ಕನಸುಗಳಿಲ್ಲದ ಸಚಿವರ ದರ್ಬಾರು!
‘‘ಬೆಳಕಿಲ್ಲದ ಹಾದಿಯಲ್ಲಿ ನಡೆಯಬಹುದು
ಆದರೆ ಕನಸುಗಳಿಲ್ಲದ ಹಾದಿಯಲ್ಲಿ ನಡೆಯಲಿ ಹೇಗೆ’’
- ಗಿರೀಶ್ ಕಾರ್ನಾಡ್, ಖ್ಯಾತ ನಾಟಕಕಾರರು
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೂರು ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಚುನಾವಣಾ ಪೂರ್ವದಲ್ಲಿ ಘೋಷಿಸಿದ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತಿದೆ. ಅಗತ್ಯದ ಆರ್ಥಿಕ ಸಂಪನ್ಮೂಲಗಳನ್ನು ಕಂಡುಕೊಂಡಿದೆ. ಐದು ಗ್ಯಾರಂಟಿಗಳನ್ನು ಸರಕಾರದ ಮೊದಲ ಆದ್ಯತೆಯನ್ನಾಗಿ ಪರಿಭಾವಿಸಿದ್ದರಿಂದ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಮುತುವರ್ಜಿ ವಹಿಸಿ ಅನುಷ್ಠಾನಗೊಳಿಸುತ್ತಿದ್ದಾರೆ. ಸುದೀರ್ಘ ಕಾಲ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವ ಬಳಸಿಕೊಂಡು ‘ಗ್ಯಾರಂಟಿಗಳ’ ಕುರಿತು ಪ್ರತಿಪಕ್ಷದವರ ಟೀಕೆ ಟಿಪ್ಪಣಿಗಳಿಗೆ ಸಿದ್ದರಾಮಯ್ಯನವರು ಸಮರ್ಥ ಉತ್ತರ ನೀಡಿದ್ದಾರೆ. ಹಾಗೆ ನೋಡಿದರೆ; ಈ ಸರಕಾರದಲ್ಲಿ ಹೆಚ್ಚು ಕ್ರಿಯಾಶೀಲರಾಗಿ, ಬದ್ಧತೆಯೊಂದಿಗೆ ಕಾರ್ಯನಿರ್ವಹಿಸುವವರಲ್ಲಿ ಸಿದ್ದರಾಮಯ್ಯನವರು ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ. 2013ರ ಅವಧಿಗಿಂತ ಭಿನ್ನರಾಗಿ, ತಾಳ್ಮೆ ಮತ್ತು ಪ್ರಬುದ್ಧತೆಯಿಂದ ಆಡಳಿತ ನಡೆಸುತ್ತಿದ್ದಾರೆ. ಪ್ರತಿಪಕ್ಷಗಳು ಟೀಕೆಗಾಗಿ ಟೀಕೆ ಮಾಡುತ್ತಿವೆಯೇ ಹೊರತು ರಚನಾತ್ಮಕವಾಗಿ ಪ್ರತಿಕ್ರಿಯಿಸುತ್ತಿಲ್ಲ. ಅಷ್ಟಕ್ಕೂ ಕೇವಲ ನೂರು ದಿನ ಪೂರೈಸಿರುವ ಸರಕಾರವೊಂದರ ಸರಿ ತಪ್ಪುಗಳ ಕಟು ವಿಮರ್ಶೆ ಮಾಡಲು ಇದು ಸಕಾಲವಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಮೃದ್ಧ ಮತ್ತು ಸಮ ಸಮಾಜ ಕರ್ನಾಟಕದ ಕನಸುಗಳಿವೆ. ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯ ಮೇಳೈಸಿರುವ ಮಾದರಿ ಕರ್ನಾಟಕ ನಿರ್ಮಾಣದ ಗುರಿಯೊಂದಿಗೆ ಸದೃಢ ಹೆಜ್ಜೆ ಹಾಕುತ್ತಿದ್ದಾರೆ.
ಆದರೆ ಮೇಲಿನ ಮಾತುಗಳನ್ನು ಸಿದ್ದರಾಮಯ್ಯ ಸರಕಾರದಲ್ಲಿನ ಎಲ್ಲಾ ಮಂತ್ರಿಗಳಿಗೆ ಅನ್ವಯಿಸಿ ಹೇಳಲಾಗದು. ‘ನೂರು ದಿನಗಳಲ್ಲಿ ಎಲ್ಲಾ ಮಂತ್ರಿಗಳು ಸೇರಿ ಕರ್ನಾಟಕವನ್ನು ಸ್ವರ್ಗ ಮಾಡಿ ಬಿಡಬೇಕಿತ್ತು’ ಎಂದು ನಾಡಿನ ಪ್ರಜ್ಞಾವಂತರು ಅಪೇಕ್ಷಿಸುತ್ತಿಲ್ಲ. ಆದರೆ ಬಹುಪಾಲು ಮಂತ್ರಿಗಳು ಕನಸುಗಳಿಲ್ಲದ ಹಾದಿಯಲ್ಲಿ ನಡೆಯುತ್ತಿರುವುದು ನೋಡಿ ಕಳವಳವಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿನದ 24ತಾಸು ದುಡಿದರೂ; ಸಚಿವ ಸಂಪುಟದ ಇತರರು ಕನಸುಗಳಿಲ್ಲದ ದಾರಿಯಲ್ಲಿ ನಡೆದರೆ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಪಡೆಯಲಾಗದು. ಮಂತ್ರಿಗಳಿಗೆ ತಿಳುವಳಿಕೆಯ ಕೊರತೆ ಇದೆಯೆಂದರೆ ಹೇಗೋ ಭರಿಸಬಹುದು. ಇಲಾಖೆಯನ್ನು ನಾಡಿನ ಒಟ್ಟು ಅಬಿವೃದ್ಧಿಗೆ ಪೂರಕವಾಗಿ ಮುನ್ನಡೆಸುವ ಕನಸುಗಳೇ ಇಲ್ಲದಿದ್ದರೆ ನಾಯಕನಾದವ ಏನು ಮಾಡಲಿಕ್ಕಾಗುತ್ತದೆ? ತಲೆತುಂಬಾ ಕನಸುಗಳನ್ನು ತುಂಬಿಕೊಂಡು ಸಿದ್ದರಾಮಯ್ಯನವರ ವೇಗದೊಂದಿಗೆ ಹೆಜ್ಜೆ ಹಾಕುತ್ತಿರುವ ಬೆರಳೆಣಿಕೆಯ ಮಂತ್ರಿಗಳನ್ನು ಮಾತ್ರ ಕಾಣಬಹುದಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ, ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿ, ಗೃಹಮಂತ್ರಿ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಮಂತ್ರಿ ಡಾ.ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ, ಕಾನೂನು ಮಂತ್ರಿ ಎಚ್.ಕೆ.ಪಾಟೀಲ್ ಮುಂತಾದ ಬೆರಳೆಣಿಕೆಯ ಸಚಿವರು ತಮಗೆ ನೀಡಿದ ಖಾತೆಯಲ್ಲಿ ವಿಶಿಷ್ಟಬಗೆಯ ಕನಸುಗಳೊಂದಿಗೆ ಕ್ರಿಯಾಶೀಲರಾಗಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ಹೆಜ್ಜೆ ಗುರುತನ್ನು ಬಿಟ್ಟು ಹೋಗುವ ಪ್ರಬಲ ಇಚ್ಛಾಶಕ್ತಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾರೀ, ಮಧ್ಯಮ ನೀರಾವರಿ ಖಾತೆಯೊಂದಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಕನಸುಗಳನ್ನು ಸಾಕಾರ ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ರಾಜ್ಯದ ಸಮಸ್ತ ನೀರಾವರಿ ಯೋಜನೆಗಳ ಕುರಿತು ಅರಿವಿರುವ ಡಿ.ಕೆ. ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಬಗ್ಗೆ ಈಗಾಗಲೇ ಸರಣಿ ಸಭೆ ನಡೆಸಿ ದೀರ್ಘಕಾಲದಿಂದ ನನೆಗುದಿಗೆ ಬಿದ್ದಿರುವ ಪೆರಿಫೆರಲ್ ರಿಂಗ್ ರೋಡ್ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳುವುದರ ಮುನ್ಸೂಚನೆ ನೀಡಿದ್ದಾರೆ. ಕನಸು ಹೊತ್ತವರು ಮತ್ತು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾದವರು ತಮ್ಮ ಇಲಾಖೆಗೆ ಕಾಯಕಲ್ಪ ನೀಡುತ್ತಾರೆ. ಅನುಭವ ಮತ್ತು ತಿಳುವಳಿಕೆಯ ಕಾರಣಕ್ಕೇ ಜಿಎಸ್‌ಟಿ ಮಂಡಳಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಕಂದಾಯ ಮಂತ್ರಿ ಕೃಷ್ಣಭೈರೇಗೌಡರು ತಮಗೆ ನೀಡಿದ ಇಲಾಖೆಯಲ್ಲಿ ಪಾರದರ್ಶಕತೆ ತರುವ ಕನಸು ಕಾಣುತ್ತಿದ್ದಾರೆ. ಒಂದು ನಿವೇಶನ ಒಬ್ಬರಿಗಿಂತ ಹೆಚ್ಚು ಜನರ ಹೆಸರಿಗೆ ನೋಂದಣಿಯಾದ ಅಸಂಖ್ಯಾತ ಪ್ರಕರಣಗಳು ನ್ಯಾಯಾಲಯದಲ್ಲಿ ಗಿರಕಿ ಹೊಡೆಯುತ್ತಿವೆ. ಅಮಾಯಕರು ಹಣ ಕಳೆದುಕೊಂಡು ನಿತ್ಯ ಪರದಾಡುತ್ತಿದ್ದಾರೆ. ಕಂದಾಯ ಇಲಾಖೆಯಲ್ಲಿ ಸಂಪೂರ್ಣ ಪಾರದರ್ಶಕತೆ ತರುವುದೆಂದರೆ ಭೂ ಮಾಫಿಯಾವನ್ನು ಸದೆಬಡಿದಂತೆ. ಇಲಾಖೆಯ ಒಳಹೊರಗನ್ನು ಅರಿತುಕೊಂಡು ಚಿಕಿತ್ಸೆ ನೀಡಲು ಹೊರಟಿರುವುದು ಶ್ಲಾಘನೀಯ ಕಾರ್ಯ.
ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ತಮಗೆ ನೀಡಿದ ಖಾತೆಯಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಡದೆ ಹದಗೆಟ್ಟ ಆಡಳಿತ ವ್ಯವಸ್ಥೆಯನ್ನು ಸದ್ದಿಲ್ಲದೆ ಅತ್ಯಂತ ತಾಳ್ಮೆಯಿಂದ ಸ್ಟ್ರೀಮ್‌ಲೆನ್ ಮಾಡುತ್ತಿದ್ದಾರೆ. ಮತೀಯ ಶಕ್ತಿಗಳು ಶಾಂತಿ ಕದಡುವ ಸಾಧ್ಯತೆ ಇರುವುದರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಹೊಣೆಗಾರಿಕೆ ನೀಡಿ ಗೃಹ ಇಲಾಖೆಯನ್ನು ಸಮರ್ಥ ರೀತಿಯಲ್ಲಿ ಸಜ್ಜುಗೊಳಿಸುತ್ತಿದ್ದಾರೆ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಟೀಮ್ ವರ್ಕ್‌ಮಾಡಿಸುವುದು ಸವಾಲಿನ ಸಂಗತಿಯೇ ಸರಿ. ಹಾಗೆ ನೋಡಿದರೆ ಡಾ.ಜಿ.ಪರಮೇಶ್ವರ್ ಅವರು ತಮಗೆ ನೀಡಿದ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಸಿದ್ಧ ಹಸ್ತರು. ಎಸ್.ಎಂ.ಕೃಷ್ಣ ಅವರ ಸರಕಾರದಲ್ಲಿ ಉನ್ನತ ಶಿಕ್ಷಣ ಸಚಿವರಾಗಿ ಇಲಾಖೆಗೆ ಹೊಸ ಸ್ವರೂಪ ನೀಡಿದ್ದರು. ಕುಲಪತಿ ಅಧಿಕಾರಾವಧಿ ಹೆಚ್ಚಳ, ಸಿಂಡಿಕೇಟ್ ಸದಸ್ಯರ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ ದಕ್ಕುವಂತೆ ಮಾಡಿದ್ದು ಈಗಲೂ ಸ್ಮರಿಸಿಕೊಳ್ಳುತ್ತಾರೆ. ಸಾರಿಗೆ ಮಂತ್ರಿ ರಾಮಲಿಂಗಾರೆಡ್ಡಿಯವರು ಪಡೆದಿರುವ ಅಪಾರ ಅನುಭವವೇ ಅವರಿಂದ ಅತ್ಯುತ್ತಮ ಹಾಗೂ ಚರಿತ್ರಾರ್ಹ ಕೆಲಸ ಮಾಡಿಸುತ್ತದೆ. ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ಸದೃಢಗೊಳಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ಆರ್‌ಟಿಒ ಕಚೇರಿಯಲ್ಲಿನ ಭ್ರಷ್ಟಾಚಾರ ನಿರ್ಮೂಲನೆಗೆ ವಿಶೇಷ ಯೋಜನೆ ರೂಪಿಸಿದರೆ ಅವರ ಹೆಸರು ಖಾಯಂ ನಿಲ್ಲುತ್ತದೆ. ಖಾಸಗಿ ಬಸ್ ಹಾವಳಿ ತಡೆಯಲು ವಿಶೇಷ ಕಾನೂನು ರೂಪಿಸುವುದರ ಅಗತ್ಯವಿದೆ.
ಈ ಬಾರಿ ವಿಶೇಷವಾಗಿ ಸಮಾಜ ಕಲ್ಯಾಣ ಮಂತ್ರಿ ಡಾ. ಎಚ್.ಸಿ. ಮಹದೇವಪ್ಪ ಅವರು ಒಟ್ಟು ಇಲಾಖೆಗೆ ಕಾಯಕಲ್ಪ ನೀಡುವ ಕನಸು ಕಾಣುತ್ತಿರುವಂತಿದೆ. ಸಮಾಜ ಕಲ್ಯಾಣ ಇಲಾಖೆಯಡಿ ಬರುವ ಹಾಸ್ಟೆಲ್‌ಗಳ ಒಟ್ಟಾರೆ ಗುಣಮಟ್ಟ ಹೆಚ್ಚಿಸಿದರೆ ಗುಣಾತ್ಮಕ ಬದಲಾವಣೆ ತರಲು ಸಾಧ್ಯ. ಈ ಹಾಸ್ಟೆಲ್‌ಗಳನ್ನು ಖಾಸಗಿಯವರು ಬಂದು ನೋಡುವಂತಾಗಬೇಕು. ಸಮಾಜ ಕಲ್ಯಾಣ ಇಲಾಖೆಗೆ ಆಮೂಲಾಗ್ರ ಕಾಯಕಲ್ಪ ನೀಡುವುದೆಂದರೆ; ಒಟ್ಟಾರೆ ದಲಿತ ಸಮುದಾಯದ ಸಬಲೀಕರಣಕ್ಕೆ ಪೂರಕ ವ್ಯವಸ್ಥೆ ಕಲ್ಪಿಸಿದಂತೆ. ಅಪಾರ ಓದಿನ ತಿಳುವಳಿಕೆ, ಆಡಳಿತದ ಅನುಭವ, ಸಾಮಾಜಿಕ ಬದ್ಧತೆ ಹಾಗೂ ಕ್ರಿಯಾಶೀಲ ವ್ಯಕ್ತಿತ್ವದ ಡಾ.ಎಚ್.ಸಿ.ಮಹದೇವಪ್ಪ ಅವರು ಕನಸು ಸಾಕಾರ ಮಾಡಬಲ್ಲರೆಂದು ನಂಬಬಹುದಾಗಿದೆ. ಎಚ್.ಕೆ. ಪಾಟೀಲರು ಅತ್ಯಂತ ಪ್ರಮುಖ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿದ ಖ್ಯಾತಿ ಉಳ್ಳವರು. ಅತ್ಯುತ್ತಮ ಸಂಸದೀಯ ಪಟುವಾಗಿರುವ ಅವರು ಅನುಭವ ಮತ್ತು ಅಭ್ಯಾಸಬಲದಿಂದಲೇ ತಮಗೆ ದೊರೆತ ಖಾತೆಯ ಘನತೆ ಗೌರವವನ್ನು ಹೆಚ್ಚಿಸುತ್ತಾರೆ. ಬಹಳ ವಿಶೇಷವೆಂದರೆ; ಮೊದಲ ಬಾರಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಯವರು, ಇಲಾಖೆಯ ಕಾಯಕಲ್ಪಕ್ಕೆ ಮುಂದಾಗಿರುವುದು.ಸಾಮಾನ್ಯವಾಗಿ ವರ್ಗಾವಣೆ ದಂಧೆಯಲ್ಲೆ ಅತೀ ಭ್ರಷ್ಟಾಚಾರದ ವಹಿವಾಟು ನಡೆಯುವುದು ಲೋಕೋಪಯೋಗಿ ಇಲಾಖೆಯಲ್ಲಿ. ಸಚಿವ ಸತೀಶ್ ಜಾರಕಿಹೊಳಿಯವರು ಇಲಾಖೆಯಲ್ಲಿ ಭ್ರಷ್ಟಾಚಾರ ನಿಗ್ರಹಿಸಲು ದೃಢ ಸಂಕಲ್ಪ ಮಾಡಿದ್ದಾರೆ. ಹೊಸದಾಗಿ ನೇಮಕಗೊಂಡ ಇಂಜಿನಿಯರ್‌ಗಳಿಗೆ ಕೌನ್ಸಿಲಿಂಗ್ ಮೂಲಕ ಸ್ಥಳ ನಿಯೋಜನೆ ಮಾಡಿದ್ದಾರೆ. ವರ್ಗಾವಣೆ ದಂಧೆಯಲ್ಲಿನ ಭ್ರಷ್ಟಾಚಾರವನ್ನು ನಿಯಂತ್ರಿಸಿದರೆ; ಅಷ್ಟರ ಮಟ್ಟಿಗೆ ರಸ್ತೆ ಕಾಮಗಾರಿಗಳ ಗುಣಮಟ್ಟ ಹೆಚ್ಚುತ್ತದೆ. ಸತೀಶ್ ಜಾರಕಿಹೊಳಿಯವರು ಕಾಣುತ್ತಿರುವ ಕನಸು ನನಸಾಗಬೇಕಾದರೆ, ಅತ್ಯುತ್ತಮ ಗುಣಮಟ್ಟದ ಮಾದರಿ ರಸ್ತೆಗಳನ್ನು ಒಮ್ಮೆ ತಮಿಳುನಾಡು ಮತ್ತು ಕೇರಳ ರಾಜ್ಯಗಳಿಗೆ ಭೇಟಿ ನೀಡಿ ನೋಡಿ ಬರಬೇಕು. ಕರ್ನಾಟಕದಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಸಾಧ್ಯವೇ ಇಲ್ಲವೆಂದು ಗುತ್ತಿಗೆದಾರರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಬಲವಾಗಿ ನಂಬಿದಂತಿದೆ. ಸಚಿವ ಸತೀಶ್ ಜಾರಕಿಹೊಳಿಯವರು ಅತ್ಯುತ್ತಮ ರಸ್ತೆ ನಿರ್ಮಾಣ ಮಾದರಿ ರೂಪಿಸುವುದರ ಅಗತ್ಯವಿದೆ.
ಮಂತ್ರಿಗಳು ಕನಸುಗಾರರಾಗಿದ್ದರೆ ಇಲಾಖೆಯಲ್ಲಿ ಚರಿತ್ರಾರ್ಹ ಕೆಲಸಗಳಾಗುತ್ತವೆ. ಸರಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಮೈಲಿಗಲ್ಲುಗಳಾಗಿ ನಿಲ್ಲತ್ತಾರೆ. ರಾಮಕೃಷ್ಣ ಹೆಗಡೆಯವರ ಸರಕಾರದ ಸಾಧನೆ ಗುರುತಿಸುವಾಗ ತಪ್ಪದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವರಾಗಿದ್ದ ಅಬ್ದುಲ್ ನಝೀರ್ ಸಾಹೇಬರು ನೆನಪಾಗುತ್ತಾರೆ. ದೇವರಾಜ ಅರಸು ಸರಕಾರಕ್ಕೆ ಹೆಸರು ಬಂದಿದ್ದು ಅಂದಿನ ಕಂದಾಯ ಸಚಿವರಿಂದ. ಭೂ ಸುಧಾರಣೆ ಕಾಯ್ದೆ ಅರಸು ಅವರ ಕನಸಿನ ಕೂಸು. ಭೂ ಸುಧಾರಣೆ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿದ್ದು ಗುಂಡೂರಾವ್ ಅವರ ಸರಕಾರದಲ್ಲಿ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು. ಸಿದ್ದರಾಮಯ್ಯನವರ ಸರಕಾರದಲ್ಲಿ ಕರ್ತೃತ್ವ ಶಕ್ತಿ ಬೆಳಕಿಗೆ ಬಂದಿದ್ದೇ, 1994ರ ನಂತರ. ಎಚ್.ಡಿ. ದೇವೇಗೌಡರ ಸಂಪುಟದಲ್ಲಿ ಹಣಕಾಸು ಮಂತ್ರಿಯಾದಾಗ ಸಿದ್ದರಾಮಯ್ಯ ಅವರನ್ನು ‘ಲಂಕೇಶ್ ಪತ್ರಿಕೆ’ ಕಟುವಾಗಿ ಟೀಕಿಸಿತ್ತು. ಅದನ್ನೇ ಸವಾಲಾಗಿ ತೆಗೆದುಕೊಂಡು ಸಿದ್ದರಾಮಯ್ಯನವರು ಹಣಕಾಸು ಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ರಾಮಕೃಷ್ಣ ಹೆಗಡೆಯವರ ನಂತರ ಅತ್ಯುತ್ತಮ ಹಣಕಾಸು ಮಂತ್ರಿ ಎಂಬ ಹೆಗ್ಗಳಿಕೆ ದೊರೆತದ್ದು ಸಿದ್ದರಾಮಯ್ಯನವರಿಗೆ. ಎಚ್.ಎನ್.ನಂಜೇಗೌಡರನ್ನು ಅತ್ಯುತ್ತಮ ನೀರಾವರಿ ಸಚಿವರೆಂದು ಪಕ್ಷಭೇದ ಮರೆತು ಎಲ್ಲರೂ ಸ್ಮರಿಸುತ್ತಾರೆ. 2009ರಲ್ಲಿ ಮೊದಲ ಬಾರಿಗೆ ಲೋಕಸಭಾ ಸದಸ್ಯರಾದ ಮಲ್ಲಿಕಾರ್ಜುನ ಖರ್ಗೆಯವರಿಗೆ ಯುಪಿಎ ಸರಕಾರ ಕಾರ್ಮಿಕ ಸಚಿವ ಸ್ಥಾನ ನೀಡುತ್ತದೆ. ಸವಾಲಾಗಿ ಸ್ವೀಕರಿಸಿದ ಖರ್ಗೆಯವರು ಕಾರ್ಮಿಕ ಖಾತೆಗೆ ಕಾಯಕಲ್ಪ ನೀಡಿ ಎಲ್ಲರ ಗಮನ ಸೆಳೆಯುತ್ತಾರೆ. ಅವರ ಕಾರ್ಯ ವೈಖರಿ ಮೆಚ್ಚಿದ ಹೈಕಮಾಂಡ್ ರೈಲ್ವೆ ಮಂತ್ರಿ ಪದವಿ ನೀಡುತ್ತಾರೆ. ಕೇವಲ 9 ತಿಂಗಳಲ್ಲಿ ಖರ್ಗೆಯವರು ರೈಲ್ವೆ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿ ಛಾಪು ಮೂಡಿಸುತ್ತಾರೆ.
ಸಚಿವ ಖಾತೆ ದೊಡ್ಡದಿರಲಿ ಸಣ್ಣದಿರಲಿ ಮಂತ್ರಿಯಾದವರು ಕನಸುಗಾರರಾಗಿದ್ದರೆ; ಘನವಾದುದನ್ನು ಸಾಧಿಸಿ ಆ ಖಾತೆಯ ಮಹತ್ವ ಹೆಚ್ಚಿಸಬಹುದು. ರಾಮಕೃಷ್ಣ ಹೆಗಡೆಯವರ ಸಚಿವ ಸಂಪುಟದಲ್ಲಿ ಮೋತಿ ವೀರಣ್ಣನವರು ಸಣ್ಣ ಉಳಿತಾಯ ಸಚಿವರಿಗೆ ಮಹತ್ವ ಬರುವಂತೆ ಮಾಡಿದ್ದರು. ಜೆ.ಎಚ್. ಪಟೇಲರ ಸಚಿವ ಸಂಪುಟದಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಸಚಿವರಾಗಿದ್ದ ಎಚ್.ಜಿ.ಗೋವಿಂದೇಗೌಡರು ಪ್ರಾಮಾಣಿಕ ಹಾಗೂ ಪಾರದರ್ಶಕ ಆಡಳಿತದಿಂದ ಇಲಾಖೆಯ ಗೌರವ ಹೆಚ್ಚಿಸಿದ್ದರು. ಇಂತಹ ನೂರಾರು ನಿದರ್ಶನಗಳನ್ನು ನೀಡಬಹುದು. ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿರುವ ಹಲವು ಮಂತ್ರಿಗಳಿಗೆ ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೆ ಬಹುತೇಕರಲ್ಲಿ ಕನಸುಗಳೇ ಇಲ್ಲ. ಬರೀ ಮಂತ್ರಿಗಿರಿ ದೌಲತ್ತು ದರ್ಬಾರು ನಡೆಸುವಲ್ಲಿ ಖುಷಿ. ಅವರಿಗೆ ತೀವ್ರವಾದ ಮಹತ್ವಾಕಾಂಕ್ಷೆ ಇಲ್ಲ. ಇಂಧನದಂತಹ ಮಹತ್ವದ ಖಾತೆಯನ್ನು ಹೊಂದಿರುವ ಕೆೆ.ಜೆ.ಜಾರ್ಜ್ ಅವರಿಗೆ ತೀವ್ರವಾದ ಮಹತ್ವಾಕಾಂಕ್ಷೆ ಇದ್ದಂತಿಲ್ಲ. ‘ಶಕ್ತಿ’ಯ ಪರ್ಯಾಯಗಳನ್ನು ಬಳಸಲು ಕರ್ನಾಟಕ ಸಮೃದ್ಧ ನಾಡು. ಇಂಧನ ಇಲಾಖೆಯ ಅಶಿಸ್ತು ನಿವಾರಿಸಿ, ಸೋರಿಕೆ ತಡೆದರೆ ಕರ್ನಾಟಕ ದೇಶದಲ್ಲಿ ನಂಬರ್ ಒಂದರಲ್ಲಿ ನಿಲ್ಲುತ್ತದೆ. ಕೈಗಾರಿಕೆ ಮಂತ್ರಿಯಾಗಿರುವ ಎಂ.ಬಿ.ಪಾಟೀಲರು ಕನಸುಗಾರರಾದರೆ, ಉದ್ಯೋಗ ಸೃಷ್ಟಿಸುವಲ್ಲಿ ಕರ್ನಾಟಕ ಮೊದಲ ಸ್ಥಾನಕ್ಕೇರುತ್ತದೆ. ಕೈಗಾರಿಕಾ ಇಲಾಖೆಯಲ್ಲಿ ಇಂದಿನ ಯಾವ ಮಂತ್ರಿಯೂ ಉದ್ಯೋಗ ಸೃಷ್ಟಿಯತ್ತ ವಿಶೇಷ ಗಮನಹರಿಸಿಲ್ಲ. ಅದನ್ನೊಂದು ರಿಯಲ್ ಎಸ್ಟೇಟ್ ಅಡ್ಡೆಯನ್ನಾಗಿಸಿದ್ದಾರೆ. ತಿಳಿದವರಿಂದ ತಿಳಿದುಕೊಂಡು ಕೈಗಾರಿಕೆ ಇಲಾಖೆಗೆ ಹೊಸ ರೂಪ ಕೊಡಲು ಮುಂದಾದರೆ ದೊಡ್ಡ ಕೆಲಸವೇ ನಲ್ಲ. ಮುಖ್ಯವಾಗಿ ಎಂ.ಬಿ.ಪಾಟೀಲರಿಗೆ ಸಮೃದ್ಧ ಕರ್ನಾಟಕದ ಕನಸುಗಳೇ ಇದ್ದಂತಿಲ್ಲ. ಕೋಮುವಾದಿ ರಾಜಕೀಯ ಶಕ್ತಿಗಳಿಗೆ ಕೆಲಸ ಕಾರ್ಯದಿಂದ ಉತ್ತರ ಕೊಡಬೇಕೆಂಬ ಛಲ ಎಂ.ಬಿ. ಪಾಟೀಲರಲ್ಲಿ ಮೂಡಬೇಕು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಐಟಿಬಿಟಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು ಅತ್ಯಂತ ಕ್ರಿಯಾಶೀಲರು. ಕಲಬುರಗಿ ಉಸ್ತುವಾರಿ ಸಚಿವರಾಗಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಆದರೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ಹಾಗೂ ಐಟಿಬಿಟಿ ಸಚಿವರಾಗಿ ಮಹತ್ವ್ವಾಕಾಂಕ್ಷೆಯ ಯೋಜನೆಗಳ ಕನಸು ಹೊರಹಾಕಿಲ್ಲ. ಅಂದುಕೊಂಡಿದ್ದನ್ನು ಸಾಧಿಸುವ ಛಲ ಹೊಂದಿರುವ ಪ್ರಿಯಾಂಕ್ ಖರ್ಗೆಯವರು ಮನಸ್ಸು ಮಾಡಿದರೆ ಮಹಾತ್ಮಾ ಗಾಂಧೀಜಿಯವರ ಗ್ರಾಮ ಸ್ವರಾಜ್ ಕನಸನ್ನು ಸಾಕಾರಗೊಳಿಸಬಲ್ಲರು. ಕಾಡಿಲ್ಲದ ನಾಡಿನವರು ಅರಣ್ಯ ಮಂತ್ರಿಯಾಗಿದ್ದಾರೆ ಎಂಬ ಆರಗ ಜ್ಞಾನೇಂದ್ರ ಹೇಳಿಕೆ ಅಸಮರ್ಥನೀಯ. ಆದರೆ ಅರಣ್ಯಮಂತ್ರಿ ಈಶ್ವರ್ ಖಂಡ್ರೆಯವರು ಅದನ್ನೊಂದು ಸವಾಲಾಗಿ ಸ್ವೀಕರಿಸಿದರೆ ಇಡೀ ಬಯಲು ಸೀಮೆಯನ್ನು ಅರಣ್ಯವನ್ನಾಗಿಸಿ ಮಾರ್ಪಡಿಸಬಹುದು. ಖಂಡ್ರೆಯವರಿಗೆ ಕಾಡಿನ ಕನಸುಗಳು ಬೀಳುವಂತಾಗಬೇಕು. ಬಿ. ನಾಗೇಂದ್ರ, ಶಿವಾನಂದ ಪಾಟೀಲ್, ಸಂತೋಷ್ ಲಾಡ್, ಎಸ್. ಎಸ್. ಮಲ್ಲಿಕಾರ್ಜುನ, ಕೆ.ಎನ್. ರಾಜಣ್ಣ, ಲಕ್ಷ್ಮೀ ಹೆಬ್ಬಾಳ್ಕರ್ ಮುಂತಾದವರು ಕನಸುಗಾರರಾದರೆ ಅತ್ಯುತ್ತಮ ಮಂತ್ರಿಗಳಾಗಿ ಹೆಸರು ಮಾಡಬಹುದು. ಮಂಕಾಳ ವೈದ್ಯ, ಝಮೀರ್ ಅಹ್ಮದ್, ರಹೀಮ್ ಖಾನ್, ಶರಣಬಸಪ್ಪ ದರ್ಶನಾಪುರ, ಕೆ. ವೆಂಕಟೇಶ್ ಮುಂತಾದವರು ಉತ್ತಮ ಸಲಹೆಗಾರರನ್ನು ಇಟ್ಟುಕೊಂಡು ಕಾರ್ಯಪ್ರವೃತ್ತರಾದರೆ ತಾವು ಹೊಂದಿರುವ ಖಾತೆಗೆ ನ್ಯಾಯ ಕೊಡಬಹುದು.
ಹಿಂದುಳಿದ ವರ್ಗಗಳು ಮತ್ತು ಕನ್ನಡ ಸಂಸ್ಕೃತಿ ಖಾತೆ ಹೊಂದಿರುವ ಶಿವರಾಜ ತಂಗಡಿಯವರು ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಅವರಿಗೆ ಗಣಿ-ಭೂ ವಿಜ್ಞಾನ ಖಾತೆ ನೀಡಬೇಕಿತ್ತು. ದುರಂತವೆಂದರೆ, ಸಾಹಿತ್ಯ-ಸಂಸ್ಕೃತಿಯ ಗಂಧ ಗಾಳಿ ಇಲ್ಲದ ಇವರಿಗೆ ಕನ್ನಡ-ಸಂಸ್ಕೃತಿ ಖಾತೆಯೂ ನೀಡಲಾಗಿದೆ. ಸಾಹಿತಿ ಕಲಾವಿದರು ಇವರಿಂದ ಅವಮಾನ ಅನುಭವಿಸಬೇಕಷ್ಟೇ. ಸಿದ್ದರಾಮಯ್ಯ ಸಂಪುಟದ ಬಹುಪಾಲು ಮಂತ್ರಿಗಳು ಏನೇನೋ ಮಾತನಾಡುತ್ತಾರೆ. ಆದರೆ ಅವರ ಕೆಲಸಗಳು ಮಾತನಾಡುತ್ತಿಲ್ಲ. ಬಸವರಾಜ ಬೊಮ್ಮಾಯಿ ಸರಕಾರ ಮಣ್ಣು ಮುಕ್ಕಿದ್ದೇ ಕನಸುಗಳಿಲ್ಲದ ಸಚಿವರಿಂದ. ಸ್ವತಃ ಬಸವರಾಜ ಬೊಮ್ಮಾಯಿಗೆ ಕನಸುಗಳಿರಲಿಲ್ಲ.