ಎಂಪಿ ಎಲೆಕ್ಷನ್: ಮಂತ್ರಿಗಳ ಉತ್ತರದಾಯಿತ್ವ
ಲೋಕಸಭಾ ಚುನಾವಣೆಗೆ ದಿನಗಣನೆ ನಡೆದಿದೆ. ಯಾವುದೇ ಕ್ಷಣ ಚುನಾವಣೆ ಘೋಷಣೆಯಾಗಬಹುದು. ಬಿಜೆಪಿಯ ಪ್ರಶ್ನಾತೀತ ನಾಯಕ ನರೇಂದ್ರ ಮೋದಿಯವರು ‘ಅಬ್‌ಕಿ ಬಾರ್ ಚಾರ್ ಸೌ ಪಾರ್’ ಘೋಷಣೆಯೊಂದಿಗೆ ಚುನಾವಣೆ ಗೆದ್ದ ಹುಮ್ಮಸ್ಸಿನಲ್ಲಿದ್ದಾರೆ. 2024ರ ಲೋಕಸಭಾ ಚುನಾವಣೆ ಗೆಲ್ಲಲು ಏನೆಲ್ಲ ತಂತ್ರ-ಕುತಂತ್ರ ಮಾಡಬೇಕೋ ಅವನ್ನೆಲ್ಲ ಶಕ್ತಿಮೀರಿ ಮಾಡುತ್ತಿದ್ದಾರೆ. ಮೋದಿಯವರು ತಮ್ಮ ವ್ಯಕ್ತಿತ್ವವನ್ನೇ ಪಣಕ್ಕಿಟ್ಟು ಚುನಾವಣಾ ರಣತಂತ್ರ ರೂಪಿಸುತ್ತಿದ್ದಾರೆ. ಮಾಧ್ಯಮಗಳ ಸಂಪೂರ್ಣ ಶಕ್ತಿ ಬಳಸಿಕೊಳ್ಳುವುದರಿಂದ ಹಿಡಿದು ಈ.ಡಿ., ಸಿಬಿಐ ಸೇರಿದಂತೆ ಎಲ್ಲಾ ಸಂಸ್ಥೆಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ‘ಕೇಂದ್ರ ಸರಕಾರವೇ ಅವರ ಕೈಯಲ್ಲಿದೆ. ಚುನಾವಣೆ ಗೆಲ್ಲಲು ಸರಕಾರಿ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ’ ಎಂದು ಪ್ರತಿಪಕ್ಷಗಳು ಟೀಕಿಸುತ್ತಿವೆ. ‘ಇಂಡಿಯಾ’ ಕೂಟದ ನಾಯಕರ ಸರ್ವ ಪ್ರಯತ್ನಗಳನ್ನು ಮೋದಿ ಅವರು ವಿಫಲಗೊಳಿಸುತ್ತಿದ್ದಾರೆ. ಆ ಕೂಟದ ನಾಯಕರನ್ನು ಬಿಜೆಪಿಯತ್ತ ಸೆಳೆಯುವ ಮೂಲಕ ಪ್ರತಿಪಕ್ಷಗಳ ನಾಯಕರ ಆತ್ಮವಿಶ್ವಾಸ ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಇದೆಲ್ಲ ಸಾಧ್ಯವಾಗುತ್ತಿರುವುದು ಮೋದಿಯವರ ಕೈಯಲ್ಲಿ ಅಧಿಕಾರ ಇರುವುದರಿಂದ ಎಂಬುದು ‘ಇಂಡಿಯಾ’ ಕೂಟದ ನಾಯಕರ ಅಭಿಪ್ರಾಯ.
ಮೇಲಿನ ವಾದವನ್ನು ಕರ್ನಾಟಕ ರಾಜ್ಯಕ್ಕೆ ಅನ್ವಯಿಸಿ ನೋಡಬಹುದಲ್ಲ! 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಮುಖಂಡರು ಚುನಾವಣೆ ಗೆಲ್ಲಲು ಏನೆಲ್ಲ ತಂತ್ರ ಕುತಂತ್ರಗಳನ್ನು ಮಾಡಿದರು. ದೇವರು, ಧರ್ಮ, ಹನುಮಾನ್ ಚಾಲೀಸ, ಟಿಪ್ಪು, ಹಿಜಾಬ್, ಹಲಾಲ್-ಜಟ್ಕಾ, ಒಳಮೀಸಲಾತಿ, ಪಂಚಮಸಾಲಿ ಮೀಸಲಾತಿ ಇಷ್ಟು ಸಾಲದೆಂಬಂತೆ ನಟ ಸುದೀಪ್ ಇಮೇಜ್ ಕೂಡ ಬಳಸಿಕೊಂಡರು. ಇಷ್ಟಾಗಿಯೂ ಕರ್ನಾಟಕದಲ್ಲಿ ಬಿಜೆಪಿಗೆ ಕೇವಲ 66 ಸ್ಥಾನಗಳಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು. ಕಾಂಗ್ರೆಸ್ ಪಕ್ಷ 135 ಸ್ಥಾನಗಳಲ್ಲಿ ಗೆದ್ದು ರಾಜ್ಯಾಧಿಕಾರ ಹಿಡಿಯಿತು. ಹಾಗೆ ನೋಡಿದರೆ ಎಲ್ಲಾ ಚುನಾವಣಾ ಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದಿದ್ದವು.ಜಾತ್ಯತೀತ ಜನತಾದಳ ಸರಕಾರ ರಚನೆಯಲ್ಲಿ ನಿರ್ಣಾಯಕ ಪಾತ್ರ ವಹಿಸಬಹುದೆಂದು ಭಾವಿಸಲಾಗಿತ್ತು. ಖುದ್ದು ದೇವೇಗೌಡ-ಕುಮಾರಸ್ವಾಮಿ ಯವರು ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರದಲ್ಲಿ ಪಾಲುದಾರರಾಗುವ ಕನಸು ಕಂಡಿದ್ದರು. ಆದರೆ ಕರ್ನಾಟಕದ ಪ್ರಜ್ಞಾವಂತ ಮತದಾರರು ಎಲ್ಲ ಸಮೀಕ್ಷೆಗಳನ್ನು ಸುಳ್ಳು ಮಾಡಿ ಬಿಜೆಪಿ-ಜೆಡಿಎಸ್‌ಗಳನ್ನು ನಿರ್ದಯವಾಗಿ ತಿರಸ್ಕರಿಸಿದ್ದರು. ಈ ಪ್ರಮಾಣದ ಗೆಲುವು ಲಭಿಸಬಹುದೆಂದು ಕರ್ನಾಟಕ ಕಾಂಗ್ರೆಸ್‌ನ ಯಾವೊಬ್ಬ ಮುಖಂಡನೂ ಆಸೆ ಇಟ್ಟುಕೊಂಡಿರಲಿಲ್ಲ. ಕೇಂದ್ರದಲ್ಲಿ ಬಿಜೆಪಿಯವರ ಕೈಯಲ್ಲಿ ಅಧಿಕಾರ ಇರುವಂತೆ, ಕರ್ನಾಟಕದಲ್ಲಿ ಕಾಂಗ್ರೆಸ್‌ನವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕರ್ನಾಟಕದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಎಲ್ಲಾ ಅವಕಾಶ-ಅನುಕೂಲ ಕಾಂಗ್ರೆಸ್ ಪಕ್ಷಕ್ಕಿದೆ. ಅಷ್ಟಕ್ಕೂ ನರೇಂದ್ರ ಮೋದಿಯವರ ನೇತೃತ್ವದ ಎನ್‌ಡಿಎ ಸರಕಾರದ ಬೆನ್ನಿಗೆ 10 ವರ್ಷಗಳ ಆಡಳಿತ ವಿರೋಧಿ ಹೆಣಭಾರವಿದೆ.
ಕರ್ನಾಟಕದ ಚುನಾವಣಾ ಫಲಿತಾಂಶಗಳ ಪ್ರವೃತ್ತಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ ರಾಜ್ಯದಲ್ಲಿ ಯಾವ ಪಕ್ಷದ ಸರಕಾರ ಇರುತ್ತದೆಯೋ ಅದೇ ಪಕ್ಷದ ಹೆಚ್ಚು ಲೋಕಸಭಾ ಸದಸ್ಯರು ಆಯ್ಕೆಯಾಗಿದ್ದು ಕಂಡುಬರುತ್ತದೆ. 1952ರಿಂದ 1999ರ ಎಲ್ಲಾ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶ ವಿವರಗಳು ಸ್ಪಷ್ಟಪಡಿಸುತ್ತವೆ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಏಕಕಾಲಕ್ಕೆ-ಪ್ರತ್ಯೇಕ ನಡೆದಾಗಲೂ ಮತದಾರರ ತೀರ್ಪು ಒಂದೇ ರೀತಿ ಇದೆ. ಆದರೆ 2004ರ ಸಾರ್ವತ್ರಿಕ ಚುನಾವಣೆಯಿಂದ ಕರ್ನಾಟಕದ ಮತದಾರ ಲೋಕಸಭೆ ಮತ್ತು ವಿಧಾನಸಭೆಗೆ ಭಿನ್ನ ತೀರ್ಪು ನೀಡಲು ಆರಂಭಿಸಿದ. ಈ ಜಾಣ ಮತ್ತು ಸೋಜಿಗದ ತೀರ್ಪಿನ ಬಗ್ಗೆ ವಿಶೇಷ ಅಧ್ಯಯನ ಕೈಗೊಳ್ಳುವ ಅಗತ್ಯವಿದೆ. 2004ರ ಸಾರ್ವತ್ರಿಕ ಚುನಾವಣೆಯವರೆಗೂ ಕರ್ನಾಟಕದಲ್ಲಿ ಬಿಜೆಪಿ ಲೋಕಸಭಾ ಸದಸ್ಯರ ಸಂಖ್ಯೆ ಒಂದಂಕಿ ದಾಟಿರಲಿಲ್ಲ. ಆಶ್ಚರ್ಯದ ಸಂಗತಿ ಎಂದರೆ 2004ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆದಿತ್ತು. ಆ ಚುನಾವಣೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಲೋಕಸಭಾ ಸದಸ್ಯರ ಸಂಖ್ಯೆ ಒಂದಂಕಿ ದಾಟಿತ್ತು. ಬಿಜೆಪಿ 18 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಅದೇ ಅನುಪಾತದಲ್ಲಿ ಬಿಜೆಪಿಗೆ ವಿಧಾನಸಭೆಯಲ್ಲಿ ಸ್ಥಾನಗಳು ಸಿಕ್ಕಿರಲಿಲ್ಲ. ಲೋಕಸಭೆಗೆ ಬಿಜೆಪಿಯ 18 ಸದಸ್ಯರು ಆಯ್ಕೆಯಾದರೆ, ವಿಧಾನಸಭೆಗೆ 79 ಸದಸ್ಯರು ಗೆದ್ದಿದ್ದರು. 5 ವರ್ಷಗಳ ಕಾಲ ಎಸ್.ಎಂ. ಕೃಷ್ಣ ನೇತೃತ್ವದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸಂಖ್ಯಾಬಲ 132ರಿಂದ 65ಕ್ಕೆ ಕುಸಿದಿತ್ತು. ಏಕಕಾಲಕ್ಕೆ ನಡೆದ ಆ ಚುನಾವಣೆಯಲ್ಲಿ ಜಾತ್ಯತೀತ ಜನತಾ ದಳದಿಂದ 58 ಶಾಸಕರು ಗೆದ್ದಿದ್ದರು. ಅದೇ ಅನುಪಾತದಲ್ಲಿ ಲೋಕಸಭೆಗೆ ಹೆಚ್ಚು ಸ್ಥಾನ ಸಿಕ್ಕಿರಲಿಲ್ಲ. ಜಾತ್ಯತೀತ ಜನತಾ ದಳದಿಂದ ಕೇವಲ ಇಬ್ಬರು ಲೋಕಸಭೆಗೆ ಆಯ್ಕೆಯಾಗಿದ್ದರು. ಹಾಗೆ ನೋಡಿದರೆ, ಆಗ ಜನತಾ ಪರಿವಾರದ ಬಹುಪಾಲು ಹಿರಿಯ ಮುಖಂಡರು ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್, ಪಿ.ಜಿ.ಆರ್ ಸಿಂಧ್ಯಾ ಸೇರಿದಂತೆ ಜಾತ್ಯತೀತ ಜನತಾದಳದಲ್ಲೇ ಇದ್ದರು.
ಮತದಾರರ ವಿವೇಕಕ್ಕೊಂದು ಬಲವಾದ ತರ್ಕ ಇದ್ದಿರಲೇಬೇಕು. ಕರ್ನಾಟಕದ ಪ್ರಜ್ಞಾವಂತ ಮತದಾರರ ವಿವೇಕದ ಸ್ವರೂಪವನ್ನು ಅರ್ಥ ಮಾಡಿಕೊಳ್ಳುವಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ವಿಫಲವಾಗಿವೆ. ಮತದಾರರ ಮನಸ್ಥಿತಿಯನ್ನು ವಿಶೇಷವಾಗಿ ಕಾಂಗ್ರೆಸ್ ಪಕ್ಷದವರು ಅರ್ಥ ಮಾಡಿಕೊಂಡಿದ್ದರೆ ಇಷ್ಟು ಹೊತ್ತಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುತ್ತಿದ್ದರು. 2004ರ ಸಾರ್ವತ್ರಿಕ ಚುನಾವಣೆ ಏಕಕಾಲಕ್ಕೆ ನಡೆದರೂ ಕೇಂದ್ರಕ್ಕೆ ಬಿಜೆಪಿ, ಕರ್ನಾಟಕಕ್ಕೆ ಬಿಜೆಪಿ ಬೇಡ ಎಂಬ ಸ್ಪಷ್ಟ ಸಂದೇಶ ಹೊತ್ತ ಭಿನ್ನ ತೀರ್ಪನ್ನು ನಾಡಿನ ಮತದಾರರು ನೀಡಿದ್ದರು. ಇದೇ ಪ್ರವೃತ್ತಿ 2023ರ ವಿಧಾನಸಭಾ ಚುನಾವಣೆಯವರೆಗೂ ಮುಂದುವರಿದಿದೆ, 2008ರ ನಂತರ ಲೋಕಸಭೆ ಮತ್ತು ವಿಧಾನಸಭೆಗೆ ಕರ್ನಾಟಕದಲ್ಲಿ; ಕೇವಲ ಒಂದೇ ಒಂದು ವರ್ಷದ ಅಂತರದಲ್ಲಿ ಪ್ರತ್ಯೇಕ ಚುನಾವಣೆಗಳು ನಡೆದಿವೆ. ಎರಡೂ ಚುನಾವಣೆಗಳ ಫಲಿತಾಂಶ ಸಂಪೂರ್ಣ ಭಿನ್ನವಾಗಿವೆ, ಮಾತ್ರವಲ್ಲ ತದ್ವಿರುದ್ಧವಾಗಿದೆ. 2008ರ ವಿಧಾನಸಭಾ ಚುನಾವಣೆಯಲ್ಲಿ ವಚನಭ್ರಷ್ಟತೆ ಎಂಬ ಯಡಿಯೂರಪ್ಪನವರ ದುರಂತ ಹರಿಕಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಯಿತು. ಅಷ್ಟಾಗಿಯೂ ಬಿಜೆಪಿಗೆ ಕರ್ನಾಟಕದ ಮತದಾರ ಒಲಿಯಲಿಲ್ಲ. ಬಿಜೆಪಿಗೆ 110 ಸ್ಥಾನಗಳು ದೊರೆತವು. ಟಿಕೆಟ್ ಹಂಚಿಕೆಯಲ್ಲಿ ಬೇಕಾಬಿಟ್ಟಿ ಪ್ರಯೋಗ ಮಾಡಿದ ಕಾಂಗ್ರೆಸ್‌ಗೆ 80 ಸ್ಥಾನಗಳು ಲಭಿಸಿದವು. ವಚನಭ್ರಷ್ಟತೆಯ ಕಾರಣದಿಂದ ಜೆಡಿಎಸ್ ಕೇವಲ 28 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು. 2009ರ ಲೋಕಸಭಾ ಚುನಾವಣೆಯ ಹೊತ್ತಿಗೆ ಕರ್ನಾಟಕದ ಮತದಾರರು ಸಂಪೂರ್ಣ ಬದಲಾದರು. ಹಾಗೆ ನೋಡಿದರೆ ಆಗ ಮೋದಿಯೂ ಇರಲಿಲ್ಲ, ಗಾಳಿಯೂ ಇರಲಿಲ್ಲ. 2004ರಿಂದ 2009ರವರೆಗೆ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವಿತ್ತು. ಖ್ಯಾತ ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದರು. ಅತ್ಯುತ್ತಮ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದರು.
ಆದರೆ 2009ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಬಿಜೆಪಿ 19 ಸದಸ್ಯರು ಆಯ್ಕೆಯಾದರು. ‘ಗುಜರಾತ್ ಮಾದರಿ’ ಮೂಲಕ ವಿಶ್ವ ಖ್ಯಾತಿಗಳಿಸಿದ್ದ ನರೇಂದ್ರ ಮೋದಿಯವರು ಆ ಚುನಾವಣೆಯಲ್ಲಿ 26 ಲೋಕಸಭಾ ಸ್ಥಾನಗಳ ಪೈಕಿ ಗೆಲ್ಲಿಸಿಕೊಟ್ಟದ್ದು 15 ಸದಸ್ಯರನ್ನು. ಕಾಂಗ್ರೆಸ್‌ನ 11 ಲೋಕಸಭಾ ಸದಸ್ಯರು ಗೆಲುವು ಸಾಧಿಸಿದ್ದರು. ಕರ್ನಾಟಕದಲ್ಲಿ ಕಾಂಗ್ರೆಸ್ ಶಾಸಕರ ಸಂಖ್ಯೆ 80 ಇತ್ತು. ಆದರೆ ಆರು ಲೋಕಸಭಾ ಸ್ಥಾನಗಳಲ್ಲಿ ಮಾತ್ರ ಗೆಲುವು ಸಿಕ್ಕಿತ್ತು. 28 ಶಾಸಕರನ್ನು ಹೊಂದಿದ್ದ ಜೆಡಿಎಸ್ ಮೂರು ಲೋಕಸಭಾ ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಕರ್ನಾಟಕ ಕಾಂಗ್ರೆಸ್ ನಾಯಕರು ವೈಫಲ್ಯ ಎದ್ದು ಕಾಣುತ್ತದೆ. ಆಗಲೇ ಆತ್ಮಾವಲೋಕನ ಮಾಡಿಕೊಂಡಿದ್ದರೆ ಕಾಂಗ್ರೆಸ್ ಪಕ್ಷ 2014 ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತಿತ್ತು. ಲೋಕಸಭೆ ಚುನಾವಣೆಗೆ ಬಿಜೆಪಿ, ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮತ ನೀಡುವ ಪ್ರವೃತ್ತಿ 2013 ಮತ್ತು 2014ರಲ್ಲಿ ಮುಂದುವರಿಯಿತು. 2013ರ ವಿಧಾನಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 122 ಸ್ಥಾನಗಳಲ್ಲಿ ಗೆದ್ದು ಸರಳ ಬಹುಮತ ಪಡೆದುಕೊಂಡಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂತು. ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಎಚ್.ಕೆ. ಪಾಟೀಲ್ ಸೇರಿದಂತೆ ಘಟಾನುಘಟಿ ನಾಯಕರೆಲ್ಲ ಮಂತ್ರಿಮಂಡಲ ಸೇರಿಕೊಂಡರು. ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ರಚನೆಯಾದ ದಿನದಿಂದಲೇ ಎಲ್ಲಾ ಮಂತ್ರಿಗಳಿಗೆ ಟಾರ್ಗೆಟ್ ಫಿಕ್ಸ್ ಮಾಡಿದ್ದರೆ 2014ರ ಲೋಕಸಭಾ ಚುನಾವಣೆಯಲ್ಲಿ ಏನಿಲ್ಲವೆಂದರೂ ಕನಿಷ್ಠ 20 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದಿತ್ತು. ದುರಂತವೆಂದರೆ ಆ ಚುನಾವಣೆಯಲ್ಲಿ 46 ಶಾಸಕರನ್ನು ಹೊಂದಿದ್ದ ಬಿಜೆಪಿ 17 ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. 122 ಶಾಸಕರನ್ನು ಹೊಂದಿದ್ದ ಕಾಂಗ್ರೆಸ್ 9 ಲೋಕಸಭಾ ಸ್ಥಾನಗಳಿಗೆ ತೃಪ್ತಿಪಟ್ಟು ಕೊಂಡಿತು. 40 ಶಾಸಕರನ್ನು ಹೊಂದಿದ್ದ ಜೆಡಿಎಸ್ ಕೇವಲ ಎರಡು ಸ್ಥಾನಗಳನ್ನು ಗೆಲ್ಲಿಸಿಕೊಳ್ಳಲು ಸಾಧ್ಯವಾಯಿತು.
ಆಗ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ತವರು ಜಿಲ್ಲೆಯ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಪ್ರತಾಪ ಸಿಂಹ ಎಂಬ ಯುವ ಪತ್ರಕರ್ತನಿಗೆ ಬಿಜೆಪಿ ಟಿಕೆಟ್ ನೀಡಿ ಗೆಲ್ಲಿಸಿಕೊಳ್ಳುತ್ತದೆ. ಹಿರಿಯ ಕಾಂಗ್ರೆಸ್ ನಾಯಕ ಎಚ್. ವಿಶ್ವನಾಥ್ ಸೋಲೊಪ್ಪಿಕೊಳ್ಳುತ್ತಾರೆ. ಎಂ.ಬಿ. ಪಾಟೀಲ್, ಲಿಂಗಾಯತ ಕೋಟದಲ್ಲಿ ಜಲಸಂಪನ್ಮೂಲದಂತಹ ಪ್ರಮುಖ ಖಾತೆಗೆ ಮಂತ್ರಿಯಾಗಿದ್ದಾಗಲೂ ವಿಜಯಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ರಮೇಶ್ ಜಿಗಜಿಣಗಿ ಅನಾಯಾಸವಾಗಿ ಗೆಲುವು ಸಾಧಿಸುತ್ತಾರೆ. ಕಲಬುರ್ಗಿ ಭಾಗದ ಲಿಂಗಾಯತ ಕೋಟಾದಲ್ಲಿ ವೈದ್ಯಕೀಯ ಖಾತೆಯ ಮಂತ್ರಿಯಾಗಿದ್ದ ಡಾ. ಶರಣಪ್ರಕಾಶ್ ಪಾಟೀಲ್ ಲಿಂಗಾಯತ ಮತಗಳನ್ನು ಸೆಳೆಯುವಲ್ಲಿ ವಿಫಲರಾಗಿದ್ದರಿಂದ ಲಿಂಗಾಯತ ಪ್ರಾಬಲ್ಯದ ಬೀದರ್, ಕೊಪ್ಪಳ, ಬಳ್ಳಾರಿ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ. ಆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಹೊಸಬನ ಎದುರು ಹೀನಾಯವಾಗಿ ಸೋಲುತ್ತಾರೆ. ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸೋತ ವ್ಯಕ್ತಿ. ಬೆಂಗಳೂರಿನ ಎಲ್ಲಾ ಲೋಕಸಭಾ ಕ್ಷೇತ್ರಗಳು ಬಿಜೆಪಿ ಪಾಲಾಗುತ್ತವೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ಪಹ್ಲಾದ್ ಜೋಶಿ ಹ್ಯಾಟ್ರಿಕ್ ಗೆಲುವು ದಾಖಲಿಸುತ್ತಾರೆ. ಧಾರವಾಡದ ಸೋಲಿಗೆ ಸಂತೋಷ್ ಲಾಡ್, ಕೊಪ್ಪಳದ ಸೋಲಿಗೆ ಶಿವರಾಜ ತಂಗಡಗಿ, ಬಳ್ಳಾರಿ ಲೋಕಸಭಾ ಕ್ಷೇತ್ರದ ಸೋಲಿಗೆ ಪರಮೇಶ್ವರ ನಾಯಕ ಹೊಣೆ ಹೊರುವುದಿಲ್ಲ. ಬೆಳಗಾವಿ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಸೋತಿದ್ದಕ್ಕೆ ಆರ್.ವಿ. ದೇಶಪಾಂಡೆ, ಸತೀಶ್ ಜಾರಕಿಹೊಳಿಯವರು ಆತ್ಮಾವಲೋಕನ ಮಾಡಿಕೊಳ್ಳಬೇಕಿತ್ತು.
ಮಂತ್ರಿಮಂಡಲದಲ್ಲಿ ಎಲ್ಲಾ ಸಮುದಾಯದವರಿಗೆ ಪ್ರಾತಿನಿಧ್ಯ ಕಲ್ಪಿಸುವುದೇ ಮಂತ್ರಿಗಳು ಪ್ರತಿನಿಧಿಸುವ ಜಾತಿಗಳ ಮತ ಸೆಳೆಯಲು. ಮಂತ್ರಿ-ನಾಯಕನಾದವ ತನ್ನ ಸಮುದಾಯದ ಮೇಲೆ ಹಿಡಿತ ಸಾಧಿಸುತ್ತಲೇ, ಬೇರೆ ಸಮುದಾಯಗಳ ಪ್ರೀತಿ-ವಿಶ್ವಾಸಕ್ಕೆ ಪಾತ್ರನಾಗಿರಬೇಕು. ಹಲವು ವರ್ಷಗಳ ಕಾಲ ಶಾಸಕ-ಮಂತ್ರಿಯಾಗಿದ್ದವರು ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸುವುದು ಆದ್ಯ ಕರ್ತವ್ಯ ಆಗಿರುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಅವರ ಗೆಲುವಿನಲ್ಲಿ ಮಾಲೀಕಯ್ಯ ಗುತ್ತೇದಾರ, ಮಂತ್ರಿ ಖಮರುಲ್ ಇಸ್ಲಾಂ, ಬಾಬುರಾವ್ ಚಿಂಚನಸೂರ್, ಡಾ. ಎ.ಬಿ. ಮಾಲಕರೆಡ್ಡಿಯವರ ಪಾಲು ಇತ್ತು. ನಂತರದ ದಿನಗಳಲ್ಲಿ ಆ ಎಲ್ಲರನ್ನು ಕಡೆಗಣಿಸಲಾಯಿತು. ಲೋಕಸಭಾ ಚುನಾವಣೆಯಲ್ಲಿ ಜವಾಬ್ದಾರಿ ಹೊತ್ತು ಅಭ್ಯರ್ಥಿಗಳ ಗೆಲುವಿಗೆ ಕಾರಣರಾದವರ ಬೆನ್ನುತಟ್ಟಿ, ಸೋತ ಕಡೆ ನೈತಿಕ ಹೊಣೆ ಹೊರಿಸಿದ್ದರೆ ಕಾಂಗ್ರೆಸ್‌ಗೆ ಕೆಟ್ಟ ದಿನಗಳು ಬರುತ್ತಿರಲಿಲ್ಲ. 2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಸರಕಾರವಿತ್ತು. ಚುನಾವಣೆಯನ್ನು ಎರಡೂ ಪಕ್ಷಗಳು ಒಟ್ಟಿಗೆ ಎದುರಿಸಿದ್ದವು. ಮೈತ್ರಿ ಸರಕಾರದಲ್ಲಿ ಡಿ.ಕೆ. ಶಿವಕುಮಾರ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್‌ನ ಪ್ರಮುಖರೆಲ್ಲ ಮಂತ್ರಿಯಾಗಿದ್ದರು.
2019ರ ಲೋಕಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಎಲ್ಲಾ ನಾಯಕರನ್ನು ಮತ್ತು ಮಂತ್ರಿಗಿರಿ ಅನುಭವಿಸಿದ್ದ ಉಭಯ ಪಕ್ಷದ ಶಾಸಕರ ಹೊಣೆಗಾರಿಕೆಯನ್ನು ಮನವರಿಕೆ ಮಾಡಿ ಕೊಡುವಂತಿತ್ತು. ಜೆಡಿಎಸ್ ಅಧಿನಾಯಕ ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡರು, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಸೇರಿದಂತೆ ಹಲವರು ಹೀನಾಯವಾಗಿ ಸೋಲುಂಡಿದ್ದರು. ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಸಮನ್ವಯತೆ ಕೊರತೆ ಇತ್ತು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆಯಾ ಪಕ್ಷದ ಮಂತ್ರಿಗಳು ತಮ್ಮ ಪಕ್ಷದ ಅಭ್ಯರ್ಥಿಗಳ ಸೋಲಿನ ಹೊಣೆ ಹೊರುವ, ಆತ್ಮಾವಲೋಕನ ಮಾಡಿಕೊಳ್ಳುವ ಕನಿಷ್ಠ ಸೌಜನ್ಯವನ್ನೂ ತೋರಲೇ ಇಲ್ಲ. 80 ಶಾಸಕ ಬಲದ ಕಾಂಗ್ರೆಸ್ ಪಕ್ಷ ಆ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ ಒಂದು ಸ್ಥಾನ. 37 ಶಾಸಕರನ್ನು ಹೊಂದಿದ್ದ ಜೆಡಿಎಸ್ ಆರು ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನದಲ್ಲಿ ಗೆದ್ದಿತ್ತು. 22 ಸ್ಥಾನಗಳಲ್ಲಿ ಸ್ಪರ್ಧಿಸಿ ಒಂದು ಸ್ಥಾನದಲ್ಲಿ ಗೆದ್ದಿದ್ದ ಕಾಂಗ್ರೆಸ್ ಪಕ್ಷ ಆ ಸೋಲನ್ನು ಗಂಭೀರವಾಗಿ ಪರಿಗಣಿಸಿ ಸೋಲಿನಿಂದ ಪಾಠ ಕಲಿಯಬೇಕಿತ್ತು. 104 ಸದಸ್ಯರನ್ನು ಹೊಂದಿದ್ದ ಬಿಜೆಪಿ ಕೈಯಲ್ಲಿ ಅಧಿಕಾರವೂ ಇರಲಿಲ್ಲ. 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿ ಇತಿಹಾಸ ಸೃಷ್ಟಿಸಿತು. ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಗೆದ್ದಿದ್ದು ಬಿಜೆಪಿಯ ಬೆಂಬಲದಿಂದಲೇ.
2024ರ ಲೋಕಸಭಾ ಚುನಾವಣೆ ಗೆಲ್ಲಲು ನರೇಂದ್ರ ಮೋದಿಯವರಿಗೆ ಇರುವಷ್ಟೇ ಅವಕಾಶ-ಅಧಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂತ್ರಿಮಂಡಲದ ಸದಸ್ಯರಿಗಿದೆ. ಕೇಂದ್ರದ ಬಿಜೆಪಿ ಸರಕಾರಕ್ಕೆ ಹತ್ತು ವರ್ಷಗಳ ಆಡಳಿತ ವಿರೋಧಿ ಬ್ಯಾಗೇಜ್ ಇದೆ. ಈ ಹಿಂದೆಯೂ ಅಧಿಕಾರ ಅನುಭವಿಸಿದ್ದ ಜಾರ್ಜ್, ಡಿ.ಕೆ. ಶಿವಕುಮಾರ್, ಮಹದೇವಪ್ಪ, ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ, ಎಸ್.ಎಸ್. ಮಲ್ಲಿಕಾರ್ಜುನ್, ಶಿವಾನಂದ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಶಿವರಾಜ್ ತಂಗಡಗಿ ಹಲವರು ತಮ್ಮ ಮಂತ್ರಿಗಿರಿಯನ್ನು ಪಣಕ್ಕಿಟ್ಟು ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕಿದೆ. ಮಂತ್ರಿಗಿರಿ ಅನುಭವಿಸುವವರಿಗೆ ಸರಕಾರ ಮತ್ತು ಪಕ್ಷದಲ್ಲಿ ಉತ್ತರದಾಯಿತ್ವ ಇರಬೇಕಲ್ಲವೇ? ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಹೊಣೆಗಾರಿಕೆಯನ್ನು ಈಶ್ವರ ಖಂಡ್ರೆ, ಡಾ. ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ಬಿ.ನಾಗೇಂದ್ರ, ಶಿವರಾಜ ತಂಗಡಗಿ ಹೊತ್ತುಕೊಳ್ಳಬೇಕು. ವಿಜಯಪುರದಲ್ಲಿ ರಮೇಶ್ ಜಿಗಜಿಣಗಿ, ಬಾಗಲಕೋಟೆಯಲ್ಲಿ ಗದ್ದಿಗೌಡರನ್ನು ಸೋಲಿಸುವ ಗುರಿ ಮಂತ್ರಿಗಳಾದ ಶಿವಾನಂದ ಪಾಟೀಲ್, ಎಂ.ಬಿ. ಪಾಟೀಲ್‌ರಿಗೆ ನೀಡಬೇಕು. ಅಷ್ಟು ಮಾತ್ರವಲ್ಲ, ಲಿಂಗಾಯತ ಬಾಹುಳ್ಯದ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಈಶ್ವರ ಖಂಡ್ರೆ, ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಎಲ್ಲಾ ಲಿಂಗಾಯತ ಮಂತ್ರಿಗಳಿಗೆ ನೀಡಬೇಕು. ಸೋಲನ್ನು ಅವರ ತಲೆಗೇ ಕಟ್ಟಬೇಕು.
ಬಿಜೆಪಿ ವಿರುದ್ಧ, ಮೋದಿಯವರ ವಿರುದ್ಧ ಸೈದ್ಧಾಂತಿಕ ನೆಲೆಯಲ್ಲಿ ಟೀಕಿಸುವುದು, ಸಶಕ್ತ ಕಥಾನಕ ರೂಪಿಸುವುದು ಒಂದು ಭಾಗ. ಲೋಕಸಭಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿ ಕೊಡುವುದು ನಿಜವಾದ ನಾಯಕತ್ವದ ಗುಣ. ಕಾಂಗ್ರೆಸ್ ಮುಖಂಡರಾದ ಡಿ.ಕೆ. ಶಿವಕುಮಾರ್ ಆದಿಯಾಗಿ ಎಂ.ಬಿ. ಪಾಟೀಲ್ ಮುಂತಾದ ಗೂಟದ ಕಾರಿನ ಫಲಾನುಭವಿಗಳು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಿಸಿಕೊಡದಿದ್ದರೆ ಅವರ ನಾಯಕತ್ವ ಪ್ರಶ್ನಾರ್ಹವಾಗುತ್ತದೆ. ಪಕ್ಷದಿಂದ ಅಧಿಕಾರ ಪಡೆದವರು ಪಕ್ಷದ ಉಳಿವಿಗೆ ಯತ್ನಿಸಬೇಕಲ್ಲವೇ? ಅಧಿಕಾರ ಜನರಿಗಾಗಿ ಬಳಸಿದ್ದರೆ ಜನ ಖಂಡಿತ ಕೈಹಿಡಿಯುತ್ತಾರೆ.