ಹೊಸ ಸರಕಾರ: ಬದಲಾಗದ ಭ್ರಷ್ಟ ವ್ಯವಸ್ಥೆ
ಎಲ್ಲರಿಗೂ ಆಯಕಟ್ಟಿನ ಜಾಗ ಬೇಕು. ಆಯಕಟ್ಟಿನ ಜಾಗ ಗಿಟ್ಟಿಸಿಕೊಳ್ಳಲು ಅಧಿಕಾರಿಗಳು ಮೊದಲು ದಲ್ಲಾಳಿಗಳ ಮೊರೆ ಹೋಗುತ್ತಾರೆ. ದಲ್ಲಾಳಿಗಳ ಹಂತದಲ್ಲಿ ಡೀಲ್ ಕುದುರದಿದ್ದರೆ ಜಾತಿ ನಾಯಕರ ಬಳಿ ದೂರು ಕೊಡುತ್ತಾರೆ. ಶಾಮನೂರು ಶಿವಶಂಕರಪ್ಪ ತರಹದ ಜಾತಿ ನಾಯಕರು ‘‘ಇಡೀ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ’’ ಎಂದು ಬೊಬ್ಬೆ ಹೊಡೆಯುತ್ತಾರೆ. ಶಾಮನೂರು ಮಾತ್ರವಲ್ಲ; ಬಹುತೇಕ ಎಲ್ಲಾ ಸಮುದಾಯಗಳ ನಾಯಕರು ಆಯಕಟ್ಟಿನ ಸ್ಥಳಾಕಾಂಕ್ಷಿ ಅಧಿಕಾರಿಗಳನ್ನು ಮಾತ್ರ ಬೆಂಬಲಿಸುತ್ತಾರೆ. ಯಾಕೆಂದರೆ ಆಯಕಟ್ಟಿನ ಹುದ್ದೆಯಿಂದ ಉತ್ಪನ್ನವಾಗುವ ಸಂಪತ್ತಿನಲ್ಲಿ ಜನನಾಯಕರೂ ಪಾಲುದಾರರಾಗಿರುತ್ತಾರೆ. ನಮ್ಮ ಜಾತಿಯ, ಧರ್ಮದ ಸಾಹಿತಿ- ಕಲಾವಿದರಿಗೆ ಅನ್ಯಾಯವಾಗಿದೆ ಎಂದು ಯಾವ ಸಮುದಾಯದ ಜನನಾಯಕನೂ ಧ್ವನಿ ಎತ್ತಿದ ನಿದರ್ಶನ ದೊರೆಯುವುದಿಲ್ಲ. ಅಲ್ಲಿ ಸಂಪತ್ತಿನ ಉತ್ಪನ್ನವಾಗುವುದಿಲ್ಲ. ಹಿಂದಿನ ಬಿಜೆಪಿ ಸರಕಾರದಲ್ಲಿ ‘ಬೆಂಗಳೂರು ಹಬ್ಬ’, ‘ಕಲ್ಯಾಣ ಕರ್ನಾಟಕ ಉತ್ಸವ’ಗಳಲ್ಲಿ ಅನನ್ಯ ಭಟ್ ಎಂಬ ಸಾಧಾರಣ ಗಾಯಕಿಗೆ ಪ್ರತೀ ಕಾರ್ಯಕ್ರಮಕ್ಕೆ ರೂ. ೯.೫ ಲಕ್ಷದಿಂದ ರೂ. ೧೨ ಲಕ್ಷದವರೆಗೆ ಸಂಭಾವನೆ ಪಾವತಿಸಲಾಗಿದೆ. ದಲಿತ-ಹಿಂದುಳಿದ ಸಮುದಾಯದ ಪ್ರತಿಭಾವಂತ ಗಾಯಕರಿಗೆ ಪ್ರತೀ ಕಾರ್ಯಕ್ರಮಕ್ಕೆ ಕೇವಲ ೧೫ ರಿಂದ ೨೦ ಸಾವಿರ ರೂ. ನೀಡಿದ್ದಾರೆ. ಇದು ತಾರತಮ್ಯ, ಅನ್ಯಾಯ ಎಂದು ಯಾರಿಗೂ ಅನಿಸಲೇ ಇಲ್ಲ. ಶಾಮನೂರರಿಗೆ ಸಂಬಂಧವೇ ಇಲ್ಲ.
ಭ್ರಷ್ಟಾಚಾರದ ಮೂಲ ಇರುವುದೇ ಆಯಕಟ್ಟಿನ ಹುದ್ದೆಯಲ್ಲಿ. ಹಿಂದಿನ ಬಿಜೆಪಿ ಸರಕಾರದಲ್ಲೂ ಆಯಕಟ್ಟಿನ ಹುದ್ದೆಗಳಿದ್ದವು. ಕೋಟಿ ಕೋಟಿ ಹಣ ಕೊಟ್ಟು ಆ ಆಯಕಟ್ಟಿನ ಹುದ್ದೆಗಳನ್ನು ಖರೀದಿಸುತ್ತಿದ್ದರು. ಅದರ ಪರಿಣಾಮವಾಗಿಯೇ ಎಲ್ಲೆಡೆ ಭ್ರಷ್ಟಾಚಾರ ತಾಂಡವಾಡುತ್ತಿತ್ತು. ೪೦ ಪರ್ಸಂಟೇಜ್ ಲಂಚದ ಆರೋಪಗಳು ಕೇಳಿ ಬಂದವು. ಪೇಸಿಎಂ ಅಭಿಯಾನ ಜೋರಾಯಿತು. ಭ್ರಷ್ಟಾಚಾರದಿಂದ ತತ್ತರಿಸಿ ಹೋಗಿದ್ದ ಜನಸಾಮಾನ್ಯರು ಬೊಮ್ಮಾಯಿ ಸರಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಮಾಡಿದ ಭ್ರಷ್ಟಾಚಾರದ ಆರೋಪಗಳನ್ನು ಬಲವಾಗಿ ನಂಬಿದರು. ಹಾಗೆ ನಂಬಿದ್ದರಿಂದಲೇ ಆಕ್ರೋಶಭರಿತರಾದ ಮತದಾರರು ಭ್ರಷ್ಟ ಬಿಜೆಪಿ ಸರಕಾರವನ್ನು ಕಿತ್ತೆಸೆದರು. ಬಿಜೆಪಿ ಸರಕಾರದಲ್ಲಿ ಅತಿಯಾಗಿ ಸುದ್ದಿ ಮಾಡಿದ ಭ್ರಷ್ಟಾಚಾರದ ಪ್ರಕರಣಗಳೆಂದರೆ; ವಿವಿ ಕುಲಪತಿ-ಕುಲ ಸಚಿವರ ನೇಮಕ, ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕ, ಪಿಎಸ್ಸೈ ನೇಮಕ, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ನಡೆಯುವ ನೇಮಕಾತಿಗಳು. ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ನಡೆಸಲಾಗುತ್ತಿತ್ತು. ಪ್ರಶ್ನೆ ಪತ್ರಿಕೆಗಳನ್ನು ಮೊದಲೇ ಲೀಕ್ ಮಾಡುವುದು. ಇಲ್ಲ ಅಂದರೆ; ಒಎಂಆರ್ ಸೀಟುಗಳಲ್ಲಿ ಗೋಲ್‌ಮಾಲ್ ಮಾಡುವ ಮೂಲಕ ಹಣ ಕೊಟ್ಟವರಿಗೆ ನೌಕರಿ ಕೊಡಲಾಗುತ್ತಿತ್ತು. ಭ್ರಷ್ಟಾಚಾರದ ಎಲ್ಲಾ ವಿವರಗಳು ಸುದ್ದಿಯಾದವು. ಪರೀಕ್ಷಾ ಪ್ರಾಧಿಕಾರ ಭ್ರಷ್ಟಾಚಾರದ ಕೂಪ ಎಂಬುದು ಜನತೆಗೆ ಗೊತ್ತಾಯಿತು. ಒಎಂಆರ್ ಸೀಟು ಸೇಫ್ ಅಲ್ಲ ಎನ್ನುವುದು ಪಿಎಸೈ ಹಗರಣದಲ್ಲಿ ಖಾತ್ರಿಯಾಯಿತು.
ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿಲ್ಲ ಎಂಬುದು ಗೊತ್ತಾದ ಮೇಲೂ ಯಾವ ನೇಮಕಾತಿ ಪ್ರಾಧಿಕಾರವನ್ನೂ ಈ ಹೊಸ ಸರಕಾರ ರದ್ದುಪಡಿಸಿಲ್ಲ. ಬಹುದೊಡ್ಡ ಸುದ್ದಿಯಾದ ಪಿಎಸ್ಸೈ ನೇಮಕಾತಿ ಹಗರಣದ ಫೈಂಡಿಂಗ್ಸ್ ಹೊರಬರಲಿಲ್ಲ. ನೇಮಕಾತಿ ವಿಧಾನದಲ್ಲಿ ಭ್ರಷ್ಟಾಚಾರ ನಡೆಸಲು ಅವಕಾಶ ಇದ್ದಿದ್ದರಿಂದ ಬಿಜೆಪಿ ಸರಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯಿತು. ಶಿಕ್ಷಣ ಇಲಾಖೆ, ಗೃಹ ಇಲಾಖೆ ಸೇರಿದಂತೆ ಭ್ರಷ್ಟಾಚಾರದ ಪ್ರಕರಣಗಳು ಬೆಳಕಿಗೆ ಬಂದ ಕಡೆ ಪಾರದರ್ಶಕ ವ್ಯವಸ್ಥೆ ರೂಪಿಸಬೇಕಿತ್ತು. ಮೊತ್ತ ಮೊದಲಿಗೆ ಸುದ್ದಿ ಮಾಡಿದ ಭ್ರಷ್ಟಾಚಾರದ ಪ್ರಕರಣಗಳ ಸಮರ್ಪಕ ತನಿಖೆ ನಡೆದು ಸತ್ಯ ಹೊರ ಬರಬೇಕು.ಅಕ್ರಮದ ಸ್ವರೂಪ ಬಯಲಾದರೆ ಅಕ್ರಮವನ್ನು ತಡೆಯುವ ಮಾರ್ಗೋಪಾಯಗಳನ್ನು ಕೊಂಡುಕೊಳ್ಳಬಹುದು. ಸರಕಾರ ಅಸ್ತಿತ್ವಕ್ಕೆ ಬಂದು ನಾಲ್ಕು ತಿಂಗಳು ಕಳೆದರೂ ಯಾವ ಭ್ರಷ್ಟಾಚಾರ ಪ್ರಕರಣಗಳ ತನಿಖೆಯೂ ಪೂರ್ಣಗೊಂಡಿಲ್ಲ. ಕುಲಪತಿ ನೇಮಕದ ವಿಷಯವನ್ನೇ ತೆಗೆದುಕೊಳ್ಳಿ, ಬಿಜೆಪಿ ಸರಕಾರ ಅನುಸರಿಸಿದ ವಿಧಾನವನ್ನೇ ಈಗಲೂ ಅನುಸರಿಸಲಾಗುತ್ತಿದೆ. ಕುಲಪತಿ ಹುದ್ದೆಗೆ ನೂರಾರು ಅರ್ಜಿಗಳು ಬರುತ್ತವೆ. ಅವುಗಳಲ್ಲಿ ಮೂವರನ್ನು ಶೋಧನಾ ಸಮಿತಿ ಆಯ್ಕೆ ಮಾಡುತ್ತದೆ. ಯಾವ ಮಾನದಂಡಗಳನ್ನು ಅನುಸರಿಸಿ ಮೂವರ ಹೆಸರುಗಳನ್ನು ಅಂತಿಮಗೊಳಿಸುತ್ತಾರೆ ಎಂಬುದರಲ್ಲಿ ಸ್ಪಷ್ಟತೆ ಇಲ್ಲ. ಶೋಧನಾ ಸಮಿತಿಯ ಅಧ್ಯಕ್ಷ ಸರಕಾರದಿಂದ ನೇಮಕಗೊಂಡಿರುತ್ತಾರೆ. ರಾಜ್ಯಪಾಲರ ಪ್ರತಿನಿಧಿ, ಯುಜಿಸಿ ಪ್ರತಿನಿಧಿ, ಸಿಂಡಿಕೇಟ್ ಪ್ರತಿನಿಧಿ ಸದಸ್ಯರಿರುತ್ತಾರೆ. ಸರಕಾರ ಅನಧಿಕೃತವಾಗಿ ಸೂಚಿಸಿದ್ದ ವ್ಯಕ್ತಿಯ ಹೆಸರುಗಳನ್ನು ಶೋಧನಾ ಸಮಿತಿಯ ಅಧ್ಯಕ್ಷ ಪರಿಗಣಿಸುತ್ತಾರೆ. ಹಣಕೊಟ್ಟವರ ಇಬ್ಬರ ಹೆಸರುಗಳು ಸೇರಿಕೊಳ್ಳುತ್ತವೆ. ಮೆರಿಟ್ ಆಧರಿಸಿದ ಆಯ್ಕೆಗೆ ನಿರ್ದಿಷ್ಟ ಮಾನದಂಡಗಳೇ ಇಲ್ಲ. ಹೆಚ್ಚು ಹಣ ಕೊಟ್ಟವ ಕುಲಪತಿಯಾಗುತ್ತಾನೆ. ಬಿಜೆಪಿ ಸರಕಾರದಲ್ಲೂ ಅದೇ ಆಗುತ್ತಿತ್ತು.
ಇನ್ನು ಆಡಳಿತ ಕುಲಸಚಿವ, ಮೌಲ್ಯಮಾಪನ ಕುಲಸಚಿವರ ನೇಮಕಾತಿಯೂ ಬಿಜೆಪಿ ಸರಕಾರ ಮಾಡಿದಂತೆಯೇ ಮಾಡುತ್ತಿದ್ದಾರೆ. ಹೆಚ್ಚು ಹಣ ಕೊಟ್ಟವರಿಗೆ ಹುದ್ದೆ ಎಂಬ ನಿಯಮವನ್ನು ಈ ಸರಕಾರವೂ ಪಾಲಿಸುತ್ತಿದೆ. ಕನಿಷ್ಠ ಪಕ್ಷ ಜಾತಿವಾರು, ಪ್ರಾದೇಶಿಕವಾರು ಹಾಗೂ ಮಹಿಳಾವಾರು ಪ್ರಾತಿನಿಧ್ಯಕ್ಕೆ ಅವಕಾಶ ಕಲ್ಪಿಸಬೇಕಿತ್ತು. ಬಿಜೆಪಿ ಸರಕಾರದಲ್ಲಿ ಕುಲಪತಿ, ಕುಲಸಚಿವರ ನೇಮಕಾತಿಯಲ್ಲಿ ಸಂಘ ಪರಿವಾರದ ಸೇವೆಯನ್ನು ಮೊದಲ ಆದ್ಯತೆಯಾಗಿ ಪರಿಗಣಿಸಲಾಗುತ್ತಿತ್ತು. ಸಂಘದೊಂದಿಗೆ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸಿದವರಿಗೆ ಕುಲಪತಿ-ಕುಲಸಚಿವ ಹುದ್ದೆಗಳನ್ನು ಉಚಿತವಾಗಿಯೂ, ಸಂಘ ಪರಿವಾರದೊಂದಿಗೆ ಸದಭಿಪ್ರಾಯ ಇಟ್ಟುಕೊಂಡ ಪ್ರಾಧ್ಯಾಪಕರಿಗೆ ತುಸು ಡಿಸ್ಕೌಂಟ್ ನೀಡಿ ಹಣ ಪಡೆದು ನೀಡುತ್ತಿದ್ದರು. ಅಪರೂಪಕ್ಕೆ ಒಂದೆರಡು ಹುದ್ದೆಗಳನ್ನು ಸಂಪೂರ್ಣ ಪೇಮೆಂಟ್ ಮೂಲಕ ಭರ್ತಿ ಮಾಡುತ್ತಿದ್ದರು. ಈ ಸರಕಾರ ಬಂದ ಮೇಲೆ ಕುಲಪತಿ ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ಆದರೆ ಕುಲಸಚಿವ ಹುದ್ದೆಗಳಿಗೆ ಸೈದ್ಧಾಂತಿಕ ಮಾನದಂಡಗಳನ್ನೇನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ‘ಪೇಮೆಂಟ್’ ಮಾನದಂಡ ಅನುಸರಿಸಲಾಗುತ್ತಿದೆ. ಬಿಜೆಪಿ ಸರಕಾರ ಅನುಸರಿಸುತ್ತಿದ್ದ ‘ಲಂಚದ ಹಣಕ್ಕೆ ರಶೀದಿ ಇಲ್ಲ’ ಎಂಬ ನಿಯಮವನ್ನೇ ಪಾಲಿಸುತ್ತಿದ್ದಾರೆ. ಹಾಗಾಗಿ ಭ್ರಷ್ಟಾಚಾರದ ಆರೋಪ ಕೇಳಿ ಬಂದರೂ ರಶೀದಿ ಇಲ್ಲದೆ ಇರುವುದರಿಂದ ಪ್ರಕರಣಗಳು ಠುಸ್ ಆಗುತ್ತಿವೆ.
ಕೇಂದ್ರ ಲೋಕ ಸೇವಾ ಆಯೋಗ ಅಸ್ತಿತ್ವಕ್ಕೆ ಬಂದಿದ್ದು ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದ್ದಾಗ. ಅತ್ಯಂತ ಪಾದದರ್ಶಕವಾದ ನೇಮಕಾತಿ ನಿಯಮಗಳನ್ನು ರೂಪಿಸಿದ್ದೂ ಕಾಂಗ್ರೆಸ್ ಸರಕಾರವೇ. ಲ್ಯಾಟರಲ್ ಎಂಟ್ರಿ ಎಂಬ ಹೊಸ ಪರಿಕಲ್ಪನೆ ತಂದು ಕೇಂದ್ರ ಲೋಕಸೇವಾ ಆಯೋಗದ ನೇಮಕಾತಿಯಲ್ಲಿ ಮೂಗು ತೂರಿಸಲು ಯತ್ನಿಸಿದ ಮೋದಿ ಸರಕಾರ ಆ ಪ್ರಯತ್ನ ಮುಂದುವರಿಸಲಿಲ್ಲ. ಒಂದೇ ಒಂದು ಪೈಸೆ ಲಂಚಕ್ಕೆ ಅವಕಾಶ ಇಲ್ಲದಂತೆ ನೇಮಕಾತಿ ನಡೆಸುವ ಯುಪಿಎಸ್‌ಸಿ ನಡೆಯನ್ನು ಕರ್ನಾಟಕ ಸರಕಾರ ಏಕೆ ಅನುಸರಿಸಬಾರದು? ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷದ ಪ್ರಧಾನ ಮಂತ್ರಿಗಳು ಕೇಂದ್ರ ಲೋಕಸೇವಾ ಆಯೋಗದಲ್ಲಿ ಲಂಚಕ್ಕೆ ಅವಕಾಶವಿಲ್ಲದ ಒಂದು ವ್ಯವಸ್ಥೆ ನಿರ್ಮಿಸಿದ್ದಾರೆ. ಅಂತಹ ವ್ಯವಸ್ಥೆಯನ್ನು ಕರ್ನಾಟಕದ ಲೋಕಸೇವಾ ಆಯೋಗದಲ್ಲಿ ಯಾಕೆ ಅನುಷ್ಠಾನಗೊಳಿಸುತ್ತಿಲ್ಲ? ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಈ ಮೊದಲು ಕರ್ನಾಟಕ ಲೋಕಸೇವಾ ಆಯೋಗವೇ ಮಾಡುತ್ತಿತ್ತು. ಕರ್ನಾಟಕ ಲೋಕಸೇವಾ ಆಯೋಗದಲ್ಲಿ ಭ್ರಷ್ಟಾಚಾರ ಇದೆ. ಕಾಲೇಜು ಶಿಕ್ಷಕರ ನೇಮಕಾತಿಯಲ್ಲಿ ಪಾದದರ್ಶಕತೆ ತರಬೇಕೆಂಬ ಘನ ಉದ್ದೇಶದಿಂದ ಹುದ್ದೆ ಭರ್ತಿ ಮಾಡುವ ಹೊಣೆಗಾರಿಕೆಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿಕೊಡಲಾಯಿತು. ಹಾಗೆ ನೋಡಿದರೆ; ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಷ್ಟೊತ್ತಿಗೆ ಮೆಡಿಕಲ್, ಇಂಜಿನಿಯರಿಂಗ್ ಸೀಟು ಹಂಚಿಕೆಯಲ್ಲಿ ಸಾಕಷ್ಟು ಹೆಸರು ಕೆಡಿಸಿಕೊಂಡಿತ್ತು. ಸೀಟ್ ಬ್ಲಾಕ್‌ಮಾಡಿ ಮೆರಿಟ್ ವಿದ್ಯಾರ್ಥಿಗಳನ್ನು ವಂಚಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿದ್ದವು.
ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಜವಾಬ್ದಾರಿ ಹೊತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಹುಆಯ್ಕೆ ಪ್ರಶ್ನೆ ಪತ್ರಿಕೆ (ಎಂಸಿಕ್ಯು)ಮತ್ತು ಒಎಂಆರ್ ಸೀಟು ತಂತ್ರಜ್ಞಾನವನ್ನು ಪರಿಚಯಿಸುವ ಮೂಲಕ ಪಾರದರ್ಶಕ ನೇಮಕಾತಿಯ ಭರವಸೆ ನೀಡಿತ್ತು. ಬಿಜೆಪಿ ಸರಕಾರದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿಜಬಣ್ಣ ಬಯಲಾಗಿದೆ. ಬಹು ಆಯ್ಕೆ ಪ್ರಶ್ನೆ ಪತ್ರಿಕೆಯನ್ನು ಮೊದಲು ಲೀಕ್ ಮಾಡುವುದು, ಒಎಂಆರ್ ಸೀಟನ್ನೇ ತಿದ್ದುವ ಮೂಲಕ ಅಕ್ರಮ ನಡೆಸಿ ಒಂದು ಹುದ್ದೆಗೆ ರೂ. ೪೦ರಿಂದ ೫೦ಲಕ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ಪ್ರಚಾರಕ್ಕೆ ಬಂತು. ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಬಲವಾಗಿ ಬೇರೂರಿದ ಮೇಲೆ ತನಿಖೆ ನಡೆಸಿ ಸತ್ಯ ಹೊರತೆಗೆಯಬೇಕು. ನೇಮಕಾತಿ ವಿಧಾನಗಳನ್ನೇ ಬದಲಿಸುವ ಮೂಲಕ ಪಾರದರ್ಶಕತೆ ತರಬೇಕು. ಪದವಿ ಕಾಲೇಜುಗಳು ಸಹಾಯಕ ಪ್ರಾಧ್ಯಾಪಕರ ನೇಮಕಾತಿಯನ್ನು ಕರ್ನಾಟಕ ಲೋಕಸೇವಾ ಆಯೋಗ ನಡೆಸುವಾಗ ಒಂದು ಐದರ ಅನುಪಾತದಲ್ಲಿ ಅತ್ಯಂತ ಕಡಿಮೆ ಲಂಚ ಪಡೆದು ನೌಕರಿ ನೀಡುತ್ತಿದ್ದರು. ಐದು ಜನ ಪ್ರತಿಭಾವಂತರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತಿತ್ತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ನೇಮಕಾತಿ ಮೇಲ್ನೋಟಕ್ಕೆ ಪಾರದರ್ಶಕ ವ್ಯವಸ್ಥೆ ಎಂಬ ಭ್ರಮೆ ಸೃಷ್ಟಿಸುತ್ತದೆ. ಆದರೆ ಬಹುಆಯ್ಕೆ ಪ್ರಶ್ನೆಪತ್ರಿಕೆ ಮೊದಲೇ ಪಡೆದವನು, ಒಎಂಆರ್ ಸೀಟನ್ನು ಕೈಚಳಕದ ಮೂಲಕ ವಶಪಡಿಸಿಕೊಂಡವನು ಸ್ನಾತಕೋತ್ತರ ಪದವಿಯಲ್ಲಿ ಕಡಿಮೆ ಅಂಕ ಪಡೆದರೂ ಆಯ್ಕೆಯಾಗುವ ಸಾಧ್ಯತೆ ಇರುತ್ತದೆ. ಇಲ್ಲಿ ಹೆಚ್ಚು ಜನರ ನಡುವೆ ಸ್ಪರ್ಧೆ ಇರುವುದರಿಂದ ಹಣದ ಬೇಡಿಕೆ ಜಾಸ್ತಿ ಇರುತ್ತದೆ.
ವಾಸ್ತವದಲ್ಲಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿದ್ದೇ ತಪ್ಪು. ಹಣ ಮಾಡುವ ಉದ್ದೇಶದಿಂದ ಪರೀಕ್ಷಾ ಪ್ರಾಧಿಕಾರ, ಬಹುಆಯ್ಕೆ ಪ್ರಶ್ನೆ, ಒಎಂಆರ್ ಸೀಟು-ಎಂಬ ಕಷ್ಟಕರ ವ್ಯವಸ್ಥೆ ಸೃಷ್ಟಿಸಲಾಯಿತು. ೧೯೯೨ಕ್ಕೂ ಮುಂಚೆ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿಯನ್ನು ಜಿಲ್ಲಾ ನೇಮಕಾತಿ ಸಮಿತಿಯಿಂದ ನಡೆಸಲಾಗುತ್ತಿತ್ತು. ಜಿಲ್ಲಾ ನೇಮಕಾತಿ ಸಮಿತಿಯಲ್ಲಿ ಸದಸ್ಯರಿರುತ್ತಿದ್ದರು. ಆ ಸದಸ್ಯರಿಗೆ ಹಣ ನೀಡಿದರೆ ಮಾತ್ರ ಶಾಲಾ ಶಿಕ್ಷಕ ಹುದ್ದೆ ದೊರೆಯುತ್ತಿತ್ತು. ಹಣವಿಲ್ಲದವರು ಪ್ರಭಾವ ಬಳಸಿ ನೌಕರಿ ಪಡೆಯುತ್ತಿದ್ದರು. ಒಟ್ಟಾರೆ ಪ್ರತಿಭಾ ನ್ಯಾಯ ದೊರೆಯುತ್ತಿರಲಿಲ್ಲ. ಆಗ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರು ಶಾಲಾ ಶಿಕ್ಷಕರ ನೇಮಕಾತಿ ಸಮಿತಿಗಳನ್ನು ರದ್ದುಪಡಿಸಿದರು. ಮಾತ್ರವಲ್ಲ; ನೇಮಕಾತಿ ನಿಯಮಗಳನ್ನು ಪಾರದರ್ಶಕಗೊಳಿಸಿದರು. ಟೈಪ್‌ರೈಟರ್ ಮೆಷಿನ್ ಬದಲಿಗೆ ಕಂಪ್ಯೂಟರ್‌ಗಳು ಬಂದಿದ್ದವು. ಹೊಸ ತಂತ್ರಜ್ಞಾನವನ್ನು ಬಳಸಿಕೊಂಡು ಲಂಚಕ್ಕೆ ಅವಕಾಶವಿಲ್ಲದಂತೆ ಸರಕಾರಿ ಶಾಲಾ ಶಿಕ್ಷಕರ ನೇಮಕಾತಿ ಮಾಡಿದರು. ಅವರು ಅನುಸರಿಸಿದ ನಿಯಮವಿಷ್ಟೇ; ಎಸೆಸೆಲ್ಸಿ, ಟಿಸಿಎಚ್ ಅಥವಾ ಎಸೆಸೆಲ್ಸಿ-ಪಿಯುಸಿ+ಇಂಟರ್ನ್‌ಶಿಪ್ ಅಂಕಗಳ ಸರಾಸರಿ ತೆಗೆದು ಮೀಸಲಾತಿ ಅನುಪಾತಕ್ಕೆ ತಕ್ಕಂತೆ ಮೆರಿಟ್ ಪಟ್ಟಿ ಸಿದ್ಧಪಡಿಸಿದರು. ಆಕ್ಷೇಪಣೆಗಳನ್ನು ಸ್ವೀಕರಿಸಿ ಅಂತಿಮ ಪಟ್ಟಿ ತಯಾರು ಮಾಡಿ ನೇಮಕಾತಿ ಆದೇಶಗಳನ್ನು ಮನೆಗೆ ಕಳುಹಿಸಿ ಕೊಡುತ್ತಿದ್ದರು. ಸ್ಥಳ ನಿಯೋಜನೆ ಕೂಡಾ ಕೌನ್ಸಿಲಿಂಗ್ ಮೂಲಕ ಮಾಡಿ ಲಂಚ ಪದಬಳಕೆಗೂ ಅವಕಾಶ ಕಲ್ಪಿಸಲಿಲ್ಲ. ನಂತರ ಬಂದ ಪ್ರಾಥಮಿಕ-ಪ್ರೌಢ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡರು ಸಣ್ಣ ಪುಟ್ಟ ಲೋಪಗಳನ್ನು ಸರಿಪಡಿಸಿ ಶಿಕ್ಷಕರ ನೇಮಕಾತಿ ನಡೆಸಿ ಬಂಗಾರಪ್ಪನವರು ಹಾಕಿದ ಸತ್ಸಂಪ್ರದಾಯ ಮುಂದುವರಿಸಿದರು. ಆಗ ಲಕ್ಷಾಂತರ ಶಿಕ್ಷಕರು ಲಂಚವಿಲ್ಲದೆ ನೌಕರಿ ಪಡೆದರು. ಎಸ್. ಬಂಗಾರಪ್ಪನವರು ಮತ್ತು ಎಚ್. ಜಿ. ಗೋವಿಂದೇಗೌಡರನ್ನು ಆ ಶಿಕ್ಷಕರು ದೇವರಂತೆ ಆರಾಧಿಸುತ್ತಿದ್ದರು. ಯಾರೂ ಊಹಿಸಿಕೊಳ್ಳದ ಕಾಲದಲ್ಲಿ ಬಂಗಾರಪ್ಪನವರು ಲಂಚರಹಿತ ನೇಮಕಾತಿಗಳನ್ನು ಮಾಡಿ ಇತಿಹಾಸ ಸೃಷ್ಟಿಸಿದರು.
ಒಬ್ಬ ಅಭ್ಯರ್ಥಿ ಪದವಿ ಕಾಲೇಜು ಅಥವಾ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಪಡೆಯಲು ಹಲವು ಪ್ರವೇಶ ಪರೀಕ್ಷೆ ಬರೆದು ಯಶಸ್ಸು ಪಡೆದು ಬಂದಿರುತ್ತಾನೆ/ಳೆ. ಎಸೆಸೆಲ್ಸಿ ಮುಗಿದ ಮೇಲೆ ಪಿಯುಸಿ ಸೇರಲು ಪ್ರವೇಶ ಪರೀಕ್ಷೆ ನಡೆಸುತ್ತಾರೆ. ಪಿಯುಸಿ ಮುಗಿದು ಡಿಗ್ರಿ ಸೇರಲು ಪ್ರವೇಶ ಪರೀಕ್ಷೆ ಎದುರಿಸಲೇಬೇಕು. ಮೆಡಿಕಲ್, ಇಂಜಿನಿಯರಿಂಗ್ ಸೇರಲು ಸಿಇಟಿ, ನೀಟ್ ಪರೀಕ್ಷೆ ಪಾಸಾಗಿ ಮೆರಿಟ್‌ನಲ್ಲಿ ಬರಬೇಕು. ಪದವಿಯಿಂದ ಸ್ನಾತಕೋತ್ತರ ಪದವಿ ಸೇರಲು ಪ್ರವೇಶ ಪರೀಕ್ಷೆ ಬರೆಯಬೇಕು. ಮಾತ್ರವಲ್ಲ ಹೆಚ್ಚು ಅಂಕ ಗಳಿಸಬೇಕು. ಸ್ನಾತಕೋತ್ತರ ಪದವಿ ಮುಗಿದ ಮೇಲೆ ಪಿಎಚ್.ಡಿ. ಸೀಟು ಪಡೆದುಕೊಳ್ಳಲು ಮತ್ತೆ ಪ್ರವೇಶ ಪರೀಕ್ಷೆ ಎದುರಿಸಬೇಕು. ಆ ಪ್ರವೇಶ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಪಿಎಚ್.ಡಿ. ಸೀಟು ಸಿಗುತ್ತದೆ. ಮೂರರಿಂದ ನಾಲ್ಕು ವರ್ಷ ಪಿಎಚ್.ಡಿ. ಅಧ್ಯಯನ ಕೈಗೊಳ್ಳಬೇಕು ಅಥವಾ ಕೆ-ಸೆಟ್, ನೆಟ್ ಪರೀಕ್ಷೆಗಳಲ್ಲಿ ಅರ್ಹತೆ ಗಳಿಸಬೇಕು. ಇಷ್ಟೆಲ್ಲ ಪರೀಕ್ಷೆಗಳಲ್ಲಿ ಗೆದ್ದು ಬಂದ ಅಭ್ಯರ್ಥಿ ನೌಕರಿ ಪಡೆಯಲು ಮತ್ತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಪರೀಕ್ಷೆ ಎದುರಿಸಬೇಕೇ? ಸಾಮಾನ್ಯ ಜ್ಞಾನ ಇರುವ ಯಾರೂ ಈ ಲಂಚ ವ್ಯವಸ್ಥೆ ಒಪ್ಪುವುದಿಲ್ಲ. ಡಿಗ್ರಿ ಮತ್ತು ಸ್ನಾತಕೋತ್ತರದ ಅಂಕಗಳ ಸರಾಸರಿ ತೆಗೆದು ಮೀಸಲಾತಿ ನಿಯಮಾನುಸಾರ ಮೆರಿಟ್ ಪಟ್ಟಿ ಸಿದ್ಧಪಡಿಸಿದರೆ ಅದೇ ಅಂತಿಮ ಪಟ್ಟಿಯಾಗಬೇಕು. ಅದು ನಿಜವಾದ ಪಾರದರ್ಶಕತೆ.
ಈ ಸರಕಾರದ ಭಾಗವಾಗಿರುವವರಿಗೆ ಬಿಜೆಪಿಗಿಂತಲೂ ಭಿನ್ನ ಸರಕಾರ ನೀಡುವ ನೈಜ ಕಾಳಜಿ ಇದ್ದಿದ್ದರೆ ಇಷ್ಟು ಹೊತ್ತಿಗೆ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಿ ಪಾರದರ್ಶಕ ವ್ಯವಸ್ಥೆಯನ್ನು ತರಲು ಪ್ರಯತ್ನ ಮಾಡುತ್ತಿದ್ದರು. ತಂತ್ರಜ್ಞಾನದ ಕಾಲದಲ್ಲೂ ಭ್ರಷ್ಟ ವ್ಯವಸ್ಥೆ ಬದಲಾಗದಿದ್ದರೆ ನಮ್ಮನ್ನು ಆಳುವವರಿಗೆ ಲಂಚ ರಹಿತ ವ್ಯವಸ್ಥೆ ಬೇಕಾಗಿಲ್ಲವೆಂದೇ ಅರ್ಥ.