ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ನಿಜ ಸಾಧಕರು
ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದು ಕೆಲವರು ಅಭಿಮಾನದಿಂದ ಹೇಳುತ್ತಿರುತ್ತಾರೆ. ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದ ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಶಯವೂ ಅದೇ ಆಗಿತ್ತು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿದೆಯೇ? ಎಂಬುದು ಚರ್ಚಾಸ್ಪದ ಸಂಗತಿ. ಅದು ‘ಪ್ರಾತಿನಿಧಿಕ’ ಸಂಸ್ಥೆಯಾಗಿ ರೂಪುಗೊಳ್ಳಬೇಕೆಂಬುದು ಕನ್ನಡಿಗರೆಲ್ಲರ ಸದಾಶಯ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತಿ-ಕಲಾವಿದರ ಬಗ್ಗೆ ಅಪಾರ ಪ್ರೀತಿ, ಗೌರವ ಇತ್ತು. ಸಾಮಾಜಿಕ ನ್ಯಾಯ ಪಾಲನೆಗೆ ಮೊದಲ ಆದ್ಯತೆ ನೀಡುತ್ತಿದ್ದರು. ಸಾಹಿತ್ಯ ಮತ್ತು ಕಲಾ ಪ್ರತಿಭೆ ಒಂದು ಜಾತಿ ಒಂದು ಧರ್ಮ ಹಾಗೂ ಪ್ರದೇಶಕ್ಕೆ ಸೀಮಿತವಾದುದಲ್ಲ ಎಂಬ ಸಾರ್ವಕಾಲಿಕ ಸತ್ಯದಲ್ಲಿ ಅವರಿಗೆ ಅಪಾರವಾದ ನಂಬಿಕೆ ಇತ್ತು. ಅವರ ನಂಬಿಕೆಯ ಸಂಸ್ಕೃತಿಕ ಲೋಕ ವಿಶಾಲವಾದುದಾಗಿತ್ತು. ಕರ್ನಾಟಕ ಸಂಗೀತ ಮಾತ್ರವಲ್ಲ ಉತ್ತರದ ಹಿಂದೂಸ್ತಾನಿ ಸಂಗೀತದ ಆರಾಧಕರು ಮತ್ತು ಪೋಷಕರಾಗಿದ್ದರು. ಸಾಹಿತ್ಯ ಮತ್ತು ಕಲಾ ಪ್ರೇಮಿಯಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1915ರಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಶ್ರೇಯೋಭಿವೃದ್ಧಿಗಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. 1915 ರಿಂದ 1940ರವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರನ್ನು ಸರ್ವಾನುಮತದಿಂದ ಆಯ್ಕೆ ಮಾಡುವ ಪರಿಪಾಠವಿತ್ತು. ನಂತರ ಚುನಾವಣಾ ಪದ್ಧತಿ ಜಾರಿಗೆ ಬಂದಿತು. ಆರಂಭದ ವರ್ಷಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೆಲವೇ ಜನರ ಹಿಡಿತದಲ್ಲಿತ್ತು ಹಾಗೂ ಕೆಲವು ಸಮುದಾಯಗಳಿಗೆ ಸೀಮಿತವಾಗಿತ್ತು. ನಾಲ್ವಡಿ ಅವರ ಆಶಯ ಎಷ್ಟೇ ದೊಡ್ಡದಾಗಿದ್ದರೂ ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪುಗೊಳ್ಳುವ ಅನಿವಾರ್ಯತೆ ಇದೆ.
ಈ ಹೊತ್ತಿಗೂ ಕನ್ನಡ ಸಾಹಿತ್ಯ ಪರಿಷತ್ತು ಸಂಪೂರ್ಣವಾಗಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿ ರೂಪಗೊಂಡಿಲ್ಲ; ಆ ಪ್ರಕ್ರಿಯೆ ಜಾರಿಯಲ್ಲಿದೆ. ಜಾತಿ, ಧರ್ಮ, ಪ್ರದೇಶ, ಲಿಂಗಭೇದದ ಎಲ್ಲೆಕಟ್ಟುಗಳನ್ನು ಮೀರಿ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರನ್ನು ಒಳಗೊಂಡಾಗಲೇ ಅದು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎನಿಸಿಕೊಳ್ಳುತ್ತದೆ. ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ 25 ಜನ ಅಧ್ಯಕ್ಷರು ಬಂದು ಹೋಗಿದ್ದಾರೆ. ಮಹೇಶ ಜೋಶಿ ಅವರು 26ನೇ ಅಧ್ಯಕ್ಷರು. ಆರಂಭದಲ್ಲಿ ಸಾವಿರ ಸಂಖ್ಯೆಯ ಸದಸ್ಯರನ್ನು ಹೊಂದಿದ್ದ ಕನ್ನಡ ಸಾಹಿತ್ಯ ಪರಿಷತ್ತು ಈಗ ನಾಲ್ಕು ಲಕ್ಷಕ್ಕೂ ಮೀರಿ ಸದಸ್ಯರ ಸಂಸ್ಥೆಯಾಗಿ ಬೆಳೆದಿದೆ. ಸದಸ್ಯರ ಸಂಖ್ಯೆ ಜಾಸ್ತಿಯಾದಂತೆ ಪ್ರಜಾಪ್ರಭುತ್ವದ ಆಶಯಕ್ಕೆ ಬಲ ಬರಬೇಕು. ಎಲ್ಲಾ ಸಮುದಾಯಕ್ಕೆ ಸೇರಿದ ಕನ್ನಡಿಗರ ಒಳಗೊಳ್ಳುವಿಕೆ ಹೆಚ್ಚಾಗಬೇಕು. ಆದರೆ ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿಯನ್ನು ಬ್ರಾಹ್ಮಣರು, ಲಿಂಗಾಯತರು ಮತ್ತು ಒಕ್ಕಲಿಗರು ಹಿಡಿಯುತ್ತಾ ಬಂದಿದ್ದಾರೆ. ಕ್ರಿಶ್ಚಿಯನ್ ಸಮುದಾಯದ ಉತ್ತಂಗಿ ಚೆನ್ನಪ್ಪ, ಜೈನ ಸಮುದಾಯದ ಡಾ. ಹಂಪ ನಾಗರಾಜಯ್ಯ, ಎಚ್.ಬಿ. ಜ್ವಾಲನಯ್ಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಅಪವಾದ ಎಂದೇ ಹೇಳಬೇಕು. ಕನ್ನಡ ಸಾಹಿತ್ಯ ಪರಿಷತ್ತಿಗೆ ಅಪ್ಪಟ ಸಾಹಿತಿಗಳಾದ ರೆವರೆಂಡ್ ಉತ್ತಂಗಿ ಚೆನ್ನಪ್ಪ, ತಿ.ತಾ. ಶರ್ಮ, ಎಂ.ಆರ್. ಶ್ರೀನಿವಾಸಮೂರ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಪ್ರೊ. ಎ.ಎನ್. ಮೂರ್ತಿರಾವ್, ಪ್ರೊ.ಜಿ ವೆಂಕಟಸುಬ್ಬಯ್ಯ, ಡಾ. ಹಂಪ ನಾಗರಾಜಯ್ಯ, ಪ್ರೊ. ಜಿ.ಎಸ್. ಸಿದ್ದಲಿಂಗಯ್ಯ, ಗೊ.ರು. ಚೆನ್ನಬಸಪ್ಪ, ಡಾ. ಸಾ.ಶಿ ಮರುಳಯ್ಯ, ಎನ್. ಬಸವಾರಾಧ್ಯ, ಪ್ರೊ. ಚಂದ್ರಶೇಖರ ಪಾಟೀಲರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಹಾಗೆಯೇ ಸ್ವತಃ ಸಾಹಿತಿಗಳಲ್ಲದ ಸಾಹಿತ್ಯ, ಸಂಸ್ಕೃತಿ ಬಗ್ಗೆ ಅಪಾರ ಗೌರವವುಳ್ಳ, ಆದರೆ ಅಪಾರ ಸಂಘಟನಾ ಸಾಮರ್ಥ್ಯವುಳ್ಳ ಬಿ. ಶಿವಮೂರ್ತಿ ಶಾಸ್ತ್ರಿ, ಜಿ. ನಾರಾಯಣ, ಎಚ್.ಬಿ. ಜ್ವಾಲನಯ್ಯ, ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೈಂಕರ್ಯ ಕೈಗೊಂಡಿದ್ದಾರೆ. ಸರಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಸಾಹಿತ್ಯ-ಸಂಸ್ಕೃತಿ ಬಗ್ಗೆ ಪ್ರೀತಿ ಇಟ್ಟುಕೊಂಡಿರುವ ಮನು ಬಳಿಗಾರ್ ಅವರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ದೂರದರ್ಶನದಲ್ಲಿ ಹಿರಿಯ ಅಧಿಕಾರಿಯಾಗಿ ನಿವೃತ್ತರಾದ ಡಾ. ಮಹೇಶ ಜೋಶಿಯವರು ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಜ್ಞಾನಪೀಠಕ್ಕೆ ಸಮಾನವಾದ ನೃಪತುಂಗ ಪ್ರಶಸ್ತಿ ಇದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಹಣಕಾಸಿನ ನೆರವಿನೊಂದಿಗೆ ಈ ಪ್ರಶಸ್ತಿಯನ್ನು ಕನ್ನಡದ ಹಿರಿಯ ಸಾಹಿತಿಗೆ ಕೊಡಲಾಗುತ್ತದೆ. ಸಾಹಿತಿಗಳಲ್ಲದವರನ್ನು ಯಾವ ಕಾರಣಕ್ಕೂ ಪರಿಗಣಿಸುವುದಿಲ್ಲ. ನೃಪತುಂಗ ಪ್ರಶಸ್ತಿಯ ಮೊತ್ತ ಜ್ಞಾನಪೀಠ ಪ್ರಶಸ್ತಿಯ ಮೊತ್ತಕ್ಕಿಂತಲೂ ಒಂದು ರೂಪಾಯಿ ಹೆಚ್ಚಿದೆ. ಜ್ಞಾನಪೀಠ ಪ್ರಶಸ್ತಿಯನ್ನು ಕನ್ನಡ ಸೇರಿದಂತೆ ಭಾರತೀಯ ಇತರ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ ಹಿರಿಯ ಸಾಧಕರಿಗೆ ನೀಡುತ್ತಾರೆ. ಪ್ರತಿವರ್ಷ ನೀಡುವ ಈ ಪ್ರಶಸ್ತಿಗೆ ಕನ್ನಡದ ಎಂಟು ಜನ ಸಾಹಿತಿಗಳು ಭಾಜನರಾಗಿದ್ದಾರೆ. ಹಾಗೆ ನೋಡಿದರೆ ಜ್ಞಾನಪೀಠ ಪ್ರಶಸ್ತಿಯನ್ನು ಖಾಸಗಿಯವರು ನೀಡುತ್ತಾರೆ. ಅದಕ್ಕೆ ಪರ್ಯಾಯವಾಗಿ ನೃಪತುಂಗ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ನಾಡು ನುಡಿಗಾಗಿ, ನೆಲ ಜಲ ಮತ್ತು ಒಟ್ಟಾರೆ ಬದುಕನ್ನು ಉತ್ತಮಗೊಳಿಸಲು ಧ್ವನಿಯಾಗಿ ಕಾರ್ಯನಿರ್ವಹಿಸುತ್ತಾ ಬಂದಿದೆ. ಕೆಲವೊಮ್ಮೆ ಸಿಂಹವಾಗಿ ಘರ್ಜಿಸಿದೆ. ಇನ್ನು ಕೆಲವೊಮ್ಮೆ ಸರಕಾರದ ಅಧೀನ ಸಂಸ್ಥೆಯಂತೆ ಕೆಲಸ ಮಾಡಿ ಸ್ವಾಯತ್ತತೆಗೆ ಸಂಚಕಾರ ತಂದುಕೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯವೈಖರಿಯ ಏಳುಬೀಳುಗಳು ಏನೇ ಇದ್ದರೂ ಅದು ಕನ್ನಡ ಸಾಹಿತ್ಯದ ಮೂಲಕ ಕನ್ನಡ ಪ್ರಜ್ಞೆಯನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕನ್ನಡ ಸಾಹಿತ್ಯ ಲೋಕದ ನಿಜಸಾಧಕರನ್ನು ಮುನ್ನೆಲೆೆಗೆ ತಂದು ನಿಲ್ಲಿಸಿದೆ. ಕನ್ನಡದ ಸಾಹಿತಿ, ಕನ್ನಡ ಪ್ರಜ್ಞೆಯ ವಕ್ತಾರನೂ ಹೌದು ಎನ್ನುವುದನ್ನು ರುಜುವಾತು ಪಡಿಸಿದೆ. ಕನ್ನಡ ಸಾಹಿತ್ಯದ ಬಗ್ಗೆ ಜನಸಾಮಾನ್ಯರಲ್ಲಿ ಪ್ರೀತಿ ಗೌರವ ಮೂಡಿಸುವಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಳೆದ 109 ವರ್ಷಗಳಿಂದ ಯತ್ನಿಸುತ್ತಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಮುಖ ಜನಾಕರ್ಷಣೆ ಎಂದರೆ; ಪ್ರತೀವರ್ಷ ಜರುಗುವ ಕನ್ನಡ ಸಾಹಿತ್ಯ ಸಮ್ಮೇಳನ. ರಾಜ್ಯ ಸರಕಾರದ ಹಣಕಾಸಿನ ನೆರವಿನೊಂದಿಗೆ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಪಾರ ಪ್ರಮಾಣದಲ್ಲಿ ಕನ್ನಡ ಪ್ರೇಮಿಗಳನ್ನು ಆಕರ್ಷಿಸುವ ಸಂದರ್ಭವಾಗಿ ಪರಿಣಮಿಸಿದೆ. ಕನ್ನಡದ ಹೆಸರಿನಲ್ಲಿ ಮೂರು ದಿನಗಳ ಕಾಲ ನಾಲ್ಕೈದು ಲಕ್ಷದಷ್ಟು ಜನರನ್ನು ಒಂದುಗೂಡಿಸುವ ಕನ್ನಡ ಸಾಹಿತ್ಯ ಸಮ್ಮೇಳನ ಅಪರೂಪದ ಘಟನೆಯೇ ಸರಿ. ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಸಾಧನೆಗೈದ ಹಿರಿಯ ಸಾಧಕರೊಬ್ಬರಿಗೆ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಅದೊಂದು ದೊಡ್ಡ ಗೌರವ. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕೇಂದ್ರ ಬಿಂದುವೇ ಸಮ್ಮೇಳನಾಧ್ಯಕ್ಷರು. ಮೂರು ದಿನಗಳ ಕಾಲ ಕನ್ನಡದೊಂದಿಗೆ ಅವರೇ ಪ್ರಮುಖ ಆಕರ್ಷಣೆಯಾಗಿರುತ್ತಾರೆ. ಸಮ್ಮೇಳನಾಧ್ಯಕ್ಷರ ಭಾಷಣವೆಂದರೆ ಸರಕಾರದ ಬಜೆಟ್ ಭಾಷಣದಷ್ಟೇ ಪ್ರಾಧಾನ್ಯತೆ ಪಡೆದು ಎಲ್ಲ ಪತ್ರಿಕೆ ಮತ್ತು ನ್ಯೂಸ್ ಚಾನೆಲ್‌ಗಳಲ್ಲಿ ಸುದ್ದಿಯಾಗುತ್ತದೆ. ಕನ್ನಡ ಸಾಹಿತಿಯೊಬ್ಬ ಸರಕಾರಕ್ಕೆ ಸಲಹೆ ಕೊಡುವ, ಮಾರ್ಗದರ್ಶನ ಮಾಡುವ, ಅಗತ್ಯ ಬಿದ್ದರೆ ಕಟುವಾಗಿ ಟೀಕಿಸುವುದು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಹಜವಾಗಿ ನಡೆಯುತ್ತದೆ.
ಇಲ್ಲಿಯವರೆಗೆ ವಿವಿಧ ಸ್ಥಳಗಳಲ್ಲಿ 86 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗಿವೆ. 86 ಜನ ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಧಕರು ಸಮ್ಮೇಳನಾಧ್ಯಕ್ಷ ಸ್ಥಾನದ ಗೌರವ ಪಡೆದುಕೊಂಡಿದ್ದಾರೆ. ಕನ್ನಡ ಭಾಷೆ, ಸಂಸ್ಕೃತಿ, ನೆಲ-ಜಲ ಸೇರಿದಂತೆ ಕನ್ನಡದ ಬದುಕು ಎದುರಿಸುತ್ತಿರುವ ಸಮಸ್ಯೆ ಸವಾಲುಗಳ ಬಗ್ಗೆ ನಿರ್ಭಿಡೆಯಿಂದ ಮಾತನಾಡಿದ್ದಾರೆ. ಕೆಲವರು ಸೌಮ್ಯವಾಗಿ, ಇನ್ನು ಹಲವರು ಕಠೋರವಾಗಿ ಹೇಳಿದ್ದರೂ ಕನ್ನಡ ಬದುಕಿನ ಕಾಳಜಿಯೇ ಪ್ರಮುಖವಾಗಿರುತ್ತದೆ. ಬೆರಳೆಣಿಕೆಯ ಕೆಲವರು ಸಾಹಿತ್ಯೇತರ ಕಾರಣಕ್ಕೆ ಸಮ್ಮೇಳನಾಧ್ಯಕ್ಷರಾಗಿರಬಹುದು. ಆದರೆ ಸಾಹಿತಿಗಳಲ್ಲದ ಒಬ್ಬರನ್ನೂ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಿದ ನಿದರ್ಶನ ದೊರೆಯುವುದಿಲ್ಲ. ಸಾಹಿತ್ಯ ಲೋಕದ ಅಪ್ಪಟ ಸಾಧಕರನ್ನೇ ಸಮ್ಮೇಳನಾಧ್ಯಕ್ಷರನ್ನಾಗಿಸಲಾಗಿದೆ.
ಸಾಹಿತ್ಯ ಪರಿಷತ್ತಿನಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಯಾರೇ ಇದ್ದರೂ ಕನ್ನಡ ಸಾಹಿತ್ಯ ಲೋಕದ ಹಿರಿಯ ಸಾಧಕರನ್ನು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುತ್ತ ಬರಲಾಗಿದೆ. ಹಾಗೆ ನೋಡಿದರೆ; ಬಿ. ಶಿವಮೂರ್ತಿ ಶಾಸ್ತ್ರಿ, ಜಿ. ನಾರಾಯಣ, ಹರಿಕೃಷ್ಣ ಪುನರೂರು, ಪುಂಡಲೀಕ ಹಾಲಂಬಿ ಸಾಹಿತಿಗಳಾಗಿರಲಿಲ್ಲ. ಸಾಹಿತ್ಯದ ಅಭಿಮಾನಿಗಳಾಗಿದ್ದರು. ಕನ್ನಡ ಸಂಸ್ಕೃತಿ ಬಗ್ಗೆ ಪ್ರೀತಿ ಇಟ್ಟುಕೊಂಡ ಸಂಘಟಕರು. ಅವರ ಕಾಲಾವಧಿಯಲ್ಲೂ ಸಾಹಿತ್ಯ ಲೋಕದ ನಿಜ ಸಾಧಕರನ್ನೇ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಇಲ್ಲಿಯವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದವರ ಹೆಸರುಗಳ ಮೇಲೆ ಕಣ್ಣಾಡಿಸಿದರೆ ‘ಸಾಹಿತ್ಯ ನಿಷ್ಠೆ’ ಮನದಟ್ಟಾಗುತ್ತದೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಅಲಂಕರಿಸಿದ ಫ.ಗು. ಹಳಕಟ್ಟಿ, ಬಿ.ಎಂ.ಶ್ರೀ., ಮುಳಿಯ ತಿಮ್ಮಪ್ಪಯ್ಯ, ಡಿ.ವಿ.ಜಿ., ವೈ. ನಾಗೇಶ ಶಾಸ್ತ್ರಿ, ಪಂಜೆ ಮಂಗೇಶರಾಯರು, ಆರ್. ಕೃಷ್ಣಶಾಸ್ತ್ರಿ, ಕುವೆಂಪು, ದ.ರಾ. ಬೇಂದ್ರೆ, ಟಿ.ಪಿ. ಕೈಲಾಸಂ, ಗೋವಿಂದ ಪೈ, ಶಿವರಾಮ ಕಾರಂತ, ಶ್ರೀರಂಗ, ಚದುರಂಗ, ಪು.ತಿ.ನ., ಶಂಭಾ ಜೋಶಿ, ಡಿ.ಎಲ್. ನರಸಿಂಹಾಚಾರ್, ರಂ.ಶ್ರೀ. ಮುಗಳಿ, ಅನಕೃ, ಕೆ.ಎಸ್. ನರಸಿಂಹ ಸ್ವಾಮಿ, ಜಿ.ಎಸ್. ಶಿವರುದ್ರಪ್ಪ, ಹಾ.ಮಾ. ನಾಯಕ, ಸಿದ್ದಯ್ಯ ಪುರಾಣಿಕ, ಎ.ಎನ್. ಮೂರ್ತಿರಾವ್, ಗೋಪಾಲಕೃಷ್ಣ ಅಡಿಗ, ಬಸವರಾಜ ಕಟ್ಟಿಮನಿ, ಚೆನ್ನವೀರ ಕಣವಿ, ಎಸ್.ಎಲ್. ಭೈರಪ್ಪ, ಅನಂತಮೂರ್ತಿ, ನಿಸಾರ್ ಅಹ್ಮದ್, ಜಯದೇವಿ ತಾಯಿ ಲಿಗಾಡೆ, ಶಾಂತಾದೇವಿ ಮಾಳವಾಡ, ಕಮಲಾ ಹಂಪನಾ, ಗೀತಾ ನಾಗಭೂಷಣ, ಶಾಂತರಸ, ಎಲ್. ಬಸವರಾಜು, ಡಾ. ಸಿದ್ದಲಿಂಗಯ್ಯ, ಡಾ. ಚಂದ್ರಶೇಖರ ಕಂಬಾರ, ಡಾ. ಬರಗೂರು ರಾಮಚಂದ್ರಪ್ಪ, ಪ್ರೊ. ಚಂದ್ರಶೇಖರ ಪಾಟೀಲ, ಎಚ್.ಎಸ್. ವೆಂಕಟೇಶಮೂರ್ತಿ ಕನ್ನಡ ಸಾಹಿತ್ಯದ ಕಣಜವನ್ನು ತಮ್ಮದೇ ಬಗೆಯಲ್ಲಿ ಶ್ರೀಮಂತಗೊಳಿಸಿದ್ದಾರೆ. ಹಾಗೆ ನೋಡಿದರೆ ಕನ್ನಡ ಸಾಹಿತ್ಯ ಲೋಕದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಅರ್ಹರಾದವರ ಸಂಖ್ಯೆ ಸಾಕಷ್ಟಿದೆ. ಆಗ ಹಲವು ಜನ ಪ್ರತಿಭಾವಂತ ಸಾಹಿತಿಗಳಿಗೆ ಸಮ್ಮೇಳನಾಧ್ಯಕ್ಷದ ಅವಕಾಶ ದೊರೆಯಲೇ ಇಲ್ಲ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲ, ಸು.ರಂ. ಎಕ್ಕುಂಡಿ, ಕೆ.ವಿ. ತಿರುಮಲೇಶ್, ವ್ಯಾಸರಾಯ ಬಲ್ಲಾಳ್ ಮುಂತಾದವರು ಅತ್ಯುತ್ತಮ ಸಾಹಿತ್ಯ ರಚಿಸಿ ಕನ್ನಡ ಸಾಂಸ್ಕೃತಿಕ ಲೋಕದ ಘನತೆ ಹೆಚ್ಚಿಸಿದವರು.
ಮಂಡ್ಯದಲ್ಲಿ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಸ್ಥಾನ ಅಲಂಕರಿಸುವ ಸಾಹಿತ್ಯ ಲೋಕದ ನಿಜ ಸಾಧಕರಿಗೆ ಕೊರತೆ ಇಲ್ಲ. ಆ ಸ್ಥಾನಕ್ಕೆ ಅರ್ಹರಾದ ಹಲವಾರು ಜನ ಹಿರಿಯ ಸಾಹಿತಿಗಳಿದ್ದಾರೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷ ಮಹೇಶ ಜೋಶಿ ಅವರು ಕನ್ನಡ ಸಾಹಿತ್ಯ ಲೋಕದ ಸಾಧಕರನ್ನು ಹೊರತುಪಡಿಸಿ ಬೇರೆ ಕ್ಷೇತ್ರದ ಸಾಧಕರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸಲು ತಯಾರು ಮಾಡಿಕೊಳ್ಳುತ್ತಿದ್ದಾರಂತೆ. ಹಿರಿಯ ವಿಜ್ಞಾನಿ ಭಾರತ ರತ್ನ ಸಿ.ಎನ್. ರಾವ್ ಕನ್ನಡಿಗರು ಎಂಬ ಹೆಮ್ಮೆ ಎಲ್ಲರಲ್ಲೂ ಇದೆ. ಅವರನ್ನು ಕನ್ನಡ ಸಾಹಿತ್ಯ ಸಮ್ಮೇಳ ನಾಧ್ಯಕ್ಷರನ್ನಾಗಿಸಿಯೇ ಗೌರವಿಸಬೇಕೆಂದೇನೂ ಇಲ್ಲ. ಈ ಹಿಂದಿನವರು ಮಹೇಶ ಜೋಶಿಯವರ ಹಾಗೆ ಆಲೋಚನೆ ಮಾಡಿದ್ದರೆ ಸರ್ ಎಂ. ವಿಶ್ವೇಶ್ವರಯ್ಯ, ಯು.ಆರ್. ರಾವ್, ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಅವರನ್ನು ಎಂದೂ ಸಮ್ಮೇಳನಾಧ್ಯಕ್ಷರನ್ನಾಗಿ ಸುತ್ತಿದ್ದರು. ಸಂಗೀತ ಕ್ಷೇತ್ರದ ದಿಗ್ಗಜರಾದ ಭಾರತ ರತ್ನ ಭೀಮಸೇನ ಜೋಶಿ, ಪಂ. ಪುಟ್ಟರಾಜ ಗವಾಯಿಗಳು, ಮಲ್ಲಿಕಾರ್ಜುನ ಮನ್ಸೂರ, ವಿದುಷಿ ಗಂಗೂಬಾಯಿ ಹಾನಗಲ್ ಅವರನ್ನೂ ಸಮ್ಮೇಳ ನಾಧ್ಯಕ್ಷರನ್ನಾಗಿಸಬೇಕಿತ್ತು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತ್ಯ ಲೋಕದ ನಿಜ ಸಾಧಕರನ್ನೇ ಪರಿಗಣಿಸುತ್ತಾ ಬಂದಿರುವುದರಿಂದ ಅದೇ ಪರಿಪಾಠ ಮುಂದುವರಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿಗೆ ನೂರು ವರ್ಷ ತುಂಬಿದಾಗಲೂ ದಲಿತ ಸಮುದಾಯದ ಪ್ರತಿಭಾವಂತ ಸಾಹಿತಿಗೆ ಸಮ್ಮೇಳನಾಧ್ಯಕ್ಷ ಸ್ಥಾನದ ಅವಕಾಶ ನೀಡಿರಲಿಲ್ಲ. ಪುಂಡಲೀಕ ಹಾಲಂಬಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾಗ ಮೊದಲ ಬಾರಿಗೆ ದಲಿತ ಸಂವೇದನೆಗೆ ಮನ್ನಣೆ ದೊರಕಿಸಿಕೊಟ್ಟರು. ಆಧುನಿಕ ಕನ್ನಡ ಸಾಹಿತ್ಯದ ಸಂದರ್ಭದ ಮೊದಲ ಕ್ರಾಂತಿಕಾರಿ ಕವಿ, ಪ್ರತಿಭಾವಂತ ಸಾಹಿತಿ ಡಾ. ಸಿದ್ದಲಿಂಗಯ್ಯ ಅವರನ್ನು ಶ್ರವಣಬೆಳಗೊಳದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಚರಿತಾರ್ಹ ನಡೆಗೆ ನಾಂದಿ ಹಾಡಿದರು. ಕನ್ನಡ ಸಾಹಿತ್ಯ ಲೋಕ ಎಲ್ಲಾ ಸಾಮಾಜಿಕ ವಲಯದವರು ಸೃಷ್ಟಿಸಿದ ಸಾಹಿತ್ಯದಿಂದ ಸಮೃದ್ಧವಾಗಿದೆ. ಭಿನ್ನ ಸಾಮಾಜಿಕ ವಲಯದ ವೈಶಿಷ್ಟ್ಯ, ಪ್ರಾದೇಶಿಕ ವಿಭಿನ್ನ ಪ್ರಾದೇಶಿಕ ವಲಯದ ಹಾಡು ಪಾಡು ಮತ್ತು ಮಹಿಳಾಲೋಕದ ಅನುಭವ ದ್ರವ್ಯ ಸಾಹಿತ್ಯದ ರೂಪು ಪಡೆದಿದೆ. ವಿವಿಧ ಸಾಮಾಜಿಕ, ಪ್ರಾದೇಶಿಕ ಮತ್ತು ಮಹಿಳಾ ವಲಯ ಕನ್ನಡ ಸಾಹಿತ್ಯದ ಶ್ರೇಷ್ಠ ಪರಂಪರೆಯನ್ನೇ ಮುಂದುವರಿಸಿ ಅತ್ಯುತ್ತಮ ಸಾಹಿತ್ಯದ ಸೃಷ್ಟಿಗೆ ಕಾರಣವಾಗಿವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯ ಮತ್ತು ಮಹಿಳಾ ನ್ಯಾಯದ ಮಾತುಗಳನ್ನಾಡಿದರೆ ಅದನ್ನು ಮೀಸಲಾತಿ ನೆಲೆಯಲ್ಲಿ ಪರಿಭಾವಿಸಬಾರದು. ಎಲ್ಲಾ ವಲಯಗಳಲ್ಲಿ ಶ್ರೇಷ್ಠ ಸಾಹಿತ್ಯ ಸೃಷ್ಟಿಯಾಗಿದೆ ಎಂದೇ ಭಾವಿಸಬೇಕು.
ಇಲ್ಲಿಯವರೆಗೆ ಜರುಗಿದ 86 ಸಾಹಿತ್ಯ ಸಮ್ಮೇಳನಗಳಲ್ಲಿ ಕೇವಲ ನಾಲ್ಕು ಜನ ಮಹಿಳಾ ಸಾಹಿತಿಗಳನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಪರಿಗಣಿಸಲಾಗಿದೆ. ಹಾಗಾದರೆ ವೈದೇಹಿ, ಸ. ಉಷಾ, ವೀಣಾ ಶಾಂತೇಶ್ವರ, ಮಲ್ಲಿಕಾ ಘಂಟಿ, ಬಿ.ಟಿ. ಲಲಿತಾ ನಾಯಕ್, ಬಾನು ಮುಷ್ತಾಕ್, ಕೆ. ಶರೀಫಾ, ಸವಿತಾ ನಾಗಭೂಷಣ, ಮುಕ್ತಾಯಕ್ಕ, ಶಶಿಕಲಾ ವೀರಯ್ಯಸ್ವಾಮಿ, ಪ್ರತಿಭಾ ನಂದಕುಮಾರ್ ಮುಂತಾದವರು ಬರೆದು ಪ್ರಕಟಿಸಿದ್ದು ಸಾಹಿತ್ಯವಲ್ಲವೇ?. ಅಲ್ಪಸಂಖ್ಯಾತ ಸಮುದಾಯದ ಉತ್ತಂಗಿ ಚೆನ್ನಪ್ಪ, ನಿಸಾರ್ ಅಹ್ಮದ್, ನಾ. ಡಿಸೋಜಾ ಅವರನ್ನು ಸಮ್ಮೇಳನಾಧ್ಯಕ್ಷರನ್ನಾಗಿಸಿದ್ದಾರೆ. ಕನ್ನಡದ ಯಾವುದೇ ಸಾಹಿತಿಗೆ ಕಡಿಮೆ ಇಲ್ಲದಂತೆ ಬೊಳುವಾರು ಮಹಮ್ಮದ್ ಕುಂಞಿ, ಫಕೀರ್ ಮುಹಮ್ಮದ್ ಕಟ್ಪಾಡಿ, ರಂಜಾನ್ ದರ್ಗಾ ಅತ್ಯುತ್ತಮ ಸಾಹಿತ್ಯ ಸೃಷ್ಟಿಸಿದ್ದು ಲೆಕ್ಕಕ್ಕೆ ಇಲ್ಲವೇ? ಕನ್ನಡ ಸಾಹಿತ್ಯ ಪರಿಷತ್ತಿನ ಇತಿಹಾಸದಲ್ಲಿ ಹಿಂದುಳಿದ ಸಮುದಾಯಗಳ ಹಿನ್ನೆಲೆಯಿಂದ ಬಂದು ಅತ್ಯುತ್ತಮ ಸಾಹಿತ್ಯ ರಚಿಸಿದವರು ಅನೇಕರಿದ್ದಾರೆ. ಅವರನ್ನು ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಅರ್ಹರೆಂದು ಭಾವಿಸಿಯೇ ಇಲ್ಲ. ಪ್ರೊ. ಕೆ.ಜಿ. ನಾಗರಾಜಪ್ಪ, ಕೆ.ವಿ. ನಾರಾಯಣ, ಎಸ್.ಜಿ. ಸಿದ್ದರಾಮಯ್ಯ, ಖ್ಯಾತ ಕಾದಂಬರಿಕಾರ ಕಾ.ತ. ಚಿಕ್ಕಣ್ಣ ಅವರ ಸಾಹಿತ್ಯ ಗುಣಮಟ್ಟದಲ್ಲಿ ಯಾರಿಗಿಂತಲೂ ಕಡಿಮೆ ಇಲ್ಲ. ಮಹೇಶ ಜೋಶಿ ಮತ್ತವರ ತಂಡ ಉತ್ಕೃಷ್ಟ ಸಾಹಿತ್ಯ ಪರಂಪರೆಯನ್ನು ಗೌರವಿಸುವ ಕೆಲಸ ಮಾಡಬೇಕಿದೆ. ಕುಂ. ವೀರಭದ್ರಪ್ಪ, ಕೃಷ್ಣಮೂರ್ತಿ ಹನೂರು, ಕಾಳೇಗೌಡ ನಾಗೇವಾರ, ವಿವೇಕ ರೈ ಸೇರಿದಂತೆ ಹಲವರು ಅತ್ಯುತ್ತಮ ಸಾಧನೆಗೈದಿದ್ದಾರೆ.
ಸಂತ ಶಿಶುನಾಳ ಷರೀಫರ ಪರಂಪರೆ ಕನ್ನಡ ಪ್ರಜ್ಞೆಯ ವಿಸ್ತಾರಕ್ಕೆ ಕಾರಣವಾಗಿದೆ. ಷರೀಫರ ಗುರು ಗೋವಿಂದ ಭಟ್ಟರು. ಗೋವಿಂದ ಭಟ್ಟರ ವಂಶದ ಕುಡಿ ಹಾಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಶಿಯವರು ದೋಷಪೂರಿತ ಕನ್ನಡಕ ತೆಗೆದು ದೃಷ್ಟಿದೋಷ ನಿವಾರಿಸಿಕೊಳ್ಳಬೇಕಿದೆ. ಕನ್ನಡದ ಸಾಹಿತ್ಯ ಪರಂಪರೆಗೆ ಗೌರವ ತರುವ ಹಾಗೆ ಸಮ್ಮೇಳನಾಧ್ಯಕ್ಷರ ಆಯ್ಕೆ ಮಾಡಲಿ. ಯಾವ ಮುಖ್ಯಮಂತ್ರಿಯೂ ಸಮ್ಮೇಳನಾಧ್ಯಕ್ಷರ ಆಯ್ಕೆಯಲ್ಲಿ ಹಸ್ತಕ್ಷೇಪ ಮಾಡಿದ ನಿದರ್ಶನ ಇಲ್ಲ. ಮಹೇಶ ಜೋಶಿಯವರು ಪ್ರತಿಭಾ ನೆಲೆಯ ಸಾಮಾಜಿಕ ನ್ಯಾಯ, ಮಹಿಳಾ ನ್ಯಾಯ ಮತ್ತು ಪ್ರಾದೇಶಿಕ ನ್ಯಾಯ ಕಾಲದ ಅಗತ್ಯವೆಂದು ಭಾವಿಸಲಿ.