ಸಮಯ ಸಾಧಕ ಶೆಟ್ಟರ್
ಪ್ರತಿಯೊಬ್ಬ ನಾಗರಿಕನಿಗೂ ಭಾರತದ ಸಂವಿಧಾನ ತನ್ನ ಇಚ್ಛೆಯ ರಾಜಕೀಯ ಪಕ್ಷ, ಧರ್ಮ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿದೆ. ಆದರೆ ಭಾರತೀಯ ಪರಂಪರೆಯಲ್ಲಿ ನೈತಿಕತೆ ಮತ್ತು ಆತ್ಮಸಾಕ್ಷಿ ಪದಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗಿದೆ. ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು, ಈಗ ಕಾಂಗ್ರೆಸ್ ಬಿಟ್ಟು ಮತ್ತೆ ಬಿಜೆಪಿ ಸೇರಿದ್ದು ‘ಸಂವಿಧಾನ ಬಾಹಿರ’ವೇನಲ್ಲ. ಆದರೆ ನೈತಿಕವಾಗಿ ಸರಿಯೇ ಎಂದು ಜಗದೀಶ್ ಶೆಟ್ಟರ್ ತಮ್ಮ ಆತ್ಮ ಸಾಕ್ಷಿಗೆ ಕೇಳಿಕೊಂಡರೆ ಅದು ಸಮರ್ಪಕವಾದ ಉತ್ತರ ನೀಡುತ್ತದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರುವಾಗ ಅವರಿಗೆ ಮೂಲ ಪಕ್ಷದ ಅಥವಾ ಸಂಘ ಪರಿವಾರದ ಡಿಎನ್‌ಎ ನೆನಪಾಗಲಿಲ್ಲ. ಹಾಗೆ ನೋಡಿದರೆ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಜಗದೀಶ್ ಶೆಟ್ಟರ್ ಒಬ್ಬರನ್ನೇ ಗುರಿ ಮಾಡಿ ಟಿಕೆಟ್ ನಿರಾಕರಿಸಿರಲಿಲ್ಲ. ಸಂಘ ಪರಿವಾರ ಮೂಲದ ಮಾಜಿ ಮಂತ್ರಿ ಎ. ರಾಮದಾಸ್ ಅವರಿಗೂ ಟಿಕೆಟ್ ನೀಡಿರಲಿಲ್ಲ. ನೆಹರೂ ಓಲೆಕಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಅರವಿಂದ ಲಿಂಬಾವಳಿ, ಎಸ್.ಐ. ಚಿಕ್ಕನಗೌಡ ಸೇರಿದಂತೆ ಹಲವರಿಗೆ ಟಿಕೆಟ್ ನಿರಾಕರಿಸಲಾಗಿತ್ತು.
ಜಗದೀಶ್ ಶೆಟ್ಟರ್ ಅವರಿಗೆ ಡಿಎನ್‌ಎ ಪ್ರಜ್ಞೆ ಗಾಢವಾಗಿದ್ದರೆ ಅಪ್ಪ-ಅಂಕಲ್ ಅವರ ಸೈದ್ಧಾಂತಿಕ ಲಕ್ಷ್ಮಣ ರೇಖೆ ದಾಟಿ ಕಾಂಗ್ರೆಸ್ ಸೇರುವ ದುಸ್ಸಾಹಸವನ್ನೇ ಮಾಡುತ್ತಿರಲಿಲ್ಲ. ಶೆಟ್ಟರ್ ಅವರ ಕುಟುಂಬ ಸಂಘ ಪರಿವಾರದ ತತ್ವಾದರ್ಶಗಳನ್ನೇ ಉಸಿರಾಡಿದವರು. ಲಿಂಗಾಯತ ಸಮುದಾಯದಲ್ಲಿ ಜನ್ಮ ತಾಳಿದರೂ ಅವರಿಗೆ ಬಸವಣ್ಣ ಯಾವತ್ತೂ ಆದರ್ಶವಾಗಿರಲಿಲ್ಲ. ಬಸವಣ್ಣನವರನ್ನು ವೋಟ್ ಬ್ಯಾಂಕ್ ರಾಜಕಾರಣದಲ್ಲಿ ಎಟಿಎಂ ಕಾರ್ಡ್ ಆಗಿ ಬಳಸಿಕೊಂಡಿದ್ದಾರೆ ಹೊರತು ಬಸವಾದಿ ಶರಣರ ವಚನಗಳನ್ನು ಓದುವ ಮತ್ತು ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಅಥವಾ ಮಂತ್ರಿಯಾಗಿದ್ದಾಗ ಬಸವಣ್ಣನವರನ್ನು ಗೌರವಿಸುವ ಯಾವ ಘನಕಾರ್ಯವನ್ನೂ ಮಾಡಿದ ನಿದರ್ಶನ ದೊರೆಯುವುದಿಲ್ಲ. ಭಾರತೀಯ ಜನಸಂಘದ ಡಿಎನ್‌ಎ ಹೊಂದಿದವರು ಬಸವಾದಿ ಶರಣರ ತತ್ವಾದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಾಧ್ಯವೇ? ಜಗದೀಶ್ ಶೆಟ್ಟರ್ ಅವರ ಅಂಕಲ್ ಸದಾಶಿವ ಶೆಟ್ಟರ್ ಭಾರತೀಯ ಜನಸಂಘದ ಸಮರ್ಥಕರು. 1967ರ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಗೆ ಭಾರತೀಯ ಜನಸಂಘದ ನಾಲ್ಕು ಜನ ಪ್ರವೇಶ ಪಡೆದಿದ್ದರು; ಅವರಲ್ಲಿ ಸದಾಶಿವ ಶೆಟ್ಟರ್ ಒಬ್ಬರು. ಸದಾಶಿವ ಶೆಟ್ಟರ್ ಹುಬ್ಬಳ್ಳಿ ನಗರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನಸಂಘದ ಟಿಕೆಟ್ ಮೇಲೆ ಶಾಸನಸಭೆಗೆ ಆಯ್ಕೆಯಾಗಿದ್ದರು. ಆ ಚುನಾವಣೆಯಲ್ಲಿ ಸದಾಶಿವ ಶೆಟ್ಟರ್ ಭಾರತೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಚ್.ಎಂ. ಮೀರಾ ಸಾಹೇಬ್ ಅವರನ್ನು ಸೋಲಿಸಿದ್ದರು.
ಜಗದೀಶ್ ಶೆಟ್ಟರ್ ಅವರ ಅಂಕಲ್ ಸದಾಶಿವ ಶೆಟ್ಟರ್‌ಮಾತ್ರವಲ್ಲ; ಜಗದೀಶ್ ಶೆಟ್ಟರ್ ತಂದೆ ಶಿವಪ್ಪ ಶೆಟ್ಟರ್ ಕೂಡ ಭಾರತೀಯ ಜನಸಂಘದ ಸಕ್ರಿಯ ಸದಸ್ಯರಾಗಿದ್ದರು. ಭಾರತೀಯ ಜನಸಂಘ ಆರೆಸ್ಸೆಸ್ ಬೆಂಬಲಿತ ರಾಜಕೀಯ ಪಕ್ಷ. ಅದರ ಮುಂದುವರಿದ ಭಾಗವೇ ಭಾರತೀಯ ಜನತಾ ಪಕ್ಷ. ಶಿವಪ್ಪ ಶೆಟ್ಟರ್ ಭಾರತೀಯ ಜನಸಂಘದಿಂದ ಐದು ಬಾರಿ ಹುಬ್ಬಳ್ಳಿ ಧಾರವಾಡ-ಮುನ್ಸಿಪಲ್ ಕಾರ್ಪೊರೇಷನ್ ಸದಸ್ಯರಾಗಿದ್ದರು. ಒಂದು ಬಾರಿ ಮೇಯರ್ ಸ್ಥಾನ ಅಲಂಕರಿಸಿದ್ದರು. ಕರ್ನಾಟಕದಲ್ಲಿ ಭಾರತೀಯ ಜನಸಂಘದ ಮೊದಲ ಮೇಯರ್ ಎಂಬ ಹೆಗ್ಗಳಿಕೆಗೆ ಶಿವಪ್ಪ ಶೆಟ್ಟರ್ ಪಾತ್ರರಾಗಿದ್ದರು. ಜಗದೀಶ್ ಶೆಟ್ಟರ್ ಕುಟುಂಬ; ಕರ್ನಾಟಕದಲ್ಲಿ ಆರೆಸ್ಸೆಸ್, ಭಾರತೀಯ ಜನಸಂಘಗಳನ್ನು ನೀರೆರೆದು ಪೋಷಿಸಿದೆ. ಆರೆಸ್ಸೆಸ್ ಡಿಎನ್‌ಎ ಹೊಂದಿರುವ ಜಗದೀಶ್ ಶೆಟ್ಟರ್ ಕುಟುಂಬ ಬಸವಣ್ಣ ಮತ್ತು ಬಸವಾದಿ ಶರಣರ ತತ್ವಾದರ್ಶಗಳನ್ನು ಧಿಕ್ಕರಿಸಿ ರಾಜಕಾರಣ ಮಾಡಿದವರು. ಅಂತಹ ಕುಟುಂಬದ ವ್ಯಕ್ತಿಯನ್ನು ಕಾಂಗ್ರೆಸ್ ಪಕ್ಷ ಒಳಗೆ ಸೇರಿಸಿಕೊಂಡಿದ್ದೇ ಮಹಾ ತಪ್ಪು.
ಆರೆಸ್ಸೆಸ್, ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷದೊಂದಿಗೆ ಸುದೀರ್ಘ ಒಡನಾಟ ಹೊಂದಿದ ಜಗದೀಶ್ ಶೆಟ್ಟರ್ ಬಿಜೆಪಿ ತೊರೆಯುವ ನಿರ್ಧಾರ ಕೈಗೊಂಡಿದ್ದು ಡಿಎನ್‌ಎಗೆ ಮಾಡಿದ ಮಹಾದ್ರೋಹ. ಅಷ್ಟು ಮಾತ್ರವಲ್ಲ; ಕುಟುಂಬದ ಹಿರಿಯರಾದ ಅಪ್ಪ -ಅಂಕಲ್ ಅವರಿಗೆ ವಂಚಿಸಿದ ಅಪಕೀರ್ತಿ ಜಗದೀಶ್ ಶೆಟ್ಟರ್ ಅವರದು. ಅಷ್ಟಕ್ಕೂ ಜಗದೀಶ್ ಶೆಟ್ಟರ್‌ಗೆ ಬಿಜೆಪಿ ಟಿಕೆಟ್ ತಪ್ಪಿಸಿದ್ದಾದರೂ ಯಾರು? ಆರೆಸ್ಸೆಸ್ ಡಿಎನ್‌ಎ ಹೊಂದಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು. ಬಿ.ಎಲ್. ಸಂತೋಷ್ 2019ರ ಲೋಕಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರ ಗುರು, ಮಾರ್ಗದರ್ಶಕ ಅನಂತಕುಮಾರ್ ಅವರ ಧರ್ಮಪತ್ನಿ ಶ್ರೀಮತಿ ತೇಜಸ್ವಿನಿ ಅನಂತ ಕುಮಾರ್ ಅವರಿಗೂ ಡಿಎನ್‌ಎ ನೆಪ ಮುಂದು ಮಾಡಿ ಟಿಕೆಟ್ ನಿರಾಕರಿಸಿದ್ದರು. ಆಗ ಇದೇ ಜಗದೀಶ್ ಶೆಟ್ಟರ್ ಬಾಯಿ ಮುಚ್ಚಿಕೊಂಡು ಕೂತಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಹೊತ್ತಿಗೆ ಬಿ.ಎಲ್. ಸಂತೋಷ್ ಅವರ ಡಿಎನ್‌ಎ ಸೂತ್ರ ತಿದ್ದುಪಡಿಗೊಳಗಾಗಿತ್ತು.
1994ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಮತಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಮೇಲೆ ಸ್ಪರ್ಧಿಸಿ ಜಗದೀಶ್ ಶೆಟ್ಟರ್ ಗೆಲುವು ಸಾಧಿಸಿದ್ದರು. ಅಷ್ಟಕ್ಕೂ ಅವರು ಸೋಲಿಸಿದ್ದು ಜನತಾ ಪರಿವಾರದ ಡಿಎನ್‌ಎ ಹೊಂದಿದ್ದ ಮಾಜಿ ಮುಖ್ಯಮಂತ್ರಿಯ ಮಗ ಬಸವರಾಜ ಬೊಮ್ಮಾಯಿಯವರನ್ನು. ಬಸವರಾಜ ಬೊಮ್ಮಾಯಿ ಕೂಡ ಈಗ ಡಿಎನ್‌ಎ ಬದಲಾಯಿಸಿಕೊಂಡಿದ್ದಾರೆ. 1994ರಿಂದ ಸತತ ಆರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ‘ಸಮಯ ಸಾಧಕ’ ಡಿಎನ್‌ಎ ಕಾರಣಕ್ಕೆ ಅತಿ ಹೆಚ್ಚು ಕಾಲ ಅಧಿಕಾರದ ರುಚಿ ಅನುಭವಿಸಿದ್ದಾರೆ. ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ವಿಧಾನಸಭೆಯ ಮೂರನೇ ಮಹಡಿಯನ್ನು ತೋರಿಸಿದ ಯಡಿಯೂರಪ್ಪ ಕೋರ್ಟು, ಕಚೇರಿ, ಜೈಲು ಪರದಾಟದಲ್ಲಿದ್ದಾಗ ಜಗದೀಶ್ ಶೆಟ್ಟರ್ ಕಡಿಮೆ ಶ್ರಮ ಹಾಕಿ ‘ಬೆಣ್ಣೆ’ ತಿನ್ನುತ್ತಿದ್ದರು. 1999ರ ವಿಧಾನಸಭಾ ಚುನಾವಣೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ಸೋತಿದ್ದರು. ಆಗ ಬಿಜೆಪಿಯಿಂದ ಗೆದ್ದವರಲ್ಲಿ ಬಿ.ಬಿ. ಶಿವಪ್ಪ ಅತ್ಯಂತ ಹಿರಿಯರು ಮತ್ತು ಅನುಭವಿ ಸಂಸದೀಯ ಪಟುವಾಗಿದ್ದರು. ಒಂದು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಒಂದು ಬಾರಿ ವಿಧಾನಸಭಾ ಸದಸ್ಯರಾಗಿ ಅನುಭವ ಪಡೆದಿದ್ದ ಬಿ.ಬಿ ಶಿವಪ್ಪ ಭಾರತೀಯ ಜನತಾ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರಾಗಿ ದುಡಿದಿದ್ದರು. ಆಗ ನ್ಯಾಯಯುತವಾಗಿ ಬಿ.ಬಿ. ಶಿವಪ್ಪನವರೇ ವಿರೋಧ ಪಕ್ಷದ ನಾಯಕರಾಗಿ ಆಯ್ಕೆಯಾಗಬೇಕಿತ್ತು.
ಬಿ.ಬಿ. ಶಿವಪ್ಪನವರದ್ದು ಸಂಘ ಪರಿವಾರದ ಡಿಎನ್‌ಎ ಆಗಿತ್ತು. ಆಗ ಅನಂತ ಕುಮಾರ್, ಯಡಿಯೂರಪ್ಪ ಕುತಂತ್ರಕ್ಕೆ ಬಿ.ಬಿ ಶಿವಪ್ಪ ಬಲಿಪಶುವಾದರು. ವಿರೋಧ ಪಕ್ಷದ ನಾಯಕ ಸ್ಥಾನವನ್ನು ಹಿರಿಯ ನಾಯಕ ಬಿ.ಬಿ. ಶಿವಪ್ಪನವರಿಗೆ ತಪ್ಪಿಸಿದರು. ಅನಂತಕುಮಾರ್ ಬಾಲ ಬಡುಕನಾದ, ಸಮಯ ಸಾಧಕ ಜಗದೀಶ್ ಶೆಟ್ಟರ್ ಅವರಿಗೆ ವಿರೋಧ ಪಕ್ಷದ ನಾಯಕ ಸ್ಥಾನ ನೀಡಲಾಯಿತು. ಕೇವಲ ಒಂದು ಅವಧಿಗೆ ಶಾಸಕರಾಗಿದ್ದ ಶೆಟ್ಟರ್‌ಗೆ ಅನುಭವ ಇರಲಿಲ್ಲ. ಆ ಕಾರಣಕ್ಕೆ ಅವರು ಅತ್ಯಂತ ದುರ್ಬಲ ವಿರೋಧ ಪಕ್ಷದ ನಾಯಕನೆಂಬ ಅಪಖ್ಯಾತಿಗೂ ಒಳಗಾದರು. ಪಾಪ ಬಿ.ಬಿ. ಶಿವಪ್ಪ ಬಿಜೆಪಿ ತೊರೆದು ಕಾಂಗ್ರೆಸ್ ಸೇರಬೇಕಾಯಿತು. ಆಗ ಕೇಂದ್ರದಲ್ಲಿ ಪ್ರಭಾವಿಯಾಗಿದ್ದ ಅನಂತಕುಮಾರ್ ಬೆಂಬಲ ಪಡೆದು ತನ್ನದೇ ಲಿಂಗಾಯತ ಸಮುದಾಯದ ಬಿ.ಬಿ. ಶಿವಪ್ಪ ಅವರ ರಾಜಕೀಯ ಅಂತ್ಯಕ್ಕೆ ಜಗದೀಶ್ ಶೆಟ್ಟರ್ ಕಾರಣವಾಗಿದ್ದರು. ಇತಿಹಾಸ ಮತ್ತೆ ಮರುಕಳಿಸಿತು; 2023ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಕೇಂದ್ರದಲ್ಲಿ ಪ್ರಭಾವಿಯಾಗಿದ್ದ ಬಿ.ಎಲ್. ಸಂತೋಷ್ ಲಿಂಗಾಯತ ಬಣಜಿಗ ಸಮುದಾಯದ ಮಹೇಶ್ ಟೆೆಂಗಿನಕಾಯಿಯನ್ನು ಬಳಸಿಕೊಂಡು ಜಗದೀಶ್ ಶೆಟ್ಟರ್ ಪಕ್ಷ ಬಿಡುವಂತೆ ಮಾಡಿದರು. ಶೆಟ್ಟರ್ ಅವರನ್ನು ಗುರು ಎಂದೇ ಹೇಳಿಕೊಳ್ಳುತ್ತಿದ್ದ ಮಹೇಶ್ ಟೆಂಗಿನ ಕಾಯಿ ಹೊಸ ಸಮಯ ಸಾಧಕ.
ಜಗದೀಶ್ ಶೆಟ್ಟರ್ ಅವರಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಬಿ.ಎಲ್. ಸಂತೋಷ್ ಡಿಎನ್‌ಎ ಕೂಡ ಲೆಕ್ಕಕ್ಕೆ ತೆಗೆದುಕೊಳ್ಳದೆ ಅತ್ಯಂತ ನಿರ್ದಯವಾಗಿ ಟಿಕೆಟ್ ನಿರಾಕರಿಸಿದಾಗ ಎಲ್ಲ ಜಾತಿಯ ಜನಸಾಮಾನ್ಯರು ‘‘ಪಾಪ ಹೀಗಾಗಬಾರದಿತ್ತು’’ ಎಂದು ಮರುಗಿದರು. ಬಿ.ಎಲ್. ಸಂತೋಷ್ ಜಗದೀಶ್ ಶೆಟ್ಟರ್ ಸೋಲಿಸುವುದನ್ನು ಸವಾಲಾಗಿ ಸ್ವೀಕರಿಸಿದರು. ಕೋಟಿ ಕೋಟಿ ಹಣ ಸುರಿದು ಸೋಲಿಸಿಯೇ ಬಿಟ್ಟರು; ಆಗಲೂ ಜನಸಾಮಾನ್ಯರು, ಸಂವೇದನಾಶೀಲ ಪತ್ರಕರ್ತರು ‘ಶೆಟ್ಟರ್ ಪರ’ ಮಿಡಿದರು. ಬಿ.ಎಲ್. ಸಂತೋಷ್ ತಮ್ಮ ಪರಮಶತ್ರು ಎಂದೇ ಭಾವಿಸಿ ಜಗದೀಶ್ ಶೆಟ್ಟರ್ ಪರವಾದ ಲೇಖನಗಳನ್ನು ಬರೆದರು. ಆರೆಸ್ಸೆಸ್ ಡಿಎನ್‌ಎ ಹೊಂದಿದ ಜಗದೀಶ್ ಶೆಟ್ಟರ್‌ಗೆ ಬಿ.ಎಲ್. ಸಂತೋಷ್ ಅನ್ಯಾಯ ಮಾಡಿದರೆಂದು ಉತ್ತರ ಕರ್ನಾಟಕ ಲಿಂಗಾಯತ ಮತದಾರರು ಬಿಜೆಪಿ ವಿರುದ್ಧ ಮತ ಚಲಾಯಿಸಿದರು. ಜಗದೀಶ್ ಶೆಟ್ಟರ್ ಮಹಾನ್ ಜನನಾಯಕ ಅಲ್ಲವಾದರೂ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದು ಬಹು ದೊಡ್ಡ ಸುದ್ದಿ ಆಯಿತು. ಶೆಟ್ಟರ್ ಪ್ರಗತಿಪರರ ಕಣ್ಣಲ್ಲಿ ಹೀರೋ ಆದರು. ಕಾಂಗ್ರೆಸ್ ಪಕ್ಷ 136 ಶಾಸಕರನ್ನು ಗೆಲ್ಲಿಸಿಕೊಂಡಿದ್ದರಲ್ಲಿ ಗೆದ್ದ ಲಕ್ಷ್ಮಣ ಸವದಿಗಿಂತ ಸೋತ ಶೆಟ್ಟರ್‌ಗೆ ಹೆಚ್ಚು ಪಾಲುಕೊಟ್ಟರು. 35,000 ಅಂತರದಲ್ಲಿ ಹೀನಾಯವಾಗಿ ಸೋತ ಜಗದೀಶ್ ಶೆಟ್ಟರ್ ಅವರಿಗೆ ಐದು ವರ್ಷಗಳ ವಿಧಾನಸಭಾ ಕ್ಷೇತ್ರ ಸದಸ್ಯರನ್ನಾಗಿಸಿದರು. ಕಾಂಗ್ರೆಸ್ ಪಕ್ಷದ ನಾಯಕರಿಗೆ ಕಡಿಮೆ ಅವಧಿಯ ಎಂಎಲ್‌ಸಿ ಮಾಡಿದರು. ಕಾಂಗ್ರೆಸ್ ಪಕ್ಷ ಜಗದೀಶ್ ಶೆಟ್ಟರ್‌ಗೆ ಮನೆಯ ಮಗನಿಗಿಂತಲೂ ಹೆಚ್ಚು ಪ್ರೀತಿ, ಗೌರವ ನೀಡಿತು.
ಜಗದೀಶ್ ಶೆಟ್ಟರ್ ಅವರಿಗೆ ಹೆಚ್ಚು ಗೌರವ ನೀಡುವ ಮೂಲಕ ಪ್ರಹ್ಲಾದ ಜೋಶಿ, ಅನಂತಕುಮಾರ್ ಹೆಗಡೆ ಮುಂತಾದವರನ್ನು ಸೋಲಿಸಬಹುದೆಂದು ಕಾಂಗ್ರೆಸ್ ಪಕ್ಷ ಕನಸು ಕಂಡಿತ್ತು. ಸ್ಥಳೀಯ ನಾಯಕರಾದ ರಜತ್ ಉಳ್ಳಾಗಡ್ಡಿ ಮಠ ಸೇರಿದಂತೆ ಹಲವರು ಶೆಟ್ಟರ್‌ಗಾಗಿ ತ್ಯಾಗ ಮಾಡಿದ್ದರು. ಶೆಟ್ಟರ್ ಮತ್ತವರ ಕುಟುಂಬದವರನ್ನು ಹೀನಾಯವಾಗಿ ನಡೆಸಿಕೊಂಡ ಬಿ.ಎಲ್ ಸಂತೋಷ್, ಪ್ರಹ್ಲಾದ್ ಜೋಶಿ, ಮಹೇಶ್ ಟೆಂಗಿನಕಾಯಿಯಂತಹ ಹಲವರಿಗೆ ತಕ್ಕ ಶಾಸ್ತಿ ಮಾಡಬಹುದೆಂದು ಬಿಜೆಪಿಯ ಅಮಾಯಕ ಕಾರ್ಯಕರ್ತರೇ ಎದುರು ನೋಡುತ್ತಿದ್ದರು. ಸಮಯ ಸಾಧಕ ಶೆಟ್ಟರ್ ಆತ್ಮ ಗೌರವವನ್ನು, ಸ್ವಾಭಿಮಾನವನ್ನು ಕೊಂದುಕೊಂಡು ಮತ್ತೆ ಬಿಜೆಪಿ ಸೇರಿಕೊಂಡಿದ್ದಾರೆ. ಶೆಟ್ಟರ್‌ಗೆ ಟಿಕೆಟ್ ತಪ್ಪಿದಾಗ ಮಿಡಿದ-ಮರುಗಿದ ಶುದ್ಧಾಂತಃಕರಣ ಮನಸ್ಸುಗಳ ಭಾವನೆಗೆ ಘಾಸಿಗೊಳಿಸಿದ್ದಾರೆ. ಸಾರ್ವಜನಿಕರ ಅನುಕಂಪಕ್ಕೂ ‘ಯೋಗ್ಯ’ ಅಲ್ಲ ಎನ್ನುವುದನ್ನು ರುಜುವಾತು ಪಡಿಸಿದ್ದಾರೆ. ಅಷ್ಟಕ್ಕೂ ಜಗದೀಶ್ ಶೆಟ್ಟರ್‌ರಾಜಕೀಯ ಬದುಕಿನ ಸಂಧ್ಯಾ ಕಾಲದಲ್ಲಿದ್ದಾರೆ. ಇವತ್ತಲ್ಲ ನಾಳೆ ‘ನಿಮಗೆ ವಯಸ್ಸಾಯಿತು’ ಎಂದು ನೆಪ ಮುಂದು ಮಾಡಿ ಬಿಜೆಪಿ ಹೈಕಮಾಂಡ್ ಯಾವುದೋ ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ಕಳುಹಿಸಿದರೂ ಆಶ್ಚರ್ಯ ಪಡಬೇಕಿಲ್ಲ. ಹೀಗಿರುವಾಗ ಶೆಟ್ಟರ್ ‘ಸ್ವಾಭಿಮಾನಕ್ಕಾಗಿ’ ಬಿಜೆಪಿ ತೊರೆದದ್ದು ಮತ್ತು ಕಾಂಗ್ರೆಸ್ ಸೇರಿದ್ದು ಬೂಟಾಟಿಕೆ ಎನಿಸುತ್ತದೆ. ಶೆಟ್ಟರ್‌ಗೆ ಟಿಕೆಟ್ ನಿರಾಕರಿಸಿದ್ದೇ ‘ರಾಜ್ಯಪಾಲರಾಗಿ ಹೋಗಿ’ ಎಂಬ ಸಂದೇಶ ರವಾನಿಸಲು. ತಮಗೆ ಬೇಡವಾದ ಎಪ್ಪತ್ತರ ಆಸುಪಾಸಿನ ಬಿಜೆಪಿಯ ಎಲ್ಲಾ ನಾಯಕರಿಗೂ ಅದೇ ಸಂದೇಶ ರವಾನಿಸಿದ್ದಾರೆ.
ಜಗದೀಶ್ ಶೆಟ್ಟರ್ ಅವರಿಗೆ ಆರೆಸ್ಸೆಸ್ ಡಿಎನ್‌ಎ ಬಗ್ಗೆ ಅಷ್ಟೊಂದು ಗೌರವ, ಪ್ರೀತಿ ಇದ್ದಿದ್ದರೆ ಪ್ರಹ್ಲಾದ್ ಜೋಶಿ, ಬಿ.ಎಲ್. ಸಂತೋಷ್ ಎಷ್ಟೇ ಕಿರುಕುಳ ನೀಡಿದರೂ ಸ್ವಾಭಿಮಾನದ ಮಾತು ಹೇಳಿ ಬಿಜೆಪಿ ತೊರೆಯಬಾರದಿತ್ತು. ಕನಿಷ್ಠ ಪಕ್ಷ ಭಾರತೀಯ ಜನಸಂಘಕ್ಕಾಗಿ ಬದುಕು ಸವೆಸಿದ ಅಂಕಲ್ ಸದಾಶಿವ ಶೆಟ್ಟರ್, ಅಪ್ಪ ಶಿವಪ್ಪ ಶೆಟ್ಟರ್ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗುತ್ತಿತ್ತು. ಸ್ವಾಭಿಮಾನದ ಕಿಡಿ ಹೊತ್ತಿಸಿಕೊಂಡು ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿಯವರ ಕುತಂತ್ರದ ರಾಜಕಾರಣಕ್ಕೆ ಸೆಡ್ಡು ಹೊಡೆದು ಹೊರಬಂದ ಮೇಲೆ ಯಾವ ಕಾರಣಕ್ಕೂ ಬಿಜೆಪಿ ಕದ ತಟ್ಟಬಾರದಿತ್ತು. ಕಷ್ಟದ ದಿನಗಳಲ್ಲಿ ಕೈ ಹಿಡಿದ ಕಾಂಗ್ರೆಸ್ ಪಕ್ಷಕ್ಕೂ, ಲಿಂಗಾಯತ ಸಮುದಾಯಕ್ಕೂ ಏಕಕಾಲಕ್ಕೆ ಜಗದೀಶ್ ಶೆಟ್ಟರ್ ದ್ರೋಹ ಮಾಡಿದ್ದಾರೆ. ತಮ್ಮದೇ ಆತ್ಮಸಾಕ್ಷಿಗೂ, ಅಭಿಮಾನಕ್ಕೂ ಅಪಮಾನ ಮಾಡಿದ್ದಾರೆ. ಅವರಲ್ಲಿ ಸ್ವಾಭಿಮಾನದ ಕಿಚ್ಚು ನಿಜವಾಗಿಯೂ ಜಾಗೃತವಾಗಿದ್ದರೆ ತಮಗೆ ಅಪಮಾನ ಮಾಡಿದ ವ್ಯಕ್ತಿಗಳು ಮತ್ತು ಹಿತಾಸಕ್ತಿಗೆ ಪಾಠ ಕಲಿಸಬೇಕಿತ್ತು.
ಜಗದೀಶ್ ಶೆಟ್ಟರ್ ಅಜೀರ್ಣವಾಗುವಷ್ಟು ಅಧಿಕಾರ ಅನುಭವಿಸಿದ್ದಾರೆ. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರತುಪಡಿಸಿದರೆ; ಅತಿ ಹೆಚ್ಚು ಕಾಲ ವಿರೋಧ ಪಕ್ಷದ ನಾಯಕ ಸ್ಥಾನದಲ್ಲಿದ್ದವರು ಜಗದೀಶ್ ಶೆಟ್ಟರ್. ಸಭಾಪತಿ ಹುದ್ದೆ, ಕಂದಾಯ, ಕೈಗಾರಿಕೆಯಂತಹ ಪ್ರಮುಖ ಖಾತೆಯ ಮಂತ್ರಿ ಸ್ಥಾನ, ಅಷ್ಟು ಮಾತ್ರವಲ್ಲ ಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಇಷ್ಟೆಲ್ಲಾ ಅಧಿಕಾರ ಅನುಭವಿಸಿದವರಿಗೆ ಒಂದೋ ಸ್ವಾಭಿಮಾನ ಮುಖ್ಯವಾಗಬೇಕು; ಇಲ್ಲ ಡಿಎನ್‌ಎ ಮೊದಲ ಆದ್ಯತೆಯಾಗಬೇಕು. ಆದರೆ ಜಗದೀಶ್ ಶೆಟ್ಟರ್ ಸ್ವಾಭಿಮಾನ ಬಲಿಕೊಟ್ಟು ಎಡಬಿಡಂಗಿ ಎನಿಸಿಕೊಂಡಿದ್ದಾರೆ. ಇವರ ಸಮಯ ಸಾಧಕ ನಡೆಯಿಂದ ರಾಜಕಾರಣದಲ್ಲಿ ಯಾರು ಯಾರನ್ನೂ ನಂಬದ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಪಕ್ಷವೂ ಸೈದ್ಧಾಂತಿಕ ಬದ್ಧತೆ ಇಲ್ಲದ ಜಗದೀಶ್ ಶೆಟ್ಟರ್ ಅವರಂತಹ ಅವಕಾಶವಾದಿಗಳಿಂದ ಅಂತರ ಕಾಯ್ದುಕೊಳ್ಳುವ ಪಾಠ ಕಲಿಯುವಂತಾಗಿದೆ. ಸಮಯ ಸಾಧಕರಿಗೆ ಉಳಿಗಾಲವಿಲ್ಲ.