ಕೆಪಿಎಸ್‌ಸಿ ಎಂಬ ಭ್ರಷ್ಟರ ಕೂಪ

ಕೆಪಿಎಸ್‌ಸಿ ಎಂದೇ ಜನಜನಿತವಾಗಿರುವ (ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್) ಕರ್ನಾಟಕ ಲೋಕ ಸೇವಾ ಆಯೋಗ ಈಗ ಮತ್ತೆ ಸುದ್ದಿಯಲ್ಲಿದೆ. ಕರ್ನಾಟಕ ಲೋಕಸೇವಾ ಆಯೋಗ ಯಾವತ್ತೂ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿದ್ದ ನಿದರ್ಶನ ದೊರೆಯುವುದಿಲ್ಲ. ಯಥಾ ಪ್ರಕಾರ ಈ ಬಾರಿಯೂ ಅದು ಭ್ರಷ್ಟಾಚಾರ ಮತ್ತು ಅದಕ್ಷತೆಯ ಕಾರಣಕ್ಕೆ ಸುದ್ದಿಯಲ್ಲಿದೆ. ಕರ್ನಾಟಕ ಲೋಕಸೇವಾ ಆಯೋಗ ಅತ್ಯಂತ ಹಳೆಯ ನೇಮಕಾತಿ ಸಂಸ್ಥೆ. ಈ ಬಾರಿ ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಸಾಕಷ್ಟು ಲೋಪಗಳು ಕಂಡು ಬಂದಿದ್ದವು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆಯವರು ಕರ್ನಾಟಕ ಲೋಕಸೇವಾ ಆಯೋಗದ ಆ ತಪ್ಪನ್ನು ಕಟುವಾದ ಪದಗಳಲ್ಲಿ ಟೀಕಿಸಿದ್ದರು. ಮಾತ್ರವಲ್ಲ, ಕನ್ನಡ ತಜ್ಞರ ನೆರವನ್ನು ಬೇಕಾದರೆ ಕೇಳಿ ಎಂದು ಹೇಳಿದ್ದರು. ಕೆಪಿಎಸ್‌ಸಿ ತಾನೂ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ, ಬೇರೆಯವರ ಸಹಾಯ ಪಡೆಯಲು ಪ್ರತಿಷ್ಠೆ ಮಾಡಿಕೊಳ್ಳುತ್ತದೆ. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿ ಮತ್ತೆ ಮತ್ತೆ ಲೋಪಗಳು ಕಂಡು ಬರುತ್ತಿರುವುದರಿಂದ ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ಶೈಲಿಯನ್ನು ಪರೀಕ್ಷೆ ಬರೆದ ಅಭ್ಯರ್ಥಿಗಳು ಮಾತ್ರವಲ್ಲ, ಜನಸಾಮಾನ್ಯರೂ ನಂಬದ ಹಂತ ತಲುಪಿದ್ದಾರೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಮೊದಲಿಂದಲೂ ಕಾರ್ಯದರ್ಶಿ ಮತ್ತು ಆಯೋಗದ ಸದಸ್ಯರ ನಡುವೆ ಸಮನ್ವಯದ ಕೊರತೆ ಇದೆ. ಆಯೋಗದ ಬಹುಪಾಲು ಸದಸ್ಯರು ಅಲ್ಲಿಗೆ ಬಂದಿರುವುದೇ ಹಣ ಮಾಡಲು. ಐಎಎಸ್ ಅಧಿಕಾರಿಯಾಗಿರುವ ಕಾರ್ಯದರ್ಶಿ ತಮ್ಮ ಆದಾಯದ ಮೂಲಕ್ಕೆ ಕಂಟಕವಾಗಬಹುದೆಂದು ಯಾವಾಗಲೂ ಅವರನ್ನು ಅನುಮಾನದಿಂದ ನೋಡುತ್ತಿರುತ್ತಾರೆ. ಕಾರ್ಯದರ್ಶಿ ಕೂಡಾ ಆಯೋಗದ ಅಧ್ಯಕ್ಷ ಮತ್ತು ಸದಸ್ಯರು ಭ್ರಷ್ಟರು ಎಂದು ಪೂರ್ವಗ್ರಹಪೀಡಿತರಾಗಿಯೇ ಬಂದಿರುತ್ತಾರೆ. ಕನ್ನಡ ಪ್ರಶ್ನೆ ಪತ್ರಿಕೆಯಲ್ಲಿನ ಲೋಪಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಾದವು. ಕರ್ನಾಟಕ ಲೋಕಸೇವಾ ಆಯೋಗದ ಇತಿಹಾಸ ಕೆದಕಿ ನೋಡಿದರೆ ಇದಕ್ಕಿಂತ ದೊಡ್ಡ ಹಗರಣಗಳು ನಡೆದು ಹೋಗಿವೆ. ಕರ್ನಾಟಕ ಆಡಳಿತ ಸೇವೆಯ ಹುದ್ದೆಗಳ ಮುಖ್ಯ ಪರೀಕ್ಷೆಯ ಉತ್ತರ ಪತ್ರಿಕೆಯನ್ನು ಖಾಸಗಿ ಹೋಟೆಲ್‌ಗಳಲ್ಲಿ ಬರೆದು ಸಿಕ್ಕಿ ಬಿದ್ದ ನಿದರ್ಶನಗಳು ಇವೆ. ಡಾ. ಮಂಗಳಾ ಶ್ರೀಧರ್ ಎಂಬ ಲೋಕಸೇವಾ ಸದಸ್ಯರೊಬ್ಬರು ಹಗರಣದ ಕಾರಣಕ್ಕೆ ದೊಡ್ಡ ಸುದ್ದಿಯಾಗಿ ಅವರ ಸದಸ್ಯತ್ವಕ್ಕೆ ಕುತ್ತು ಬಂದಿತ್ತು.
ಕರ್ನಾಟಕ ಲೋಕಸೇವಾ ಆಯೋಗ ಆರಂಭದ ದಿನಮಾನಗಳಲ್ಲಿ ಭ್ರಷ್ಟಾಚಾರದಿಂದ ದೂರವೇ ಉಳಿದಿತ್ತು. ಆದರೆ ಸ್ವಜನ ಪಕ್ಷಪಾತ ಮತ್ತು ಜಾತೀಯತೆ ಆಯೋಗಕ್ಕೆ ತಗಲಿದ ಹಳೆಯ ರೋಗಗಳು. ಒಟ್ಟು ಹೇಳಬೇಕೆಂದರೆ; ಕರ್ನಾಟಕ ಲೋಕಸೇವಾ ಆಯೋಗ ಹುಟ್ಟಿದಾಗಿನಿಂದ ಪ್ರತಿಭಾವಂತ ಅಭ್ಯರ್ಥಿಗಳ ಪಾಲಿಗೆ ಶತ್ರುವಾಗಿ ಪರಿಣಮಿಸಿದೆ. ಒಂದು ಕಾಲಕ್ಕೆ ತಾಳಿ ಭಾಗ್ಯಕ್ಕೆ ಕರ್ನಾಟಕ ಲೋಕಸೇವಾ ಆಯೋಗ ಹೆಸರುವಾಸಿಯಾಗಿತ್ತು. ಕರ್ನಾಟಕ ಆಡಳಿತ ಸೇವೆಗಾಗಿ ಪರೀಕ್ಷೆ ಬರೆದ ಅಭ್ಯರ್ಥಿ ಪ್ರಭಾವಿ ವ್ಯಕ್ತಿಗಳ ಮಗಳನ್ನು ಮದುವೆಯಾದರೆ ನೌಕರಿ ಗ್ಯಾರಂಟಿ ಸಿಗುತ್ತಿತ್ತು. ಅದನ್ನೇ ತಾಳಿಭಾಗ್ಯ ಎಂದು ಜನಪ್ರಿಯ ಮಾಡಿದ್ದರು.
ಕಳೆದ ಇಪ್ಪತ್ತು ವರ್ಷಗಳಿಂದ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ತಾಳಿ ಭಾಗ್ಯ ಪದ್ಧತಿ ಮಹತ್ವ ಕಳೆದುಕೊಂಡಿದೆ. ಈಗ ಥೈಲಿ ಭಾಗ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ. ‘ಕಾಂಚಾಣಂ ಕಾರ್ಯಸಿದ್ಧಿ’ ಎಂಬ ಮಾತಿಗೆ ಬಲ ಬಂದಿದೆ.
ಕರ್ನಾಟಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು ಕರ್ನಾಟಕ ಲೋಕಸೇವಾ ಆಯೋಗದ ವರದಿಯೊಂದನ್ನು ಇಟ್ಟುಕೊಂಡು ಮಹತ್ವದ ಹಗರಣ ಬಯಲು ಮಾಡುತ್ತಿದ್ದೇನೆ ಎಂಬ ಭ್ರಮೆಯಲ್ಲಿ ವಾದ ಮಂಡಿಸುತ್ತಿದ್ದರು. ಪಾಪ ಅಶೋಕ್ ಅವರಿಗೆ ಆಯೋಗದ ಆಳ,ಅಗಲ ತಿಳಿದಿಲ್ಲವೆಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿತ್ತು. ಕರ್ನಾಟಕ ಲೋಕಸೇವಾ ಆಯೋಗದ ಉಪಸಮಿತಿಯು ಸಹಾಯಕ ಕಾರ್ಯಪಾಲಕ ಅಭಿಯಂತರ ಹುದ್ದೆಗಳಿಗೆ ನಡೆದ ಪ್ರವೇಶ ಪರೀಕ್ಷೆಯಲ್ಲಿ ಒಎಂಆರ್ ಶೀಟ್‌ಗಳನ್ನು ತಿದ್ದಿದ ಪ್ರಕರಣವೊಂದನ್ನು ಪತ್ತೆ ಹಚ್ಚಿದೆ. ಸುಮಾರು ಐದು ನೂರು ಪುಟಗಳ ತನಿಖಾ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ. ಒಎಂಆರ್ ಶೀಟಿನ ಪ್ರಶ್ನೆ ಪತ್ರಿಕೆಯಲ್ಲಿ ಕೆಲವೇ ಪ್ರಶ್ನೆಗಳಿಗೆ ಅಭ್ಯರ್ಥಿ ಉತ್ತರಿಸಿ ಉಳಿದ ಪ್ರಶ್ನೆಗಳಿಗೆ ಆಯೋಗದವರೇ ತಿದ್ದಿದ ಮತ್ತು ಟ್ಯಾಂಪೆರ್ ಮಾಡಿದ್ದನ್ನು ಎಫ್‌ಎಸ್‌ಎಲ್ ವರದಿಯ ಸಹಿತ ವರದಿಯಲ್ಲಿ ದಾಖಲಿಸಿದ್ದನ್ನು ಸದನಕ್ಕೆ ಓದಿ ಹೇಳುತ್ತಿದ್ದರು. ಕರ್ನಾಟಕ ಲೋಕಸೇವಾ ಆಯೋಗದ ಈ ಹಗರಣ ಅತ್ಯಂತ ಸಣ್ಣದು. ಆದರೆ ಸ್ವತಃ ಆಯೋಗದ ಸದಸ್ಯರೇ ಹೊರ ಹಾಕಿದ್ದರಿಂದ ಒಎಂಆರ್ ಶೀಟನ್ನು ಟ್ಯಾಂಪೆರ್ ಮಾಡಲಾಗುತ್ತದೆ ಎಂಬ ಉಹಾ ಪೋಹದ ಮಾತುಗಳಿಗೆ ಆಯೋಗವೆ ಸಾಕ್ಷಿ ಒದಗಿಸಿದೆ.
ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಅರ್ಜಿ ಹಾಕಿದ ಮರು ಕ್ಷಣದಿಂದಲೇ ಹಗರಣ ಶುರು ಆಗುತ್ತದೆ ಎಂಬ ಆರೋಪಕ್ಕೆ ಆಯೋಗ ಮುದ್ರೆ ಒತ್ತಿದೆ. ಆಯೋಗದಲ್ಲಿನ ಕೆಲ ಅಮಾಯಕ ಸದಸ್ಯರು; ಪ್ರವೇಶ ಪರೀಕ್ಷೆಯ ಫಲಿತಾಂಶ ಹೊರಬರಲಿ, ಆ ಪರೀಕ್ಷೆಯಲ್ಲಿನ ಅಂಕಗಳ ಆಧಾರದ ಮೇಲೆ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಆಗ ನಮ್ಮ ಪಾತ್ರ ಶುರುವಾಗುತ್ತದೆ ಎಂದೇ ಭಾವಿಸಿದ್ದರು. ಪಿಎಸ್‌ಐ ಪರೀಕ್ಷೆ, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಲ್ಲ ಪ್ರವೇಶ ಪರೀಕ್ಷೆಗಳು ಸೇರಿ, ಒಎಂಆರ್ ಶೀಟುಗಳು ಬಳಸಿ ನಡೆಸುವ ಎಲ್ಲ ಪ್ರವೇಶ ಪರೀಕ್ಷೆಗಳಲ್ಲಿ ಉತ್ತರ ಪತ್ರಿಕೆಯನ್ನು ಟ್ಯಾಂಪೆರ್ ಮಾಡುತ್ತಾ ಬರಲಾಗಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಪ್ರವೇಶ ಪರೀಕ್ಷೆಯನ್ನು ಮ್ಯಾನೇಜ್ ಮಾಡಲು ಸಾಧ್ಯ ಇರಲಿಲ್ಲ. ಈಗ ಮೊದಲ ದಿನದಿಂದಲೇ ಎಲ್ಲವನ್ನು ಮ್ಯಾನೇಜ್ ಮಾಡಬಹುದು ಎನ್ನುವುದನ್ನು ಕೆಪಿಎಸ್‌ಸಿ ಸೇರಿದಂತೆ ಎಲ್ಲ ಪರೀಕ್ಷಾ ಪ್ರಾಧಿಕಾರಗಳು ತೋರಿಸಿಕೊಟ್ಟಿವೆ. ಕೆಲ ಹಗರಣಗಳು ಬಯಲಿಗೆ ಬಂದಿವೆ. ಎಷ್ಟೋ ಹಗರಣಗಳನ್ನು ಮುಚ್ಚಿ ಹಾಕಲಾಗಿದೆ.
ಇಪ್ಪತ್ತು ವರ್ಷಗಳ ಹಿಂದೆ, ಬಹು ಆಯ್ಕೆ ಪ್ರಶ್ನೆಗಳ ಪರೀಕ್ಷೆ, ಮುಖ್ಯ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿ ಸಂದರ್ಶನಕ್ಕೆ ಅರ್ಹತೆ ಹಗರಣಗಳ ಚರ್ಚೆ, ಸಂದರ್ಶನಕ್ಕೆ ಅರ್ಹತೆ ಗಳಿಸಿದ ಮೇಲೆಯೇ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನು ಅಥವಾ ಎಜೆಂಟರನ್ನು ಕಂಡು ವ್ಯವಹಾರ ಕುದುರಿಸಲಾಗುತ್ತಿತ್ತು. ಈಗ ಅರ್ಜಿ ಹಾಕಿದ ದಿನದಿಂದಲೇ ಮ್ಯಾನೇಜ್ ಮಾಡಲಾಗುತ್ತಿದೆ. ಪ್ರವೇಶ ಪರೀಕ್ಷೆ, ಮುಖ್ಯ ಪರೀಕ್ಷೆಗಳನ್ನು ಮ್ಯಾನೇಜ್ ಮಾಡುವ ಕಲೆಯನ್ನು ಆ ಸಂಸ್ಥೆಯಲ್ಲಿ ಇರುವವರು ಕರಗತ ಮಾಡಿಕೊಂಡಿದ್ದಾರೆ.
ವಿಧಾನಸಭೆಯ ಚರ್ಚೆಯ ಸಂದರ್ಭದಲ್ಲಿ ಕೆಲವು ಸದಸ್ಯರು ಭಾವಾವೇಶದಲ್ಲಿ ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟರ ಕೂಪವಾಗಿದೆ, ಅದನ್ನು ಮುಚ್ಚಿ ಬಿಡಬೇಕು ಎಂದು ಹೇಳುತ್ತಿದ್ದರು.
ಕರ್ನಾಟಕ ಲೋಕಸೇವಾ ಆಯೋಗಕ್ಕಿಂತಲೂ ಹೆಚ್ಚು ಬೇರೆ ಪರೀಕ್ಷಾ ಪ್ರಾಧಿಕಾರಗಳು ಭ್ರಷ್ಟಗೊಂಡಿವೆ. ಬಿಜೆಪಿ ಸರಕಾರ ಅಧಿಕಾರದಲ್ಲಿ ಇದ್ದಾಗ ಪಿಎಸ್‌ಐ ನೇಮಕಾತಿ ಹಗರಣ ನಡೆಯಿತು. ಆಗ ಪಿಎಸ್‌ಐ ನೇಮಕಾತಿಗಾಗಿಯೇ ಪ್ರತ್ಯೇಕ ಪರೀಕ್ಷಾ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್ ಇಲಾಖೆಯೇ ಅದನ್ನು ನಿಯಂತ್ರಿಸುತ್ತಿತ್ತು. ಆಗ ನಡೆದ ಪ್ರವೇಶ ಪರೀಕ್ಷೆಯಲ್ಲೇ ಭಾರೀ ಅಕ್ರಮಗಳು ಎಸಗಲಾಯಿತು. ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಸಿಕ್ಕಿ ಬಿದ್ದ. ಪ್ರವೇಶ ಪರೀಕ್ಷೆಯ ಒಎಂಆರ್ ಶೀಟ್‌ಗಳನ್ನು ಟ್ಯಾಂಪೆರ್ ಮಾಡಲಾಯಿತು. ಆ ಹಗರಣದ ತನಿಖೆಯನ್ನು ಸಮರ್ಪಕವಾಗಿ ನಡೆಸಿದರೆ ಅದರ ವಿರಾಟ್ ಸ್ವರೂಪ ಬಯಲಿಗೆ ಬರುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ಭ್ರಷ್ಟಗೊಂಡಿದೆ ಎಂದು ಹೇಳಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಎಂಆರ್ ಶೀಟ್‌ಗಳನ್ನು ಟ್ಯಾಂಪೆರ್ ಮಾಡುವುದನ್ನು ಕರಗತ ಮಾಡಿಕೊಂಡು ಹಣ ನೀಡಿದವರಿಗೆ ಹುದ್ದೆ ನೀಡಿ ಮತ್ತಷ್ಟು ಗುಣಮಟ್ಟವನ್ನು ಹಾಳು ಮಾಡಿತು. ಕರ್ನಾಟಕ ಲೋಕಸೇವಾ ಆಯೋಗ ಹೆಚ್ಚು ಅಂಕ ಗಳಿಸಿದ ಮೊದಲ ಐದು ಜನರಲ್ಲಿ ಒಬ್ಬರನ್ನು ಪದವಿ ಕಾಲೇಜುಗಳಿಗೆ ಸಹಾಯಕ ಪ್ರಾಧ್ಯಾಪಕರನ್ನಾಗಿ ಆಯ್ಕೆ ಮಾಡುತ್ತಿತ್ತು. ಆದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅರ್ಜಿ ಹಾಕಿದ ಎಲ್ಲ ಅಭ್ಯರ್ಥಿಗಳನ್ನು ಸ್ಪರ್ಧಾ ಕಣದಲ್ಲಿ ಇರುವಂತೆ ಮಾಡಿತು. ಸ್ನಾತಕೋತ್ತರ ಪದವಿಯಲ್ಲಿ ಕೇವಲ 55 ಪ್ರತಿಶತ ಅಂಕ ಗಳಿಸಿದ ವ್ಯಕ್ತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದವರನ್ನು ಸಂಪರ್ಕಿಸಿ ಹಣ ನೀಡಿದರೆ ಆತನಿಗೆ ನೌಕರಿ ಪಕ್ಕಾ ಆಗುತ್ತಿತ್ತು. ಆದರೆ ಸ್ನಾತಕೋತ್ತರ ಪದವಿಯಲ್ಲಿ 85 ಪ್ರತಿಶತ ಅಂಕ ಗಳಿಸಿದ ವ್ಯಕ್ತಿ ಲಂಚ ನೀಡದಿದ್ದರೆ ಆತ ಒಎಂಆರ್ ಶೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿ ನೌಕರಿಯಿಂದ ವಂಚಿತನಾಗುತ್ತಿದ್ದ. ಒಎಂಆರ್ ಶೀಟ್ ಟ್ಯಾಂಪೆರ್ ಮಾಡುವುದು ಸಾಧ್ಯ ಇಲ್ಲ ಎಂದೇ ಹಲವು ವರ್ಷಗಳ ಕಾಲ ಭಾವಿಸಲಾಗಿತ್ತು.
ಈಗ ಕರ್ನಾಟಕ ಲೋಕಸೇವಾ ಆಯೋಗ ಸೇರಿ ಎಲ್ಲೆಡೆ ಒಎಂಆರ್ ಶೀಟ್ ಟ್ಯಾಂಪೆರ್ ಮಾಡಬಹುದು ಎಂಬುದು ಎಫ್‌ಎಸ್‌ಎಲ್ ವರದಿಯಿಂದ ಸಾಬೀತಾಗಿದೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಥವಾ ಯಾವುದೇ ಪರೀಕ್ಷಾ ಪ್ರಾಧಿಕಾರಕ್ಕೆ ನೇಮಕಾತಿ ಕೆಲಸ ವಹಿಸಿದರೂ ಭ್ರಷ್ಟಾಚಾರ ತಡೆಯಲು ಸಾಧ್ಯವಿಲ್ಲ ಎನ್ನುವಂತಾಗಿದೆ.
ಕರ್ನಾಟಕ ಲೋಕಸೇವಾ ಆಯೋಗವನ್ನು ಮುಚ್ಚುವುದರ ಬದಲು ಅದನ್ನು ಸುಧಾರಿಸುವುದರತ್ತ ಗಮನ ಹರಿಸಬೇಕಿದೆ. ಕೇಂದ್ರ ಲೋಕಸೇವಾ ಆಯೋಗವೂ ಒಂದು ಸರಕಾರಿ ಸಂಸ್ಥೆ. ಅಲ್ಲಿಯೂ ಉಪ್ಪು, ಹುಳಿ, ಖಾರ ತಿನ್ನುವ ಮನುಷ್ಯರೇ ಕೆಲಸ ಮಾಡುತ್ತಿರುತ್ತಾರೆ. ಅಲ್ಲಿ ಪಾರದರ್ಶಕ ವ್ಯವಸ್ಥೆ ಹುಟ್ಟು ಹಾಕಲು ಸಾಧ್ಯವಾಗಿದೆಯೆಂದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲೂ ಅತ್ಯುತ್ತಮ ವ್ಯವಸ್ಥೆ ನಿರ್ಮಿಸಲು ಯಾಕೆ ಸಾಧ್ಯವಿಲ್ಲ? ಹಾಗೆ ನೋಡಿದರೆ ಕೇಂದ್ರ ಲೋಕಸೇವಾ ಆಯೋಗವನ್ನು ಒಂದೇ ದಿನದಲ್ಲಿ ಪರಿಪೂರ್ಣ ಸಂಸ್ಥೆಯನ್ನಾಗಿ ರೂಪಿಸಿಲ್ಲ. ಬ್ರಿಟಿಷ್ ಕಾಲದಲ್ಲಿ ಅದರ ಸ್ವರೂಪ ಬೇರೆಯಿತ್ತು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಜವಾಹರಲಾಲ್ ನೆಹರೂ ಅವರ ಕಾಲಕ್ಕೆ ಮತ್ತಷ್ಟು ಸುಧಾರಣೆಗಳನ್ನು ತಂದರು.
ಈ ಹೊತ್ತು ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಆಡಳಿತ ನಡೆಸುತ್ತಿದ್ದರೂ ಕೇಂದ್ರ ಲೋಕಸೇವಾ ಆಯೋಗದ ವ್ಯವಸ್ಥೆಯನ್ನು ಹೆಚ್ಚು ವಿರೂಪಗೊಳಿಸಲು ಸಾಧ್ಯವಾಗಿಲ್ಲ. ಹೆಚ್ಚೆಂದರೆ ಹಿಂಬಾಗಿಲ ಪ್ರವೇಶದ ಮೂಲಕ ಕೆಲವರನ್ನು ಆಡಳಿತ ಸೇವೆಯಲ್ಲಿ ತಂದಿರಬಹುದು. ಈಗಲೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ನಿಯಮಿತ ಸಮಯಕ್ಕೆ ನಡೆಯುತ್ತವೆ. ಅಕ್ರಮಗಳಿಗೆ ಅವಕಾಶವಿಲ್ಲದಂತೆ ನಡೆಸುತ್ತಾರೆ. ಒಂದು ಕಾಲದಲ್ಲಿ ಅಲ್ಲಿಯೂ ಒಎಂಆರ್ ಶೀಟನ್ನು ಬಳಸಲಾಗಿತ್ತು. ಅದರ ಮಿತಿ ಕಂಡುಕೊಂಡು ಬದಲಾವಣೆ ಮಾಡಿದರು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಇರುವಂತೆ ಅಲ್ಲಿಯೂ ಸದಸ್ಯರು ಮತ್ತು ಅಧ್ಯಕ್ಷ ಇರುತ್ತಾರೆ. ಕೇಂದ್ರ ಲೋಕಸೇವಾ ಆಯೋಗ ಹಾದಿ ಬೀದಿ ಹಗರಣ ಮಾಡಿಕೊಂಡ ನಿದರ್ಶನ ದೊರೆಯುವುದಿಲ್ಲ.
ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಪ್ರಧಾನಮಂತ್ರಿ ಶಿಫಾರಸಿನ ಮೇರೆಗೆ ರಾಷ್ಟ್ರಪತಿ ನೇಮಕ ಮಾಡುತ್ತಾರೆ. ರಾಜ್ಯದಲ್ಲಿ ಮುಖ್ಯಮಂತ್ರಿ ಶಿಫಾರಸಿನ ಮೇರೆಗೆ ರಾಜ್ಯಪಾಲರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುತ್ತಾರೆ.
ಆದರೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಕೇಂದ್ರ ಲೋಕಸೇವಾ ಆಯೋಗದಲ್ಲಿನ ಪಾರದರ್ಶಕತೆ, ಶಿಸ್ತು ಮತ್ತು ಪ್ರಾಮಾಣಿಕ ವ್ಯವಸ್ಥೆ ರೂಪಿಸಲು ಸಾಧ್ಯವಾಗುತ್ತಿಲ್ಲ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಯಲ್ಲಿ ಹಣದ ವಹಿವಾಟು ನಡೆಯುತ್ತದೆ ಎಂದು ಹೇಳಲಾಗುತ್ತದೆ. ನಾನೇ ಕಂಡಂತೆ ಹಣ ಇಲ್ಲದೆಯೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಸದಸ್ಯರಾಗಿ ನೇಮಕವಾದ ನಿದರ್ಶನಗಳಿವೆ. ಹಣ ಕೊಡದೆ ಸದಸ್ಯರಾದವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕಲ್ಲ. ಅವರೂ ಹುದ್ದೆ ಅಲಂಕರಿಸಿದ ದಿನದಿಂದಲೇ ಹಣ ಮಾಡಲು ಹಾದಿ ಕಂಡು ಕೊಳ್ಳುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆಯಲ್ಲೇ ಗಂಭೀರ ಸ್ವರೂಪದ ಲೋಪಗಳು ಇರುವುದರಿಂದ ಅವರೆಲ್ಲ ಹಣ ಮಾಡುತ್ತಿದ್ದಾರೆ. ಒಮ್ಮೆ ಒಂದು ಹುದ್ದೆ ಪಡೆಯಲು ಹಣ ನೀಡುವ ಅಧಿಕಾರಿಗಳು ಜೀವನದುದ್ದಕ್ಕೂ ಹಣ ಮಾಡುತ್ತಲೇ ಇರುತ್ತಾರೆ. ಹಾಗೆ ನೋಡಿದರೆ ಭ್ರಷ್ಟಾಚಾರದ ಮೂಲ ಇರುವುದೇ ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ. ಕರ್ನಾಟಕ ಲೋಕಸೇವಾ ಆಯೋಗವೂ ಸೇರಿದಂತೆ ಎಲ್ಲ ನೇಮಕಾತಿ ಪ್ರಾಧಿಕಾರಗಳು ಲಂಚ ಪಡೆಯದೆ ನೌಕರಿ ನೀಡಿದರೆ ವ್ಯವಸ್ಥೆ ಒಂದಷ್ಟು ಸುಧಾರಿಸುತ್ತದೆ.
ಕರ್ನಾಟಕ ಲೋಕಸೇವಾ ಆಯೋಗ ಅಶಿಸ್ತಿನ ಆಗರವಾಗಿರುವುದು ಒಂದು ಭಾಗವಾದರೆ, ಆದು ಭ್ರಷ್ಟಾಚಾರದ ಕೂಪವಾಗಿದ್ದು ಗಂಭೀರ ಸ್ವರೂಪದ ರೋಗವಾಗಿದೆ. ಅಶಿಸ್ತನ್ನು ಸಣ್ಣ ಪುಟ್ಟ ಚಿಕಿತ್ಸೆಯಿಂದ ಗುಣಪಡಿಸಬಹುದು. ಆದರೆ ಭ್ರಷ್ಟಾಚಾರದಂತಹ ಗಂಭೀರ ಸ್ವರೂಪದ ಕಾಯಿಲೆಗೆ ಸರ್ಜರಿ ಅಗತ್ಯ. ಇಡೀ ವ್ಯವಸ್ಥೆಯನ್ನೇ ಮರು ಸಂಘಟಿಸಬೇಕು. ಮುಖ್ಯಮಂತ್ರಿಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿದರೆ ಲೋಕಸೇವಾ ಆಯೋಗದ ಕಾಯಕಲ್ಪ ಕಷ್ಟದ ಕೆಲಸವೇನಲ್ಲ. ಕೇಂದ್ರ ಲೋಕಸೇವಾ ಆಯೋಗದ ಮಾದರಿಯಲ್ಲಿ ಅಥವಾ ಅದಕ್ಕಿಂತಲೂ ಅತ್ಯುತ್ತಮ ಎನಿಸುವ ಮಾದರಿಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ವ್ಯವಸ್ಥೆಯನ್ನು ಮರು ರೂಪಿಸಿದರೆ ತನ್ನಿಂತಾನೇ ಭ್ರಷ್ಟಾಚಾರ ರಹಿತ ವ್ಯವಸ್ಥೆ ಕೆಲಸ ಮಾಡತೊಡಗುತ್ತದೆ. ಅದು ಬ್ರಹ್ಮ ವಿದ್ಯೆಯೇನಲ್ಲ. ಈಗಾಗಲೇ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆಯನ್ನು ನಾವು ಅಳವಡಿಸಿಕೊಳ್ಳಬೇಕಷ್ಟೆ. ಆಡಳಿತ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಕಡಿಮೆಯಾದರೆ ಜನಸಾಮಾನ್ಯರು ನೆಮ್ಮದಿಯಿಂದ ಬದುಕುತ್ತಾರೆ. ರಾಜಕೀಯ ಕ್ಷೇತ್ರದಲ್ಲಿನ ಭ್ರಷ್ಟಾಚಾರ ನಿವಾರಣೆಗೆ ಚುನಾವಣಾ ಪದ್ಧತಿಯಲ್ಲಿ ಬದಲಾವಣೆ ತರಬೇಕು. ಮೊದಲು ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಬದಲಾವಣೆ ತಂದರೆ ಅಷ್ಟರ ಮಟ್ಟಿಗೆ ಕರ್ನಾಟಕ ಸರಕಾರ ಕ್ರಾಂತಿಕಾರಿ ಹೆಜ್ಜೆ ಇಟ್ಟಂತೆ. ಇಲ್ಲದಿದ್ದರೆ ಕರ್ನಾಟಕ ಲೋಕಸೇವಾ ಆಯೋಗದವರೇ ನೀಡಿದ ಭ್ರಷ್ಟಾಚಾರ ಕುರಿತ ವರದಿಯನ್ನು ಇಟ್ಟುಕೊಂಡು ಒಣ ಚರ್ಚೆಗೆ ಸದನ ಸಾಕ್ಷಿಯಾಗಬೇಕಷ್ಟೆ. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಹಲವು ಕ್ಷೇತ್ರಗಳಲ್ಲಿ ದೂರ ದೃಷ್ಟಿ ಇಟ್ಟುಕೊಂಡು ವ್ಯವಸ್ಥೆಯನ್ನು ರೂಪಿಸಿದ್ದಾರೆ. ಆಡಳಿತ, ಶಿಕ್ಷಣ, ಬಾಹ್ಯಾಕಾಶದಂತಹ ಕ್ಷೇತ್ರಗಳಲ್ಲಿ ನೆಹರೂ ಮಾದರಿಯೇ ಸರ್ವಶ್ರೇಷ್ಠವಾಗಿ ಮುಂದುವರಿದಿದೆ. ಅಂತಹ ಶ್ರೇಷ್ಠ ಮಾದರಿಯನ್ನು ಕರ್ನಾಟಕ ಲೋಕಸೇವಾ ಆಯೋಗದ ಕಾಯಕಲ್ಪಕ್ಕೆ ಬಳಸಿದರೆ ಪಾರದರ್ಶಕ ಆಡಳಿತದ ದೃಷ್ಟಿಯಿಂದ ಅತ್ಯುತ್ತಮ ಬೆಳವಣಿಗೆ ಎನಿಸಿಕೊಳ್ಳುತ್ತದೆ. ಕರ್ನಾಟಕ ಲೋಕಸೇವಾ ಆಯೋಗ ನಿಜವಾದ ಅರ್ಥದಲ್ಲಿ ಲೋಕೋಪಯೋಗಿ ಸಂಸ್ಥೆಯಾಗಿ ರೂಪುಗೊಳ್ಳುವಂತಾಗಲಿ.