ವೈದ್ಯಕೀಯ ವ್ಯವಸ್ಥೆ: ಗುಣಮಟ್ಟದ ಚಿಕಿತ್ಸೆ
ಹಿಂದುಳಿದ ಪ್ರದೇಶ ಕಲಬುರಗಿಯಲ್ಲಿ 22-12-2024ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯನ್ನು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರೊಂದಿಗೆ ಸೇರಿ ಲೋಕಾರ್ಪಣೆ ಮಾಡಿದರು. ಈ ಹಿಂದೆ 2016ರಲ್ಲಿ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿದ್ದಾಗ ಕಲಬುರಗಿಯಲ್ಲಿ ಶ್ರೀ ಜಯದೇವ ಸಂಸ್ಥೆಯನ್ನು ಆರಂಭಿಸಿದ್ದರು. ಅದು ಗುಲ್ಬರ್ಗಾ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 2025ರಿಂದ ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳೊಂದಿಗೆ ಕಾರ್ಯಾರಂಭ ಮಾಡಲಿದೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಲಬುರಗಿ ಘಟಕ ಲೋಕಾರ್ಪಣೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಮಾತನ್ನು ಮತ್ತೆ ಮತ್ತೆ ಒತ್ತಿ ಹೇಳಿದರು. ಆ ಮಾತು ಹೇಳಿದ್ದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರಿಗೆ. ‘‘ದುಬಾರಿ ವೆಚ್ಚದಲ್ಲಿ, ಅತ್ಯಾಧುನಿಕ ಸೌಲಭ್ಯದ ಶ್ರೀ ಜಯದೇವ ಸಂಸ್ಥೆ ಕಲಬುರಗಿಯಲ್ಲಿ ಲೋಕಾರ್ಪಣೆಗೊಳ್ಳುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಅವರು ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಬೇಕು’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು. ಸ್ವಚ್ಛತೆ ಎಂದರೆ ಒಟ್ಟಾರೆ ನಿರ್ವಹಣೆಯನ್ನು ಸಮರ್ಪಕವಾಗಿ ನಿಭಾಯಿಸಬೇಕು ಎಂಬುದು ಅವರ ಮಾತಿನ ತಾತ್ಪರ್ಯ ಆಗಿತ್ತು. ಆ ಮಾತು ಕೇವಲ ಡಾ. ಶರಣ ಪ್ರಕಾಶ ಪಾಟೀಲರಿಗೆ ಮಾತ್ರ ಹೇಳಿದ್ದಾಗಿರಲಿಲ್ಲ, ಕಲಬುರಗಿ ಘಟಕದ ಶ್ರೀ ಜಯದೇವ ಸಂಸ್ಥೆಯ ಸಮಸ್ತ ಸಿಬ್ಬಂದಿ ವರ್ಗದವರಿಗೆ ಹೇಳಿದ್ದಾಗಿತ್ತು.
ಹಾಗೆ ನೋಡಿದರೆ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ಬೆಂಗಳೂರಿನಲ್ಲಿ ಆರಂಭವಾದಾಗಿನಿಂದ ತನ್ನ ವಿಶೇಷ ಕಾರ್ಯ ಶೈಲಿಯಿಂದ ಮನೆ ಮಾತಾಗಿದೆ. ಆ ವಿಶೇಷ ಕಾರ್ಯ ಶೈಲಿಯಲ್ಲಿ ಸ್ವಚ್ಛತೆ ಮತ್ತು ನಿರ್ವಹಣೆಯು ಸೇರಿಕೊಂಡಿದೆ. ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಗೆ ಇಡೀ ಏಶ್ಯದಲ್ಲೇ ಹೆಸರು ಮಾಡಿದೆ. ಜಯದೇವ ಆಸ್ಪತ್ರೆ 1972ರಲ್ಲಿ ಆರಂಭವಾದಾಗ ಅದಕ್ಕೆ ಸ್ವಂತ ಕಟ್ಟಡವಿರಲಿಲ್ಲ. ಅದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಕ್ಯಾಂಪಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. 2001ರಿಂದ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿ ಸ್ವಂತ ಕಟ್ಟಡ ಮತ್ತು ಅತ್ಯಾಧುನಿಕ ವೈದ್ಯಕೀಯ ಸೌಲಭ್ಯಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ. ಸರಕಾರಿ ಸ್ವಾಮ್ಯದ ಈ ಸಂಸ್ಥೆ, ವಿಶೇಷವಾಗಿ ಹೃದಯದ ಆರೈಕೆಗಾಗಿಯೇ ಅತ್ಯಾಧುನಿಕ ಕಾರ್ಡಿಯಾಕ್ ಕೇರ್ ಹೊಂದಿರುವ ಲಾಭ ರಹಿತ ಸಂಸ್ಥೆ. ಸಮಾಜದ ಎಲ್ಲ ವರ್ಗಗಳಿಗೆ ಕೈಗೆಟುಕುವ ವೆಚ್ಚದಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ಏಕೈಕ ಸರಕಾರಿ ಸಂಸ್ಥೆ ಎಂದರೆ ಉತ್ಪ್ರೇಕ್ಷೆಯ ಮಾತಾಗುವುದಿಲ್ಲ. ವಿಶೇಷವಾಗಿ ಬಡವರಿಗೆ ಉಚಿತ ಹೃದಯ ಆರೈಕೆ ನೀಡುವ ಸಂಸ್ಥೆ. ಈ ಸಂಸ್ಥೆಯ ಧ್ಯೇಯ ವಾಕ್ಯವೇ -‘ಚಿಕಿತ್ಸೆ ಮೊದಲು, ಪಾವತಿ ನಂತರ’ ಎಂಬುದು. ಮುಂಗಡ ಪಾವತಿ ಪರಿಕಲ್ಪನೆ ಕಾರ್ಪೊರೇಟ್ ಆಸ್ಪತ್ರೆಗಳದು. ಕಾರ್ಪೊರೇಟ್ ಆಸ್ಪತ್ರೆಗಳಿಗೂ ಮೀರಿಸುವ ಗುಣಮಟ್ಟದ ಚಿಕಿತ್ಸೆ ಮತ್ತು ಹಣಕ್ಕೆ ಮೊದಲ ಆದ್ಯತೆ ನೀಡದ ಅಪರೂಪದ ಸಂಸ್ಥೆ. ಈ ಸಂಸ್ಥೆಯಲ್ಲಿ ಕೆಲವು ಆಯ್ದ ಸ್ನಾತಕೋತ್ತರ ಪದವಿಗಳನ್ನು ನೀಡಲಾಗುತ್ತದೆ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಅತ್ಯುತ್ತಮ ಗುಣಮಟ್ಟದ ಕಾರಣಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯವಾಗಿದ್ದು ಹಿಂದಿನ ಎಲ್ಲ ಸರಕಾರಗಳು ಆರ್ಥಿಕ ನೆರವು ನೀಡಿದ್ದರಿಂದ. ಆರ್ಥಿಕ ನೆರವು ನೀಡಿದ ಮಾತ್ರಕ್ಕೆ ಒಂದು ಸರಕಾರಿ ಸಂಸ್ಥೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಹಲವಾರು ಸಂಸ್ಥೆಗಳು ಸುಳ್ಳು ಮಾಡಿವೆ. ಶ್ರೀ ಜಯದೇವ ಸಂಸ್ಥೆಯ ಮೊದಲ ನಿರ್ದೇಶಕ ಡಾ. ಪ್ರಭುದೇವ ಅವರಿಂದ ಹಿಡಿದು ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್‌ವರೆಗೆ ಎಲ್ಲ ನಿರ್ದೇಶಕರು ಮತ್ತವರ ತಂಡ ಅತ್ಯಂತ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸಿದ್ದು ಕಾರಣ. ಎಲ್ಲ ಮಂತ್ರಿಗಳು ಸೂಕ್ತ ಮಾರ್ಗದರ್ಶನ ಮಾಡಿದ್ದು ಸಂಸ್ಥೆಯ ಬೆಳವಣಿಗೆಗೆ ಹಾದಿ ಮಾಡಿಕೊಟ್ಟಿದೆ. ಚಿಕಿತ್ಸೆ ಮೊದಲು ಪಾವತಿ ನಂತರ ಎಂಬ ಘೋಷಣೆಗೆ ಹೆಚ್ಚು ಬಲ ನೀಡಿದವರು ಡಾ. ಸಿ.ಎನ್. ಮಂಜುನಾಥ್ ಅವರು. ದಿನದ ಇಪ್ಪತ್ತ ನಾಲ್ಕು ತಾಸು ಸಂಸ್ಥೆ ಮತ್ತು ಅಲ್ಲಿಗೆ ಬರುವ ರೋಗಿಗಳ ಆರೈಕೆ ಬಗ್ಗೆ ಚಿಂತಿಸುತ್ತಿದ್ದ ಮಂಜುನಾಥ್ ಈ ಹೊತ್ತು ಸಂಸದರಾಗಲು ಸಾಧ್ಯವಾದದ್ದು ಜಯದೇವ ಕೃಪೆಯಿಂದ.
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಖ್ಯಾತಿ ಎಲ್ಲೆಡೆ ಹಬ್ಬಿತ್ತು. ಅದರ ಶಾಖೆ ಬೇರೆಡೆಗೆ ಶುರುವಾದರೆ ಒಳ್ಳೆಯದು ಎಂಬ ಅಭಿಪ್ರಾಯಗಳು ಇದ್ದವು. ಆರಂಭದಲ್ಲಿ ಬೆಂಗಳೂರು, ಮೈಸೂರು ನಗರಗಳಲ್ಲಿ ಹೊಸ ಘಟಕಗಳು ಆರಂಭವಾದವು. ಈಗ ಕಲಬುರಗಿಯಲ್ಲಿ ಜಯದೇವ ಸಂಸ್ಥೆ ಸೇವೆ ಸಲ್ಲಿಸಲು ಸಜ್ಜುಗೊಂಡು ನಿಂತಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಹುಬ್ಬಳ್ಳಿಯಲ್ಲೂ ಕಾರ್ಯಾರಂಭ ಮಾಡಲಿದೆ. ಹುಬ್ಬಳ್ಳಿ ಮತ್ತು ಕಲಬುರಗಿಯಲ್ಲಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಕಾರ್ಯ ಚುಟುವಟಿಕೆಗಳು ವಿಸ್ತರಣೆಗೊಂಡಿದ್ದು ಸಚಿವ ಡಾ. ಶರಣ ಪ್ರಕಾಶ ಪಾಟೀಲರ ಅತ್ಯಾಸಕ್ತಿಯ ಫಲವಾಗಿ. ಅವರು ಅಭಿನಂದನಾರ್ಹರು.
ಬೆಂಗಳೂರು ಜಯದೇವ ಸಂಸ್ಥೆ ಗುಣಮಟ್ಟದ ಚಿಕಿತ್ಸೆಯ ಕಾರಣಕ್ಕೆ ಗಮನ ಸೆಳೆದಿದೆ. ಮೈಸೂರು ಘಟಕವೂ ಅತ್ಯುತ್ತಮ ಹೆಸರು ಮಾಡುತ್ತಿದೆ. ನಾಳೆ ಕಲಬುರಗಿ ಮತ್ತು ಹುಬ್ಬಳ್ಳಿ ಜಯದೇವ ಘಟಕಗಳೂ ಹೆಸರು ಮಾಡಬಹುದು. ಆದರೆ ಜಯದೇವ ಸಂಸ್ಥೆಯ ಗುಣಮಟ್ಟ ಕರ್ನಾಟಕದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ವಿಸ್ತರಿಸಲು ಯಾಕೆ ಸಾಧ್ಯವಾಗುತ್ತಿಲ್ಲ? ಅದೇ ಸರಕಾರ, ಅದೇ ಮಂತ್ರಿ, ಅದೇ ವೈದ್ಯರು. ಸರಕಾರಿ ಆಸ್ಪತ್ರೆಗಳು ಎಂದರೆ ಅವ್ಯವಸ್ಥೆಗಳ ಆಗರ ಎನ್ನುವಂತಾಗಿದೆ.
ಕಲಬುರಗಿಯಲ್ಲಿ 371(ಜೆ )ಕಲಂನ ನೆನಪಿಗೆ 371 ಹಾಸಿಗೆಯುಳ್ಳ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯೇನೋ ಲೋಕಾರ್ಪಣೆಗೊಂಡಿದೆ. ಆ ಸಂಸ್ಥೆಗೆ ಗುಲ್ಬರ್ಗಾ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಆಸ್ಪತ್ರೆಯ ಸೋಂಕು ತಗಲದಿರಲಿ. ಕಲಬುರಗಿ ಜಿಲ್ಲಾ ಆಸ್ಪತ್ರೆಯನ್ನು ನಾನು ನಾಲ್ಕು ದಶಕಗಳಿಂದ ನೋಡುತ್ತಾ ಬಂದಿದ್ದೇನೆ. ಅತ್ಯುತ್ತಮ ವೈದ್ಯರು ಇದ್ದಾಗಲೂ ಅದು ನರಕದ ವಾತಾವರಣ ಸೃಷ್ಟಿ ಮಾಡಿಕೊಂಡಿತ್ತು. ಜಿಲ್ಲಾ ಆಸ್ಪತ್ರೆ ಗುಲ್ಬರ್ಗಾ ಮೆಡಿಕಲ್ ಕಾಲೇಜಿನ ಭಾಗವಾದ ಮೇಲೂ ಅದರ ಸ್ಥಿತಿಗತಿಯಲ್ಲಿ ವಿಶೇಷ ಬದಲಾವಣೆ ಕಂಡು ಬಂದಿಲ್ಲ.
ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರು ನೇಮಕಗೊಂಡಿರುತ್ತಾರೆ, ಆದರೆ ಅವರ ಖಾಸಗಿ ಪ್ರಾಕ್ಟೀಸ್ ಕಾರಣಕ್ಕೆ ಬಡವರಿಗೆ ಆ ತಜ್ಞತೆಯ ಲಾಭ ದೊರೆಯುವುದಿಲ್ಲ. ಕಲಬುರಗಿಯಲ್ಲಿ ಪ್ರತಿಭಾವಂತ ಮತ್ತು ತಜ್ಞ ವೈದ್ಯರಿಗೆ ಕೊರತೆಯಿಲ್ಲ. ಕೊರತೆಯಿರುವುದು ಸಮರ್ಪಣಾ ಭಾವದ ಸೇವಾ ಮನೋಭಾವದ್ದು. ಕಲಬುರಗಿಯಲ್ಲಿ ಜಿಲ್ಲಾ ಆಸ್ಪತ್ರೆ ಇದೆ. ಬಡವರು ಅನಿವಾರ್ಯವಾಗಿ ಅಲ್ಲಿಗೆ ಹೋಗುತ್ತಾರೆ. ಮಹದೇವಪ್ಪ ರಾಂಪೂರೆ ಮೆಡಿಕಲ್ ಕಾಲೇಜು ಮತ್ತು ಅದರ ಭಾಗವಾಗಿರುವ ಬಸವೇಶ್ವರ ಆಸ್ಪತ್ರೆಯನ್ನು ಮಧ್ಯಮ ವರ್ಗದವರು ಹೆಚ್ಚು ಅವಲಂಬಿಸಿದ್ದಾರೆ. ಆದರೆ ಶ್ರೀಮಂತರು ಮಾತ್ರ ಹಣ ಇರುವುದರಿಂದ ಕಲಬುರಗಿಯ ವೈದ್ಯಕೀಯ ವ್ಯವಸ್ಥೆಯನ್ನು ಅವಲಂಬಿಸಿಲ್ಲ. ಹಣ ಹೋದರೂ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನಿರೀಕ್ಷೆ ಮಾಡುವವರು ದೂರದ ಬೆಂಗಳೂರಿಗೆ ಆಗಮಿಸುತ್ತಾರೆ. ಮೇಲ್ ಮಧ್ಯಮ ವರ್ಗದವರು ಸೋಲಾಪುರ ಅಥವಾ ಹೈದರಾಬಾದ್‌ಗೆ ಹೋಗುತ್ತಾರೆ.
ಕಲಬುರಗಿಯಲ್ಲಿ ಆರಂಭವಾದ ಶ್ರೀ ಜಯದೇವ ಆಸ್ಪತ್ರೆ ಬೆಂಗಳೂರು ಜಯದೇವ ಮಾದರಿಯಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಬೇಕೆಂದರೆ ಸೇವಾ ಮನೋಭಾವದ ನಿರ್ದೇಶಕ ಮತ್ತು ಬದ್ಧತೆಯುಳ್ಳ ವೈದ್ಯ ಸಿಬ್ಬಂದಿ ಬೇಕು. ಕಲಬುರಗಿಯಲ್ಲಿ ಸರಕಾರಿ ಅಥವಾ ಖಾಸಗಿ ಯಾವುದೇ ಇರಲಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಸೇವೆ ದುರ್ಲಭವಾಗಿದೆ. ಬೆಂಗಳೂರು ಜಯದೇವದಲ್ಲಿ ಬಡವರಿಗೆ ಉಚಿತವಾಗಿ ಸಿಗುವ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಕಲಬುರಗಿಯಲ್ಲಿ ಹಣ ನೀಡಿದರೂ ಸಿಗವುದಿಲ್ಲ. ಗುಣಮಟ್ಟದ ಚಿಕಿತ್ಸೆ ನೀಡುವ ಸಂಸ್ಕೃತಿ ಜಯದೇವ ಬಂದ ಮೇಲಾದರೂ ರೂಢಿಯಾಗಲಿ.
ಇದು ಕೇವಲ ಕಲಬುರಗಿ ಜಿಲ್ಲೆಯ ಸಮಸ್ಯೆಯಲ್ಲ. ಕರ್ನಾಟಕದಲ್ಲಿ ಒಟ್ಟು ಇಪ್ಪತ್ತೆರಡು ಮೆಡಿಕಲ್ ಕಾಲೇಜುಗಳಿವೆ. ಆ ಕಾಲೇಜುಗಳಿಗೆ ಹೊಂದಿಕೊಂಡಿರುವ ಯಾವ ಆಸ್ಪತ್ರೆಯಲ್ಲೂ ಜಯದೇವ ಗುಣಮಟ್ಟದ ಚಿಕಿತ್ಸೆ ದೂರದ ಮಾತು. ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ದೊರೆಯುವ ಚಿಕಿತ್ಸೆಯೂ ಸಿಗುವುದಿಲ್ಲ. ಧರಂಸಿಂಗ್ ಅವರು ಮುಖ್ಯಮಂತ್ರಿಯಾಗುವ ಮುಂಚೆ ಖಾಸಗಿ ಮೆಡಿಕಲ್ ಕಾಲೇಜುಗಳ ದರ್ಬಾರು ಜೋರು ಇತ್ತು. ಅವರು ಸರಕಾರಿ ಮೆಡಿಕಲ್ ಕಾಲೇಜುಗಳಿಗೆ ಅವಕಾಶ ಮಾಡಿಕೊಟ್ಟರು. ಈಗ ಸರಕಾರಿ ಮೆಡಿಕಲ್ ಕಾಲೇಜುಗಳ ಸಂಖ್ಯೆ ಹೆಚ್ಚಾಗಿದೆ. 3,750 ಎಂಬಿಬಿಎಸ್ ಸೀಟುಗಳು ಮೆರಿಟ್ ವಿದ್ಯಾರ್ಥಿಗಳಿಗೆ ದೊರೆಯುತ್ತಿವೆ. ಆದರೆ ಮೆಡಿಕಲ್ ಕಾಲೇಜುಗಳಿಗೆ ಹೊಂದಿಕೊಂಡಿರುವ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಿದರೆ, ಗುಣಮಟ್ಟದ ಚಿಕಿತ್ಸೆಯ ಸಂಸ್ಕೃತಿ ಬೆಳೆಯುತ್ತದೆ. ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೇವಾ ಮನೋಭಾವದ ಶಿಕ್ಷಣ ನೀಡಿದರೆ ಅವರು ಬದುಕಿನುದ್ದಕ್ಕೂ ಆ ಎರಡಕ್ಕೆ ಪ್ರಾಮುಖ್ಯತೆ ನೀಡುತ್ತಾರೆ. ರಾಜ್ಯದಲ್ಲಿ ಇಎಸ್‌ಐ ಸೇರಿದಂತೆ ಕೇಂದ್ರ ಸರಕಾರದ ವೈದ್ಯಕೀಯ ಸಂಸ್ಥೆಗಳಿವೆ. ಅವುಗಳನ್ನು ಮೀರಿ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಹೆಸರು ಮಾಡಿತ್ತು. ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ವ್ಯಾಪ್ತಿಯಲ್ಲಿ ಹತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳಿವೆ. ಬೆಂಗಳೂರು ನಗರದಲ್ಲಿ ನೆಲೆ ನಿಂತಿರುವ ಕಿದ್ವಾಯಿ ಸೇರಿದಂತೆ ಕೆಲವು ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡಲು ಶ್ರಮಿಸುತ್ತಿವೆ.. ಆದರೆ ಬೆಂಗಳೂರು ಹೊರತು ಪಡಿಸಿದ ಜಿಲ್ಲೆಗಳ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು ಆ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿಲ್ಲ. ಶ್ರೀಮಂತರಿಗೆ ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಒದಗಿಸಲು ದುಬಾರಿ ವೆಚ್ಚದ ಕಾರ್ಪೊರೇಟ್ ಆಸ್ಪತ್ರೆಗಳಿವೆ. ಬಡವರು ಮತ್ತು ಮಧ್ಯಮ ವರ್ಗದವರು ಅಲ್ಲಿಗೆ ಹೋಗಿ ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ.
2013ರಿಂದ 2018ರವರೆಗೆ ಐದು ವರ್ಷಗಳ ಕಾಲ ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಪಡೆದಿರುವ ಡಾ. ಶರಣ ಪ್ರಕಾಶ ಪಾಟೀಲರು ಈಗ ಎರಡನೇ ಬಾರಿಗೆ ಅದೇ ಖಾತೆಯಲ್ಲಿ ಮುಂದುವರಿದಿದ್ದಾರೆ. ವೈದ್ಯಕೀಯ ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸಿದರೆ ಅದು ಒಂದು ಸಂಸ್ಕೃತಿಯಾಗಿ ಮುಂದುವರಿಯುತ್ತದೆ. ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಆಸ್ಪತ್ರೆಗಳು ಸೇರಿದಂತೆ ಗುಣ ಮಟ್ಟಕಾಯ್ದು ಕೊಳ್ಳದ ಆಸ್ಪತ್ರೆಗಳಿಗೆ ಸಚಿವರು ಮತ್ತೆ ಮತ್ತೆ ಭೇಟಿ ನೀಡಿ ಉತ್ತಮ ತಂಡ ನಿರ್ಮಾಣ ಮಾಡಿದರೆ ಜಯದೇವ ಮಾದರಿ ಎಲ್ಲೆಡೆ ಲಭ್ಯವಾಗಬಹುದು. ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳ ಮೊದಲ ಆದ್ಯತೆ ಹಣ ಆಗಿರುವುದರಿಂದ ಬಡವರು ಅವರ ವ್ಯಾಪ್ತಿಯಿಂದ ಹೊರಗಳಿಯುತ್ತಾರೆ. ಬೆಂಗಳೂರಿನಲ್ಲಿರುವ ಕೆಲವು ಖಾಸಗಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗಳು ಮಧ್ಯಮ ವರ್ಗದವರಿಗೆ ನಿಲುಕುವ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ನೀಡುತ್ತಿವೆ. ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ವೈದ್ಯಕೀಯ ಚಿಕಿತ್ಸಾ ವ್ಯವಸ್ಥೆ ಗಗನ ಕುಸುಮವಾಗಿದೆ. ಹಳ್ಳಿಗಳಲ್ಲಿ ಈ ಹೊತ್ತಿಗೂ ಸಣ್ಣ ಪುಟ್ಟ ಕಾಯಿಲೆ ಕಸಾಲೆಗಳಿಗೆ ಜನ ಸಾಮಾನ್ಯರು ಆರ್‌ಎಂಪಿ ವೈದ್ಯರನ್ನು ಅವಲಂಬಿಸಿದ್ದಾರೆ. ತಜ್ಞ ವೈದ್ಯರ ಸೇವೆ ಬೇಕೆಂದರೆ ಅವರು ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಬರಲೇಬೇಕು. ಅಲ್ಲಿ ಉಚಿತ ಸೇವೆ ಸಿಗುತ್ತದೆ ಎಂದೇ ಧಾವಿಸುತ್ತಾರೆ.ಆದರೆ ಅಲ್ಲಿಯ ಅವ್ಯವಸ್ಥೆ ನೋಡಿ ಕಂಗಲಾಗುತ್ತಾರೆ. ಸಣ್ಣಪುಟ್ಟ ಲಂಚದಿಂದ ಬಸವಳಿಯುತ್ತಾರೆ. ಡಾ. ಶರಣ ಪ್ರಕಾಶ ಪಾಟೀಲರು ಸ್ವತಃ ವೈದ್ಯರೂ ಆಗಿರುವುದರಿಂದ ಈ ಎಲ್ಲ ಸಮಸ್ಯೆಗಳಿಗೆ ಸರಳ ಪರಿಹಾರ ಕಂಡು ಕೊಳ್ಳಬಲ್ಲರು. ಒಂದು ಬಾರಿ ವ್ಯವಸ್ಥೆಯನ್ನು ಸರಿ ದಾರಿಗೆ ತಂದರೆ ಅದು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತದೆ. ಮಂತ್ರಿಯಾದವರು ಗುಣಮಟ್ಟದ ಚಿಕಿತ್ಸೆಯನ್ನು ಗಂಭೀರವಾಗಿ ಪರಿಗಣಿಸಿ ಕೆಳ ಹಂತದ ಅಧಿಕಾರಿಗಳಿಗೆ ಹೊಣೆಗಾರರನ್ನಾಗಿಸಿದರೆ ವ್ಯವಸ್ಥೆ ಸರಿಯಾಗುತ್ತದೆ. ಇಲ್ಲಿ ಬಲವಾದ ಇಚ್ಛಾಶಕ್ತಿ ಮತ್ತು ಕಾಳಜಿ ಮುಖ್ಯ. ಶ್ರೀ ಜಯದೇವ ಸಂಸ್ಥೆಗೆ ಈ ಮಟ್ಟದ ವಿಶ್ವಾಸಾರ್ಹತೆ ತಂದು ಕೊಟ್ಟವರು ವೈದ್ಯರು ಮತ್ತವರ ತಂಡ. ಅವರೇನು ದೇವಲೋಕದಿಂದ ಇಳಿದು ಬಂದವರಲ್ಲ. ಜಯದೇವದಲ್ಲಿ ಸಾಧ್ಯವಾದದ್ದು ಜಿಮ್ಸ್, ಕಿಮ್ಸ್ ಅಷ್ಟೇ ಯಾಕೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಾಧ್ಯವಾಗುವುದಿಲ್ಲ? ಕಲಬುರಗಿಯ ಜಯದೇವ ಬೆಂಗಳೂರು ಜಯದೇವದಷ್ಟೇ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆಗೆ ಹೆಸರಾಗಲಿ. ಆ ಮಾದರಿ ಕಲಬುರಗಿ ಮಾತ್ರವಲ್ಲ ಕರ್ನಾಟಕದ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಅನುಕರಣೀಯವಾಗಲಿ. ಕಟ್ಟಡ ಕಟ್ಟುವುದು, ವೈದ್ಯಕೀಯ ಉಪಕರಣ, ಔಷಧಿ ಖರೀದಿಸುವುದು ನಿತ್ಯದ ಕೆಲಸಗಳು. ಅತ್ಯುತ್ತಮ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆ ಕಲ್ಪಿಸುವುದು ಒಂದು ಸರಕಾರದ ಮೊದಲ ಆದ್ಯತೆ ಆಗಬೇಕು. ಕಲಬುರಗಿಯ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಮಾದರಿ ಕೇಂದ್ರವಾಗಲಿ. ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಯ ಸಂಸ್ಕೃತಿ ಎಲ್ಲೆಡೆ ಪಸರಿಸಲು ಪ್ರೇರಣಾ ಸಂಸ್ಥೆಯಾಗಿ ರೂಪು ಗೊಳ್ಳಲಿ. ಸಿದ್ದರಾಮಯ್ಯ ಸರಕಾರ ಮತ್ತು ವೈದ್ಯಕೀಯ ಮಂತ್ರಿ ಡಾ. ಶರಣಪ್ರಕಾಶ ಅವರನ್ನು ಕರ್ನಾಟಕದ ಜನತೆ ಸದಾ ಸ್ಮರಿಸುತ್ತಾರೆ.