ಆಸ್ತಿ ನೋಂದಣಿ ಮತ್ತು ರಿಯಲ್ ಎಸ್ಟೇಟ್ ಮಾಫಿಯಾ

ಸರಕಾರದ ನೀತಿ ನಿಯಮಗಳು ಒಂದು ಕಡೆ. ರಿಯಲ್ ಎಸ್ಟೇಟ್ ಮಾಫಿಯಾದ ಮಿತಿ ಮೀರಿದ ಧನದಾಹ ಇನ್ನೊಂದು ಕಡೆ. ಎಂಜಲು ಕಾಸಿಗೆ ಕೈಚಾಚುವ ಭ್ರಷ್ಟ ಸರಕಾರಿ ಅಧಿಕಾರಿಗಳು ನಿಯಮ ಪಾಲನೆ ಹೆಸರಲ್ಲೇ ಕೋಟಿ ಕೋಟಿ ಬಾಚುವ ಪ್ರವೃತ್ತಿ ಬೆಳೆಸಿಕೊಂಡಿದ್ದರಿಂದ ಆಸ್ತಿ ನೋಂದಣಿ ಇಲಾಖೆಯೇ ಜನಸಾಮಾನ್ಯರ ಪಾಲಿಗೆ ಶತ್ರುವಾಗಿ ಪರಿಣಮಿಸಿದೆ. ನೋಂದಣಿ ಇಲಾಖೆಯ ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್‌ನವರ ಕಳ್ಳ ದಂಧೆಗೆ ಬಡ ಮತ್ತು ಮಧ್ಯಮ ವರ್ಗದವರು ಇಡೀ ಜೀವಮಾನ ಕೂಡಿಟ್ಟ ಹಣ ಕಳೆದುಕೊಳ್ಳುವಂತಾಗಿದೆ. ಸರಕಾರ ಬದಲಾದಾಗಲೆಲ್ಲ ಹೊಸ ನಿಯಮಗಳು ಬರುವುದರಿಂದ ಸಾಮಾನ್ಯ ಜನ ಕಂಗಾಲಾಗಿ ಹೋಗಿದ್ದಾರೆ. ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಮಾಫಿಯಾದವರು ಹಣ ಮಾಡಿಕೊಂಡು ನೆಮ್ಮದಿಯ ಬದುಕು ನಡೆಸುತ್ತಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟದಲ್ಲಿ ಕಂದಾಯ ಮಂತ್ರಿಯಾಗಿರುವ ಕೃಷ್ಣ ಬೈರೇಗೌಡರು ಕಳೆದ ಒಂದೂವರೆ ವರ್ಷಗಳಿಂದ ಆಸ್ತಿ ನೋಂದಣಿ ಇಲಾಖೆಯಲ್ಲಿ ಸುಧಾರಣೆ ತರಲು ಯತ್ನಿಸುತ್ತಿದ್ದಾರೆ. ಆದರೆ ಜನಸಾಮಾನ್ಯರ ತೊಂದರೆ ಹೆಚ್ಚಾಗುತ್ತಿವೆಯೇ ಹೊರತು ಗೊಂದಲಗಳು ಬಗೆ ಹರಿಯುತ್ತಿಲ್ಲ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎನ್.ಎ.(ಕೃಷಿಯೇತರ ಜಮೀನು) ಮಾಡಿಸಿ ಬಡಾವಣೆ ನಿರ್ಮಿಸುವುದು, ನಿವೇಶನಗಳನ್ನು ಮಾರಾಟ ಮಾಡುವುದು ಮೊದಲಿಂದಲೂ ನಡೆದು ಬಂದಿದೆ. ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನಿವೇಶನಗಳ ನೋಂದಣಿ ಪ್ರಕ್ರಿಯೆ ಸರಾಗವಾಗಿ ನಡೆಯುವುದರಿಂದ ನಿವೇಶನ ಖರೀದಿದಾರರು ಧೈರ್ಯದಿಂದ ಖರೀದಿಸುತ್ತಾರೆ. ತಮ್ಮ ಹೆಸರಲ್ಲಿ ನಿವೇಶನ ಇದೆಯೆಂದು ಸಂಭ್ರಮಿಸುತ್ತಾರೆ.
ಆ ನಿವೇಶನದಲ್ಲಿ ಮನೆ ಕಟ್ಟಲು ತಯಾರಿ ಮಾಡಿಕೊಳ್ಳುವಾಗ ಅಥವಾ ಬೇರೆಯವರಿಗೆ ಮಾರಾಟ ಮಾಡಲು ಹೊರಟಾಗ ನೈಜ ಸವಾಲುಗಳು ಎದುರಾಗುತ್ತವೆ.
ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರ ಸಭೆ, ಮಹಾನಗರ ಪಾಲಿಕೆ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ನಿವೇಶನಗಳ ಮಾಲಕರು ಹೆಜ್ಜೆಹೆಜ್ಜೆಗೂ ಸಮಸ್ಯೆ ಎದುರಿಸಬೇಕಾಗುತ್ತದೆ. ಉಪ ನೋಂದಣಿ ಅಧಿಕಾರಿ ಕಚೇರಿಯಲ್ಲಿ ನಿವೇಶನದ ನೋಂದಣಿಯಾಗಿ ಕೈಯಲ್ಲಿ ಮುದ್ರಾಂಕ ಶುಲ್ಕ ಕಟ್ಟಿದ ರಶೀದಿ ಮತ್ತು ಸ್ಟ್ಯಾಂಪ್ ಪೇಪರ್ ಮೇಲೆ ಬರೆದ ಖರೀದಿ ಪತ್ರದ ವಿವರ ನೋಡಿಯೇ ಖುಷಿ ಪಡುತ್ತಾನೆ. ಆದರೆ ವಾಸ್ತವದಲ್ಲಿ ಆ ನಿವೇಶನಕ್ಕೆ ಆ ವ್ಯಕ್ತಿ ಪೂರ್ಣ ಮಾಲಕನಾಗಿರುವುದಿಲ್ಲ. ಎ ಖಾತಾ, ಬಿ ಖಾತಾ, ಇ ಖಾತಾ ಮುಂತಾದ ಖಾತಾಗಳ ಮಾಹಿತಿ ತಿಳಿದ ಮೇಲೆಯೇ ನೈಜ ಬಣ್ಣ ಬಯಲಾಗುವುದು. ಮನೆ ಕಟ್ಟಲು ಬ್ಯಾಂಕ್ ಸಾಲಕ್ಕೆ ಅರ್ಜಿ ಹಾಕಿದಾಗ ಮತ್ತಷ್ಟು ಹುಳುಕು ಗೊತ್ತಾಗುತ್ತವೆ.
ಕೆಲವೊಮ್ಮೆ ಒಂದೇ ನಿವೇಶನ ಮೂರ್ನಾಲ್ಕು ಜನರ ಹೆಸರಿಗೆ ನೋಂದಣಿ ಇಲಾಖೆಯವರು ನೋಂದಣಿ ಮಾಡಿರುತ್ತಾರೆ. ನೋಂದಣಿ ಕಾಗದ ಪತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ನಿವೇಶನದ ಹಕ್ಕು ಸಾಧನೆಗಾಗಿ ಕೋರ್ಟ್ ಕಚೇರಿ ಅಡ್ಡಾಡಬೇಕು.
ಇದು ಕೇವಲ ಖಾಸಗಿ ಲೇಔಟ್‌ಗಳ ಗೋಳಲ್ಲ. ಬೇರೆ ಬೇರೆ ನಗರಾಭಿವೃದ್ಧಿ ಪ್ರಾಧಿಕಾರಗಳು, ವಿಶೇಷವಾಗಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಂಚುವ ನಿವೇಶನಗಳ ಕಥೆಯೂ ಇದೇ ಬಗೆಯದು. ಲೇಔಟ್ ನಿರ್ಮಾಣ ಮಾಡಿ, ನಿವೇಶನ ಹಂಚಿಕೆಯಾದ ಮೇಲೂ ಆ ಜಮೀನಿನ ಡಿನೋಟಿಫಿಕೇಷನ್ ಮಾಡಲಾಗುತ್ತದೆ. ಆಗ ನಿವೇಶನ ಪಡೆದವರ ಕತೆ ಏನಾಗಬೇಕು? ಕೆಲವರು ನಿವೇಶನ ಪಡೆದು ಮನೆಯೂ ಕಟ್ಟಿಸಿಕೊಂಡಿರುತ್ತಾರೆ.
ಮೈಸೂರು ನಗರಾಭಿವೃದ್ಧಿ ವ್ಯಾಪ್ತಿಯ ದೇವನೂರು ಬಡಾವಣೆಯಲ್ಲಿ ಆದದ್ದು ಅದೇ. ಪರಿಪೂರ್ಣ ಬಡಾವಣೆ ನಿರ್ಮಾಣವಾದ ಮೇಲೆ, ತಹಶೀಲ್ದಾರ್ ಮತ್ತು ಜಿಲ್ಲಾಧಿಕಾರಿ ಅದು ಕೃಷಿ ಜಮೀನು ಎಂದು ವರದಿ ನೀಡಿದ್ದಾರೆಂದರೆ ವ್ಯವಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಊಹಿಸಬಹುದು.
ದಿವಂಗತ ಎಂ.ಪಿ. ಪ್ರಕಾಶ್ ಅವರು ಕಂದಾಯ ಮಂತ್ರಿಯಾಗಿದ್ದಾಗ ಅವರ ಮಗ ರವಿ ಖಾಸಗಿ ಲೇಔಟ್‌ನಲ್ಲಿ ನಿವೇಶನಗಳನ್ನು ಖರೀದಿಸಿದ್ದರು. ಆ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ಹೋದಾಗ ಗೊತ್ತಾಯಿತು, ಆ ನಿವೇಶನಗಳು ಬೇರೆಯವರ ಹೆಸರಿಗೂ ನೋಂದಣಿಯಾಗಿದ್ದವು ಎಂದು. ಮಂತ್ರಿ ಮಗ ಆಗಿದ್ದರಿಂದ ಹೇಗೋ ನಿವೇಶನಗಳನ್ನು ತಮ್ಮ ವಶಕ್ಕೆ ಪಡೆದುಕೊಂಡರು. ಇಂತಹ ಸಾವಿರಾರು ಪ್ರಕರಣಗಳು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ನೋಡಲು ಸಿಗುತ್ತವೆ. ಇಂತಹ ಪ್ರಕರಣಗಳಲ್ಲಿ ಉಪ ನೋಂದಣಿ ಅಧಿಕಾರಿಗಳೇ ಶಾಮೀಲಾಗಿರುತ್ತಾರೆ.
ಕೆಲವು ಬಡಾವಣೆ ಮತ್ತು ಅಪಾರ್ಟ್‌ಮೆಂಟ್‌ಗಳನ್ನು ನಿಯಮ ಗಾಳಿಗೆ ತೂರಿ ನಿರ್ಮಾಣ ಮಾಡಿರುತ್ತಾರೆ. ಬ್ಯಾಂಕ್‌ಗಳು ಸಾಲ ಮಂಜೂರು ಮಾಡಿರುತ್ತವೆ. ಪಾಪ ಜನ ನಿವೇಶನ-ಅಪಾರ್ಟ್‌ಮೆಂಟ್ ಖರೀದಿಸಿ ತಮ್ಮದೆಂದು ಸಂಭ್ರಮಿಸುತ್ತಿರುತ್ತಾರೆ. ಅಕ್ರಮ ಬಡಾವಣೆ-ಅಪಾರ್ಟ್ ಮೆಂಟ್ ಎಂದು ನೋಟಿಸ್ ಕೊಟ್ಟು ಕಟ್ಟಡ ನೆಲಸಮ ಮಾಡಲು ಯಂತ್ರ ಗಳು ನುಗ್ಗಿದಾಗಲೇ ಇದು ನಮ್ಮದಲ್ಲ ಎನಿಸಿ ಆಘಾತ ಅನುಭವಿ ಸುತ್ತಾರೆ.
ಬಡಾವಣೆ ನಿರ್ಮಾಣ ಮಾಡಿ, ನಿವೇಶನ ಹಂಚಿಕೆಯಾಗಿ ಅಲ್ಲಿ ಮನೆ ಕಟ್ಟಿದ ಮೇಲೆ ಅದು ಅರಣ್ಯ ಇಲಾಖೆಯ ಜಮೀನು ಎಂಬುದು ಗೊತ್ತಾಗುತ್ತದೆ. ಅಧಿಕಾರಿಗಳು ಮತ್ತು ರಿಯಲ್ ಎಸ್ಟೇಟ್ ಮಂದಿ ಬಚಾವ್ ಆಗುತ್ತಾರೆ. ಆದರೆ ಸಮಸ್ಯೆ ಎದುರಿಸುವವರು ನಿವೇಶನ ಖರೀದಿಸಿ ಮನೆ ಕಟ್ಟಿಸಿಕೊಂಡವರು. ಮಧ್ಯಮ ಮತ್ತು ಬಡ ವರ್ಗದವರೇ ಹೆಚ್ಚು ತೊಂದರೆಗೆ ಒಳಗಾಗುವವರು. ಬೆಂಗಳೂರಿನ ರಾಜ ಕಾಲುವೆ ಮೇಲೆ ರಾಜಕಾರಣಿಗಳು ನಿರ್ಮಿಸಿದ ಕಟ್ಟಡಗಳನ್ನು ಇಲ್ಲಿಯವರೆಗೆ ತೆರವುಗೊಳಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಆದರೆ ಸಾಮಾನ್ಯ ಜನರ ಮನೆಗಳನ್ನು ಎಂದೋ ನೆಲಸಮ ಮಾಡಿ ಅವರನ್ನು ಒಕ್ಕಲೆಬ್ಬಿಸಿದ್ದಾರೆ.
ಸರ್ಜಾಪುರ ಸೇರಿದಂತೆ ಹೊರವಲಯದ ಅನೇಕ ಬಡಾವಣೆಯಲ್ಲಿ ವಿಲ್ಲಾ ಮನೆಗಳನ್ನು ನಿರ್ಮಿಸಿ ಐಟಿ ಉದ್ಯೋಗಿಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡಲಾಗಿದೆ. ಮಳೆಗಾಲದಲ್ಲಿ ಆ ವಿಲ್ಲಾ ಮನೆಗಳು ಮುಳುಗಡೆಯಾಗುತ್ತವೆ. ರಿಯಲ್ ಎಸ್ಟೇಟ್ ಮಾಲಕರಾಗಲಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳಾಗಲಿ ಹೊಣೆ ಹೊರುವುದಿಲ್ಲ. ಈ ಕಷ್ಟವನ್ನು ಒಂದೆರಡು ವರ್ಷ ಅನುಭವಿಸಬಹುದು. ಮುಂದೊಂದು ದಿನ ಐಟಿ ಉದ್ಯೋಗಿಗಳಿಗೆ ಬೆಂಗಳೂರಿನ ಸಹವಾಸವೇ ಬೇಡ ಅನಿಸಿದರೂ ಆಶ್ಚರ್ಯವಿಲ್ಲ. ಕನ್ನಡಿಗರು ವಿದೇಶದಲ್ಲಿ ನೆಲೆಸುವ ಪ್ರವೃತ್ತಿ ಹೆಚ್ಚಾಗುತ್ತಿರುವುದಕ್ಕೆ ಈ ಎಲ್ಲ ಅವಘಡಗಳೂ ಕಾರಣ.
ಬೆಂಗಳೂರು ನಗರ ಅಕ್ರಮ ಬಡಾವಣೆಗಳ ತಾಣವಾಗುತ್ತಿದೆ. ಈಗಿರುವ ಬೆಂಗಳೂರು ನಗರವನ್ನು ರಿಪೇರಿ ಮಾಡುವುದು ಬಿಟ್ಟು ರಾಜ್ಯ ಸರಕಾರವೇ ಹೊಸ ಟೌನ್‌ಶಿಪ್ ನಿರ್ಮಾಣಕ್ಕೆ ಮುಂದಾಗಿದ್ದು ನಾಚಿಕೆಗೇಡಿನ ಸಂಗತಿ.
ಗ್ರಾಮ ಪಂಚಾಯತ್‌ನಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯವರೆಗೆ, ಬಡಾವಣೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಬೇಕು. ಕಾನೂನು ಉಲ್ಲಂಘಿಸಿ ಬಡಾವಣೆ ನಿರ್ಮಾಣ ಮಾಡುವ ರಿಯಲ್ ಎಸ್ಟೇಟ್ ಮಾಲಕರ ಮೇಲೆ ಉಗ್ರ ಕ್ರಮ ಜರುಗಿಸಬೇಕು. ಅವರೊಂದಿಗೆ ಅಕ್ರಮಗಳಲ್ಲಿ ಭಾಗಿಯಾಗುವ ಸರಕಾರಿ ಅಧಿಕಾರಿಗಳನ್ನು ದಂಡಿಸಬೇಕು. ಈಗಿನ ರೇರಾ ಪ್ರಮಾಣ ಪತ್ರ ಅಕ್ರಮಗಳನ್ನು ತಡೆಯಲು ಸಾಕಾಗುತ್ತಿಲ್ಲ.
ಕೃಷ್ಣ ಬೈರೇಗೌಡರ ಪ್ರಾಮಾಣಿಕ ಪ್ರಯತ್ನವನ್ನು ಮೆಚ್ಚಿಕೊಳ್ಳಬೇಕು. ಆದರೆ ವೈರುಧ್ಯಗಳೊಂದಿಗೆ ನಿಜವಾದ ಸುಧಾರಣೆ ಸಾಧ್ಯವಾಗುವುದಿಲ್ಲ. ಸಾರಿಗೆ ಇಲಾಖೆಯ ಆರ್‌ಟಿಒಗಳು ಮತ್ತು ಕಂದಾಯ ಇಲಾಖೆಯ ಉಪ ನೋಂದಣಿ ಅಧಿಕಾರಿಗಳು ಕೋಟಿ ಕೋಟಿ ಹಣ ನೀಡಿ ಆಯಕಟ್ಟಿನ ಸ್ಥಾನಕ್ಕೆ ಬರುತ್ತಾರೆ. ಹಾಗೆ ಬರುವ ಅಧಿಕಾರಿಗಳು ಪ್ರಾಮಾಣಿಕರಾಗಿ ಕಾರ್ಯ ನಿರ್ವಹಿಸಬೇಕು ಎಂದು ನಿರೀಕ್ಷೆ ಮಾಡುವುದೇ ತಪ್ಪು. ದಕ್ಷರು ಮತ್ತು ಪ್ರಾಮಾಣಿಕರು ಆ ಜಾಗದಲ್ಲಿ ಕೂತರೆ ಮಾತ್ರ ಸುಧಾರಣೆ ಮತ್ತು ಜನಸ್ನೇಹಿ ಕೆಲಸಗಳನ್ನು ನಿರೀಕ್ಷಿಸಬಹುದು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಲಂಚವಿಲ್ಲದೆ ಕೆಲಸ ಮಾಡಿಸಿಕೊಳ್ಳುವುದು ಕನಸಿನ ಮಾತು. ಲಂಚದಿಂದ ಎಲ್ಲ ಕೆಲಸ ಮಾಡಿಸಿಕೊಳ್ಳಬಹುದು ಎಂದಾದರೆ ಕಾನೂನು ಪಾಲಿಸುವುದು ಬೇಡ ಎನಿಸುತ್ತದೆ.
ರಾಜಕಾರಣಿಗಳು ಸೇರಿದಂತೆ ಬಹುತೇಕರಿಗೆ ರಿಯಲ್ ಎಸ್ಟೇಟ್ ಮತ್ತು ಕಾನ್ವೆಂಟ್ ಶಾಲೆಗಳು ಪ್ರಮುಖ ಆದಾಯದ ಮೂಲಗಳಾಗಿವೆ. ಹಳ್ಳಿಗಳಿಂದ ರಾಜಧಾನಿಯವರೆಗೆ ಜಮೀನು ಖರೀದಿಸುವುದು, ಬಡಾವಣೆ ನಿರ್ಮಿಸುವುದು ಮತ್ತು ಮಾರಾಟ ಮಾಡಿ ಹಣ ಗಳಿಸುವುದು ಒಂದು ದಂಧೆಯಾಗಿದೆ. ನಿಯಮಾನುಸಾರ ಬಡಾವಣೆ ನಿರ್ಮಿಸುವುದು, ವೃತ್ತಿಪರತೆ ಮೆರೆಯುವುದು ಯಾರಿಗೂ ಬೇಕಿಲ್ಲ. ನಿವೇಶನ ನೋಂದಣಿಯಾಗುವಾಗ ಉಪ ನೋಂದಣಿ ಅಧಿಕಾರಿಗಳು ಬಡಾವಣೆಯ ಸಕಲ ಸೌಕರ್ಯಗಳನ್ನು ಪರಿಶೀಲಿಸುವುದಿಲ್ಲ. ಕಣ್ಣು ಮುಚ್ಚಿ ನೋಂದಣಿ ಮಾಡಿಕೊಡುತ್ತಾರೆ. ಆ ನಿವೇಶನದಲ್ಲಿ ಮನೆ ಅಥವಾ ಅಪಾರ್ಟ್‌ಮೆಂಟ್ ಕಟ್ಟುವಾಗಲೂ ಸಂಬಂಧಪಟ್ಟ ಅಧಿಕಾರಿಗಳು ನಿಯಮ ಪಾಲನೆಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಹಣ ಪಡೆದು ಅಕ್ರಮಗಳನ್ನು ಬೆಂಬಲಿಸುತ್ತಾರೆ. ಯಾವತ್ತೋ ಒಂದು ದಿನ ಕಾನೂನಿನ ನೆನಪಾಗಿ ದಂಡಿಸಲು ಮುಂದಾಗುತ್ತಾರೆ. ಆಗ ತೊಂದರೆ ಅನುಭವಿಸುವುದು ಬಲ ಇಲ್ಲದವರು. ಈಗ ಬೆಂಗಳೂರು ನಗರದಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡಗಳನ್ನೇ ಒಮ್ಮೆ ಗಮನಿಸಿ. ಡೆವಿಯೇಷನ್ ಸಾಮಾನ್ಯ ಸಂಗತಿಯಾಗಿದೆ. ಎರಡು ಅಂತಸ್ತು ಕಟ್ಟಬೇಕಾದವರು ನಾಲ್ಕು ಅಂತಸ್ತಿನ ಮನೆ ಕಟ್ಟಿ ಸಂಭ್ರಮ ಪಡುತ್ತಾರೆ. ಕಾನೂನಿನ ಕುಣಿಕೆ ಕೊರಳಿಗೆ ಹತ್ತಿರವಾದಾಗ ಗೋಳಾಡುತ್ತಾರೆ. ಜನಸಾಮಾನ್ಯರು ಕಾನೂನು ಪಾಲನೆಗೆ ತಯಾರಿದ್ದರೂ, ವ್ಯವಸ್ಥೆ ಪೂರಕವಾಗಿಲ್ಲವಾದ್ದರಿಂದ ಲಂಚದ ವ್ಯವಸ್ಥೆಗೆ ಹೊಂದಿಕೊಂಡಿದ್ದಾರೆ. ನ್ಯಾಯಾಲಯ ಕಠಿಣ ಶಿಕ್ಷೆಗೆ ಗುರಿಪಡಿಸಿದಾಗ ಅಧಿಕಾರಿಗಳು, ರಿಯಲ್ ಎಸ್ಟೇಟ್ ಮಾಲಕರು ಪಾರಾಗುತ್ತಾರೆ. ಜನಸಾಮಾನ್ಯರು ಸಿಕ್ಕಿ ಬೀಳುತ್ತಾರೆ.
ಮಂತ್ರಿ ಕೃಷ್ಣ ಬೈರೇಗೌಡರು ನಗರಗಳನ್ನು ಹೊರತುಪಡಿಸಿ ಗ್ರಾಮೀಣ ಪ್ರದೇಶದ ಕೃಷಿ ಭೂಮಿಗೆ ಸಂಬಂಧಿಸಿದ ಪೋಡಿ, ಪಹಣಿ ಇತ್ಯಾದಿ ಕಡೆ ಸುಧಾರಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಉಪನೋಂದಣಿ ಕಚೇರಿಗಳು ಕಂದಾಯ ಇಲಾಖೆಯ ವ್ಯಾಪ್ತಿಗೆ ಬಂದರೂ ಇನ್ನುಳಿದ ಇಲಾಖೆಗಳಲ್ಲಿನ ಅಕ್ರಮ ತಡೆಯದಿದ್ದರೆ ಪಾರದರ್ಶಕ ವ್ಯವಸ್ಥೆ ತರಲಾಗದು. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಯಲ್ಲೂ ಪಾರದರ್ಶಕತೆ, ಪ್ರಾಮಾಣಿಕತೆ ಅಳವಡಿಸಿಕೊಂಡಾಗ ಕಂದಾಯ ಇಲಾಖೆಯ ಸುಧಾರಣೆಗಳು ಸಾರ್ಥಕತೆ ಪಡೆಯುತ್ತವೆ. ಗ್ರಾಮೀಣಾಭಿವೃದ್ಧಿ, ಕಂದಾಯ, ನಗರಾಭಿವೃದ್ಧಿ, ಪೌರಾಡಳಿತ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತ ವ್ಯವಸ್ಥೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸುವ ಅಗತ್ಯವಿದೆ. ಸಿದ್ದರಾಮಯ್ಯ ಅವರ ಸಚಿವ ಸಂಪುಟದ ಮಂತ್ರಿಗಳು ಲಂಡನ್ ಸೇರಿದಂತೆ ಬೇರೆ ದೇಶಗಳ ಮಹಾನಗರಗಳನ್ನು ಕಣ್ಣಾರೆ ಕಂಡಿದ್ದಾರೆ. ಜನಸ್ನೇಹಿ ವ್ಯವಸ್ಥೆ ಕರ್ನಾಟಕದಲ್ಲಿ ಜಾರಿಗೊಳಿಸಲು ಮುಂದಾದರೆ ಎಲ್ಲರೂ ಸ್ವಾಗತಿಸುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ಏಳು ದಶಕಗಳು ಕಳೆದಿವೆ. ಈಗಲೂ ನಮ್ಮ ನಗರ, ಮಹಾನಗರಗಳು ಯೋಜಿತವಾಗಿ ರೂಪುಗೊಳ್ಳುತ್ತಿಲ್ಲ. ಉಪನೋಂದಣಿ ಕಚೇರಿಗಳು ದಕ್ಷತೆ ಮತ್ತು ಪಾರದರ್ಶಕತೆ ರೂಢಿಸಿಕೊಂಡರೆ ಅರ್ಧದಷ್ಟು ಅಕ್ರಮಗಳಿಗೆ ಕಡಿವಾಣ ಹಾಕಬಹುದು. ಈಗ ಕಂಪ್ಯೂಟರ್ ಸೌಲಭ್ಯ ದೊರೆಯುತ್ತಿದೆ. ಆಧುನಿಕ ತಂತ್ರಜ್ಞಾನದ ನೆರವು ಪಡೆದು ಅಕ್ರಮಗಳನ್ನು ಪತ್ತೆ ಹಚ್ಚುವುದು ಮತ್ತು ನಿಯಂತ್ರಿಸುವುದು ಸಾಧ್ಯವಿದೆ. ಜನಸಾಮಾನ್ಯರು ಕಾನೂನಿನ ಅರಿವಿದ್ದೋ ಅರಿವು ಇಲ್ಲದೆಯೋ ಈ ಅಕ್ರಮಗಳಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದಾರೆ. ಜನಸಾಮಾನ್ಯರ ತಪ್ಪಿಗೆ ದಂಡ ಹಾಕಿ ಪಾರದರ್ಶಕ ವ್ಯವಸ್ಥೆ ತರಲು ಕಂದಾಯ ಇಲಾಖೆ ಮುಂದಾಗಬೇಕು. ಬಡಾವಣೆ ನಿರ್ಮಿಸಿ, ನಿವೇಶನಗಳ ಮಾರಾಟ ಮಾಡುವುದರಿಂದ ಸರಕಾರಕ್ಕೆ ಆದಾಯ ಹರಿದು ಬರುತ್ತದೆ. ಉಪ ನೋಂದಣಿ ಕಚೇರಿಯ ಆಡಳಿತ ವ್ಯವಸ್ಥೆ ಹೆಚ್ಚು ಬಿಗಿಗೊಳಿಸಿದಷ್ಟು ಹೆಚ್ಚು ಆರ್ಥಿಕ ಸಂಪನ್ಮೂಲಗಳು ಹರಿದು ಬರುತ್ತವೆ. ಸ್ಪಷ್ಟ ಮತ್ತು ಖಚಿತ ನಿಯಮಗಳನ್ನು ರೂಪಿಸಿ ಕಟ್ಟು ನಿಟ್ಟಿನಿಂದ ಜಾರಿಗೊಳಿಸಿದರೆ ಅಕ್ರಮಗಳಿಗೆ ಕಡಿವಾಣ ಬೀಳುತ್ತದೆ. ಅಕ್ರಮ ಲೇಔಟ್‌ಗಳು ಕಾನೂನು ಮಾತ್ರ ಉಲ್ಲಂಘನೆ ಮಾಡುವುದಿಲ್ಲ ಸಮಸ್ತ ನಗರದ ಲಯ ಕೆಡಿಸುತ್ತವೆ. ಒಟ್ಟು ವ್ಯವಸ್ಥೆಯಲ್ಲಿ ಅರಾಜಕತೆ ತಾಂಡವವಾಡುತ್ತದೆ..
ಕಂದಾಯ ಮಂತ್ರಿ ಕೃಷ್ಣ ಬೈರೇಗೌಡರು ಒಂದೇ ದಿನದಲ್ಲಿ ಜಾದೂ ಮಾಡಬೇಕೆಂದು ಯಾರೂ ಅಪೇಕ್ಷಿಸುವುದಿಲ್ಲ. ಆದರೆ ಅವರು ರಾಜಕೀಯ ಇಚ್ಛಾಶಕ್ತಿ ತೋರಿದರೆ ಐದು ವರ್ಷದಲ್ಲಾದರೂ ವ್ಯವಸ್ಥೆ ಸರಿದಾರಿಗೆ ಬರಬಹುದು. ರೂಢಿಗತ ವ್ಯವಸ್ಥೆ ಮಗ್ಗಲು ಬದಲಿಸಲು ಸಮಯ ತೆಗೆದುಕೊಳ್ಳುತ್ತದೆ. ಸಂಕಲ್ಪ ಶಕ್ತಿ ಬಲವಾಗಿದ್ದರೆ ಬದಲಾವಣೆ ಖಂಡಿತ ಸಾಧ್ಯವಿದೆ. ಅಷ್ಟಕ್ಕೂ ಈ ಎಲ್ಲ ಗುಣಾತ್ಮಕ ಬದಲಾವಣೆಯಿಂದ ನಮ್ಮ ಊರು, ಪಟ್ಟಣ, ನಗರ, ಮಹಾನಗರಗಳು ವ್ಯವಸ್ಥಿತ ಬೆಳವಣಿಗೆ ಹೊಂದುತ್ತವೆ. ಅಂತಿಮವಾಗಿ ಬಡ ಮಧ್ಯಮ ವರ್ಗಕ್ಕೆ ಸೇರಿದ ಅಮಾಯಕ ಜನ ನೆಮ್ಮದಿಯಾಗಿ ಬದುಕು ನಡೆಸುವಂತಾಗುತ್ತದೆ. ನಮ್ಮ ಯುವ ಪೀಳಿಗೆ ವಿದೇಶಗಳತ್ತ ಆಕರ್ಷಿತರಾಗಲು ಪ್ರಮುಖ ಕಾರಣ ಅಲ್ಲಿನ ಪಾರದರ್ಶಕ ವ್ಯವಸ್ಥೆ ತಾನೆ?. ಭ್ರಷ್ಟಾಚಾರ ತಗ್ಗಿಸಬಹುದು, ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬಹುದು ಎಂಬ ಭರವಸೆಯನ್ನು ಸಚಿವ ಕೃಷ್ಣ ಬೈರೇಗೌಡರು ಮೂಡಿಸುತ್ತಿದ್ದಾರೆ. ಉತ್ತಮ ವ್ಯವಸ್ಥೆಗೆ ಎದುರು ನೋಡೋಣ.
ಉಪ ನೋಂದಣಿ ಅಧಿಕಾರಿಗಳ ನೇಮಕಾತಿ ಮತ್ತು ವರ್ಗಾವಣೆಯಲ್ಲಿ ಲಂಚಾವತಾರ ಕೆಲಸ ಮಾಡದಿದ್ದರೆ ಭ್ರಷ್ಟಾಚಾರದ ಪ್ರಮಾಣ ಖಂಡಿತ ಕಡಿಮೆಯಾಗುತ್ತದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ಇಲಾಖೆಗಳಲ್ಲಿನ ಮಿತಿಮೀರಿದ ಭ್ರಷ್ಟಾಚಾರದ ಮೂಲ ಇರುವುದು ಕರ್ನಾಟಕ ಲೋಕಸೇವಾ ಆಯೋಗದಲ್ಲಿ. ಲೋಕಸೇವಾ ಆಯೋಗದ ಸದಸ್ಯರ ನೇಮಕಾತಿಯಲ್ಲಿ ಹಣದ ವಹಿವಾಟು ನಡೆಯದಂತೆ ನಿಗಾ ವಹಿಸಬೇಕು. ಭ್ರಷ್ಟಾಚಾರದ ಮೂಲ ಸರಿಪಡಿಸಿದರೆ ಉಳಿದದ್ದು ಸಾಮ ದಂಡಗಳಿಂದ ನಿಯಂತ್ರಿಸಬಹುದು. ಕೇಂದ್ರ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲದಿರುವುದರಿಂದ ಒಂದಷ್ಟು ನಿಜವಾದ ಪ್ರತಿಭಾವಂತರಿಗೆ ಅವಕಾಶ ಸಿಗುತ್ತವೆ.
ಹಣ ಕೊಟ್ಟು ಬರುವವರು ಹೇಗಾದರೂ ಮಾಡಿ ಲೂಟಿ ಹೊಡೆಯಲು ಯೋಜನೆ ರೂಪಿಸುತ್ತಾರೆ. ಭ್ರಷ್ಟಾಚಾರ ಜೀವಂತವಾಗಿರುವುದರಿಂದಲೇ ರಿಯಲ್ ಎಸ್ಟೇಟ್ ಕುಳಗಳು ಅನಿವಾರ್ಯವಾಗಿ ಲಂಚ ನೀಡುತ್ತಾರೆ. ದೊಡ್ಡ ಪ್ರಮಾಣದ ಲಂಚ ನೀಡಿದ ಮೇಲೆ ಅಕ್ರಮ ಎಸಗಲು ಪರವಾನಿಗೆ ದೊರೆತಿದೆ ಎಂದೇ ಭಾವಿಸಿರುತ್ತಾರೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇರುವ ಎಲ್ಲರೂ ಮಾಫಿಯಾದ ಭಾಗವಾಗಿದ್ದಾರೆ ಎಂದು ಹೇಳಲಾಗದು. ಕೆಲವು ಸಂಸ್ಥೆಗಳು ಗುಣಮಟ್ಟದ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡಿದ್ದರಿಂದ ಹೆಸರು ಮಾಡಿವೆ. ಆ ಸಂಸ್ಥೆಗಳು ಯಾರಿಗೂ ಲಂಚ ನೀಡುವುದಿಲ್ಲ ಮತ್ತು ಅಕ್ರಮ ಎಸಗುವುದಿಲ್ಲ.ಗುಣಮಟ್ಟ ಕಾಯ್ದುಕೊಳ್ಳುವ ರಿಯಲ್ ಎಸ್ಟೇಟ್ ಉದ್ಯಮಿಗಳು ಉಪ ನೋಂದಣಿ ಅಧಿಕಾರಿಗಳು ಸೇರಿದಂತೆ ಭ್ರಷ್ಟ ಅಧಿಕಾರಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಅಧಿಕಾರಿಗಳಲ್ಲೂ ಕೆಲವರು ಪ್ರಾಮಾಣಿಕರಿದ್ದಾರೆ. ಒಂದು ವ್ಯವಸ್ಥೆ ಸಂಪೂರ್ಣ ಭ್ರಷ್ಟಗೊಳ್ಳಲು ಕೇವಲ ಅಧಿಕಾರಿ, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ದೂಷಿಸಿದರೆ ಸಾಲದು. ಜನಸಾಮಾನ್ಯರಲ್ಲಿ ಜಾಗೃತಿ ಮೂಡಬೇಕು. ಜನಸಾಮಾನ್ಯರು ಅಡ್ಡ ಹಾದಿಯಲ್ಲೇ ಖುಷಿಪಡುವುದರಿಂದ ಇಡೀ ವ್ಯವಸ್ಥೆ ಭ್ರಷ್ಟವಾಗುತ್ತದೆ. ಆಸ್ತಿ ನೋಂದಣಿ ಇಲಾಖೆಯ ವೈಖರಿಯ ಜೊತೆಗೆ ವಕೀಲರು, ಪತ್ರಕರ್ತರ ಮೌನವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕಾಗುತ್ತದೆ.
ಕೆಲಸಕ್ಕೆ ಬಾರದ, ಜನಸಾಮಾನ್ಯರ ನಿತ್ಯದ ಬದುಕಿಗೆ ಸಂಬಂಧ ಇಲ್ಲದ ಎಷ್ಟೋ ವಿಷಯಗಳು ಸುದ್ದಿಯಾಗುತ್ತವೆ. ಆದರೆ ಜನಸಾಮಾನ್ಯರನ್ನು ನಿತ್ಯ ಬಾಧಿಸುವ ಭ್ರಷ್ಟಾಚಾರ, ವಿವಿಧ ಇಲಾಖೆಗಳಲ್ಲಿನ ಅಕ್ರಮಗಳು ಸುದ್ದಿಯಾಗುವುದಿಲ್ಲ. ಆರ್‌ಟಿಒ ಮತ್ತು ಉಪ ನೋಂದಣಿ ಅಧಿಕಾರಿಗಳ ಕಚೇರಿಯತ್ತ ಸುದ್ದಿಮಾಧ್ಯಮದವರು ಗಮನ ಹರಿಸುವುದಿಲ್ಲ. ತಮ್ಮ ಕೆಲಸವಾದರೆ ಸಾಕು ಎನ್ನುವ ಮನೋಭಾವ ಎಲ್ಲರಲ್ಲಿ ಬೇರು ಬಿಟ್ಟಿದೆ. ತಂತ್ರಜ್ಞಾನ ಎಷ್ಟೇ ಬೆಳೆದರೂ ಮನುಷ್ಯ ಪ್ರಾಮಾಣಿಕತೆ ರೂಢಿಸಿಕೊಳ್ಳದಿದ್ದರೆ ತಂತ್ರಜ್ಞಾನದ ಪರಿಕರಗಳನ್ನೂ ಭ್ರಷ್ಟಗೊಳಿಸುತ್ತಾನೆ. ಉಪ ನೋಂದಣಿ ಕಚೇರಿಯಲ್ಲಿ ಮತ್ತೆ ಮತ್ತೆ ಸರ್ವರ್ ಡೌನ್ ಆಗುವುದು ಭ್ರಷ್ಟಗೊಂಡ ಮನಸ್ಥಿತಿಯ ಕಾರಣಕ್ಕೆ. ಒಬ್ಬ ಮುಖ್ಯಮಂತ್ರಿ, ಒಬ್ಬ ಮಂತ್ರಿ ಇದನ್ನೆಲ್ಲಾ ಜಾದೂ ಮಾಡಿ ಸರಿ ಪಡಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಭಾಗವಾಗಿರುವ ಎಲ್ಲ ಪ್ರಜ್ಞಾವಂತ ಮತ್ತು ಸಂವೇದನಾಶೀಲ ಅಂಗಗಳು ಕ್ರಿಯಾಶೀಲವಾಗಿ ಭ್ರಷ್ಟಾಚಾರ ನಿರ್ಮೂಲಕ್ಕಾಗಿ ಸಮರ್ಪಣಾ ಭಾವದಿಂದ ದುಡಿಯಬೇಕು. ನನ್ನನ್ನು ಹೊರತು ಪಡಿಸಿ ಉಳಿದ ಎಲ್ಲರೂ ಪ್ರಾಮಾಣಿಕರಾಗಿರಬೇಕು ಎಂದು ಅಪೇಕ್ಷಿಸುತ್ತೇವೆ. ಎಲ್ಲರನ್ನು ಒಳಗೊಂಡ ಭ್ರಷ್ಟ ವ್ಯವಸ್ಥೆಯನ್ನು ಎಲ್ಲರೂ ಸೇರಿಯೇ ಶುದ್ಧಿ ಮಾಡಬೇಕು. ಹೊರ ದೇಶದಲ್ಲಿ ಸಾಧ್ಯವಾದದ್ದು ನಮ್ಮಲ್ಲಿ ಯಾಕೆ ಸಾಧ್ಯವಾಗುವುದಿಲ್ಲ? ಇದು ನಮ್ಮಲ್ಲಿ ನಾವೇ ಕೇಳಿಕೊಳ್ಳಬೇಕಾದ ಆತ್ಮ ನಿರೀಕ್ಷೆಯ ಪ್ರಶ್ನೆ. ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ ಪಾರದರ್ಶಕ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರ ರಹಿತ ಬದುಕು ಅನಿವಾರ್ಯವಾಗಿದೆ.