ಭ್ರಷ್ಟಾಚಾರ ಪ್ರಕರಣಗಳು ಮತ್ತು ‘ಜಾಣ ರಾಜಕಾರಣ’
ಶಾಸಕರು ಮತದಾರರಿಗೆ ಮಾರ್ಗದರ್ಶಿಗಳು ಎಂದು ಭಾವಿಸುವುದು ಒಂದು ಭ್ರಮೆ. ನಮಗೆ ಮಾರ್ಗದರ್ಶಿಯಾಗಿರಲಿ ಎಂದು ಪ್ರತಿನಿಧಿಗಳನ್ನು ಮತದಾರರು ಶಾಸನಸಭೆಗಳಿಗೆ ಕಳಿಸುವುದಿಲ್ಲ. ಅದಕ್ಕೆ ಪ್ರತಿಯಾಗಿ ಅವರನ್ನು ಕಳಿಸುವುದು ಜನತೆಯ ಆಶೋತ್ತರಗಳನ್ನು ನಿಷ್ಠೆಯಿಂದ ನಡೆಸಲಿ ಎಂದು. ಜನರೇ ಮಾರ್ಗದರ್ಶಿಗಳು ಶಾಸಕರಲ್ಲ. ಶಾಸಕರು ಸೇವಕರು ಮಾತ್ರ.
-ಮಹಾತ್ಮಾ ಗಾಂಧೀಜಿ
ರಾಜ್ಯ ಸರಕಾರದ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟಾಚಾರದ ಪ್ರಮಾಣ ವನ್ನು ಗಣನೀಯವಾಗಿ ತಗ್ಗಿಸಬೇಕು ಎಂಬ ಪ್ರಾಮಾಣಿಕ ಕಾಳಜಿ ಆಡಳಿತ ಮತ್ತು ಪ್ರತಿಪಕ್ಷಗಳ ನಾಯಕರಿಗೆ ಇದ್ದರೆ ನಿಷ್ಪಕ್ಷ ತನಿಖೆ ನಡೆಸಿ ಭ್ರಷ್ಟರಿಗೆ ಕಠಿಣ ಶಿಕ್ಷೆ ದೊರೆಯುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕೂ ಮಿಗಿಲಾಗಿ ಆಡಳಿತದಲ್ಲಿದ್ದಾಗ ಒಂದು ನಿಲುವು, ಪ್ರತಿಪಕ್ಷದಲ್ಲಿದ್ದಾಗ ಇನ್ನೊಂದು ಧೋರಣೆ ತಳೆಯುವುದನ್ನು ನಿಲ್ಲಿಸಬೇಕು. ಬಹುಪಾಲು ಭ್ರಷ್ಟಾಚಾರ ಪ್ರಕರಣಗಳು ನಿಷ್ಪಕ್ಷ ತನಿಖೆಗೆ ಒಳಪಟ್ಟು ತಾರ್ಕಿಕ ಅಂತ್ಯ ಕಾಣದಿರುವುದಕ್ಕೆ ರಾಜಕಾರಣಿಗಳ ಈ ದ್ವಂದ್ವ ನಿಲುವೇ ಕಾರಣ. ಸದ್ಯದ ಮಟ್ಟಿಗೆ ಭ್ರಷ್ಟಾಚಾರವನ್ನು ನಿರ್ಮೂಲ ಮಾಡಲು ಸಾಧ್ಯವಿಲ್ಲವೆಂದೇ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಮತದಾರರು ಗಾಢವಾಗಿ ನಂಬಿದಂತಿದೆ. ಆದರೆ ಭ್ರಷ್ಟಾಚಾರ ಪ್ರಕರಣಗಳು ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅತಿರೇಕದ ಹಂತಕ್ಕೆ ತಲುಪಿದಾಗ ಅದನ್ನು ನಿಯಂತ್ರಿಸಲು ಪ್ರಾಮಾಣಿಕ ಪ್ರಯತ್ನಗಳಾದರೂ ನಡೆಯಬೇಕಲ್ಲ.
ಯಾವುದೇ ಪಕ್ಷಗಳ ಸರಕಾರ ಇದ್ದಾಗ ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದ ತಕ್ಷಣ ಪ್ರತಿಪಕ್ಷಗಳು ಗುಲ್ಲೆಬ್ಬಿಸುವುದು, ಜವಾಬ್ದಾರಿ ಸ್ಥಾನದಲ್ಲಿರುವವರ ರಾಜೀನಾಮೆಗೆ ಒತ್ತಾಯಿಸುವುದು, ನಿಷ್ಪಕ್ಷ ತನಿಖೆಗೆ ಆಗ್ರಹಿಸುವುದು ಜನತಂತ್ರ ವ್ಯವಸ್ಥೆಯಲ್ಲಿ ಪಾರದರ್ಶಕ ಆಡಳಿತ ಅಪೇಕ್ಷೆಯ ಒಂದು ಭಾಗ. ಆಡಳಿತದ ಚುಕ್ಕಾಣಿ ಹಿಡಿದಿರುವವರು ಜನಹಿತದ ಭಾಗವಾಗಿ ತಕ್ಷಣವೇ ನಿಷ್ಪಕ್ಷ ತನಿಖೆಗೆ ಒಪ್ಪಿಸುವುದು ಸತ್ಸಂಪ್ರದಾಯ ಎನಿಸಿಕೊಳ್ಳುತ್ತದೆ. ಈ ಹಿಂದೆ 2019ರಿಂದ 2021ರವರೆಗೆ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಎಲ್ಲೆಡೆ ಕೊರೋನ ಮಹಾಮಾರಿ ವ್ಯಾಪಿಸಿ ಮಾರಣಾಂತಿಕ ಕಾಯಿಲೆಯಾಗಿ ಪರಿಣಮಿಸಿತ್ತು. ಕೊರೋನ ಚಿಕಿತ್ಸೆಗೆಂದು ಆರೋಗ್ಯ ಇಲಾಖೆ ಕೋಟಿ ಕೋಟಿ ಹಣ ಖರ್ಚು ಮಾಡಿತ್ತು. ನಂತರ 2020 ರಿಂದ 2023ರವರೆಗೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯಿತು. ಆಗಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಿ ಡಾ. ಕೆ. ಸುಧಾಕರ್ ಮೇಲೆ ಭ್ರಷ್ಟಾಚಾರದ ಆರೋಪ ಕೇಳಿಬಂತು. ಕೊರೋನ ಸಂದರ್ಭದಲ್ಲಿ ಔಷಧಿ ಇತ್ಯಾದಿ ಖರೀದಿಯಲ್ಲಿ ಒಂದಕ್ಕೆ ನೂರು ಪಟ್ಟು ದರ ನಮೂದಿಸಿ ವ್ಯಾಪಕ ಭ್ರಷ್ಟಾಚಾರ ನಡೆಸಲಾಗಿದೆ ಎಂದು ಆಗ ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್ ಮುಖಂಡರು ಆರೋಪ ಮಾಡಿದ್ದರು. ಆಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಆಡಳಿತ ಪಕ್ಷದ ಎಲ್ಲರೂ ಭ್ರಷ್ಟಾಚಾರ ನಡೆದಿರುವುದಕ್ಕೆ ಸಾಕ್ಷಿ ಕೊಡಿ ಎಂದು ಕೇಳಿದ್ದರು. ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಲವು ಬಾರಿ ಸದನದ ಹೊರಗೆ ಮತ್ತು ಒಳಗೆ ಆರೋಗ್ಯ ಮಂತ್ರಿ ಡಾ. ಕೆ. ಸುಧಾಕರ್ ಭ್ರಷ್ಟಾಚಾರ ನಡೆಸಿದ್ದಾರೆಂದು ಮಾಹಿತಿ ಹಂಚಿಕೊಂಡಿದ್ದರು. ಕೊರೋನ ಸಂದರ್ಭದ ಪಾಪದ ಹಣಕ್ಕೆ ಯಾರೂ ಪ್ರಾಯಶ್ಚಿತ್ತ ಮಾಡಿಕೊಳ್ಳಲಿಲ್ಲ. ಮಾತ್ರವಲ್ಲ ಡಾ. ಕೆ. ಸುಧಾಕರ್, ಬಸವರಾಜ ಬೊಮ್ಮಾಯಿಗೆ ಪಾಪಪ್ರಜ್ಞೆಯೂ ಕಾಡಲಿಲ್ಲ.
ನಂತರ ವ್ಯಾಪಕವಾಗಿ ಸದ್ದು ಮಾಡಿದ್ದು ಪಿಎಸ್‌ಐ ನೇಮಕಾತಿ ಹಗರಣ. ಹಗರಣ ಬೆಳಕಿಗೆ ಬಂದಾಗ ಆರಗ ಜ್ಞಾನೇಂದ್ರ ಅವರು ಗೃಹ ಮಂತ್ರಿಯಾಗಿದ್ದರು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಕಲಬುರಗಿ ಜಿಲ್ಲೆಯ ಹಲವು ಪರೀಕ್ಷಾ ಕೇಂದ್ರಗಳಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದವರು ಆಯ್ಕೆಯಾಗಿದ್ದರು. ಒಎಂಆರ್ ಶೀಟು ಪತ್ತೆಯಾಗಿ ತನಿಖೆ ನಡೆಸಿದಾಗ ಅಮೃತ್ ಪಾಲ್‌ರಂತಹ ಹಿರಿಯ ಅಧಿಕಾರಿಗಳು ಜೈಲು ಪಾಲಾದರು. ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪಿಎಸ್‌ಐ ನೇಮಕಾತಿ ಹಗರಣವನ್ನು ದಾಖಲೆ ಸಮೇತ ಹೊರಹಾಕಿದ್ದರು. ಆಗ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಅವರು ಆರಂಭದಲ್ಲಿ ಏನೂ ನಡೆದಿಲ್ಲವೆಂದೇ ವಾದಿಸುತ್ತಿದ್ದರು. ಒಂದೊಂದೇ ಮಾಹಿತಿ ಹೊರಬೀಳುತ್ತಿದ್ದಂತೆ ಪಿಎಸ್‌ಐ ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಪಡಿಸಿದ್ದರು. ಅಷ್ಟಕ್ಕೂ ಹಗರಣದಲ್ಲಿ ಅಂದಿನ ಉನ್ನತ ಶಿಕ್ಷಣ ಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಅವರ ಪಾತ್ರ ಇರುವುದು ಸುದ್ದಿಯಾಗಿ ಮರೆಯಾಯಿತು. ಈ ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಬೆಳಗಾವಿ ಮೂಲದ ಗುತ್ತಿಗೆದಾರ ಮತ್ತು ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಅಂದಿನ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮಂತ್ರಿ ಕೆ.ಎಸ್. ಈಶ್ವರಪ್ಪ ಲಂಚಕ್ಕೆ ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಏನೂ ನಡೆದಿಲ್ಲ ಎಂದ ಬಿಜೆಪಿ ಮುಖಂಡರು ಕಾಂಗ್ರೆಸ್ ಮುಖಂಡರ ಹೋರಾಟಕ್ಕೆ ಮಣಿದು ಸಚಿವ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆ ಪಡೆದಿದ್ದರು. ಕಾಟಾಚಾರದ ತನಿಖೆ ನಡೆದು ಈಶ್ವರಪ್ಪ ನಿರ್ದೋಷಿ ಎಂದಾಯಿತು. ಕಾಂಗ್ರೆಸ್ ಮುಖಂಡರು ಈಶ್ವರಪ್ಪ ಪ್ರಕರಣವನ್ನು ಚುನಾವಣೆಗಾಗಿ ಬಳಸಿಕೊಂಡರೇ ಹೊರತು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಿಲ್ಲ.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾಗಲೇ ಬಿಜೆಪಿಯ ಗೂಳಿಹಟ್ಟಿ ಶೇಖರ್ ಭೋವಿ ಅಭಿವೃದ್ಧಿ ನಿಗಮದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಸುದ್ದಿಮಾಡಿದ್ದರು. ಲಂಬಾಣಿ ಅಭಿವೃದ್ಧಿ ನಿಗಮದಲ್ಲೂ ಅವ್ಯವಹಾರ, ಅಕ್ರಮ ನಡೆದಿರುವ ದಾಖಲೆ ಹೊರಬಿದ್ದವು. ಗಂಗಾ ಕಲ್ಯಾಣ ಯೋಜನೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಸದನದಲ್ಲೇ ಆರೋಪ ಮಾಡಿದ್ದರು. ಆಗ ಸಮಾಜ ಕಲ್ಯಾಣ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಸಾಕ್ಷಿ ಕೊಡಿ ಎನ್ನುತ್ತಲೇ ಹಗರಣದ ತನಿಖೆಗೆ ನಿರಾಕರಿಸಿದ್ದರು. ಪ್ರತಿಪಕ್ಷಗಳ ಒತ್ತಡಕ್ಕೆ ಮಣಿದ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗಂಗಾ ಕಲ್ಯಾಣ ಯೋಜನೆ ಸೇರಿದಂತೆ ಹಲವು ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆಗೆ ಒಪ್ಪಿಸಿದ್ದರು. ಬಿಜೆಪಿ ಸರಕಾರದಲ್ಲಿನ ಮಿತಿಮೀರಿದ ಭ್ರಷ್ಟಾಚಾರವನ್ನು ಶೇ. 40 ಲಂಚ ಪಡೆಯುವ ಸರಕಾರವೆಂದೇ ಕಾಂಗ್ರೆಸ್ ಪಕ್ಷ ವ್ಯಾಪಕವಾಗಿ ಪ್ರಚಾರ ಮಾಡಿತು. ‘ಪೇಸಿಎಂ ಅಭಿಯಾನ’ ಕಾಂಗ್ರೆಸ್ ಪಾಲಿಗೆ ವರವಾಗಿ ಪರಿಣಮಿಸಿತು. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣದಿದ್ದರೂ ಮತದಾರರು ಹಗರಣಗಳ ಕಾರಣಕ್ಕೆ ಬಿಜೆಪಿ ಸರಕಾರವನ್ನು ಮುಲಾಜಿಲ್ಲದೆ ಕಿತ್ತೊಗೆದರು. ಆಗ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಾಡಿದ ಭ್ರಷ್ಟಾಚಾರದ ಆರೋಪಗಳು ಬಿಜೆಪಿಗೆ ದುಬಾರಿಯಾಗಿ ಪರಿಣಮಿಸಿದ್ದವು.
ಬಿಜೆಪಿ ಸರಕಾರದ ಅವಧಿಯಲ್ಲಿ ಕಾಂಗ್ರೆಸ್ ಮುಖಂಡರು ಅತ್ಯುತ್ಸಾಹದಿಂದ ಭ್ರಷ್ಟಾಚಾರ ಪ್ರಕರಣಗಳನ್ನು ಹೊರಗೆ ಹಾಕುತ್ತಿದ್ದರು. ಹಗರಣಗಳು ಬೆಳಕಿಗೆ ಬಂದಾಗಲೆಲ್ಲ ಸರಕಾರದ ಭಾಗವಾಗಿರುವ ಮಂತ್ರಿಗಳು ನಿಮ್ಮ ಕಾಲದಲ್ಲಿ ಹಗರಣ ನಡೆದಿತ್ತು, ಈಗಿನ ಭ್ರಷ್ಟಾಚಾರ ಪ್ರಕರಣಗಳಿಗೆ ಸಾಕ್ಷಿ ಒದಗಿಸಿ ಎಂದೇ ಭಂಡತನದಿಂದ ವಾದಿಸುತ್ತಿದ್ದರು. ಒಂದು ಬಾರಿ ಭ್ರಷ್ಟಾಚಾರ ಪ್ರಕರಣ ಹೊರಬಂದರೆ; ಆರೋಪ ಪ್ರತ್ಯಾರೋಪಗಳನ್ನು ಸೂಕ್ಷ್ಮವಾಗಿ ಗಮನಿಸುವ ಮತದಾರರು ತಮ್ಮದೇ ಬಗೆಯಲ್ಲಿ ಸರಿ ತಪ್ಪುಗಳನ್ನು ಪರಿಶೀಲಿಸುತ್ತಾರೆ. ಆಡಳಿತ ಪಕ್ಷದವರು ಭ್ರಷ್ಟಾಚಾರ ಪ್ರಕರಣಗಳನ್ನು ನಿಷ್ಪಕ್ಷ ತನಿಖೆಗೆ ಒಪ್ಪಿಸಲಿ, ಬಿಡಲಿ. ಆದರೆ ಮತದಾರರು ಮಾತ್ರ ಸಾರ್ವಜನಿಕ ಬದುಕಿನಲ್ಲಿ ಚರ್ಚೆಗೆ ಬಂದ ಭ್ರಷ್ಟಾಚಾರ ಪ್ರಕರಣಗಳಿಗೆ ತಕ್ಕ ಶಿಕ್ಷೆಯಂತೂ ಕೊಟ್ಟೇ ಕೊಡುತ್ತಾರೆ. ಭ್ರಷ್ಟಾಚಾರ ಪ್ರಕರಣಗಳು ಮಾತ್ರವಲ್ಲ ಪ್ರತಿಯೊಂದು ಸರಕಾರದ ಆಡಳಿತ ವೈಖರಿಯ ಸಮರ್ಪಕ ಮೌಲ್ಯಮಾಪನವನ್ನು ಮತದಾರರಷ್ಟು ವಸ್ತುನಿಷ್ಠ ಮತ್ತು ನಿಖರವಾಗಿ ಯಾವ ಸಮೀಕ್ಷಾ ಸಂಸ್ಥೆಗಳೂ ಮಾಡುವುದಿಲ್ಲ. 2023ರ ವಿಧಾನಸಭಾ ಚುನಾವಣೆಗೂ ಮುಂಚೆ ಹಲವು ಭ್ರಷ್ಟಾಚಾರ ಪ್ರಕರಣಗಳು ವ್ಯಾಪಕವಾಗಿ ಸುದ್ದಿ ಮಾಡಿದ್ದ ಮೇಲೂ ಬಸವರಾಜ ಬೊಮ್ಮಾಯಿ ಮತ್ತು ಬಿಜೆಪಿ ಮುಖಂಡರಿಗೆ ಏನಿಲ್ಲವೆಂದರೂ 90 ಸ್ಥಾನಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆ ಇತ್ತು. ಆದರೆ ಮತದಾರರು ಮಾತ್ರ ಬಿಜೆಪಿಯವರನ್ನು ಹೀನಾಯವಾಗಿ ಸೋಲಿಸಿ ‘ನೀವು ಮಾಡಿದ ತಪ್ಪಿಗೆ ಇದು ಶಿಕ್ಷೆ’ ಎಂದು ತೀರ್ಪು ನೀಡಿಯೇ ಬಿಟ್ಟರು. ಆ ತೀರ್ಪು ಬಿಜೆಪಿ ಸರಕಾರದ ಆಡಳಿತ ವೈಖರಿ, ಭ್ರಷ್ಟಾಚಾರ, ಹಿಂದೂ-ಮುಸ್ಲಿಮ್ ಗಲಭೆ ಸೃಷ್ಟಿಸಲು ಯತ್ನಿಸಿದ್ದು ಸೇರಿದಂತೆ ಎಲ್ಲಾ ಬಗೆಗೆ ತಪ್ಪುಗಳಿಗೆ ಕಠಿಣ ಶಿಕ್ಷೆಯೇ ಆಗಿತ್ತು.
2023ರ ಚುನಾವಣೆ ಫಲಿತಾಂಶ ಬಸವರಾಜ ಬೊಮ್ಮಾಯಿ ಅವರಿಗೆ ಮತ್ತು ಹಿಂದಿನ ಬಿಜೆಪಿ ಸರಕಾರಕ್ಕೆ ಮತದಾರರು ನೀಡಿದ ಕಠಿಣ ಶಿಕ್ಷೆ ಮಾತ್ರವಲ್ಲ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಕಠೋರ ಮಾರ್ಗದರ್ಶಿ ಸೂತ್ರಗಳನ್ನು ನೀಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ 136 ಸ್ಥಾನಗಳನ್ನು ನೀಡಿದ್ದು ಬಿಜೆಪಿಯವರ ಹಾಗೆ ಭ್ರಷ್ಟ ಮತ್ತು ಹೊಣೆಗೇಡಿ ಆಡಳಿತ ನೀಡಲು ಅಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಸರಕಾರದಲ್ಲಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಕಾಣಿಸಿ ಭ್ರಷ್ಟರಿಗೆ ಸಿಂಹ ಸ್ವಪ್ನ ವಾಗುವಂತಹ ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಾರೆಂದೇ ನಾಡಿನ ಜನತೆ ಅಪೇಕ್ಷೆ ಇಟ್ಟುಕೊಂಡಿದ್ದರು. ಅನುಭವಿ ಹಣಕಾಸು ಮಂತ್ರಿ ಸಿದ್ದರಾಮಯ್ಯನವರು ಎರಡನೇ ಅವಧಿಗೆ ಮುಖ್ಯಮಂತ್ರಿ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಾಗ ಕರ್ನಾಟಕಕ್ಕೆ ಒಳ್ಳೆಯ ದಿನಗಳು ಕಾದಿವೆ ಎಂದೇ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಸಿದ್ದರಾಮಯ್ಯನವರು ಅಧಿಕಾರವಹಿಸಿಕೊಂಡ ಕೆಲವು ತಿಂಗಳಲ್ಲೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ವರ್ಗಾವಣೆ ದಂಧೆಯ ಆರೋಪ ಮಾಡಿದಾಗ ಅದೊಂದು ಸಹಜ ರಾಜಕೀಯ ಟೀಕೆ ಎಂದು ಭಾವಿಸಲಾಗಿತ್ತು. ಮತ್ತೆ ಕೆಲವು ತಿಂಗಳ ನಂತರ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ‘ಕಮಿಷನ್’ ಆರೋಪ ಮಾಡಿದಾಗ ಸರಕಾರ ಹಾದಿ ತಪ್ಪಿದೆ ಎಂಬ ಅನುಮಾನ ಕಾಡತೊಡಗಿತು. ಪಿಎಸ್‌ಐ ಹಗರಣದ ಮಾದರಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ವಿವಿಧ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಗುಮಾಸ್ತ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲೂ ಭ್ರಷ್ಟ ಜಾಲ ಕ್ರಿಯಾಶೀಲವಾಗಿದ್ದು ಬಯಲಾಯಿತು. ಅದು ಈ ಸರಕಾರದ ಪ್ರಭಾವಿ ಮಂತ್ರಿ ಪ್ರಿಯಾಂಕ್ ಖರ್ಗೆಯವರು ಉಸ್ತುವಾರಿ ಮಂತ್ರಿ ಆಗಿರುವ ಕಲಬುರಗಿ ಜಿಲ್ಲೆಯಲ್ಲಿ.
ಸರಕಾರ ಬದಲಾಯಿತು. ಮಂತ್ರಿಗಳು ಬದಲಾದರು. ಆದರೆ ಭ್ರಷ್ಟ ವ್ಯವಸ್ಥೆ ಹಾಗೆಯೇ ಮುಂದುವರಿಯಿತು. ಈ ಹಿಂದಿನ ಬಿಜೆಪಿ ಸರಕಾರದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ನಡೆದಿದ್ದು ಆರೋಗ್ಯ ಇಲಾಖೆ, ಉನ್ನತ ಶಿಕ್ಷಣ ಮತ್ತು ಕಿಯೋನಿಕ್ಸ್ ಸಂಸ್ಥೆಯಲ್ಲಿ. ಡಾ. ಕೆ. ಸುಧಾಕರ್ ಅವಧಿಯ ಆರೋಗ್ಯ ಇಲಾಖೆಯ ಕರ್ಮಕಾಂಡಕ್ಕೆ ತಾರ್ಕಿಕ ಅಂತ್ಯ ಕಾಣಿಸಲೇ ಇಲ್ಲ. ಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ನೇತೃತ್ವದ ಉನ್ನತ ಶಿಕ್ಷಣ ಇಲಾಖೆ, ಕಿಯೋನಿಕ್ಸ್‌ನಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು. ನಿಷ್ಪಕ್ಷ ತನಿಖೆ ನಡೆಸಿ ಭ್ರಷ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆಸಿತ್ತು. ಮಂತ್ರಿ ಹೊಸಬರು ಬಂದಿದ್ದಾರೆ. ಭ್ರಷ್ಟ ವ್ಯವಸ್ಥೆ ಮುಂದುವರಿದಿದೆ. ಕೇಂದ್ರದ ನ್ಯಾಷನಲ್ ಟೆಸ್ಟಿಂಗ್ ಏಜನ್ಸಿಗೂ ಮೀರಿಸುವ ಭ್ರಷ್ಟ ವ್ಯವಸ್ಥೆ ಕರ್ನಾಟಕ ಪ್ರಾಧಿಕಾರದಲ್ಲಿದೆ. ಪ್ರಿಯಾಂಕ್ ಖರ್ಗೆ ಮಂತ್ರಿಯಾದ ಆರಂಭದ ದಿನಗಳಲ್ಲಿ ಕಿಯೋನಿಕ್ಸ್ ಸುದ್ದಿ ಮಾಡಿತು. ಕಮಿಷನ್ ಕೇಳುತ್ತಿದ್ದಾರೆ ಎಂದು ಕೆಲವು ವೆಂಡರ್‌ಗಳು ಬಹಿರಂಗವಾಗಿಯೇ ಆರೋಪಿಸಿದ್ದರು. ಮಂತ್ರಿ ಪ್ರಿಯಾಂಕ್ ಖರ್ಗೆಯವರು ಕಿಯೋನಿಕ್ಸ್ ಸಂಸ್ಥೆಯಲ್ಲಿನ ಲೆಕ್ಕಪರಿಶೋಧಕರ ಆಕ್ಷೇಪಣೆಗಳನ್ನು ಹೊರಹಾಕಿದರು. ಮಾತ್ರವಲ್ಲ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯಿಂದ ತನಿಖೆ ಮಾಡಿಸುವುದಾಗಿ ಹೇಳಿ ಬಹಳ ದಿನಗಳಾದವು. ಆದರೆ ಮಂತ್ರಿ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ್ ಕಾಂಗ್ರೆಸ್ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತಾಡುವಷ್ಟು ಬೆಳವಣಿಗೆ ನಡೆದಿದೆ.
ವರ್ಗಾವಣೆ ದಂಧೆ, ಸ್ವಜನ ಪಕ್ಷ, ಗುತ್ತಿಗೆದಾರರ ಕಮಿಷನ್ ಆರೋಪ ಮೀರಿ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅನಧಿಕೃತವಾಗಿ ಫಲಾನುಭವಿಗಳಲ್ಲದವರ ಖಾತೆಗಳಿಗೆ ವರ್ಗಾವಣೆಯಾಗುತ್ತದೆಯೆಂದರೆ; ಅಶ್ವತ್ಥ್ ನಾರಾಯಣ್, ಕೆ. ಸುಧಾಕರ್‌ರಂತಹವರೂ ಮಾತಾಡುವ ಶಕ್ತಿ ಪಡೆದುಕೊಂಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿಯೋ ,ರೂ.193 ಕೋಟಿಯೋ ಅಪರಾತಪರ ಆಗಿದೆಯೆಂದರೆ; ಅದು ಭಾರತದ ಸಂವಿಧಾನಕ್ಕೆ, ಕರ್ನಾಟಕದ ಉಭಯ ಸದನಗಳಿಗೆ, ಅಷ್ಟು ಮಾತ್ರವಲ್ಲ ಒಟ್ಟಾರೆ ಆಡಳಿತ ವ್ಯವಸ್ಥೆಗೆ ಮಾಡಿದ ಅಪಮಾನ. ಇದು ಲಂಚ ಪ್ರಕರಣ ಮೀರಿದ ಹಗಲು ದರೋಡೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಬಹುದೊಡ್ಡ ಮೊತ್ತ ಅನಧಿಕೃತವಾಗಿ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗಿದ್ದು ಉಳಿದ ಯಾವ ಭ್ರಷ್ಟಾಚಾರ ಪ್ರಕರಣಗಳಿಗೂ ಹೋಲಿಸಲಾಗದು. ಯಾವುದೋ ಕೆಲಸ ಮಾಡಿ ಲಂಚ ಪಡೆಯುವುದು ಭ್ರಷ್ಟಾಚಾರ ಎನಿಸಿಕೊಳ್ಳುತ್ತದೆ. ನಿಗಮದಲ್ಲಿನ ಹಣವನ್ನು ಕಾರಣವಿಲ್ಲದೆ, ಸರಕಾರಿ ಆದೇಶವಿಲ್ಲದೆ ಬೇರೊಬ್ಬರ ಖಾತೆಗೆ ವರ್ಗಾಯಿಸುವುದು ಬಹು ದೊಡ್ಡ ಆರ್ಥಿಕ ಅಪರಾಧವಾಗುತ್ತದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘‘ನಾಗೇಂದ್ರ ತಪ್ಪೇ ಮಾಡಿಲ್ಲ’’ ಎಂದು ಪ್ರಮಾಣ ಪತ್ರ ನೀಡುವುದು, ಉಭಯ ಸದನಗಳಲ್ಲಿನ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರು ಬೇರೆ ಭ್ರಷ್ಟಾಚಾರ ಪ್ರಕರಣಗಳೊಂದಿಗೆ ಹೋಲಿಸಿ ಮಾತಾಡುವುದು ಈ ಪ್ರಕರಣದ ಗಂಭೀರತೆ ಮತ್ತು ಅಪರಾಧ ಸ್ವರೂಪ ಅರಿಯದ ಮೂಢರ ಮಾತುಗಳೆನಿಸುತ್ತವೆ. ಮಹರ್ಷಿ ವಾಲ್ಮೀಕಿ ನಿಗಮದ ಹಗರಣವನ್ನು ರಾಜ್ಯ ಸರಕಾರ ನೇಮಿಸಿದ ವಿಶೇಷ ತನಿಖಾ ತಂಡದವರು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳ ಪಾತ್ರವಿರುವುದರಿಂದ ಸಿಬಿಐ, ಈ.ಡಿ.ಗಳು ತನಿಖೆ ನಡೆಸುತ್ತಿವೆ. ವಿಶೇಷ ತನಿಖಾ ತಂಡದ ಅಧಿಕಾರಿಗಳಾಗಲಿ, ಸಿಬಿಐ ಅಧಿಕಾರಿಗಳಾಗಲಿ ಅಕ್ರಮ ಹಣ ವರ್ಗಾವಣೆಯಾದ ಮೂಲ ಮಾಹಿತಿ ಇಟ್ಟುಕೊಂಡೇ ಬಹು ಆಯಾಮಗಳಲ್ಲಿ ತನಿಖೆ ಮಾಡಬೇಕಾಗುತ್ತದೆ. ಇಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಮಾತಿನಲ್ಲಿ ನಂಬಿಕೆ ಇರುವವರು ತುಸುಕಾಲ ನಿಷ್ಪಕ್ಷ ತನಿಖೆಗೆ ಸಹಕರಿಸಬೇಕು.
ಈ ಪ್ರಕರಣದಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಲೆಕ್ಕಾಧಿಕಾರಿ ಚಂದ್ರಶೇಖರ್ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ಸುದ್ದಿಯಾದ ಮೇಲೆ ಪರಿಶಿಷ್ಟ ಪಂಗಡಗಳ ಖಾತೆಯ ಸಚಿವ ಬಿ. ನಾಗೇಂದ್ರ ರಾಜೀನಾಮೆ ನೀಡಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಂತದಲ್ಲಿ ಸರಕಾರ ಮತ್ತು ಪ್ರತಿಪಕ್ಷಗಳು ಪರೋಕ್ಷವಾಗಿ ಭ್ರಷ್ಟಾಚಾರವನ್ನು, ಆರ್ಥಿಕ ಅಪರಾಧಗಳನ್ನು ಸಮರ್ಥಿಸುವ ಹೇಳಿಕೆಗಳನ್ನು ಕೊಡುವುದು ನಿಲ್ಲಿಸಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುಟುಂಬದವರ ಮೇಲೆ ಮಾಡಿದ ಮುಡಾ ಹಗರಣದ ಆರೋಪಕ್ಕೂ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಣ ವರ್ಗಾವಣೆ ಪ್ರಕರಣಕ್ಕೂ ಅಜಗಜಾಂತರವಿದೆ. ಬಿಜೆಪಿ-ಜೆಡಿಎಸ್‌ನವರೂ ಭ್ರಷ್ಟರೇ ಎಂಬ ಕಾಂಗ್ರೆಸ್‌ನವರ ವಾದವನ್ನು ಯಾರೂ ತಪ್ಪು ಎಂದು ಹೇಳಲಾಗದು. ಬಿಜೆಪಿ ಸರಕಾರದಲ್ಲಿನ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ಒಂದು ತನಿಖಾ ಆಯೋಗ ರಚಿಸಿ ನಿಷ್ಪಕ್ಷ ತನಿಖೆ ನಡೆಸಲಿ. ಉಪ್ಪು ತಿಂದವರಿಗೆ ನೀರು ಕುಡಿಸಲಿ. ಬಿಜೆಪಿಯವರ ಒಟ್ಟು ಭ್ರಷ್ಟಾಚಾರ ಮಹರ್ಷಿ ವಾಲ್ಮೀಕಿ ನಿಗಮದಲ್ಲಿನ ಹಗರಣದ ಸಮರ್ಥನೆಗೆ ಸಬೂಬು ಆಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವಾದಿ ಹಿನ್ನೆಲೆಯಿಂದ ಬಂದವರು. ಕನಿಷ್ಠ ಸಾರ್ವಜನಿಕ ‘ಲಜ್ಜೆ’ ಹೊಂದಿದ್ದಾರೆ ಎಂಬ ಕಾರಣಕ್ಕೆ ವಿಶೇಷವಾಗಿ ಗೌರವಿಸಲ್ಪಡುತ್ತಾರೆ.
ಸುದೀರ್ಘಕಾಲ ಹಣಕಾಸು ಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಆರ್ಥಿಕ ಅಪರಾಧವನ್ನು ರಾಜಕಾರಣದ ಭಾಗವಾಗಿ ನೋಡದೆ ರಾಜ್ಯ ಸರಕಾರವೊಂದರ ಹಣಕಾಸು ವ್ಯವಸ್ಥೆಯ ಶಿಸ್ತಿನ ಅಗತ್ಯದ ನೆಲೆಯಲ್ಲಿ ಪರಿಭಾವಿಸಬೇಕು. ಕರ್ನಾಟಕದಲ್ಲಿ ಸಾಕಷ್ಟು ಹಗರಣಗಳು ಸುದ್ದಿ ಮಾಡಿವೆ. ಸರಕಾರ ಹೋಗಿವೆ-ಬಂದಿವೆ. ಕೆಲವೊಮ್ಮೆ ಪಾಠವಾಗಿ ಪರಿಣಮಿಸಿವೆ. ಭ್ರಷ್ಟಾಚಾರವನ್ನು ತಗ್ಗಿಸುವ ಅಗತ್ಯವನ್ನು ಮನಗಾಣಿಸಿವೆ. ಇಡೀ ಆಡಳಿತ ವ್ಯವಸ್ಥೆಯನ್ನು ಬುಡಮೇಲು ಮಾಡುವ ಈ ಪ್ರಕರಣ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವುದರ ಜೊತೆಗೆ ಸರಕಾರಿ ವ್ಯವಸ್ಥೆಯಲ್ಲಿ ಆರ್ಥಿಕ ಶಿಸ್ತು ತರಲು ಕಾರಣೀಭೂತವಾಗಲಿ.
ಒಂದು ಜನಪರ ಪ್ರಬುದ್ಧ ಸರಕಾರ ಮತ್ತು ಅದನ್ನು ಮುನ್ನಡೆಸುವ ರಾಜಕಾರಣಿಗಳು ಮುತ್ಸದ್ದಿಗಳಾಗಿದ್ದರೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಾಗ ನಿಷ್ಪಕ್ಷ ತನಿಖೆ ನಡೆಸಿ ಸತ್ಯವನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಬೇಕು. ಭ್ರಷ್ಟಾಚಾರದ ಆರೋಪ ಮಾಡುವ ಪ್ರತಿಪಕ್ಷದವರು ತಮ್ಮ ಸರಕಾರ ಇದ್ದಾಗಲೂ ಆರೋಪಗಳು ಕೇಳಿ ಬಂದಿದ್ದವು ಎನ್ನುವುದು ನೆನಪಿಸಿಕೊಳ್ಳಬೇಕು. ಅಷ್ಟು ಮಾತ್ರವಲ್ಲ ಒಟ್ಟು ವ್ಯವಸ್ಥೆ ಸ್ವಚ್ಛವಾಗಬೇಕು ಎಂಬ ಇರಾದೆ ಪ್ರತಿಪಕ್ಷದವರಿಗೆ ಇದ್ದಿದ್ದರೆ ಎಲ್ಲಾ ಕಾಲದ ಹಗರಣಗಳ ತನಿಖೆಗೆ ಒತ್ತಾಯಿಸಿ ಭ್ರಷ್ಟಾಚಾರ ಪ್ರಕರಣಗಳು ಮರುಕಳಿಸದಂತೆ ಕಠಿಣ ನಿಯಮ ರೂಪಿಸಬೇಕು.