ಗುರುಕುಲದ ಹೆಸರಲ್ಲಿ ‘ದ್ರೋಣಾಚಾರ್ಯರ’ ದರ್ಬಾರು
ಹುಬ್ಬಳ್ಳಿಯಲ್ಲಿ ನೆಲೆ ನಿಂತಿರುವ ಡಾ. ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ಮತ್ತೆ ತಮ್ಮ ವಶಕ್ಕೆ ತೆಗೆದುಕೊಳ್ಳಲು ಪಟ್ಟಭದ್ರ ಶಕ್ತಿಗಳು ಶತಾಯಗತಾಯ ಪ್ರಯತ್ನಿಸುತ್ತಿವೆ. ದ್ರೋಣಾಚಾರ್ಯ ಪರಂಪರೆಯ ಅಳಿವು ಉಳಿವಿನ ಸಂಕೇತವಾಗಿ ಗುರುಕುಲ ಟ್ರಸ್ಟ್ ಪ್ರಕರಣ ಬಳಕೆಯಾಗುತ್ತಿದೆ. ಉನ್ನತ ಶಿಕ್ಷಣ ಇಲಾಖೆಯು 28.2.20204ರಂದು ಆದೇಶ ಹೊರಡಿಸಿ: ಕರ್ನಾಟಕ ಸರಕಾರದ ಆರ್ಥಿಕ ಇಲಾಖೆಯ ಶಿಫಾರಸು ಆಧರಿಸಿ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ಮೈಸೂರಿನ ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸಿದೆ. ಖ್ಯಾತ ಸಂಗೀತಗಾರ್ತಿ ಡಾ. ಗಂಗೂಬಾಯಿ ಹಾನಗಲ್ ಅವರ ಹೆಸರಿನಲ್ಲಿರುವ ಗುರುಕುಲ ಟ್ರಸ್ಟನ್ನು ಅವರದೇ ಹೆಸರಿನಲ್ಲಿರುವ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸಿದರೆ ಬೆರಳೆಣಿಕೆಯ ದ್ರೋಣಾಚಾರ್ಯರಿಗೆ ಯಾಕೆ ಕಸಿವಿಸಿಯಾಗಬೇಕು? ಗುರುಕುಲ ಟ್ರಸ್ಟನ್ನು ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿ.ವಿ.ಯ ವ್ಯಾಪ್ತಿಗೆ ಸೇರಿಸಿದಾಗಿನಿಂದ ದ್ರೋಣ ಪರಂಪರೆಯ ಪತ್ರಕರ್ತರು ಗಾಂಧಾರಿಯಂತೆ ಏಕಪಕ್ಷೀಯವಾಗಿ ‘ಗುರುಕುಲ’ ಉಳಿಯಬೇಕು ಎಂದು ರೀಮುಗಟ್ಟಲೆ ಬರೆದಿದ್ದಾರೆ, ಬರೆಯುತ್ತಿದ್ದಾರೆ. ಹುಬ್ಬಳ್ಳಿಯ ಶಾಸಕ ಮಹೇಶ್‌ಟೆಂಗಿನಕಾಯಿ ಮನುವಾದಿಗಳ ವಕ್ತಾರರಂತೆ ದ್ರೋಣಾಚಾರ್ಯರ ಪರ ನಿಂತು ಸದನದ ಒಳಗೆ ಮತ್ತು ಹೊರಗೆ ನಿರಂತರ ಸದ್ದು ಮಾಡುತ್ತಿದ್ದಾರೆ. ಅದು ದ್ರೋಣಾಚಾರ್ಯರ ಸುಪರ್ದಿಯಲ್ಲೇ ಯಾಕೆ ಉಳಿಯಬೇಕು ಎಂಬ ಪ್ರಶ್ನೆಗೆ ಮಹೇಶ್ ಟೆಂಗಿನಕಾಯಿ ಅವರಲ್ಲಿ ಸ್ಪಷ್ಟ ಉತ್ತರವಿಲ್ಲ.
ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಹೋರಾಟದಲ್ಲಿ ಈಗ ಎಬಿವಿಪಿ ಸಂಘಟನೆಯವರು ಕ್ರಿಯಾಶೀಲವಾಗಿ ತೊಡಗಿಸಿಕೊಂಡಿದ್ದಾರೆ. ಆ ಹೋರಾಟಕ್ಕೆ ಸಂಘ ಪರಿವಾರದ ಎಲ್ಲಾ ಹಿರಿಯರ ಬೆಂಬಲ ಇದ್ದೇ ಇದೆ. ಅಷ್ಟು ಮಾತ್ರವಲ್ಲ; ಶ್ರೀರಾಮ ಸೇನೆಯ ಮುತಾಲಿಕ್ ಕೂಡ ಕೈಜೋಡಿಸಿದ್ದಾರೆ. ಅವರೆಲ್ಲರ ಉದ್ದೇಶವಾದರೂ ಏನು? ಗುರುಕುಲ ಟ್ರಸ್ಟ್ ವಿ.ವಿ. ವ್ಯಾಪ್ತಿಗೆ ಸೇರಿದರೂ ಅಲ್ಲಿ ಸಂಗೀತವೇ ಅನುರಣಿಸುತ್ತ್ತದೆ. ವಿ.ವಿ.ಯಲ್ಲಿ ಕ್ರಮಬದ್ಧ ಸಂಗೀತ ಶಿಕ್ಷಣ ದೊರೆಯುತ್ತಲೇ ಇರುತ್ತದೆ. ಒಟ್ಟಿನಲ್ಲಿ ಡಾ. ಗಂಗೂಬಾಯಿ ಹಾನಗಲ್ ಹೆಸರಿನ ಸಂಸ್ಥೆಗಳಲ್ಲಿ ಸಂಗೀತ ಸಮಾರಾಧನೆ ನಡೆಯುತ್ತಿರಬೇಕು. ಹುಬ್ಬಳ್ಳಿ-ಧಾರವಾಡದ ಮನುವಾದಿಗಳಿಗೆ ಸಂಗೀತ ಸಾರ್ವತ್ರಿಕ ಶಿಕ್ಷಣದ ಭಾಗವಾಗುವುದು ಇಷ್ಟವಿಲ್ಲ. ಯಾಕೆಂದರೆ; ವಿವಿಗಳಲ್ಲಿ ಸಂಗೀತ ಶಿಕ್ಷಣವನ್ನು ಎಲ್ಲರಿಗೂ ನೀಡಬೇಕಾಗುತ್ತದೆ. ಅಲ್ಲಿ ಸಂಗೀತ ಗುರುಗಳ ಆಯ್ಕೆಗೆ ಯುಜಿಸಿ ರೂಪಿಸಿದ ನಿಯಮಾವಳಿ ಇರುತ್ತದೆ. ವಿದ್ಯಾರ್ಥಿಗಳ ಆಯ್ಕೆಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಶೈಕ್ಷಣಿಕ ಅರ್ಹತೆ ಆಧರಿಸಿ ಗುರುಗಳು ಮತ್ತು ವಿದ್ಯಾರ್ಥಿಗಳಿಗೆ ಅಲ್ಲಿ ಅವಕಾಶ ನೀಡುತ್ತಾರೆ. ಬೇಕಾಬಿಟ್ಟಿ ಆಯ್ಕೆ ನಡೆದರೆ ನ್ಯಾಯಾಲಯದಲ್ಲಿ ಯಾರು ಬೇಕಾದರೂ ಪ್ರಶ್ನಿಸಬಹುದು. ಒಟಿನಲ್ಲಿ ವಿ.ವಿ. ವ್ಯಾಪ್ತಿಯ ಸಂಗೀತ ಶಿಕ್ಷಣ ಪ್ರಜಾಪ್ರಭುತ್ವದ ಆಶಯದಂತೆ ನಡೆಯಬೇಕಾಗುತ್ತದೆ. ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ.
ಆದರೆ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅದು ಆರಂಭವಾದ ದಿನದಿಂದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಅಲ್ಲಿ ಪ್ರಜಾಪ್ರಭುತ್ವದ ಆಶಯಗಳನ್ನು ಸಂಪೂರ್ಣ ಗಾಳಿಗೆ ತೂರಲಾಗಿದೆ. ಯಾವ ಹಂತದಲ್ಲೂ ಮೀಸಲಾತಿ ನಿಯಮಗಳನ್ನು ಪಾಲಿಸಿಲ್ಲ. ಸಾಮಾಜಿಕ ನ್ಯಾಯದ ಪಾಲನೆಯಾಗಿಲ್ಲ. ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಘೋಷಣೆಗೆ ಹುಬ್ಬಳ್ಳಿ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನಲ್ಲಿ ಜಾಗವೇ ಕೊಟ್ಟಿಲ್ಲ. ಕಳೆದ 13 ವರ್ಷಗಳಲ್ಲಿ ಬೆರಳೆಣಿಕೆಯ ದ್ರೋಣಾಚಾರ್ಯರ ದರ್ಬಾರು ನಡೆದಿದೆ. ಅಸಂಖ್ಯಾತ ಸಂಗೀತಾಸಕ್ತ ಏಕಲವ್ಯರನ್ನು ಹೊರಗಿಟ್ಟು ಸಂಗೀತ ಶಿಕ್ಷಣ ನೀಡಲಾಗಿದೆ. 13 ವರ್ಷಗಳಲ್ಲಿ ಗುರುಕುಲ ಟ್ರಸ್ಟ್ ರೂ. 25 ಕೋಟಿಯಷ್ಟು ಖರ್ಚು ಮಾಡಿ ಒಬ್ಬನೇ ಒಬ್ಬ ಶ್ರೇಷ್ಠ ಸಂಗೀತಗಾರನನ್ನು ಸೃಷ್ಟಿಸಿಲ್ಲ. ಗುರುಕುಲ ಟ್ರಸ್ಟ್‌ನಲ್ಲಿ ಮಹಾ ಗುರುಗಳಾಗಿ ಕಾರ್ಯ ನಿರ್ವಹಿಸುತ್ತಿದ್ದ ಕರ್ನಾಟಕದ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಅವರ ಸ್ವಾರ್ಥ ಸಾಧನೆಗೆ ಬರಪೂರ ಬಳಕೆಯಾಗಿದೆ. ಈ ಇಬ್ಬರು ಪರಮ ಸ್ವಾರ್ಥಿಗಳ ಕಾರಣಕ್ಕೆ ಕನ್ನಡಿಗರ ತೆರಿಗೆಯ ಹಣ ಉತ್ತರ ಭಾರತದ ಸಂಗೀತ ಕಲಾವಿದರ ಏಳಿಗೆಗೆ ವ್ಯಯವಾಗಿದೆ. ಸ್ಥಳೀಯ ಪ್ರತಿಭಾವಂತ ಸಂಗೀತಾಸಕ್ತ ವಿದ್ಯಾರ್ಥಿಗಳನ್ನು ಮತ್ತು ಶ್ರೇಷ್ಠ ಗುರುಗಳನ್ನು ಗುರುಕುಲ ಟ್ರಸ್ಟ್ ಒಳಗೆ ಬಿಟ್ಟು ಕೊಂಡಿಲ್ಲ.
ಹಾಗೆ ನೋಡಿದರೆ ಹುಬ್ಬಳ್ಳಿ-ಧಾರವಾಡ ಸಂಗೀತದ ತವರೂರು. ಭಾರತದ 10 ಜನ ಶ್ರೇಷ್ಠ ಸಂಗೀತಗಾರರ ಪಟ್ಟಿ ಮಾಡಿದರೆ ಅರ್ಧಕ್ಕಿಂತ ಹೆಚ್ಚು ಸಂಗೀತಗಾರರು ಧಾರವಾಡ ಸೀಮೆಯವರೇ ದೊರೆಯುತ್ತಾರೆ. ಪಂ.ಪಂಚಾಕ್ಷರಿ ಗವಾಯಿಗಳು ಗದಗಿನವರು. ಅವರನ್ನು ಉಭಯ ಗಾನ ವಿಶಾರದರು ಎಂದೇ ಗುರುತಿಸುತ್ತಾರೆ. ಅವರ ಪರಮಶಿಷ್ಯ ಪಂ. ಪುಟ್ಟರಾಜ ಗವಾಯಿಗಳೂ ಕರ್ನಾಟಕಿ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಭುತ್ವ ಸಾಧಿಸಿದ್ದರು. ಅಷ್ಟು ಮಾತ್ರವಲ್ಲ; ಸಿತಾರ್, ತಬಲ, ಹಾರ್ಮೋನಿಯಂ, ಸಾರಂಗಿ, ಸಂತೂರ್, ವಾಯಲಿನ್ ಸೇರಿದಂತೆ ಹತ್ತಾರು ಪ್ರಮುಖ ವಾದ್ಯಗಳನ್ನು ನುಡಿಸುತ್ತಿದ್ದರು. ಪಂ.ಪಂಚಾಕ್ಷರಿ ಗವಾಯಿ ಮತ್ತು ಪಂ. ಪುಟ್ಟರಾಜ ಗವಾಯಿಗಳು ಹುಟ್ಟಿನಿಂದ ದೃಷ್ಟಿಹೀನರು ಎಂಬುದು ಗಮನಾರ್ಹ. ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದ ಪಂ. ಮಲ್ಲಿಕಾರ್ಜುನ ಮನ್ಸೂರ, ಪಂ. ಭೀಮಸೇನ್ ಜೋಶಿ, ವಿದುಷಿ ಗಂಗೂಬಾಯಿ ಹಾನಗಲ್, ಪಂ.ಬಸವರಾಜ ರಾಜಗುರು, ಉಸ್ತಾದ್ ಸಿತಾರ್ ರತ್ನ ರಹಮತ್ ಖಾನ್, ಪಂ. ಸವಾಯಿ ಗಂಧರ್ವ, ಪಂ. ಕುಮಾರ ಗಂಧರ್ವರು ಶ್ರೇಷ್ಠ ಸಂಗೀತಗಾರರ ಸಾಲಿನಲ್ಲಿ ನಿಲ್ಲುವ ಹೆಮ್ಮೆಯ ಕನ್ನಡಿಗರು. ಅವರು ಯಾರೂ ತಮ್ಮಷ್ಟಕ್ಕೆ ಶ್ರೇಷ್ಠ ಸಾಧನೆ ಮಾಡಿ ಅಷ್ಟೋ ಇಷ್ಟೋ ಪ್ರಶಸ್ತಿ ಗಿಟ್ಟಿಸಿಕೊಂಡು ಹೋದವರಲ್ಲ. ಪಂ. ಬಸವರಾಜ ರಾಜಗುರು ಸಂಗೀತ ಕಲಿಸುವ ಔದಾರ್ಯ ತೋರದಿದ್ದರೆ ಗುರುಕುಲದ ದಿಕ್ಕು ತಪ್ಪಿಸಿದ ದ್ರೋಣ ಪಂ.ಗಣಪತಿ ಭಟ್ ಹಾಸಣಗಿ ಸಂಗೀತ ಶಿಕ್ಷಣದಿಂದಲೇ ವಂಚಿತರಾಗುತ್ತಿದ್ದರು. ತಮ್ಮ ಮನೆಯಲ್ಲಿ ಎಲ್ಲಾ ಜಾತಿ, ಧರ್ಮದ ಸಂಗೀತಾಸಕ್ತ ವಿದ್ಯಾರ್ಥಿಗಳನ್ನು ಇಟ್ಟುಕೊಂಡು ಅನ್ನ ನೀಡಿ ಸಂಗೀತ ಶಿಕ್ಷಣ ಧಾರೆ ಎರೆದವರು ಪಂ. ಬಸವರಾಜ ರಾಜ ಗುರುಗಳು. ವಾಲ್ಮೀಕಿ ಸಮುದಾಯದ ಡಾ. ಹನುಮಣ್ಣ ನಾಯಕ ದೊರೆ ಸೇರಿದಂತೆ ಹಲವು ಬ್ರಾಹ್ಮಣ ಶಿಷ್ಯರಿಗೂ ಸಂಗೀತ ಕಲಿಸಿದ್ದಾರೆ. ಅವರಲ್ಲಿ ಪಂ.ಗಣಪತಿ ಭಟ್ ಹಾಸಣಗಿ, ಪಂ. ಪರಮೇಶ್ವರ ಹೆಗಡೆ, ಪಂ. ಶಾಂತರಾಮ ಹೆಗಡೆ, ವಿದುಷಿ ಸಂಗೀತ ಕಟ್ಟಿ ಪ್ರಮುಖರು. ಬಸವರಾಜ ರಾಜಗುರು ಅವರು ತಮ್ಮ ಮನೆಯನ್ನೇ ಶ್ರೇಷ್ಠ ಗುರುಕುಲ ಪಾಠಶಾಲೆಯನ್ನಾಗಿಸಿದ್ದರು.
ಅಪ್ಪಟ ಜಾತ್ಯತೀತ ಮನೋಭಾವದ ಪಂ. ಬಸವರಾಜ ರಾಜಗುರು ಅವರ ನೇರ ಶಿಷ್ಯ ಗಣಪತಿ ಭಟ್ ಹಾಸಣಗಿ ಅವರಿಗೆ 13 ವರ್ಷಗಳ ಕಾಲ ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಟ್ರಸ್ಟನ್ನು ಮುನ್ನಡೆಸುವ ಅವಕಾಶ ದೊರೆತಿತ್ತು. ಸ್ವಜನ ಪಕ್ಷಪಾತ, ಜಾತೀಯತೆ ಮತ್ತು ಅಪರಿಮಿತ ಸ್ವಾರ್ಥ ಮೆರೆದಿದ್ದರಿಂದಲೇ ಹುಬ್ಬಳ್ಳಿಯ ಗುರುಕುಲ ಟ್ರಸ್ಟನ್ನು ಡಾ. ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸುವ ಅನಿವಾರ್ಯತೆ ಸೃಷ್ಟಿಯಾಯಿತು. ಗುರುಕುಲ ಟ್ರಸ್ಟನ್ನು ಅಧಃಪತನದತ್ತ ಕೊಂಡೊಯ್ದವರೇ ಗಣಪತಿ ಭಟ್ ಹಾಸಣಗಿಯವರು. 2011ರಲ್ಲಿ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್‌ನ ಹೊಣೆಗಾರಿಕೆಯನ್ನು ಪಂ. ಗಣಪತಿ ಭಟ್ ಹಾಸಣಗಿಯವರಿಗೆ ವಹಿಸಿದಾಗ ಅವರು ಎಲ್ಲರೊಂದಿಗೆ ಸಮಾಲೋಚನೆ ನಡೆಸಿ ಅದರ ಸ್ವರೂಪವನ್ನು ನೂರು ಕಾಲ ಬಾಳುವ ರೀತಿಯಲ್ಲಿ ರಚಿಸಬೇಕಿತ್ತು. ಗುರುಕುಲ ಮಾದರಿಯ ತಾಲೀಮಿನ ಜೊತೆಗೆ ವೈಜ್ಞಾನಿಕ ಪಠ್ಯಕ್ರಮ, ಕಾಲದ ಅಗತ್ಯ ಪೂರೈಸುವ ಕೋರ್ಸ್ ಮತ್ತು ಸಂಗೀತಾಸಕ್ತ ವಿದ್ಯಾರ್ಥಿಗಳ ಪ್ರವೇಶಾತಿಗೆ ಪರಿಪೂರ್ಣ ಮಾನದಂಡಗಳನ್ನು ಸಿದ್ಧಪಡಿಸಬೇಕಿತ್ತು. ಸ್ಥಳೀಯ ಶ್ರೇಷ್ಠ ಸಂಗೀತಗಾರರ ಪರಿಣತಿಯನ್ನು ಬಳಸಿಕೊಳ್ಳಬೇಕಿತ್ತು. ತತ್ಸಮಾನವಾದ ಕೋರ್ಸ್‌ಗಳನ್ನು ಕಲಿಸದೇ ಇರುವುದರಿಂದ ಅಲ್ಲಿ ಕಲಿತ ವಿದ್ಯಾರ್ಥಿಗಳು ತ್ರಿಶಂಕು ಸ್ಥಿತಿ ಅನುಭವಿಸುತ್ತಿದ್ದಾರೆ. ಅವರಲ್ಲಿಯೇ ಜಾಣ ವಿದ್ಯಾರ್ಥಿಗಳು ಸಂಗೀತದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳನ್ನು ಮಾಡಿಕೊಂಡು ಹೇಗೋ ಮುಖ್ಯವಾಹಿನಿಯಲ್ಲಿ ಸೇರಿಕೊಂಡಿದ್ದಾರೆ.
ಪಂ. ಗಣಪತಿ ಭಟ್ ಹಾಸಣಗಿಯವರು ಸಂಗೀತಾಸಕ್ತ ವಿದ್ಯಾರ್ಥಿಗಳ ಆಯ್ಕೆಯಲ್ಲಿ ವೈಜ್ಞಾನಿಕ ಮಾನದಂಡಗಳನ್ನು ರೂಪಿಸದೆ ಇರುವುದರಿಂದ ಕನ್ನಡದ ಪ್ರತಿಭಾವಂತರಿಗಿಂತ ಹೊರ ರಾಜ್ಯದವರೇ ಹೆಚ್ಚು ಜನ ಆಯ್ಕೆಗೊಂಡಿದ್ದಾರೆ. ಗುರುಗಳ ಆಯ್ಕೆಯಲ್ಲೂ ನಿರ್ದಿಷ್ಟ ಮಾನದಂಡ ಅನುಸರಿಸಿಲ್ಲ.
ಡಾ. ಗಂಗೂಬಾಯಿ ಹಾನಗಲ್ ಟ್ರಸ್ಟ್ ಆರಂಭವಾದಾಗ ಗುರುಗಳ ಆಯ್ಕೆಯಲ್ಲಿ ಸ್ಥಳೀಯ ಶ್ರೇಷ್ಠ ಸಂಗೀತಗಾರರನ್ನು ಪರಿಗಣಿಸಲೇ ಇಲ್ಲ. ಪಂ. ಮಣಿ ಪ್ರಸಾದ್, ವಿದುಷಿ ವಿಜಯಾ ಜಾದವ್ ಗಾಟಲೆವಾರ್, ಪಂ. ಎಸ್. ಎಸ್ ಹಲ್ದಂಕರ್, ವಿದುಷಿ ಎನ್. ರಾಜಮ್ಮ ಅವರನ್ನು ಗುರುಕುಲ ಟ್ರಸ್ಟ್‌ನ ಗುರುಗಳಾಗಿ ಆಯ್ಕೆ ಮಾಡಿದರು. ಈ ಆಯ್ಕೆಗೆ ಯಾವ ಮಾನದಂಡವಿತ್ತು? ಶಾಸಕ ಮಹೇಶ್ ಟೆಂಗಿನಕಾಯಿ ಉತ್ತರಿಸಬೇಕು. ಕರ್ನಾಟಕದ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಗುರವ್ ಅವರು ಅಲ್ಲಿ ಗುರುಗಳಾಗಿ ಸೇರಿಕೊಂಡರು. ಉಸ್ತಾದ್ ಬಾಲೇಖಾನ್, ಪಂ. ರಾಜಶೇಖರ್ ಮನ್ಸೂರ ಆಗಿನ್ನೂ ಬದುಕಿದ್ದರು. ಪಂ. ಸೋಮನಾಥ ಮರಡೂರ, ಪಂ. ಕೈವಲ್ಯ ಕುಮಾರ ಗುರವ್‌ಗಿಂತಲೂ ಶ್ರೇಷ್ಠ ಸಂಗೀತ ಸಾಧಕರು. ಕರ್ನಾಟಕದ ಪ್ರಮುಖ ಸಂಗೀತಗಾರರನ್ನು ಬೇಕೆಂತಲೇ ಗುರುಕುಲ ಟ್ರಸ್ಟ್‌ನಿಂದ ಹೊರಗಿಟ್ಟರು. ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರ ಇಷಾರೆಯಂತೆ ಮುನ್ನಡೆಸುವವರು ಬೇಕಿತ್ತು. ಆ ಕಾರಣಕ್ಕೆ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಗುರವ್ ಅಲ್ಲಿ ಗುರುಗಳಾಗಿ ನೇಮಕಗೊಂಡರು. ಒಬ್ಬರು ಬ್ರಾಹ್ಮಣರು, ಮತ್ತೊಬ್ಬರು ಲಿಂಗಾಯತರು. ಅವರಿಬ್ಬರೂ ಸೇರಿ ದೋಣಾಚಾರ್ಯ ಪರಂಪರೆಯನ್ನು ಆ ಗುರುಕುಲದಲ್ಲಿ ಕಸಿ ಮಾಡಲು ಯತ್ನಿಸಿದರು.
ಸುದೀರ್ಘ 13 ವರ್ಷಗಳ ಗುರುಕುಲದ ಕಾಲಾವಧಿಯಲ್ಲಿ ಒಟ್ಟು 86 ವಿದ್ಯಾರ್ಥಿಗಳು ಸಂಗೀತ ಕಲಿಕೆಗೆ ಪ್ರವೇಶ ಪಡೆದಿದ್ದಾರೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಉತ್ತರ ಭಾರತದವರು. ವಿದ್ಯಾರ್ಥಿಗಳ ಆಯ್ಕೆ ಅಖಿಲ ಭಾರತ ಮಟ್ಟದ ಆಡಿಶನ್ ಮೂಲಕ ನಡೆಸಲಾಗುತ್ತದೆ ಎಂದು ಪ್ರಚಾರ ಮಾಡಿಕೊಂಡಿದ್ದಾರೆ. ಗುರುಕುಲ ಟ್ರಸ್ಟ್‌ನಲ್ಲಿ ವಿದ್ಯಾರ್ಥಿ ಗಳೆಂದು ಪ್ರವೇಶ ಪಡೆದವರಲ್ಲಿ ಭಟ್, ಕುಲಕರ್ಣಿ, ಹಿರೇಮಠ್‌ಗಳೇ ಜಾಸ್ತಿ ಇದ್ದಾರೆ. ಗುರುಕುಲದ ಆರ್ಥಿಕ ಸ್ಥಿತಿ ಹದಗೆಟ್ಟಾಗ, ಅದು ಸಮಸ್ಯೆ ಎದುರಿಸುತ್ತಿದ್ದಾಗ ಸ್ಥಳೀಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದಾರೆ. 2022ರ ನಂತರವಷ್ಟೇ ಸ್ಥಳೀಯ ವಿದ್ಯಾರ್ಥಿಗಳು ಮತ್ತು ಸ್ಥಳೀಯ ಗುರುಗಳನ್ನು ಒಳಗೆ ಬಿಟ್ಟುಕೊಂಡಿದ್ದಾರೆ. ಉಸ್ತಾದ್ ಫಯಾಝ್ ಖಾನ್ ಮತ್ತು ವಿದುಷಿ ಅಕ್ಕ ಮಹಾದೇವಿ ಹಿರೇಮಠ್‌ಗುರುಗಳಾಗಿ ಸೇರಿಕೊಂಡಿದ್ದು ಒಂದೆರಡು ವರ್ಷಗಳ ಹಿಂದೆಯಷ್ಟೇ. ಗುರುಕುಲ ಟ್ರಸ್ಟ್ ನ ಉಚ್ಛ್ರಾಯಕಾಲದಲ್ಲಿ ಉಸ್ತಾದ್ ಫಯಾಝ್‌ಖಾನ್ ಮತ್ತು ವಿದುಷಿ ಅಕ್ಕಮಹಾದೇವಿ ಹಿರೇಮಠ್‌ರನ್ನು ಸಂಪೂರ್ಣವಾಗಿ ದೂರ ಇಟ್ಟಿದ್ದರು. ರೂ. 25 ಕೋಟಿಯಷ್ಟು ವ್ಯಯವಾದದ್ದು ಕರ್ನಾಟಕದ ಭಟ್, ಕುಲಕರ್ಣಿ, ಹಿರೇಮಠ್ ವಿದ್ಯಾರ್ಥಿಗಳಿಗೆ. ದ್ರೋಣ ಪರಂಪರೆ ಉಳಿಸಲು ಕಂಕಣಬದ್ಧರಾಗಿದ್ದ ಪಂ. ಗಣಪತಿ ಭಟ್ ಹಾಸಣಗಿ, ಪಂ. ಕೈವಲ್ಯ ಕುಮಾರ ಗುರವ್‌ರಂತಹ ಗುರುಗಳಿಗಾಗಿ. ಅದರಲ್ಲಿ ಹೆಚ್ಚು ಅನುಕೂಲವಾಗಿದ್ದು ಉತ್ತರ ಭಾರತದ ವಿದ್ಯಾರ್ಥಿಗಳು ಮತ್ತು ಗುರುಗಳಿಗೆ.
ವಿದುಷಿ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ದ್ರೋಣ ಪರಂಪರೆಯಲ್ಲೇ ಉಳಿಸಿಕೊಳ್ಳಲು ಯಾಕೆ ಹರಸಾಹಸ ಪಡುತ್ತಿದ್ದಾರೆಂದರೆ; ಅದು ಮನುವಾದಿಗಳ ಹಿತಕಾಪಾಡುವ ಏಕೈಕ ಸಂಸ್ಥೆಯಾಗಿತ್ತು. ಮೀಸಲಾತಿ ನಿಯಮಗಳು ಅನ್ವಯವಾಗದ, ಗುರು ಶಿಷ್ಯರ ಆಯ್ಕೆಯಲ್ಲಿ ಮಾನದಂಡಗಳೇ ಇಲ್ಲದ, ಅಸಂಖ್ಯಾತ ಏಕಲವ್ಯರನ್ನು ಶ್ರೇಷ್ಠತೆಯ ಹೆಸರಿನಲ್ಲಿ ದೂರ ಇಡಬಹುದಾದ ಏಕೈಕ ಸಂಸ್ಥೆ ಹುಬ್ಬಳ್ಳಿಯ ಗುರುಕುಲ ಟ್ರಸ್ಟ್ ಆಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳಿಗೆ ಆ ಗುರುಕುಲದಲ್ಲಿ ಪ್ರವೇಶ ಪಡೆಯುವ ಆಸೆ ಇದ್ದರೂ ಅಲ್ಲಿ ತಮಗೆ ಬೇಕಾದ ಕೆಲವರನ್ನೇ ಆಯ್ಕೆ ಮಾಡುತ್ತಿದ್ದರು. ಹಾಗೆ ಆಯ್ಕೆಯಾದ ಎಲ್ಲರಿಗೂ ನಾಲ್ಕು ವರ್ಷಗಳ ಸಂಗೀತ ಶಿಕ್ಷಣ ಸಿಗುತ್ತಿರಲಿಲ್ಲ. ತಮಗೆ ಬೇಡವಾದ, ವಿಶೇಷವಾಗಿ ಶೂದ್ರ ಸಮುದಾಯದ ವಿದ್ಯಾರ್ಥಿಗಳನ್ನು ಎರಡೇ ವರ್ಷಕ್ಕೆ ಓಡಿಸಿ ಕಳಿಸುತ್ತಿದ್ದರು.
ಪುಕ್ಕಟೆ ಊಟ, ವಸತಿ, ಸ್ಕಾಲರ್‌ಶಿಪ್ ಮತ್ತು ಸಂಗೀತ ಶಿಕ್ಷಣ ಕೆಲವೇ ಸಮುದಾಯದವರಿಗೆ ಅಲ್ಲಿ ಸಿಗುತ್ತಿತ್ತು. ಆ ಕಾರಣಕ್ಕೆ ಆ ಗುರುಕುಲ ಟ್ರಸ್ಟ್ ದ್ರೋಣ ಪರಂಪರೆಯ ವಾರಸುದಾರರಿಗೆ ಅತ್ಯಂತ ಪ್ರಿಯವಾದ ತಾಣವಾಗಿತ್ತು. ಅದನ್ನು ಮೊದಲಿನ ಸ್ವರೂಪದಲ್ಲಿ ಉಳಿಸಿಕೊಳ್ಳಲು ಒಂದು ಸಮುದಾಯದ ಸಂಗೀತಗಾರರು, ಬಿಜೆಪಿ, ಆರೆಸ್ಸೆಸ್ ಮತ್ತು ಎಬಿವಿಪಿ ಕಾರ್ಯಕರ್ತರು ಸಾವು ಬದುಕಿನ ಪ್ರಶ್ನೆಯನ್ನಾಗಿಸಿಕೊಂಡು ಹೋರಾಡುತ್ತಿದ್ದಾರೆ. ಮನುಸ್ಮತಿಯ ಆಶಯಗಳ ಮುಂದುವರಿಕೆಗಾಗಿ ವಿದುಷಿ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟ್ ಅವರಿಗೆ ಅಗತ್ಯ ಮತ್ತು ಅನಿವಾರ್ಯವಾಗಿದೆ. ಮನುವಾದಿಗಳಿಗೆ ಸಾರ್ವತ್ರಿಕ ಶಿಕ್ಷಣ ನೀಡುವ ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿಶ್ವವಿದ್ಯಾನಿಲಯ ಬೇಕಿಲ್ಲ. ಈ ಗುರುಕುಲ ಟ್ರಸ್ಟ್‌ಗೆ ನೀಡಿದಷ್ಟು ಹಣವನ್ನು ಸಂಗೀತ ವಿಶ್ವವಿದ್ಯಾನಿಲಯಕ್ಕೆ ನೀಡಿದ್ದರೆ ಅದು ಪೂರ್ಣ ಪ್ರಮಾಣದಲ್ಲಿ ಬೆಳೆದು ನಿಲ್ಲುತ್ತಿತ್ತು.
ವಿದುಷಿ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ತಮ್ಮ ಸಮುದಾಯದ ಏಳಿಗೆಗೆ ಮತ್ತು ತಮ್ಮ ಸ್ವಾರ್ಥ ಸಾಧನೆಗೆ ಸುದೀರ್ಘ 13 ವರ್ಷಗಳ ಕಾಲ ಎಟಿಎಂನಂತೆ ಬಳಸಿಕೊಂಡ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಗುರವ್ ಅವರಿಗೆ ಅಭದ್ರತೆ ಕಾಡುತ್ತಿದೆ. ಪಂ. ಬಸವರಾಜ ರಾಜಗುರು ಅವರ ಹಲವು ಶಿಷ್ಯರಲ್ಲಿ ಪಂ. ಗಣಪತಿ ಭಟ್ ಹಾಸಣಗಿಯೂ ಒಬ್ಬರು. ಗುರುಕುಲ ಟ್ರಸ್ಟ್‌ನ ಆಸರೆ ಪಡೆದೇ ಅವರು ಉತ್ತರ ಭಾರತದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಲಯದಲ್ಲಿ ಬಹುದೊಡ್ಡ ನೆಟ್‌ವರ್ಕ್ ಮಾಡಿಕೊಂಡಿದ್ದಾರೆ. ಆ ಗುರುಕುಲದಲ್ಲಿ ಹೊರರಾಜ್ಯದ ಗುರುಗಳು ಮತ್ತು ಶಿಷ್ಯರನ್ನು ಆಯ್ಕೆ ಮಾಡುವುದೇ ತಮ್ಮ ಸ್ವಾರ್ಥ ಸಾಧನೆಗೆ. ಸ್ಥಳೀಯ ಗುರುಗಳು ಮತ್ತು ಶಿಷ್ಯರನ್ನು ಗುರುಕುಲದಲ್ಲಿ ಸೇರಿಸಿಕೊಂಡರೆ ಪಂ. ಗಣಪತಿ ಭಟ್‌ರಿಗಾಗಲಿ, ಪಂ. ಕೈವಲ್ಯ ಕುಮಾರ ಗುರವ್ ಅವರಿಗಾಗಲಿ ಯಾವುದೇ ಲಾಭವಿಲ್ಲ. ಅದರ ಬದಲಿಗೆ ಪೈಪೋಟಿ ಎದುರಿಸಬೇಕಾಗುತ್ತದೆ. ಅದೇ ಹೊರರಾಜ್ಯದವರಾದರೆ ಕೈತುಂಬ ಟಿಎ, ಡಿಎ, ಸಂಭಾವನೆ ಕೂಡಿಸಿ ಅತ್ಯುತ್ತಮ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಕೊಡುಕೊಳ್ಳುವಿಕೆಯ ವ್ಯವಹಾರದಲ್ಲಿ ನಿಸ್ಸೀಮರಾಗಿರುವ ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಗುರವ್ ಅವರು ಸರಕಾರಿ ಹಣದಲ್ಲಿ ಸ್ವಕಾರ್ಯ ಸಾಧಿಸಿದ್ದಾರೆ. ಗರಿಷ್ಠ ನಾಲ್ಕು ವರ್ಷ ಮತ್ತು ಕನಿಷ್ಠ ಎರಡು ವರ್ಷಕ್ಕೊಮ್ಮೆ ವಿದ್ಯಾರ್ಥಿಗಳು ಬದಲಾಗುವುದಾದರೆ ಬೇರೆ ಬೇರೆ ಘರಾಣಾ ಪರಂಪರೆಯ ಗುರುಗಳನ್ನೇಕೆ ನೇಮಿಸಿಕೊಳ್ಳಲಿಲ್ಲ? ಯಾವ ಅರ್ಹತೆಯ ಮೇಲೆ ಪಂ. ಗಣಪತಿ ಭಟ್ಟರು ಮತ್ತು ಪಂ. ಗುರವ್ ಮುಂದುವರಿದರು? ಆರೆಸ್ಸೆಸ್, ಎಬಿವಿಪಿ, ಬಿಜೆಪಿ ಮಂದಿಗೆ ಅದನ್ನು ಉಳಿಸಿಕೊಳ್ಳುವುದು, ದ್ರೋಣ ಪರಂಪರೆ ಮುಂದುವರಿಸುವುದು, ಜೀವದ ಉಸಿರಿನಷ್ಟೇ ಅಗತ್ಯ.
ಆದರೆ ಕಾಂಗ್ರೆಸ್‌ನ ಹಿರಿಯ ಮುಖಂಡ, ಕಾನೂನು ಸಚಿವರೂ ಆಗಿರುವ ಎಚ್.ಕೆ. ಪಾಟೀಲರು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿ ಸ್ಥಾಪಿತವಾದ ಗುರುಕುಲ ಟ್ರಸ್ಟ್ ನ ಪರವಾಗಿ ಮಾತನಾಡುವುದು, ಸಂಘ ಪರಿವಾರದವರ ಬೇಡಿಕೆಗಳಿಗೆ ಸ್ಪಂದಿಸುವುದು ಆಪಾಯಕಾರಿ ಬೆಳವಣಿಗೆ. ಗದಗ ಮತಕ್ಷೇತ್ರದ ಎಚ್.ಕೆ. ಪಾಟೀಲರಿಗೆ ಪಂ. ಪಂಚಾಕ್ಷರಿ ಗವಾಯಿಗಳು ಸ್ಥಾಪಿಸಿದ ಮತ್ತು ಪಂ. ಪುಟ್ಟರಾಜ ಗವಾಯಿಗಳು ಮುನ್ನಡೆಸಿದ ವೀರೇಶ್ವರ ಪುಣ್ಯಾಶ್ರಮದಲ್ಲಿನ ಸಂಗೀತದ ಪಾಠಶಾಲೆ ಸರ್ವಜನಾಂಗದ ಶಾಂತಿಯ ತೋಟವಾಗಿದ್ದು ಗೊತ್ತಿಲ್ಲವೆನಿಸುತ್ತದೆ. ಎಲ್ಲಾ ಜಾತಿ-ಧರ್ಮಗಳ ಬಡವರ ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಸ್ವಾವಲಂಬಿಯಾಗುವಂತೆ ಮಾಡಿದ ಆ ಇಬ್ಬರು ಗವಾಯಿಗಳು ನಿಜವಾದ ಗುರುಕುಲ ಸಂಗೀತ ಶಿಕ್ಷಣವನ್ನು ಕಳೆದು 70 ವರ್ಷಗಳಿಂದ ನೀಡುತ್ತಿದ್ದವರು. ಪಂ. ಗಣಪತಿ ಭಟ್ ಹಾಸಣಗಿ ಮತ್ತು ಪಂ. ಕೈವಲ್ಯ ಕುಮಾರ ಅವರು ಸಂಗೀತದ ಹೆಸರಲ್ಲಿ ಜಾತೀಯತೆ, ಸ್ವಜನ ಪಕ್ಷಪಾತ, ಸ್ವಾರ್ಥ ಸಾಧನೆಯಷ್ಟೇ ಮಾಡಿದ್ದಾರೆ. ತಮ್ಮದೇ ಸರಕಾರ ಕೈಗೊಂಡ ನಿರ್ಧಾರದ ವಿರುದ್ಧವಾಗಿ ಜಾತಿ ಕೇಂದ್ರದಂತಿದ್ದ ಗಂಗೂಬಾಯಿ ಹಾನಗಲ್ ಗುರುಕುಲ ಟ್ರಸ್ಟನ್ನು ಮೊದಲಿನ ಸ್ವರೂಪದಲ್ಲಿ ಉಳಿಸಲು ಸಚಿವ ಎಚ್.ಕೆ. ಪಾಟೀಲರು ಬೆಂಬಲಿಸಬಾರದು. ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿವಿಯಲ್ಲಿ ವಿಲೀನ ಮಾಡಿದ್ದು ಸರಿಯಾಗಿದೆ.