ಮುಚ್ಚುವ ಹಂತದಲ್ಲಿ ಸರಕಾರಿ ವಿಶ್ವವಿದ್ಯಾನಿಲಯಗಳು

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸಂಪುಟ ಉಪಸಮಿತಿಯು ಹಿಂದಿನ ಬಿಜೆಪಿ ಸರಕಾರದಲ್ಲಿ ಅಸ್ತಿತ್ವಕ್ಕೆ ಬಂದ ಏಳು ವಿಶ್ವವಿದ್ಯಾನಿಲಯಗಳ ಪೈಕಿ ಆರನ್ನು ಮುಚ್ಚಬೇಕೆಂದು ಶಿಫಾರಸು ಮಾಡಿದೆ. ಕರ್ನಾಟಕ ಸರಕಾರ ಈ ಸಂಬಂಧ ಅಂತಿಮ ನಿರ್ಧಾರ ಕೈಗೊಂಡಿಲ್ಲವಾದರೂ ಮುಚ್ಚುವುದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ. ಉಪಸಮಿತಿಯ ಈ ನಿರ್ಧಾರವನ್ನು ಬಿಜೆಪಿ ಸರಕಾರದಲ್ಲಿ ನಾಲ್ಕು ವರ್ಷಗಳ ಕಾಲ ಉನ್ನತ ಶಿಕ್ಷಣ ಮಂತ್ರಿಯಾಗಿದ್ದ ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಕಟುವಾಗಿ ಟೀಕಿಸಿದ್ದಾರೆ. ಹಾಗೆ ನೋಡಿದರೆ ಉನ್ನತ ಶಿಕ್ಷಣ ಇಲಾಖೆಯನ್ನು ಹಿಂಡುವ ಎಮ್ಮೆಯೆಂದು ಪರಿಗಣಿಸಿ ಶಕ್ತಿ ಮೀರಿ ವಿಶ್ವವಿದ್ಯಾನಿಲಯಗಳನ್ನು ಹಾಳು ಮಾಡಿದವರೇ ಡಾ. ಸಿ.ಎನ್. ಅಶ್ವಥ್ ನಾರಾಯಣ್. ಅವರು ತಮ್ಮ ಸರಕಾರದ ಕೊನೆಯ ದಿನಗಳಲ್ಲಿ ಸಿದ್ಧತೆ ಮಾಡಿಕೊಳ್ಳದೆ, ಹಾಸನ, ಚಾಮರಾಜನಗರ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಕೊಡಗು ಮತ್ತು ಬೀದರ್ ಸೇರಿ ಒಟ್ಟು ಏಳು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದರು. ಅಷ್ಟು ಮಾತ್ರವಲ್ಲ ಆ ಏಳು ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದರು. ಸಾಮಾನ್ಯವಾಗಿ ಒಂದು ವಿಶ್ವವಿದ್ಯಾನಿಲಯ ಸ್ಥಾಪಿಸಬೇಕೆಂದರೆ, ಮೊದಲು ಸರಕಾರ ಹಿರಿಯ ಪ್ರಾಧ್ಯಾಪಕರೊಬ್ಬರನ್ನು ವಿಶೇಷ ಅಧಿಕಾರಿಯನ್ನಾಗಿ ನೇಮಿಸಿ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಏಳು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದು ಮತ್ತು ಆ ಏಳೂ ವಿಶ್ವವಿದ್ಯಾನಿಲಯಗಳಿಗೆ ಕುಲಪತಿಗಳನ್ನು ನೇಮಿಸಿದ್ದು ಯುಜಿಸಿ ನಿಯಮಗಳಿಗೆ ಪೂರಕವಾಗಿಯೇ ಇದ್ದಿರಬಹುದು. ಆದರೆ ಡಾ. ಅಶ್ವಥ್ ನಾರಾಯಣ್ ಅವರ ಕ್ರಮ ಉನ್ನತ ಶಿಕ್ಷಣದ ಗುಣಮಟ್ಟದ ದೃಷ್ಟಿಯಿಂದ ಸಮರ್ಥನೀಯವಾಗಿರಲಿಲ್ಲ.
ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಇರಬೇಕು ಮತ್ತು ಒಂದು ವಿಶ್ವವಿದ್ಯಾನಿಲಯದ ವ್ಯಾಪ್ತಿಗೆ ನೂರಕ್ಕಿಂತಲೂ ಹೆಚ್ಚು ಕಾಲೇಜುಗಳು ಇರಬಾರದು ಎಂಬುದು ಕೇಂದ್ರ ಸರಕಾರದ ನಿಲುವು. 2013ರಲ್ಲಿಯೇ ರಾಷ್ಟ್ರೀಯ ಉಚ್ಚತರ ಶಿಕ್ಷಾ ಅಭಿಯಾನ ಯೋಜನೆಯಡಿ (ಖUSಂ)ಉನ್ನತ ಶಿಕ್ಷಣದ ಗುಣಮಟ್ಟ ಮತ್ತು ಅದರ ವಿಸ್ತರಣೆ ಬಗ್ಗೆ ಗಮನ ಹರಿಸಲಾಗಿತ್ತು. ರೂಸಾ ಯೋಜನೆಗೆ ಯುಪಿಎ-2 ಅವಧಿಯಲ್ಲಿ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅವರು ಚಾಲನೆ ನೀಡಿದ್ದರು.ಉನ್ನತ ಶಿಕ್ಷಣದಲ್ಲಿ ಭಾರತ ವಿಶ್ವದ ಸರಾಸರಿಗೆ ಹೋಲಿಸಿದರೆ ಕೆಳಗಿದೆ. ವಿಶ್ವದ ಸರಾಸರಿ ಪ್ರತಿಶತ 36.7 ಇದ್ದರೆ, ಭಾರತದ ಸರಾಸರಿ ಪ್ರತಿಶತ 28.4 ಇದೆ. ಹಾಗೆ ನೋಡಿದರೆ ಕರ್ನಾಟಕದ ಸರಾಸರಿ ಪ್ರತಿಶತ 36.2 ಇದೆ. ಕಲ್ಯಾಣ ಕರ್ನಾಟಕದಲ್ಲಿ ಉನ್ನತ ಶಿಕ್ಷಣದ ಪ್ರಮಾಣ ಪ್ರತಿಶತ ಹದಿನೈದು ದಾಟಿಲ್ಲ.
ಉನ್ನತ ಶಿಕ್ಷಣದಲ್ಲಿ ಭಾರತ ಹಿಂದುಳಿದಿರುವುದನ್ನು ಗಮನದಲ್ಲಿ ಇಟ್ಟುಕೊಂಡು ರಾಷ್ಟ್ರೀಯ ಉಚ್ಚತರ ಶಿಕ್ಷಾ ಯೋಜನೆ ಆರಂಭಿಸಲಾಯಿತು. ಕ್ಲಸ್ಟರ್ ವಿಶ್ವವಿದ್ಯಾನಿಲಯಗಳ ಪರಿಕಲ್ಪನೆ ಹುಟ್ಟಿಕೊಂಡಿದ್ದೇ ಆಗ. ರೂಸಾ ಯೋಜನೆಯಡಿ ಹೆಚ್ಚು ಅನುದಾನ ಸಿಗುತ್ತದೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಉನ್ನತ ಶಿಕ್ಷಣ ಸಚಿವರಾಗಿದ್ದ ಬಸವರಾಜ ರಾಯರೆಡ್ಡಿ ಬೆಂಗಳೂರು ನಗರದ ಪ್ರತಿಷ್ಠಿತ ಮಹಾರಾಣಿ ಕಾಲೇಜನ್ನು ಕ್ಲಸ್ಟರ್ ವಿಶ್ವವಿದ್ಯಾನಿಲಯವನ್ನಾಗಿ ಪರಿವರ್ತಿಸಿದ್ದರು.ಅಷ್ಟಕ್ಕೂ ವಿಶ್ವ ವಿದ್ಯಾನಿಲಯಗಳ ಸಂಖ್ಯೆ ಹೆಚ್ಚಾಗಬೇಕು ಎಂಬ ಮಾತಿಗೆ ಬಲ ದೊರಕಿದ್ದೇ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. ಅದನ್ನು ಕೆಟ್ಟ ರೀತಿಯಲ್ಲಿ ತನ್ನ ಸ್ವಾರ್ಥಕ್ಕೆ ಬಳಸಿಕೊಂಡಿದ್ದು ಡಾ. ಅಶ್ವಥ್ ನಾರಾಯಣ್ ಎಂಬುದರಲ್ಲಿ ಎರಡು ಮಾತಿಲ್ಲ. ಸಿದ್ದರಾಮಯ್ಯ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಕೆಲಸಗಾರ ಉನ್ನತ ಶಿಕ್ಷಣ ಸಚಿವರನ್ನು ನೇಮಿಸಿಕೊಳ್ಳಲಿಲ್ಲ. ಹತ್ತಾರು ವರ್ಷಗಳ ಕಾಲ ಕೈಗಾರಿಕಾ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದ ಆರ್.ವಿ. ದೇಶಪಾಂಡೆಯವರನ್ನು ಉನ್ನತ ಶಿಕ್ಷಣ ಮಂತ್ರಿ ಮಾಡಿದರು. ಆ ಇಲಾಖೆಯ ಬಗ್ಗೆ ಪ್ರೀತಿ, ಗೌರವ ಹೊಂದದ ಅವರು ತಮ್ಮ ಖಾಸಗಿ ಪಿಎ ಹನುಮಂತ ಕೊಟಬಾಗಿ ಸುಪರ್ದಿಗೆ ವಹಿಸಿ ತಮ್ಮ ವ್ಯವಹಾರ-ವಹಿವಾಟಿನಲ್ಲಿ ಮುಳುಗಿದರು. ಹನುಮಂತ ಕೊಟಬಾಗಿ ಉನ್ನತ ಶಿಕ್ಷಣ ಇಲಾಖೆಯ ವ್ಯಾಪಾರದ ಅಂಗಡಿ ತೆರೆದು, ಕುಲಪತಿ, ಕುಲಸಚಿವ ಮತ್ತು ಸಿಂಡಿಕೇಟ್ ಸದಸ್ಯತ್ವದ ಹುದ್ದೆಗಳನ್ನು ಹರಾಜಿಗಿಟ್ಟು ಭರ್ಜರಿ ವ್ಯಾಪಾರ ಮಾಡಿಕೊಂಡರು. ಇಲಾಖೆಯ ಅಧಿಕಾರಿಗಳ ಮಾತು ಕೇಳಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗದಿಂದ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಒಪ್ಪಿಸಿದರು. ಕರ್ನಾಟಕ ಲೋಕಸೇವಾ ಆಯೋಗ ಒಂದು ಹುದ್ದೆಗೆ ಐದು ಜನರನ್ನು ಮೌಖಿಕ ಸಂದರ್ಶನಕ್ಕೆ ಕರೆದು ಆ ಐದು ಜನ ಪ್ರತಿಭಾವಂತರಲ್ಲಿ ಒಬ್ಬರನ್ನು ಆಯ್ಕೆ ಮಾಡುತ್ತಿತ್ತು. ಅತಿ ಹೆಚ್ಚು ಅಂಕ ಪಡೆದ ಐದು ಜನರಲ್ಲಿ ಒಬ್ಬರಿಗೆ ನೌಕರಿ ಸಿಗುತ್ತಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ಹೊಸ ನೇಮಕಾತಿ ನಿಯಮ ಜಾರಿಗೆ ತಂದರು. ಪದವಿ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವವರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರು ನಡೆಸುವ ಪರೀಕ್ಷೆ ಪಾಸು ಮಾಡಬೇಕು. ಬಹು ಆಯ್ಕೆಯ ಒ.ಎಂ.ಆರ್. ಶೀಟ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದವರ ಮೆರಿಟ್ ಲಿಸ್ಟ್ ತಯಾರಿಸಿ ನೌಕರಿ ಆದೇಶ ನೀಡತೊಡಗಿದರು. ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು, ನೆಟ್, ಸೆಟ್ ಮತ್ತು ಪಿ. ಎಚ್‌ಡಿ. ಮಾಡಿದವರು ಒ.ಎಂ.ಆರ್. ಶೀಟ್ ಪರೀಕ್ಷೆಯಲ್ಲಿ ಮುಗ್ಗರಿಸತೊಡಗಿದರು. ಲಕ್ಷ ಲಕ್ಷ ಹಣ ನೀಡಿದವರಿಗೆ ಒ.ಎಂ.ಆರ್. ಶೀಟ್ ಕೃಪೆಯಾಗತೊಡಗಿತು. ಈಗ ಒ.ಎಂ.ಆರ್. ಶೀಟ್ ಬಣ್ಣ ಬಯಲಾಗಿದೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದು, ಹೆಚ್ಚು ಅಂಕ ಪಡೆದ ಕಾರಣಕ್ಕೆ ಪಿಎಚ್.ಡಿ. ಮಾಡಿ, ನೆಟ್, ಸೆಟ್‌ನಂತಹ ಕಠಿಣ ಅರ್ಹತಾ ಪರೀಕ್ಷೆ ಪಾಸು ಮಾಡಿದವರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತೊಂದು ಪರೀಕ್ಷೆಯ ಅಗತ್ಯವೇ ಇರಲಿಲ್ಲ. ಆರ್. ವಿ. ದೇಶಪಾಂಡೆಯವರು ಮಾಡಿದ ಒಂದು ತಪ್ಪಿನಿಂದ ಪ್ರತಿಭಾವಂತರು ಅವಕಾಶವಂಚಿತರಾದರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳು ಮತ್ತು ಬಿಜೆಪಿ ಸರಕಾರದಲ್ಲಿ ಸುದೀರ್ಘ ಅವಧಿಗೆ ಉನ್ನತ ಶಿಕ್ಷಣ ಮಂತ್ರಿಯಾಗಿದ್ದ ಡಾ. ಅಶ್ವಥ್ ನಾರಾಯಣ್ ಅತಿ ಹೆಚ್ಚು ಲಾಭ ಮಾಡಿಕೊಂಡರು.
ಕರ್ನಾಟಕದಲ್ಲಿ ಒಟ್ಟು 41 ಸರಕಾರಿ ವಿಶ್ವವಿದ್ಯಾನಿಲಯಗಳಿವೆ. ಇವುಗಳಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಗಳೂ ಸೇರಿಕೊಂಡಿವೆ. ಇವುಗಳನ್ನು ಶ್ರೀಮಂತ ವಿಶ್ವವಿದ್ಯಾನಿಲಯಗಳೆಂದೇ ಪರಿಗಣಿಸಲಾಗಿದೆ. ರಾಜ್ಯದಲ್ಲಿ ಇಪ್ಪತ್ತೇಳು ಖಾಸಗಿ ವಿಶ್ವವಿದ್ಯಾನಿಲಯಗಳಿವೆ. ಇವುಗಳನ್ನು ಮಠ ಮಾನ್ಯಗಳು ನಡೆಸುತ್ತವೆ. ಎಲ್ಲ ಪಕ್ಷದ ರಾಜಕಾರಣಿಗಳು ಇವುಗಳ ಮಾಲಕರಾಗಿದ್ದಾರೆ. ಹನ್ನೊಂದು ಡೀಮ್ಡ್ ವಿಶ್ವವಿದ್ಯಾನಿಲಯಗಳಿವೆ. ಶ್ರೀಮಂತರು ಈ ವಿಶ್ವವಿದ್ಯಾನಿಲಯಗಳ ಚುಕ್ಕಾಣಿ ಹಿಡಿದಿದ್ದಾರೆ. ಇಲ್ಲಿ ಓದುವವರು ಶ್ರೀಮಂತರೇ. ಒಂದು ವಿಶ್ವವಿದ್ಯಾನಿಲಯ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಬೆಂಗಳೂರು ನಗರದಲ್ಲಿ ಇರುವ ಸೈಂಟ್ ಜೋಸೆಫ್ ವಿಶ್ವವಿದ್ಯಾನಿಲಯ ಈ ಮಾದರಿಯದು. ಇನ್ನು ಕರ್ನಾಟಕದಲ್ಲಿ ಹತ್ತು ಉನ್ನತ ಶಿಕ್ಷಣ ಸಂಸ್ಥೆಗಳು ಕೇಂದ್ರ ಸರಕಾರದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಅಖಿಲ ಭಾರತ ಮಟ್ಟದಲ್ಲಿ ವಿದ್ಯಾರ್ಥಿಗಳ ಆಯ್ಕೆ ನಡೆಯುತ್ತದೆ. ಇದರಿಂದ ಕನ್ನಡದ ಮಕ್ಕಳಿಗೆ ಹೆಚ್ಚು ಅನುಕೂಲ ಆಗುವುದಿಲ್ಲ. ಇಲ್ಲಿ ಮೊದಲು ಅತ್ಯುನ್ನತ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿತ್ತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಸಂಸ್ಥೆಗಳಲ್ಲಿ ಕೇಸರೀಕರಣದ ಬಲ ಹೆಚ್ಚುತ್ತಿದೆ.
ಹಳ್ಳಿಗಾಡಿನ ಬಡ ಮಕ್ಕಳಿಗೆ ಉನ್ನತ ಶಿಕ್ಷಣ ದಕ್ಕಿಸಿಕೊಳ್ಳಲು ಸರಕಾರಿ ವಿಶ್ವವಿದ್ಯಾನಿಲಯಗಳು ಮಾತ್ರ ಗತಿಯಾಗಿವೆ. ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಬಲಪಡಿಸುವ ಹೊಣೆಯನ್ನು ರಾಜ್ಯ ಸರಕಾರ ಹೊರಬೇಕು. ಈಗಾಗಲೇ ಸರಕಾರಿ ಶಾಲೆಗಳನ್ನು ಏನೇನೋ ಕಾರಣ ನೀಡಿ ಮುಚ್ಚಿ ಖಾಸಗಿ ಶಾಲೆಗಳ ಪ್ರಭಾವಳಿ ಹೆಚ್ಚಿಸಲಾಗಿದೆ.
ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ದ್ದಾಗಲೂ ಕೇಂದ್ರ ಸರಕಾರದ ನೀತಿಯಂತೆ ಹೊಸ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಲಾಗಿತ್ತು. ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ ಎನಿಸಿದ ಬೆಂಗಳೂರು ವಿಶ್ವವಿದ್ಯಾನಿಲಯವನ್ನು ವಿಭಜಿಸಿ ಮೂರು ವಿಶ್ವವಿದ್ಯಾನಿಲಯ ಗಳನ್ನಾಗಿ ಮಾಡಲಾಗಿತ್ತು. ನಂತರ ಬಂದ ಬಿಜೆಪಿ ಸರಕಾರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಯಲ್ಲಿ ನೆಲೆ ನಿಂತಿದ್ದ ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯಗಳನ್ನು ಮುಚ್ಚುವ ದುಸ್ಸಾಹಸ ಮಾಡಿರಲಿಲ್ಲ. ಹಾಗೆ ನೋಡಿದರೆ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯ, ನೃಪತುಂಗ ವಿಶ್ವವಿದ್ಯಾನಿಲಯ ಮತ್ತು ಮಂಡ್ಯ ಕ್ಲಸ್ಟರ್ ವಿಶ್ವವಿದ್ಯಾನಿಲಯಗಳು ರೂಸಾ ಯೋಜನೆಯಡಿ ಅಸ್ತಿತ್ವಕ್ಕೆ ಬಂದಂಥವು. ಸ್ಥಳೀಯರ ಒತ್ತಡಕ್ಕೆ ಮಣಿದು ಡಾ. ಸಿ.ಎನ್. ಅಶ್ವಥ್ ನಾರಾಯಣ್ ಅವರು ಮಂಡ್ಯ ಕ್ಲಸ್ಟರ್ ವಿಶ್ವವಿದ್ಯಾನಿಲಯವನ್ನು ಸಂಯೋಜಿತ ವಿಶ್ವವಿದ್ಯಾನಿಲಯವನ್ನಾಗಿಸಿದರು. ಮಂಡ್ಯ, ಹಾಸನ ಮತ್ತು ಚಾಮರಾಜನಗರ ವಿಶ್ವವಿದ್ಯಾನಿಲಯಗಳು ಅಸ್ತಿತ್ವಕ್ಕೆ ಬಂದಿದ್ದರಿಂದ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ ವ್ಯಾಪ್ತಿ ಚಿಕ್ಕದಾಯಿತು. ಅದರಿಂದಾಗಿ ಹೊಸದಾಗಿ ಹುಟ್ಟಿಕೊಂಡ ಆರು ವಿಶ್ವವಿದ್ಯಾನಿಲಯಗಳನ್ನು ಮುಚ್ಚಬೇಕು ಎಂಬ ಕೂಗಿಗೆ ಬಲ ಬಂದಿದೆ. ಹೆಚ್ಚು ವಿಶ್ವವಿದ್ಯಾನಿಲಯಗಳು ಬೇಡ ಎನ್ನುವುದಾದರೆ ಬೀದರ್ ವಿಶ್ವವಿದ್ಯಾನಿಲಯವಾದರೂ ಯಾಕೆ ಬೇಕು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಸವಕಲ್ಯಾಣದಲ್ಲಿ ವಚನ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದಾಗಿ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ವಿಶ್ವವಿದ್ಯಾನಿಲಯಗಳ ಸಂಖ್ಯೆ ಸೇರಿದಂತೆ ಒಟ್ಟಾರೆ ವಿಶ್ವವಿದ್ಯಾನಿಲಯಗಳ ಅಭಿವೃದ್ಧಿ ಬಗ್ಗೆ ದ್ವಂದ್ವ ನಿಲುವು ಹೊಂದಿದೆ. ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಉನ್ನತ ಶಿಕ್ಷಣ ಎಲ್ಲರಿಗೂ ತಲುಪಬೇಕು ಎಂಬ ನಿಲುವು ತಾಳಿದ್ದರೆ ಸಿದ್ದರಾಮಯ್ಯ ಸರಕಾರವು ಕಾರ್ಯ ನಿರ್ವಹಿಸುತ್ತಿರುವ ವಿಶ್ವವಿದ್ಯಾನಿಲಯಗಳನ್ನು ಮುಚ್ಚಬೇಕು ಎಂಬ ಶಿಫಾರಸು ಮಾಡುತ್ತಿದೆ.
ಕರ್ನಾಟದಲ್ಲಿ ಬಿಜೆಪಿ ಸರಕಾರ ಆಡಳಿತ ನಡೆಸಿದಾಗೆಲ್ಲ ಆ ಪಕ್ಷದ ನಿಲುವು ನಿಚ್ಚಳವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳ ಮೂಲಕ ತನ್ನ ಪಕ್ಷದ ಸಿದ್ಧಾಂತವನ್ನು ಪ್ರಚಾರ ಮಾಡುವುದು ಬಿಜೆಪಿಯವರ ಮೊದಲ ಆದ್ಯತೆ. ಹಾಗಾಗಿಯೇ ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಸಂಘ ಪರಿವಾರದ ವ್ಯಕ್ತಿಗಳಿಗೆ ಮಣೆ ಹಾಕುತ್ತಾ ಬರಲಾಗಿದೆ. ಉನ್ನತ ಶಿಕ್ಷಣ ಎಲ್ಲರೂ ಪಡೆಯುವಂತಾಗಬೇಕು, ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಬೇಕು ಎಂಬುದು ಬಿಜೆಪಿಗರ ಕಾಳಜಿಯಲ್ಲ. ಕರ್ನಾಟಕದಲ್ಲಿ ಬಿಜೆಪಿ 2008ರಿಂದ 2013ರವರೆಗೆ ಮತ್ತು 2019ರಿಂದ 2023ರವರೆಗೆ ಅಧಿಕಾರದಲ್ಲಿ ಇತ್ತು. ಆ ಅವಧಿಯಲ್ಲಿ ವಿಶ್ವವಿದ್ಯಾನಿಲಯಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗ್ಗೆ ಕಿಂಚಿತ್ ಚಿಂತಿಸಲಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ಸರಕಾರಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇಮಕಾತಿಯೇ ನಡೆದಿಲ್ಲ. ಬಿಜೆಪಿ ಸರಕಾರದ ಅವಧಿಯಲ್ಲಿ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾನಿಲಯ ಮತ್ತು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯಗಳನ್ನು ವಿಶೇಷ ವಿಶ್ವವಿದ್ಯಾನಿಲಯಗಳೆಂದು ಆರಂಭಿಸಿದರು. ವಿಶ್ವವಿದ್ಯಾನಿಲಯಗಳನ್ನು ಆರಂಭಿಸಿದರೇ ಹೊರತು ಅವುಗಳನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಲಿಲ್ಲ. ಈ ಹೊತ್ತಿಗೂ ಸಂಗೀತ ಮತ್ತು ಜಾನಪದ ವಿಶ್ವವಿದ್ಯಾನಿಲಯಗಳು ಅನುದಾನ, ಸಿಬ್ಬಂದಿ ಕೊರತೆಯಿಂದ ತೆವಳುತ್ತಾ ಸಾಗಿವೆ. ಅದೇ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾನಿಲಯಕ್ಕೆ ಹೆಚ್ಚಿನ ಅನುದಾನ ನೀಡಿ, ಪ್ರಾಧ್ಯಾಪಕರ ನೇಮಕಾತಿಗೂ ಅವಕಾಶ ಕಲ್ಪಿಸಲಾಗಿದೆ. ದುರಂತವೆಂದರೆ ಅಲ್ಲಿ ಕಲಿಯುವ ಮತ್ತು ಸಂಶೋಧನೆ ಮಾಡುವವರ ಕೊರತೆ ಎದ್ದು ಕಾಣುತ್ತಿದೆ.
ಬಿಜೆಪಿಯವರು ಉನ್ನತ ಶಿಕ್ಷಣದ ಬಗ್ಗೆ ಹೊಂದಿರುವ ನಿಲುವು ಸ್ಪಷ್ಟವಿದೆ. ಅವರಿಂದ ಹೆಚ್ಚಿನದು ನಿರೀಕ್ಷಿಸಲಾಗದು. ಆದರೆ ಕಾಂಗ್ರೆಸ್ ಪಕ್ಷ ಶಿಕ್ಷಣದಲ್ಲಿನ ಕೇಸರೀಕರಣವನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಅಷ್ಟು ಮಾತ್ರವಲ್ಲ ಅವಕಾಶ ಸಿಕ್ಕಾಗಲೆಲ್ಲ ಅತ್ಯುತ್ತಮ ಗುಣಮಟ್ಟದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಲು ಶ್ರಮಿಸಿದೆ. ಡಾ.ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗಲೇ ರಾಜ್ಯದಲ್ಲಿ ಕೇಂದ್ರೀಯ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಿದ್ದು. ಆಗ ಅರ್ಜುನ್ ಸಿಂಗ್ ಅವರು ಕೇಂದ್ರ ಸರಕಾರದಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು. ಮೊದಲ ಬಾರಿಗೆ ಆದಿವಾಸಿ ವಿಶ್ವವಿದ್ಯಾನಿಲಯ ಸೇರಿದಂತೆ ಹಲವು ಕೇಂದ್ರೀಯ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದ್ದರು. ಅದಕ್ಕೂ ಮೊದಲು ರಾಜೀವ್ ಗಾಂಧಿ ಪ್ರಧಾನ ಮಂತ್ರಿಯಾಗಿದ್ದಾಗ ಹೊಸ ಶಿಕ್ಷಣ ನೀತಿ ರೂಪಿಸಿ ಅತ್ಯುತ್ತಮ ಗುಣಮಟ್ಟದ ನವೋದಯ ಶಾಲೆಗಳನ್ನು ದೇಶದ ತುಂಬಾ ಆರಂಭಿಸಿದ್ದರು. ಈಗಲೂ ನವೋದಯ ಶಾಲೆಗಳು ಗುಣಮಟ್ಟಕ್ಕೆ ಹೆಸರಾಗಿವೆ.
ಆದರೆ ಕರ್ನಾಟಕದಲ್ಲಿ 2013ರಿಂದ 2018ರವರೆಗೆ ಕಾಂಗ್ರೆಸ್ ಸರಕಾರ ಆಡಳಿತದಲ್ಲಿ ಇತ್ತು. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದರು. ಅವರು ಮನಸ್ಸು ಮಾಡಿದ್ದರೆ ಕರ್ನಾಟಕದ ಸರಕಾರಿ ವಿಶ್ವವಿದ್ಯಾನಿಲಯಗಳನ್ನು ಕೇಂದ್ರೀಯ ವಿಶ್ವವಿದ್ಯಾನಿಲಯಗಳ ಮಾದರಿಯಲ್ಲಿ ರೂಪಿಸಬಹುದಿತ್ತು. ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕೊರತೆ ಆಗಿನಿಂದಲೇ ಕಾಡುತ್ತಿತ್ತು. ಆಗ ಉನ್ನತ ಶಿಕ್ಷಣ ಸಚಿವರಾಗಿದ್ದ ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ ಮತ್ತು ಬಸವರಾಜ ರಾಯರೆಡ್ಡಿ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಪ್ರಯತ್ನಿಸದೆ ಅಲ್ಲಿ ಅರಾಜಕತೆ ಸೃಷ್ಟಿಸಿದರು. ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುವಂತೆ ಮಾಡಿದರು. ವಿಶ್ವವಿದ್ಯಾನಿಲಯಗಳ ಸ್ಥಿತಿ ಶೋಚನೀಯವಾಗಲು ಆಗಿನ ರಾಜ್ಯಪಾಲರಾಗಿದ್ದ ಹಂಸರಾಜ್ ಭಾರದ್ವಾಜ್ ಅವರ ಕೊಡುಗೆ ಅಪಾರವಾಗಿದೆ. ಕುಲಪತಿ, ಕುಲಸಚಿವರ ನೇಮಕದಲ್ಲಿ ಭ್ರಷ್ಟಾಚಾರ ಮಿತಿಮೀರಿದಂತೆ ಶೈಕ್ಷಣಿಕ ಗುಣಮಟ್ಟ ಕುಸಿಯತೊಡಗಿತು. ವಿಶ್ವವಿದ್ಯಾನಿಲಯದ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಕುಣಿಯತೊಡಗಿತು. ಪಿ.ಎಚ್‌ಡಿ. ಸೀಟು ಪಡೆದುಕೊಳ್ಳಲು ಹಣ ನೀಡುವ ಪರಿಸ್ಥಿತಿ ಎದುರಾಯಿತು. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುವ ಮುಂಚೆ ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರ ನೇಮಕಾತಿಗೆ ಲಂಚ ಪಡೆಯುತ್ತಿರಲಿಲ್ಲ. ಬಿಜೆಪಿ ಸರಕಾರ ಆಡಳಿತಕ್ಕೆ ಬಂದು ಅರವಿಂದ ಲಿಂಬಾವಳಿ ಉನ್ನತ ಶಿಕ್ಷಣ ಮಂತ್ರಿಯಾಗುತ್ತಲೇ ಲಂಚಾವತಾರ ತಲೆ ಎತ್ತಿತು. ಸಂಘ ಪರಿವಾರದ ಒಂದಷ್ಟು ಕೋಟಾ ಹೊರತು ಪಡಿಸಿದರೆ, ಉಳಿದೆಲ್ಲ ಹುದ್ದೆಗಳು ಹರಾಜಿಗಿಟ್ಟರು. ಕುಲಪತಿ, ಕುಲಸಚಿವರು ಮತ್ತು ಸಿಂಡಿಕೇಟ್ ಸದಸ್ಯರು ಹಣ ಕೊಟ್ಟು ನೇಮಕವಾಗುವ ಪದ್ಧತಿಯಿಂದಾಗಿ ಪ್ರಾಧ್ಯಾಪಕರ ನೇಮಕಾತಿಗೂ ಲಂಚ ಅನಿವಾರ್ಯವಾಯಿತು. ತುಮಕೂರು ವಿಶ್ವವಿದ್ಯಾನಿಲಯ, ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯಗಳ ನೇಮಕಾತಿಯಲ್ಲಿ ಹಣ ಮತ್ತು ಸಂಘದ ನಂಟು ಎರಡೇ ಮಾನದಂಡಗಳು ನಿರ್ಣಾಯಕ ಪಾತ್ರ ವಹಿಸಿದವು. ಹಣ ಕೊಟ್ಟು ಹುದ್ದೆ ಪಡೆದವರು ಹಣ ಮಾಡಲು ನಿಂತರು. ಈಗ ಕರ್ನಾಟಕದ ಬಹುಪಾಲು ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿಶತ ಅರುವತ್ತರಷ್ಟು ಬೋಧಕ ಮತ್ತು ಬೋಧಕೇತರ ಹುದ್ದೆಗಳು ಖಾಲಿ ಇವೆ. ಹುದ್ದೆಗಳನ್ನು ತುಂಬುವ ಅವಕಾಶ ದೊರೆಯಬಹುದೆಂದೇ ಕುಲಪತಿ ಹುದ್ದೆಯ ಆಕಾಂಕ್ಷಿಗಳು ಹೆಚ್ಚು ಹಣ ನೀಡಿ ಸ್ಥಾನ ಪಡೆಯುತ್ತಾರೆ. ಸರಕಾರ ಹುದ್ದೆ ತುಂಬಲು ಅವಕಾಶ ನೀಡದಿದ್ದಾಗ ಗೋಳೋ ಎಂದು ಅಳುತ್ತಾ ನಿವೃತ್ತಿ ಹೊಂದುತ್ತಾರೆ.
ಉನ್ನತ ಶಿಕ್ಷಣ ಇಲಾಖೆಯ ಅವಾಂತರಗಳು ಇಲಾಖೆಯ ಮಂತ್ರಿ ಸೇರಿ ಎಲ್ಲರಿಗೂ ತಿಳಿದಿದೆ. ಆದರೆ ಯಾರೊಬ್ಬರೂ ವಿಶ್ವವಿದ್ಯಾನಿಲಯಗಳ ಕಾಯಕಲ್ಪಕ್ಕೆ ಮನಸ್ಸು ಮಾಡುತ್ತಿಲ್ಲ. ಪೂರ್ಣ ಪ್ರಮಾಣದ ಬೋಧಕ ಸಿಬ್ಬಂದಿ ಕೊರತೆ ಇರುವುದರಿಂದ ಸಂಶೋಧನಾ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಒಮ್ಮೆ ಸರಕಾರಿ ವಿಶ್ವವಿದ್ಯಾನಿಲಯಗಳು ಗುಣಮಟ್ಟ ಕಳೆದುಕೊಂಡು ವಿಶ್ವಾಸಾರ್ಹ ಅಲ್ಲ ಎಂಬುದು ಸಾಬೀತಾದರೆ ಖಾಸಗಿ ವಿಶ್ವವಿದ್ಯಾನಿಲಯಗಳು ಆಕ್ರಮಿಸಿಕೊಳ್ಳುತ್ತವೆ. ಸದ್ಯ ಖಾಸಗಿ ವಿಶ್ವವಿದ್ಯಾನಿಲಯ ಮತ್ತು ಡೀಮ್ಡ್ ವಿಶ್ವವಿದ್ಯಾನಿಲಯಗಳು ಹೊರ ರಾಜ್ಯದ, ಸ್ಥಳೀಯ ಶ್ರೀಮಂತ ಮಕ್ಕಳಿಗೆ ಮೀಸಲಾಗಿವೆ. ಸರಕಾರಿ ವಿಶ್ವವಿದ್ಯಾನಿಲಯಗಳು ಮುಚ್ಚುತ್ತಾ ಹೋದರೆ ಖಾಸಗಿ ವಿಶ್ವವಿದ್ಯಾನಿಲಯಗಳ ಕಬಂಧ ಬಾಹು ಎಲ್ಲೆಡೆ ಚಾಚುತ್ತದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉನ್ನತ ಶಿಕ್ಷಣ ಇಲಾಖೆಯನ್ನು ವಿಶೇಷ ಅಂತ ಪರಿಗಣಿಸಿ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕವಾಗಿ ಬಲಗೊಳ್ಳುವಂತೆ ಮಾಡಬೇಕು. ಆಗ ಮಾತ್ರ ಬಡವರು ಮಕ್ಕಳು ಉನ್ನತ ಶಿಕ್ಷಣ ಪಡೆದುಕೊಳ್ಳುವಂತಾಗುತ್ತದೆ. ಉನ್ನತ ಶಿಕ್ಷಣದಲ್ಲಿ ವಿದೇಶಿ ವಿಶ್ವವಿದ್ಯಾನಿಲಯಗಳು ಬಂದರೆ ಬಡವರಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತದೆ. ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿನ ಎಲ್ಲ ವಿಶ್ವವಿದ್ಯಾನಿಲಯಗಳನ್ನು ಮೊದಲ ಆದ್ಯತೆಯ ಮೇಲೆ ಅಭಿವೃದ್ಧಿ ಪಡಿಸಲು ಮುಂದಾಗಬೇಕು. ಉನ್ನತ ಶಿಕ್ಷಣ ಸಿದ್ದರಾಮಯ್ಯ ಅವರಿಗೆ ದೊರಕಿದ್ದರಿಂದಲೇ ಅವರು ಜನತಂತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುವಂತಾಯಿತು. ಬಡವರ ಮಕ್ಕಳು ಇನ್ನು ಮುಂದೆ ಉನ್ನತ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆ ಹೆಚ್ಚಿದೆ. ಸರಕಾರಿ ವಿಶ್ವವಿದ್ಯಾನಿಲಯಗಳು ಅಗತ್ಯವಾಗಿ ಉಳಿಯಬೇಕಾಗಿದೆ. ಉನ್ನತ ಶಿಕ್ಷಣವನ್ನು ಬೇಕಾದರೆ ಏಳನೇ ಗ್ಯಾರಂಟಿಯಾಗಿ ಸ್ವೀಕರಿಸಲಿ.