ಲೋಕಸಭಾ ಚುನಾವಣೆ: ರಾಜ್ಯ ಸರಕಾರಕ್ಕೆ ಸವಾಲು!
Photo: facebook.com/Siddaramaiah.Official
ಭಾರತದ ಸ್ವರಾಜ್ಯ ಎಂದರೆ ಬಹುಮತದ ಕೋಮಿನ ಅಥವಾ ಹಿಂದೂಗಳ ರಾಜ್ಯ ಎನ್ನಲಾಗಿದೆ. ಅದಕ್ಕಿಂತ ದೊಡ್ಡ ತಪ್ಪು ಇನ್ನೊಂದಿಲ್ಲ. ಅದೇ ನಿಜವಾದರೆ ನಾನಂತೂ ಅದನ್ನು ಸ್ವರಾಜ್ಯ ಎನ್ನುವುದಿಲ್ಲ. ನನ್ನ ಎಲ್ಲಾ ಶಕ್ತಿಯಿಂದಲೂ ಅದರ ವಿರುದ್ಧ ಹೋರಾಡುತ್ತೇನೆ. ಏಕೆಂದರೆ, ನನ್ನ ಪಾಲಿಗೆ ಹಿಂದ್ ಸ್ವರಾಜ್ ಎನ್ನುವುದು ಎಲ್ಲ ಜನರ ಆಡಳಿತ, ನ್ಯಾಯದ ಆಡಳಿತ.
-ಮಹಾತ್ಮಾ ಗಾಂಧಿ
ಇನ್ನೇನು ಮೂರ್ನಾಲ್ಕು ತಿಂಗಳಲ್ಲಿ 17ನೇ ಲೋಕಸಭೆಯ ಅವಧಿ ಮುಗಿಯಲಿದೆ. ನಾಲ್ಕೈದು ತಿಂಗಳಲ್ಲಿ 18ನೇ ಲೋಕಸಭೆ ಅಸ್ತಿತ್ವಕ್ಕೆ ಬರಲಿದೆ. 17ನೇ ಲೋಕಸಭೆಯಲ್ಲಿ ಒಟ್ಟು 545 ಸಂಸದರ ಸಂಖ್ಯಾಬಲ ಇದೆ. ಇಬ್ಬರು ನಾಮ ನಿರ್ದೇಶಕ ಆಂಗ್ಲೋ ಇಂಡಿಯನ್ ಸದಸ್ಯರಿದ್ದಾರೆ. 543 ಸಂಸದರ ಸ್ಥಾನಕ್ಕೆ ಚುನಾವಣೆ ನಡೆದು ಎನ್ಡಿಎ ಮೈತ್ರಿಕೂಟದ 353 ಸದಸ್ಯರು ಲೋಕಸಭೆ ಪ್ರವೇಶಿಸಿದ್ದಾರೆ. ಅದರಲ್ಲಿ ಭಾರತೀಯ ಜನತಾ ಪಕ್ಷದ 303 ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೋಗ್ರೆಸ್ಸಿವ್ ಮೈತ್ರಿಕೂಟ 91 ಸೀಟುಗಳಿಗೆ ತೃಪ್ತಿ ಪಟ್ಟು ಕೊಂಡಿದೆ. ಕಾಂಗ್ರೆಸ್ ಕೇವಲ 52 ಸಂಸದರನ್ನು ಗೆಲ್ಲಿಸಿಕೊಂಡು ಅಧಿಕೃತ ವಿರೋಧ ಪಕ್ಷದ ಸ್ಥಾನದಿಂದಲೂ ವಂಚಿತವಾಗಿದೆ. ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯಲು ಪ್ರತಿಶತ ಹತ್ತರಷ್ಟು ಸಂಸದರನ್ನು ಹೊಂದಿರಬೇಕು. 16ನೇ ಲೋಕಸಭೆಗೆ 2014ರ ಎಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆದಿತ್ತು. ಮೊದಲ ಬಾರಿಗೆ ಭಾರತೀಯ ಜನತಾ ಪಕ್ಷ ನರೇಂದ್ರ ಮೋದಿಯವರ ನೇತೃತ್ವದಲ್ಲಿ 282 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಕಾಂಗ್ರೆಸೇತರ ಸ್ಥಿರ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯುವಂತಾಯಿತು. ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 336 ಸಂಸದರ ಸಂಖ್ಯಾಬಲದೊಂದಿಗೆ ಬೀಗುವಂತಾಯಿತು. ಕಾಂಗ್ರೆಸ್ ಕೇವಲ 44 ಸ್ಥಾನಗಳಲ್ಲಿ ಗೆದ್ದು ಅಧಿಕೃತ ವಿರೋಧ ಪಕ್ಷದ ಸ್ಥಾನದಿಂದ ವಂಚಿತವಾಗಿತ್ತು. ಕಾಂಗ್ರೆಸ್ ನೇತೃತ್ವದ ಯುಪಿಎ ಕೇವಲ 59 ಸ್ಥಾನಗಳಿಗೆ ತೃಪ್ತಿಪಟ್ಟು ಕೊಂಡಿತ್ತು.
ಹಾಗೆ ನೋಡಿದರೆ; ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2004ರಿಂದ 2014ರ ವರೆಗೆ ಭಾರತದ ಹಿರಿಯ ಮತ್ತು ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರ ನಾಯಕತ್ವದಲ್ಲಿ ಅತ್ಯುತ್ತಮ ಆಡಳಿತ ನೀಡಿತ್ತು. ಭಾರತ ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗಿತ್ತು. ಹತ್ತು ವರ್ಷಗಳ ಸಾಧನೆಯನ್ನು ಸಮರ್ಥವಾಗಿ ಪ್ರಚಾರ ಮಾಡಿಕೊಳ್ಳಲಿಲ್ಲ. ಆದರೆ ಬಿಜೆಪಿ ಮತ್ತು ಎನ್ಡಿಎ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತರಾದ ನರೇಂದ್ರ ಮೋದಿ ಯುಪಿಎ ಮೈತ್ರಿಕೂಟದ ವೈಫಲ್ಯಗಳನ್ನು, ಭ್ರಷ್ಟಾಚಾರದ ಪ್ರಕರಣಗಳನ್ನು ವ್ಯವಸ್ಥಿತವಾಗಿ ಜನಮಾನಸಕ್ಕೆ ತಲುಪಿಸಿದರು. ಮಾತ್ರವಲ್ಲ; ತಾನು ಪ್ರಧಾನಿಯಾದರೆ ಭಾರತದ ಭವಿಷ್ಯವನ್ನೇ ಬದಲಾಯಿಸುವ ಬಣ್ಣದ ಕನಸುಗಳನ್ನು ಬಿತ್ತಿದರು. ಆಡಳಿತ ವಿರೋಧಿ ಅಲೆ ಸೃಷ್ಟಿಸಿದರು. ಯುವ ಮತದಾರರಿಗೆ ಬೇಕಾದ ‘ಭವಿಷ್ಯದ ಭಾರತ’ದ ಪರಿಣಾಮಕಾರಿಯಾದ ಕಥಾನಕಗಳನ್ನು ಹರಿಬಿಟ್ಟರು. ಮೋದಿ ಪರ ಅಲೆಯೇ ಸೃಷ್ಟಿಯಾಯಿತು. ಕರ್ನಾಟಕದ ಪ್ರಜ್ಞಾವಂತ ಮತದಾರ ಸುಳ್ಳು ಕಥಾನಕಗಳನ್ನು ಸರಳವಾಗಿ ನಂಬುವುದಿಲ್ಲ. ಅಷ್ಟಕ್ಕೂ 2014ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. 2013ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೂರಾಬಟ್ಟೆಯಾಗಿತ್ತು. ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಪಕ್ಷ ತೊರೆದು ಕೆಜೆಪಿ ಕಟ್ಟಿ ಸಾಕಷ್ಟು ಡ್ಯಾಮೇಜ್ ಮಾಡಿದ್ದರು. ಅದರ ಪರಿಣಾಮವಾಗಿ ಬಿಜೆಪಿ ಶಾಸಕರ ಬಲ 40ಕ್ಕೆ ಇಳಿದಿತ್ತು. ಕಾಂಗ್ರೆಸ್ 122 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ವಂತ ಬಲದ ಮೇಲೆ ಅಧಿಕಾರ ಹಿಡಿದಿತ್ತು. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಬಿಜೆಪಿಗೆ ಸಮವಾಗಿ 40 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. 40 ಶಾಸಕರನ್ನು ಹೊಂದಿದ್ದ ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚೆಂದರೆ ಐದರಿಂದ ಆರು ಸಂಸದರನ್ನು ಮಾತ್ರ ಗೆಲ್ಲಿಸುವ ಸಾಮರ್ಥ್ಯ ಪಡೆದಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಶಾಸಕರ ಅನುಪಾತಕ್ಕನುಗುಣವಾಗಿ ಏನಿಲ್ಲವೆಂದರೂ 16 ಸಂಸದರನ್ನು ಗೆಲ್ಲಿಸಿ ಕೊಡಬೇಕಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಿಂದ 9 ಸಂಸದರನ್ನು ಮಾತ್ರ ಗೆಲ್ಲಿಸಿಕೊಟ್ಟಿತ್ತು.
2014ರ ಲೋಕಸಭಾ ಚುನಾವಣೆಗೂ ಮುನ್ನ ಕರ್ನಾಟಕದ ಬಿಜೆಪಿಗೆ ಸಮರ್ಥ ನಾಯಕರೇ ಇರಲಿಲ್ಲ. ಯಡಿಯೂರಪ್ಪ ಕರ್ನಾಟಕ ಜನತಾಪಕ್ಷ ಕಟ್ಟಿ 2013ರ ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿಯನ್ನು ಹೀನಾಯವಾಗಿ ಸೋಲಿಸಿದ್ದರು. ಬಿಜೆಪಿಯಿಂದ ಹೊರ ಬಂದು ಬಿಎಸ್ಆರ್ ಕಾಂಗ್ರೆಸ್ ಪಕ್ಷ ಕಟ್ಟಿದ್ದ ಬಳ್ಳಾರಿಯ ಬಿ. ಶ್ರೀರಾಮುಲು ನಾಲ್ಕು ಶಾಸಕರನ್ನು ಗೆಲ್ಲಿಸಿಕೊಂಡಿದ್ದರು. ಒಡೆದ ಮನೆಯಂತಿದ್ದ ಕರ್ನಾಟಕ ಬಿಜೆಪಿಯನ್ನು ಮೋದಿ-ಅಮಿತ್ ಶಾ ಜೋಡಿ ಎತ್ತಿ ನಿಲ್ಲಿಸಿದರು. ಯಡಿಯೂರಪ್ಪ ಅವರ ಕೆಜೆಪಿ, ಬಿ. ಶ್ರೀರಾಮುಲು ಅವರ ಬಿಎಸ್ಆರ್ ಕಾಂಗ್ರೆಸನ್ನು ಬಿಜೆಪಿಯಲ್ಲಿ ವಿಲೀನವಾಗುವಂತೆ ಮಾಡಿದರು. ಯಡಿಯೂರಪ್ಪನವರ ಸಾಮರ್ಥ್ಯವನ್ನು ಸಮರ್ಪಕವಾಗಿ ಬಳಸಿಕೊಂಡ ಬಿಜೆಪಿಯ ರಾಷ್ಟ್ರೀಯ ನಾಯಕರು ಸೊನ್ನೆಯಾಗಿದ್ದ ಪಕ್ಷದಿಂದ 17 ಸಂಸದರನ್ನು ಗೆಲ್ಲಿಸಿಕೊಂಡರು. 40 ಶಾಸಕರನ್ನು ಹೊಂದಿದ್ದ ಜೆಡಿಎಸ್ ಕೇವಲ ಇಬ್ಬರು ಸಂಸದರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಅದು ಪ್ರಾದೇಶಿಕ ಪಕ್ಷವಾಗಿದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಆ ಅವಕಾಶವಿತ್ತು. ಆದರೆ ಅವರು ಸಮರ್ಪಕವಾಗಿ ತಂತ್ರಗಾರಿಕೆ ರೂಪಿಸಲಿಲ್ಲ. 28 ಲೋಕಸಭಾ ಸ್ಥಾನಗಳ ಪೈಕಿ ಆಗ ಕಾಂಗ್ರೆಸ್ ಪಕ್ಷ ಗೆದ್ದಿದ್ದು ಕೇವಲ 9 ಸ್ಥಾನಗಳಲ್ಲಿ. ದುರದೃಷ್ಟಕರ ಸಂಗತಿಯೆಂದರೆ; ತವರು ಜಿಲ್ಲೆಯ ಮೈಸೂರು ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಗೆಲ್ಲಿಸಿಕೊಳ್ಳಲಿಲ್ಲ. ರಾಜಕೀಯಕ್ಕೆ ಹೊಸ ಮುಖವಾದ ಬಿಜೆಪಿಯಿಂದ ಸ್ಪರ್ಧಿಸಿದ್ದ ಪತ್ರಕರ್ತ ಪ್ರತಾಪ ಸಿಂಹ ಮೈಸೂರು ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಂಡರು. ರಾಜ್ಯದ ಅಧಿಕಾರ ಚುಕ್ಕಾಣಿ ಕೈಯಲ್ಲಿದ್ದಾಗ ರಾಷ್ಟ್ರೀಯ ಪಕ್ಷಗಳು ತುಸು ಶ್ರಮ ಹಾಕಿ ತಂತ್ರಗಾರಿಕೆ ರೂಪಿಸಿದರೆ ಪಕ್ಷದ ಮರ್ಯಾದೆ ಉಳಿಸಿಕೊಳ್ಳಬಹುದು.
ರಾಜ್ಯಾಡಳಿತ ಕೈಯಲ್ಲಿ ಇದ್ದರೆ ಎಷ್ಟೇ ಪ್ರತಿಕೂಲ ಸಂದರ್ಭದಲ್ಲೂ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸಂಸದರನ್ನು ಗೆಲ್ಲಿಸಿ ಕೊಡಬಹುದು ಎನ್ನುವುದಕ್ಕೆ 1996 ಮತ್ತು 1998ರ ಲೋಕಸಭಾ ಚುನಾವಣೆಗಳನ್ನು ಮಾದರಿಯಾಗಿ ಪರಿಗಣಿಸಬಹುದು. 1996ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದಾಗ ಕರ್ನಾಟಕದಲ್ಲಿ ಎಚ್.ಡಿ. ದೇವೇಗೌಡರ ನೇತೃತ್ವದ ಜನತಾದಳ ಸರಕಾರವಿತ್ತು. 1994ರ ಕರ್ನಾಟಕ ವಿಧಾನಸಭಾ ಚುನಾವಣೆ ಹೊತ್ತಿಗೆ ಜನತಾ ಪರಿವಾರದ ಎಲ್ಲಾ ಹಿರಿಯ ಮುಖಂಡರು; ದೇವೇಗೌಡ, ರಾಮಕೃಷ್ಣ ಹೆಗಡೆ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಮೊದಲಾಗಿ ಒಂದುಗೂಡಿದ್ದರು. ಒಗ್ಗಟ್ಟಿನಲ್ಲಿ ಚುನಾವಣೆ ಎದುರಿಸಿದ್ದರು. ಆ ಚುನಾವಣೆಯಲ್ಲಿ ಜನತಾದಳ 115 ಸ್ಥಾನಗಳಲ್ಲಿ ಗೆದ್ದು ಕರ್ನಾಟಕದ ಆಡಳಿತ ಚುಕ್ಕಾಣಿ ಹಿಡಿದಿತ್ತು. ಆಗಲೇ ಸಿದ್ದರಾಮಯ್ಯನವರು ಮೊದಲ ಬಾರಿಗೆ ಹಣಕಾಸು ಮಂತ್ರಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದು. ಆಗ ಬಿಜೆಪಿ ಶಾಸಕರ ಸಂಖ್ಯೆ 40 ಇತ್ತು. ಕಾಂಗ್ರೆಸ್-ಕೆಸಿಪಿ ಒಡಕಾಗಿ ಕಾಂಗ್ರೆಸ್ 34 ಸ್ಥಾನ, ಕೆಸಿಪಿ 10 ಸ್ಥಾನಗಳಲ್ಲಿ ತಪ್ತಿಪಟ್ಟುಕೊಂಡಿದ್ದವು. 1991 ರಿಂದ 1996ರವರೆಗೆ ಪಿ.ವಿ. ನರಸಿಂಹರಾವ್ ಅವರು ಪ್ರಧಾನಿಯಾಗಿ ಬಾಬರಿ ಮಸೀದಿ ಧ್ವಂಸದ ಪ್ರಕರಣದಲ್ಲಿ ನಿಷ್ಕ್ರಿಯ ಪಾತ್ರ ವಹಿಸಿ ಅಪಖ್ಯಾತಿ ಗಳಿಸಿದ್ದರು. ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿ ಹುದ್ದೆಯ ದಾವೆದಾರರಾಗಿದ್ದರು. ಹಿಂದಿ ಭಾಷಿಕ ರಾಜ್ಯಗಳಲ್ಲಿ ಮಂದಿರ-ಮಸೀದಿ, ಮಂಡಲ-ಕಮಂಡಲದಿಂದ ಜನಪ್ರಿಯತೆಯಲ್ಲಿ ವಾಜಪೇಯಿಯವರು ತುಸು ಮುಂದಿದ್ದರು.
ಆಗ ಕರ್ನಾಟಕದಲ್ಲಿ ಬಿಜೆಪಿ 40 ಶಾಸಕರ ಬಲದೊಂದಿಗೆ ಗಟ್ಟಿಯಾಗಿ ನೆಲೆಯೂರಿತ್ತು. ಕಾಂಗ್ರೆಸ್ ಹೀನಾಯ ಸ್ಥಿತಿಯಲ್ಲಿತ್ತು. 1996ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಹೆಚ್ಚು ಸಂಸದರು ಬಿಜೆಪಿಯಿಂದ ಗೆದ್ದು ಬರಬಹುದು ಎಂದು ನಿರೀಕ್ಷೆ ಇಟ್ಟುಕೊಳ್ಳಲಾಗಿತ್ತು. ಆದರೆ ಆ ಚುನಾವಣೆಯಲ್ಲಿ ಆಶ್ಚರ್ಯಕರ ರೀತಿಯಲ್ಲಿ ಜನತಾದಳದಿಂದ 16 ಸಂಸದರು ಗೆಲುವು ಸಾಧಿಸಿದ್ದರು. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಆರು ಕಡೆ, ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಮತ್ತು ಕೆಸಿಪಿ ಒಂದು ಸ್ಥಾನದಲ್ಲಿ ಜಯಗಳಿಸಿದ್ದವು. ಲೋಕಸಭೆಯಲ್ಲಿ ಬಿಜೆಪಿಯ ಸಂಸದರ ಬಲ 162ಕ್ಕೇರಿತು. ಅಂದರೆ ಬಿಜೆಪಿ 41 ಸಂಸದರನ್ನು ಹೆಚ್ಚುವರಿಯಾಗಿ ಪಡೆದಿತ್ತು. ಪಿ.ವಿ. ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಪಕ್ಷದ ಸಂಸದರ ಬಲ 140ಕ್ಕೆ ಕುಸಿಯಿತು. 92 ಸಂಸದರು ಸೋಲು ಕಂಡಿದ್ದರು. ಹೆಚ್ಚು ಸಂಸದರನ್ನು ಹೊಂದಿದ್ದ ಬಿಜೆಪಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಸರಕಾರ ರಚನೆ ಮಾಡಿತು. ಆದರೆ ಬಹುಮತ ಸಾಬೀತು ಪಡಿಸುವಲ್ಲಿ ವಾಜಪೇಯಿಯವರು ವಿಫಲರಾದರು. ಕೇವಲ 13 ದಿನಗಳ ಪ್ರಧಾನಿಯಾಗಿ ನಿರ್ಗಮಿಸಿದರು. ಆಗ ಕಮ್ಯುನಿಸ್ಟರು ಪ್ರಬಲರಾಗಿದ್ದ ಕಾಲ. ಆ ಪಕ್ಷದಲ್ಲಿ 32 ಸಂಸದರು ಆಯ್ಕೆಯಾಗಿದ್ದರು. ಜನತಾದಳದ 46 ಸಂಸದರಲ್ಲಿ ಕರ್ನಾಟಕದ ಹದಿನಾರು ಸಂಸದರಿದ್ದರು. ಕಮ್ಯುನಿಸ್ಟ್ ಮುಖಂಡರ ಒತ್ತಾಯದಿಂದ ಎಚ್.ಡಿ. ದೇವೇಗೌಡರು 11 ತಿಂಗಳ ಕಾಲ ಭಾರತದ ಪ್ರಧಾನ ಮಂತ್ರಿಯಾದರು. 1998ರ ಹೊತ್ತಿಗೆ ರಾಜಕೀಯ ಸಮೀಕರಣ ಬದಲಾಯಿತು. ಜನತಾದಳದ ಭಾಗವಾಗಿದ್ದ ರಾಮಕೃಷ್ಣ ಹೆಗಡೆಯವರು ಲೋಕಶಕ್ತಿ ಪಕ್ಷ ಕಟ್ಟಿ ಎನ್ಡಿಎ ಮೈತ್ರಿಕೂಟ ಸೇರಿಕೊಂಡರು. ದೇವೇಗೌಡರ ಉತ್ತರಾಧಿಕಾರಿಯಾಗಿ ಜೆ.ಎಚ್. ಪಟೇಲರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. 1998ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಭಿನ್ನ ತೀರ್ಪು ನೀಡಿತು. ಬಿಜೆಪಿ 13, ಕಾಂಗ್ರೆಸ್ 9, ಲೋಕಶಕ್ತಿ 3, ಜನತಾದಳ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದವು. ರಾಮಕೃಷ್ಣ ಹೆಗಡೆಯವರು ಎನ್ಡಿಎ ಮೂಲಕ 13+3 ಒಟ್ಟು 16 ಸಂಸದರು ಗೆಲ್ಲುವಂತೆ ಮಾಡಿದ್ದರು.
1998ರಿಂದ 1990ರವರೆಗೆ 13 ತಿಂಗಳ ಕಾಲ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಮಂತ್ರಿಯಾಗಿದ್ದರು. ತಮಿಳುನಾಡಿನ ಎಐಡಿಎಂಕೆ ನಾಯಕಿ ಜಯಲಲಿತಾ ಎನ್ಡಿಎಗೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದರಿಂದ ವಾಜಪೇಯಿ ಸರಕಾರ ಬಹುಮತ ಕಳೆದುಕೊಂಡಿತು. ಅನಿವಾರ್ಯವಾಗಿ ರಾಜೀನಾಮೆ ನೀಡಿ ಚುನಾವಣೆ ಘೋಷಿಸಿದರು. 1999ರಲ್ಲಿ ಲೋಕಸಭಾ ಚುನಾವಣೆ ಜೊತೆಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಿತು. ಏಕಕಾಲಕ್ಕೆ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆ ನಡೆಯುತ್ತಿರುವುದರಿಂದ ವಾಜಪೇಯಿ ಅವರ ಸಿಂಪತಿ ಅಲೆಯಲ್ಲಿ ಕರ್ನಾಟಕವೂ ಬಿಜೆಪಿಮಯವಾಗಬಹುದೆಂದು ಭಾವಿಸಲಾಗಿತ್ತು. ಫಲಿತಾಂಶ ಹೊರ ಬಿದ್ದಾಗ ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಕೇವಲ ಒಂದು ವರ್ಷದ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಗೆದ್ದಿದ್ದ ಬಿಜೆಪಿ ಏಳು ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಎನ್ಡಿಎ ಭಾಗವಾಗಿದ್ದ ಜೆಡಿಯು ಮೂರು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆ ಚುನಾವಣೆಯಲ್ಲಿ ಬಿಜೆಪಿ ಜೆಡಿಯು ಮೈತ್ರಿಗೆ ವಾಜಪೇಯಿ, ರಾಮಕೃಷ್ಣ ಹೆಗಡೆಯವರ ಬಲ ಇರುವುದರಿಂದ ಕಾಂಗ್ರೆಸ್ ಪಕ್ಷ ಕರ್ನಾಟಕ ವಿಧಾನಸಭೆಯಲ್ಲಿ ಗೆಲುವು ಸಾಧಿಸಲಾರದು ಎಂದೇ ಲೆಕ್ಕಾಚಾರ ಮಾಡಲಾಗಿತ್ತು. ಆದರೆ ಕರ್ನಾಟಕದ ಮತದಾರರು ಪ್ರಬುದ್ಧತೆ ಮೆರೆದು 1999ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 132 ಸ್ಥಾನಗಳನ್ನು ನೀಡಿದರು. ಬಿಜೆಪಿ 44, ಜೆಡಿಯು 18, ಜೆಡಿಎಸ್ 10 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆ ಚುನಾವಣೆಯಲ್ಲಿ ಒಟ್ಟು 19 ಜನ ಸ್ವತಂತ್ರ ಅಭ್ಯರ್ಥಿಗಳಾಗಿ ಗೆಲುವು ಸಾಧಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮರ್ಪಕ ತಂತ್ರಗಾರಿಕೆ ರೂಪಿಸಿ ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸಂಸದರನ್ನು ‘ಇಂಡಿಯಾ’ ಕೂಟಕ್ಕೆ ಕೊಡುಗೆಯಾಗಿ ನೀಡಬಹುದಾಗಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದ ಬಿಜೆಪಿ 110 ಶಾಸಕರನ್ನು ಹೊಂದಿ ಆಪರೇಷನ್ ಕಮಲ ಮಾಡಿ ಅಧಿಕಾರ ಹಿಡಿದಿತ್ತು. 2009ರಲ್ಲಿ ಲೋಕಸಭಾ ಚುನಾವಣೆ ಬಂತು. 2004 ರಿಂದ 2009ರ ವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿತ್ತು. ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿ ಅತ್ಯುತ್ತಮ ಆಡಳಿತ ನೀಡಿದ್ದರು. ಆ ಸರಕಾರದಲ್ಲಿ ಕರ್ನಾಟಕದ ಆಸ್ಕರ್ ಫೆರ್ನಾಂಡಿಸ್, ಕೆ.ಎಚ್. ಮುನಿಯಪ್ಪ ಎಂ.ವಿ. ರಾಜಶೇಖರನ್, ಅಂಬರೀಷ್, ರೆಹಮಾನ್ ಖಾನ್, ಜೈರಾಮ್ ರಮೇಶ್ ಮಂತ್ರಿಯಾಗಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಿ ಕೊಡುವುದು ಕಷ್ಟದ ಮಾತಾಗಿತ್ತು. ಆದರೆ ಕರ್ನಾಟಕದಿಂದ ಬಿಜೆಪಿಯ 19 ಸಂಸದರು ಗೆಲುವು ಸಾಧಿಸಿದ್ದರು. ಕಾಂಗ್ರೆಸ್ನ ಆರು, ಜೆಡಿಎಸ್ನ ಮೂರು ಸಂಸದರು ಜಯ ಸಾಧಿಸಿದ್ದರು .
2023ರ ಲೋಕಸಭಾ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ 135 ಶಾಸಕರನ್ನು ನೀಡಿದ್ದಾರೆ. ಬಿಜೆಪಿ 66 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ದುರ್ಬಲವಾಗಿದೆ. ಜೆಡಿಎಸ್ ಕೇವಲ 19 ಸ್ಥಾನಗಳಿಗೆ ಸೀಮಿತವಾಗಿದೆ. ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿದೆ. ಸಿದ್ದರಾಮಯ್ಯ ಸರಕಾರ ಗ್ಯಾರಂಟಿಗಳ ಅನುಷ್ಠಾನದಲ್ಲಿ ಯಶಸ್ವಿಯಾಗಿದೆ. ಆದರೆ ಗ್ಯಾರಂಟಿಯೊಂದರಿಂದಲೇ ಲೋಕಸಭಾ ಚುನಾವಣೆ ಗೆಲ್ಲಲಾಗದು. ಸಿದ್ದರಾಮಯ್ಯ ಸಚಿವ ಸಂಪುಟದ ಮಂತ್ರಿಗಳು ಪಕ್ಷದ ಶಾಸಕರು ಮತ್ತು ಕಾರ್ಯಕರ್ತರೊಂದಿಗೆ ಕನೆಕ್ಟ್ ಆಗಿಲ್ಲ. ಕಾಂಗ್ರೆಸ್ ಕಾರ್ಯಕರ್ತರೇ ಮಂತ್ರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊಂದಿದ್ದಾರೆ. 2023ರ ವಿಧಾನಸಭಾ ಚುನಾವಣೆಗೂ ಮುಂಚೆ ಇದ್ದ ಸನ್ನಿವೇಶ ಈಗ ಬಿಜೆಪಿಯಲ್ಲಿ ಇಲ್ಲ. ಆಗ ಸಂಪೂರ್ಣ ಮೂಲೆಗೆ ತಲ್ಲಲ್ಪಟ್ಟಿದ್ದ ಯಡಿಯೂರಪ್ಪನವರ ಮಗನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ಮಾಡಲಾಗಿದೆ. 2014ರ ಸನ್ನಿವೇಶ ಮರುಕಳಿಸುತ್ತಿದೆ. ನರೇಂದ್ರ ಮೋದಿಯವರು 10 ವರ್ಷಗಳ ವೈಫಲ್ಯ ಮುಚ್ಚಿಕೊಳ್ಳಲು ಶ್ರೀರಾಮನ ಮೊರೆ ಹೋಗಿದ್ದಾರೆ. ಜನರಲ್ಲಿ ಧರ್ಮದ ಉನ್ಮಾದ ತುಂಬಲಾಗಿದೆ. ಹಿಂದಿ ಭಾಷಿಕ ಪ್ರಮುಖ ರಾಜ್ಯಗಳಾದ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಬೀಗುತ್ತಿದೆ.
ಸಿದ್ದರಾಮಯ್ಯ ಸರಕಾರದ ಸಚಿವರು ಮುಖ್ಯಮಂತ್ರಿ ಅಧಿಕಾರಾವಧಿ ಮತ್ತು ಹೆಚ್ಚುವರಿ ಉಪಮುಖ್ಯಮಂತ್ರಿಗಳ ಕುರಿತು ಗೊಂದಲದ ಹೇಳಿಕೆ ನೀಡುವ ಮೂಲಕ ಒಡಕು ಮೂಡಿಸುತ್ತಿದ್ದಾರೆ. ಕಾಂತರಾಜ್ ವರದಿ ಜಾರಿಗೆ ಸಂಬಂಧಿಸಿದಂತೆ; ಕಾಂಗ್ರೆಸ್ ಪಕ್ಷದಲ್ಲಿ ಮೂರು ಗುಂಪುಗಳಾಗಿವೆ. ಬರಗಾಲದಂತಹ ವಿಷಮ ಪರಿಸ್ಥಿತಿಯಲ್ಲಿ ಮಂತ್ರಿಗಳು ಹೆಚ್ಚು ಕ್ರಿಯಾಶೀಲರಾಗಬೇಕಿತ್ತು. ಎಲ್ಲಕ್ಕೂ ಮಿಗಿಲಾಗಿ ಪ್ರಹ್ಲಾದ್ ಜೋಶಿ, ರಮೇಶ್ ಜಿಗಜಿಣಗಿ, ಅನಂತಕುಮಾರ್ ಹೆಗಡೆ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ, ಕಟೀಲು ಸೇರಿದಂತೆ ನಿರಂತರ ಗೆಲ್ಲುತ್ತಿರುವ ಸಂಸದರನ್ನು ಸೋಲಿಸಲು ಕಾಂಗ್ರೆಸ್ನಲ್ಲಿ ಸಮರ್ಥ ಅಭ್ಯರ್ಥಿಗಳೇ ಗೋಚರಿಸುತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಮತ್ತು ಇಂಡಿಯಾ ಕೂಟ ಮೋದಿ ವಿರೋಧಿ ಅಲೆ ಹುಟ್ಟು ಹಾಕುವಲ್ಲಿ ಯಶಸ್ವಿಯಾಗಿಲ್ಲ. ಮೋದಿ ಸರಕಾರದ ವೈಫಲ್ಯಗಳನ್ನು ನೋಡಿದರೆ 2019ರ ಚುನಾವಣೆಯಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರಕಾರ ಅಧಿಕಾರ ಕಳೆದುಕೊಳ್ಳಬೇಕಿತ್ತು. ಬಿಜೆಪಿಯವರು 28ಕ್ಕೆ 28 ಲೋಕಸಭಾ ಸ್ಥಾನ ಗೆಲ್ಲುವ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ಉಮೇದು ತೋರಿಸುತ್ತಿಲ್ಲ. ಮಂತ್ರಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಿದರೆ ಮಾತ್ರ ಕಾಂಗ್ರೆಸ್ ಎಂಪಿಗಳ ಸ್ಕೋರ್ ಹೆಚ್ಚಬಹುದು. 1977ರಲ್ಲಿ ಕಾಂಗ್ರೆಸ್ ಪಕ್ಷದ ಇಮೇಜ್ ಸಂಪೂರ್ಣ ಹಾಳಾಗಿತ್ತು. ತುರ್ತು ಪರಿಸ್ಥಿತಿ ಹೇರಿದ್ದರಿಂದ ದೇಶಾದ್ಯಂತ ಕಾಂಗ್ರೆಸ್ ವಿರೋಧಿ ಗಾಳಿ ಬೀಸುತ್ತಿತ್ತು. ರಾಯ್ಬರೇಲಿಯಲ್ಲಿ ಸ್ವತಹ ಪ್ರಧಾನಮಂತ್ರಿ ಇಂದಿರಾಗಾಂಧಿ, ಅಮೇಠಿಯಲ್ಲಿ ಅವರ ಮಗ ಸಂಜಯ ಗಾಂಧಿ ಸೋತಿದ್ದರು. ಜನತಾ ಪಕ್ಷದ ಮಿತ್ರ ಪಕ್ಷಗಳು 345 ಸ್ಥಾನಗಳಲ್ಲಿ ಜಯಭೇರಿ ಭಾರಿಸಿದ್ದವು. ಕಾಂಗ್ರೆಸ್ 198 ಸ್ಥಾನಗಳನ್ನು ಕಳೆದುಕೊಂಡಿತ್ತು. ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಪಾರ್ಟಿ 295 ಸಂಸದರ ಗೆಲ್ಲಿಸಿ ಕೊಂಡಿತ್ತು. ಆದರೆ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕರ್ನಾಟಕದಿಂದ 28ಕ್ಕೆ 26 ಸಂಸದರನ್ನು ಗೆಲ್ಲಿಸಿ ಕೊಟ್ಟಿದ್ದರು. ಸಿದ್ದರಾಮಯ್ಯ ಮತ್ತವರ ತಂಡಕ್ಕೆ ಅರಸು ಛಲ ಮಾದರಿಯಾಗಬೇಕು. 28ರ ಪೈಕಿ 25 ಸಂಸದರನ್ನು ‘ಇಂಡಿಯಾ’ ಕೂಟಕ್ಕೆ ಕೊಡುಗೆ ನೀಡಬೇಕು.