ಸಾರ್ವಜನಿಕ ಬದುಕು ಮತ್ತು ದುರಹಂಕಾರದ ನಡೆ

ಅರವಿಂದ ಕೇಜ್ರಿವಾಲ್ ಭಾರತದ ರಾಜಕಾರಣದಲ್ಲಿ ಭರವಸೆ ಮೂಡಿಸಿದ್ದರು. ಪರ್ಯಾಯ ರಾಜಕಾರಣಕ್ಕೆ ಮಾದರಿ ಎನಿಸಿದ್ದರು. ಐಐಟಿ ಖರಗಪುರದ ಇಂಜಿನಿಯರಿಂಗ್ ಪದವೀಧರ, ಇಂಡಿಯನ್ ರೆವಿನ್ಯೂ ಸರ್ವಿಸ್‌ಗೆ ಆಯ್ಕೆಯಾದ ಮಧ್ಯಮವರ್ಗದ ಯುವಕ ಸಮಾನ ಮನಸ್ಕ ಗೆಳೆಯರೊಂದಿಗೆ ಸೇರಿ ಈ ಮಟ್ಟಕ್ಕೆ ಅಧಿಕಾರ ರಾಜಕಾರಣದಲ್ಲಿ ಬೆಳೆಯುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ.
ಸರಕಾರಿ ಸೇವೆಯಲ್ಲಿ ಇರುವಾಗಲೇ, 1999ರಲ್ಲಿ ಪರಿವರ್ತನ ಸಂಘಟನೆ ಮೂಲಕ ಜನ ಸಾಮಾನ್ಯರನ್ನು ತೀವ್ರವಾಗಿ ಬಾಧಿಸುತ್ತಿರುವ ಸಮಸ್ಯೆಗಳ ವಿರುದ್ಧ ಹೋರಾಟ ಆರಂಭಿಸಿದ್ದರು. ಅರವಿಂದ ಕೇಜ್ರಿವಾಲ್ ಮತ್ತವರ ಗೆಳೆಯರು ಮೊದಲು ಕೈಗೆತ್ತಿಕೊಂಡ ದಿಲ್ಲಿಯ ಪಡಿತರ ವ್ಯವಸ್ಥೆ ವಿರುದ್ಧದ ಹೋರಾಟ ಸಾಮಾನ್ಯ ಜನರ ಗಮನ ಸೆಳೆಯಿತು. ರಾಜಕೀಯ ಪಕ್ಷಗಳು ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೋರಾಟಗಳನ್ನು ರೂಪಿಸುತ್ತವೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಇರಾದೆ ಅವರಿಗೆ ಇರುವುದಿಲ್ಲ. ಸುದ್ದಿಯಲ್ಲಿ ಇರುವುದು ಅವರ ಮುಖ್ಯ ಕಾಳಜಿಯಾಗಿರುತ್ತದೆ. ಚುನಾವಣೆಯವರೆಗೆ ಆಡಳಿತ ಪಕ್ಷದ ವಿರುದ್ಧ ಜನಾಭಿಪ್ರಾಯ ರೂಪಿಸುವುದು ಮತ್ತು ಆಡಳಿತ ವಿರೋಧಿ ಅಲೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವುದು ಅವರ ಮುಖ್ಯ ಗುರಿ. ಕಾಂಗ್ರೆಸ್, ಬಿಜೆಪಿ ಅಷ್ಟು ಮಾತ್ರವಲ್ಲ ವಿವಿಧ ರಾಜ್ಯಗಳಲ್ಲಿ ನೆಲೆ ನಿಂತ ಬಹುಪಾಲು ಪ್ರಾದೇಶಿಕ ಪಕ್ಷಗಳು ಇದನ್ನೇ ಮಾಡುತ್ತಾ ಬಂದಿವೆ. ಮತದಾರ ಅವರು ಕೆಟ್ಟಾಗ ಇವರನ್ನು ಇವರು ಕೆಟ್ಟಾಗ ಅವರನ್ನು ಬೆಂಬಲಿಸುತ್ತಾ ತಮ್ಮ ಹಕ್ಕು ಚಲಾಯಿಸಿದ ಅಲ್ಪ ತೃಪ್ತಿಯಲ್ಲೇ ಭ್ರಷ್ಟ ಆಡಳಿತ ವ್ಯವಸ್ಥೆ ಜೊತೆಗೆ ಬದುಕು ಸಾಗಿಸುತ್ತಾರೆ. ಆಮೂಲಾಗ್ರ ಬದಲಾವಣೆ ಎಂಬುದು ಕನಸಿನ ಮಾತಾಗುತ್ತದೆ.
ನಿಂತ ನೀರಾಗಿದ್ದ ರಾಜಕಾರಣದಲ್ಲಿ ರಭಸದ ಅಲೆ ಬಂದು ಕೊಳೆ ಅಳಿಸಿ ಹಾಕುವ ಭರವಸೆ ಮೂಡಿಸಿದಾಗ ಸಹಜವಾಗಿ ನಂಬುತ್ತಾರೆ. ಭಕ್ತಿ ಪಂಥದ ಮಹಾನ್ ಸಂತ ಕಬೀರ್ ಹೆಸರಿನ ಸರಕಾರೇತರ ಸಂಸ್ಥೆ ಆರಂಭಿಸುವ ಅರವಿಂದ ಕೇಜ್ರಿವಾಲ್ ದೊಡ್ಡ ಸರಕಾರಿ ಹುದ್ದೆಗೆ ರಾಜೀನಾಮೆ ನೀಡುತ್ತಾರೆ. 2006ರಲ್ಲಿ ಅವರು ಪ್ರತಿಷ್ಠಿತ ಮ್ಯಾಗ್ಸೆಸೇ ಪ್ರಶಸ್ತಿಗೆ ಭಾಜನರಾಗುತ್ತಾರೆ. ಅವರ ಸಂಸ್ಥೆಗೆ ಹಣದ ನೆರವು ಹರಿದು ಬರುತ್ತದೆ. ಹಿರಿಯ ಗಾಂಧಿವಾದಿ ಅಣ್ಣಾ ಹಝಾರೆ, ದಕ್ಷ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಮತ್ತು ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಆರಂಭಿಸಿದ ಭ್ರಷ್ಟಾಚಾರದ ವಿರುದ್ಧ ಭಾರತ ಮತ್ತು ಜನಲೋಕಪಾಲ್ ಕಾಯ್ದೆಗೆ ಒತ್ತಾಯಿಸಿ ನಡೆಯುವ ಬೃಹತ್ ಜನಾಂದೋಲನದಲ್ಲಿ ಅರವಿಂದ ಕೇಜ್ರಿವಾಲ್ ಮತ್ತವರ ಗೆಳೆಯರು ಸೇರಿಕೊಳ್ಳುತ್ತಾರೆ. ಅಣ್ಣಾ ಹಝಾರೆ ಅವರಿಗಿರುವ ಬಹುದೊಡ್ಡ ವಿಶ್ವಾಸಾರ್ಹತೆ ಆ ಜನಾಂದೋಲನಕ್ಕೆ ಬಲ ನೀಡುತ್ತದೆ. ಆ ಹೋರಾಟದಲ್ಲಿ ಅರವಿಂದ ಕೇಜ್ರಿವಾಲ್ ಹೀರೋ ಆಗಿ ಎದ್ದು ಕಾಣುತ್ತಾರೆ. ಆದರೆ ಹೋರಾಟಗಾರ್ತಿ ಅರುಂಧತಿ ರಾಯ್ ಅರವಿಂದ ಕೇಜ್ರಿವಾಲ್ ಅವರಿಗೆ ಇರುವ ಫೋರ್ಡ್ ಫೌಂಡೇಶನ್ ನಂಟನ್ನು ಗಮನಿಸಿ ಅನುಮಾನಿಸುತ್ತಾರೆ. ಯುಪಿಎ-2 ಸರಕಾರದ ವಿರುದ್ಧದ ಭ್ರಷ್ಟಾಚಾರ ವಿರೋಧಿ ಹೋರಾಟ ತಾರಕಕ್ಕೆ ತಲುಪುತ್ತದೆ. ಹೋರಾಟದ ಫಲದ ಮೇಲೆ ಕಣ್ಣಿಟ್ಟಿದ್ದ ಅರವಿಂದ ಕೇಜ್ರಿವಾಲ್ ಮತ್ತು ನರೇಂದ್ರ ಮೋದಿ ಹೊಂಚು ಹಾಕಿ ದಾಳ ಉರುಳಿಸುತ್ತಾರೆ. ನರೇಂದ್ರ ಮೋದಿ ಬಿಜೆಪಿ ನೇತೃತ್ವ ವಹಿಸಿ ಪ್ರಧಾನಿ ಅಭ್ಯರ್ಥಿಯಾಗುತ್ತಾರೆ. ಅದಕ್ಕೂ ಮೊದಲೇ ಅಂದರೆ 2012ರಲ್ಲಿ ಆಮ್ ಆದ್ಮಿ ಪಾರ್ಟಿ ಸ್ಥಾಪಿಸಿ ಅರವಿಂದ ಕೇಜ್ರಿವಾಲ್ ಅದರ ರಾಷ್ಟ್ರೀಯ ಸಂಚಾಲಕ ಹುದ್ದೆ ಅಲಂಕರಿಸುತ್ತಾರೆ. ಸರ್ವಾಧಿಕಾರಿ ಮನೋಧರ್ಮದ ಅರವಿಂದ ಕೇಜ್ರಿವಾಲ್ ಹಲವರನ್ನು ದೂರ ಸರಿಸುತ್ತಾರೆ. ಆದರೆ ಅರವಿಂದ ಕೇಜ್ರಿವಾಲ್ ಅವರಲ್ಲಿ ಭವಿಷ್ಯದ ಆದರ್ಶ ನಾಯಕನನ್ನು ಕಾಣುತ್ತಿದ್ದ ಜನಸಾಮಾನ್ಯರು ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಬಗ್ಗೆ ಕೆಲ ವಲಯದಲ್ಲಿ ಟೀಕೆಗಳು ಕೇಳಿ ಬರುತ್ತಿದ್ದವು. ಆದರೆ ಅರವಿಂದ ಕೇಜ್ರಿವಾಲ್ ಅವರನ್ನು ಪರ್ಯಾಯ ರಾಜಕಾರಣದ ಮಾದರಿ ಎಂದೇ ಭಾವಿಸಿದ್ದರು.
ನೋಡನೋಡುತ್ತಲೇ 2013ರ ದಿಲ್ಲಿ ವಿಧಾನ ಸಭೆಯಲ್ಲಿ ಜನರ ಪ್ರೀತಿ ಸಂಪಾದಿಸಿದ್ದರು. ಆದರೆ ಸಂಪೂರ್ಣ ಜನಾದೇಶ ಅವರ ಪರ ಇರಲಿಲ್ಲ. ಅಂದರೆ ದಿಲ್ಲಿಯ ಮತದಾರ ಅರವಿಂದ ಕೇಜ್ರಿವಾಲ್ ಅವರನ್ನು ಸಂಪೂರ್ಣ ನಂಬಿರಲಿಲ್ಲ. ಜನರ ವಿವೇಕ ದೊಡ್ಡದು ಎನ್ನುವುದಕ್ಕೆ ಆ ಫಲಿತಾಂಶ ಸಾಕ್ಷಿ. 2013ರಿಂದ 2014ರವರೆಗೆ ದಿಲ್ಲಿಯ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಹಂಗಿನ ಅರಮನೆಯಿಂದ ಹೊರಬಂದು ಸ್ವಾಭಿಮಾನದ ಮಾತುಗಳನ್ನಾಡಿದರು. 2015ರ ದಿಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಾರ್ಟಿ ಐತಿಹಾಸಿಕ ಗೆಲುವು ಸಾಧಿಸಿತು. ಹಾಗೆ ನೋಡಿದರೆ ದಿಲ್ಲಿ ಮತದಾರರು ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮನವಿಗೂ ಬೆಲೆ ಕೊಡಲಿಲ್ಲ. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ದಿಲ್ಲಿಯ ಎಲ್ಲ ಕ್ಷೇತ್ರಗಳನ್ನು ವಶಪಡಿಸಿಕೊಂಡಿತ್ತು. ನರೇಂದ್ರ ಮೋದಿಯವರಿಗಿಂತ ಅರವಿಂದ ಕೇಜ್ರಿವಾಲ್ ಮೇಲೆ ಮತದಾರರಿಗೆ ಹೆಚ್ಚು ಒಲವು. ಆಗ ಅರವಿಂದ ಕೇಜ್ರಿವಾಲ್ ಸರಳತೆ, ಪ್ರಾಮಾಣಿಕತೆ, ದಕ್ಷತೆ ಮತ್ತು ಭರವಸೆಯ ಸಂಕೇತವಾಗಿದ್ದರು. ಜನಸಾಮಾನ್ಯರ ಮುಖ್ಯಮಂತ್ರಿ, ಹಮ್ಮು ಬಿಮ್ಮಿಲ್ಲದ ವ್ಯಕ್ತಿ ದಿಲ್ಲಿಯನ್ನು ಸ್ವರ್ಗವನ್ನಾಗಿಸುವ ದೇವ ಮಾನವ ಎಂದೇ ನಂಬಿದ್ದರು. ಭ್ರಷ್ಟಾಚಾರ ರಹಿತ ಆಡಳಿತ ಇವರಿಂದ ಮಾತ್ರ ಸಾಧ್ಯ ಎಂಬ ಭಾವನೆ ಎಲ್ಲೆಡೆ ಮೂಡಿತು. ಮೋದಿ ನಂತರ ದೇಶವನ್ನು ಆಳುವ ಸಾಮರ್ಥ್ಯ ಅರವಿಂದ ಕೇಜ್ರಿವಾಲ್ ಅವರಲ್ಲಿ ಇದೆ ಎಂದು ಬೇಲಿ ಮೇಲೆ ಕೂತ ರಾಜಕಾರಣಿಗಳ ಲೆಕ್ಕಾಚಾರ ಆಗಿತ್ತು. ಹಾಗಾಗಿಯೇ ದೇಶದ ತುಂಬಾ ಆಮ್ ಆದ್ಮಿ ಪಾರ್ಟಿಯ ಪ್ರಾದೇಶಿಕ ಘಟಕಗಳು ಆರಂಭಗೊಂಡವು.
ಅರವಿಂದ ಕೇಜ್ರಿವಾಲ್ ಎರಡನೇ ಬಾರಿಗೆ ಬಹುಮತದೊಂದಿಗೆ ಮುಖ್ಯಮಂತ್ರಿಯಾದ ಮೇಲೆ ದಿಲ್ಲಿ ಸರಕಾರಿ ಶಾಲೆಗಳನ್ನು, ಆಸ್ಪತ್ರೆಗಳನ್ನು ಗುಣಾತ್ಮಕವಾಗಿ ಬದಲಾಯಿಸಿದರು ಎಂದು ವ್ಯಾಪಕವಾಗಿ ನಂಬಿಸಲಾಯಿತು. ವಿಶೇಷವಾಗಿ ಹೊರದೇಶದ ಮಾಧ್ಯಮಗಳು ಹೊಗಳಿ ಹೊಗಳಿ ಹೊನ್ನ ಶೂಲಕ್ಕೆ ಏರಿಸಿದ್ದವು. ಅರವಿಂದ ಕೇಜ್ರಿವಾಲ್ ಅವರೂ ವಿದೇಶಿ ಮಾಧ್ಯಮಗಳ ಹೊಗಳಿಕೆಯನ್ನು ಪ್ರಮಾಣ ಪತ್ರ ಎಂಬಂತೆ ಬಳಸಿಕೊಂಡರು. 2015ರಿಂದ 2020ರ ಅವಧಿಯಲ್ಲಿ ಅರವಿಂದ ಕೇಜ್ರಿವಾಲ್ ಮಹಾನ್ ಪ್ರಾಮಾಣಿಕ ಎಂದು ಬಿಂಬಿಸಿಕೊಂಡರು. ಆಗೀಗ ಅವರ ಸಂಪುಟ ಸದಸ್ಯರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿದ್ದವು. ದಿಲ್ಲಿಯ ಮತದಾರರು ಬಲವಾಗಿ ನಂಬುವಷ್ಟು ಸುಧಾರಣಾ ಕಾರ್ಯಗಳು ಜಾರಿಗೊಂಡಿದ್ದವು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸಮಸ್ತ ಬಿಜೆಪಿ ತಂಡ ಅರವಿಂದ ಕೇಜ್ರಿವಾಲ್ ವಿರುದ್ಧ ನಡೆಸಿದ ಎಲ್ಲ ಬಗೆಯ ದಾಳಿಗಳು ಫಲ ಕೊಡಲಿಲ್ಲ. ಆಗಲೂ ಈ.ಡಿ., ಸಿಬಿಐ ಮತ್ತು ಲೆಫ್ಟಿನೆಂಟ್ ಗವರ್ನರ್ ಸೇರಿ ಎಲ್ಲ ಅಸ್ತ್ರಗಳನ್ನು ಗರಿಷ್ಠ ಪ್ರಮಾಣದಲ್ಲಿ ಕೇಂದ್ರ ಸರಕಾರ ಬಳಸಿತ್ತು. ಆಗ ಅರವಿಂದ ಕೇಜ್ರಿವಾಲ್ ಹಣಕಾಸಿನ ವಿಷಯದಲ್ಲಿ ಭ್ರಷ್ಟರಾಗಿದ್ದರೂ ಸರಳತೆಯ ಅಸ್ತ್ರ ಅವರನ್ನು ಕಾಪಾಡಿತ್ತು. ಅವರ ಭ್ರಷ್ಟಾಚಾರವನ್ನು ತಾಂತ್ರಿಕವಾಗಿ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ. ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ ದಿನದಿಂದಲೂ ಅರವಿಂದ ಕೇಜ್ರಿವಾಲ್ ಅವರಿಗೆ ಸೈದ್ಧಾಂತಿಕ ಸ್ಪಷ್ಟತೆ ಇರಲಿಲ್ಲ. ಬಿಜೆಪಿಯ ಕೋಮುವಾದಿ ರಾಜಕಾರಣವನ್ನು ಸೈದ್ಧಾಂತಿಕ ನೆಲೆಯಲ್ಲಿ ಆಮ್ ಆದ್ಮಿ ಪಾರ್ಟಿ ಎದುರಿಸಿದ ನಿದರ್ಶನ ದೊರೆಯುವುದಿಲ್ಲ. ಭಾರತ ರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್, ಭಗತ್ ಸಿಂಗ್ ಮುಂತಾದವರ ಭಾವಚಿತ್ರಗಳನ್ನು ವೇದಿಕೆಯ ಬ್ಯಾನರ್‌ಗಳಲ್ಲಿ ಬಳಸಿಕೊಂಡರೇ ಹೊರತು, ಅಂಬೇಡ್ಕರ್ ಅವರ ಜಾತಿವಿನಾಶದ ಪರಿಕಲ್ಪನೆ, ಭಗತ್ ಸಿಂಗ್ ಅವರ ಮಾರ್ಕ್ಸ್‌ವಾದಿ ಚಿಂತನೆಗಳು ಅವರಿಗೆ ಬೇಕಾಗಿರಲಿಲ್ಲ. ಅರವಿಂದ ಕೇಜ್ರಿವಾಲ್ ಅವರದು ಪಕ್ಕಾ ಅವಕಾಶವಾದಿ ರಾಜಕಾರಣವಾಗಿತ್ತು. ಭ್ರಷ್ಟಾಚಾರ ರಹಿತ ರಾಜಕಾರಣದ ಬಗ್ಗೆ ಹುಸಿ ಕನಸುಗಳನ್ನು ಬಿತ್ತಿದರೇ ಹೊರತು, ಅದರ ಪ್ರಾಕ್ಟಿಕಲ್ ಆಯಾಮದ ಕುರಿತು ಸ್ಪಷ್ಟತೆ ಇರಲಿಲ್ಲ. ದುಬಾರಿ ಚುನಾವಣೆ ವೆಚ್ಚದ ಸಂಪನ್ಮೂಲಗಳು ಎಲ್ಲಿಂದ ಬರುತ್ತವೆ ಎಂಬುದರ ಬಗ್ಗೆ ಪಾರದರ್ಶಕವಾಗಿರಲಿಲ್ಲ. ಕಾರ್ಪೊರೇಟ್ ಕಂಪೆನಿಗಳ ಶೋಷಣೆಯ ಇನ್ನೊಂದು ಮುಖದ ಬಗ್ಗೆ ಬಹಿರಂಗ ಸಭೆಗಳಲ್ಲಿ ಮಾತನಾಡುತ್ತಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಆಮ್ ಆದ್ಮಿ ಪಾರ್ಟಿಯನ್ನು ದೇಶದ ಉದ್ದಗಲಕ್ಕೂ ವಿಸ್ತರಿಸಬೇಕೆಂಬ ಹಂಬಲ ಹೆಚ್ಚಾಯಿತು. ಪ್ರಧಾನಿಯಾಗುವ ಕನಸೂ ಕಂಡಿರಬೇಕು. ಬಿಜೆಪಿ ವಿರುದ್ಧ ಚುನಾವಣೆ ಎದುರಿಸಿ ಜನತೆಯ ಅಭೂತ ಪೂರ್ವ ಬೆಂಬಲದಿಂದ ಅಧಿಕಾರ ಹಿಡಿದ ಆಮ್ ಆದ್ಮಿ ಪಾರ್ಟಿಯನ್ನು ಮತ್ತದರ ನಾಯಕ ಅರವಿಂದ ಕೇಜ್ರಿವಾಲ್ ಅವರನ್ನು ವ್ಯವಸ್ಥಿತವಾಗಿ ಹಣಿಯುವುದು ಮೋದಿ, ಅಮಿತ್ ಶಾ ಅವರ ಮೊದಲ ಆದ್ಯತೆಯಾಗಿತ್ತು. ಈ ಕಠೋರ ಸತ್ಯದ ಅರಿವಿದ್ದೇ ಅರವಿಂದ ಕೇಜ್ರಿವಾಲ್ ಮೈ ತುಂಬಾ ಕಣ್ಣಾಗಿ ಎಚ್ಚರದ ನಡೆ ಅನುಸರಿಸಬೇಕಿತ್ತು. ಮತದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರತಿ ಹೆಜ್ಜೆ ಇಡಬೇಕಿತ್ತು. ಅಬ್ಬರದ ಪ್ರಚಾರ, ಹಣಬಲ ಹೆಚ್ಚು ಕಾಲ ಮತದಾರರನ್ನು ನಂಬಿಸುವುದಿಲ್ಲ. ಜನಪರ ಕೆಲಸಗಳು, ಸರಳತೆ, ಸಜ್ಜನಿಕೆ, ಜನಸಾಮಾನ್ಯರೊಂದಿಗಿನ ನಿರಂತರ ಒಡನಾಟ ಮಾತ್ರ ಎದುರಾಳಿಗಳ ನೀಚ ಹುನ್ನಾರಗಳಿಂದ ಪಾರು ಮಾಡಬಲ್ಲದು. ಪಶ್ಚಿಮ ಬಂಗಾಳದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಎರಡು ಅವಧಿ ಪೂರೈಸಿ ಮೂರನೇ ಬಾರಿಗೆ ಜನಾದೇಶ ಪಡೆಯಲು ಮತದಾರರ ಎದುರು ಹೋದಾಗ ಬಿಜೆಪಿಯವರು ಏನೆಲ್ಲ ತಂತ್ರ ಕುತಂತ್ರದ ರಾಜಕಾರಣ ಮಾಡಿದರು ಎಂಬುದು ಭಾರತ ಕಂಡಿದೆ. ಆ ಚುನಾವಣೆಯ ರೋಚಕತೆ ಮತ್ತು ಬೀಭತ್ಸತೆಯನ್ನು ಅರವಿಂದ ಕೇಜ್ರಿವಾಲ್ ನೋಡಿದ್ದಾರೆ. ಅವರ ಮೇಲೆ ಅಬಕಾರಿ ಹಗರಣದ ಆರೋಪ ಬಂದಾಗ ಭಂಡತನ ಮೆರೆಯುವುದು ಬಿಟ್ಟು ಅಧಿಕಾರ ತ್ಯಾಗ ಮಾಡಿ ತಾನು ಪ್ರಾಮಾಣಿಕ ಎಂಬುದನ್ನು ಮತದಾರರ ಎದುರು ನಿರೂಪಿಸಬೇಕಿತ್ತು. ಬಿಜೆಪಿ ತನ್ನನ್ನು ಮುಗಿಸಲು ಎಲ್ಲ ಅಸ್ತ್ರ ಬಳಸುತ್ತಿರುವಾಗ ಅರವಿಂದ ಕೇಜ್ರಿವಾಲ್ ‘ಶೀಷ್ ಮಹಲ್’ ದುರಹಂಕಾರದಿಂದ ಹೊರ ಬರಬೇಕಿತ್ತು. ದಿಲ್ಲಿ ಅಬಕಾರಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಪ್ರಾಮಾಣಿಕವಾಗಿರಲಿಲ್ಲ ಎಂಬುದು ಎಲ್ಲರಿಗೂ ಅರ್ಥವಾಗಿತ್ತು. ತೆಲಂಗಾಣದ ಕೆ. ಚಂದ್ರಶೇಖರ್ ರಾವ್, ಅವರ ಮಗಳು ಕೆ. ಕವಿತಾ ಪ್ರಾಮಾಣಿಕರಲ್ಲ ಎಂಬುದು ದೇಶಕ್ಕೆ ಗೊತ್ತು. ಅವರಿಗೆ ದಿಲ್ಲಿ ಅಬಕಾರಿ ವ್ಯವಹಾರ ನೀಡಿ ಪ್ರಾಮಾಣಿಕ ಎಂದು ಹೇಳಿದರೆ ಅವರ ಅಭಿಮಾನಿಗಳು ನಂಬಬಹುದು. ಆದರೆ ದಿಲ್ಲಿಯ ಅಬಕಾರಿ ವ್ಯವಹಾರದಲ್ಲಿ ಪಳಗಿದ ಭಾರೀ ಕುಳಗಳು ನಂಬುತ್ತಾರೆಯೇ? ಅದಕ್ಕೂ ಮಿಗಿಲಾಗಿ ಆಮ್ ಆದ್ಮಿ ಪಾರ್ಟಿಯ ಒಳ ಜಗಳವನ್ನು ಬೀದಿಗೆ ಬರದಂತೆ ನಿಗಾ ವಹಿಸಬೇಕಿತ್ತು. ಬಿಜೆಪಿ ಪರವಿದ್ದ ಮಾಧ್ಯಮದವರು ಅವಕಾಶಕ್ಕಾಗಿ ಕಾಯುತ್ತಿದ್ದರು. ಶೀಷ್ ಮಹಲ್ ಗುಟ್ಟನ್ನು, ಅಲ್ಲಿ ನಡೆದ ಮಹಿಳೆ ಮೇಲಿನ ಹಲ್ಲೆಯನ್ನು ಕೇಜ್ರಿವಾಲ್ ವಿರೋಧಿ ಮಾಧ್ಯಮಗಳು ಕರುಣಾಜನಕ ಕತೆಯನ್ನಾಗಿ ನಿರೂಪಿಸಿದವು. ಬಿಜೆಪಿ ಅದರ ಲಾಭ ಪಡೆಯಲು ತುದಿಗಾಲಲ್ಲಿ ನಿಂತಿತ್ತು. ಮುಖ್ಯವಾಗಿ ಅರವಿಂದ ಕೇಜ್ರಿವಾಲ್ ಮೊದಲಿನ ಸರಳತೆ, ವಿನಮ್ರತೆ ಕಳೆದುಕೊಂಡಿದ್ದರು. ಅವರು ಮಾಡಿದ ಅತ್ಯುತ್ತಮ ಕೆಲಸಗಳು ಸುದ್ದಿಯಾಗಲಿಲ್ಲ. ಹಾಗೆ ನೋಡಿದರೆ ಆಮ್ ಆದ್ಮಿ ಪಾರ್ಟಿ ಚುನಾವಣಾ ಪ್ರಚಾರ ತಂತ್ರದಲ್ಲಿ ಸದಾ ಮುಂದಿರುತ್ತದೆ. ಎದುರಾಳಿಯ ಎಲ್ಲ ಅಸ್ತ್ರಗಳನ್ನು ಯುದ್ಧಕ್ಕೂ ಮೊದಲೇ ವಿಫಲಗೊಳಿಸಿರುತ್ತದೆ. ಆದರೆ ಈ ಬಾರಿಯ ದಿಲ್ಲಿ ಚುನಾವಣೆಯಲ್ಲಿ ಅರವಿಂದ ಕೇಜ್ರಿವಾಲ್ ಎಲ್ಲದರಲ್ಲೂ ಎಡವಟ್ಟು ಮಾಡಿಕೊಂಡರು. ಕನಿಷ್ಠ ಪಕ್ಷ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಸೌಜನ್ಯ ತೋರಿದರೂ ಮರ್ಯಾದೆ ಉಳಿಸಿಕೊಳ್ಳಬಹುದಿತ್ತು.
ಹರ್ಯಾಣ ರಾಜ್ಯದ ಚುನಾವಣೆಯಲ್ಲಿಯೂ ಸೌಜನ್ಯ ರಾಜಕಾರಣದ ಕೊರತೆಯಿಂದ ತಾನೂ ವಿಫಲರಾದರು, ಕಾಂಗ್ರೆಸ್ ಪಕ್ಷವನ್ನೂ ಮುಳುಗಿಸಿದರು. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬ ಮಾತಿಗೆ ಬಲ ನೀಡಿದರು.
ಎರಡನೇ ಅವಧಿಯಲ್ಲಿ ಅಭಿವೃದ್ಧಿ ಕಾರ್ಯದ ಮೇಲೆ ಹೆಚ್ಚು ಗಮನ ಕೇಂದ್ರೀಕರಿಸಿದ್ದರು. ಮೂರನೇ ಚುನಾವಣೆ ಎದುರಿಸುವ ಹೊತ್ತಿಗೆ ತನ್ನನ್ನು ಬೆಂಬಲಿಸಿದ ಮತದಾರರ ಭಾವನೆಗಳನ್ನು ಗೌರವಿಸದಷ್ಟು ಅಸೂಕ್ಷ್ಮವಾದರು. ಮುಸ್ಲಿಮ್ ಮತದಾರರ ಭಾವನೆಗಳನ್ನು ಯಾವತ್ತೂ ಗಂಭೀರವಾಗಿ ಪರಿಗಣಿಸಲಿಲ್ಲ. ಒಟ್ಟು ಹೇಳಬೇಕೆಂದರೆ: ಅರವಿಂದ ಕೇಜ್ರಿವಾಲ್ ಅವರು ಜನಪರ ರಾಜಕಾರಣದ ವಿಶಾಲ ಸೈದ್ಧಾಂತಿಕ ಭಿತ್ತಿ ರೂಪಿಸುವ ವ್ಯವಧಾನವೇ ತೋರಲಿಲ್ಲ. ಹಣಬಲ, ಕುತಂತ್ರ ಬಲ ಮತ್ತು ಅಬ್ಬರದ ಪ್ರಚಾರದ ಬಲವನ್ನು ಹೆಚ್ಚು ಅವಲಂಬಿಸಿದರು. ಮೊದಲ ಚುನಾವಣೆಯಲ್ಲಿ ಜನಬಲವನ್ನು ಹೆಚ್ಚು ಆಶ್ರಯಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳು ಕೈಗೊಂಡಿರಲಿಲ್ಲ. ಅಬ್ಬರದ ಪ್ರಚಾರದ ಮೂಲಕ ನಂಬಿಸಬಹುದೆಂದು ಭಾವಿಸಿ ಸೋತರು. ‘ಇಂಡಿಯಾ’ ಕೂಟದ ಭಾಗವಾಗಿಯೂ ಮಿತ್ರ ಪಕ್ಷಗಳನ್ನು ನಂಬಲಿಲ್ಲ. ಎಲ್ಲಕ್ಕೂ ಮಿಗಿಲಾಗಿ ಅರವಿಂದ ಕೇಜ್ರಿವಾಲ್ ವ್ಯಕ್ತಿತ್ವದಲ್ಲೇ ಮನೆ ಮಾಡಿರುವ ಸರ್ವಾಧಿಕಾರಿ ಪರ್ಯಾಯ ರಾಜಕಾರಣದ ಕನಸುಗಳನ್ನು ನುಚ್ಚುನೂರು ಮಾಡಿದ.
ಅರವಿಂದ ಕೇಜ್ರಿವಾಲ್ ಮೊದಲಿನ ಸರಳತೆ ಸಜ್ಜನಿಕೆ ಉಳಿಸಿಕೊಂಡು, ತುಸು ಡೆಮಾಕ್ರಟ್ ನಡವಳಿಕೆ ರೂಢಿಸಿಕೊಂಡಿದ್ದರೆ ಬಿಜೆಪಿಯ ಎಲ್ಲ ಕುತಂತ್ರಗಳನ್ನು ವಿಫಲಗೊಳಿಸಬಹುದಿತ್ತು.
ಸಾಮಾನ್ಯ ಮತದಾರ ದುರಹಂಕಾರ ಇಲ್ಲದ ಸರಳ ನಡೆಯನ್ನೇ ಒಬ್ಬ ಜನನಾಯಕನಿಂದ ನಿರೀಕ್ಷೆ ಮಾಡುತ್ತಾನೆ. ದಿ. ಇಂದಿರಾಗಾಂಧಿ ಸೇರಿದಂತೆ ಹಲವರು ದುರಹಂಕಾರ ತೋರಿದಾಗಲೆಲ್ಲ ಜನರ ಪ್ರೀತಿ ಕಳೆದುಕೊಂಡಿದ್ದಾರೆ. 2024ರ ಲೋಕಸಭಾ ಚುನಾವಣಾ ಫಲಿತಾಂಶದಿಂದಲಾದರೂ ಅರವಿಂದ ಕೇಜ್ರಿವಾಲ್ ಪಾಠ ಕಲಿಯಬೇಕಿತ್ತು. ನರೇಂದ್ರ ಮೋದಿ ಮತ್ತು ಬಿಜೆಪಿ ಹುಸಿ ಕಥಾನಕಗಳನ್ನು ಸೃಷ್ಟಿಸಿ ನಿರೂಪಿಸುವಲ್ಲಿ ಎತ್ತಿದ ಕೈ. ರಾಮ ಮಂದಿರ ನಿರ್ಮಾಣ ರಾಷ್ಟ್ರೀಯ ಮಹತ್ವ ಪಡೆಯುವ ವಿದ್ಯಮಾನ ಎಂಬಂತೆ ಆಕಾಶ ಭೂಮಿ ಒಂದಾಗುವ ಪರಿಯಲ್ಲಿ ಮಾಧ್ಯಮ ಪ್ರಚಾರ ಕೈಗೊಳ್ಳಲಾಯಿತು. ದೇಶದ ಎಲ್ಲ ದೇವರು ಹಿಂದೆ ಸರಿದರು. ಬಡತನ, ನಿರುದ್ಯೋಗ ರಾಮಭಕ್ತಿ ಎದುರು ತೃಣಕ್ಕೆ ಸಮಾನವಾದವು. ರಾಮ ಭಕ್ತಿ ಮತ್ತು ಬಿಜೆಪಿಯವರು ಸೃಷ್ಟಿಸಿದ ರಾಮೋನ್ಮಾದ ಮಾತ್ರ ಚುನಾವಣಾ ಗೆಲುವು ತಂದು ಕೊಡಬಲ್ಲದು ಎಂದು ಬಲವಾಗಿ ನಂಬಿದರು. ಎಲ್ಲ ಮಾಧ್ಯಮಗಳ ಸಮೀಕ್ಷೆಗಳು ಅದೇ ಸುಳ್ಳನ್ನು ಬಿತ್ತರಿಸಿದವು. ಆದರೆ ಜನರ ವಿವೇಕ ಎಲ್ಲವನ್ನು ಉಲ್ಟಾ ಪಲ್ಟಾ ಮಾಡಿತು. ನರೇಂದ್ರ ಮೋದಿ ಮತ್ತು ಬಿಜೆಪಿ ಸೃಷ್ಟಿಸಿದ ಹುಸಿ ಉನ್ಮಾದದಲ್ಲಿ ಆ ಪಕ್ಷದ ಲೋಕಸಭಾ ಅಭ್ಯರ್ಥಿಗಳು ಕೊಚ್ಚಿ ಹೋದರು. ಅರವಿಂದ ಕೇಜ್ರಿವಾಲ್ ಈ ಪರಿ ಅಹಂಕಾರ ರೂಢಿಸಿಕೊಂಡು ಜನತೆಯ ವಿವೇಕವನ್ನು ಧಿಕ್ಕರಿಸಿ ಚುನಾವಣೆಯ ತಂತ್ರಗಾರಿಕೆ ರೂಪಿಸಿದ್ದರ ಫಲವಾಗಿ ಹೀನಾಯ ಸೋಲು ಅನುಭವಿಸಬೇಕಾಯಿತು. ರಾಜಕಾರಣಿಗಳು ಮಾತ್ರವಲ್ಲ, ಸಾಹಿತಿ, ಪತ್ರಕರ್ತ, ಸಂಗೀತಗಾರ ಮತ್ತು ಬೇರೆಲ್ಲ ಕ್ಷೇತ್ರದ ಸಾಧಕರು ಎಷ್ಟೇ ಪ್ರತಿಭಾವಂತರಾಗಿದ್ದರೂ ದುರಹಂಕಾರ-ಸರ್ವಜ್ಞತೆ ಆವಾಹಿಸಿಕೊಂಡರೆ ದುರ್ಗತಿ ಎದುರಿಸಬೇಕಾಗುತ್ತದೆ. ಜನರ ವಿವೇಕವೇ ಅತ್ಯುತ್ತಮ ಚಲನಚಿತ್ರವನ್ನು ಗೆಲ್ಲಿಸುತ್ತದೆ. ರಾಜಕಾರಣಿಯ ನಾಯಕತ್ವವನ್ನು ನಿರ್ಧರಿಸುತ್ತದೆ. ಅರವಿಂದ ಕೇಜ್ರಿವಾಲ್ ಅವರ ಅವಸಾನದ ನಡಿಗೆ ಎಲ್ಲರಿಗೂ ಪಾಠವಾಗಬೇಕು. ಪರ್ಯಾಯ ರಾಜಕಾರಣದ ಹಾದಿಯಲ್ಲಿ ಸಾಗುವ ಎಲ್ಲರಿಗೂ ಅರವಿಂದ ಕೇಜ್ರಿವಾಲ್ ಏಳು ಬೀಳುಗಳು ಮರೆಯಲಾಗದ ರಾಜಕೀಯ ಪಾಠ. ತನ್ನ ತಪ್ಪಿನ ಅರಿವು ಅರವಿಂದ ಕೇಜ್ರಿವಾಲ್ ಮಾಡಿಕೊಂಡರೆ ಮುಂಬರುವ ದಿನಗಳಲ್ಲಿ ಅವರೂ ಭಿನ್ನ ಹಾದಿಯ ಪಯಣಿಗರಾಗಬಹುದು. ಅಣ್ಣಾ ಹಝಾರೆಯಂಥ ಹಿರಿಯರು ಅರವಿಂದ ಕೇಜ್ರಿವಾಲ್ ಅವರ ಸೋಲನ್ನು ಕಂಡು ಹೀಯಾಳಿಸುವ ಕೆಲಸ ಮಾಡಿಲ್ಲ. ಅರವಿಂದ ಕೇಜ್ರಿವಾಲ್ ಅವರಿಗೆ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಲು ಸಲಹೆ ನೀಡಿದ್ದಾರೆ. ಆಮ್ ಆದ್ಮಿ ಪಾರ್ಟಿಯೊಳಗಡೆ ಆಂತರಿಕ ಪ್ರಜಾಪ್ರಭುತ್ವ ಉಸಿರಾಡುವಂತಾಗಲು ಈ ಚುನಾವಣೆಯ ಸೋಲು ಕೈದೀವಿಗೆಯಾಗಲಿ. ದುರಹಂಕಾರ ಸಾರ್ವಜನಿಕ ಬದುಕಿನಲ್ಲಿ ಇರುವವರ ಪರಮ ಶತ್ರು ಎಂಬುದು ಎಲ್ಲರೂ ಮನಗಾಣಬೇಕು.