ಪ್ರಹ್ಲಾದ್ ಜೋಶಿ ವಿರುದ್ಧ ಮಠಾಧೀಶರು
ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಹ್ಲಾದ್ ಜೋಶಿಯವರ ವಿರುದ್ಧ ಆ ಭಾಗದ ಮಠಾಧೀಶರು, ಶಿರಹಟ್ಟಿ ಫಕೀರೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಫಕೀರ ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಸಭೆ ಸೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ದಿಂಗಾಲೇಶ್ವರ ಸ್ವಾಮೀಜಿಯವರು ಧಾರವಾಡ ಲೋಕಸಭಾ ಚುನಾವಣಾ ಕಣಕ್ಕಿಳಿದು ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವರೂ ಆಗಿರುವ ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವುದಾಗಿ ಹೇಳಿಕೊಂಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಜೋಶಿಯವರು ‘ಈ ಎಲ್ಲಾ ಬೆಳವಣಿಗೆಗಳನ್ನು ಆಶೀರ್ವಾದವಾಗಿ ಸ್ವೀಕರಿಸುವೆ’ ಎಂದಿದ್ದಾರೆ. ದಿಂಗಾಲೇಶ್ವರ ಸ್ವಾಮೀಜಿಯವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಕಾರಣಕ್ಕೇ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಗೆಲುವಿಗೆ ಹತ್ತಿರವಾದರು ಎಂದು ಪ್ರಹ್ಲಾದ್ ಜೋಶಿಯವರ ವಿರೋಧಿಗಳು ಭಾವಿಸಿರುವಂತಿದೆ. ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾರ್ಮಿಕ ಮಂತ್ರಿ ಫೈರ್‌ಬ್ರ್ಯಾಂಡ್ ಖ್ಯಾತಿಯ ಸಂತೋಷ್ ಲಾಡ್ ಇಷ್ಟಕ್ಕೇ ಸಂಭ್ರಮಿಸುವ ಅಗತ್ಯವಿಲ್ಲ. ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವ ಸವಾಲನ್ನು ಸಂತೋಷ್ ಲಾಡ್ ನಿಜವಾದ ಅರ್ಥದಲ್ಲಿ ಸ್ವೀಕರಿಸಿದ್ದರೆ ಕ್ರಮಿಸಬೇಕಾದ ಹಾದಿ ಬಹಳಷ್ಟಿದೆ ಎಂಬುದನ್ನು ಅರಿಯಬೇಕಿದೆ. ಅಷ್ಟು ಮಾತ್ರವಲ್ಲ ಧಾರವಾಡ ಲೋಕಸಭಾ ಕ್ಷೇತ್ರದ ಒಟ್ಟಾರೆ ಸ್ವರೂಪವನ್ನು ಅರ್ಥ ಮಾಡಿಕೊಳ್ಳಬೇಕಾದ ಅಗತ್ಯವಿದೆ.
2009ರ ಲೋಕಸಭಾ ಚುನಾವಣೆಗೆ ಮುಂಚೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವಾಗಿದ್ದ ಈ ಕ್ಷೇತ್ರ ಮೂಲತಃ ಪ್ರಬಲ ಹೈಕಮಾಂಡ್ ಪರವಾಗಿರುವ ಅಭ್ಯರ್ಥಿಗಳನ್ನೇ ಗೆಲ್ಲಿಸುತ್ತಾ ಬಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯ ವರ್ಚಸ್ಸು, ಜಾತಿ ಸಮೀಕರಣ, ಆಡಳಿತ ವಿರೋಧಿ ಅಲೆ ಸೇರಿದಂತೆ ಹತ್ತು ಹಲವು ಸಂಗತಿಗಳು ಪರಿಗಣನೆಗೆ ಬರುತ್ತವೆ. ಅನಿವಾರ್ಯ ಸಂದರ್ಭದಲ್ಲಿ ಪಕ್ಷೇತರ ಅಭ್ಯರ್ಥಿಗಳನ್ನು ಮತದಾರರು ಗೆಲ್ಲಿಸಿದ್ದಾರೆ. ಆದರೆ ಲೋಕಸಭಾ ಚುನಾವಣೆಯಲ್ಲಿ ಮತದಾರ ವಿಭಿನ್ನ ನಿಲುವು ತಳೆಯುತ್ತಾನೆ. 1952ರಿಂದ 2004ರ ಲೋಕಸಭಾ ಚುನಾವಣೆವರೆಗೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರವೆಂದು ಗುರುತಿಸಲ್ಪಡುತ್ತಿತ್ತು. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಧಾರವಾಡ ಗ್ರಾಮೀಣ, ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಗದಗ, ನರಗುಂದ, ನವಲಗುಂದ ವಿಧಾನಸಭಾ ಕ್ಷೇತ್ರಗಳು ಸೇರಿಕೊಂಡಿದ್ದವು. ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ 1952ರಿಂದ 1991ರವರೆಗೆ ಕಾಂಗ್ರೆಸ್ ಪಕ್ಷದ ಹಾಗೂ ಲಿಂಗಾಯತೇತರ ಅಭ್ಯರ್ಥಿಗಳೇ ಗೆಲುವು ಸಾಧಿಸಿದ್ದಾರೆ. ಅದರರ್ಥ ಅಷ್ಟು ವರ್ಷಗಳ ಕಾಲ ಹೈಕಮಾಂಡ್‌ನಲ್ಲಿ ಕಾಂಗ್ರೆಸ್ ಪಕ್ಷ ಬಲಶಾಲಿಯಾಗಿತ್ತು. ಆ ಪಕ್ಷದಿಂದ ಟಿಕೆಟ್ ಪಡೆದವರು ಯಾವ ಜಾತಿಯವರೇ ಇರಲಿ ಜಯಶಾಲಿಯಾಗಿದ್ದಾರೆ. ಸ್ವಾತಂತ್ರ್ಯಾನಂತರದ ಮೊದಲ ಲೋಕಸಭಾ ಚುನಾವಣೆ 1952ರಲ್ಲಿ ಜರುಗಿತ್ತು. ಆಗ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರ ಮುಂಬೈ ರಾಜ್ಯದ ಭಾಗವಾಗಿತ್ತು. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ದತ್ತಾತ್ರೇಯ ಪರಶುರಾಮ ಕರಮರಕರ್ ಎಂಬ ಹೆಸರಿನ ಬ್ರಾಹ್ಮಣ ಸಮುದಾಯದ ವ್ಯಕ್ತಿಯನ್ನು ಅಭ್ಯರ್ಥಿಯನ್ನಾಗಿಸಿತ್ತು. ಆ ಚುನಾವಣೆಯಲ್ಲಿ ಅವರು ಅನಾಯಾಸವಾಗಿ ಗೆದ್ದರು. 1957ರ ಲೋಕಸಭಾ ಚುನಾವಣೆಯ ಹೊತ್ತಿಗೆ ಭಾಷಾವಾರು ಪ್ರಾಂತಗಳು ರಚನೆಯಾಗಿ ಈ ಕ್ಷೇತ್ರ ಮೈಸೂರು ರಾಜ್ಯದ ವ್ಯಾಪ್ತಿಗೆ ಸೇರಿಕೊಂಡಿತ್ತು. ಆ ಚುನಾವಣೆಯಲ್ಲೂ ದತ್ತಾತ್ರೇಯ ಪರಶುರಾಮ ಕರಮರಕರ್ ಅವರೇ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.
ಆನಂತರ ನಡೆದ ಎಂಟು ಚುನಾವಣೆಗಳಲ್ಲೂ ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆದ ಅಭ್ಯರ್ಥಿಗಳನ್ನೇ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದ ಮತದಾರರು ಗೆಲ್ಲಿಸಿದ್ದಾರೆ. ಅಭ್ಯರ್ಥಿಗಳ ಜಾತಿಯನ್ನು ಪರಿಗಣಿಸಿಯೇ ಇಲ್ಲ. 1962, 1967, 1971 ಮತ್ತು 1977ರ ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಸರೋಜಿನಿ ಮಹಿಷಿಯವರನ್ನು ಕಣಕ್ಕಿಳಿಸಿತ್ತು. ಆ ನಾಲ್ಕು ಚುನಾವಣೆಗಳಲ್ಲಿ ಬ್ರಾಹ್ಮಣ ಸಮುದಾಯದ ಸರೋಜಿನಿ ಮಹಿಷಿಯವರನ್ನು ಈ ಕ್ಷೇತ್ರದ ಮತದಾರ ಗೆಲ್ಲಿಸಿದ್ದರು. ಸರೋಜಿನಿ ಮಹಿಷಿಯವರು ಶ್ರೀಮತಿ ಇಂದಿರಾಗಾಂಧಿಯವರೊಂದಿಗೆ ಮನಸ್ತಾಪ ಮಾಡಿಕೊಂಡಿದ್ದರಿಂದ ಟಿಕೆಟ್ ವಂಚಿತರಾದರು. 1980ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಕುರುಬ ಸಮುದಾಯದ ಡಿ.ಕೆ. ನಾಯ್ಕರ್ ಅವರನ್ನು ಕಣಕ್ಕಿಳಿಸಿತ್ತು ಡಿ.ಕೆ. ನಾಯ್ಕರ್ ಅವರು 1980ರ ಲೋಕಸಭಾ ಚುನಾವಣೆ ಸೇರಿದಂತೆ ನಂತರ ನಡೆದ 1984, 1989 ಮತ್ತು 1991ರ ಲೋಕಸಭಾ ಚುನಾವಣೆಗಳಲ್ಲೂ ಗೆಲುವು ಸಾಧಿಸಿದ್ದರು. ಹಾಗೆ ನೋಡಿದರೆ; 1989ರ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ದುರ್ಬಲವಾಗುತ್ತಾ ಹೋಯಿತು. 1989 ರಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಒಟ್ಟಿಗೆ ಚುನಾವಣೆ ನಡೆಯಿತು. ಆಗ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ವೀರೇಂದ್ರ ಪಾಟೀಲರು ಮುನ್ನಡೆಸುತ್ತಿದ್ದರು. ಆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 178 ಶಾಸಕರನ್ನು, 27 ಸಂಸದರನ್ನು ಗೆಲ್ಲಿಸಿಕೊಂಡಿತ್ತು. ಆದರೆ ರಾಷ್ಟ್ರಮಟ್ಟದಲ್ಲಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ನೆಲಕಚ್ಚಿತ್ತು. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ. ನಾಯ್ಕರ್ ಅವರ ನೆಲೆ ಕುಸಿಯ ತೊಡಗಿತ್ತು. 1980, 1984 ಮತ್ತು 1989ರ ಲೋಕಸಭಾ ಚುನಾವಣೆಯಲ್ಲಿ ಅನಾಯಾಸವಾಗಿ ಗೆದ್ದ ಡಿ.ಕೆ. ನಾಯ್ಕರ್ ಅವರು 1991ರಲ್ಲಿ ನಡೆದ ಚುನಾವಣೆಯಲ್ಲಿ ಗೆಲುವಿಗಾಗಿ ಹರಸಾಹಸ ಪಡಬೇಕಾಯಿತು. ಆ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟು ಅವರ ಪ್ರತಿಸ್ಪರ್ಧಿಗಳಾಗಿದ್ದ ಬಿಜೆಪಿಯ ಚಂದ್ರಕಾಂತ ಬೆಲ್ಲದ 1,36,000 ಮತಗಳನ್ನು ಪಡೆದು ಕೇವಲ 21 ಸಾವಿರ ಮತಗಳ ಅಂತರದಲ್ಲಿ ಸೋತಿದ್ದರು. ಜನತಾದಳದ ಬಿ.ಆರ್. ಯಾವಗಲ್ ಅವರು 1,34,000 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. ಆ ಚುನಾವಣೆಯಲ್ಲೇ ಬಿಜೆಪಿಯ ಗೆಲುವಿಗೆ ಮುನ್ಸೂಚನೆ ದೊರೆತಿತ್ತು.
1996ರಲ್ಲಿ ನಡೆದ ಲೋಕಸಭಾ ಚುನಾವಣೆ; ಕರ್ನಾಟಕದ ಮಟ್ಟಿಗೆ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿತ್ತು. ಆ ಚುನಾವಣೆಯಲ್ಲಿ ಕರ್ನಾಟಕದಿಂದ 16 ಜನ ಲೋಕಸಭಾ ಸದಸ್ಯರು ಜನತಾದಳದ ಟಿಕೆಟ್ ಮೇಲೆ ಗೆದ್ದಿದ್ದರು. ಆದರೆ ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಜಯ ಸಂಕೇಶ್ವರ ಅವರು ಜಯಶಾಲಿಯಾಗಿದ್ದರು. ಅದರರ್ಥ; ಈ ಮತ ಕ್ಷೇತ್ರದ ಮತದಾರರಿಗೆ ಬಿಜೆಪಿಯವರು ತೇಲಿಬಿಟ್ಟ ಕಥಾನಕ-ಈದ್ಗಾ ಮೈದಾನ, ರಾಮ ಮಂದಿರ, ಬಾಬರಿ ಮಸೀದಿ ಧ್ವಂಸ -ಮನವರಿಕೆಯಾಗಿತ್ತು. ಈ ಕ್ಷೇತ್ರದಲ್ಲಿ ಮತಗಳು ಜಾತಿ ಸಮೀಕರಣದ ಆಧಾರದಲ್ಲಿ ಚಲಾವಣೆಯಾಗುವುದಿಲ್ಲ. ರಾಷ್ಟ್ರಮಟ್ಟದಲ್ಲಿ ಸೆಟ್ ಆಗುವ ನೆರೇಟಿವ್ ಮೇರೆಗೆ ಅಭ್ಯರ್ಥಿ ಮತ್ತು ಪಕ್ಷಕ್ಕೆ ಮತ ಚಲಾಯಿಸುತ್ತಾರೆ. ಹಾಗೆ ನೋಡಿದರೆ ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಲಿಂಗಾಯತರ ಮತಗಳು ಗಣನೀಯ ಪ್ರಮಾಣದಲ್ಲಿವೆ. ಬ್ರಾಹ್ಮಣರು ಮತ್ತು ಕುರುಬರ ಮತಗಳು ಹೆಚ್ಚೇನಿಲ್ಲ. ಆದರೆ ಈ ಮತಕ್ಷೇತ್ರದಲ್ಲಿ 1952ರಿಂದ 1962 ರವರೆಗೆ ಆಯ್ಕೆಯಾದ ದತ್ತಾತ್ರೇಯ ಪರಶುರಾಮ ಕರಮರಕರ್, 1962ರಿಂದ 1980ರವರೆಗೆ ಗೆದ್ದ ಸರೋಜಿನಿ ಮಹಿಷಿ ಮತ್ತು 2004 ರಿಂದ 2019ರವರೆಗೆ ಸತತ ನಾಲ್ಕು ಬಾರಿ ಜಯಭೇರಿ ಬಾರಿಸಿರುವ ಪ್ರಹ್ಲಾದ್ ಜೋಶಿಯವರು ಅತ್ಯಲ್ಪ ಸಂಖ್ಯಾಬಲದ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. 1980ರಿಂದ 1996ರವರೆಗೆ ಸತತ ನಾಲ್ಕು ಅವಧಿಗೆ ಗೆಲುವು ಸಾಧಿಸಿರುವ ಡಿ.ಕೆ. ನಾಯ್ಕರ್ ಅವರು ಕುರುಬ ಸಮುದಾಯಕ್ಕೆ ಸೇರಿದವರು.
ಲಿಂಗಾಯತ ಸಮುದಾಯದ ವಿಜಯ ಸಂಕೇಶ್ವರ ಅವರು 1996, 1998 ಮತ್ತು 1999ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು ಲಿಂಗಾಯತ ಪ್ರಾಬಲ್ಯದ ಕಾರಣಕ್ಕೆ ಅಲ್ಲ. ಭಾರತೀಯ ಜನತಾ ಪಕ್ಷ ರೂಪಿಸಿದ ರಾಷ್ಟ್ರೀಯತೆ, ದೇಶಭಕ್ತಿ -ಕಥಾನಕ ಧಾರವಾಡ ಲೋಕಸಭಾ ಕ್ಷೇತ್ರದ ಬಹುಪಾಲು ಮತದಾರರು ಅಂತರ್ಗತ ಮಾಡಿಕೊಂಡಿದ್ದಾರೆ. ಅಭ್ಯರ್ಥಿಯನ್ನು ಮೌಲ್ಯಮಾಪನ ಮಾಡಿ ಮತ ಚಲಾಯಿಸುವುದಿಲ್ಲ. ಆತ ಪ್ರತಿನಿಧಿಸುವ ಪಕ್ಷ, ಪ್ರಚುರಪಡಿಸುವ ಕಥಾನಕ ಮುಖ್ಯ ಅವರಿಗೆ. ಉಳಿದದ್ದೆಲ್ಲ ಗೌಣ.
2004 ಕರ್ನಾಟಕದ ರಾಜಕಾರಣದ ಸಂಕ್ರಮಣ ಕಾಲ. ಮತದಾರರ ನಿಲುವು ಭಿನ್ನವಾದ ಬಗೆಯಲ್ಲಿ ಪ್ರಕಟಗೊಂಡ ಕಾಲ. 1996ರಲ್ಲಿ ಜನತಾದಳದಂತಹ ಪ್ರಾದೇಶಿಕ ಪಕ್ಷಕ್ಕೂ 16 ಸಂಸದರನ್ನು ನೀಡಿದ ಮತದಾರರು 2004ರ ಹೊತ್ತಿಗೆ ರಾಜ್ಯಕ್ಕೊಂದು, ದೇಶಕ್ಕೊಂದು ಮತ ಎನ್ನುವ ಭಿನ್ನ ತೀರ್ಪು ನೀಡತೊಡಗಿದರು. ಈ ಮನೋಧರ್ಮ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 1996ರ ಲೋಕಸಭಾ ಚುನಾವಣೆಯ ಕಾಲದಿಂದಲೂ ನೆಲೆನಿಂತಿದೆ. ಬಾಬರಿ ಮಸೀದಿ ಧ್ವಂಸದ ನಂತರ ಅಟಲ್ ಬಿಹಾರಿ ವಾಜಪೇಯಿ, ಲಾಲ್‌ಕೃಷ್ಣ ಅಡ್ವಾಣಿ ನೇತೃತ್ವದ ಬಿಜೆಪಿ ರೂಪಿಸಿದ ಕಥಾನಕವೇ ಇಲ್ಲಿಯ ಮತದಾರರಲ್ಲಿ ಸ್ಥಾಯಿಯಾಗಿ ನೆಲೆ ನಿಂತಿದೆ. ಹಾಗೆ ನೋಡಿದರೆ; 2004ರಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಮತ್ತು ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಿತು. ಮೊದಲ ಬಾರಿಗೆ ಕರ್ನಾಟಕದಲ್ಲಿ ಬಿಜೆಪಿಗೆ 18 ಜನ ಲೋಕಸಭಾ ಸಂಸದರು ದೊರಕಿದರು. ಅದೇ ಪ್ರಮಾಣದಲ್ಲಿ ವಿಧಾನಸಭೆಗೆ ಶಾಸಕರು ಆಯ್ಕೆಯಾಗಲಿಲ್ಲ. ಬಿಜೆಪಿ ಕೇವಲ 79 ಶಾಸಕರನ್ನು ಗೆಲ್ಲಿಸಿಕೊಂಡಿತ್ತು. ಎಸ್.ಎಂ. ಕೃಷ್ಣ ಅವರು 1999ರಿಂದ 2004ರ ಅವಧಿಯಲ್ಲಿ ಪ್ರಬಲವಾದ ಸೌಹಾರ್ದ ಪರಂಪರೆಯ ಕಥಾನಕ ರೂಪಿಸುವಲ್ಲಿ ವಿಫಲವಾಗಿದ್ದರಿಂದ ಬಿಜೆಪಿಯ ನೆರೇಟಿವ್ ಭದ್ರವಾಗಿ ನೆಲೆಯೂರಿತು. 2004ರ ಸ್ಥಿತ್ಯಂತರ ಕಾಲದಲ್ಲಿ ಪ್ರಹ್ಲಾದ್ ಜೋಶಿ ಅವರು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಭೇರಿ ಬಾರಿಸಿದವರು. ಆ ಚುನಾವಣೆಯಲ್ಲಿ ವಿಜಯ ಸಂಕೇಶ್ವರ ಕನ್ನಡ ನಾಡು ಪಕ್ಷ ಕಟ್ಟುವ ದುಸ್ಸಾಹಸ ಮಾಡಿರದಿದ್ದರೆ ಅವರೇ ಎಂಪಿ ಆಗಿ ಮುಂದುವರಿಯುತ್ತಿದ್ದರು. ದಿಂಗಾಲೇಶ್ವರ ಸ್ವಾಮೀಜಿ ಮತ್ತು ಅತ್ಯುತ್ಸಾಹದಲ್ಲಿರುವ ಸಂತೋಷ್ ಲಾಡ್ 2004ರ ಧಾರವಾಡ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಬೇಕು.
2004ರ ಧಾರವಾಡ ಲೋಕಸಭಾ ಕ್ಷೇತ್ರದ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಪ್ರಹ್ಲಾದ್ ಜೋಶಿ, ಕಾಂಗ್ರೆಸ್ ಅಭ್ಯರ್ಥಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಬಿ.ಎಸ್. ಪಾಟೀಲ್, ಜೆಡಿಎಸ್ ಅಭ್ಯರ್ಥಿಯಾಗಿ ಚಿಕ್ಕಪ್ಪ ನಿಂಗಪ್ಪ ಶಗೋಟಿ ಮತ್ತು ಕನ್ನಡ ನಾಡು ಪಕ್ಷದಿಂದ ಜಗದ್ಗುರು ಮಾತೆ ಮಹಾದೇವಿ ಸ್ಪರ್ಧಿಸಿದ್ದರು. ಚುನಾವಣಾ ಕಣದಲ್ಲಿರುವ ಎಲ್ಲಗಿಂತಲೂ ಮಾತೆ ಮಹಾದೇವಿ ಜನಪ್ರಿಯ ಅಭ್ಯರ್ಥಿ. ಪ್ರಹ್ಲಾದ್ ಜೋಷಿ ಬಿಜೆಪಿಯವರಿಗೆ ಮಾತ್ರ ಗೊತ್ತಿದ್ದರು. ಅಷ್ಟಕ್ಕೂ ಅನಂತಕುಮಾರ್ ಜಗದೀಶ್ ಶೆಟ್ಟರ್ ಅವರನ್ನು ಸ್ಪರ್ಧಿಸಲು ಸೂಚಿಸಿದ್ದರು. ಶೆಟ್ಟರ್ ಪ್ರಹ್ಲಾದ್ ಜೋಶಿಗೆ ಟಿಕೆಟ್ ಕೊಡಿಸಿದ್ದರು. ಲಿಂಗಾಯತ ಸಮುದಾಯದ ಬಿ.ಎಸ್. ಪಾಟೀಲರ ಎದುರು ಜೋಶಿ 83,078 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಫೈರ್ ಬ್ರ್ಯಾಂಡ್ ಮಾತೆ ಮಹಾದೇವಿ ಕೇವಲ 27,616 ಮತಗಳಿಗೆ ತಪ್ತಿಪಟ್ಟುಕೊಳ್ಳಬೇಕಾಯಿತು. ಅವರಿಗಿಂತ ಜೆಡಿಎಸ್ ಅಭ್ಯರ್ಥಿ ಶಗೋಟಿ ಹೆಚ್ಚು ಮತ ಪಡೆದಿದ್ದರು. ನಂತರದ ಲೋಕಸಭಾ ಚುನಾವಣೆಗಳಲ್ಲಿ ಪ್ರಹ್ಲಾದ್ ಜೋಶಿಯವರ ಗೆಲುವಿನ ಅಂತರ ಹೆಚ್ಚುತ್ತಲೇ ಇದೆ. 2009ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪಂಚಮಸಾಲಿ ಸಮುದಾಯದ ಮಂಜುನಾಥ್ ಕುನ್ನೂರ್ ಸ್ಪರ್ಧಿಸಿದ್ದರು. ಆ ಚುನಾವಣೆಯಲ್ಲಿ ಪ್ರಹ್ಲಾದ್ ಜೋಶಿಯವರು 1,37,666 ಮತಗಳ ಅಂತರದಿಂದ ಗೆಲುವು ಸಾಧಿಸಿದರು. 2014ರಲ್ಲಿ ವಿನಯ ಕುಲಕರ್ಣಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಇತ್ತು. ಆದರೂ ಜೋಶಿ ವಿರುದ್ಧ ವಿನಯ ಕುಲಕರ್ಣಿಯವರು ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋತರು. 2019ರ ಲೋಕಸಭಾ ಚುನಾವಣೆ ಹೊತ್ತಿಗೆ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಇತ್ತು. ವಿನಯ ಕುಲಕರ್ಣಿಯವರೇ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಪ್ರಹ್ಲಾದ್ ಜೋಶಿ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದರು.
ಪ್ರಹ್ಲಾದ್ ಜೋಶಿ ಸಾಹಿತ್ಯ-ಸಂಗೀತ ಗೊತ್ತಿರುವ ಸುಸಂಸ್ಕೃತ ವ್ಯಕ್ತಿಯಂತೆ ಕಾಣುತ್ತಾರೆ. ಆದರೆ ಮಹಾನ್ ಜಾತಿವಾದಿ. ಅವಕಾಶವಾದಿ ಎಂಬುದು ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ಕಟ್ ಆದಾಗ ಆತ ನಡೆದುಕೊಂಡ ರೀತಿಯಲ್ಲೇ ಮನವರಿಕೆಯಾಗುತ್ತದೆ. ಉಪಕಾರ ಮಾಡಿದ ಶೆಟ್ಟರ್‌ಗೂ ಕೈಕೊಟ್ಟ ವ್ಯಕ್ತಿ.
ಧಾರವಾಡ ಲೋಕಸಭಾ ಕ್ಷೇತ್ರ; ಸಾಹಿತಿ, ಕಲಾವಿದರು, ಬುದ್ಧಿಜೀವಿಗಳ ತವರೂರು. ನಾಲ್ಕು ಅವಧಿಗೆ ಸಂಸದರಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿಯವರ ಆಪ್ತ ವಲಯದಲ್ಲಿರುವ ಜೋಶಿ ಮನಸ್ಸು ಮಾಡಿದ್ದರೆ ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ಸಿದ್ದಲಿಂಗ ಪಟ್ಟಣಶೆಟ್ಟಿ, ಸೋಮನಾಥ ಮರಡೂರ, ಡಿ. ಕುಮಾರದಾಸ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೊಡಿಸಬಹುದಿತ್ತು. ಆದರೆ ಆತ ಪದ್ಮಶ್ರೀ ಪ್ರಶಸ್ತಿ ಕೊಡಿಸಿದ್ದು ಎಂ.ಎಂ ಜೋಶಿಗೆ. ಎಂ.ಎಂ. ಜೋಶಿ ಅತ್ಯುತ್ತಮ ಕಣ್ಣಿನ ಡಾಕ್ಟರ್ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಹುಬ್ಬಳ್ಳಿ-ಧಾರವಾಡದಲ್ಲಿ ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಮಟ್ಟದ ವೈದ್ಯರಿದ್ದಾರೆ. ಪಂ. ವೆಂಕಟೇಶ್ ಕುಮಾರ್ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಅಪರೂಪದ ಹೆಸರು. ಅವರನ್ನು ಪ್ರತೀ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತನಂತೆ ದುಡಿಸಿಕೊಳ್ಳುತ್ತಾರೆ. ಅವರಿಗೆ ಪದ್ಮಶ್ರೀ ಪುರಸ್ಕಾರ ನೀಡಿದ್ದು ಜಾನಪದ ಕಲಾವಿದ ಕೋಟಾದಲ್ಲಿ. ಜಾನಪದ ಕ್ಷೇತ್ರದಲ್ಲಿ ಅವರ ಮಾವ ಬೆಳಗಲ್ಲು ವೀರಣ್ಣ ಮಹಾನ್ ಸಾಧನೆ ಮಾಡಿದ್ದರು.
ಹುಬ್ಬಳ್ಳಿ- ಧಾರವಾಡದಲ್ಲಿ ಬ್ರಾಹ್ಮಣೇತರರನ್ನು; ಲಿಂಗಾಯತರೂ ಸೇರಿದಂತೆ ಕಾಲ ಕಸಕ್ಕಿಂತ ಕಾಣುವ ಜೋಶಿ ಸಾಂಸ್ಕೃತಿಕ ಕ್ಷೇತ್ರದ ಹಿರಿಯ ಚೇತನಗಳನ್ನು ಅಪಮಾನಿಸುತ್ತಲೇ ಇದ್ದಾರೆ. ಭೀಮಸೇನ್ ಜೋಶಿ ಶತಮಾನೋತ್ಸವವನ್ನು ವಿಪ್ರ ಸಮಾವೇಶ ಮಾಡಿದ್ದರು. ಮಲ್ಲಿಕಾರ್ಜುನ ಮನ್ಸೂರ್, ಬಸವರಾಜ ರಾಜಗುರು, ಪಂಚಾಕ್ಷರಿ ಸ್ವಾಮಿ ಮತ್ತಿಪಟ್ಟಿಯಂತಹ ದಿಗ್ಗಜರನ್ನು ಜಾತಿ ನೆಲೆಯಲ್ಲಿ ನೋಡುತ್ತಾರೆ. ಶಿವು ಹಿರೇಮಠ, ಮಹೇಶ್ ನಲವಾಡೆ ಸೇರಿದಂತೆ ನೂರಾರು ಬ್ರಾಹ್ಮಣೇತರ ನಾಯಕರನ್ನು ವ್ಯವಸ್ಥಿತವಾಗಿ ಪ್ರಹ್ಲಾದ್ ಜೋಶಿಯವರು ತುಳಿದಿದ್ದಾರೆ. ಲಿಂಗಾಯತ ಮಠಾಧೀಶರೂ ಸೇರಿದಂತೆ ಬ್ರಾಹ್ಮಣೇತರರಿಗೆ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ. 20 ವರ್ಷಗಳ ಕಾಲ ಸಂಸದ, ಮಂತ್ರಿಯಾಗಿರುವ ಪ್ರಹ್ಲಾದ್ ಜೋಶಿ ಧಾರವಾಡ ಲೋಕಸಭಾ ಕ್ಷೇತ್ರವನ್ನು ಸ್ವರ್ಗ ಮಾಡಬಹುದಿತ್ತು. ಧಾರವಾಡ ಸ್ಮಾರ್ಟ್‌ಸಿಟಿ ಈ ಹೊತ್ತಿಗೂ ಆಗಿಲ್ಲ. ಆದರೆ ಸ್ವಜಾತಿ ಬಂಧುಗಳಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ... ಹೀಗೆ ಬಹುದೊಡ್ಡ ಆರೋಪ ಪಟ್ಟಿಯನ್ನೇ ಸಿದ್ಧಪಡಿಸಿ ಮತದಾರರ ಎದುರು ಇಡಬಹುದು. ಪ್ರಹ್ಲಾದ್ ಜೋಶಿಯವರನ್ನು ಸೋಲಿಸುವ ಸಂಕಲ್ಪ ತೊಟ್ಟಿರುವ ಕಾಂಗ್ರೆಸ್ ಪಕ್ಷ, ಮಂತ್ರಿ ಸಂತೋಷ್ ಲಾಡ್, ಆಕ್ರೋಶಗೊಂಡಿರುವ ಅಸಂಖ್ಯಾತ ಮಠಾಧೀಶರು ಮತ್ತು ಶ್ರೀ ದಿಂಗಾಲೇಶ್ವರ ಸ್ವಾಮೀಜಿಯವರು ಬಿಜೆಪಿ ಬಿತ್ತಿದ ರಾಷ್ಟ್ರಪ್ರೇಮದ ನೆರೇಟೀವ್ ಅನ್ನು ಭಂಜನ ಮಾಡಬೇಕಿದೆ.
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಮಂತ್ರಿ ಸಂತೋಷ್ ಲಾಡ್, ಪ್ರಸಾದ್ ಅಬ್ಬಯ್ಯ, ಕೋನರೆಡ್ಡಿ, ವಿನಯ ಕುಲಕರ್ಣಿ ಎಂಟರಲ್ಲಿ ನಾಲ್ಕು ಜನ ಕಾಂಗ್ರೆಸ್ ಶಾಸಕರಿದ್ದಾರೆ. ಈ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಅಂದಾಜು 4.5 ಲಕ್ಷ ಲಿಂಗಾಯತರು, 4 ಲಕ್ಷಕ್ಕೂ ಮಿಕ್ಕಿ ಮುಸ್ಲಿಮರು, ಒಂದು ಲಕ್ಷಕ್ಕೂ ಮಿಕ್ಕಿ ಕುರುಬರು, 60,000 ಬ್ರಾಹ್ಮಣರು, ಒಂದು ಲಕ್ಷಕ್ಕೂ ಅಧಿಕ ಮರಾಠರು, 2.5 ಲಕ್ಷಕ್ಕೂ ಅಧಿಕ ಪರಿಶಿಷ್ಟ, ಜಾತಿ ಪರಿಶಿಷ್ಟ ಪಂಗಡದ ಮತದಾರರಿದ್ದೂ ಪ್ರಹ್ಲಾದ್ ಜೋಶಿ ಗೆಲ್ಲುತ್ತಾರೆಂದರೆ ಜಾತಿ ಸಮೀಕರಣದ ಸಾಂಪ್ರದಾಯಿಕ ಸೂತ್ರ ಇಲ್ಲಿ ಕೆಲಸ ಮಾಡುವುದಿಲ್ಲ ಎಂಬುದು ಸ್ಪಷ್ಟ. ಧಾರವಾಡ ಲೋಕಸಭಾ ಕ್ಷೇತ್ರವೂ ಸೇರಿದಂತೆ ಕರ್ನಾಟಕದ ಬಹುಪಾಲು ಮತದಾರರು; ನರೇಂದ್ರ ಮೋದಿ ಅವರು ಸಿದ್ಧಪಡಿಸಿದ್ದ ಬಲಿಷ್ಠ ರಾಷ್ಟ್ರ, ವಿಶ್ವಗುರು, ದೇಶಭಕ್ತಿ, ರಾಷ್ಟ್ರೀಯತೆ-ಇತ್ಯಾದಿ ಹೂರಣ ಒಳಗೊಂಡ ಕಥಾನಕವನ್ನು ಬಲವಾಗಿ ನಂಬಿದ್ದಾರೆ. ಅದಕ್ಕೆ ಪರ್ಯಾಯವಾದ, ಪರಿಣಾಮಕಾರಿಯಾದ ನೆರೇಟಿವ್ ಪ್ರತಿಷ್ಠಾಪಿಸಿದಾಗ ಮಾತ್ರ ಲೋಕಸಭಾ ಚುನಾವಣೆಯಲ್ಲಿ ಬೇರೆಯದೇ ಫಲಿತಾಂಶ ಪಡೆದುಕೊಳ್ಳಬಹುದು. ಕರ್ನಾಟಕದಲ್ಲಿ ಬಿಜೆಪಿಗೆ ಪಾಠ ಕಲಿಸಲು ಹೊರಟ ಕಾಂಗ್ರೆಸ್ ಪಕ್ಷ, ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿಯವರ ಸೋಲನ್ನು ಎದುರು ನೋಡುತ್ತಿರುವ ಸಂತೋಷ್ ಲಾಡ್, ದಿಂಗಾಲೇಶ್ವರ ಸ್ವಾಮೀಜಿಯವರು ಜೋಶಿಗೂ ಮೀರಿದ ಪ್ರಬಲ ಶಕ್ತಿಯನ್ನು ಭಂಜಿಸಬೇಕಿದೆ. ಹುತ್ತವ ಬಡಿದರೆ ಹಾವು ಸಾಯುವುದಿಲ್ಲ.