ಸಿದ್ದರಾಮಯ್ಯ ಸರಕಾರದಲ್ಲೂ ಮೋದಿ ಭಕ್ತರಿಗೆ ಮಣೆ
ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ 12 ಅಕಾಡಮಿಗಳು, ನಾಲ್ಕು ಪ್ರಾಧಿಕಾರಗಳು, ಎರಡು ಸಂಶೋಧನಾ ಕೇಂದ್ರಗಳು ಹಾಗೂ ಒಟ್ಟು 24 ಟ್ರಸ್ಟ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಈ ಅಕಾಡಮಿ, ಪ್ರಾಧಿಕಾರ, ಸಂಶೋಧನಾ ಕೇಂದ್ರ ಮತ್ತು ಟ್ರಸ್ಟ್ ಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಅಧ್ಯಕ್ಷರು ಮತ್ತು ಸದಸ್ಯರುಗಳನ್ನು ಕರ್ನಾಟಕ ಸರಕಾರವೇ ನಾಮ ನಿರ್ದೇಶನ ಮಾಡುತ್ತಿದೆ. ಆಯಾ ಕ್ಷೇತ್ರಗಳ ಅತ್ಯಂತ ಪ್ರತಿಭಾವಂತ ತಜ್ಞರನ್ನು ಅಧ್ಯಕ್ಷರು-ಸದಸ್ಯರನ್ನಾಗಿ ನೇಮಕ ಮಾಡುವುದು ವಾಡಿಕೆ. ಪ್ರತಿಭಾವಂತರು ಎಲ್ಲಾ ಸಮುದಾಯಗಳಲ್ಲಿ, ಪ್ರದೇಶಗಳಲ್ಲಿ ಹಾಗೂ ಲಿಂಗಭೇದದ ಹೊರತಾಗಿಯೂ ಇರುವುದರಿಂದ ಈ ನೇಮಕಾತಿಗಳಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಲಿಂಗ ನ್ಯಾಯ, ಪ್ರತಿಭಾ ನ್ಯಾಯದ ಮಾನದಂಡ ಅನುಸರಿಸಿ ನೇಮಕ ಮಾಡಲಾಗುತ್ತದೆ. ಇದು ಎಲ್ಲಾ ಅಕಾಡಮಿ, ಪ್ರಾಧಿಕಾರ ಮತ್ತು ಟ್ರಸ್ಟ್‌ಗಳ ಕಾರ್ಯನಿರ್ವಹಣೆಯಲ್ಲಿ ಪ್ರಕಟಗೊಳ್ಳಲಿ ಎಂದು ಪ್ರಜಾತಂತ್ರದ ಆಶಯ. ಸಾಹಿತಿ, ಕಲಾವಿದರು ಎಲ್ಲಾ ಸರಕಾರಗಳ ಸೀಮಿತ ರಾಜಕೀಯ ಚೌಕಟ್ಟಿನಾಚೆ ಸಾಂಸ್ಕೃತಿಕ ಪಜ್ಞೆಯ ಪ್ರತೀಕವಾಗಿ ಕಾರ್ಯನಿರ್ವಹಿಸಲಿ ಎಂಬುದು ಈ ಎಲ್ಲಾ ‘ನ್ಯಾಯ’ಗಳ ಮೂಲ ಕಾಳಜಿ. ಕನ್ನಡ ಸಾಂಸ್ಕೃತಿಕ ಪ್ರಜ್ಞೆಯಲ್ಲೇ ‘ಮನುಷ್ಯ ಜಾತಿ ತಾನೊಂದೇ ವಲಂ’ ಮತ್ತು ‘ಕಸವರಮೆಂಬುದು ನೆರೆ ಸೈರಿಸಲಾರ್ಪೆಡೆ ಪರವಿಚಾರಮುಮಂ ಪರಧರ್ಮಮುಮಂ’ ಎಂಬ ಉದಾತ್ತ ತತ್ವಾದರ್ಶಗಳು ಅಂತರ್ಗತವಾಗಿವೆ.
ಉದಾತ್ತ ಕನ್ನಡ ಪ್ರಜ್ಞೆಯ ಪ್ರತೀಕವಾಗಿ ಕಾರ್ಯನಿರ್ವಹಿಸುತ್ತಿರುವ ಸಾಂಸ್ಕೃತಿಕ ಕ್ಷೇತ್ರದ ಹೆಮ್ಮೆಯ ಸಂಸ್ಥೆಗಳಾದ ಅಕಾಡಮಿ-ಪ್ರಾಧಿಕಾರ, ಸಂಶೋಧನಾ ಕೇಂದ್ರ ಮತ್ತು ಟ್ರಸ್ಟ್ ಗಳನ್ನು ಹಿಂದಿನ ಎಲ್ಲಾ ಸರಕಾರಗಳು ಸ್ವಾಯತ್ತ ಸಾಂಸ್ಕೃತಿಕ ಕೇಂದ್ರಗಳೆಂದೇ ಭಾವಿಸಿ ಆಯಾ ಕ್ಷೇತ್ರಗಳ ಪ್ರತಿಭಾವಂತರ ಕೈಗೆ ಅವುಗಳನ್ನು ಒಪ್ಪಿಸುತ್ತಿದ್ದರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಜೆಪಿ ಸರಕಾರ ಆಡಳಿತದ ಚುಕ್ಕಾಣಿ ಹಿಡಿಯುವವರೆಗೆ ಎಲ್ಲ ಸಾಂಸ್ಕೃತಿಕ ಸಂಸ್ಥೆಗಳು ಪಕ್ಷ ರಾಜಕಾರಣದ ವ್ಯಾಪ್ತಿಯಿಂದ ಹೊರಗಿದ್ದವು. 2008ರಿಂದ 2013ರವರೆಗೆ ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದರು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ-ಪ್ರೌಢ ಶಿಕ್ಷಣ ಇಲಾಖೆಗಳು ಆರೆಸ್ಸೆಸ್ ಮುಖಂಡರ ನಿಯಂತ್ರಣಕ್ಕೊಳಪಟ್ಟವು. ಈ ಮೂರು ಸಚಿವಾಲಯಗಳಿಗೆ ಯಾರೇ ಮಂತ್ರಿಯಿದ್ದರೂ ಸಂಘ ಪರಿವಾರದ ನಿರ್ದೇಶನದ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು. ಪಠ್ಯಪುಸ್ತಕಗಳಲ್ಲಿ ಮೊದಲ ಬಾರಿಗೆ ಸಂಘ ಪರಿವಾರದ ಆಶಯಗಳನ್ನು ಪ್ರಕಟಿಸುವ ವಿಚಾರಗಳಿಗೆ ಅವಕಾಶ ಕಲ್ಪಿಸಲಾಯಿತು. ವಿಶ್ವವಿದ್ಯಾನಿಲಯಗಳಲ್ಲಿ ಸಂಘ ಪರಿವಾರದ ಮೂಲದಿಂದ ಬಂದವರನ್ನು ಕುಲಪತಿ, ಕುಲ ಸಚಿವ, ಸಿಂಡಿಕೇಟ್, ಸೆನೆಟ್ ಸ್ಥಾನಗಳಿಗೆ ನೇಮಿಸಿದರು. ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ, ಪ್ರತಿಭಾನ್ಯಾಯ ಮತ್ತು ಲಿಂಗ ನ್ಯಾಯವನ್ನು ಸಂಪೂರ್ಣವಾಗಿ ಕಡೆಗಣಿಸಲಾಯಿತು. ವಿಶ್ವವಿದ್ಯಾನಿಲಯಗಳು ಸೇರಿದಂತೆ ಎಲ್ಲ ಶೈಕ್ಷಣಿಕ, ಸಾಂಸ್ಕೃತಿಕ ನೇಮಕಾತಿಗಳಲ್ಲಿ ಸಂಘ ಪರಿವಾರದ ಸಂಘಟನೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡವರನ್ನು ಮಾತ್ರ ಪರಿಗಣಿಸ ತೊಡಗಿದರು.
ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಆರೆಸ್ಸೆಸ್ ಮೂಲದವರು ಕುಲಪತಿ, ಕುಲಸಚಿವರಾಗಿ ನೇಮಕಗೊಂಡಿದ್ದರು. ಸಿಂಡಿಕೇಟ್, ಸೆನೆಟ್‌ನಲ್ಲಿ ಶಿಕ್ಷಣ ತಜ್ಞರ ಜಾಗದಲ್ಲಿ ಎಬಿವಿಪಿ ಕಾರ್ಯಕರ್ತರು ವಿಜೃಂಭಿಸತೊಡಗಿದರು. ಅಷ್ಟು ಮಾತ್ರವಲ್ಲ, ಅಕಾಡಮಿ, ಪ್ರಾಧಿಕಾರ, ಟ್ರಸ್ಟ್‌ಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ ಆರೆಸ್ಸೆಸ್ ಮೂಲದವರಿಗೇ ಮಣೆ ಹಾಕಲಾಯಿತು. ಕರ್ನಾಟಕ ಸಾಹಿತ್ಯ ಅಕಾಡಮಿ, ಕರ್ನಾಟಕ ನಾಟಕ ಅಕಾಡಮಿ, ಕರ್ನಾಟಕ ಸಂಗೀತ-ನೃತ್ಯ ಅಕಾಡಮಿ, ಕರ್ನಾಟಕ ಜಾನಪದ ಅಕಾಡಮಿ, ಕರ್ನಾಟಕ ಶಿಲ್ಪ ಅಕಾಡಮಿ, ತುಳು ಅಕಾಡಮಿ, ಕರ್ನಾಟಕ ಲಲಿತಕಲಾ ಅಕಾಡಮಿ, ಕರ್ನಾಟಕ ಯಕ್ಷಗಾನ ಅಕಾಡಮಿ, ಕರ್ನಾಟಕ ಅರೆಭಾಷೆ ಅಕಾಡಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಕರ್ನಾಟಕ ಬ್ಯಾರಿ ಅಕಾಡಮಿ ಮತ್ತು ಕರ್ನಾಟಕ ಬಯಲಾಟ ಅಕಾಡಮಿಗಳಿಗೆ ಸಂಘ ಪರಿವಾರದ ಗರಡಿಯಲ್ಲಿ ಪಳಗಿದವರನ್ನು ಅಧ್ಯಕ್ಷ, ಸದಸ್ಯರ ಸ್ಥಾನದಲ್ಲಿ ಕೂರಿಸಲಾಯಿತು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಕರ್ನಾಟಕ ರತ್ನ ಪುರಸ್ಕಾರ ಸೇರಿದಂತೆ ಎಲ್ಲ ಗೌರವಗಳನ್ನು ಆರೆಸ್ಸೆಸ್ ಮಾನದಂಡದಲ್ಲೇ ನೀಡಲಾಯಿತು. 2019ರಿಂದ 2023ರ ಅವಧಿಯಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಆಗಲೂ ಆರೆಸ್ಸೆಸ್ ಮಾನದಂಡ ಅನುಸರಿಸಿಯೇ ಶೈಕ್ಷಣಿಕ, ಸಾಂಸ್ಕೃತಿಕ ಸಂಸ್ಥೆಗಳ ನೇಮಕಾತಿ ಕೈಗೊಂಡಿದ್ದರು. ದಲಿತ, ಮುಸ್ಲಿಮ್ ಸಮುದಾಯದ ಸಾಹಿತಿ, ಕಲಾವಿದರನ್ನು ಮಾತ್ರವಲ್ಲ; ಲಿಂಗಾಯತರನ್ನೂ ಸಾಂಸ್ಕೃತಿಕ ಕ್ಷೇತ್ರದ ನೇಮಕಾತಿಯಲ್ಲಿ ಪರಿಗಣನೆಗೆ ತೆಗೆದುಕೊಂಡಿರಲಿಲ್ಲ. ‘ಸಂಘ ಪರಿವಾರ ಮಾನದಂಡ’ದ ವ್ಯಾಪ್ತಿಗೆ ಸೇರದ ಎಲ್ಲರನ್ನೂ ದೂರ ಇಟ್ಟಿದ್ದರು. ಬಿಜೆಪಿ ಅಧಿಕಾರಾವಧಿಯಲ್ಲಿ ಆಯಾ ಕ್ಷೇತ್ರದ ಗಣ್ಯರನ್ನು ಅಕಾಡಮಿ, ಪ್ರಾಧಿಕಾರ ಮತ್ತು ಟ್ರಸ್ಟ್‌ಗಳ ಅಧ್ಯಕ್ಷ-ಸದಸ್ಯರನ್ನಾಗಿ ನೇಮಿಸಲಿಲ್ಲ. ಸಾಹಿತ್ಯ, ಸಂಗೀತ, ನಾಟಕ ಸೇರಿದಂತೆ ಸಾಂಸ್ಕೃತಿಕ ಕ್ಷೇತ್ರಗಳ ಕೆಲಸಗಳಿಗೆ ಮೀಸಲಾದ ಸಂಸ್ಥೆಗಳು ಒಟ್ಟು ಒಂಭತ್ತು ವರ್ಷಗಳ ಕಾಲ ಆರೆಸ್ಸೆಸ್ ವಿಚಾರಧಾರೆ ಪ್ರಸಾರ ಮಾಡುವ ಕಾರ್ಯಕರ್ತರಿಗೆ ಗಂಜಿ ಕೇಂದ್ರಗಳಾಗಿ ಪರಿಣಮಿಸಿದ್ದವು.
ಮೊದಲ ಬಾರಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದಾಗ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಮಲಿನತೆ ತೊಳೆಯಲು ಬದ್ಧತೆಯಿಂದ ಕಾರ್ಯನಿರ್ವಹಿಸಿದ್ದರು. 2008ರಿಂದ 2013ರ ವರೆಗೆ ಆಡಳಿತ ನಡೆಸಿದ ಬಿಜೆಪಿಯವರು ಪಠ್ಯಪುಸ್ತಕಗಳಲ್ಲಿ ಆರೆಸ್ಸೆಸ್ ವಿಚಾರಧಾರೆಗಳನ್ನು ತುರುಕಿದ್ದರು. ರಾಜ್ಯದ ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ಆರೆಸ್ಸೆಸ್ ಮೂಲದ ಕುಲಪತಿ, ಕುಲಸಚಿವ, ಸಿಂಡಿಕೇಟ್, ಸೆನೆಟ್ ಸದಸ್ಯರು ನೇಮಕಗೊಂಡಿದ್ದರಿಂದ ಕರ್ನಾಟಕದ ವಿ.ವಿ.ಗಳು ಸಂಘ ಪರಿವಾರದ ಅಡ್ಡೆಗಳಾಗಿದ್ದವು. ಸಹಜವಾಗಿಯೇ ಪ್ರಾಧ್ಯಾಪಕರ ನೇಮಕಾತಿಯಲ್ಲೂ ಪ್ರತಿಭಾವಂತರಿಗಿಂತಲೂ ಸಂಘಮೂಲದವರೇ ಅವಕಾಶ ಗಿಟ್ಟಿಸಿಕೊಂಡರು. ಒಂದು ಬಾರಿ ವಿ.ವಿ.ಯ ನೌಕರಿಗೆ ಸೇರುವ ಆರೆಸ್ಸೆಸ್ ಮೂಲದ ಪ್ರಾಧ್ಯಾಪಕರು 25-30 ವರ್ಷಗಳ ಕಾಲ ಸಂಘ ಪರಿವಾರದ ವಿಚಾರಗಳಿಗೆ ವೇದಿಕೆಯಾಗುತ್ತಾರೆ. ಈ ಸತ್ಯ ಅರಿತ ಸಿದ್ದರಾಮಯ್ಯನವರು 2013ರಲ್ಲಿ ಮುಖ್ಯಮಂತ್ರಿ ಹುದ್ದೆ ಅಲಂಕರಿಸುತ್ತಲೇ ಸಿಂಡಿಕೇಟ್-ಸೆನೆಟ್ ನಾಮ ನಿರ್ದೇಶನಗಳನ್ನು ರದ್ದುಗೊಳಿಸಿದ್ದರು. ಅಕಾಡಮಿ-ಪ್ರಾಧಿಕಾರ, ಸಂಶೋಧನಾ ಕೇಂದ್ರಗಳ ಅಧ್ಯಕ್ಷರು-ಸದಸ್ಯರ ನೇಮಕಾತಿಯನ್ನೂ ಬರ್ಕಾಸ್ತುಗೊಳಿಸಿದ್ದರು. ಅಷ್ಟು ಮಾತ್ರವಲ್ಲ; ನಂತರ ನಡೆದ ವಿಶ್ವವಿದ್ಯಾನಿಲಯಗಳ ಕುಲಪತಿ, ಕುಲ ಸಚಿವ, ಸಿಂಡಿಕೇಟ್-ಸೆನೆಟ್ ಸದಸ್ಯರುಗಳ ನೇಮಕಾತಿಯಲ್ಲಿ ತಜ್ಞತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಮೊದಲ ಆದ್ಯತೆ ನೀಡಿದರು.
ಅಷ್ಟೇ ಅಲ್ಲ; ಬಿಜೆಪಿ ಸರಕಾರ ಸಿದ್ಧಪಡಿಸಿ ಅನುಷ್ಠಾನಗೊಳಿಸಿದ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಡಾ. ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಸಂಘಪರಿವಾರದ ಪಠ್ಯಗಳನ್ನು ಜನಪರಿವಾರದ ಪಠ್ಯಗಳನ್ನಾಗಿ ಮಾರ್ಪಾಟು ಮಾಡಿದ್ದರು. ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ ಆಯಾ ಕ್ಷೇತ್ರಗಳ ತಜ್ಞರಿಗೆ ಅವಕಾಶ ಕಲ್ಪಿಸಿದ್ದರು. ಪ್ರತಿಭಾನ್ಯಾಯವನ್ನೊಳಗೊಂಡ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಲಿಂಗ ನ್ಯಾಯದ ಮಾನದಂಡವನ್ನು ಅನುಸರಿಸಿ ನಿಜವಾದ ಅರ್ಹರು ಸಾಂಸ್ಕೃತಿಕ ಕ್ಷೇತ್ರವನ್ನು ಮುನ್ನಡೆಸುವಂತೆ ಮಾಡಿದರು. ಹಾಗೆ ನೋಡಿದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶೈಕ್ಷಣಿಕ-ಸಾಂಸ್ಕೃತಿಕ ಕ್ಷೇತ್ರದಲ್ಲಿ ಅತ್ಯುತ್ತಮ ಮಾದರಿಗಳನ್ನು ರೂಪಿಸಿದ್ದರು. ಅತ್ಯಂತ ಹಿಂದುಳಿದ ಮಡಿವಾಳ ಸಮುದಾಯದ ವ್ಯಕ್ತಿ ವಿಶ್ವವಿದ್ಯಾನಿಲಯದ ಕುಲಪತಿಯಾಗುವಂತೆ ನೋಡಿಕೊಂಡಿದ್ದರು. ರಾಜ್ಯೋತ್ಸವ ಪ್ರಶಸ್ತಿ ಸೇರಿ ಎಲ್ಲಾ ಪ್ರಶಸ್ತಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ನಡೆಸದೆ ನಿಜವಾದ ಸಾಧಕರಿಗೆ ಮನ್ನಣೆ ದೊರಕಿಸಿಕೊಟ್ಟಿದ್ದರು. ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವನ್ನಾಗಿಸುವಲ್ಲಿ ಕಾಳಜಿಯಿಂದ ಕಾರ್ಯ ನಿರ್ವಹಿಸಿದ್ದರು. ಕೋಮುವಾದ, ಮತೀಯವಾದಗಳನ್ನು ಹಿಮ್ಮೆಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಎರಡನೇ ಬಾರಿಗೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಿರುವ ಸಿದ್ದರಾಮಯ್ಯ ಅವರ ಆಳದ ಕಾಳಜಿ, ಬದ್ಧತೆ, ಪ್ರಜಾತಂತ್ರದ ಆಶಯಗಳ ಬಗೆಗೆ ಅವರಿಗಿರುವ ಗೌರವ ಕಮ್ಮಿಯಾಗಿಲ್ಲ. ಚುನಾವಣೆಗೂ ಮುಂಚೆ ಪ್ರಕಟಿಸಿದ ಐದು ಗ್ಯಾರಂಟಿಗಳ ಅನುಷ್ಠಾನದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಯಶಸ್ವಿಯೂ ಆಗಿದ್ದಾರೆ. ಆದರೆ ಸಾಂಸ್ಕೃತಿಕ ಕ್ಷೇತ್ರದ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ ಸಿದ್ದರಾಮಯ್ಯನವರ ನಂಬಿಕೆಗೆ ವಿರುದ್ಧವಾಗಿ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಂತ್ರಿ ಶಿವರಾಜ ತಂಗಡಗಿಯವರು ಮಾಡಿದ ತಪ್ಪೋ ಅಥವಾ ಮುಖ್ಯಮಂತ್ರಿಗಳ ಆಪ್ತ ವಲಯದ ಅಧಿಕಾರಿಗಳ ಬೇಜವಾಬ್ದಾರಿಯಿಂದಾದ ಲೋಪವೋ? ಪ್ರಧಾನಮಂತ್ರಿ ನರೇಂದ್ರ ಮೋದಿ ಭಕ್ತರಿಗೆ, ಅರ್ಥಾತ್ ಆರೆಸ್ಸೆಸ್ ಮೂಲದ ಅನೇಕರಿಗೆ ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷ-ಸದಸ್ಯರುಗಳ ನಾಮ ನಿರ್ದೇಶನದಲ್ಲಿ ಮಣೆ ಹಾಕುವ ಮೂಲಕ ಮುಖ್ಯಮಂತ್ರಿಗಳ ಆಳದ ಕಾಳಜಿ, ಬದ್ಧತೆಗೆ ಕಳಂಕ ಅಂಟಿಸಿದ್ದಾರೆ. ಆರೆಸ್ಸೆಸ್ ಸಿದ್ಧಾಂತ, ನರೇಂದ್ರ ಮೋದಿಯವರ ಹುಸಿ ದೇಶಭಕ್ತಿ ಮತ್ತು ಸುಳ್ಳುಗಳು ವಿಜೃಂಭಿಸುತ್ತಿರುವ ಕಾಲವಿದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಸಭೆಯ ಚುನಾವಣಾ ಪ್ರಚಾರದುದ್ದಕ್ಕೂ ಆರೆಸ್ಸೆಸ್ ವಿಚಾರಧಾರೆಗಳನ್ನು ವಿರೋಧಿಸಿದ್ದಾರೆ. ಮೋದಿಯವರ ಕೋಮುವಾದಿ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ. ದುರಂತವೆಂದರೆ; ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಸಿದ್ದರಾಮಯ್ಯ ಅವರ ಅನುಮೋದನೆಯೊಂದಿಗೆ ಮೋದಿ ಭಕ್ತರು ಮತ್ತು ಆರೆಸ್ಸೆಸ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಹಲವರಿಗೆ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರಾಗುವ ಭಾಗ್ಯ ದೊರಕಿದೆ.
ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಜಾರಿಗೊಳ್ಳುವ ಒಂದು ದಿನ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು 12 ಅಕಾಡಮಿ ಮತ್ತು ನಾಲ್ಕು ಪ್ರಾಧಿಕಾರಗಳಾದ: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಕುವೆಂಪು ಭಾಷಾ ಭಾರತಿಗಳಿಗೆ ಅಧ್ಯಕ್ಷರು, ಸದಸ್ಯರನ್ನು ನಾಮ ನಿರ್ದೇಶನ ಮಾಡಿ ಅಧಿಕೃತವಾಗಿ ಸರಕಾರಿ ಆದೇಶ ಹೊರಡಿಸಿದ್ದಾರೆ. ಸಂಗೀತ ಮತ್ತು ನೃತ್ಯ ಅಕಾಡಮಿಗೆ ಮೈಸೂರಿನ ಡಾ.ಕೃಪಾ ಫಡಕೆಯವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದಾರೆ. ಡಾ. ಕೃಪಾ ಅವರು ನೃತ್ಯ ಕ್ಷೇತ್ರದ ಪ್ರತಿಭಾವಂತರೇನೂ ಅಲ್ಲ. ಅವರು ತಮ್ಮ ನೃತ್ಯ ಕಲೆಯನ್ನು ಆರೆಸ್ಸೆಸ್ ಪ್ರಚಾರಕ್ಕೆ ಬಳಸುತ್ತಾ ಬಂದವರು. ಗುಜರಾತ್‌ನಲ್ಲಿ ನರೇಂದ್ರ ಮೋದಿಯವರನ್ನು ವೈಭವೀಕರಿಸುವ ನೃತ್ಯ ರೂಪಕವನ್ನು ಪ್ರದರ್ಶಿಸಿದವರು. ಅಷ್ಟು ಮಾತ್ರವಲ್ಲ ಡಾ.ಕೃಪಾ ಫಡಕೆಯವರು ಆರೆಸ್ಸೆಸ್ ಸಂಘಟನೆಯ ಭಾಗವಾಗಿರುವ ಸಂಸ್ಕಾರ ಭಾರತಿಯ ಸಕ್ರಿಯ ಕಾರ್ಯಕರ್ತೆ ಮತ್ತು ಪದಾಧಿಕಾರಿ. ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಅಪಾರ ನಂಬಿಕೆ. ಆರೆಸ್ಸೆಸ್ ತತ್ವ ಸಿದ್ಧಾಂತಗಳನ್ನು ನೃತ್ಯ ಕಲೆಯ ಮೂಲಕ ಪ್ರಚಾರ ಮಾಡುವ ಅಪ್ಪಟ ಪ್ರಚಾರಕಿ ಡಾ. ಕೃಪಾ ಫಡಕೆಯವರನ್ನು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡಮಿಯ ಅಧ್ಯಕ್ಷರನ್ನಾಗಿಸಿದ್ದು ಅಕ್ಷಮ್ಯ ಅಪರಾಧ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಅನುವಾದಕ್ಕೆ ಮೀಸಲಿರುವ ಸಂಸ್ಥೆ. ಆ ಪ್ರಾಧಿಕಾರದ ಸದಸ್ಯರನ್ನಾಗಿ ಬೀದರ್ ಜಿಲ್ಲಾ ಬಿಜೆಪಿಯ ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮೀ ಕೌಟಗೆಯವರನ್ನು ನಾಮ ನಿರ್ದೇಶನ ಮಾಡಿದ್ದಾರೆ. ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ ಸದಸ್ಯರನ್ನಾಗಿ ಬಿಜೆಪಿ ಮುಖಂಡ ಡಾ. ಸಿ. ಸೋಮಶೇಖರ್ ಆಪ್ತ ಶಿಷ್ಯ ಮೃತ್ಯುಂಜಯ ದೊಡ್ಡವಾಡ, ಕಲಬುರಗಿ ಬಿಜೆಪಿ ನಾಯಕ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಅವರ ಅನುಯಾಯಿ ಶಂಕರ ಹೂಗಾರ ಅವರನ್ನು ನೇಮಕ ಮಾಡಲಾಗಿದೆ. ಒಂದೆರಡು ಸ್ಯಾಂಪಲ್ ನಿದರ್ಶನಕ್ಕೆ ನೀಡಲಾಗಿದೆ. ಕರ್ನಾಟಕ ಸಾಹಿತ್ಯ ಅಕಾಡಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಪ್ರತಿಭಾವಂತ ಕವಿ ಮತ್ತು ಸೈದ್ಧಾಂತಿಕ ಸ್ಪಷ್ಟತೆಯುಳ್ಳ ಬರಹಗಾರ. ಸಿದ್ದರಾಮಯ್ಯ ಸರಕಾರ ನೇಮಕ ಮಾಡಿರುವ 12 ಅಕಾಡಮಿಗಳ ಅಧ್ಯಕ್ಷರ ಪೈಕಿ ಮುಕುಂದರಾಜ್ ಮಾತ್ರ ಆರೆಸ್ಸೆಸ್ ಹುನ್ನಾರವನ್ನು ಬಹಿರಂಗವಾಗಿ ವಿರೋಧಿಸುತ್ತಾ ಬಂದವರು. ಉಳಿದವರು ಆರೆಸ್ಸೆಸ್ ಮತ್ತು ಬಿಜೆಪಿಯೊಂದಿಗೆ ಸಹಾನುಭೂತಿ ಹೊಂದಿದವರೇ. ಸರಕಾರ ನೇಮಕ ಮಾಡಿದ ಪಟ್ಟಿಯಲ್ಲಿ ಪ್ರತಿಭಾವಂತರ-ಸೈದ್ಧಾಂತಿಕ ಬದ್ಧತೆಯುಳ್ಳವರ ಸಂಖ್ಯೆ ಕಡಿಮೆ ಇದೆ.
12 ಅಕಾಡಮಿ, ನಾಲ್ಕು ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಮಹಿಳಾ ನ್ಯಾಯವನ್ನು ಪಾಲಿಸಿಲ್ಲ. ಪ್ರತಿಭಾ ನ್ಯಾಯವನ್ನೂ ಕಡೆಗಣಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮುಸ್ಲಿಮ್ ಸಮುದಾಯ ‘ನಿಷ್ಠ’ ಮತದಾರರೆಂದೇ ಗುರುತಿಸಿಕೊಂಡಿದ್ದಾರೆ. ಕುರುಬರ, ದಲಿತರ ಮತಗಳು ಆಚೆ ಈಚೆ ಆಗಬಹುದು. ಆದರೆ ಮುಸ್ಲಿಮರ ಕಾಂಗ್ರೆಸ್ ನಿಷ್ಠೆ ಅಪ್ರತಿಮ. ಅಕಾಡಮಿ, ಪ್ರಾಧಿಕಾರಗಳಿಗೆ ಒಟ್ಟು 16 ಜನರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. 16ರಲ್ಲಿ ಮುಸ್ಲಿಮ್ ಸಮುದಾಯಕ್ಕೆ ಸೇರಿದ ಒಬ್ಬ ಸಾಹಿತಿ, ಕಲಾವಿದನ ಹೆಸರಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಅರ್ಹರಾದ ಅನೇಕರು ಮುಸ್ಲಿಮ್ ಸಮುದಾಯದಲ್ಲಿದ್ದಾರೆ. ಮುಸ್ಲಿಮ್ ಸಮುದಾಯದ ಸಾಹಿತಿ, ಕಲಾವಿದರನ್ನು ಅಕಾಡಮಿ- ಪ್ರಾಧಿಕಾರಗಳ ಅಧ್ಯಕ್ಷರ ನೇಮಕಾತಿಯಲ್ಲಿ ಪರಿಗಣಿಸುವುದೇ ಇಲ್ಲವೆಂದರೆ ಅದು ಆರೆಸ್ಸೆಸ್, ಬಿಜೆಪಿ ಮನಃಸ್ಥಿತಿಯೇ ಸರಿ. ಆರೆಸ್ಸೆಸ್‌ನ ಡಾ. ಕೃಪಾ ಫಡಕೆ ಬಿಟ್ಟರೆ ಬೇರೊಬ್ಬ ಮಹಿಳೆ ಇವರಿಗೆ ಕಂಡಿಲ್ಲ. ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯವೇ ನೀಡಿಲ್ಲ. ಕಲ್ಯಾಣ ಕರ್ನಾಟಕದ ಹೆಸರಲ್ಲಿ ಒಬ್ಬರಿಗೆ ಅವಕಾಶ ದೊರೆತಿದೆ.
ಕುರುಬ ಸಮುದಾಯವೂ ಸೇರಿದಂತೆ ಕರ್ನಾಟಕದ ಎಲ್ಲ ಸಮುದಾಯದವರಲ್ಲಿ ಅನೇಕ ಪ್ರತಿಭಾವಂತ ಸಾಹಿತಿ, ಕಲಾವಿದರಿದ್ದಾರೆ. ಡಾ. ರಾಜೇಂದ್ರ ಚೆನ್ನಿ, ಡಾ. ಎಚ್.ಎಸ್. ಶಿವಪ್ರಕಾಶ್, ಡಾ. ನಟರಾಜ ಹುಳಿಯಾರ್, ರಂಜಾನ್ ದರ್ಗಾ ಮುಂತಾದವರು ಕುವೆಂಪು ಭಾರತಿ ಪ್ರಾಧಿಕಾರವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದವರು. ಕನ್ನಡ ಪುಸ್ತಕ ಪ್ರಾಧಿಕಾರಕ್ಕೆ ಹಿರಿಯ ಸಾಹಿತಿಯನ್ನು ಪರಿಗಣಿಸಬೇಕೆಂಬ ನಿಯಮ ಇದೆ. ಮಾನಸ ಮತ್ತು ಚೆನ್ನಪ್ಪ ಕಟ್ಟಿ ಆ ಸಮುದಾಯ ಹೆಮ್ಮೆಪಡುವ ವ್ಯಕ್ತಿತ್ವ ಹೊಂದಿಲ್ಲ. ಆ ಎರಡು ಪ್ರಾಧಿಕಾರಗಳನ್ನು ಕುರುಬ ಸಮುದಾಯದವರಿಗೆ ಕೊಡುವುದರಲ್ಲಿ ತಪ್ಪಿಲ್ಲ. ಆ ಸ್ಥಾನಗಳಿಗೆ ಹೆಚ್ಚು ಅರ್ಹರಾದ ನಟರಾಜ ಹುಳಿಯಾರ್, ಕಾ.ತ. ಚಿಕ್ಕಣ್ಣನವರನ್ನು ಪರಿಗಣಿಸಿದ್ದರೂ ಮೆಚ್ಚಿಕೊಳ್ಳಬಹುದಿತ್ತು.
ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ನೇಮಕಾತಿಯಲ್ಲಿ ಮುಸ್ಲಿಮ್ ಸಮುದಾಯದ ಸಾಹಿತಿ ಕಲಾವಿದರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದು, ಆರೆಸ್ಸೆಸ್ ಕಾರ್ಯಕರ್ತೆ ಡಾ. ಕೃಪಾ ಫಡಕೆಯವರಿಗೆ ಅಧ್ಯಕ್ಷ ಸ್ಥಾನ ನೀಡಿದ್ದು, ಅಸಂಖ್ಯಾತ ಆರೆಸ್ಸೆಸ್ ಕಾರ್ಯಕರ್ತರನ್ನು ಸದಸ್ಯರನ್ನಾಗಿಸಿದ್ದು ಯಾವ ಸಂದೇಶ ರವಾನಿಸುತ್ತದೆ? ಕೋಮುವಾದದ ವಿರುದ್ಧ ನಿತ್ಯ ಸಮರ ಸಾರುತ್ತಿರುವ ಅನೇಕ ಯುವ ಪ್ರತಿಭಾವಂತ ಸಾಹಿತಿ, ಕಲಾವಿದರನ್ನು ಕಡೆಗಣಿಸಿದ್ದು ಮತೀಯ ಶಕ್ತಿಗಳಿಗೆ ಬಲ ನೀಡಿದಂತೆ. ಮೋದಿ ಭಕ್ತರಿಗೆ ಮಣೆಹಾಕಿ ಅಕಾಡಮಿ-ಪ್ರಾಧಿಕಾರಗಳ ಅಧ್ಯಕ್ಷ, ಸದಸ್ಯರ ನೇಮಕಾತಿ ಮಾಡುವ ಅನಿವಾರ್ಯತೆ ಸಿದ್ದರಾಮಯ್ಯ ಸರಕಾರಕ್ಕೆ ಇರಲಿಲ್ಲ. ಆದರೆ ಯಾಕೆ?