ಅಪ್ಪ-ಮಕ್ಕಳ ಅಪ್ಪಿಕೊಂಡ ಯಡಿಯೂರಪ್ಪ
ಪುತ್ರ ವ್ಯಾಮೋಹ ಪರಕಾಷ್ಠೆಗೆ ತಲುಪಿದ ಕಥಾನಕವಿದು. ಮಾಜಿ ಪ್ರಧಾನಿ ದೇವೇಗೌಡರ ‘ಮಕ್ಕಳ ವ್ಯಾಮೋಹ’ದ ಹರಿಕಥೆ ಕನ್ನಡ ನಾಡಿನಲ್ಲಿ ಜನಜನಿತ. ಅದನ್ನು ಮೀರಿಸುವ ಕಥಾನಕ ಯಡಿಯೂರಪ್ಪ-ವಿಜಯೇಂದ್ರರದು. ದೃತರಾಷ್ಟ್ರ ಪ್ರೇಮ ಎಂಬುದು ಪುರಾಣ ಕಾಲದ ಪುತ್ರವ್ಯಾಮೋಹವನ್ನು ವಿವರಿಸುವ ಒಂದು ಪ್ರತಿಮಾ ಸಂಕೇತ. ದೇವೇಗೌಡ-ಯಡಿಯೂರಪ್ಪ ಪುತ್ರ ವ್ಯಾಮೋಹ ಪದಕ್ಕೆ ಆಧುನಿಕ ಕಾಲದ ವ್ಯಾಖ್ಯಾನ ಕಲ್ಪಿಸಿ ಚರಿತ್ರಾರ್ಹ ಪ್ರತೀಕಗಳಾಗಿದ್ದಾರೆ. ಹಾಗೆ ನೋಡಿದರೆ ಜೆಡಿಎಸ್ ಕುಟುಂಬ ರಾಜಕಾರಣವನ್ನು ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಒಪ್ಪಿ ಕುಟುಂಬದ ಏಳಿಗೆಗಾಗಿಯೇ ಹುಟ್ಟಿರುವ ಪಕ್ಷ. ಕುಟುಂಬದಿಂದ, ಕುಟುಂಬಕೋಸ್ಕರ, ಕುಟುಂಬದವರೇ ಮುನ್ನಡೆಸುವ ಪಕ್ಷವೆಂದರೆ ಜೆಡಿಎಸ್. ಹಾಗಾಗಿ ದೇವೇಗೌಡ-ಕುಮಾರಸ್ವಾಮಿಯವರು ಬಿಜೆಪಿಯೊಂದಿಗೆ ಕೈಜೋಡಿಸಿದ್ದನ್ನು ಎಷ್ಟೇ ತರ್ಕಬದ್ಧವಾಗಿ ಟೀಕಿಸಿದರೂ ಚರ್ಚೆಯನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯಲಾಗದು. ಹೆಚ್ಚೆಂದರೆ ಜಾತ್ಯತೀತ ಜನತಾದಳದಲ್ಲಿನ ಜಾತ್ಯತೀತ ಪದ ತೆಗೆದು ಹಾಕಲು ಒತ್ತಾಯಿಸಬಹುದು.
ಆದರೆ ಯಡಿಯೂರಪ್ಪನವರ ಪುತ್ರ ವ್ಯಾಮೋಹವನ್ನು ಸೈದ್ಧಾಂತಿಕ ನೆಲೆಯಲ್ಲಿಯೇ ಬಲವಾಗಿ ವಿರೋಧಿಸಲು ಹೆಚ್ಚು ಅವಕಾಶಗಳಿವೆ. ಭಾರತೀಯ ಜನತಾ ಪಕ್ಷ, ಅದರಲ್ಲೂ ಮೋದಿಮಯವಾಗಿರುವ ಇಂದಿನ ಬಿಜೆಪಿ, ವಂಶಾಡಳಿತ ಅರ್ಥಾತ್ ಕುಟುಂಬ ರಾಜಕಾರಣದ ವಿರುದ್ಧ ಅತಿರಂಜಿತ ಕಥಾನಕ ಸೃಷ್ಟಿಸಿ, ವ್ಯಾಪಕ ಪ್ರಚಾರ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷವನ್ನು ಎಲ್ಲೆಡೆ ದುರ್ಬಲ ಮಾಡಿದ್ದೇ ಬಿಜೆಪಿಯ ಕುಟುಂಬ ರಾಜಕಾರಣದ ಅಸ್ತ್ರ. ಅಧಿಕಾರ ರಾಜಕಾರಣದಿಂದ ಅಧಿಕೃತ ನಿವೃತ್ತಿ ಘೋಷಿಸಿರುವ ಯಡಿಯೂರಪ್ಪನವರಿಗೆ ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಹೆಚ್ಚು ಮುತುವರ್ಜಿ ವಹಿಸುವ ಅನಿವಾರ್ಯತೆಯೇ ಇರಲಿಲ್ಲ; ಪುತ್ರ ವ್ಯಾಮೋಹದ ಕಾರಣವೊಂದನ್ನು ಹೊರತುಪಡಿಸಿ. ಹಾಗೆ ನೋಡಿದರೆ, ಯಡಿಯೂರಪ್ಪರಂತಹ ಜನನಾಯಕ ದುರ್ಬಲವಾಗಿದ್ದು ಮಕ್ಕಳ ಮೇಲಿನ ಅತಿಯಾದ ವ್ಯಾಮೋಹದಿಂದ. ಬಿಜೆಪಿಯಲ್ಲಿನ ಬಿ.ಎಲ್. ಸಂತೋಷ್ ಅವರ ಹಿಡಿತವನ್ನು ಕಡಿಮೆ ಮಾಡಲು ಮತ್ತು ಮಗ ವಿಜಯೇಂದ್ರನನ್ನು ‘ನಾಯಕ’ನನ್ನಾಗಿ ಪ್ರತಿಷ್ಠಾಪಿಸಲು ಯಡಿಯೂರಪ್ಪನವರಿಗೆ ಹೊಳೆದ ಅನಿವಾರ್ಯ ತಂತ್ರವೆಂದರೆ ಬಿಜೆಪಿ-ಜೆಡಿಎಸ್ ಮೈತ್ರಿ.
ಅಪ್ಪ, ಮಕ್ಕಳು, ಮೊಮ್ಮಕ್ಕಳನ್ನು ಯಡಿಯೂರಪ್ಪ ಪುತ್ರ ವ್ಯಾಮೋಹದ ಕಾರಣಕ್ಕೆ ಈಗ ಅಪ್ಪಿಕೊಂಡಿರಬಹುದು. ಆದರೆ ಅವರ ಅಂತರಾತ್ಮ ಮಾತ್ರ ಮನಸಾರೆ ಒಪ್ಪಿಕೊಂಡಿರುವುದಿಲ್ಲ. ಒಂದು ವೇಳೆ ಮನಸಾರೆ ಒಪ್ಪಿಕೊಂಡಿದ್ದರೆ ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಾರೆ ಎಂದೇ ಅರ್ಥ. ದಿನಾಂಕ ೨೫.೦೫.೨೦೧೮ರಂದು ಯಡಿಯೂರಪ್ಪನವರು ವಿಧಾನಸಭೆಯಲ್ಲಿ ದೇವೇಗೌಡ-ಕುಮಾರಸ್ವಾಮಿ ಅವರ ಕುರಿತು ಅನುಭವದ ಅಂತರಾಳದ ಮಾತುಗಳನ್ನು ಆಡಿದ್ದರು. ಸಂದರ್ಭ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಾಗ. ಮೈತ್ರಿ ಸರಕಾರದ ಭಾಗವಾಗಿದ್ದ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಮುಖಂಡರಿಗೆ ಕಿವಿ ಮಾತಿನ ರೂಪದಲ್ಲಿ ‘‘ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬಿಡುವುದು ಶಿವಕುಮಾರ್ ಅವರೇ ನಿಮಗೆ ಬಿಟ್ಟಿದ್ದು. ಮುಳುಗೋ ದೋಣಿಯಲ್ಲಿ ಕುಮಾರಸ್ವಾಮಿ ಜೊತೆ ಕೂತು ಪ್ರಯಾಣಿಸುವ ಅಪೇಕ್ಷೆ ನಿಮಗಿದ್ದರೆ ನನ್ನದೇನೂ ಅಭ್ಯಂತರ ಇಲ್ಲ. ನನ್ನ ಹೋರಾಟ ಏನಿದ್ದರೂ ಅಧಿಕಾರ ದಾಹದಿಂದ ಕುಣಿದು ಕುಪ್ಪಳಿಸುತ್ತಿರುವ ಭ್ರಷ್ಟ ಅಪ್ಪ, ಮಕ್ಕಳ ವಿರುದ್ಧ ಮಾತ್ರ. ಕಾಂಗ್ರೆಸ್‌ನ ವಿರುದ್ಧವಲ್ಲ. ನಾಗರಹಾವಿನ ರೋಷಕ್ಕೆ ೧೨ ವರ್ಷ ಆಯುಷ್ಯವಂತೆ. ಆದರೆ ಕುಮಾರಸ್ವಾಮಿಯವರದ್ದು ಅದಕ್ಕೂ ಮಿಗಿಲಾದದ್ದು. ಈ ನಾಡನ್ನು ದುಸ್ಥಿತಿಗೆ ತಂದಿರುವ ಅಪ್ಪ-ಮಕ್ಕಳ ಪಕ್ಷಕ್ಕೆ ಕಾಂಗ್ರೆಸ್‌ನವರು ಬೆಂಬಲಿಸಿದ್ದು ತಪ್ಪು. ಮುಂದೊಂದು ದಿನ ಪಶ್ಚಾತ್ತಾಪ ಪಡುತ್ತೀರಿ. ಅಪ್ಪ-ಮಕ್ಕಳು ಕಾಂಗ್ರೆಸನ್ನು ನಿರ್ನಾಮ ಮಾಡಿಲ್ಲ ಅಂದರೆ ನನ್ನ ಹೆಸರು ಯಡಿಯೂರಪ್ಪನೇ ಅಲ್ಲ. ಅಪ್ಪ-ಮಕ್ಕಳು ರೈತ ವಿರೋಧಿಗಳು. ಬಿಜೆಪಿ -ಜೆಡಿಎಸ್ ಸರಕಾರದಲ್ಲಿ ನಾನು ಹಣಕಾಸು ಮಂತ್ರಿ ಆಗಿದ್ದೆ. ರೈತರ ಸಾಲ ಮನ್ನಾ ಮಾಡಲು ನಿರ್ಧರಿಸಿದ್ದೆ. ಕುಮಾರಸ್ವಾಮಿಯವರ ಅಪ್ಪ ನನ್ನನ್ನು ಮನೆಗೆ ಕರೆದು ಬಾಯಿಗೆ ಬಂದಂತೆ ಬೈದರು. ‘ಸಾಲ ಮನ್ನಾ ಮಾಡುವುದಕ್ಕೆ ಹಣ ಎಲ್ಲಿಂದ ತರುತ್ತೀರಾ? ಸಾಲ ಮನ್ನಾ ಮಾಡುವ ಅಧಿಕಾರ ನಿಮಗಿಲ್ಲ’ ಎಂದು ಹೆದರಿಸಿದ್ದರು’’ ಎಂದು ಸತ್ಯವನ್ನು ಹೇಳಿದ್ದರು.
ಅಂದು ಸದನದಲ್ಲಿ ಯಡಿಯೂರಪ್ಪನವರು ಕಾಂಗ್ರೆಸ್‌ನವರಿಗೆ ಹೇಳಿದ ಬುದ್ಧಿ ಮಾತುಗಳನ್ನು ಯೂಟ್ಯೂಬ್ ಓಪನ್ ಮಾಡಿ ಒಮ್ಮೆ ಕೇಳಿಸಿಕೊಳ್ಳಬೇಕಿದೆ. ಪುತ್ರ ವ್ಯಾಮೋಹದಿಂದ ಕವಿದ ಅಂಧಕಾರ ಮರೆಯಾಗಬಹುದು. ಅಪ್ಪ-ಮಕ್ಕಳ-ಮೊಮ್ಮಕ್ಕಳ ಪಕ್ಷದೊಂದಿಗೆ ಮತ್ತೆ ಕೂಡಿಕೆ ಮಾಡಿಕೊಂಡಿದ್ದು ತಪ್ಪು ಎನ್ನುವುದನ್ನು ಅಂತಃಸಾಕ್ಷಿಯೇ ನೆನಪು ಮಾಡಿಕೊಡುತ್ತದೆ. ಹಾಗೆ ನೋಡಿದರೆ ಯಡಿಯೂರಪ್ಪ ಲಿಂಗಾಯತ ನಾಯಕನಾಗಿ ಹೊರಬಿದ್ದದ್ದೇ ‘ವಚನಭ್ರಷ್ಟ’ ಅಪ್ಪ, ಮಕ್ಕಳಿಗೆ ಎಂಬ ಪರಿಣಾಮಕಾರಿ ಕರುಣಾಜನಕ ಕಥಾನಕದಿಂದ. ಅಲ್ಲಿಯವರೆಗೆ ಯಡಿಯೂರಪ್ಪ ಬಿಜೆಪಿ ನಾಯಕ, ರೈತ ನಾಯಕ, ಉಗ್ರ ಹೋರಾಟಗಾರ ಬಿರುದಾವಳಿಗಳನ್ನು ಮಾತ್ರ ಹೊಂದಿದ್ದರು. ಲಿಂಗಾಯತ ಸಮುದಾಯದಲ್ಲಿ ಹುಟ್ಟಿದ್ದರಿಂದ ಬಿಜೆಪಿಯಲ್ಲಿನ ಕೆಲವು ಲಿಂಗಾಯತರಿಗೆ ಟಿಕೆಟ್ ಕೊಡಿಸಿರಬಹುದೇ ಹೊರತು ಸಮಸ್ತ ಲಿಂಗಾಯತರ ಒಳಿತಿಗಾಗಿ ಯಾವತ್ತೂ ಪ್ರಯತ್ನ ಮಾಡಿರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಯಡಿಯೂರಪ್ಪನವರಿಗೆ ಲಿಂಗಾಯತ ಸಮುದಾಯದ ಬಗ್ಗೆ ವಿಶೇಷ ಪ್ರೀತಿ, ಕಾಳಜಿ, ಕಕ್ಕುಲಾತಿ ಇದ್ದಿದ್ದರೆ ೧೯೯೯-೨೦೦೪ರ ಬಿಜೆಪಿ ಅಧಿಕಾರ ಅವಧಿಯಲ್ಲಿ ಲಿಂಗಾಯತ ಉಪಜಾತಿಗಳನ್ನು ಸೆಂಟ್ರಲ್ ಒಬಿಸಿ ಪಟ್ಟಿಯಲ್ಲಿ ಸೇರಿಸುತ್ತಿದ್ದರು. ವೀರಶೈವ-ಲಿಂಗಾಯತ ಎಂಬುದು ಎಲ್ಲಾ ಜಾತಿಗಳ ಒಕ್ಕೂಟ. ಒಂದೆರಡು ಉಪಜಾತಿಗಳನ್ನು ಹೊರತುಪಡಿಸಿದರೆ ಬಹುಪಾಲು ಜನ ತಳ ಸಮುದಾಯದಿಂದ ಬಂದ ಕಾಯಕ ಜೀವಿಗಳು. ೧೨ನೇ ಶತಮಾನದಲ್ಲಿ ಬಸವಣ್ಣನವರ ಪ್ರಭಾವಕ್ಕೆ ಒಳಗಾಗಿ ಲಿಂಗಧಾರಣೆ ಮಾಡಿ ಲಿಂಗಾಯತರಾದವರು.
ಯಡಿಯೂರಪ್ಪ ಮೂಲತಃ ಸಂಘ ಪರಿವಾರದ ಗರಡಿಯಲ್ಲಿ ಬೆಳೆದವರು. ಹಾಗಾಗಿಯೇ ತಮ್ಮ ಮಕ್ಕಳಿಗೆ ಬಸವಾದಿ ಶರಣರ ಹೆಸರಿನ ಸೋಂಕು ತಗಲದಂತೆ ನೋಡಿಕೊಂಡಿದ್ದಾರೆ. ವಿಜಯೇಂದ್ರ, ರಾಘವೇಂದ್ರ, ಅರುಣಾ ಇತ್ಯಾದಿ ಹೆಸರುಗಳು ಯಡಿಯೂರಪ್ಪನವರ ಮತ-ಪಂಥಗಳ ಮೇಲಿನ ನಂಬಿಕೆಯ ಪ್ರತೀಕಗಳು. ಉತ್ತರ ಕರ್ನಾಟಕದ ಕಾಂಗ್ರೆಸ್, ಜನತಾದಳ ಮುಖಂಡರ (ಲಿಂಗಾಯತ) ಮಕ್ಕಳ ಹೆಸರುಗಳನ್ನು ಗಮನಿಸಿ: ಈಶ್ವರ, ಬಸವರಾಜ, ಶಿವಕುಮಾರ, ಮಲ್ಲಿಕಾರ್ಜುನ, ಅಲ್ಲಮಪ್ರಭು, ಅಕ್ಕಮಹಾದೇವಿ, ಮುಕ್ತಾಯಕ್ಕ ಇತ್ಯಾದಿ ಇರುತ್ತವೆ. ಅತ್ಯಂತ ಮಹತ್ವಾಕಾಂಕ್ಷಿ ಹಾಗೂ ಪ್ರಾಕ್ಟಿಕಲ್ ರಾಜಕಾರಣಿಯಾಗಿರುವ ಯಡಿಯೂರಪ್ಪ ರಾಜ್ಯದಲ್ಲಿ ಹಾರ್ಡ್‌ಕೋರ್ ಹಿಂದುತ್ವ ವರ್ಕೌಟ್ ಆಗುವುದಿಲ್ಲ ಎಂಬ ಕಠೋರ ಸತ್ಯವನ್ನು ಮನವರಿಕೆ ಮಾಡಿಕೊಂಡಿದ್ದರಿಂದಲೇ ರೈತನಾಯಕ ಮತ್ತು ಹೋರಾಟಗಾರನಾಗಿದ್ದು. ಆಗಿನ ಅವರ ನಾಯಕರಾಗಿದ್ದ ವಾಜಪೇಯಿಯವರೂ ತುಸು ಉದಾರವಾದಿ ಧೋರಣೆ ಅನುಸರಿಸಿದ್ದರಿಂದ ಯಡಿಯೂರಪ್ಪ ಭಿನ್ನರಾಜಕಾರಣಿಯಾಗಿ ರೂಪುಗೊಂಡರು. ಅಪ್ಪ-ಮಕ್ಕಳು ಮಾತಿಗೆ ತಪ್ಪಿದ್ದರಿಂದ ಯಡಿಯೂರಪ್ಪ ೨೦ ತಿಂಗಳ ಅವಧಿಗೆ ಮುಖ್ಯಮಂತ್ರಿ ಆಗುವ ಅವಕಾಶ ವಂಚಿತರಾದರು. ಆಗ ಅವರ ಕೈಹಿಡಿದದ್ದು ದಡ ತಲುಪಿಸಿದ್ದು ರಾಜ್ಯದಲ್ಲಿನ ವೀರಶೈವ ಲಿಂಗಾಯತ ಸಮುದಾಯ.
ಕರ್ನಾಟಕದ ವೀರಶೈವ ಲಿಂಗಾಯತ ಸಮುದಾಯ ನಿತ್ಯದ ಬದುಕಿನಲ್ಲಿ ಒಗ್ಗಟ್ಟು ಪ್ರದರ್ಶಿಸುವುದಿಲ್ಲ, ಹೆಚ್ಚು ಜಾತೀಯತೆ ತೋರುವುದಿಲ್ಲ. ‘ಹುಲಿ ಬಂತು ಹುಲಿ’ ಎಂಬ ಅಪಾಯದ ಕೂಗು ಜೋರಾಗಿ ಕೇಳಿ ಬಂದಾಗ ಮಾತ್ರ ಎಲ್ಲಿಲ್ಲದ ಒಗ್ಗಟ್ಟು ಪ್ರದರ್ಶಿಸುತ್ತದೆ. ೧೯೮೯ರಲ್ಲಿ ವೀರೇಂದ್ರ ಪಾಟೀಲರು ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿಕೊಂಡಿದ್ದರು. ಆಗ ಕಾಂಗ್ರೆಸ್ ಪಕ್ಷಕ್ಕೆ ೧೭೮ ಸೀಟುಗಳು ಲಭಿಸಿದ್ದವು. ಕರ್ನಾಟಕ ರಾಜ್ಯದ ಚುನಾವಣಾ ರಾಜಕೀಯ ಇತಿಹಾಸದಲ್ಲಿ ಇದು ದಾಖಲಾರ್ಹ ಗೆಲುವು. ೧೧ ತಿಂಗಳ ಆನಂತರ ವೀರೇಂದ್ರ ಪಾಟೀಲರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದರು. ಆನಂತರ ಬಂದ ೧೯೯೪ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೀನಾಯ ಸೋಲಾಯಿತು. ೧೯೮೯ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಾರಾಸಗಟಾಗಿ ಮತ ನೀಡಿದ ಲಿಂಗಾಯತರೇ ೧೯೯೪ರಲ್ಲಿ ಆ ಪಕ್ಷದ ಹೀನಾಯ ಸೋಲಿಗೆ ಕಾರಣರಾದರು. ಹುಲಿ ಬಂತು ಹುಲಿ ಎಂಬ ಅಪಾಯದ ಕೂಗು ಜೋರಾಗಿ ಸದ್ದು ಮಾಡಿದ್ದೇ ಕಾರಣ. ವಿಪರ್ಯಾಸದ ಸಂಗತಿ ಎಂದರೆ ವೀರೇಂದ್ರ ಪಾಟೀಲರು ಮಗನಿಗೆ ‘ಕೈಲಾಸನಾಥ’ ಎಂದು ಹೆಸರಿಟ್ಟದ್ದು ಮತ್ತು ಅಳಿಯ ಬಸವರಾಜ ಜವಳಿಯವರನ್ನು ಎಂ.ಪಿ. ಮಾಡಿದ್ದು ಬಿಟ್ಟರೆ ಲಿಂಗಾಯತ ಸಮುದಾಯಕ್ಕೆ ಯಾವ ಒಳಿತನ್ನೂ ಮಾಡಲಿಲ್ಲ. ಸಮುದಾಯದ ಜನಸಾಮಾನ್ಯರ ಜೊತೆ ಒಡನಾಡುವ, ಸಹಾಯ ಮಾಡುವ ರಿಸ್ಕೇ ತೆಗೆದುಕೊಳ್ಳುತ್ತಿರಲಿಲ್ಲ. ಲಿಂಗಾಯತ ಸಮುದಾಯದ ಈ ವಿಚಿತ್ರ ಗುಣ ಸ್ವಭಾವದ ಅತ್ಯಧಿಕ ಲಾಭ ಆಗಿದ್ದು ಒಂದು ಎಸ್. ನಿಜಲಿಂಗಪ್ಪ, ಎರಡು ಬಿ.ಎಸ್. ಯಡಿಯೂರಪ್ಪನವರಿಗೆ. ಬಿ.ಡಿ. ಜತ್ತಿ, ವೀರೇಂದ್ರ ಪಾಟೀಲ್, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್, ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಮುಂತಾದವರೆಲ್ಲ ಸಾಂದರ್ಭಿಕ ಮುಖ್ಯಮಂತ್ರಿಗಳು.
ದೇವೇಗೌಡ-ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ೨೦ ತಿಂಗಳ ಅವಧಿಗೆ ಮುಖ್ಯಮಂತ್ರಿ ಹುದ್ದೆ ನೀಡಿದ್ದರೆ ಅವರು ಸಾಂದರ್ಭಿಕ ಸಿಎಂ ಆಗಿ ಹತ್ತರ ಕೂಡ ಹನ್ನೊಂದಾಗಿ ಚರಿತ್ರೆಯಲ್ಲಿ ನಗಣ್ಯರಾಗಿ ಕಳೆದು ಹೋಗುತ್ತಿದ್ದರು. ಅಪ್ಪ-ಮಕ್ಕಳ ಶರತ್ತುಗಳಿಗೆ ಒಪ್ಪಿಕೊಂಡು ಗುಲಾಮಗಿರಿಯ ಸಿಎಂ ಪಟ್ಟ ಅಲಂಕರಿಸಿದ್ದರೂ ಯಡಿಯೂರಪ್ಪ ಲಿಂಗಾಯತ ನಾಯಕನಾಗುತ್ತಿರಲಿಲ್ಲ. ವಿಜಯೇಂದ್ರಗೆ ಈ ಹೊತ್ತು ಲಿಂಗಾಯತ ಬಲವನ್ನು ಬಳಸಿಕೊಳ್ಳುವ ಅವಕಾಶವೇ ಸಿಗುತ್ತಿರಲಿಲ್ಲ. ಅಪ್ಪ-ಮಕ್ಕಳನ್ನು ಅವಕಾಶವಾದಿಗಳೆಂದು ಬಿಂಬಿಸುವಲ್ಲಿ, ವಚನಭ್ರಷ್ಟರೆಂದು ನಂಬಿಸುವಲ್ಲಿ ಯಡಿಯೂರಪ್ಪ ದಿಟ್ಟತನ ಮೆರೆದರು. ೨೦೦೮ರ ಚುನಾವಣೆಯಲ್ಲಿ ಬಿಜೆಪಿಗೆ ದೊರೆತದ್ದು ಕೇವಲ ೧೧೦ ಸೀಟುಗಳಿರಬಹುದು. ಆದರೆ ಪಕ್ಷಾತೀತವಾಗಿ ಅವರ ಮೇಲೆ ಅನುಕಂಪದ ಸುರಿಮಳೆಗರೆಯಿತು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಎಂಬ ಮಾತಿಗೆ ೨೦೦೮ರ ನಂತರ ಬೇರೆ ಆಯಾಮದ ಅರ್ಥ ಪ್ರಾಪ್ತಿಯಾಯಿತು. ಅಷ್ಟು ಮಾತ್ರವಲ್ಲ ಯಡಿಯೂರಪ್ಪ ಹಸಿರು ಟವೆಲ್ ಧರಿಸಿ ಪ್ರಮಾಣವಚನ ಸ್ವೀಕರಿಸಿದಾಗ ಮುಸ್ಲಿಮ್ ಸಮುದಾಯದ ಮುಮ್ತಾಝ್ ಅಲಿ ಖಾನ್ ಅವರನ್ನು ಮಂತ್ರಿ ಮಾಡಿದಾಗ ಇದು ಕಟ್ಟರ್ ಹಿಂದುತ್ವದ ಬಿಜೆಪಿ ಸರಕಾರವಾಗಲಾರದೆಂಬ ಭರವಸೆ ಮೂಡಿತು.
ಆನಂತರದ ದಿನಗಳಲ್ಲೇ ಯಡಿಯೂರಪ್ಪ ಮಾತಿಗೆ ತಪ್ಪದ ನಾಯಕ, ನಂಬಿದವರ ಕೈ ಬಿಡದ ಛಲಗಾರ, ಎಲ್ಲರನ್ನೂ ಜೊತೆಗೆ ಕೊಂಡೊಯ್ಯುವ ನಾಯಕ ಎಂಬ ಪ್ರತೀತಿಗಳು ರೆಕ್ಕೆ ಬಿಚ್ಚಿ ಹಾರಾಡತೊಡಗಿದ್ದವು. ೨೦೦೮ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೆ ಕುಟುಂಬದ ಸದಸ್ಯರು ಮೂಗು ತೂರಿಸುವುದು, ಆರೆಸ್ಸೆಸ್ ಹಸ್ತಕ್ಷೇಪ ಇತ್ತಾದರೂ ಅವರನ್ನು ಸಂಪೂರ್ಣ ಕೈಗೊಂಬೆ ಮಾಡಿ ನಿಯಂತ್ರಿಸುತ್ತಿದ್ದಾರೆ ಎಂದು ಅನಿಸುತ್ತಿರಲಿಲ್ಲ. ಲಿಂಗಾಯತರು ಹೊಸ ನಾಯಕ ಸಿಕ್ಕ ಉಮೇದಿನಲ್ಲಿ ೨೦೦೯ರ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಬಸವ ತತ್ವ ಮರೆತು ಬಿಜೆಪಿಯನ್ನು ಬೆಂಬಲಿಸಿದರು; ಯಡಿಯೂರಪ್ಪ ಕಾರಣಕ್ಕೆ. ೨೦೦೮ರಿಂದ ೨೦೧೧ರವರೆಗೆ ಯಡಿಯೂರಪ್ಪನವರಿಗೆ ಕಿರುಕುಳಕೊಟ್ಟವರು ಆ ಸರಕಾರದ ಬಹುದೊಡ್ಡ ಫಲಾನುಭವಿಗಳು. ಲಿಂಗಾಯತ ಸಮುದಾಯಕ್ಕೆ ಯಡಿಯೂರಪ್ಪನವರು ಏನನ್ನೂ ಮಾಡಲಿಲ್ಲ ಎಂಬ ಭಾವನೆ ಇತ್ತಾದರೂ ೨೦೧೩ ಮತ್ತು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕಣ್ಣು ಮುಚ್ಚಿ ಬೆಂಬಲಿಸಿದರು. ಲಿಂಗಾಯತ ಸಮುದಾಯದ ಋಣದಲ್ಲಿರುವ ಯಡಿಯೂರಪ್ಪ ೨೦೧೯ರಲ್ಲಿ ಸಿಎಂ ಆದ ಮೇಲೆ ಸಂಪೂರ್ಣವಾಗಿ ಪುತ್ರ ವ್ಯಾಮೋಹವನ್ನು ತಲೆಗೇರಿಸಿಕೊಂಡರು.
೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪನವರೊಂದಿಗೆ ರಾಜ್ಯ ಸುತ್ತಿ ೨೦೧೯ರಲ್ಲಿ ಹರಸಾಹಸ ಮಾಡಿ ಬಿಜೆಪಿ ಸರಕಾರ ರಚನೆಯಲ್ಲಿ ಕ್ರಿಯಾಶೀಲ ಪಾತ್ರ ವಹಿಸಿದ್ದ ಮೊಮ್ಮಗ ಎಸ್.ಆರ್. ಸಂತೋಷ್ ಅವರನ್ನೇ ದೂರ ತಳ್ಳಿದರು. ೨೦೧೯ರಿಂದ ೨೦೨೧ರವರೆಗಿನ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಪುತ್ರ ವ್ಯಾಮೋಹದಲ್ಲಿ ಜೀವನ ದುದ್ದಕ್ಕೂ ಸಂಪಾದಿಸಿದ ವಿಶ್ವಾಸಾರ್ಹತೆ ಕಳೆದುಕೊಂಡರು. ಔರಂಗಜೇಬ್ ಮನಸ್ಥಿತಿಯ ಮಗ ಅಪ್ಪನನ್ನು ಅಕ್ಷರಶಃ ಸೂತ್ರದ ಗೊಂಬೆಯನ್ನಾಗಿಸಿದ. ಅಷ್ಟಕ್ಕೂ ವಿಜಯೇಂದ್ರಗೆ ರಾಜಕೀಯದ ಗಂಧಗಾಳಿ ಗೊತ್ತಿಲ್ಲ. ನಾಯಕತ್ವದ ಗುಣಗಳಿಲ್ಲ. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿಯವರಿಗೆ ಇರುವ ಕನಿಷ್ಠ ‘ಜಾಣ’ತನವೂ ಇಲ್ಲ. ವಿಜಯೇಂದ್ರರ ಭಾಷಣ, ಪತ್ರಿಕಾಗೋಷ್ಠಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಎಳಸು ಎಂಬುದು ಗೊತ್ತಾಗುತ್ತದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕಡು ಭ್ರಷ್ಟ ಕುಖ್ಯಾತಿ ಗಳಿಸಿರುವ ವಿಜಯೇಂದ್ರರ ಸೊಕ್ಕಿನ ನಿರ್ಧಾರಗಳೇ ಯಡಿಯೂರಪ್ಪನವರ ಇಮೇಜ್‌ಸಂಪೂರ್ಣ ಕುಸಿಯಲು ಕಾರಣ. ಎಚ್. ವಿಶ್ವನಾಥ್, ಆರ್. ಶಂಕರ್ ವಿಷಯದಲ್ಲಿ ಯಡಿಯೂರಪ್ಪನವರ ‘ಮಾತಿಗೆ ತಪ್ಪದ ನಾಯಕ’ ಎಂಬ ಇಮೇಜ್ ಹಾಳಾಗಿದೆ. ಯಡಿಯೂರಪ್ಪನವರನ್ನು ನಂಬಿ ಬಿಜೆಪಿಯಲ್ಲಿ ರಾಜಕಾರಣ ಮಾಡುತ್ತಿದ್ದ ಲಿಂಗಾಯತರು, ಇನ್ನಿತರ ಸಮುದಾಯದವರು ವಿಶ್ವಾಸ ಕಳೆದುಕೊಂಡಿದ್ದಾರೆ.
ಕರ್ನಾಟಕದ ಲಿಂಗಾಯತರಿಂದ ಯಡಿಯೂರಪ್ಪನವರಿಗೆ, ಅವರ ಪಕ್ಷಕ್ಕೆ ಅಪಾರ ಪ್ರಮಾಣದಲ್ಲಿ ಲಾಭವಾಗಿದೆ. ಯಡಿಯೂರಪ್ಪನವರಿಂದ ಸಮಸ್ತ ಲಿಂಗಾಯತ ಸಮುದಾಯಕ್ಕೆ ಯಾವ ಅನುಕೂಲವೂ ಆಗಲಿಲ್ಲ. ಎಚ್.ಡಿ. ದೇವೇಗೌಡರು ಒಕ್ಕಲಿಗ ಸಮುದಾಯವನ್ನು ಸೆಂಟ್ರಲ್ ಒಬಿಸಿ ಪಟ್ಟಿಗೆ ಸೇರಿಸಿ ಹೆಚ್ಚು ಲಾಭ ಸಿಗುವಂತೆ ನೋಡಿಕೊಂಡಿದ್ದಾರೆ. ಯಡಿಯೂರಪ್ಪ ಶಿವಮೊಗ್ಗ-ಶಿಕಾರಿಪುರ ವೋಟ್ ಬ್ಯಾಂಕ್ ಗಟ್ಟಿಗೊಳಿಸಿಕೊಳ್ಳಲು ಲಿಂಗಾಯತರಲ್ಲಿನ ಸಾದರು, ನೊಣಬರು, ಬಣಜಿಗರು, ಗಾಣಿಗ ಉಪಜಾತಿಗೆ ಸೇರಿದ ಆಯ್ದ ನಾಯಕರಿಗೆ ಮಾತ್ರ ಸಹಾಯ ಮಾಡಿದ್ದಾರೆ. ಹುಲಿ ಬಂತು ಹುಲಿ ಎಂದು ದೇವೇಗೌಡರು, ಕುಮಾರಸ್ವಾಮಿಯವರನ್ನು ತೋರಿಸಿ ಲಿಂಗಾಯತರ ಬೆಂಬಲ ಪಡೆದು ಲಿಂಗಾಯತರ ಪ್ರಶ್ನಾತೀತ ನಾಯಕನ ಪಟ್ಟವನ್ನು ಪುತ್ರ ವ್ಯಾಮೋಹದಿಂದ ಕ್ರಮೇಣ ಕಳೆದುಕೊಳ್ಳುತ್ತಿದ್ದಾರೆ. ೨೦೨೩ರ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಸೇರಿದಂತೆ ಹಲವು ನಾಯಕರಿಗೆ ಟಿಕೆಟ್ ತಪ್ಪಿದಾಗಲೂ ಸೂತ್ರದ ಗೊಂಬೆ ಯಡಿಯೂರಪ್ಪ ಮೊದಲಿನ ಗತ್ತು ಪ್ರದರ್ಶಿಸಲೇ ಇಲ್ಲ.
ಹುಲಿ ಬಂತು ಹುಲಿ ಕಥೆ ಹೇಳಿ ಲಿಂಗಾಯತ ನಾಯಕರಾದ ಯಡಿಯೂರಪ್ಪನವರು ಪುತ್ರ ವ್ಯಾಮೋಹಕ್ಕೆ ಬಲಿಯಾಗಿ ಅಪ್ಪ- ಮಕ್ಕಳೆಂಬ ಭಯಂಕರ ಹುಲಿಗಳೊಂದಿಗೇ ‘ಅಪ್ಪುಗೆ’ ಸಖ್ಯ ಬೆಳೆಸಿದ್ದಾರೆ. ನಾಡಿನ ಲಿಂಗಾಯತರು ೨೦೨೩ರ ಚುನಾವಣೆಯಲ್ಲಿ ಬಿಜೆಪಿಯ ಬಿ.ಎಲ್. ಸಂತೋಷ್ ಅವರನ್ನು ತೋರಿಸಿ ಹುಲಿ ಬಂತು ಹುಲಿ ಎಂದು ಜೋರಾಗಿ ಸದ್ದು ಮಾಡಿದ್ದಕ್ಕೆ ಕಾಂಗ್ರೆಸ್ ಬೆಂಬಲಕ್ಕೆ ನಿಂತಿದ್ದಾರೆ. ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಕಾಂಗ್ರೆಸ್ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಈಗ ಅಪ್ಪ-ಮಕ್ಕಳ ಪಕ್ಷದೊಂದಿಗೆ ಬಿಜೆಪಿಯ ಅಪ್ಪ-ಮಕ್ಕಳು ಕೈಜೋಡಿಸಿದ್ದಾರೆ. ಚರಿತ್ರೆಯ ಘಟನಾವಳಿಗಳು ಪುನರಾವರ್ತನೆಗೊಂಡರೂ ಆಶ್ಚರ್ಯವೇನಿಲ್ಲ. ಯಡಿಯೂರಪ್ಪ-ವಿಜಯೇಂದ್ರ ಕಾದು ನೋಡಬೇಕಷ್ಟೆ.