ಒಂದು ವರ್ಷ ಪೂರೈಸಿದ ಕಾಂಗ್ರೆಸ್ ಸರಕಾರ
Photo : PTI
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಮೇ 20ಕ್ಕೆ ಒಂದು ವರ್ಷ ಪೂರೈಸಿದೆ. ಸರಕಾರವೇನೋ ಸಾಧನೆಯ ಬಹುದೊಡ್ಡ ಪಟ್ಟಿಯನ್ನೇ ನೀಡಿದೆ. ಬಿಜೆಪಿ ಮುಖಂಡರಾದ ಆರ್. ಅಶೋಕ್, ಬಿ.ವೈ. ವಿಜಯೇಂದ್ರ, ಬಸವರಾಜ ಬೊಮ್ಮಾಯಿ ಮುಂತಾದವರು ಸೊನ್ನೆ ಸಾಧನೆ, ಕೊಲೆ ಭಾಗ್ಯ ಮಾತ್ರ ನೀಡಿದ್ದಾರೆ ಎಂದು ಅತ್ಯಂತ ಅಸೂಕ್ಷ್ಮ ಮತ್ತು ಆಧಾರರಹಿತ ಟೀಕೆ ಮಾಡಿದ್ದಾರೆ. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಬಿಜೆಪಿ ದಾಖಲೆ ಸಮೇತ ಸರಕಾರದ ವೈಫಲ್ಯಗಳನ್ನು ಅನಾವರಣಗೊಳಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಜಿ. ಮಹಾಂತೇಶ್ ತಮ್ಮ ‘ದಿ ಫೈಲ್’ನಲ್ಲಿ ಒದಗಿಸಿದ ಮಾಹಿತಿಯನ್ನು ಅಧ್ಯಯನ ಮಾಡಿ ಪತ್ರಿಕಾಗೋಷ್ಠಿಗಳಲ್ಲಿ ಹೇಳಿದ್ದರೂ ಪ್ರತಿಪಕ್ಷವಾಗಿ ಬಿಜೆಪಿ ಹೊಣೆಗಾರಿಕೆ ನಿಭಾಯಿಸುತ್ತಿದೆ ಎಂದು ಭಾವಿಸಬಹುದಿತ್ತು. ಆಡಳಿತ ಪಕ್ಷದ ವೈಫಲ್ಯಗಳನ್ನು ದಾಖಲೆ ಸಮೇತ ಎತ್ತಿ ತೋರಿಸಿದಾಗಲೇ ಆಡಳಿತ ವಿರೋಧಿ ಅಲೆ ರೂಪುಗೊಳ್ಳುವುದು. 2023ರ ವಿಧಾನಸಭೆಯ ಚುನಾವಣೆಯ ನಂತರ ಪ್ರಮುಖ ಪತಿಪಕ್ಷವಾಗಿರುವ ಬಿಜೆಪಿ ಆರು ತಿಂಗಳು ಕಳೆದರೂ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿರಲಿಲ್ಲ. ಅಳೆದು ತೂಗಿ ಬಿಜೆಪಿ ಆರ್. ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಮರ್ಥವಾಗಿ ಎದುರಿಸುವಷ್ಟು ತಿಳುವಳಿಕೆ, ಅನುಭವ ಆರ್. ಅಶೋಕ್ ಅವರಿಗೆ ಇಲ್ಲ ಎನ್ನುವುದು ಬಜೆಟ್ ಅಧಿವೇಶನದಲ್ಲೇ ಸಾಬೀತಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಗತ್ತು, ಧೈರ್ಯ ಇದೆ. ಆದರೆ ಅವರಿಗೆ ಸಮಗ್ರ ಕರ್ನಾಟಕದ ಬಗ್ಗೆ ಅಧಿಕೃತ ಜ್ಞಾನ ಇಲ್ಲ.
ಕರ್ನಾಟಕದಲ್ಲಿನ ಇಲೆಕ್ಟ್ರಾನಿಕ್ಸ್ ಮಾಧ್ಯಮಗಳು ಆಡಳಿತ ಪಕ್ಷದ ವೈಫಲ್ಯಗಳನ್ನು ಅನಾವರಣಗೊಳಿಸುವಷ್ಟು ಸಮರ್ಥವಾಗಿವೆ. ಆದರೆ ಅವುಗಳಿಗೆ ಅಭಿವೃದ್ಧಿ ರಾಜಕಾರಣ ಮತ್ತು ರಚನಾತ್ಮಕ ಟೀಕೆಗಳಲ್ಲಿ ನಂಬಿಕೆ-ಆಸಕ್ತಿ ಇಲ್ಲ. ವಿವಾದಾತ್ಮಕ ಹೇಳಿಕೆಗಳನ್ನು ಪಡೆದುಕೊಂಡು ಬಿತ್ತರಿಸುವುದು, ಹೇಳಿಕೆಗಳಿಗೆ ಪ್ರತಿ ಹೇಳಿಕೆ ಪಡೆದು ವಿವಾದವನ್ನು ತಾರಕಕ್ಕೇರುವಂತೆ ಮಾಡುವುದು ಇಲೆಕ್ಟ್ರಾನಿಕ್ಸ್ ಮಾಧ್ಯಮಗಳ ಚಾಳಿಯಾಗಿಬಿಟ್ಟಿದೆ. ವಿವಾದಗಳಿಗೆ ಪೆಟ್ರೋಲ್ ಹಾಕಿ, ಬೆಂಕಿ-ಬಿರುಗಾಳಿ ಸೃಷ್ಟಿಸುವಲ್ಲಿ ಸಾರ್ಥಕತೆ ಕಂಡುಕೊಳ್ಳುತ್ತಿವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಯಾವೊಂದು ಚಾನಲ್ ಕೂಡ ಮಂತ್ರಿಗಳನ್ನು ಕರೆಸಿ ಆಯಾ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಸಾಧನೆ-ವೈಫಲ್ಯಗಳ ಕುರಿತು ವಿಶೇಷ ಸಂದರ್ಶನ ನಡೆಸಿದ ನಿದರ್ಶನ ದೊರೆಯುವುದಿಲ್ಲ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಆಯಾ ಇಲಾಖೆಗಳ ಮಂತ್ರಿಗಳ ಕಾರ್ಯಕ್ಷಮತೆ ಅಥವಾ ಲೋಪಗಳ ಬಗ್ಗೆ ಒಂದೇ ಒಂದು ಕಾರ್ಯಕ್ರಮ ಬಿತ್ತರಿಸಿಲ್ಲ. ‘‘ನಿಮ್ಮ ಬಗ್ಗೆ ಯತ್ನಾಳ್ ಹಾಗೆ ಹೇಳಿದರು ನೀವೇನಂತೀರಿ?’’, ‘‘ಕುಮಾರಸ್ವಾಮಿ ಹೀಗೆ ಹೇಳಿದರು ನಿಮ್ಮ ಪ್ರತಿಕ್ರಿಯೆ ಏನು?’’-ಇಂತಹ ಕೆಲಸಕ್ಕೆ ಬಾರದ ವಿಷಯಗಳೇ ಚರ್ಚೆಯೆ ವಸ್ತುಗಳಾಗಿ 24/7 ವಿಜೃಂಭಿಸುತ್ತಿವೆ. ಅಭಿವೃದ್ಧಿ ಮತ್ತು ಜನಹಿತದ ಮಾತುಗಳೇ ಮಾಯವಾಗಿವೆ.
ಸಿದ್ದರಾಮಯ್ಯನವರ ಸಚಿವ ಸಂಪುಟದ ಯಾವೊಬ್ಬ ಮಂತ್ರಿಯೂ ನಿಷ್ಠುರವಾಗಿ ‘‘ನನ್ನ ಇಲಾಖೆಗೆ ಸಂಬಂಧಿಸಿದ ಜನಹಿತ ಪ್ರಶ್ನೆಗಳನ್ನು ಮಾತ್ರ ಕೇಳಿ’’ ಎಂದು ಹೇಳಿದ್ದು ನೋಡಲು ಸಿಗುವುದಿಲ್ಲ. ಈ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಡೆದ ಮೊದಲ ಅಧಿವೇಶನದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರು, ರೈತರ ಸಾಲ ಮನ್ನಾ ಇತ್ಯಾದಿ ಮಾತನಾಡುತ್ತಿದ್ದರು. ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ಬೆಳಕಿಗೆ ಬಂದ ಮೇಲೆ ಕುಮಾರಸ್ವಾಮಿಯವರ ಮಾತುಗಳು ಡಿ.ಕೆ. ಶಿವಕುಮಾರ್ ಅವರನ್ನು ಟೀಕಿಸುವಲ್ಲಿ ವ್ಯಯವಾಗುತ್ತಿವೆ. ದ್ವೇಷ, ಪ್ರತೀಕಾರ, ಆಕ್ರೋಶ ಸ್ಥಾಯಿಭಾವವಾಗಿವೆ. ಮಾಜಿ ಮುಖ್ಯಮಂತ್ರಿಯಾಗಿರುವ ಅವರ ಅನುಭವ, ಜ್ಞಾನ ಕರ್ನಾಟಕವನ್ನು ಮುನ್ನಡೆಸುವಲ್ಲಿ ನೆರವಾಗಬೇಕು. ಹಿನ್ನಡೆ ಅನುಭವಿಸಿರುವ ಅವರ ಪಕ್ಷದ ಬಲವರ್ಧನೆಗೆ ಕುಮಾರಸ್ವಾಮಿಯವರ ಜಾಣ್ಮೆ, ತಂತ್ರಗಾರಿಕೆ ಬಳಕೆಯಾಗಬೇಕು.
ಅಷ್ಟೋ ಇಷ್ಟೋ ಮುದ್ರಣ ಮಾಧ್ಯಮಗಳು ರಚನಾತ್ಮಕ ಟೀಕೆಗಳನ್ನು ಮಾಡುತ್ತಿವೆ. ಅವು ಕೂಡ ವಿವಾದಾತ್ಮಕ ಸುದ್ದಿಗಳಿಂದ ಹೊರತಾಗಿಲ್ಲ. ಮಂತ್ರಿಗಳು, ಶಾಸಕರು ಮಾಡುತ್ತಿರುವ ಜನಹಿತದ ಅಥವಾ ಜನ ವಿರೋಧಿ ಕೆಲಸಗಳ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಸರಕಾರ ವೈಫಲ್ಯಗಳನ್ನು ಪತ್ತೆಹಚ್ಚಿ ಜನಪರ ಮತ್ತು ಅಭಿವೃದ್ಧಿ ಕಾರ್ಯಗಳು ನಡೆಯುವಂತೆ ಮಾಡುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಸರಕಾರದ ಲೋಪಗಳನ್ನು ಎತ್ತಿ ತೋರಿಸುವುದೆಂದರೆ ಆ ಸರಕಾರದಲ್ಲಿರುವವರಿಗೆ ಎಚ್ಚರಿಕೆಯ ಸೂಚನೆ ನೀಡಿದಂತೆ.
ಆಡಳಿತ ನಡೆಸುತ್ತಿರುವ ಸರಕಾರದ ವೈಫಲ್ಯಗಳನ್ನು ಮಾಧ್ಯಮದವರು, ಪ್ರತಿಪಕ್ಷದವರು ಬಯಲಿಗೆ ತರಲಿಲ್ಲವೆಂದ ಮಾತ್ರಕ್ಕೆ ಜನಸಾಮಾನ್ಯರಿಗೆ ಗೊತ್ತಿರುವುದಿಲ್ಲವೆಂದು ಭಾವಿಸಿದರೆ ಮೂರ್ಖತನವೇ ಸರಿ. ಜನಸಾಮಾನ್ಯರು ಅದರಲ್ಲೂ ಕರ್ನಾಟಕದ ಜನ ಸರಕಾರದ ಆಡಳಿತ ವೈಖರಿಯನ್ನು ಮೌಲ್ಯಮಾಪನ ಮಾಡಿ ನಿರ್ಣಯ ಕೈಗೊಳ್ಳುವಲ್ಲಿ ನಿಸ್ಸೀಮರು. 1980ರ ನಂತರ ಯಾವ ಪಕ್ಷದ ಸರಕಾರವನ್ನೂ ಮರು ಆಯ್ಕೆ ಮಾಡಿಲ್ಲ. ನೂರಾರು ಕೋಟಿ ರೂ. ಮೊತ್ತದ ಜಾಹೀರಾತು ನೀಡಿ ಎಷ್ಟೇ ಪ್ರಚಾರ ಪಡೆದುಕೊಂಡರೂ, ಕರ್ನಾಟಕದ ಮತದಾರ ಅಭಿವೃದ್ಧಿ ಯೋಜನೆಗಳ ಫಲ ತನಗೆ ದೊರೆಯದೆ ಹೋದರೆ ಆ ಸರಕಾರವನ್ನು ಒಪ್ಪಿಕೊಳ್ಳುವುದಿಲ್ಲ. ಈಗ ಸಿದ್ದರಾಮಯ್ಯನವರ ಸರಕಾರದ ಆಡಳಿತ ವೈಖರಿಯನ್ನೇ ಗಮನಿಸಿ. ಐದು ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ವಿಶೇಷ ಆಸಕ್ತಿ ವಹಿಸಿದ್ದರಿಂದ ಈ ಯೋಜನೆ ಫಲಾನುಭವಿಗಳಿಗೆ ತಲುಪಿದೆ. ಮೇ 19ರವರೆಗೆ ರಾಜ್ಯ ಸರಕಾರ ಗ್ಯಾರಂಟಿಗಾಗಿ ಒಟ್ಟು 44,816 ಕೋಟಿ ರೂ. ಖರ್ಚು ಮಾಡಿದೆ. ಗೃಹಲಕ್ಷ್ಮಿಗಾಗಿ ರೂ. 23,098 ಕೋಟಿ, ಗೃಹಜ್ಯೋತಿಗಾಗಿ ರೂ. 10,207 ಕೋಟಿ, ಶಕ್ತಿ ಯೋಜನೆಗಾಗಿ ರೂ. 4,054 ಕೋಟಿ, ಅನ್ನ ಭಾಗ್ಯಕ್ಕಾಗಿ ರೂ. 7,364 ಕೋಟಿ ಮತ್ತು ಯುವನಿಧಿಗಾಗಿ ರೂ. 93 ಕೋಟಿ ನೇರವಾಗಿ ಫಲಾನುಭವಿಗಳಿಗೆ ವರ್ಗಾಯಿಸಲಾಗಿದೆ. ಗ್ಯಾರಂಟಿಗಳ ಬಗ್ಗೆ ಜನ ಸಂತುಷ್ಟರಾಗಿದ್ದಾರೆ. ಸರಕಾರದ ಅಭಿವೃದ್ಧಿ ಯೋಜನೆಗಳೆಂದರೆ; ಗ್ಯಾರಂಟಿ ಮಾತ್ರವಲ್ಲ.
ಅಧಿಕೃತವಾಗಿ ದೊರೆತ ಮಾಹಿತಿ ಪ್ರಕಾರ ಎಂಟು ಪ್ರಮುಖ ಸಚಿವಾಲಯಗಳಲ್ಲಿ 35,471 ಕಡತಗಳು ವಿಲೇವಾರಿಗಾಗಿ ಬಾಕಿ ಇವೆಯಂತೆ. 14,372 ಕಡತಗಳು ಚಾಲನೆಯಲ್ಲಿವೆ. 21,009 ಕಡತಗಳು ಅತಂತ್ರ ಸ್ಥಿತಿಯಲ್ಲಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಲೋಕೋಪಯೋಗಿ ಮಂತ್ರಿ ಸತೀಶ್ ಜಾರಕಿಹೊಳಿ ಸೇರಿದಂತೆ ಒಟ್ಟು ಎಂಟು ಸಚಿವರ ಇಲಾಖೆಗಳಲ್ಲಿ ಕಡತಗಳು ವಿಲೇವಾರಿಗಾಗಿ ಕಾಯುತ್ತಿವೆ. ಅಷ್ಟೇ ಯಾಕೆ ಸ್ವಯಂ ಮುಖ್ಯಮಂತ್ರಿಯವರ ವ್ಯಾಪ್ತಿಗೆ ಬರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ 1,107 ಕಡತಗಳು ವಿಲೇವಾರಿ ಆಗದೆ ಧೂಳು ತಿನ್ನುತ್ತಿವೆ. ವಾಣಿಜ್ಯ ತೆರಿಗೆ ಇಲಾಖೆ ಸೇರಿದಂತೆ ತೆರಿಗೆ ಸಂಗ್ರಹದ ಹೊಣೆ ಹೊತ್ತವರು ನಿರೀಕ್ಷಿತ ಗುರಿ ಮುಟ್ಟಿಲ್ಲ. ಇದು ಸಹಜವಾಗಿಯೇ ಆರ್ಥಿಕ ಸಂಕಷ್ಟಕ್ಕೆ ದೂಡುತ್ತದೆ. ಭೂ ಕಂದಾಯ, ನೀರಿನ ಕರ, ದಂಡ ಸಂಗ್ರಹದಲ್ಲಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ. 2023-24ರಲ್ಲಿ ಕೇವಲ 29.76 ಕೋಟಿ ರೂ. ವಸೂಲಿ ಮಾಡಲಾಗಿದೆ. 1.484.29 ಕೋಟಿ ರೂ. ವಸೂಲಿ ಮಾಡಿಲ್ಲ. ರೂಟ್ಸ್ಟಾಕ್ ಯೋಜನೆಯಲ್ಲಿ ಅರಣ್ಯಾಧಿಕಾರಿಗಳು ನೂರಾರು ಕೋಟಿ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಹಿಂದಿನ ಸರಕಾರ ಚಾಣಕ್ಯ ವಿಶ್ವವಿದ್ಯಾನಿಲಯಕ್ಕೆ 300 ಕೋಟಿ ರೂ. ಬೆಲೆಬಾಳುವ 116 ಎಕರೆ 16 ಗುಂಟೆ ಜಮೀನನ್ನು ಮಂಜೂರು ಮಾಡಿತ್ತು. ಅದನ್ನು ಹಿಂಪಡೆಯುವುದಾಗಿ ಕಾಂಗ್ರೆಸ್ ಸರಕಾರ ಹೇಳಿತ್ತು. ಇಲ್ಲಿಯವರೆಗೂ ಹಿಂಪಡೆಯುವ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ.
ಉನ್ನತ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಆಗರವಾಗಿದೆ. ಸಮಗ್ರ ವಿಶ್ವವಿದ್ಯಾನಿಲಯದ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ(ಯುಯುಸಿಎಂಎಸ್)ಯಲ್ಲಿನ ಹಗರಣದ ತನಿಖೆ ಸಿಐಡಿಗೆ ಒಪ್ಪಿಸಲು ಮುಖ್ಯಮಂತ್ರಿಗಳು ಟಿಪ್ಪಣಿ ಕಳಿಸಿದ್ದಾರೆ. ಆ ಟಿಪ್ಪಣಿಗೆ ಬೆಲೆಯೇ ಇಲ್ಲ. ಪಶು ವೈದ್ಯ ಸಹಾಯಕರ ನೇಮಕದಲ್ಲಿ ಅಕ್ರಮ ನಡೆದಿದೆ. ಮೀಸಲಾತಿ ನಿಯಮಗಳನ್ನೇ ಉಲ್ಲಂಘಿಸಿ ಅರ್ಹರಿಗೆ ಅನ್ಯಾಯ ಮಾಡಲಾಗಿದೆ. ಒಟ್ಟು 250 ಹುದ್ದೆಗಳ ನೇಮಕಾತಿಯಲ್ಲಿ ಸಾಕಷ್ಟು ಹಣದ ವಹಿವಾಟು ನಡೆದಿರುವ ಆರೋಪ ಕೇಳಿಬಂದಿದೆ. ದೊಡ್ಡ ಸುದ್ದಿಯಾಗಿಲ್ಲವಷ್ಟೆ. ರಾಜ್ಯದ ವಿವಿಧೆಡೆಗಳಲ್ಲಿ ನಿರ್ಮಾಣವಾಗಿರುವ ಎಸ್ಟಿಪಿಗಳನ್ನು ನಿರ್ವಹಣೆ ಮಾಡಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ರೂಪಿಸಿದೆ. ಆ ನಿಯಮಗಳನ್ನು ಪಾಲಿಸುತ್ತಿಲ್ಲ. ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮ್ಯಾನ್ಹೋಲ್, ಸೆಪ್ಟಿಕ್ ಟ್ಯಾಂಕ್, ಒಳಚರಂಡಿಗಳನ್ನು ಸ್ವಚ್ಛ ಮಾಡುವ ಕಾರ್ಮಿಕರಿಗೆ ಸೂಕ್ತ ತರಬೇತಿ ನೀಡಿಲ್ಲ. ಎಲ್ಲಕ್ಕೂ ಮಿಗಿಲಾಗಿ ಇಂತಹ ಕೆಲಸಗಳಲ್ಲಿ ಆಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಕೆ ಮಾಡುತ್ತಿಲ್ಲ. ಹೀಗಾಗಿ ವಿಷಪೂರಿತ ಗಾಳಿ ಸೇವಿಸಿ ಸಾವುಗಳು ಸಂಭವಿಸುತ್ತಿವೆ. ಸ್ವಚ್ಛತಾ ಕಾರ್ಯದಲ್ಲಿ ನಿರತರಾದ 94 ಮ್ಯಾನ್ಹೋಲ್, ಸೆಪ್ಟಿಕ್ ಟ್ಯಾಂಕ್ ಕಾರ್ಮಿಕರು ಜೀವ ಕಳೆದುಕೊಂಡಿದ್ದಾರೆ. ಐದು ಗ್ಯಾರಂಟಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭಿವೃದ್ಧಿ ಯೋಜನೆಗಳಲ್ಲಿ ಭ್ರಷ್ಟಾಚಾರ ಸಹಜ ಎನ್ನುವಷ್ಟು ನಡೆಯುತ್ತಿದೆ. ಹಿಂದಿನ ಬಿಜೆಪಿ ಸರಕಾರದಲ್ಲಿ 40 ಪರ್ಸೆಂಟ್ ಲಂಚ ಭಾರೀ ಸದ್ದು ಮಾಡಿತ್ತು. ಈ ಸರಕಾರ ಬಂದ ಮೇಲೂ ರಾಜ್ಯ ಗುತ್ತಿಗೆದಾರರ ಸಂಘದವರು ಗಂಭೀರ ಸ್ವರೂಪದ ಲಂಚದ ಆರೋಪ ಮಾಡಿದ್ದರು. ಈ ವಹಿವಾಟಿನ ಪಾಲುದಾರರು ಲಂಚ ಹೆಚ್ಚಾಗಿದೆ ಎಂದೇ ವಾದಿಸುತ್ತಿದ್ದಾರೆ. ಅವರ್ಯಾರೂ ಪಕ್ಷ ರಾಜಕಾರಣದ ಭಾಗೀದಾರರಲ್ಲ.
ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಒಟ್ಟಿಗೆ ಸೇರಿ ನಡೆಸುವ ಅಭಿವೃದ್ಧಿ ಯೋಜನೆ ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ನಿಲ್ಲಿಸುವುದು. ತಗ್ಗಿಸುವುದು ಸದ್ಯದ ಮಟ್ಟಿಗೆ ಅಸಾಧ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭರವಸೆ ನೀಡಿದಂತೆ ಸರಕಾರಿ ಹುದ್ದೆಗಳ ನೇಮಕಾತಿಯಲ್ಲಿನ ಭ್ರಷ್ಟಾಚಾರ ತಡೆಯಲು ಪಾರದರ್ಶಕ ವ್ಯವಸ್ಥೆ ಕಲ್ಪಿಸಿದರೆ ಅಷ್ಟರ ಮಟ್ಟಿಗೆ ಅಲ್ಲಿ ಭ್ರಷ್ಟಾಚಾರ ಇಲ್ಲದಂತೆ ಮಾಡಬಹುದು. ಕರ್ನಾಟಕ ಲೋಕಸಭಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ವಿವಿಧ ನೇಮಕಾತಿ ಪ್ರಾಧಿಕಾರಗಳಲ್ಲಿ ಪಾರದರ್ಶಕ ವ್ಯವಸ್ಥೆ ಕಲ್ಪಿಸಿದರೆ ಲಂಚದ ಹಾವಳಿಗೆ ಅವಕಾಶಗಳೇ ಇರುವುದಿಲ್ಲ. ಕೇಂದ್ರ ಲೋಕ ಸೇವಾ ಆಯೋಗದ ನೇಮಕಾತಿಗಳಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಂತಾಗಿದ್ದು ಕಟ್ಟುನಿಟ್ಟಿನ ಪರೀಕ್ಷಾ ವ್ಯವಸ್ಥೆಯ ಕಾರಣಕ್ಕೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷಾ ಅಕ್ರಮಗಳನ್ನು ನಡೆಸುವಲ್ಲಿ ನಿಸ್ಸೀಮವಾಗಿದೆ. ಸಿಇಟಿ ಸಹಾಯಕ ಪ್ರಾಧ್ಯಾಪಕರ ನೇಮಕಾತಿ, ಎಸ್ಡಿಎ, ಎಫ್ಡಿಎ ನೇಮಕಾತಿ ಅಕ್ರಮ. ಇತ್ತೀಚೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆಗೆ ಸಮಾನಾಂತರವಾದ ಕರ್ನಾಟಕ ಅರ್ಹತಾ ಪರೀಕ್ಷೆ ನಡೆಸುವ ಹೊಣೆಗಾರಿಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಗಿದೆ. ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವುದರಿಂದ ಹಿಡಿದು ಒಎಂಆರ್ ಶೀಟ್ ತಿದ್ದುವುದು ಮಾಡಿ ಹಣಕೊಟ್ಟವರಿಗೆ ಉತ್ತಮ ಫಲಿತಾಂಶ ನೀಡುತ್ತಾರೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿಯವರು ಸಿಬ್ಬಂದಿ ವರ್ಗಾವಣೆಯಲ್ಲಿ ಕೌನ್ಸಿಲಿಂಗ್ ವ್ಯವಸ್ಥೆ ಕಲ್ಪಿಸಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಆದರೆ ಕಾಮಗಾರಿಗಳ ಗುಣಮಟ್ಟ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲಾಗಿಲ್ಲ. ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಅವರು ಎಸ್.ಎಂ. ಕೃಷ್ಣ ಅವರ ಸಚಿವ ಸಂಪುಟದಲ್ಲಿ ಲೋಕೋಪಯೋಗಿ ಸಚಿವರಾಗಿದ್ದರು. ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ ಕಾಮಗಾರಿಗೆ ಅನುಮೋದನೆ ಪಡೆದುಕೊಂಡರು. ರಾಷ್ಟ್ರೀಯ ಹೆದ್ದಾರಿ ಗುಣಮಟ್ಟದ ಆ ಯೋಜನೆ ಧರಂ ಸಿಂಗ್ ಅವರ ಹೆಸರು ನೆಲೆನಿಲ್ಲುವಂತೆ ಮಾಡಿದೆ. ಸತೀಶ್ ಜಾರಕಿ ಹೋಳಿಯವರು ಮಹತ್ತರ ಮತ್ತು ಜನೋಪಯೋಗಿ ಯೋಜನೆ ರೂಪಿಸಿದ್ದರೆ ಸರಕಾರಕ್ಕೆ ಹೆಸರು ಬರುತ್ತಿತ್ತು. ಸರಕಾರ ಅಸ್ತಿತ್ವಕ್ಕೆ ಬಂದ ಆರಂಭದ ದಿನಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬ್ರ್ಯಾಂಡ್ ಬೆಂಗಳೂರಿನ ಕನಸು ಹಂಚಿಕೊಂಡಿದ್ದರು. ಎಲ್ಲರೊಂದಿಗೆ ಸಮಾಲೋಚನೆ ನಡೆಸಿದ್ದರು. ಆದರೆ ಗಂಭೀರವಾಗಿ ಕಾರ್ಯಪ್ರವೃತ್ತರಾಗಲಿಲ್ಲ. ಮಳೆಗಾಲದಲ್ಲಿ ಮುಳುಗುವ ಬೆಂಗಳೂರು, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿಗಾಗಿ ಪರಿತಪಿಸುತ್ತದೆ. ಬೃಹತ್ ಬೆಂಗಳೂರು ಯೋಜನಾಬದ್ಧ ನಗರವಲ್ಲ. ಆದರೆ ಆಧುನಿಕ ತಂತ್ರಜ್ಞಾನ ಬಳಸಿ ಬೆಂಗಳೂರಿನ ಸ್ಥಿತಿಗತಿ ಉತ್ತಮಗೊಳಿಸುವ ಎಲ್ಲಾ ಅವಕಾಶಗಳಿವೆ. ಐಟಿ-ಬಿಟಿ ನಗರ ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯಗಳನ್ನು ಹೆಚ್ಚಿಸದಿದ್ದರೆ ಆಕರ್ಷಣೆ ಕಳೆದುಕೊಳ್ಳುವುದು ನಿಶ್ಚಿತ. ಬೆಂಗಳೂರಿನ ಮೆಟ್ರೋ ಕನೆಕ್ಟಿವಿಟಿ ಐಟಿ ಕಂಪೆನಿಗಳನ್ನು ಹಿಡಿದಿಟ್ಟುಕೊಂಡಿದೆ. ಕೆಟ್ಟ ರಸ್ತೆಗಳು, ಬೇಕಾಬಿಟ್ಟಿ ನಿರ್ಮಿಸಿದ ಚರಂಡಿ ವ್ಯವಸ್ಥೆ, ರಾಜಾಕಾಲುವೆ ಸೃಷ್ಟಿಸುವ ಮಳೆ ಅವಾಂತರದಿಂದ ಬ್ರ್ಯಾಂಡ್ ಬೆಂಗಳೂರಿಗೆ ಕೆಟ್ಟ ಹೆಸರು ಬರುತ್ತಿದೆ.
ಕಂದಾಯ ಸಚಿವ ಕೃಷ್ಣಭೈರೇಗೌಡರಿಗೆ ಅಪಾರ ತಿಳುವಳಿಕೆ ಇದೆ. ಆದರೆ ಇಲ್ಲಿಯವರೆಗೆ ನೋಂದಣಿ ಇಲಾಖೆಯ ಭ್ರಷ್ಟರನ್ನು ಬಲಿಹಾಕಲು ಸಾಧ್ಯವಾಗಿಲ್ಲ. ಜನಸಾಮಾನ್ಯರು ನಿತ್ಯ ಕಂದಾಯ ಇಲಾಖೆಯೊಂದಿಗೆ ಒಡನಾಡುತ್ತಾರೆ. ಅಲ್ಲಿನ ಮಿತಿಮೀರಿದ ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರದೇ ಹೋದರೆ ಸರಕಾರಕ್ಕೆ ಒಳ್ಳೆಯ ಹೆಸರು ಬರುವುದಿಲ್ಲ. ಹಾಗೆ ನೋಡಿದರೆ; ಸಿದ್ದರಾಮಯ್ಯನವರ ಸಂಪುಟದ ಮಂತ್ರಿಗಳಲ್ಲೇ ಕಡಿಮೆ ರಾಜಕೀಯದ ಮಾತು, ಹೆಚ್ಚು ಅಭಿವೃದ್ಧಿಪರ ಚಿಂತನೆ ಮಾಡುವ ಕೃಷ್ಣಭೈರೇಗೌಡರು ಕಂದಾಯ ಇಲಾಖೆಗೆ ಕಾಯಕಲ್ಪ ನೀಡುವ ಸಾಮರ್ಥ್ಯ ಉಳ್ಳವರು. ಹಾಗೇನಾದರೂ ಮಾಡಿದರೆ ದೇಶಕ್ಕೆ ಮಾದರಿ ಎನಿಸಿಕೊಳ್ಳುತ್ತದೆ. ರಾಜಕೀಯದ ಮಾತುಗಳನ್ನಾಡಲು ಪ್ರತಿಭಾವಂತ ವಕ್ತಾರರನ್ನು ನೇಮಿಸಿಕೊಳ್ಳಲಿ. ಆದರೆ ಕ್ರಿಯಾಶೀಲ ಮಂತ್ರಿಗಳಾದ ಈಶ್ವರ ಖಂಡ್ರೆ, ಪ್ರಿಯಾಂಕ್ ಖರ್ಗೆ, ಡಾ. ಮಹಾದೇವಪ್ಪ, ಎಂ.ಬಿ. ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಬೈರತಿ ಸುರೇಶ್, ಕೆ.ಜೆ. ಜಾರ್ಜ್, ಸಂತೋಷ್ ಲಾಡ್, ಡಾ. ಶರಣ ಪ್ರಕಾಶ್ ಪಾಟೀಲ್, ರಾಮಲಿಂಗಾ ರೆಡ್ಡಿ, ಎಚ್.ಕೆ. ಪಾಟೀಲ್ ಮುಂತಾದವರು ತಮ್ಮ ಖಾತೆಯಲ್ಲಿ ಅತ್ಯುತ್ತಮ ಕೆಲಸ ಮಾಡಿದರೆ ಸರಕಾರ ಆಡಳಿತ ವಿರೋಧಿ ಅಲೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.
ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಅತ್ಯುತ್ಸಾಹ ಇದೆ. ಆದರೆ ಇಲಾಖೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಗ್ರೇಸ್ ಮಾರ್ಕ್ ನೀಡಿ ಹೆಚ್ಚುಗಾರಿಕೆ ತೋರುವುದು ಅಕ್ರಮಕ್ಕೆ ಸಮ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಂತ್ರಿ ದಿನೇಶ್ ಗುಂಡೂರಾವ್ ಆಸ್ಪತ್ರೆಗಳ ಕೆಟ್ಟ ವ್ಯವಸ್ಥೆಗೆ ಇದುವರೆಗೂ ಕಾಯಕಲ್ಪ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣ ಹಾದಿ ತಪ್ಪಿದೆ. ಗೃಹ ಖಾತೆಯ ಮಂತ್ರಿ ಡಾ. ಜಿ. ಪರಮೇಶ್ವರ್ ಅವರಿಂದ ಜನರ ನಿರೀಕ್ಷೆಗಳು ಜಾಸ್ತಿ ಇವೆ. ಅರಗ ಜ್ಞಾನೇಂದ್ರ ಅವರ ನಿಷ್ಕ್ರಿಯತೆ ಮರೆಸುವ ಹಾಗೆ ಕಾರ್ಯ ನಿರ್ವಹಿಸಬೇಕು. ಈಗಲೂ ಸರಕಾರಿ ಹಾಸ್ಟೆಲ್ಗಳು ಗುಣಮಟ್ಟದಲ್ಲಿ ಹಿಂದೆ ಇವೆ. ಚಳವಳಿಯ ಹಿನ್ನೆಲೆಯಿಂದ ಬಂದ ಡಾ. ಎಚ್. ಸಿ. ಮಹಾದೇವಪ್ಪ ಅವರು ಮನಸ್ಸು ಮಾಡಿದರೆ ಇಡೀ ವ್ಯವಸ್ಥೆ ಬದಲಿಸಬಹುದು.
ಈ ಹಿಂದಿನ ಸರಕಾರವನ್ನು ಮತದಾರ ತಿರಸ್ಕರಿಸಿದ್ದೇ ಅವರ ನಿರೀಕ್ಷೆಗೆ ತಕ್ಕ ಆಡಳಿತ ವ್ಯವಸ್ಥೆ ಇರಲಿಲ್ಲವೆಂದು. ಒಂದು ವರ್ಷದ ಆಡಳಿತ ಮೌಲ್ಯಮಾಪನ ಮತದಾರರು ಖಂಡಿತ ಮಾಡಿದ್ದಾರೆ. ಮಾಧ್ಯಮಗಳು, ಪ್ರತಿಪಕ್ಷಗಳು ನಿಷ್ಕ್ರಿಯವಾಗಿದ್ದರೂ ಕರ್ನಾಟಕದ ಮತದಾರರ ವಿವೇಕ ಸದಾ ಜಾಗೃತವಾಗಿರುತ್ತದೆ. ಜೂನ್ 4ರ ಫಲಿತಾಶದಲ್ಲಿ ಎಲ್ಲ ಮಂತ್ರಿಗಳ ಕಾರ್ಯಶೈಲಿಯ ಮೌಲ್ಯಮಾಪನ ನಡೆದಿರುತ್ತದೆ. ಪ್ರತಿಪಕ್ಷದವರು ಮತ್ತು ಮಾಧ್ಯಮದವರನ್ನು ಮ್ಯಾನೇಜ್ ಮಾಡಬಹುದು. ಆದರೆ ಕರ್ನಾಟಕದ ಪ್ರಜ್ಞಾವಂತ ಮತದಾರರನ್ನು ಅಭಿವೃದ್ಧಿ ಕೆಲಸಗಳಿಂದ ಮಾತ್ರ ತೃಪ್ತಿಪಡಿಸಬಹುದು. ಆ ಕಾರಣಕ್ಕೆ ಕರ್ನಾಟಕ ಉತ್ತರ ರಾಜ್ಯಗಳಿಗಿಂತ ಮುಂದಿದೆ.