ವಕ್ಫ್ ಆಸ್ತಿ: ಬಿಜೆಪಿಯ ಕೋಮುವಾದಿ ರಾಜಕಾರಣ
ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ವಕ್ಫ್ ಆಸ್ತಿಗೆ ಸಂಬಂಧ ಪಟ್ಟಂತೆ ತಿದ್ದುಪಡಿ ಕಾನೂನು ರೂಪಿಸಲು ಹೊರಟಿದೆ. ಈಗ ಆ ವಿಷಯ ಜಗದಂಬಿಕಾ ಪಾಲ್ ನೇತೃತ್ವದ ಜಂಟಿ ಸದನ ಸಮಿತಿಗೆ ಹೋಗಿದೆ.
ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ ವಕ್ಫ್ ಆಸ್ತಿ ವಿವಾದವನ್ನು ನೆಪವಾಗಿಟ್ಟುಕೊಂಡು ಕೋಮುವಾದಿ ರಾಜಕಾರಣವನ್ನು ಮಾಡುತ್ತಿದೆ. 1912ರಲ್ಲಿ ಕರ್ನಾಟಕ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಅವರು ಅಂದಿನ ಬಿಜೆಪಿ ಮುಖ್ಯಮಂತ್ರಿ ಡಿ. ವಿ. ಸದಾನಂದಗೌಡರಿಗೆ ವಕ್ಫ್ ಆಸ್ತಿ ಕಬಳಿಕೆ ಕುರಿತು ಸುಮಾರು ಏಳು ಸಾವಿರ ಪುಟಗಳ ವರದಿಯೊಂದನ್ನು ಸಲ್ಲಿಸಿದ್ದರು.
ಆ ವರದಿಯನ್ನು ಸಂಪೂರ್ಣ ಮರೆತೇ ಹೋಗಿದ್ದ ಬಿಜೆಪಿ ನಾಯಕರು ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಗೆಲ್ಲಲು ವಕ್ಫ್ ಆಸ್ತಿ ಕುರಿತು ವಿವಾದ ಸೃಷ್ಟಿಸಿ ಹಿಂದೂ-ಮುಸ್ಲಿಮ್ ಮತಗಳ ಧ್ರುವೀಕರಣಕ್ಕೆ ಹವಣಿಸುತ್ತಿದ್ದಾರೆ. ವಕ್ಫ್ ಹೋರಾಟದ ಕ್ರೆಡಿಟ್ ಪಡೆದುಕೊಳ್ಳಲು ಬಿಜೆಪಿಯಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ.
2023ರ ವಿಧಾನ ಸಭಾ ಚುನಾವಣೆಗೂ ಮುಂಚೆ ಬಿಜೆಪಿಯವರು ಹಿಂದೂ ಮತಗಳ ಧ್ರುವೀಕರಣಕ್ಕಾಗಿ ಏನೆಲ್ಲಾ ತಂತ್ರಗಾರಿಕೆ ಹೆಣೆದಿದ್ದರು. ಆ ಎಲ್ಲ ಪ್ಲ್ಯಾನ್‌ಗಳು ತಲೆ ಕೆಳಗಾದವು.. ಹಳೆ ಮೈಸೂರು ಭಾಗದಲ್ಲಿ ಮತಗಳ ಧ್ರುವೀಕರಣಕ್ಕಾಗಿ ಟಿಪ್ಪು ಅಸ್ತ್ರದ ಜೊತೆಗೆ ಹೊಸ ವಿಷಯಗಳನ್ನು ಸಂಶೋಧನೆ ಮಾಡಿ ಪ್ರಯೋಗಿಸಿದರು. ಟಿಪ್ಪು ಸುಲ್ತಾನ್ ಅವರನ್ನು ಕೊಂದವರು ಒಕ್ಕಲಿಗ ಸಮುದಾಯದ ಉರಿಗೌಡ-ನಂಜೇಗೌಡ ಎಂದು ಕಾಲ್ಪನಿಕ ಕತೆ ಹೆಣೆದರು. ಅದನ್ನು ವ್ಯಾಪಕವಾಗಿ ಪ್ರಚಾರ ಮಾಡಲು ಯತ್ನಿಸಿದರು. ಟಿಪ್ಪುವಿನ ಬಗ್ಗೆ, ಆ ಮೂಲಕ ಮುಸ್ಲಿಮ್ ಸಮುದಾಯ ಹಾಗೂ ಒಕ್ಕಲಿಗ ಸಮುದಾಯದಲ್ಲಿ ದ್ವೇಷ ಭಾವನೆ ಮೂಡಿಸಲು ಯತ್ನಿಸಿದರು. ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರ ಸಕಾಲಿಕ ಮಧ್ಯಪ್ರವೇಶದಿಂದ ಆ ಪ್ರಕರಣ ಅಲ್ಲಿಗೆ ಕೊನೆಯಾಯಿತು.
ನಂತರ ಹಿಂದೂ-ಮುಸ್ಲಿಮ್ ನೆಲೆಯಲ್ಲಿ ಮತ ವಿಭಜನೆಗೆ ಹಲಾಲ್ ಕಟ್ ಮತ್ತು ಜಟಕಾ ಕಟ್ ಎಂಬ ಬ್ರಹ್ಮಾಸ್ತ್ರಗಳನ್ನು ಹೊರ ತೆಗೆದರು. ಹಳೆ ಮೈಸೂರು ಭಾಗದಲ್ಲಿ ಮಾಂಸದ ವ್ಯಾಪಾರವನ್ನು ಮುಸ್ಲಿಮ್ ಸಮುದಾಯ ಮತ್ತು ಅಲ್ಪ ಮಟ್ಟಿಗೆ ಒಕ್ಕಲಿಗ ಸಮುದಾಯದವರು ಮಾಡುತ್ತಾರೆ. ಆ ಎರಡೂ ಸಮುದಾಯಗಳಲ್ಲಿ ದ್ವೇಷ ಭಾವನೆ ಮೂಡಿಸಲು ಮಾಂಸದ ವ್ಯಾಪಾರದ ಪೈಪೋಟಿ ಏರ್ಪಡುವ ಹೊಸ ಸಂಗತಿಯನ್ನು ಪರಿಚಯಿಸಿದರು. ಮುಸ್ಲಿಮ್ ಸಮುದಾಯದವರು ಹಲಾಲ್ ಕಟ್ ಮಾಂಸವನ್ನು ಮಾರುತ್ತಾರೆ. ಒಕ್ಕಲಿಗ ಸಮುದಾಯದವರು ಜಟಕಾ ಕಟ್ ಮಾಂಸದ ವ್ಯಾಪಾರ ನಡೆಸುತ್ತಾರೆ. ಹಲಾಲ್ ಕಟ್ ಮಾಂಸವನ್ನು ಹಿಂದೂಗಳು ತಿರಸ್ಕರಿಸಬೇಕು ಎಂದು ಪ್ರಚಾರ ಮಾಡಿದರು. ಮಾಂಸ ತಿನ್ನುವವರು ಈ ಯಾವ ಭೇದ ಭಾವ ಎಣಿಸಲಿಲ್ಲ. ಹಲಾಲ್ ಕಟ್ ಮತ್ತು ಜಟಕಾ ಕಟ್ ಬಗ್ಗೆ ತಲೆಯೇ ಕೆಡಿಸಿಕೊಳ್ಳಲಿಲ್ಲ.
ಹಲಾಲ್ ಕಟ್ ಮತ್ತು ಜಟಕಾ ಕಟ್ ವಿಷಯ ಚುನಾವಣೆಯಲ್ಲಿ ಮತಗಳ ಧ್ರುವೀಕರಣ ಮಾಡುವುದು ಒತ್ತಟ್ಟಿಗಿರಲಿ ಮತದಾರರು ಅದನ್ನು ಆರಂಭದಲ್ಲೇ ಚಿವುಟಿ ಹಾಕಿದರು. ಹಿಜಾಬ್ ವಿಷಯ ಮಂಗಳೂರು ಹೊರತು ಪಡಿಸಿ ಬೇರೆಡೆ ಯಾರೊಬ್ಬರೂ ಗಂಭೀರವಾಗಿ ಪರಿಗಣಿಸಲಿಲ್ಲ.
ಬಸವರಾಜ ಬೊಮ್ಮಾಯಿ ಅವರು ಗೋಹತ್ಯೆ ನಿಷೇದ ಕಾಯ್ದೆ, ಮತಾಂತರ ನಿಷೇಧ ಕಾಯ್ದೆಯನ್ನು ಆತುರಾತುರವಾಗಿ ಜಾರಿಗೆ ತಂದರು. ಕರ್ನಾಟಕದಲ್ಲಿ 2 ಬಿ ಪ್ರವರ್ಗದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಪ್ರತಿಶತ ನಾಲ್ಕರಷ್ಟು ಮೀಸಲಾತಿ ನೀಡಲಾಗುತ್ತಿತ್ತು. ಆ ಮೀಸಲಾತಿಯನ್ನು ರದ್ದು ಪಡಿಸಿ ತಲಾ ಪ್ರತಿಶತ ಎರಡರಷ್ಟು ಲಿಂಗಾಯತರು ಮತ್ತು ಒಕ್ಕಲಿಗ ಸಮುದಾಯಗಳಿಗೆ ಹಂಚಿದರು. ಆ ಕ್ರಮವನ್ನು ಎರಡೂ ಸಮುದಾಯದವರು ಒಪ್ಪಿಕೊಳ್ಳಲಿಲ್ಲ. ಅಷ್ಟೇ ಅಲ್ಲ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯನ್ನು ಪ್ರಕಟಿಸಿ ಬಿಟ್ಟರು. ಆ ಎಲ್ಲ ನಿರ್ಧಾರಗಳಿಂದ ಬಿಜೆಪಿಗೆ ಕರ್ನಾಟಕದಲ್ಲಿ ನೂರಾ ಐವತ್ತು ಸೀಟುಗಳು ಪಕ್ಕಾ ಎಂದೇ ನಂಬಿ ಕೊಂಡಿದ್ದರು.
ಹಿಂದೂ-ಮುಸ್ಲಿಮ್ ನೆಲೆಯಲ್ಲಿ ಮತಗಳ ವಿಭಜನೆ ಮಾಡುವ ಯಾವ ಯೋಜನೆಯನ್ನೂ ಮತದಾರರು ಒಪ್ಪಿಕೊಳ್ಳಲಿಲ್ಲ. ಒಳ ಮೀಸಲಾತಿ ನಿರ್ಧಾರವಂತೂ ಬಿಜೆಪಿಗೇ ತಿರುಗುಬಾಣವಾಯಿತು..
ಹಿಂದೂ-ಮುಸ್ಲಿಮ್ ನೆಲೆಯಲ್ಲಿ ಮತಗಳ ಧ್ರುವೀಕರಣವಾಗಿ, ಹಿಂದೂಗಳೆಲ್ಲ ಕಣ್ಣು ಮುಚ್ಚಿ ಬಿಜೆಪಿಗೆ ವೋಟು ಹಾಕುತ್ತಾರೆಂದು ಬಲವಾಗಿ ನಂಬಿದ್ದರು. ಆ ಕಾರಣಕ್ಕೆ ತಮಗೆ ಬೇಡವಾದವರಿಗೆ ಟಿಕೆಟ್ ಕಟ್ ಮಾಡಿ ಚೇಲಾ, ಚಮಚಾಗಳಿಗೆ, ಹೊಸಬರಿಗೆ ಟಿಕೆಟ್ ನೀಡಿದರು. ಫಲಿತಾಂಶ ಬಂದಾಗ ಕರ್ನಾಟಕದ ಮತದಾರರು ಕೋಮುವಾದಿ ರಾಜಕಾರಣ ಮಾಡುವವರಿಗೆ ತಕ್ಕ ಪಾಠ ಕಲಿಸಿದ್ದರು. ಬಿಜೆಪಿ ಕೇವಲ 66 ವಿಧಾನ ಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ಊಹೆ ಮಾಡದಷ್ಟು 136 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು.
ಕೋಮುವಾದಿ ರಾಜಕಾರಣ ಕರ್ನಾಟಕದಲ್ಲಿ ಯಶಸ್ಸು ಕಾಣುವುದಿಲ್ಲ ಎಂಬ ಸಂದೇಶವನ್ನು ಮತದಾರರು ಬಿಜೆಪಿ ನಾಯಕರಿಗೆ ನೀಡುತ್ತಲೇ ಇದ್ದಾರೆ. ಇತ್ತೀಚೆಗೆ ನಡೆದ ಚನ್ನಪಟ್ಟಣ, ಸಂಡೂರು ಮತ್ತು ಶಿಗ್ಗಾಂವಿ-ಸವಣೂರು ವಿಧಾನ ಸಭಾ ಕ್ಷೇತ್ರಗಳ ಉಪ ಚುನಾವಣಾ ಫಲಿತಾಂಶವು ಕೋಮುವಾದಿ ರಾಜಕಾರಣದ ವಿರುದ್ಧವೇ ಇತ್ತು.
ಕರ್ನಾಟಕದಲ್ಲಿ ಜಾತಿಗಳು ಹೆಚ್ಚು ಕ್ರಿಯಾಶೀಲವಾಗಿವೆ. ಹಾಗಾಗಿ ಇಲ್ಲಿ ಗೆಲುವು ಪಡೆಯಲು ಎಲ್ಲ ಪಕ್ಷಗಳು ಜಾತಿ ಸಮೀಕರಣದ ಮೊರೆ ಹೋಗುತ್ತವೆ. ಗುಜರಾತ್, ಉತ್ತರ ಪ್ರದೇಶ, ಮಧ್ಯಪ್ರದೇಶಗಳ ಹಾಗೆ ಕರ್ನಾಟಕದಲ್ಲಿ ಧರ್ಮಾಧಾರಿತ ಮತ ವಿಭಜನೆ ಅಸಾಧ್ಯ. ಕರಾವಳಿ ಭಾಗದಲ್ಲಿ ಬಿಜೆಪಿ ಆ ಬಗೆಯ ಪ್ರಯೋಗ ಮಾಡಿ ಯಶಸ್ಸು ಪಡೆದಿದ್ದು ನಿಜ. ಈಗಲೂ ಕಾಂಗ್ರೆಸ್ ಪಕ್ಷ ಹೆಚ್ಚು ಜನಸ್ನೇಹಿ ಆಡಳಿತ ನೀಡಿ ಕೆಳ ಹಂತದಿಂದ ಸಂಘಟನೆ ಮಾಡಿದರೆ ಬಿಜೆಪಿ ಬೇರುಗಳನ್ನು ಕಿತ್ತೆಸೆಯಬಹುದು.
ಕೋಮುವಾದಿ ರಾಜಕಾರಣ ಕರ್ನಾಟಕದಲ್ಲಿ ಹಲವು ಬಾರಿ ವಿಫಲಗೊಂಡ ಮೇಲೂ ಬಿಜೆಪಿ ನಾಯಕರು ವಕ್ಫ್ ಮೂಲಕ ಧರ್ಮಾಧಾರಿತ ಮತ ವಿಭಜನೆ ಮಾಡುವ ರಾಜಕಾರಣಕ್ಕೆ ಕೈ ಹಾಕಿದ್ದಾರೆ.
ಉತ್ತರ ಕರ್ನಾಟಕದ ರೈತರ, ಮಠ ಮಾನ್ಯಗಳ ಜಮೀನನ್ನು ಕರ್ನಾಟಕ ವಕ್ಫ್ ಬೋರ್ಡ್ ಕಿತ್ತುಕೊಂಡಿದೆ ಎಂದು ಹಾದಿ ಬೀದಿಯಲ್ಲಿ ಹುಯಿಲು ಎಬ್ಬಿಸಿ ಪ್ರಚಾರ ಮಾಡಿದರೆ ಜನ ನಂಬಬಹುದು ಎಂಬುದು ಬಿಜೆಪಿಯವರ ಲೆಕ್ಕಾಚಾರ. ಉತ್ತರ ಕರ್ನಾಟಕದಲ್ಲಿ ರೈತರು ಎಂದರೆ ಪ್ರಮುಖವಾಗಿ ಲಿಂಗಾಯತರು. ಉಳಿದಂತೆ ಕುರುಬರು ಮತ್ತು ಇತರ ಹಿಂದುಳಿದವರು ಕೂಡ ರೈತಾಪಿ ಮಾಡುತ್ತಿರುತ್ತಾರೆ. ರೈತರ ಕಣ್ಣಲ್ಲಿ ವಕ್ಫ್ ಬೋರ್ಡ್‌ನ್ನು, ಆ ಮೂಲಕ ಮುಸ್ಲಿಮ್ ಸಮುದಾಯವನ್ನು ವಿಲನ್ ಮಾಡುವುದು ಬಿಜೆಪಿ ಮುಖಂಡರ ಉದ್ದೇಶ. ಮುಖ್ಯವಾಹಿನಿಯಿಂದ ಮುಸ್ಲಿಮ್ ಸಮುದಾಯವನ್ನು ಬೇರ್ಪಡಿಸಿದರೆ ಮುಸ್ಲಿಮೇತರರು ಒಂದಾಗುತ್ತಾರೆ ಎಂಬುದು ಬಿಜೆಪಿ ನಾಯಕರ ಗಾಢ ನಂಬಿಕೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಬಿಜೆಪಿಯಲ್ಲಿನ ಪ್ರತಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲರೂ ವಕ್ಫ್ ಹೋರಾಟದ ಮುಂಚೂಣಿಯಲ್ಲಿ ನಿಂತು ನಾಯಕರಾಗಲು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಹುದ್ದೆ ಅಲಂಕರಿಸಲು ಪೈಪೋಟಿ ನಡೆಸಿದ್ದಾರೆ.
ರೈತರ ಜಮೀನನ್ನು ವಕ್ಫ್ ಬೋರ್ಡ್ ಕಬ್ಜಾ ಮಾಡಿದೆ ಎನ್ನುವುದಕ್ಕೆ ಬಿಜೆಪಿ ನಾಯಕರಲ್ಲಿ ಸಮರ್ಪಕ ದಾಖಲೆಗಳಿಲ್ಲ. ಆದರೂ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ವಕ್ಫ್ ಆಸ್ತಿ ಕುರಿತು ಸತ್ಯ ಹೇಳಲು ಕಾಂಗ್ರೆಸ್ ಸರಕಾರ ಹಿಂದೇಟು ಹಾಕುತ್ತಿದೆ.
ಹಾಗೆ ನೋಡಿದರೆ ವಕ್ಫ್ ಪರಿಕಲ್ಪನೆಯಲ್ಲಿ ಬೇರೆಯವರ ಜಮೀನು ಕಬಳಿಸುವ ಉದ್ದೇಶ ಇಲ್ಲ. ದೇವರ ಹೆಸರಲ್ಲಿ ಸಮುದಾಯದ ಬಡವರ ಕಲ್ಯಾಣಕ್ಕೆ ದಾನಿಗಳು ಕೊಡುವ ಜಮೀನು ಮಾತ್ರ ವಕ್ಫ್ ಆಸ್ತಿ. ವಕ್ಫ್ ಆಸ್ತಿಯನ್ನು ಬೇರೆಯವರಿಗೆ ವರ್ಗಾಯಿಸುವಂತಿಲ್ಲ. ಮಾರುವಂತಿಲ್ಲ. ವಕ್ಫ್ ಆಸ್ತಿ ದೇವರಿಗೆ ಮತ್ತು ದೇವರ ಹೆಸರಲ್ಲಿ ಹಮ್ಮಿಕೊಳ್ಳುವ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಮೀಸಲಾದದ್ದು. ಅದನ್ನು ಮುಶ್ರುತುಲ್ ಕಿದ್ಮತ್ ಎಂದೇ ಗುರುತಿಸುತ್ತಾರೆ. ವಕ್ಫ್‌ಗೆ ಜಮೀನು ದಾನ ಮಾಡುವವರನ್ನು ವಾಕಿಫ್ ಎನ್ನುತ್ತಾರೆ. ಪವಿತ್ರ ಕಾರ್ಯಕ್ಕೆ ಬಳಸುವ ವಕ್ಫ್‌ಗೆ ಬ್ರಿಟಿಷರ ಕಾಲದಲ್ಲೇ ಮಾನ್ಯತೆ ದೊರಕಿತ್ತು. 1913ರಲ್ಲಿ ವಕ್ಫ್ ಪರಿಕಲ್ಪನೆ ಸಾಂಸ್ಥಿಕ ರೂಪ ಪಡೆದಿತ್ತು. ಮುಸಲ್ಮಾನ್ ವಕ್ಫ್ ಕಾಯ್ದೆಯನ್ನು 1923ರಲ್ಲೇ ಜಾರಿಗೆ ತರಲಾಗಿತ್ತು. ಕೇಂದ್ರ ವಕ್ಫ್ ಕೌನ್ಸಿಲ್‌ಗೆ ಸಾಂವಿಧಾನಿಕ ಮಾನ್ಯತೆ ಕಲ್ಪಿಸುವ ಉದ್ದೇಶದಿಂದ 1964ರ ಕಾಯ್ದೆ ರೂಪಿಸಿದ ಕೇಂದ್ರ ಸರಕಾರ ಅದನ್ನು ಕೇಂದ್ರ ಅಲ್ಪಸಂಖ್ಯಾತ ಮಂತ್ರಾಲಯದ ವ್ಯಾಪ್ತಿಯಲ್ಲಿ ಬರುವಂತೆ ಮಾಡಿತ್ತು.
ರಾಜ್ಯ ವಕ್ಫ್ ಬೋರ್ಡ್‌ಗಳನ್ನು ಆಯಾ ರಾಜ್ಯ ಸರಕಾರಗಳೇ ಸ್ಥಾಪಿಸಿವೆ. ವಕ್ಫ್ ಆಸ್ತಿ ರಕ್ಷಣೆ ಮತ್ತು ನಿರ್ವಹಣೆ ಸುಗಮವಾಗಲೆಂದು ಜಿಲ್ಲಾ ಮತ್ತು ಮಂಡಲ ಸಮಿತಿಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೇರಿ ದೇಶದಾದ್ಯಂತ ಒಟ್ಟು ಮೂವತ್ತು ವಕ್ಫ್ ಬೋರ್ಡ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಗೋವಾ, ಅರುಣಾಚಲ ಪ್ರದೇಶ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಹಾಗೂ ಕೇಂದ್ರಾಡಳಿತ ಪ್ರದೇಶವಾದ ದಮನ್ ಮತ್ತು ದಿಯೋನಲ್ಲಿ ವಕ್ಫ್ ಬೋರ್ಡ್ ಇಲ್ಲ. 1995ರ ವಕ್ಫ್ ಕಾಯ್ದೆ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಅನ್ವಯಿಸುವುದಿಲ್ಲ.
ವಕ್ಫ್ ಬೋರ್ಡ್ ಕರ್ನಾಟಕದಲ್ಲಿ ಬೇರೆಯವರ ಜಮೀನನ್ನು ತನ್ನ ವಶಕ್ಕೆ ತೆಗೆದುಕೊಳ್ಳುವುದು ಒತ್ತಟ್ಟಿಗಿರಲಿ, ತನ್ನ ವಶದಲ್ಲಿದ್ದ ಸುಮಾರು ಇಪ್ಪತ್ತೇಳು ಸಾವಿರ ಎಕರೆ ಜಮೀನನ್ನು ರಿಯಲ್ ಎಸ್ಟೇಟ್ ಮಾಫಿಯಾದವರ ಕುತಂತ್ರದ ಕಾರಣಕ್ಕೆ ಕಳೆದುಕೊಂಡಿದೆ. ಪವಿತ್ರ ಮತ್ತು ಧಾರ್ಮಿಕ ಮನೋಭಾವದ ವ್ಯಕ್ತಿಗಳು ಸ್ವಯಾರ್ಜಿತ ಜಮೀನನ್ನು ದೇವರ ಹೆಸರಿಗೆ ದಾನ ಮಾಡಿದ್ದಾರೆ. ಆ ಜಮೀನು ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ಸದ್ವಿನಿಯೋಗ ಆಗಬೇಕು. ದೇವರ ಆಸ್ತಿಯನ್ನು ಕಾಯಾ ವಾಚಾ ಮನಸ್ಸಿನಿಂದ ರಕ್ಷಣೆ ಮಾಡುವುದು ಕರ್ನಾಟಕ ವಕ್ಫ್ ಬೋರ್ಡ್‌ನ ಆದ್ಯ ಕರ್ತವ್ಯವಾಗಿತ್ತು.
ವಕ್ಫ್ ಆಸ್ತಿಯನ್ನು ಮರಳಿ ಪಡೆಯುವುದು ಮತ್ತು ಉದ್ದೇಶಿತ ಕಾರ್ಯಗಳಿಗೆ ಬಳಸುವಂತೆ ಮಾಡುವುದು ಸರಕಾರವೊಂದರ ಜವಾಬ್ದಾರಿಯಾಗಿರುತ್ತದೆ. ವಕ್ಫ್ ಆಸ್ತಿಯನ್ನು ಯಾರೇ ಕಬಳಿಸಿರಲಿ, ಎಷ್ಟೇ ದೊಡ್ಡವರಿರಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಂತ್ರಿ ಝಮೀರ್ ಅಹ್ಮದ್ ಅವರು ಬದ್ಧತೆಯಿಂದ ಕಾರ್ಯ ನಿರ್ವಹಿಸಿ ಬೇರೆಯವರ ಪಾಲಾದ ಆಸ್ತಿಯನ್ನು ಪಡೆದುಕೊಳ್ಳಬೇಕು.
ಬಿಜೆಪಿಯ ಕೂಗು ಮಾರಿಗಳು ಕರ್ನಾಟಕ ವಕ್ಫ್ ಬೋರ್ಡ್ ಮತ್ತು ರಾಜ್ಯದ ಮುಸ್ಲಿಮ್ ಸಮುದಾಯವನ್ನು ವಿಲನ್ ಮಾಡುವ ಮುಂಚೆಯೇ ಕರ್ನಾಟಕ ಸರಕಾರ ವಕ್ಫ್ ಆಸ್ತಿ ಕುರಿತ ವಸ್ತುಸ್ಥಿತಿಯನ್ನು ಜನತೆಯ ಮುಂದೆ ಇಡಬೇಕು.
ಅನ್ವರ್ ಮಾಣಿಪ್ಪಾಡಿಯವರು ವಕ್ಫ್ ಆಸ್ತಿ ಉಳಿಸುವ ನೈಜ ಕಾಳಜಿಯೊಂದಿಗೆ ವರದಿ ಸಿದ್ಧಪಡಿಸಿ ಕೊಟ್ಟಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸಿ ದೇವರ ಕೆಲಸವನ್ನು ಎಲ್ಲ ರಾಜಕೀಯ ಪಕ್ಷಗಳು ಪ್ರಾಮಾಣಿಕವಾಗಿ ಮಾಡಬೇಕು. ಮಾಣಿಪ್ಪಾಡಿ ವರದಿಯಲ್ಲಿ ದಾಖಲಾದ ಮಾಹಿತಿ ಮತ್ತು ಕರ್ನಾಟಕ ಸರಕಾರದಲ್ಲಿ ಲಭ್ಯ ಇರುವ ದಾಖಲೆಗಳನ್ನು ಪರಿಶೀಲಿಸಿ ಭೂ ಕಬಳಿಕೆಯ ಸತ್ಯಾಸತ್ಯತೆ ಬಯಲಿಗೆ ಬರಬೇಕು.
2012ರಲ್ಲಿ ಬಿಜೆಪಿ ಸರಕಾರ ಮತ್ತು ಆ ಪಕ್ಷದ ನಾಯಕರು ಅನ್ವರ್ ಮಣಿಪ್ಪಾಡಿ ವರದಿಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದ್ದೇಶಿಸಿದ್ದರೆ 27,000 ಎಕರೆ ಜಮೀನು ವಕ್ಫ್ ಪಾಲಾಗುತ್ತಿತ್ತು. ಬಿಜೆಪಿ ನಾಯಕರು ಆಗ ಹೇಡಿಯಂತೆ ವರ್ತಿಸಿ ಈಗ ರೈತರ ಪರ ಮೊಸಳೆ ಕಣ್ಣೀರು ಸುರಿಸುತ್ತಿರುವುದು ಅತ್ಯಂತ ನಾಚಿಕೆಗೇಡಿನ ಸಂಗತಿ. ರೈತರ ಜಮೀನನ್ನು ವಕ್ಫ್ ವಶಪಡಿಸಿಕೊಂಡಿದ್ದರೆ ಅದೂ ತಪ್ಪೇ. ರೈತರ ಜಮೀನು ರೈತರಿಗೆ ಸೇರಬೇಕು. ವಕ್ಫ್ ಆಸ್ತಿ ಕರ್ನಾಟಕ ವಕ್ಫ್ ಬೋರ್ಡ್ ಕಬ್ಜಾಕ್ಕೆ ಬರುವಂತೆ ಕರ್ನಾಟಕ ಸರಕಾರ ನೋಡಿಕೊಳ್ಳಬೇಕು.
ಕರ್ನಾಟಕದಲ್ಲಿ ಬಿಜೆಪಿಗೆ ಸಮರ್ಥ ನಾಯಕತ್ವ ಇಲ್ಲ. ಮೇಲಾಗಿ ಅದು ಒಡೆದ ಮನೆಯಾಗಿದೆ. ಹಿಂದೂ-ಮುಸ್ಲಿಮ್ ಮತ ವಿಭಜನೆ ಮಾಡಲು ರೂಪಿಸಿದ ಎಲ್ಲ ಮತೀಯ ತಂತ್ರಗಳು ವಿಫಲವಾಗಿವೆ. ಈಗ ಉಳಿದಿದ್ದು ವಕ್ಫ್ ಬೋರ್ಡ್, ರೈತರ ಜಮೀನನ್ನು ಕಿತ್ತುಕೊಂಡಿದೆ ಎಂದು ಸುಳ್ಳು ಪ್ರಚಾರ ಮಾಡುವುದು. ಬಿಜೆಪಿಯ ಈ ದುಷ್ಟ ಅಸ್ತ್ರವನ್ನು ವಿಫಲಗೊಳಿಸುವುದು ಕರ್ನಾಟಕದ ಪ್ರಜ್ಞಾವಂತರ ಹೊಣೆಗಾರಿಕೆಯಾಗಿದೆ. ಬಿಜೆಪಿಯ ಕಪೋಲಕಲ್ಪಿತ ಕತೆಯಲ್ಲಿ ತುಸು ಸತ್ಯ ಇದ್ದರೂ ರೈತರ ಹಿತ ದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕು. ಹಾಗೆಯೇ ವಕ್ಫ್ ಆಸ್ತಿಯನ್ನು ಭೂ ಮಾಫಿಯಾದವರು ಮತ್ತು ಪುಢಾರಿಗಳು ವಶಪಡಿಸಿಕೊಂಡಿದ್ದರೆ ಅದು ಮತ್ತೆ ವಕ್ಫ್‌ಗೆ ಸೇರುವಂತೆ ಮಾಡಬೇಕು.
ಉತ್ತರ ಕರ್ನಾಟಕದಲ್ಲಿ ರೈತ ಸಮುದಾಯ ಮತ್ತು ಮುಸ್ಲಿಮ್ ಬಂಧುಗಳು ಅಣ್ಣ ತಮ್ಮಂದಿರಂತೆ ಬದುಕುತ್ತಿದ್ದಾರೆ. ಹುಳಿ ಹಿಂಡುವ ಮನೆ ಮುರುಕರ ಅಪ ಪ್ರಚಾರ ನಿಜವಾಗುವ ಮುನ್ನ ಕರ್ನಾಟಕ ಸರಕಾರ ಹೊಣೆಗಾರಿಕೆಯಿಂದ ನಡೆದುಕೊಳ್ಳಬೇಕು.
ರೈತರ ಆಸ್ತಿ ಬೆವರಿನ ಸಂಕೇತ, ಅವರಿಗೆ ಅನ್ಯಾಯ ಆಗಬಾರದು. ವಕ್ಫ್ ಆಸ್ತಿ ದೇವರ ಹೆಸರಿನಲ್ಲಿ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ವಿನಿಯೋಗ ಆಗಬೇಕು. ವಕ್ಫ್ ಬೋರ್ಡ್‌ಗೆ ಸೇರಿದ ಇಪ್ಪತ್ತೇಳು ಸಾವಿರ ಎಕರೆ ಯಾರೇ ಕಬಳಿಸಿದ್ದರೂ ಅದು ಮತ್ತೆ ದೇವರ ಕೆಲಸಕ್ಕೆ ಸಲ್ಲುವಂತಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲ ಬಗೆಯ ಅಧಿಕಾರ ಅನುಭವಿಸಿದ್ದಾರೆ. ಕೇವಲ ಒಳ್ಳೆಯ ಮತ್ತು ನ್ಯಾಯದ ಕೆಲಸ ಮಾಡುವ ಹಂತ ತಲುಪಿದ್ದಾರೆ. ಬಿಜೆಪಿಯವರ ಹಸಿ ಸುಳ್ಳುಗಳಿಗೆ ಬಾಯಿ ಮುಚ್ಚಿಸುವ ಸರಕಾರಿ ದಾಖಲೆಗಳನ್ನು ಬಹಿರಂಗ ಪಡಿಸಬೇಕು. ಬಿಜೆಪಿಯವರ ಕೋಮುವಾದಿ ರಾಜಕಾರಣದ ಕೊನೆಯ ಪ್ರಯತ್ನ ವಿಫಲಗೊಳ್ಳುತ್ತದೆ. ಅನ್ವರ್ ಮಾಣಿಪ್ಪಾಡಿ ವರದಿಯ ಸತ್ಯಾಸತ್ಯತೆಯನ್ನು ತನಿಖೆ ಮಾಡಿ ವಕ್ಫ್ ಆಸ್ತಿ ಕಬಳಿಕೆ ಆಗಿದ್ದರೆ ಅದು ವಾಪಸು ಬರುವಂತೆ ಮಾಡಬೇಕು. ಈ ಮೂಲಕ ಧರ್ಮಾಧಾರಿತ ರಾಜಕಾರಣದ ಪ್ರಯೋಗ ಕೊನೆಗೊಳ್ಳುತ್ತದೆ. ದೇವರ ಆಸ್ತಿ ಮತ್ತೆ ವಕ್ಫ್‌ಗೆ ಸೇರಿ ಬಡವರ ಕಲ್ಯಾಣ ಯೋಜನೆಗಳು ಮತ್ತಷ್ಟು ವೇಗದಲ್ಲಿ ನಡೆಸಲು ಬಲ ನೀಡಿದಂತಾಗುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತ್ರ ಈ ಕೆಲಸ ಮಾಡಬಲ್ಲರು.