ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ
‘‘ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಕಾರ್ಯನಿರ್ವಹಣೆ ಮಾಡುವಂತಾಗಬೇಕು. ಅಗತ್ಯದ ಸುಧಾರಣಾ ಕ್ರಮಗಳನ್ನು ಕೈಗೊಳ್ಳಬೇಕು’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾತ್ರ ಕರ್ನಾಟಕದ ಸೇವಾ ಆಯೋಗವನ್ನು ಯುಪಿಎಸ್‌ಸಿ ಮಾದರಿಯಲ್ಲಿ ಸುಧಾರಣೆ ಮಾಡಬಲ್ಲರು. ಈ ಹಿಂದೆಯೂ ಅವರು ಕೆಪಿಎಸ್‌ಸಿ ಸುಧಾರಣೆ ಕುರಿತು ಮಾತನಾಡಿದ್ದರು. ಪಿ.ಸಿ. ಹೂಟಾ ಸಮಿತಿಯ ವರದಿಯಂತೆ ಕೆಪಿಎಸ್‌ಸಿಯ ನೇಮಕಾತಿ ಪ್ರಕ್ರಿಯೆಯಲ್ಲಿ ಗುಣಾತ್ಮಕ ಬದಲಾವಣೆ ತರುವುದಾಗಿ ಹೇಳಿದ್ದರು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕ ವ್ಯವಸ್ಥೆ ಜಾರಿಗೆ ತಂದರೆ ಸರಕಾರಿ ವ್ಯವಸ್ಥೆಯಲ್ಲಿ ಅರ್ಧದಷ್ಟು ಭ್ರಷ್ಟಾಚಾರ ಕಡಿಮೆಯಾಗುತ್ತದೆ. ಚುನಾವಣಾ ವ್ಯವಸ್ಥೆಯಲ್ಲಿನ ಹಣದ ವಹಿವಾಟಿಗೆ ಕಡಿವಾಣ ಹಾಕಿದರೆ ಭ್ರಷ್ಟಾಚಾರ ತನ್ನಷ್ಟಕ್ಕೆ ತಾನೇ ತೊಲಗುತ್ತದೆ. ಭ್ರಷ್ಟಾಚಾರದ ಬಗ್ಗೆ ಎಷ್ಟೇ ಮಾತನಾಡಿದರೂ ಬದಲಾವಣೆಯಾಗುವುದಿಲ್ಲ. ಭ್ರಷ್ಟ ವ್ಯವಸ್ಥೆಯನ್ನು ಮೂಲದಲ್ಲಿ ಸರಿಪಡಿಸಿದಾಗ ಮಾತ್ರ ನಿರೀಕ್ಷಿತ ಫಲ ದೊರೆಯುತ್ತದೆ.
ಕಳೆದ 75 ವರ್ಷಗಳಲ್ಲಿ ಬೇರೆ ಬೇರೆ ರಾಜಕೀಯ ಪಕ್ಷಗಳ ಹಲವು ಸರಕಾರಗಳು ಬಂದಿವೆ-ಹೋಗಿವೆ. ಆದರೆ ಕೇಂದ್ರ ಲೋಕಸೇವಾ ಆಯೋಗ ತನ್ನ ವಿಶ್ವಾಸಾರ್ಹತೆಯನ್ನು ಹಾಗೆಯೇ ಉಳಿಸಿಕೊಂಡಿದೆ. ಈ ಹೊತ್ತಿಗೂ ಹಣಬಲ, ಜಾತಿ ಬಲ ಮತ್ತು ರಾಜಕೀಯ ಪ್ರಭಾವ ಇಲ್ಲದೆಯೂ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಿವಿಲ್ ಸರ್ವಿಸ್ ಪರೀಕ್ಷೆಯ ಮೂಲಕ ಉದ್ಯೋಗ ಪಡೆಯಬಹುದಾಗಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಾಲಕಾಲಕ್ಕೆ ಯುಪಿಎಸ್‌ಸಿ ತನ್ನ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಪ್ಡೇಟ್ ಆಗಿದ್ದರಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಉಳಿಸಿಕೊಂಡಿದೆ. ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆ ಮಾತ್ರ ಪ್ರತಿಭೆಯನ್ನು ಅಳೆಯುವ ಶ್ರೇಷ್ಠ ಮಾದರಿ ಎಂದು ಹೇಳಲಾಗದು. ಪರೀಕ್ಷಾ ವ್ಯವಸ್ಥೆಯ ಮಿತಿಯಲ್ಲಿಯೇ ಅದು ಪಾರದರ್ಶಕವಾಗಿ ನಡೆದುಕೊಳ್ಳುತ್ತಿದೆ. ಹಣಬಲದ ಕೈಚಳಕಕ್ಕೆ ಅಲ್ಲಿ ಅವಕಾಶ ದೊರೆತಿಲ್ಲ. ಇಷ್ಟಾಗಿಯೂ ಯುಪಿಎಸ್‌ಸಿಯಲ್ಲೂ ಮೇಲ್ಮಟ್ಟದಲ್ಲಿ ರಾಜಕೀಯ ಪ್ರಭಾವ ಕೆಲಸ ಮಾಡುತ್ತದೆ ಎಂದು ಹೇಳುವವರು ಇದ್ದಾರೆ. ಅದೇನೇ ಇರಲಿ ಪ್ರತಿಭಾವಂತ ಅಭ್ಯರ್ಥಿಗಳು ಈ ಹೊತ್ತಿಗೂ ಹಣಬಲ, ಜಾತಿಬಲ, ರಾಜಕೀಯ ಬಲ ಇಲ್ಲದೆ ಉದ್ಯೋಗ ಪಡೆದುಕೊಳ್ಳಬಹುದಾದ ಏಕೈಕ ಸಂಸ್ಥೆಯೆಂದರೆ ಕೇಂದ್ರ ಲೋಕಸೇವಾ ಆಯೋಗ ಎಂದು ಬಲವಾಗಿ ನಂಬಿದ್ದಾರೆ.
ಹಾಗಾಗಿಯೇ ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಿಸುವಂತೆ ಮಾಡುವ ಪ್ರಯತ್ನಗಳನ್ನು ಉದ್ಯೋಗಾರ್ಥಿಗಳು ಪವಾಡ ಸದೃಶ ಘಟನೆಗಳೆಂದೇ ಪರಿಭಾವಿಸುತ್ತಾರೆ. ಇಂಜಿನಿಯರಿಂಗ್, ಮೆಡಿಕಲ್ ಮತ್ತು ಇನ್ನಿತರ ವಿಷಯಗಳಲ್ಲಿ ರ್ಯಾಂಕ್ ಪಡೆದ ಉದ್ಯೋಗಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಪದವಿ ದೊರಕಿದ ನಂತರ ನಾಗರಿಕ ಸೇವಾ ಪರೀಕ್ಷೆಗಾಗಿಯೇ ಅತ್ಯುತ್ತಮ ಸಂಸ್ಥೆಗಳಲ್ಲಿ ಕೋಚಿಂಗ್ ಪಡೆದುಕೊಳ್ಳುತ್ತಾರೆ. ಒಂದೋ, ಎರಡೋ, ಮೂರೋ ಹೆಚ್ಚೆಂದರೆ ನಾಲ್ಕು ಬಾರಿ ನಾಗರಿಕ ಸೇವಾ ಪರೀಕ್ಷೆ ಬರೆಯುತ್ತಾರೆ. ಯಶಸ್ವಿಯಾದರೆ ಖುಷಿಯಿಂದ ನೌಕರಿಗೆ ಸೇರುತ್ತಾರೆ. ನಾಲ್ಕೈದು ಬಾರಿ ಪರೀಕ್ಷೆ ಬರೆದ ಮೇಲೂ ಯಶಸ್ಸು ಕಾಣದಿದ್ದಾಗ ಒಂದೋ ಐಎಎಸ್ ಕೋಚಿಂಗ್ ಸೆಂಟರ್‌ನಲ್ಲಿ ಪಾಠ ಮಾಡಲು ಹೋಗುತ್ತಾರೆ. ತುಸು ಹಣವಂತರಾಗಿದ್ದಾರೆ ಸ್ವಂತ ಕೋಚಿಂಗ್ ಸೆಂಟರ್ ತೆರೆಯುತ್ತಾರೆ. ಉದ್ಯೋಗದ ಅನಿವಾರ್ಯತೆ ಇರುವವರು ತಮ್ಮ ತಮ್ಮ ವಿಷಯವಾರು ಕ್ಷೇತ್ರಗಳಲ್ಲಿ ನೌಕರಿ ಪಡೆದುಕೊಳ್ಳಲು ಕಾರ್ಪೊರೇಟ್ ಕಂಪೆನಿಗಳ ಮೊರೆ ಹೋಗುತ್ತಾರೆ. ಆದರೆ ಕೆಪಿಎಸ್‌ಸಿ ನಡೆಸುವ ಪರೀಕ್ಷೆ ಬರೆದು ಅಧಿಕಾರಿಯಾಗಬೇಕೆಂದು ಹಂಬಲಿಸುವವರು ವಿರಳ. ಕೆಪಿಎಸ್‌ಸಿ ಪ್ರತೀ ವರ್ಷ ಕಡ್ಡಾಯವಾಗಿ ನಿಗದಿತ ದಿನಾಂಕದಂದು ಪರೀಕ್ಷೆ ನಡೆಸುವುದಿಲ್ಲ. ಪರೀಕ್ಷೆ ನಡೆಸಿದರೂ ಶಿಸ್ತುಬದ್ಧವಾಗಿ ನಡೆಸುವುದಿಲ್ಲ. ಪರೀಕ್ಷಾ ಅಕ್ರಮ, ಪ್ರಶ್ನೆ ಪತ್ರಿಕೆಯಲ್ಲಿ ವಿಪರೀತ ದೋಷ ಕಾಣಿಸಿಕೊಂಡು ಮರು ಪರೀಕ್ಷೆಗೆ ಒತ್ತಾಯ ಕೇಳಿ ಬರುತ್ತವೆ. ಎಲ್ಲವೂ ಸುಲಲಿತ ನಡೆದರೆ, ಲಂಚವಿಲ್ಲದೆ ನೌಕರಿ ಸಿಗುವುದಿಲ್ಲ. ಆದರೆ ಯುಪಿಎಸ್‌ಸಿ ಪ್ರತಿವರ್ಷ ನಿಗದಿತ ದಿನದಂದು ಪರೀಕ್ಷೆ ನಡೆಸುತ್ತದೆ. ಪರೀಕ್ಷೆಯಲ್ಲಿ ಗೊಂದಲಗಳಿರುವುದಿಲ್ಲ. ಅಕ್ರಮದ ವಾಸನೆ ಕಂಡು ಬಂದರೆ ತಕ್ಷಣ ಕ್ರಮ ಜರುಗಿಸುತ್ತಾರೆ. ಪ್ರಿಲಿಮಿನರಿ ಪರೀಕ್ಷೆ ಬರೆಯುವುದರಿಂದ ಹಿಡಿದು ಅಂತಿಮವಾಗಿ ಕೇಡರ್ ಮತ್ತು ರಾಜ್ಯಗಳ ಹಂಚಿಕೆಯವರೆಗೂ ನಿಯಮಬದ್ಧವಾಗಿಯೇ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಬಡವರ, ಮಧ್ಯಮ ವರ್ಗದವರ ಮಕ್ಕಳು ಅತ್ಯುನ್ನತ ಹುದ್ದೆಗೆ ಆಯ್ಕೆಯಾಗಿ ಸಂಭ್ರಮಿಸುತ್ತಾರೆ. ಯಶೋಗಾಥೆಗಳನ್ನು ಹೇಳಿಕೊಳ್ಳುತ್ತಿರುತ್ತಾರೆ. ಕೆಪಿಎಸ್‌ಸಿ ಪರೀಕ್ಷೆ ಬರೆದವರು ಯಶೋಗಾಥೆಯ ಬದಲಿಗೆ ಗೋಳಿನ ಕಥೆ ಹಂಚಿಕೊಳ್ಳುತ್ತಿರುತ್ತಾರೆ. ಅಷ್ಟಕ್ಕೂ ಕರ್ನಾಟಕ ಲೋಕಸೇವಾ ಆಯೋಗದ ಆಡಳಿತ ವ್ಯವಸ್ಥೆಯನ್ನು ಐಎಎಸ್ ಅಧಿಕಾರಿಗಳೇ ನಿರ್ವಹಿಸುತ್ತಾರೆ. ಹೊರ ರಾಜ್ಯಗಳ ಐಎಎಸ್ ಅಧಿಕಾರಿಗಳು ಅಸಡ್ಡೆ, ದಿವ್ಯ ನಿರ್ಲಕ್ಷ್ಯ ತೋರಬಹುದು. ಆದರೆ ಕರ್ನಾಟಕ ಮೂಲದ ಐಎಎಸ್ ಅಧಿಕಾರಿಗಳಿಗೆ ನಮ್ಮ ರಾಜ್ಯದ ಅತ್ಯುನ್ನತ ನೇಮಕಾತಿ ಸಂಸ್ಥೆಯೊಂದು ಗೊಂದಲದ ಗೂಡಾಗಿದ್ದು ಅದನ್ನು ಯುಪಿಎಸ್‌ಸಿ ಮಾದರಿಯಲ್ಲಿ ಮರುರೂಪಿಸಬೇಕೆಂದು ಅನಿಸಬೇಕಲ್ಲವೇ? ಕೆಪಿಎಸ್‌ಸಿ ಮಾತ್ರವಲ್ಲ; ಕರ್ನಾಟಕದಲ್ಲಿನ ಬಹುತೇಕ ನೇಮಕಾತಿ ಪ್ರಾಧಿಕಾರಗಳು ಅಕ್ರಮದ ಕೇಂದ್ರಗಳಾಗಿ ಮಾರ್ಪಟ್ಟಿವೆ. ಸರಕಾರಿ ಹುದ್ದೆಗಳ ಭರ್ತಿಗೆ ಒಂದೋ ಅಥವಾ ಎರಡು ಅಧಿಕೃತ ನೇಮಕಾತಿ ಸಂಸ್ಥೆಗಳಿರುವುದು ಒಳ್ಳೆಯದು. ವಿಶ್ವವಿದ್ಯಾನಿಲಯಗಳು ಸ್ವಾಯತ್ತ ಸಂಸ್ಥೆಗಳಾಗಿರುವುದರಿಂದ ಮತ್ತು ಅವು ಯುಜಿಸಿ ನಿಯಮಾನುಸಾರ ಆಯ್ಕೆ ಪ್ರಕ್ರಿಯೆ ನಡೆಸಬೇಕಾಗಿದ್ದರಿಂದ ಪ್ರತ್ಯೇಕವಾಗಿ ನೇಮಕಾತಿ ಮಾಡುತ್ತಿರುವುದು ಸರಿಯಾಗಿದೆ. ಕರ್ನಾಟಕ ಲೋಕಸೇವಾ ಆಯೋಗವನ್ನು ರಿಪೇರಿ ಮಾಡಿ ಎಲ್ಲ ನೇಮಕಾತಿಗಳನ್ನು ಆ ಸಂಸ್ಥೆಯ ಮೂಲಕ ನಡೆಸಿದರೆ ಭ್ರಷ್ಟಾಚಾರ ತಗ್ಗಿಸಬಹುದು. ಅಷ್ಟು ಮಾತ್ರವಲ್ಲ ಅದರ ವಿಶ್ವಾಸಾರ್ಹತೆ ಹೆಚ್ಚಿಸಬಹುದು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮೊದಲಿನ ಹಾಗೆ ಸಿಇಟಿ-ಸೆಲ್ ಆಗಿ ಮುಂದುವರಿದರೆ ಒಳ್ಳೆಯದು.
ಕೇಂದ್ರ ಲೋಕಸೇವಾ ಆಯೋಗವು ಬ್ರಿಟಿಷ್ ಸರಕಾರದ ಕನಸಿನ ಕೂಸು. ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಪೂರ್ವದಲ್ಲೇ ಕಂಪೆನಿ ಸರಕಾರ 1923ರಲ್ಲಿ ಲಾರ್ಡ್ ಲೀ ಅಧ್ಯಕ್ಷತೆಯಲ್ಲಿ ಆಯೋಗವೊಂದನ್ನು ರಚಿಸಿತ್ತು. ಆ ಆಯೋಗದಲ್ಲಿ ಭಾರತ ಮತ್ತು ಬ್ರಿಟಿಷ್ ಸದಸ್ಯರು ಸಮ ಪ್ರಮಾಣದಲ್ಲಿದ್ದರು. ಲೀ ನೇತೃತ್ವದ ಆಯೋಗ 1924ರಲ್ಲಿ ಲೋಕಸೇವಾ ರಚನೆಗೆ ಶಿಫಾರಸು ಮಾಡಿತ್ತು. ನಾಗರಿಕ ಸೇವೆ ಆಯ್ಕೆಯಲ್ಲಿ ಪ್ರತಿಶತ 40ರಷ್ಟು ಹುದ್ದೆಗಳು ಬ್ರಿಟಿಷರಿಗೆ ಪ್ರತಿಶತ 40ರಷ್ಟು ಹುದ್ದೆಗಳು ಭಾರತೀಯರಿಗೆ, ಇನ್ನುಳಿದ ಪ್ರತಿಶತ 20ರಷ್ಟು ಹುದ್ದೆಗಳನ್ನು ಸ್ಥಳೀಯ ಭಾರತೀಯ ಅಧಿಕಾರಿಗಳಿಗೆ ಭಡ್ತಿ ಮೂಲಕ ನೀಡಬೇಕು ಎಂದೂ ಶಿಫಾರಸು ಹೇಳಿತ್ತು. ಇದೇ ಆಯೋಗ 1935ರ ಕಾಯ್ದೆಯನ್ವಯ ‘ಫೆಡರಲ್ ಪಬ್ಲಿಕ್ ಸರ್ವಿಸ್ ಕಮಿಷನ್’ ಎಂಬ ರೂಪು ಪಡೆಯಿತು. ಸ್ವಾತಂತ್ರ್ಯಾನಂತರ 26 ಜನವರಿ 1950ರಲ್ಲಿ ಸಾಂವಿಧಾನಿಕ ಸ್ಥಾನಮಾನದೊಂದಿಗೆ ‘ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್’ ಆಗಿ ಹೆಸರು ಬದಲಾಯಿಸಿಕೊಂಡಿತು. 1969ರ ರೆಗ್ಯೂಲೇಶನ್ ಮೇರೆಗೆ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಮತ್ತು ಸದಸ್ಯರ ಅಧಿಕಾರಾವಧಿ, ನೇಮಕಾತಿ ನಿಯಮಗಳನ್ನು ಸ್ಪಷ್ಟಪಡಿಸಲಾಯಿತು. ಅಧ್ಯಕ್ಷರು ಸೇರಿದಂತೆ 9ರಿಂದ 11 ಜನ ಸದಸ್ಯರು ಆಯೋಗದಲ್ಲಿ ಇರುತ್ತಾರೆ. ಪೂರ್ಣ ಪ್ರಮಾಣದ ಸಿಬ್ಬಂದಿ ಹೊಂದಿದ ಸ್ವತಂತ್ರ ಸಂಸ್ಥೆಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಲಾಗಿದೆ. ಅಧ್ಯಕ್ಷರು ಮತ್ತು ಸದಸ್ಯರನ್ನು ಆರು ವರ್ಷಕ್ಕೆ ಭಾರತದ ರಾಷ್ಟ್ರಪತಿ ನೇಮಕ ಮಾಡುತ್ತಾರೆ. 65 ವರ್ಷ ವಯಸ್ಸಿನ ನಂತರ ಅಧಿಕಾರದಲ್ಲಿ ಮುಂದುವರಿಯುವಂತಿಲ್ಲ. ಇನ್ನೆರಡು ವರ್ಷಗಳಲ್ಲಿ ಕೇಂದ್ರ ಲೋಕಸೇವಾ ಆಯೋಗ ಶತಮಾನೋತ್ಸವ ಆಚರಿಸಿಕೊಳ್ಳಲಿದೆ.
ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲೇ ಕರ್ನಾಟಕ ಲೋಕಸೇವಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. 18 ಮೇ 1951ರಲ್ಲಿ ಸಾಂವಿಧಾನಿಕ ಬಲದೊಂದಿಗೆ ರಚನೆಯಾದ ಕೆಪಿಎಸ್‌ಸಿ ಇಲ್ಲಿಯವರೆಗೆ ಹಲವಾರು ಅಧ್ಯಕ್ಷರು ಮತ್ತು ಸದಸ್ಯರನ್ನು ಕಂಡಿದೆ. ಅಧ್ಯಕ್ಷರು ಮತ್ತು ಸದಸ್ಯರನ್ನು ಆರು ವರ್ಷಗಳ ಅವಧಿಗೆ ರಾಜ್ಯಪಾಲರು ನೇಮಕ ಮಾಡುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ವಿವಿಧ ಸಮುದಾಯಗಳಿಗೆ ಪ್ರಾತಿನಿಧ್ಯ ಕಲ್ಪಿಸಲು ಹೆಚ್ಚಿಸುತ್ತಾ ಬರಲಾಗಿದೆ. ಕೆಪಿಎಸ್‌ಸಿಗೆ ಸುಸಜ್ಜಿತವಾದ ಸ್ವತಂತ್ರ ಕಟ್ಟಡ ಒದಗಿಸಲಾಗಿದೆ. ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯೂ ಕೇಂದ್ರ ಸರಕಾರದ ಮರ್ಜಿಯಲ್ಲೇ ನಡೆಯುತ್ತದೆ. ಇಷ್ಟಾಗಿಯೂ ಯುಪಿಎಸ್‌ಸಿ ಒಂದು ಮಟ್ಟದ ಗುಣಮಟ್ಟ ಕಾಯ್ದುಕೊಂಡಿದೆ. ನಿರಂತರವಾಗಿ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಯುಪಿಎಸ್‌ಸಿಗೆ ಸಾಧ್ಯವಾದದ್ದು ಕೆಪಿಎಸ್‌ಸಿಗೆ ಯಾಕೆ ಸಾಧ್ಯವಾಗುತ್ತಿಲ್ಲ? ಭಾರತದ ಮೊದಲ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರೂ ಅವರು ಕೇಂದ್ರ ಸರಕಾರದ ಹಲವು ಉನ್ನತ ಸಂಸ್ಥೆಗಳಿಗೆ ಗುಣಮಟ್ಟದ ಭದ್ರಬುನಾದಿ ಹಾಕಿದ್ದಾರೆ. ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿ ಮಾಡುವಾಗ ಪ್ರಾಮಾಣಿಕರು, ದಕ್ಷರು ಮತ್ತು ದೂರದೃಷ್ಟಿಯುಳ್ಳವರನ್ನು ನೆಹರೂ ಅವರು ಪರಿಗಣಿಸಿದ್ದರಿಂದಲೇ ಕೇಂದ್ರ ಲೋಕಸೇವಾ ಆಯೋಗ ಅತ್ಯುತ್ತಮ ಸಂಸ್ಥೆಯಾಗಿ ರೂಪುಗೊಂಡಿದೆ. ಮೊದಲ ಹಂತದ ಪರೀಕ್ಷೆಯಿಂದ ಹಿಡಿದು ಸಂದರ್ಶನದವರೆಗೆ ಒಂದು ಪಾರದರ್ಶಕ ವ್ಯವಸ್ಥೆ ರೂಪಿಸಿದ್ದರಿಂದ ಕಳ್ಳಾಟಗಳಿಗೆ ಅಲ್ಲಿ ಅವಕಾಶ ಇಲ್ಲ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಮೌಲ್ಯಮಾಪನ ನಡೆಸಿ ಫಲಿತಾಂಶ ಪ್ರಕಟಿಸುವವರೆಗೆ ಕಠಿಣ ನಿಗಾ ವಹಿಸುವುದರಿಂದ ಅಕ್ರಮಗಳಿಗೆ ಅವಕಾಶ ದೊರೆಯುತ್ತಿಲ್ಲ. ಪ್ರಾದೇಶಿಕ ಭಾಷಾ ಮಾಧ್ಯಮಗಳಲ್ಲಿ ಪರೀಕ್ಷೆ ಬರೆಯುವವರು ಅಕ್ರಮ ನಡೆಸುವ ಸಾಧ್ಯತೆ ಇದೆಯೆಂದು ಆರೋಪ ಕೇಳಿ ಬಂದಿವೆ. ಆದರೆ ಯುಪಿಎಸ್‌ಸಿ ಕಾಲಕಾಲಕ್ಕೆ ಕಠಿಣ ವ್ಯವಸ್ಥೆ ರೂಪಿಸುತ್ತಾ ಇರುವುದರಿಂದ ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗಿದೆ.
ಲಿಖಿತ ಪರೀಕ್ಷೆಯ ಅಂಕಗಳ ವಿವರ, ಅಭ್ಯರ್ಥಿಯ ಹೆಸರು ಯುಪಿಎಸ್‌ಸಿ ಸಾಧ್ಯವಾದಷ್ಟು ಗೌಪ್ಯವಾಗಿಡುತ್ತದೆ. ಅಷ್ಟು ಮಾತ್ರವಲ್ಲ ಮೌಖಿಕ ಸಂದರ್ಶನದಲ್ಲಿ ಸಂದರ್ಶಕರು ಅಭ್ಯರ್ಥಿಯ ಕ್ರಿಯಾಶೀಲತೆ, ಜಾಣ್ಮೆ, ಕರ್ತೃತ್ವ ಶಕ್ತಿಯ ಮೌಲ್ಯಮಾಪನ ನಡೆಸುತ್ತಾರೆಯೇ ಹೊರತು ಓದಿನ ತಿಳುವಳಿಕೆಯನ್ನಲ್ಲ. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಯುಪಿಎಸ್‌ಸಿ ಪರೀಕ್ಷಾ ವ್ಯವಸ್ಥೆಯ ಎಲ್ಲ ತಿಳುವಳಿಕೆ ಇರುವುದರಿಂದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ? ಅಷ್ಟಕ್ಕೂ ನೇಮಕಾತಿಯಲ್ಲಿ ದುಡ್ಡು ಮಾಡಿಕೊಳ್ಳುವ ಅನಿವಾರ್ಯತೆ, ದಾರಿದ್ರ್ಯ ಹಿರಿಯ ಅಧಿಕಾರಿಗಳಿಗೆ ಇರುವುದಿಲ್ಲ. ಯುಪಿಎಸ್‌ಸಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಿಗೆ ಪರೀಕ್ಷೆ ನಡೆಸಿ ನೇರ ನೇಮಕಾತಿ ಮಾಡಿಕೊಳ್ಳುತ್ತದೆ. ಇನ್ನಿತರ ಅಂದರೆ ಸಿ, ಡಿ ಗ್ರೂಪ್ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಸ್ಟಾಪ್ ಸೆಲೆಕ್ಷನ್ ಕಮಿಷನ್ ಇದೆ. ಪ್ರವೇಶ ಪರೀಕ್ಷೆಗಳನ್ನು ನಡೆಸಲು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ಇದೆ. ರೈಲ್ವೆ, ಬ್ಯಾಂಕ್ ಸಿಬ್ಬಂದಿ ನೇಮಕಾತಿಗೆ ಪ್ರತ್ಯೇಕ ನೇಮಕಾತಿ ಮಂಡಳಿಗಳಿವೆ. ರೈಲ್ವೆ ಸೇರಿದಂತೆ ಇನ್ನಿತರ ನೇಮಕಾತಿ ಮಂಡಳಿಗಳು ರಾಜಕೀಯ ಹಸ್ತಕ್ಷೇಪದಿಂದಾಗಿ ಹಗರಣಗಳ ಸುಳಿಯಲ್ಲಿ ಸಿಲುಕಿರಬಹುದು. ಇತ್ತೀಚೆಗೆ ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಡೆಸಿದ ಪರೀಕ್ಷೆಯಲ್ಲಿ ಅಕ್ರಮಗಳು ಜರುಗಿ ಭಾರೀ ಸದ್ದು ಮಾಡಿದವು. ಆದರೆ ಯುಪಿಎಸ್‌ಸಿ ಆಮಟ್ಟದಲ್ಲಿ ಹೆಸರು ಕೆಡಿಸಿಕೊಂಡಿಲ್ಲವೆಂದು ಭಾವಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಪರೀಕ್ಷಾ ಲೋಪಗಳು ಕಾಣಿಸಿಕೊಂಡಾಗಲೆಲ್ಲ ಸಿಬ್ಬಂದಿ ಕೊರತೆಯನ್ನು ಮುಂದು ಮಾಡಲಾಗುತ್ತದೆ. ಯುಪಿಎಸ್‌ಸಿಗೆ ಸಿದ್ಧಪಡಿಸಿ ಕೊಡುವ ತಜ್ಞ ಪ್ರಾಧ್ಯಾಪಕರೇ ಕೆಪಿಎಸ್‌ಸಿಗೂ ಕಾರ್ಯನಿರ್ವಹಿಸುತ್ತಾರೆ. ಮೌಲ್ಯಮಾಪನ ಮಾಡುವವರೂ ಅವರೇ. ಕೆಪಿಎಸ್‌ಸಿಯಲ್ಲಿ ಆರಂಭದ ಹಂತದಿಂದ ಅಕ್ರಮಗಳ ವಾಸನೆ ಬಡಿಯುತ್ತದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದು, ಪರೀಕ್ಷೆ ಮತ್ತು ಮೌಲ್ಯಮಾಪನದ ಹಂತದಲ್ಲಾದರೂ ಅಕ್ರಮಗಳಿಗೆ ಕಡಿವಾಣ ಹಾಕಿದರೆ ಸಂದರ್ಶನದ ಹಂತವನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬದಲಿಸಬಹುದು.
ಕರ್ನಾಟಕ ಲೋಕಸೇವಾ ಆಯೋಗವನ್ನು ವಿಶ್ವಾಸಾರ್ಹ ಸಂಸ್ಥೆಯನ್ನಾಗಿ ರೂಪಿಸುವ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇದ್ದರೆ, ಐಎಎಸ್ ಅಧಿಕಾರಿಗಳು, ಶಿಕ್ಷಣ ತಜ್ಞರನ್ನು ಒಳಗೊಂಡ ಒಂದು ಸಮಿತಿ ರಚಿಸಲಿ. ಒಟ್ಟಾರೆ ಕೆಪಿಎಸ್‌ಸಿಯ ಪರೀಕ್ಷಾ ವ್ಯವಸ್ಥೆ ಮತ್ತು ನೇಮಕಾತಿ ಪ್ರಕ್ರಿಯೆಯಲ್ಲಿನ ಲೋಪಗಳನ್ನು ಪತ್ತೆಹಚ್ಚಬೇಕು. ಯುಪಿಎಸ್‌ಸಿ ಮಾದರಿಯಲ್ಲಿ ಸುಧಾರಣೆಗೆ ಕಠಿಣ ಕ್ರಮ ವಹಿಸಬೇಕು. ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಜವಾಬ್ದಾರಿಯನ್ನು ಹಿಂಪಡೆದು ಕೆಪಿಎಸ್‌ಸಿಗೆ ಒಪ್ಪಿಸಬೇಕು. ಪರೀಕ್ಷಾ ಪ್ರಾಧಿಕಾರವನ್ನು ಪ್ರವೇಶ ಪರೀಕ್ಷೆ ನಿರ್ವಹಣೆಗೆ ಮಾತ್ರ ಸೀಮಿತಗೊಳಿಸಬೇಕು. ಪರೀಕ್ಷಾ ಪ್ರಾಧಿಕಾರ ನಡೆಸುವ ಕೆ-ಸೆಟ್ ಪರೀಕ್ಷೆ ಪಾಸಾದ ಮೇಲೂ ಪದವಿ ಕಾಲೇಜಿಗೆ ಸಹಾಯಕ ಪ್ರಾಧ್ಯಾಪಕರಾಗಲು ಮತ್ತೊಂದು ಪ್ರವೇಶ ಪರೀಕ್ಷೆ ಪಡೆಯುವುದು ಯಾವ ನ್ಯಾಯ? ಒಎಂಆರ್ ಶೀಟ್ ಮೂಲಕ ನಡೆಸುವ ಪರೀಕ್ಷಾ ಫಲಿತಾಂಶವನ್ನು ಪರೀಕ್ಷೆ ಮುಗಿದ ನಂತರ ಸ್ಕ್ಯಾನ್ ಮಾಡಿದ ತಕ್ಷಣವೇ ಪ್ರಕಟಿಸಬೇಕು ಅಥವಾ ಮೊಬೈಲಿಗೆ ತಕ್ಷಣವೇ ಫಲಿತಾಂಶದ ಸಂದೇಶ ರವಾನೆಯಾಗಬೇಕು. ಒಎಂಆರ್ ಶೀಟ್ ಬಳಸಿ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಇದೇ ವಿಧಾನ ಬಳಸಬೇಕು; ಕೆಪಿಎಸ್‌ಸಿಯೂ ಸೇರಿದಂತೆ.
ಯುಪಿಎಸ್‌ಸಿ ಮಾದರಿಯಲ್ಲಿ ಕೆಪಿಎಸ್‌ಸಿ ಕಾರ್ಯನಿರ್ವಹಣೆ ಮಾಡುವುದೆಂದು ಹೇಳಿದರೇನೇ ಎಲ್ಲ ಐಎಎಸ್ ಅಧಿಕಾರಿಗಳಿಗೆ ಅದರ ಮಾದರಿ ಅಂತಹುದು ಎನ್ನುವುದು ಅರ್ಥವಾಗುತ್ತದೆ. ತಂತ್ರಜ್ಞಾನ ಬಳಸಿಯೋ ಅಥವಾ ಕಠಿಣ ಪರೀಕ್ಷಾ ಪದ್ಧತಿ ಅಳವಡಿಸಿಯೋ ಪಾರದರ್ಶಕತೆ ತರಬಹುದು. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೆಪಿಎಸ್‌ಸಿ ಸದಸ್ಯರು ಮತ್ತು ಅಧ್ಯಕ್ಷರ ನೇಮಕಾತಿಯಲ್ಲಿ ಅಪ್ಪಟ ಪ್ರಾಮಾಣಿಕರಿಗೇ ಮಣೆ ಹಾಕಬೇಕು. ಇತ್ತೀಚೆಗೆ ಕೆಪಿಎಸ್‌ಸಿ ಸದಸ್ಯರಾಗಿ ನೇಮಕಗೊಂಡ ಒಬ್ಬರು ಪರಮ ಭ್ರಷ್ಟ ಮತ್ತು ಅಪರಾಧಿ ಹಿನ್ನೆಲೆ ಉಳ್ಳವರು. ಇಂತಹ ಪರಮ ಭ್ರಷ್ಟರು ಸದಸ್ಯರಾಗಿ ನೇಮಕಗೊಂಡರೆ ಯಾವ ಮಾದರಿ ತಂದರೂ ಯಾಮಾರಿಸಿ ಹಣ ಮಾಡುತ್ತಾರೆ. ಕೆಪಿಎಸ್‌ಸಿ ಆರಂಭದ ವರ್ಷಗಳಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಜಾತಿ ಪ್ರಧಾನ ಪಾತ್ರ ವಹಿಸುತ್ತಿತ್ತು. ಸಹಜವಾಗಿಯೇ ಜಾತಿ ಆಧಾರಿತ ನೇಮಕಾತಿಗಳು ನಡೆಯುತ್ತಿದ್ದವು. ಆಗ ಹಣದ ಪ್ರಭಾವ ಕಡಿಮೆ ಇತ್ತು. ಎಚ್.ಎನ್. ಕೃಷ್ಣ ಅವರು ಅಧ್ಯಕ್ಷರಾಗಿದ್ದಾಗ ನಡೆದ ನೇಮಕಾತಿಯಲ್ಲಿ ‘ಜಾತಿ’ಯ ತಾಂಡವ ನೃತ್ಯ ಎದ್ದು ಕಾಣುತ್ತದೆ. ಡಾ. ಮಂಗಳ ಶ್ರೀಧರ್ ಕೆಪಿಎಸ್‌ಸಿಯಲ್ಲಿ ಬಹುದೊಡ್ಡ ಕಳಂಕದ ಅಧ್ಯಾಯ ಬರೆದು ಹೋದರು. ಅವರ ಗಾಡ್‌ಫಾದರ್ ಸಂತೋಷ್‌ಗೆ ಪಾಪಪ್ರಜ್ಞೆ ಈ ಕಾಡಲೇ ಇಲ್ಲ. ಅಧ್ಯಕ್ಷರು, ಸದಸ್ಯರ ನೇಮಕಾತಿಯಲ್ಲಿ ಹಣದ ವಹಿವಾಟು ನಡೆದಾಗಲೆಲ್ಲ; ಕೆಪಿಎಸ್‌ಸಿ ನೌಕರಿಯ ದರ ಜಾಸ್ತಿಯಾಗಿದೆ. ಕೆಪಿಎಸ್‌ಸಿ ಯುಪಿಎಸ್‌ಸಿ ಮಾದರಿಯಲ್ಲಿ ವಿಶ್ವಾಸಾರ್ಹತೆ ಗಳಿಸಬೇಕೆಂದರೆ ಮೊದಲು ಭ್ರಷ್ಟರನ್ನು ದೂರವಿಡಬೇಕು. ಎಲ್ಲಕ್ಕೂ ಮಿಗಿಲಾಗಿ ಕೆಪಿಎಸ್‌ಸಿಗೆ ಪ್ರಾಮಾಣಿಕ, ದಕ್ಷ ಮತ್ತು ಯಾರಿಗೂ ಜಗ್ಗದ, ಬಗ್ಗದ ಐಎಎಸ್ ಅಧಿಕಾರಿಯನ್ನು ಕಾರ್ಯದರ್ಶಿ ಸ್ಥಾನದಲ್ಲಿ ಕೂರಿಸಬೇಕು. ಹಾಕಿದ ಬಂಡವಾಳ ತೆಗೆಯಲು ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ ಎಂದು ಮನವರಿಕೆಯಾದರೆ ಯಾವ ಭ್ರಷ್ಟನೂ ಕೆಪಿಎಸ್‌ಸಿ ಸದಸ್ಯನಾಗಲು ಬಯಸುವುದಿಲ್ಲ. ನೇಮಕಾತಿ ಆಯ್ಕೆ ಪ್ರಕ್ರಿಯೆಯಲ್ಲಿ ಕೆಪಿಎಸ್‌ಸಿ ಸದಸ್ಯರು ನೀಡುವ ಅಂಕಗಳು ನಿರ್ಣಾಯಕವಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಡವಾಗಿಯಾದರೂ ಕೆಪಿಎಸ್‌ಸಿಯಲ್ಲಿ ಗುಣಾತ್ಮಕ ಸುಧಾರಣೆ ತರಲು ಮುಂದಾಗಿದ್ದು ಅತ್ಯಂತ ಶ್ಲಾಘನೀಯ ಕಾರ್ಯ. ಪ್ರತಿಪಕ್ಷಗಳು ಮತ್ತು ಹಿತಶತ್ರುಗಳು ಎಷ್ಟೇ ಮಸಿ ಬಳಿಯಲು ಯತ್ನಿಸಿದರೂ ಇಂತಹ ವಿಧಾಯಕ ಕಾರ್ಯಗಳು ಸಿದ್ದರಾಮಯ್ಯ ಅವರನ್ನು ‘ಹೀರೋ’ ಸ್ಥಾನದಲ್ಲಿ ನಿಲ್ಲಿಸುತ್ತವೆ. ಕೆಪಿಎಸ್‌ಸಿಯು ಯುಪಿಎಸ್‌ಸಿ ಮಾದರಿಯಲ್ಲಿ ಕಾರ್ಯ ನಿರ್ವಹಣೆ ಮಾಡುವಂತಾದರೆ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳು ಮುಖ್ಯಮಂತ್ರಿಗೆ ಮನದಾಳದಿಂದ ಹರಸುತ್ತಾರೆ.