್ಲ ಎಂದಾದರೆ ಬಿಜೆಪಿ- ಜೆಡಿಎಸ್ ನಾಯಕರು, ಬೆಜೆಪಿ ಹೈಕಮಾಂಡ್ ಶಸ್ತ್ರ ಕೆಳಗಿಡುತ್ತಾರೆ. ಅತ್ಯುತ್ತಮ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯನವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಏನಿಲ್ಲವೆಂದರೂ ಹತ್ತು ವರ್ಷಗಳ ಕಾಲ ನೆಲೆ ಕಳೆದುಕೊಳ್ಳ ಬೇಕಾಗುತ್ತದೆ. ಜನ ನಾಯಕನ ನೇತೃತ್ವವಿಲ್ಲದ ಯಾವ ಪಕ್ಷವೂ ಗೆದ್ದ ನಿದರ್ಶನವಿಲ್ಲ. ಸ್ಥಳೀಯ ಸಮರ್ಥ ನಾಯಕರನ್ನು ಕಾಂಗ್ರೆಸ್ ಹೈಕಮಾಂಡ್ ಕಡೆಗಣಿಸಿದಾಲೆಲ್ಲ ಪಕ್ಷ ಅಧಿಕಾರ ಮತ್ತು ಜನ ಬೆಂಬಲ ಕೆಳೆದುಕೊಂಡಿದೆ.
ಡಿ. ದೇವರಾಜ ಅರಸು ಅವರು ಅವರು 1972ರಲ್ಲಿ ಫ್ಯೂಡಲ್ ಶಕ್ತಿಗಳ ವಿರುದ್ಧ ಚುನಾವಣೆ ಎದುರಿಸಿ ಕಾಂಗ್ರೆಸ್ ಪಕ್ಷದ ಸರಕಾರ ಅಸ್ವಿತ್ವಕ್ಕೆ ಬರುವಂತೆ ಮಾಡಿದ್ದರು. ಅನೇಕ ಕ್ರಾಂತಿಕಾರಿ ಸುಧಾರಣೆಗಳನ್ನು ತಂದು 1978ರ ಚುನಾವಣೆಯಲ್ಲಿ ಮತ್ತೆ ಮತದಾರರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಚಾಡಿಕೋರರ ಮಾತಿಗೆ ಕಿವಿಗೊಡದಿದ್ದರೆ ದೇವರಾಜ ಅರಸು ಅವರೇ ಮುಂದುವರಿಯುತ್ತಿದ್ದರು. ಕಾಂಗ್ರೆಸ್ ಮತ್ತಷ್ಟು ಗಟ್ಟಿಗೊಳ್ಳುತ್ತಿತ್ತು. ಅರಸು ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಕೇವಲ ಎರಡನೇ ವರ್ಷಕ್ಕೆ ಅಧಿಕಾರ ಕಳೆದುಕೊಂಡರು . ಕಾಂಗ್ರೆಸ್ ಧೂಳೀಪಟವಾಯಿತು. 1989ರಲ್ಲಿ ಕಾಂಗ್ರೆಸ್ ಪಕ್ಷ ವೀರೆಂದ್ರ ಪಾಟೀಲರ ನೇತೃತ್ವದಲ್ಲಿ 178 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಹನ್ನೊಂದು ತಿಂಗಳಿಗೆ ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದರು. ಅವರ ನಂತರ ಬಂದ ಎಸ್. ಬಂಗಾರಪ್ಪನವರನ್ನು ಎರಡನೇ ವರ್ಷಕ್ಕೆ ಪದಚ್ಯುತಿಗೊಳಿಸಲಾಯಿತು. ಅವರ ಜಾಗಕ್ಕೆ ವೀರಪ್ಪ ಮೊಯಿಲಿ ಬಂದರು. ಐದು ವರ್ಷಗಳಲ್ಲಿ ಮೂರು ಮುಖ್ಯಮಂತ್ರಿಗಳನ್ನು ನೋಡಿದ ಕರ್ನಾಟಕದ ಮತದಾರರು 1994ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹೀನಾಯವಾಗಿ ಸೋಲಿಸಿದರು. ಪಂಜಾಬ್‌ನಲ್ಲಿ ಅಮರಿಂದರ್‌ಸಿಂಗ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿದ್ದರು. ಐದು ವರ್ಷ ಅಧಿಕಾರ ನಡೆಸಲು ಬಿಟ್ಟಿದ್ದರೆ ಕಾಂಗ್ರೆಸ್ ಅಲ್ಲಿ ನೆಲೆ ಕಳೆದುಕೊಳ್ಳುತಿ ರಲಿಲ್ಲ. 177ದಿನಗಳಿಗೆ ಚರಣ್‌ಜಿತ್‌ಸಿಂಗ್ ಅವರನ್ನು ಮುಖ್ಯಮಂತ್ರಿಯನ್ನಾಗಿಸಿದರು. ಕ್ರಿಕೆಟಿಗ ಸಿದ್ದು ಮಾತು ಕೇಳಿ ಕಾಂಗ್ರೆಸ್ ಅಲ್ಲಿ ಕ್ಲೀನ್ ಬೋಲ್ಡ್ ಆಯಿತು. ಸ್ಥಳೀಯ ಸಮರ್ಥನಾಯಕರನ್ನು ಕಳೆದುಕೊಂಡಾಗಲೆಲ್ಲ ಕಾಂಗ್ರೆಸ್ ಪಕ್ಷ ನೆಲೆಯನ್ನೇ ಕಳೆದುಕೊಂಡಿದೆ. ಜನ ಬೆಂಬಲ, ಶಾಸಕರ ಬೆಂಬಲ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಜನ ಮೆಚ್ಚುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಪಾರ ಜನ ಬೆಂಬಲ ಪಡೆದಿರುವ ಸಿದ್ದರಾಮಯ್ಯನವರನ್ನು ಬಿಜೆಪಿ-ಜೆಡಿಎಸ್ ವಿರೋಧಿಸುವುದರಲ್ಲಿ ರಾಜಕೀಯದ ಲಾಭದಾಸೆಯಿದೆ, ಪ್ರತೀ ಪಕ್ಷಗಳ ಪಿತೂರಿಯನ್ನು ವಿಫಲಗೊಳಿಸುವುದು ಕಾಂಗ್ರೆಸ್‌ನ ಮೊದಲ ಆದ್ಯ ತೆಯಾಗಬೇಕು. ಜನನಾಯಕ ಉಳಿದರೆ ಕಾಂಗ್ರೆಸ್‌ಗೆ ಬಲಬಂದಂತೆ.