ಸರಕಾರಿ ಉತ್ಸವಗಳಲ್ಲಿ ಪ್ರತಿಭಾವಂತ ಕಲಾವಿದರಿಗೇಕೆ ಅವಕಾಶ ಸಿಗುತ್ತಿಲ್ಲ?
ಮೈಸೂರು ಸಂಸ್ಥಾನದ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿಯ ಹರಿಕಾರರು, ಸಾಮಾಜಿಕ ನ್ಯಾಯದ ಪ್ರವರ್ತಕರು. ಅಷ್ಟು ಮಾತ್ರವಲ್ಲ; ಸಾಹಿತ್ಯ, ಸಂಸ್ಕೃತಿ, ಸಂಗೀತ ಮತ್ತು ಲಲಿತಕಲೆಗಳ ಆರಾಧಕರು. ಕುಸ್ತಿ ಸೇರಿದಂತೆ ಹಲವು ಕ್ರೀಡೆಗಳ ಪೋಷಕರು. ಕರ್ನಾಟಕದಲ್ಲಿ ಮೊದಲ ಬಾರಿಗೆ ಶಾಸಕರು, ಸಂಸದರು, ಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಳಜಿ-ಕಕ್ಕುಲಾತಿ, ಸಂಗೀತ, ಸಾಹಿತ್ಯ ಮತ್ತು ವಿವಿಧ ಲಲಿತ ಕಲೆಗಳ ಬಗೆಗೆ ಅವರಿಗಿದ್ದ ಆಸಕ್ತಿ-ಅಭಿರುಚಿಯ ಪರಿಚಯ ಮಾಡಿಸಿ ಕೊಡುವುದು ಅಗತ್ಯವಿದೆ. ಕರ್ನಾಟಕಕ್ಕೆ ಬರುವ ಹೊರರಾಜ್ಯದ ಐಎಎಸ್ ಅಧಿಕಾರಿಗಳಿಗೆ, ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಎಲ್ಲಾ ಬಗೆಯ ಸಿಬ್ಬಂದಿ ವರ್ಗದವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತ ವೈಖರಿ, ಕಲಾಸಕ್ತಿಯ ಕುರಿತು ಮನನ ಮಾಡಿಸಬೇಕಾಗಿದೆ. ಅವರು ಅತ್ಯುತ್ತಮ ಆಡಳಿತಗಾರ ಮಾತ್ರವಲ್ಲ; ಕೊಳಲು, ವಯಾಲಿನ್, ಸ್ಯಾಕ್ಸೊಫೋನ್, ಪಿಯಾನೋ, ಮೃದಂಗಂ, ನಾದಸ್ವರ, ಸಿತಾರ್ ಮತ್ತು ವೀಣೆ ಸೇರಿದಂತೆ ಎಂಟು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲಿ ಪರಿಣತಿ ಪಡೆದಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆರಂಭಿಸಿದ ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವ ಇಂದಿಗೂ ಮುಂದುವರಿದಿದೆ. ಮಾತ್ರವಲ್ಲ ಹಂಪಿ ಉತ್ಸವ, ಕಿತ್ತೂರು ಉತ್ಸವ, ಲಕ್ಕುಂಡಿ ಉತ್ಸವ, ಕರಾವಳಿ ಉತ್ಸವ, ರನ್ನ ಉತ್ಸವ, ನವರಸಪುರ ಉತ್ಸವಗಳಿಗೆ ಪ್ರೇರಣೆ ಮತ್ತು ಮಾದರಿಯಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕರ್ನಾಟಕ ಸಂಗೀತದ ಗಾಯನ ಪ್ರಕಾರ ಸೇರಿದಂತೆ ಎಲ್ಲಾ ಬಗೆಯ ಸಂಗೀತ ವಾದ್ಯಗಳಿಗೆ ಸಮಾನ ಅವಕಾಶ ನೀಡುತ್ತಿದ್ದರು. ರಂಗಭೂಮಿಯ ಬೆಳವಣಿಗೆಯಲ್ಲಿ ಅವರ ಪಾತ್ರ ಹಿರಿದಾಗಿದೆ. ಕರ್ನಾಟಕ ಸಂಗೀತಕ್ಕೆ ಕೊಡುವಷ್ಟು ಗೌರವ, ಅವಕಾಶ ಹಿಂದೂಸ್ತಾನಿ ಸಂಗೀತಕ್ಕೂ ಕೊಡುತ್ತಿದ್ದರು. ಗ್ವಾಲಿಯರ್, ಕೊಲ್ಲಾಪುರ ಸಂಸ್ಥಾನಗಳ ದಿಗ್ಗಜ ಕಲಾವಿದರನ್ನು ಕರೆಸಿ, ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು. ಮೈಸೂರು ದಸರಾ ಉತ್ಸವದ ಭಾಗವಾಗಿರುವ ಸಾಂಸ್ಕೃತಿಕ ಕಾರ್ಯಕ್ರಮ ಉತ್ತರ-ದಕ್ಷಿಣ ಭೇದವಿಲ್ಲದೆ ದಿಗ್ಗಜ ಸಂಗೀತಗಾರರಿಂದ ತುಂಬಿ ತುಳುಕುತ್ತಿತ್ತು. ಸ್ವಾತಂತ್ರ್ಯ ಸಿಕ್ಕ ಮೇಲೂ ಮೆಸೂರು ದಸರಾ ಉತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಂತರ ಬಂದ ಎಲ್ಲಾ ಸರಕಾರಗಳು ಮುಂದುವರಿಸಿವೆ. ಕಾಲ ಬದಲಾದಂತೆ ಎಲ್ಲೆಡೆ ಗುಣಮಟ್ಟದ ಕೊರತೆ ಎದ್ದು ಕಾಣುತ್ತಿದೆ. ಸಂಗೀತಗಾರರ, ಕಲಾವಿದರ ಗುಣಮಟ್ಟ ಹೆಚ್ಚುತ್ತಿದೆ. ಆದರೆ ಗುರುತಿಸುವವರು, ಗೌರವಿಸುವವರ ಗುಣಮಟ್ಟ ಕುಸಿಯುತ್ತಿದೆ.
ಕರ್ನಾಟಕ; ಸಾಹಿತ್ಯ, ಸಂಗೀತ, ಲಲಿತಕಲೆಗಳಲ್ಲಿ ವಿಶ್ವದರ್ಜೆಯ ಗುಣಮಟ್ಟ ಉಳಿಸಿಕೊಂಡು ಮುನ್ನಡೆಯುತ್ತಿದೆ. ಕರ್ನಾಟಕ ಸಂಗೀತದ ಪಿತಾಮಹ ಪುರಂದರದಾಸರು ಕರ್ನಾಟಕದವರು. ಅನೇಕ ಕೀರ್ತನೆಗಳನ್ನು ರಚಿಸಿ ದಾಸ ಪರಂಪರೆಯನ್ನು ಉಜ್ವಲವಾಗಿ ಬೆಳಗಿಸಿದವರು. ಈ ಹೊತ್ತು ಕರ್ನಾಟಕ ಸಂಗೀತ ವಿಶ್ವವಿಖ್ಯಾತವಾಗಿದೆ. ದಕ್ಷಿಣ ಭಾರತದ ಉದ್ದಗಲಕ್ಕೂ ವ್ಯಾಪಿಸಿದೆ. ಗಾಯನ ಮಾತ್ರವಲ್ಲ; ವಾದನ ಕ್ಷೇತ್ರದಲ್ಲೂ ಅಸಂಖ್ಯಾತ ಕಲಾವಿದರು ಅತ್ಯುತ್ತಮ ಸಾಧನೆಗೈಯುತ್ತಿದ್ದಾರೆ. ಕರ್ನಾಟಕ ಸಂಗೀತ ಅದೆಷ್ಟು ಶ್ರೀಮಂತ ಮತ್ತು ವೈವಿಧ್ಯಮಯವಾಗಿದೆ ಎಂದರೆ ಅದನ್ನು ಆಲಿಸಲು ಮತ್ತು ಅನುಭೂತಿ ಪಡೆಯಲು ಒಂದು ಜನ್ಮ ಸಾಲದು. ಈ ಹೊತ್ತಿಗೂ ಕರ್ನಾಟಕ ಸಂಗೀತದಲ್ಲಿ ತಪಸ್ಸಿನಂತೆ ಸಾಧನೆಗಯ್ಯುವ ಅಸಂಖ್ಯಾತ ಕಲಾವಿದರು ನಮ್ಮ ನಡುವೆ ಇದ್ದಾರೆ. ಕರ್ನಾಟಕ ಸಂಗೀತದ ವಾದ್ಯ ಪ್ರಕಾರಗಳು ಹೊಸ ಪ್ರಯೋಗದೊಂದಿಗೆ ಜನಪ್ರಿಯವಾಗತೊಡಗಿವೆ.
ಮೈಸೂರು ಸಂಸ್ಥಾನದ ದೊರೆಗಳು ಕರ್ನಾಟಕ ಸಂಗೀತ ಮತ್ತು ಕಲಾವಿದರ ಆಶ್ರಯದಾತರಾಗಿದ್ದರು. ಕರ್ನಾಟಕ ಸಂಗೀತ ಈ ಹೊತ್ತು ವಿಶ್ವವಿಖ್ಯಾತಿ ಗಳಿಸಲು ಮತ್ತು ದಕ್ಷಿಣ ಭಾರತದ ಮನೆಮನೆಗಳಲ್ಲಿ ಅನುರಣಿಸುವಂತಾಗಿದ್ದು ಮೈಸೂರು ಅರಸರ ಅತ್ಯಾಸಕ್ತಿಯಿಂದ.
ಹಾಗೆ ನೋಡಿದರೆ; ಕರ್ನಾಟಕದಲ್ಲಿ ನೂರು ವರ್ಷಗಳ ಹಿಂದೆ ಹಿಂದೂಸ್ತಾನಿ ಸಂಗೀತ ಅಷ್ಟಾಗಿ ಬೆಳೆದಿರಲಿಲ್ಲ. ಕಲಿಯುವವರ, ಕಲಿಸುವವರ ಮತ್ತು ಕೇಳುವವರ ಕೊರತೆ ಸಾಕಷ್ಟಿತ್ತು. ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತ ಹೆಮ್ಮರವಾಗಿ ಬೆಳೆದು ನಿಲ್ಲಲು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಪ್ರಮುಖ ಕಾರಣ. ಮೈಸೂರು ಅರಮನೆಯಲ್ಲಿ ಸಂಗೀತ ಕಚೇರಿ ನಡೆಸಲು ಉತ್ತರ ಭಾರತದಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಬೆಳಗಿದ ದಿಗ್ಗಜ ಕಲಾವಿದರು ಆಗಮಿಸುತ್ತಿದ್ದರು. ಅವರು ಬಂದು ಹೋಗುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಸಾಂಸ್ಕೃತಿಕ ನಗರಿ ಧಾರವಾಡದೊಂದಿಗೆ ಸಂಪರ್ಕ ಬೆಳೆಯಿತು. ಹೀಗೆ ಬೆಳೆದ ಸಂಪರ್ಕದಲ್ಲಿ ಅಬ್ದುಲ್ ಕರೀಂಖಾನರು ಕುಂದಗೋಳದ ಸವಾಯಿ ಗಂಧರ್ವರಿಗೆ ಸಂಗೀತ ದೀಕ್ಷೆ ನೀಡಿದರು. ಕಿರಾಣಾ ಘರಾಣೆಯ ದಿಗ್ಗಜ ಉಸ್ತಾದ್ ಅಬ್ದುಲ್ ಕರೀಂಖಾನ್‌ರವರು ಕಲಿಸಿದ ಸಂಗೀತ ಪರಂಪರೆ ಭಾರತ ರತ್ನ ಭೀಮಸೇನ್ ಜೋಶಿ, ವಿದುಷಿ ಡಾ. ಗಂಗೂಬಾಯಿ ಹಾನಗಲ್ ಮೂಲಕ ಹೆಮ್ಮರವಾಗಿ ಬೆಳೆದಿದೆ. ಸಿತಾರ್ ರತ್ನ ಉಸ್ತಾದ್ ರಹಮತ್‌ಖಾನ್ ಸಾಹೇಬರು ಧಾರವಾಡದಲ್ಲೇ ನೆಲೆನಿಲ್ಲುವ ಮೂಲಕ ಹಿಂದೂಸ್ತಾನಿ ಸಂಗೀತದ ಬೇರು- ಬಿಳಲುಗಳು ಮತ್ತಷ್ಟು ವಿಸ್ತರಿಸಿದವು. ಈ ಹೊತ್ತು ಕರ್ನಾಟಕದಲ್ಲಿ ಹಿಂದೂಸ್ತಾನಿ ಸಂಗೀತವು ಕರ್ನಾಟಕ ಸಂಗೀತದಷ್ಟೇ ವ್ಯಾಪಕವಾಗಿ ಹರಡಿದೆ. ಭಾರತದ 10 ಜನ ವಿಶ್ವವಿಖ್ಯಾತ ಹಿಂದೂಸ್ತಾನಿ ಸಂಗೀತಗಾರರಲ್ಲಿ ಕರ್ನಾಟಕದ ಐದು ಜನ ಆ ಪಟ್ಟಿಗೆ ಸೇರುತ್ತಾರೆ ಭಾರತ ರತ್ನ ಭೀಮಸೇನ್ ಜೋಷಿ, ವಿದುಷಿ ಗಂಗೂಬಾಯಿ ಹಾನಗಲ್, ಪಂ. ಡಾ. ಮಲ್ಲಿಕಾರ್ಜುನ ಮನ್ಸೂರ, ಪಂ. ಬಸವರಾಜ ರಾಜಗುರು, ಪಂ. ಕುಮಾರ ಗಂಧರ್ವ ಅವರು ಭಾರತದ 10 ಜನ ಶ್ರೇಷ್ಠ ಸಂಗೀತಗಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
ಹಿಂದೂಸ್ತಾನಿ ಸಂಗೀತ ಪರಂಪರೆ; ಕರ್ನಾಟಕ ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ ಅನುರಣಿಸುತ್ತಿದೆ. ಈ ಪರಂಪರೆ ಇಷ್ಟು ವ್ಯಾಪಕವಾಗಿ ಬೆಳೆಯಲು ಹಾನಗಲ್ ಕುಮಾರ ಸ್ವಾಮಿಗಳು, ಪಂಚಾಕ್ಷರಿ ಗವಾಯಿಗಳು, ಪಂ. ಪುಟ್ಟರಾಜ ಗವಾಯಿಗಳು, ಪಂ. ಪಂಚಾಕ್ಷರಿ ಸ್ವಾಮಿ ಮತ್ತಿಗಟ್ಟಿ, ಪಂ. ಸಿದ್ದರಾಮ ಜಂಬಲದಿನ್ನಿಯವರು ಪ್ರಮುಖ ಕಾರಣ. ಗಾಯನ, ವಾದನ, ನರ್ತನ ಪ್ರಕಾರಗಳಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆ ಸಮೃದ್ಧ ಬೆಳೆ ತೆಗೆದಿದೆ. ಹಿಂದೂಸ್ತಾನಿ ಸಂಗೀತದ ಬಹುಪಾಲು ವಾದ್ಯಗಳನ್ನು ನುಡಿಸುವ ಕಲಾವಿದರು ಕರ್ನಾಟಕದಲ್ಲಿ ಸಿಗುತ್ತಾರೆ. ಖ್ಯಾಲ್ ಗಾಯನದ ದಿಗ್ಗಜರು ನಮ್ಮಲ್ಲಿ ಅಸಂಖ್ಯಾತ ಸಂಖ್ಯೆಯಲ್ಲಿದ್ದಾರೆ. ಗಝಲ್‌ಸೂಫಿ ಗಾಯನದ ಸಾಧಕರು ಸಾಕಷ್ಟಿದ್ದಾರೆ. ವಚನ, ದಾಸ ಸಾಹಿತ್ಯ, ತತ್ವಪದಗಳನ್ನು ಹಿಂದೂಸ್ತಾನಿ ಗಾಯನ ಶೈಲಿಯಲ್ಲಿ ಅದ್ಭುತವಾಗಿ ಹಾಡುವ ಪ್ರತಿಭಾವಂತರಿಗೆ ನಮ್ಮಲ್ಲಿ ಕೊರತೆ ಇಲ್ಲ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಸಾಹೇಬರು ಭಾರತ ರತ್ನಕ್ಕೆ ಭಾಜನರಾದವರು. ಅವರ ಶಹನಾಯ್‌ವಾದನ ಪರಂಪರೆಯನ್ನು ಕರ್ನಾಟಕ ತಮಿಳುನಾಡಿನಲ್ಲಿ ಡಾ. ಬಾಳೇಶ ಭಜಂತ್ರಿಯವರು ಬೆಳಗಿಸುತ್ತಿದ್ದಾರೆ.
ಪ್ರತಿಭಾವಂತರ ನೆಲೆವೀಡಾಗಿರುವ ಕರ್ನಾಟಕದಲ್ಲಿ ಕಲಾವಿದರನ್ನು ಗುರುತಿಸುವ, ಗೌರವಿಸುವವರ ಕೊರತೆ ಇದೆ. ಅದರಲ್ಲೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ವಿಶೇಷವಾಗಿ ಜಿಲ್ಲಾಧಿಕಾರಿಗಳು, ಉಸ್ತುವಾರಿ ಮಂತ್ರಿಗಳ ಅಜ್ಞಾನ ಮತ್ತು ಅನಾಸಕ್ತಿಯಿಂದ ಕನ್ನಡದ ಶ್ರೇಷ್ಠ ಕಲಾವಿದರ ಕಡೆಗಣನೆಯಾಗುತ್ತಿದೆ. ಕಲಾವಿದರನ್ನು ಸಮಾನವಾಗಿ ಗೌರವಿಸುವ ವ್ಯವಸ್ಥೆಯೇ ಕರ್ನಾಟಕದಲ್ಲಿ ಇಲ್ಲ. ಬಹುಪಾಲು ಅಧಿಕಾರಿಗಳು ಸಂಗೀತವೆಂದರೆ; ಸಿನೆಮಾ ಸಂಗೀತವೆಂದು, ಸಾಹಿತ್ಯವೆಂದರೆ ಹಾಸ್ಯವೆಂದು ಭಾವಿಸಿದ್ದಾರೆ. ನೃತ್ಯವೆಂದರೆ ಅರಬೆತ್ತಲೆ ಕುಣಿತವೆಂದೇ ಪರಿಗಣಿಸಿದ್ದಾರೆ. ಅಸಂಖ್ಯಾತ ಜಾನಪದ ಕಲೆಗಳನ್ನು ಮೂರನೇ ದರ್ಜೆಯ ಕಲೆಗಳೆಂದು ತೀರ್ಮಾನಿಸಿದ್ದಾರೆ. ಸರಕಾರ ಯಾವ ಪಕ್ಷದ್ದೇ ಇರಲಿ; ಮೈಸೂರು ದಸರಾ ಉತ್ಸವ, ಹಂಪಿ ಉತ್ಸವ ಸೇರಿದಂತೆ ಎಲ್ಲಾ ಉತ್ಸವಗಳಲ್ಲಿ ಕೆಲವರು ಮುಖ್ಯ ವೇದಿಕೆಗಳಲ್ಲೇ ವಿಜೃಂಭಿಸುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಸ್ಟಾರ್ ಹೊಟೇಲ್‌ಗಳಲ್ಲಿ ತಂಗುತ್ತಾರೆ. ತಳ ಸಮುದಾಯದ ಕಲಾವಿದರು ಎಷ್ಟೇ ಪ್ರತಿಭಾವಂತರಾಗಿದ್ದರೂ ಮುಖ್ಯ ವೇದಿಕೆ ಸಿಗುವುದಿಲ್ಲ. ಸಿಕ್ಕರೂ ಅವರಿಗೆ ಹದಿನೈದು ನಿಮಿಷಕ್ಕೂ ಹೆಚ್ಚು ಸಮಯಾವಕಾಶ ನೀಡುವುದಿಲ್ಲ.
ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ರಾಜ್ಯ ವಸತಿ ಸಚಿವರೂ ಆಗಿರುವ ಸನ್ಮಾನ್ಯ ಝಮೀರ್ ಅಹ್ಮದ್ ಸಾಹೇಬರಿಗೆ ಕರ್ನಾಟಕ ಸಂಗೀತ ಮತ್ತು ಹಿಂದೂಸ್ತಾನಿ ಸಂಗೀತದ ನಡುವಿನ ವ್ಯತ್ಯಾಸ ಗೊತ್ತಿಲ್ಲ ಎಂದರೂ ಕ್ಷಮಿಸಬಹುದು. ಆದರೆ ಕಾಂಗ್ರೆಸ್-ಬಿಜೆಪಿ ನಡುವಿನ ವ್ಯತ್ಯಾಸವಾದರೂ ತಿಳಿದಿರಬೇಕಲ್ಲ. 2019ರಿಂದ 2023ರವರೆಗೆ ಕರ್ನಾಟಕದಲ್ಲಿ ಆರೆಸ್ಸೆಸ್ ಸಿದ್ಧಾಂತ ಒಪ್ಪಿಕೊಂಡ ಬಿಜೆಪಿ ಸರಕಾರ ಆಡಳಿತ ನಡೆಸುತ್ತಿತ್ತು. ಆ ಸರಕಾರ ಎಲ್ಲಾ ಉತ್ಸವಗಳ ಕಲಾವಿದರ ಆಯ್ಕೆಯಲ್ಲಿ ‘ಸಂಘ ಪರಿವಾರ ಮತ್ತು ಬಿಜೆಪಿಗೆ ಹತ್ತಿರದವರು’ ಎಂಬ ಮಾನದಂಡ ಅನುಸರಿಸಿ ಅವಕಾಶ ನೀಡುತ್ತಿತ್ತು. ಅವರ ಆ ಮಾನದಂಡದಿಂದ ಅಸಂಖ್ಯಾತ ಪ್ರತಿಭಾವಂತ ಕಲಾವಿದರು, ಜಾತ್ಯತೀತ ತತ್ವ ಪ್ರತಿಪಾದಿಸುವ ಗಾಯಕ/ಗಾಯಕಿಯರು, ಬಿಜೆಪಿ-ಸಂಘ ಪರಿವಾರದ ಕಾರ್ಯಕರ್ತರು ಒಪ್ಪದ ಸಾಹಿತ್ಯ ಕಲಾವಿದರನ್ನು ಅಕಾಡಮಿ-ಪ್ರಾಧಿಕಾರ ಹಾಗೂ ಸರಕಾರಿ ಉತ್ಸವಗಳಿಂದ ದೂರ ಇಟ್ಟಿದ್ದರು. ಆ ಮಾತಿಗೆ ಜ್ವಲಂತ ಉದಾಹರಣೆಯೆಂದರೆ; ಹಿರಿಯ ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಅವರು. ಪಿಚ್ಚಳ್ಳಿಯವರು ದಲಿತ ಚಳವಳಿಯ ಮೂಲಕ ಹೊರಹೊಮ್ಮಿದ ಪ್ರತಿಭಾವಂತ ಜಾನಪದ ಗಾಯಕ. ಒಂದು ಅವಧಿಗೆ ಕರ್ನಾಟಕ ಜಾನಪದ ಅಕಾಡಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ ಸೈ ಎನಿಸಿಕೊಂಡವರು. ಸಮಾನತೆ ಮತ್ತು ಜಾತ್ಯತೀತ ತತ್ವಗಳಲ್ಲಿ ನಂಬಿಕೆ ಇರಿಸಿ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಮಾಲೆ ಕಣ್ಣಿನ ಸರಕಾರ ಕೇಂದ್ರದಲ್ಲಿ ಇರದಿದ್ದರೆ; ಪಿಚ್ಚಳ್ಳಿ ಶ್ರೀನಿವಾಸ್ ಅವರಿಗೆ ಎಂದೋ ಪದ್ಮಶ್ರೀ ಗೌರವ ಸಿಗಬೇಕಿತ್ತು. ಪದ್ಮಶ್ರೀ ನೀಡುವುದು ಒತ್ತಟ್ಟಿಗಿರಲಿ; ಅವರಿಗೆ ಸತತ ನಾಲ್ಕು ವರ್ಷ ಎಲ್ಲಾ ಉತ್ಸವಗಳಿಂದ (ಸರಕಾರಿ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಟುವಟಿಕೆಗಳಿಂದ ದೂರ ಇರಿಸಲಾಗಿದೆ.
ನಾಲ್ಕು ವರ್ಷದ ಬಿಜೆಪಿ ಆಡಳಿತಾವಧಿಯಲ್ಲಿ ನಿರಂತರ ಅವಕಾಶ ಗಿಟ್ಟಿಸಿಕೊಂಡವರು ಅನನ್ಯ ಭಟ್, ಅನುರಾಧಾ ಭಟ್, ವಿಜಯ ಪ್ರಕಾಶ್, ಪ್ರವೀಣ್ ಗೋಡ್ಕಿಂಡಿ ಸೇರಿದಂತೆ ಹಲವಾರು ಜನ ಸಂಘಪರಿವಾರಕ್ಕೆ ಹತ್ತಿರ ಇರುವ ಕಲಾವಿದರು. ಗಂಗಾವತಿ ಪ್ರಾಣೇಶ ಅವರ ಹಾಸ್ಯವೆಂದರೆ ಬಿಜೆಪಿ ಸರಕಾರಕ್ಕೆ ಅಚ್ಚುಮೆಚ್ಚು. ಖ್ಯಾತ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ ಅಸಂಖ್ಯಾತ ದಲಿತ-ಶೂದ್ರ ಕಲಾವಿದರನ್ನು ಸೈದ್ಧಾಂತಿಕ ಕಾರಣಕ್ಕೆ ದೂರವಿಟ್ಟಿದ್ದರು. ದುರಂತ ನೋಡಿ; ಸನ್ಮಾನ್ಯ ಝಮೀರ್ ಅಹ್ಮದ್ ಸಾಹೇಬರ ಉಸ್ತುವಾರಿಯಲ್ಲಿ ಇತ್ತೀಚೆಗೆ (ಫೆಬ್ರವರಿ 2-3-4) ನಡೆದ ಹಂಪಿ ಉತ್ಸವದಲ್ಲೂ ಪಿಚ್ಚಳ್ಳಿ ಶ್ರೀನಿವಾಸ್ ಸೇರಿದಂತೆ ಹಲವಾರು ಜನ ಪ್ರಗತಿಪರ ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡಿಲ್ಲ. ಮೂರು ದಿನ ನಡೆದ ಹಂಪಿ ಉತ್ಸವದಲ್ಲೂ ಜಾತಿ ಶ್ರೇಣೀಕರಣ ಎದ್ದು ಕಾಣುತ್ತಿತ್ತು. ಮುಖ್ಯ ವೇದಿಕೆಯಾದ ಗಾಯತ್ರಿ ಪೀಠದಲ್ಲಿ ಬಿಜೆಪಿಗರ ಕಾಂತಾರ ತಂಡ, ಶ್ರೀಮತಿ ಅನುರಾಧಾ ಭಟ್, ಪ್ರವೀಣ್ ಗೋಡ್ಕಿಂಡಿ, ಹಾಡಿದ್ದೇ ಹಾಡುವ ಕಿಸಬಾಯಿದಾಸ ವಿಜಯಪ್ರಕಾಶ್ ತಂಡಗಳು ಮಿಂಚಿವೆ. ಇನ್ನುಳಿದಂತೆ ಕೋಲ್ಕತಾದ ಗೋಲ್ಡನ್ ಗರ್ಲ್ಸ್ ತಂಡದ ಮೂರು ಇವೆಂಟ್‌ಗಳು ಅವಕಾಶ ಪಡೆದಿವೆ. ತಾಸಾನುಗಟ್ಟಲೇ.
ಇನ್ನುಳಿದ ಮೂರು ವೇದಿಕೆಗಳಲ್ಲಿ ಸ್ಥಳೀಯ ಕಲಾವಿದರ ಲೆಕ್ಕದಲ್ಲಿ ಕಡಿಮೆ ಸಮಯಾವಕಾಶ ಮತ್ತು ಕಡಿಮೆ ಸಂಭಾವನೆ ನೀಡಿ ಗಾಂಧಿ ಕ್ಲಾಸ್ ಮಾಡಿದ್ದಾರೆ ಮುಖ್ಯ ವೇದಿಕೆಯೆಂದರೆ; ಬೆಂಗಳೂರು ಕಲಾವಿದರಿಗೆ ಮೀಸಲು. ಪದ್ಮಶ್ರೀ ವಿಜೇತ ಶಹನಾಯ್ ಕಲಾವಿದ ಬಾಳೇಶ ಭಜಂತ್ರಿಯವರಿಗೆ 15 ನಿಮಿಷ ಅವಧಿಯ ಕಾರ್ಯಕ್ರಮ ನೀಡಿದ್ದಾರೆ. ಸ್ವರ ಹಚ್ಚಲು ಐದು ನಿಮಿಷ ಬೇಕು. ಸಂಗೀತದ ಗಂಧ ಗಾಳಿ ಇಲ್ಲದವರು ಮಾತ್ರ ಇಂತಹ ಮೂರ್ಖ ಪ್ರಯೋಗ ಮಾಡುತ್ತಾರೆ. ಝಮೀರ್ ಸಾಹೇಬರಿಗೆ ಸಂಘ ಪರಿವಾರದ ಕಲಾವಿದರು, ಸಿನೆಮಾದವರು ಮತ್ತು ಗಂಗಾವತಿ ಪ್ರಾಣೇಶ್ ಮಹಾನ್ ಸಾಧಕರು ಅನಿಸಿದ್ದಾರೆ. ಮಾರೆಪ್ಪ ಮಾರೆಪ್ಪ ದಾಸರಿಗೆ ಇತ್ತೀಚೆಗಷ್ಟೇ ಕರ್ನಾಟಕ ಸರಕಾರ 5 ಲಕ್ಷದ ಪ್ರಶಸ್ತಿ ನೀಡಿ ಗೌರವಿಸಿದೆ. ಅವರ ಸಾಧನೆ ಎದುರು ಅನುರಾಧ ಭಟ್, ವಿಜಯ ಪ್ರಕಾಶ್, ಗೋಡ್ಕಿಂಡಿ ಏನೇನೂ ಅಲ್ಲ. ಚೆನ್ನಾಗಿ ಗಿಮಿಕ್ ಮಾಡುತ್ತಾರೆ. ಗಿಮಿಕ್ ಮಾಡುವ ಕಲಾವಿದರನ್ನು ಮುಖ್ಯ ವೇದಿಕೆಯಲ್ಲಿ ಮೊೆಸಿ ಮಾರೆಪ್ಪ ಮಾರೆಪ್ಪ ದಾಸರಂಥ ಶ್ರೇಷ್ಠ ಕಲಾವಿದರಿಗೆ ಯಾವುದೋ ಮೂಲೆಯ ವೇದಿಕೆಯಲ್ಲಿ ಕೇವಲ 15 ನಿಮಿಷದ ಅವಧಿಗೆ ಹಾಡಲು ಹೇಳಿದ್ದಾರೆ.
ಒಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕೋಮುವಾದ, ಮತೀಯವಾದ ಹಿಮ್ಮೆಟ್ಟಿಸಲು ನಿರಂತರ ಹೆಣಗಾಡುತ್ತಿದ್ದಾರೆ. ರಾಜ್ಯದಲ್ಲಿ ನಡೆಸುವ ಎಲ್ಲಾ ಉತ್ಸವಗಳಲ್ಲಿ ಬಸವಾದಿ ಶರಣರ ವಚನಗಳನ್ನು, ದಾಸರ ಕೀರ್ತನೆಗಳನ್ನು, ಸೂಫಿ ತತ್ವ ಪದಗಳನ್ನು ಹಾಡಿಸಬೇಕು. ಸೋನು ನಿಗಮ್‌ರನ್ನು ಕರೆಸಿದ್ದರೂ ವಚನಗಳನ್ನು ಹಾಡಿಸಬೇಕು. ಭಾರತೀಯ ಸಂಗೀತ ಪರಂಪರೆ ಅತ್ಯುತ್ಕೃಷ್ಟವಾಗಿದೆ. ಮಾತ್ರವಲ್ಲ ವೈವಿಧ್ಯಮಯವಾಗಿದೆ. ಕರ್ನಾಟಕದಲ್ಲಿ ಹಲವಾರು ಶ್ರೇಷ್ಠ ಸಂಗೀತ ಕಲಾವಿದರಿದ್ದಾರೆ. ಅವರು ವಚನ ಸಾಹಿತ್ಯ, ದಾಸ ಸಾಹಿತ್ಯ, ಸೂಫಿ ತತ್ವಪದಗಳ ಗಾಯನದಲ್ಲಿ ಪರಿಣತಿ ಪಡೆದಿದ್ದಾರೆ. ಸಂಗೀತ ಕಲೆ ಒಂದು ಜಾತಿ, ಒಂದು ಧರ್ಮಕ್ಕೆ ಸೀಮಿತವಾಗಿ ಉಳಿದಿಲ್ಲ. ಡೊಳ್ಳು ಕುಣಿತ, ನಾದಸ್ವರ , ಕಹಳೆ ವಾದ್ಯ, ಸಮಾಳ, ನಂದಿಧ್ವಜ, ಮಂಗಳವಾದ್ಯ, ಚಂಡೆ ವಾದ್ಯ, ಸಿಂಗಾರಿ ಮೇಳ, ಕಂಸಾಳೆ, ಹಲಗೆವಾದನ, ತಮಟೆವಾದನ, ಸೋಮನ ಕುಣಿತ, ಪೂಜಾ ಕುಣಿತ ಸೇರಿದಂತೆ ಹಲವಾರು ಕಲಾ ಪ್ರಕಾರಗಳು ಮುನ್ನೆಲೆಗೆ ಬರಬೇಕು. ಸಾಮಾನ್ಯವಾಗಿ ಉತ್ಸವದ ಆರಂಭ ಶಹನಾಯ್ ವಾದನದ ಮೂಲಕ ಆಗುತ್ತದೆ. ಆದರೆ ಈ ಬಾರಿಯ ಹಂಪಿ ಉತ್ಸವ; ಡ್ರೀಮ್ಸ್ ಇವೆಂಟ್ ತಂಡದವರ ಬ್ಯಾಂಡ್ ಸಂಗೀತದ ಮೂಲಕ ಆರಂಭವಾಗಿದೆ. ಕಲಾವಿದರ ಆಯ್ಕೆಯಲ್ಲಿ ತಜ್ಞರ ತೀರ್ಮಾನ ಮುಖ್ಯವಾಗಬೇಕು. ಅಧಿಕಾರಿಗಳ ಧನದಾಹ, ಜಾತಿಪ್ರೇಮ ಹಿಂದೆ ಸರಿಯಬೇಕು.