ನಾಟಕ-ಸಂಗೀತ: ಪ್ರಶಸ್ತಿಯಲ್ಲಿ ಗೋಲ್‌ಮಾಲ್
ರಾಜಕೀಯ ಕಾರಣಕ್ಕೆ ಮುಖ್ಯಮಂತ್ರಿಯ ಸಿದ್ದರಾಮಯ್ಯನವರನ್ನು ಹಣಿಯಲು ಪ್ರತಿಪಕ್ಷಗಳು, ಸ್ವಪಕ್ಷದ ಕೆಲವರು ಯತ್ನಿಸುತ್ತಿರಬಹುದು. ಆದರೆ ಅವರ ಸಾಮಾಜಿಕ ಬದ್ಧತೆ, ಅಭಿವೃದ್ಧಿಪರ ಕಾಳಜಿ ಮತ್ತು ಭ್ರಷ್ಟಾತಿಭ್ರಷ್ಟ ವ್ಯವಸ್ಥೆಯಲ್ಲೂ ಶಕ್ತಿಮೀರಿ ಪ್ರಾಮಾಣಿಕವಾಗಿ ಬದುಕಬೇಕೆಂಬ ಹಂಬಲ-ತುಡಿತ ಬೇರೆ ಯಾವ ರಾಜಕಾರಣಿಯಲ್ಲೂ ಕಾಣುವುದಿಲ್ಲ. ಸಿದ್ದರಾಮಯ್ಯನವರ ಸಣ್ಣಪುಟ್ಟ ದೋಷಗಳನ್ನು ಎತ್ತಿ ತೋರಿಸಿ ಆಡಿಕೊಳ್ಳುವುದು ಸುಲಭ. ಆದರೆ ಅವರಂತೆ ಸರಳವಾಗಿ ಬದುಕುವುದು ಕಷ್ಟ. ಸಿದ್ದರಾಮಯ್ಯನವರನ್ನು ಮ್ಯಾಚ್ ಮಾಡುವ ಮತ್ತೊಬ್ಬ ಜನನಾಯಕ ಕಾಂಗ್ರೆಸ್ ಪಕ್ಷದಲ್ಲಾಗಲಿ, ಬೇರೆ ಪಕ್ಷದಲ್ಲಾಗಲಿ ನೋಡಲು ಸಿಗುವುದಿಲ್ಲ. ವಿಶೇಷವಾಗಿ ಸಾಹಿತ್ಯ-ಸಂಸ್ಕೃತಿ ಮತ್ತು ಸಾಹಿತಿ, ಕಲಾವಿದರ ಬಗ್ಗೆ ಅವರಿಗಿರುವ ಪ್ರೀತಿ-ಗೌರವ ಅಪಾರ. ಅವರ ಸಲಹೆಗಾರರಿಂದಾಗಿ ಸಾಂಸ್ಕೃತಿಕ ಲೋಕದಲ್ಲಿ ಕೆಲವು ತಪ್ಪು ನಿರ್ಧಾರಗಳನ್ನು ಕೈಗೊಂಡಿರಬಹುದು. ಆದರೆ ಅವರಾಗಿಯೇ ತಪ್ಪು ಮಾಡುವುದಿಲ್ಲ. ರಾಜ್ಯೋತ್ಸವ ಪ್ರಶಸ್ತಿ, ಸಾಂಸ್ಕೃತಿಕ ಲೋಕದ ವಿವಿಧ ಉನ್ನತ ಪ್ರಶಸ್ತಿಗಳ ಆಯ್ಕೆಯಲ್ಲಿ ಒಮ್ಮೆಯೂ ಹಸ್ತಕ್ಷೇಪ ಮಾಡಿದ, ಇಂಥವರಿಗೇ ಕೊಡಿ ಎಂದು ಸೂಚನೆ ನೀಡಿದ ಒಂದೇ ಒಂದು ನಿದರ್ಶನ ಕಳೆದ ಆರು ವರ್ಷಗಳ ಆಧಿಕಾರವಧಿಯಲ್ಲಿ ದೊರೆಯುವುದಿಲ್ಲ. ಸಿದ್ದರಾಮಯ್ಯನವರ ಆಳದ ಕಾಳಜಿ ಇಷ್ಟೇ: ಪ್ರತಿಭಾವಂತರು, ಪ್ರಶಸ್ತಿಗೆ ಅರ್ಹರಾದವರು ಎಲ್ಲಾ ಜಾತಿ, ಮತ, ಪಂಥ, ಧರ್ಮ, ಪ್ರದೇಶಗಳಲ್ಲಿ ಇದ್ದಾರೆ. ಅರ್ಹ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡುವಾಗ ಪ್ರತಿಭಾ ನ್ಯಾಯ, ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಅಪೇಕ್ಷಿಸುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಯಾವ ಸಮುದಾಯದ ಬಗ್ಗೆಯೂ ಪೂರ್ವಗ್ರಹಗಳಿಲ್ಲ. ಇತ್ತೀಚೆಗೆ ಲಿಂಗಾಯತ ಸಮುದಾಯದ ಎಸ್.ಕೆ. ಕಾಂತಾ ಅವರನ್ನು ಆಯ್ಕೆ ಸಮಿತಿಯು ದೇವರಾಜ ಅರಸು ಪ್ರಶಸ್ತಿಗೆ ಆಯ್ಕೆ ಮಾಡಿತ್ತು. ಆ ಆಯ್ಕೆಯನ್ನು ಸಿದ್ದರಾಮಯ್ಯನವರು ಮುಕ್ತ ಮನಸ್ಸಿನಿಂದ ಕೊಂಡಾಡಿದ್ದರು. ಅವರಿಗೆ ಸಾಮಾಜಿಕ ನ್ಯಾಯದ ಪರಿಪಾಲನೆಯಾಗುವುದು ಮುಖ್ಯ. ಸಾಮಾಜಿಕ ನ್ಯಾಯಕ್ಕಾಗಿ ನೈಜ ಕಾಳಜಿಯೊಂದಿಗೆ ದುಡಿಯುವ ಎಲ್ಲಾ ಸಾಧಕರು ‘ಅರಸು ಪ್ರಶಸ್ತಿ’ ಪಡೆಯಲು ಯೋಗ್ಯ ಎಂಬುದು ಅವರ ಒಟ್ಟು ಅಭಿಪ್ರಾಯವಾಗಿತ್ತು. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೆಲ್ಲ ನಿಜವಾದ ಸಾಧಕರಿಗೇ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ವಿವಿಧ ಪ್ರಶಸ್ತಿಗಳು ದೊರೆತಿದ್ದರಿಂದ ಅವುಗಳ ಮೌಲ್ಯ ಹೆಚ್ಚಿದೆ. ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರಿಗೇ ಈ ಪರಿಯ ಸೂಕ್ಷ್ಮತೆ, ಪ್ರಜಾಸತ್ತಾತ್ಮಕ ಅರಿವು ಇರಬೇಕಾದರೆ ಅವರ ಮೂಲಕ ನೇಮಕಗೊಳ್ಳುವ ವಿವಿಧ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರು ಅದೆಷ್ಟು ಸಂವೇದನಾಶೀಲರಾಗಿ ನಡೆದುಕೊಳ್ಳಬೇಕು. ಆದರೆ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ಮತ್ತು ಕರ್ನಾಟಕ ಸಂಗೀತ ಮತ್ತು ಅಕಾಡಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ ಅವರು ಸಾಮಾಜಿಕ ನ್ಯಾಯ ಪರಿಕಲ್ಪನೆಯನ್ನು ಗಾಳಿಗೆ ತೂರಿ ಪ್ರಶಸ್ತಿಗಳನ್ನು ಹರಾಜಿಗಿಟ್ಟಂತೆ ಹಂಚಿದ್ದಾರೆ. ಪ್ರಶಸ್ತಿಗಳ ಕಿಮ್ಮತ್ತನ್ನೇ ಕಳೆದಿದ್ದಾರೆ. ಅಷ್ಟು ಮಾತ್ರವಲ್ಲ ಅಕಾಡಮಿಗಳ ಬೈಲಾದ ನಿಯಮಾವಳಿಗಳನ್ನು ಧಿಕ್ಕರಿಸಿ ಪ್ರಶಸ್ತಿಗಳನ್ನು ನೀಡಿದ್ದಾರೆ.
ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ ರೈತ ಸಂಘಟಕ, ಒಂದು ಕಾಲದಲ್ಲಿ ಕಾಲೇಜು ರಂಗಭೂಮಿಗೆ ಜೀವ ತುಂಬಿದವರು. ಬಿ.ಎಲ್. ಶಂಕರ್ ಸೇರಿದಂತೆ ಹಲವು ರಾಜಕಾರಣಿಗಳ ಒಡನಾಡಿ. ಅವರಿಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆಯ ಪಾಠ ಹೇಳಿಸಿಕೊಳ್ಳುವ ಸನ್ನಿವೇಶ ಎದುರಾಗ ಬಾರದಿತ್ತು. ಅಷ್ಟಕ್ಕೂ ಕನ್ನಡ ರಂಗಭೂಮಿ ತನ್ನ ಸ್ವರೂಪದಲ್ಲೇ ಅಪ್ಪಟ ಜಾತ್ಯತೀತವಾದುದು. ಕನ್ನಡ ರಂಗಭೂಮಿಯಲ್ಲಿ ಪ್ರತಿಭಾವಂತರಿಗೆ ಕೊರತೆ ಇಲ್ಲ. ಎಲ್ಲಾ ಪ್ರದೇಶ, ಎಲ್ಲ ಸಮುದಾಯಗಳಲ್ಲೂ ಅರ್ಹ ಸಾಧಕರಿದ್ದಾರೆ. ಪ್ರತಿಭಾವಂತ ಮಹಿಳಾ ಸಾಧಕರ ಸಂಖ್ಯೆ ಜಾಸ್ತಿಯೇ ಇದೆ. ನಾಗರಾಜ ಮೂರ್ತಿ ಪ್ರಶಸ್ತಿ ಆಯ್ಕೆಯ ಸಂದರ್ಭದಲ್ಲಿ ತುಸು ಪ್ರಜಾಸತ್ತಾತ್ಮಕವಾಗಿ ನಡೆದುಕೊಂಡಿದ್ದರೆ, ಕಣ್ಣಿಗೆ ಆವರಿಸಿಕೊಂಡಿರುವ ಜಾತಿ ಪೊರೆ ಕಳಚಿಕೊಂಡಿದ್ದರೆ, ಕರ್ನಾಟಕದಲ್ಲಿ 31 ಜಿಲ್ಲೆಗಳಿವೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದರೆ, ಅರ್ಹರನ್ನು ಪ್ರಶಸ್ತಿಗೆ ಆಯ್ಕೆ ಮಾಡಬಹುದಿತ್ತು. ಹಾಗೆ ನೋಡಿದರೆ ಕೆ.ವಿ. ನಾಗರಾಜ ಮೂರ್ತಿ ಅವರಿಗೆ 2022, 2023 ಮತ್ತು 2024ನೇ ಸಾಲಿನ ಒಟ್ಟು ಮೂರು ವರ್ಷಗಳ ಪ್ರಶಸ್ತಿ ನೀಡುವ ಅವಕಾಶ ದೊರೆತಿತ್ತು. ಪ್ರತೀ ವರ್ಷ ಕರ್ನಾಟಕ ನಾಟಕ ಅಕಾಡಮಿ ಒಂದು ಗೌರವ ಪ್ರಶಸ್ತಿ, ಐದು ದತ್ತಿ ಪ್ರಶಸ್ತಿ, 25 ವಾರ್ಷಿಕ ಪ್ರಶಸ್ತಿಗಳನ್ನು ನೀಡುತ್ತಿದೆ. ಕಲ್ಚರಲ್ ಕಮೇಡಿಯನ್ ಕೆ. ಹಿರಣ್ಯಯ್ಯ ದತ್ತಿ, ಚಿಂದೋಡಿ ವೀರಪ್ಪ ದತ್ತಿ, ಚಿಂದೋಡಿ ಲೀಲಾ ದತ್ತಿ, ರಾಮಚಂದ್ರಯ್ಯ ದತ್ತಿ, ಮಾಲತಿಶ್ರೀ ಮೈಸೂರು ದತ್ತಿ ಪ್ರಶಸ್ತಿಗಳಿಗೆ ವಿಶೇಷ ಕ್ಷೇತ್ರಗಳಲ್ಲ್‌ನ ಸಾಧಕರನ್ನು ಆಯ್ಕೆ ಮಾಡುತ್ತಾರೆ. ಕನ್ನಡ ರಂಗಭೂಮಿಯ ಶ್ರೇಷ್ಠ ನಟಿ ಉಮಾಶ್ರೀ, ಕನ್ನಡದ ಹೆಸರಾಂತ ಕವಿ, ನಾಟಕಗಾರ ಎಚ್.ಎಸ್. ಶಿವಪ್ರಕಾಶ್, ಕನ್ನಡ ರಂಗಭೂಮಿಯಲ್ಲಿ ವಿಶಿಷ್ಟ ಪ್ರಯೋಗ ಮಾಡಿ ಯಶಸ್ವಿಯಾದ ಕೋಟಗಾನಹಳ್ಳಿ ರಾಮಯ್ಯ ಅವರನ್ನು ಕರ್ನಾಟಕ ನಾಟಕ ಅಕಾಡಮಿಯ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಈ ಆಯ್ಕೆಯನ್ನು ಎಲ್ಲರೂ ಶ್ಲಾಘಿಸಲೇಬೇಕು.
ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷ ನಾಗರಾಜ ಮೂರ್ತಿ ವಾರ್ಷಿಕ ಪ್ರಶಸ್ತಿ ಮತ್ತು ವಿವಿಧ ದತ್ತಿ ಪ್ರಶಸ್ತಿಗಳನ್ನು ಯಾವುದೇ ಮಾನದಂಡ ಅನುಸರಿಸದೆ, ನಿಯಮಾವಳಿ ಪಾಲಿಸದೆ ಎಷ್ಟು ಸಾಧ್ಯವೋ ಅಷ್ಟು ತನಗೆ ಬೇಕಾದವರಿಗೆ ಹಂಚಿಬಿಟ್ಟಿದ್ದಾರೆ. ಪ್ರಶಸ್ತಿಗಳ ಮೌಲ್ಯವನ್ನು ಮಣ್ಣುಪಾಲು ಮಾಡಿದ್ದಾರೆ. ಕರ್ನಾಟಕ ನಾಟಕ ಅಕಾಡಮಿಯ ಪ್ರಶಸ್ತಿ ಆಯ್ಕೆಗಾಗಿ ಕರೆದಿರುವ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ನಾಗರಾಜ ಮೂರ್ತಿ ಮುಖ್ಯಮಂತ್ರಿ ಮತ್ತು ಸಂಸ್ಕೃತಿ ಸಚಿವರ ಕಚೇರಿಗಳ ಹೆಸರುಗಳನ್ನು ಬಳಸಿಕೊಂಡಿದ್ದಾರೆ. ‘‘ಪ್ರತಿಯೊಬ್ಬ ಸದಸ್ಯ ಪ್ರಶಸ್ತಿಗಾಗಿ ಒಂದೊಂದು ಹೆಸರನ್ನು ಸೂಚಿಸಬಹುದು. ನನ್ನ ಮೇಲೆ ಬಹಳ ಒತ್ತಡವಿದೆ. ಮುಖ್ಯಮಂತ್ರಿ ಮತ್ತು ಸಚಿವರ ಕಚೇರಿಯಿಂದ ದೊಡ್ಡ ಪಟ್ಟಿ ಕಳಿಸಿದ್ದಾರೆ. ಆ ಪಟ್ಟಿಯಲ್ಲಿರುವ ಎಲ್ಲರಿಗೂ ನಾನು ಪ್ರಶಸ್ತಿ ನೀಡಲೇಬೇಕು. ನೀವು ಸೂಚಿಸಿದವರ ಹೆಸರುಗಳು ಪ್ರಶಸ್ತಿ ಪಟ್ಟಿಯಲ್ಲಿ ಸೇರದಿದ್ದಾಗ ಬೇಜಾರು ಮಾಡಿಕೊಳ್ಳಬೇಡಿ. ಸರಕಾರದ ಶಿಫಾರಸುಗಳನ್ನು ಅನಿವಾರ್ಯವಾಗಿ ಪಾಲಿಸಲೇ ಬೇಕಾಗುತ್ತದೆ’’ ಎಂದು ಹೇಳಿ ಎಲ್ಲ ಸದಸ್ಯರೆದುರು ಮುಖ್ಯಮಂತ್ರಿ ಮತ್ತು ಸಂಸ್ಕೃತಿ ಸಚಿವರನ್ನು ಖಳನಾಯಕರಂತೆ ಬಿಂಬಿಸಿದ್ದಾರೆ. ಪಾಪ ಅಮಾಯಕ ಸದಸ್ಯರು ಒತ್ತಡ ಇದ್ದರೂ ಇರಬಹುದೇನೋ ಎಂದು ಸುಮ್ಮನಾಗಿದ್ದಾರೆ. ಆಯ್ಕೆ ಪ್ರಕ್ರಿಯೆ ಬಗ್ಗೆ ಅರಿವಿಲ್ಲದ ಸದಸ್ಯರು ತಮಗೆ ಬೇಕಾದವರ ಹೆಸರನ್ನು ಸೂಚಿಸಿ ಕೈ ತೊಳೆದುಕೊಂಡಿದ್ದಾರೆ. ಒಳ್ಳೆಯ ಉದ್ದೇಶಕ್ಕೆ, ಶ್ರೇಷ್ಠ ಸಾಧಕರ ಆಯ್ಕೆಗೆ ಮುಖ್ಯಮಂತ್ರಿಗಳ ಕಚೇರಿಯ ಹೆಸರನ್ನು ಬಳಸಿಕೊಂಡಿದ್ದರೆ ಹೋಗಲಿ ಬಿಡು ಎಂದು ಕ್ಷಮಿಸಬಹುದಿತ್ತು. ಆದರೆ ನಾಗರಾಜ ಮೂರ್ತಿ ಪ್ರಶಸ್ತಿಗಳನ್ನು ತನಗೆ ಬೇಕಾದವರಿಗೆ ಹಂಚುವ ಮೂಲಕ ಪ್ರಶಸ್ತಿಗಳ ಪಾವಿತ್ರ್ಯವನ್ನು ಹಾಳು ಮಾಡಿದ್ದಾರೆ.
ಸಾಮಾನ್ಯವಾಗಿ ಪ್ರಶಸ್ತಿ ಆಯ್ಕೆಗೆ ಕೆಲವು ಮಾನದಂಡಗಳನ್ನು ರೂಪಿಸಿ ಪಾಲಿಸಲಾಗುತ್ತದೆ. ವಯಸ್ಸಿನ ಮಿತಿಯನ್ನೂ ನಿಗದಿ ಮಾಡಬೇಕಾಗುತ್ತದೆ. ಕರ್ನಾಟಕ ನಾಟಕ ಅಕಾಡಮಿಯಲ್ಲಿ ಮೊದಲಿನಿಂದಲೂ ಮಹಿಳೆಯರಿಗೆ 40 ವರ್ಷ, ಪುರುಷ ಕಲಾವಿದರಿಗೆ 45 ವರ್ಷ ಕನಿಷ್ಠ ವಯೋಮಿತಿಯನ್ನು ನಿಗದಿಪಡಿಸಿ ಅದರಂತೆ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡುವ ಪದ್ಧತಿ ಇದೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಕನಿಷ್ಠ ವಯೋಮಿತಿಯನ್ನು 60ಕ್ಕೆ ಮಿತಿಗೊಳಿಸಲಾಗಿದೆ. ನಾಗರಾಜ ಮೂರ್ತಿ ಅದ್ಯಾವುದನ್ನೂ ಪರಿಗಣಿಸಿಲ್ಲ. ಡಾ. ಬೇಲೂರು ರಘುನಂದನ್ ಎಂಬ 39 ವರ್ಷ ವಯಸ್ಸಿನ ವ್ಯಕ್ತಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ. ಪ್ರಶಸ್ತಿ ಆಯ್ಕೆಯಲ್ಲಿ ಭಾಗವಹಿಸಿದ ವ್ಯಕ್ತಿ ತನ್ನ ರಕ್ತಸಂಬಂಧಿಕರಿಗೆ ಪ್ರಶಸ್ತಿ ನೀಡಬಾರದು. ನಾಟಕ ಅಕಾಡಮಿಯಲ್ಲಿ ಗೀತಾ ಸಿದ್ದಿ ಸದಸ್ಯರಾಗಿದ್ದಾರೆ. ಆದರೆ ಅವರ ಸ್ವಂತ ಸಹೋದರಿ ಗಿರಿಜಾ ಸಿದ್ದಿಯವರಿಗೆ ನಾಟಕ ಅಕಾಡಮಿಯ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ನಟ ಅಚ್ಯುತ್ ಕುಮಾರ್, ನಾಟಕಕಾರ ಲಕ್ಷ್ಮೀಪತಿ ಕೋಲಾರ, ಪ್ರತಿಭಾವಂತ ನಿರ್ದೇಶಕ ಬಿ. ಸುರೇಶ್ ಸೇರಿದಂತೆ 15-20 ಜನ ಪ್ರತಿಭಾವಂತ ಸಾಧಕರಿಗೆ ನಾಟಕ ಅಕಾಡಮಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಆಯ್ಕೆಯಲ್ಲಿ ಮಹಿಳಾ ಸಾಧಕರ ಪಾಲು ಕಡಿಮೆ ಇದೆ. 93 ಜನ ಪ್ರಶಸ್ತಿ ಪುರಸ್ಕೃತರಲ್ಲಿ ಕೇವಲ 14 ಜನ ಮಹಿಳೆಯರಿಗೆ ಪ್ರಶಸ್ತಿಯ ಭಾಗ್ಯ ದೊರೆತಿದೆ. ನಾಗರಾಜ ಮೂರ್ತಿಯವರ ಪ್ರಕಾರ ಕರ್ನಾಟಕ ರಂಗಭೂಮಿಯಲ್ಲಿ ಮಹಿಳೆಯರ ಪಾತ್ರ ಕಡಿಮೆ. ಆದರೆ ವಾಸ್ತವದಲ್ಲಿ ಮಹಿಳೆಯರು ಹವ್ಯಾಸಿ ಮತ್ತು ವೃತ್ತಿರಂಗಭೂಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಲಾವಿದರು ಲಿಂಗಾಯತ, ಬ್ರಾಹ್ಮಣ ಯಾವುದೇ ಸಮುದಾಯಕ್ಕೆ ಸೇರಿದವರಿರಲಿ ಅವರು ಪ್ರತಿಭಾವಂತರಿದ್ದು ಗಣನೀಯ ಸಾಧನೆ ಮಾಡಿದ್ದರೆ ಪ್ರಶಸ್ತಿಗೆ ಪರಿಗಣಿಸಬೇಕು. ಆದರೆ ಶಂಕರ್ ಹಲಗುತ್ತಿ, ಚಂದ್ರಶೇಖರ ವಸ್ತ್ರದ ಸೇರಿದಂತೆ ಕೆಲವರದು ಶೂನ್ಯ ಸಾಧನೆ. ಲಿಂಗಾಯತರು ಎಂಬ ಕಾರಣಕ್ಕೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರಶಸ್ತಿ ಪಟ್ಟಿಯಲ್ಲಿ ತುಮಕೂರು, ಬೆಂಗಳೂರು ಜಿಲ್ಲೆಗಳು ಸಿಂಹಪಾಲು ಪಡೆದಿವೆೆ. ಯಾದಗಿರಿ ಜಿಲ್ಲೆಯ ಕೋಟಾದಲ್ಲಿ ಹೊರಗಿನವರಿಗೆ ಅವಕಾಶ ಕಲ್ಪಿಸಲಾಗಿದೆ. ಸಿದ್ದರಾಮಯ್ಯನವರು ಪ್ರತಿಪಾದಿಸುವ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯ ತತ್ವವನ್ನು ಪ್ರಶಸ್ತಿ ಆಯ್ಕೆಯಲ್ಲಿ ನಾಗರಾಜ ಮೂರ್ತಿ ಪರಿಗಣಿಸಿಯೇ ಇಲ್ಲ. ಪ್ರತಿಭಾ ನ್ಯಾಯ ಎಂಬುದು ಕಾಲ ಕಸವಾಗಿದೆ. ಮೋದಿ ಭಜನಾ ಮಂಡಳಿಯ ಸದಸ್ಯರು ಸುಖಾಸಮ್ಮನೆ ಭಾಜನರಾಗಿದ್ದಾರೆ. ಪ್ರಶಸ್ತಿ ಆಯ್ಕೆಯಲ್ಲಿ ಪ್ರತಿಭಾವಂತರನ್ನು, ಅವಕಾಶ ವಂಚಿತರನ್ನು ಹುಡುಕುವ ಗೋಜಿಗೆ ಹೋಗಿಲ್ಲ. ನಾಗರಾಜ ಮೂರ್ತಿಯವರ ‘ಪ್ರತಿಭಾ ವಿರೋಧಿ ನ್ಯಾಯ’ ಉಳಿದವರಿಗೆ ಮಾದರಿಯಾಗಿದೆ. ಹಿರಿಯಣ್ಣನ ಚಾಳಿ ಮನೆಮಂದಿಗೆಲ್ಲ ಎನ್ನುವಂತೆ ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ ಅವರು ನಾಗರಾಜ ಮೂರ್ತಿಯವರ ಮಾದರಿಯನ್ನೇ ಅನುಸರಿಸಿದ್ದಾರೆ. ದಿ. 2.9.2014ರಂದು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ಸಾಮಾನ್ಯ ಸಭೆ ಕರೆದಿದ್ದಾರೆ. ಪ್ರಶಸ್ತಿ ಆಯ್ಕೆಗಾಗಿ ಕರೆದಿರುವ ಆ ಸಭೆಯಲ್ಲಿ ಅಕಾಡಮಿ ಅಧ್ಯಕ್ಷೆ ಶ್ರೀಮತಿ ಶುಭಾ ಧನಂಜಯ ಅವರೂ ನಾಗರಾಜ ಮೂರ್ತಿಯವರ ಹಾಗೆ- ‘‘ಪ್ರಶಸ್ತಿಗಾಗಿ ಮುಖ್ಯಮಂತ್ರಿಗಳ ಕಚೇರಿಯಿಂದ ಒತ್ತಡವಿದೆ ಅವರು ಒಂದು ಪಟ್ಟಿ ಕಳಿಸಿದ್ದಾರೆ. ನೀವು ಹೆಸರುಗಳನ್ನು ಕೊಡಿ. ನಿಮ್ಮ ಹೆಸರುಗಳಲ್ಲಿ ಕೆಲವೊಂದು ಬಿಟ್ಟು ಹೋಗಬಹುದು. ಯಾರೂ ಬೇಜಾರು ಮಾಡಿಕೊಳ್ಳಬೇಡಿ’’ ಎಂದು ಸಿಂಪತಿ ಗಿಟ್ಟಿಸುವ ಡೈಲಾಗ್ ಹೊಡೆದಿದ್ದಾರೆ. ಅಧ್ಯಕ್ಷರ ಮಾತಿಗೆ ಕೆರಳಿ ಕೆಂಡವಾದ ಬಹುತೇಕ ಸದಸ್ಯರು ‘‘ಮಂತ್ರಿಗಳೇ ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸುವುದಾದರೆ ನಾವ್ಯಾಕೆ ಸದಸ್ಯರಾಗಿರಬೇಕು?’’ ಎಂದು ಗಲಾಟೆ ಮಾಡಿದ್ದಾರೆ. ಆ ಕಾರಣಕ್ಕೆ ಸಭೆ ಮಧ್ಯಾಹ್ನ ಶುರುವಾಗಿದೆ.
ಸಭೆಯಲ್ಲಿ ಪ್ರಶಸ್ತಿಗಾಗಿ ಹೆಸರುಗಳನ್ನು ಸೂಚಿಸುವ ಸದಸ್ಯರಿಗೆ ‘ಪ್ರತಿಭಾ ನ್ಯಾಯ, ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯದಂತಹ ಮತ್ತು ಅವಕಾಶವಂಚಿತ ಹಿರಿಯ ಸಾಧಕರನ್ನು ಗುರುತಿಸುವ’ ಹೊಣೆಗಾರಿಕೆ ವಹಿಸಬೇಕಿತ್ತು. ಆದರೆ ಅಧ್ಯಕ್ಷರೇ ಮಂತ್ರಿಗಳು ಕಳುಹಿಸಿದ ಪಟ್ಟಿ ಎಂದು ‘ಸತೀಶ್ ಹಂಪಿಹೊಳಿ, ಸಂಗೀತ ಕಟ್ಟಿ...’ ಎಂದು ಮೋದಿ ಭಜನಾಮಂಡಳಿಗಳಿಗೆ ಸೇರಿದ ಒಂದೇ ಜಾತಿಯ ಆರೇಳು ಹೆಸರುಗಳನ್ನು ಹೇಳಿದ್ದಾರೆ. ಅಧ್ಯಕ್ಷರ ಬಾಯಲ್ಲಿ ಪ್ರತಿಭಾವಂತ ಶೂದ್ರ ಮತ್ತು ದಲಿತರ ಹೆಸರು ಬರಲೇ ಇಲ್ಲ. ಮೋದಿ ಭಜನಾ ಮಂಡಳಿಯ ಸಂಗೀತ ಕಟ್ಟಿ 36ನೇ ವಯಸ್ಸಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಹೊಡೆದುಕೊಂಡವರು. ಸತೀಶ್ ಹಂಪಿಹೊಳಿ ಮೂರನೇ ದರ್ಜೆಯ ಕಲಾವಿದ. ಅಕಾಡಮಿಯ ಅಧ್ಯಕ್ಷರೇ ಮೋದಿ ಭಜನಾ ಮಂಡಳಿಯ ಸದಸ್ಯರ ಹೆಸರನ್ನು ಪ್ರಶಸ್ತಿಗೆ ಸೂಚಿಸುವಾಗ ಉಳಿದ ಸದಸ್ಯರೂ ಸ್ವಾರ್ಥ ಸಾಧಿಸದೆ ಇರುತ್ತಾರೆಯೇ? ಅಂಬಯ್ಯ ನುಲಿಯವರಂತಹ ಹಿರಿಯ ಕಲಾವಿದರನ್ನು ಪ್ರಶಸ್ತಿಯಿಂದ ವಂಚಿಸಲು ಕೆಲವರು ಸೂಗೂರೇಶ ಅಸ್ಕಿಹಾಳ ಹೆಸರನ್ನು ಮುಂದು ಮಾಡಿದ್ದಾರೆ. ಅವರ ಸಾಧನೆ ಏನು ಎನ್ನುವುದು ಸಾಕ್ಷಾತ್ ಸೂಗೂರೇಶರೇ ಹೇಳಬೇಕು. ಸಹಸದಸ್ಯ ಮುನಿರೆಡ್ಡಿ ತನ್ನ ಮಕ್ಕಳಿಗೆ ಪಾಠ ಮಾಡುವ ಕೃಷ್ಣಪ್ಪ ಅವರಿಗೆ ಪ್ರಶಸ್ತಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 70 ವರ್ಷ ಮೇಲ್ಪಟ್ಟ ಹಿರಿಯ ಕಲಾವಿದರಾದ ಎಂ.ಎಸ್. ನಾಗರಾಜ ಆಚಾರ್ಯ, ಪಂ.ಡಿ. ಕುಮಾರ ದಾಸ, ಸಿತಾರ್‌ವಾದಕ ಉಸ್ತಾದ್ ಶಫೀಕ್ ಖಾನ್ ಅವರ ಹೆಸರನ್ನು ಕೆಲ ಸದಸ್ಯರು ಕಷ್ಟಪಟ್ಟು ಸೇರಿಸಿದ್ದಾರೆ. ಮುಸ್ಲಿಮ್ ಕಲಾವಿದರೆಂದರೆ ಸನ್ಮಾನ್ಯ ಅಧ್ಯಕ್ಷರಿಗೆ ಅಲರ್ಜಿ.
ನರೇಂದ್ರ ಮೋದಿ ಭಜನಾ ಮಂಡಳಿಯ ಖಾಯಂ ಸದಸ್ಯೆ ಸಂಗೀತ ಕಟ್ಟಿಯವರಿಗಿಂತ ವಯಸ್ಸಿನಲ್ಲಿ ಹಿರಿಯರಾಗಿರುವ, ಶ್ರೇಷ್ಠ ಸಾಧನೆ ಮಾಡಿರುವ ಅದೇ ಸಮುದಾಯದ ಅನೇಕರಿದ್ದಾರೆ. ಧಾರವಾಡದ ತಾರಾ ಬಾಯಿ ಕುಲಕರ್ಣಿ, ಸಂಧ್ಯಾ ಕುಲಕರ್ಣಿ, ಪಂ. ಶಾಂತರಾಮ ಹೆಗಡೆಯವರ ಸಾಧನೆ ಶುಭಾ ಧನಂಜಯ ಮೇಡಂ ಅವರಿಗೆ ಕಾಣುವುದೇ ಇಲ್ಲ. ಅಷ್ಟಕ್ಕೂ ಶ್ರೀಮತಿ ಶುಭಾ ಧನಂಜಯ ಅವರು ಕರ್ನಾಟಕ ಸಂಗೀತ ಮತ್ತು ಅಕಾಡಮಿಯ ಅಧ್ಯಕ್ಷರಾಗಿದ್ದೇ ಸೈದ್ಧಾಂತಿಕ ಕಾರಣಕ್ಕೆ ಮತ್ತು ಸಾಮಾಜಿಕ ನ್ಯಾಯದ ಬಲದ ಮೇಲೆ. ಈ ಮೊದಲು ಕರ್ನಾಟಕ ಸರಕಾರ ಮೋದಿ ಭಜನಾ ಮಂಡಳಿಯ ಸದಸ್ಯೆ ಡಾ. ಕೃಪಾ ಫಡ್ಕೆೆಯವರನ್ನು ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷ ಸ್ಥಾನಕ್ಕೆ ನಾಮ ನಿರ್ದೇಶನ ಮಾಡಿ ಆದೇಶ ಹೊರಡಿಸಿತ್ತು. ಡಾ. ಕೃಪಾ ಫಡ್ಕೆೆಯವರು ಮೋದಿ ಭಜನಾ ಮಂಡಳಿ ಪಕ್ಕಾ ಸದಸ್ಯೆ ಎನ್ನುವುದು ಖಾತ್ರಿಯಾದ ಮೇಲೆ ಅವರ ನಾಮನಿರ್ದೇಶನವನ್ನು ರದ್ದು ಪಡಿಸಿತ್ತು. ಅವರ ಜಾಗಕ್ಕೆ ಹಿಂದುಳಿದ ಸಮುದಾಯದ ಪ್ರತಿಭಾವಂತ ನೃತ್ಯ ಕಲಾವಿದೆ ಎಂಬ ಕಾರಣಕ್ಕೆ ಶ್ರೀಮತಿ ಶುಭಾ ಧನಂಜಯ ಅವರನ್ನು ನೇಮಿಸಿತು. ನೂತನ ಅಧ್ಯಕ್ಷರ ಒಲವು ಮೋದಿ ಭಜನಾ ಮಂಡಳಿಯ ಕಲಾವಿದರತ್ತ ಇರುವುದು ಕೆಲವು ಅಕಾಡಮಿ ಸದಸ್ಯರಿಗೆ ಆಘಾತವನ್ನುಂಟು ಮಾಡಿದೆ. ಸಂಗೀತ-ನೃತ್ಯ ಅಕಾಡಮಿಯಲ್ಲಿ ಪ್ರಜಾಸತ್ತಾತ್ಮಕ ನೆಲೆಯಲ್ಲಿ ನಿರ್ಣಯವಾಗುತ್ತಿಲ್ಲ ಎಂಬುದು ಕೆಲವು ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಸ್ಥಾಯಿ ಸಮಿತಿ ಮತ್ತು ಸಾಮಾನ್ಯ ಸಭೆಯ ಗಮನಕ್ಕೆ ತರದೆ ಮೂರು ಪ್ರಮುಖ ಕಾರ್ಯಕ್ರಮಗಳನ್ನು ಏಕಪಕ್ಷೀಯವಾಗಿ ಅಧ್ಯಕ್ಷರೇ ರೂಪಿಸಿದ್ದಾರೆ. ಕರ್ನಾಟಕ ಸಂಗೀತ-ನೃತ್ಯ ಅಕಾಡಮಿ ಎಲ್ಲಾ ಪ್ರತಿಭಾವಂತ ಕಲಾವಿದರ ಸೊತ್ತು ಎಂಬುದನ್ನು ಅಧ್ಯಕ್ಷರು ಮನಗಾಣಬೇಕು.
ಸಾಂಸ್ಕೃತಿಕ ಲೋಕದಲ್ಲಿ ಪ್ರತಿಭಾ ನ್ಯಾಯದ ಜೊತೆಗೆ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಮಹಿಳಾ ನ್ಯಾಯದ ಪ್ರತಿಪಾದನೆಯನ್ನು ‘‘ಇಲ್ಲೂ ಮೀಸಲಾತಿ ಬೇಕೇ?’’ ಎಂದು ವ್ಯಂಗ್ಯವಾಗಿ ಉಡಾಫೆಯಿಂದ ಪ್ರಶ್ನಿಸುವ ಮನಸ್ಸುಗಳಿವೆ. ‘ಪ್ರತಿಭೆ’ ಎಂಬ ಪದವೇ ಸಾಪೇಕ್ಷವಾದುದು. ‘ಪ್ರತಿಭೆ’ ಯಾವೊಂದು ಜಾತಿ, ಮತ, ಪಂಥ, ಧರ್ಮಕ್ಕೆ ಸೀಮಿತವಾದುದಲ್ಲ. ಈಗ ಎಲ್ಲ ಸಮುದಾಯಗಳಲ್ಲೂ, ಎಲ್ಲ ಕಲಾಪ್ರಕಾರಗಳಲ್ಲೂ, ಎಲ್ಲ ಪ್ರದೇಶಗಳಲ್ಲೂ ಶ್ರೇಷ್ಠ ಸಾಧಕರು ದೊರೆಯುತ್ತಾರೆ. ಪ್ರತಿಭೆಯನ್ನು ಹುಡುಕುವವರು ಪೂರ್ವಗ್ರಹದಿಂದ ಮುಕ್ತರಾಗಬೇಕು. ಅವಕಾಶ ವಂಚಿತ ಶ್ರೇಷ್ಠ ಸಾಧಕರು ಯಾವುದೇ ಜಾತಿ, ಮತ, ಪಂಥ, ಧರ್ಮದವರಿರಲಿ ಅವರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುವುದು ಅಕಾಡಮಿಗಳ ಘನತೆ, ಗೌರವ ಹೆಚ್ಚಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಬಲ ನೀಡಬೇಕು.