ಕಲಬುರಗಿ: ಕಾಳಸಂತೆಯಲ್ಲಿ ʼಮಿಡ್ ಡೇ ಮೀಲ್ʼ ಯೋಜನೆಯ ಹಾಲಿನ ಪುಡಿ ಮಾರಾಟ; ಪ್ರಕರಣ ದಾಖಲು

ಕಲಬುರಗಿ: ಮಿಡ್ ಡೇ ಮೀಲ್ ಯೋಜನೆಯಡಿ ಮಕ್ಕಳಿಗೆ ನೀಡಬೇಕಾಗಿದ್ದ ಹಾಲಿನ ಹುಡಿಯ ಪಾಕೆಟ್‌ಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಅಕ್ಷರ ದಾಸೋಹ ಅಧಿಕಾರಿಗಳು, ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಹಾಲಿನ ಪುಡಿಯ ಪಾಕೆಟ್‌ಗಳನ್ನು ಜಪ್ತಿ ಮಾಡಿದ್ದಾರೆ.
ನಗರದ ನೆಹರು ಗಂಜ್ ಪ್ರದೇಶದಲ್ಲಿ ಇರುವ ಮಹಾಲಕ್ಷ್ಮಿ ಟ್ರೇಡರ್ಸ್ ಹಿಂಭಾಗದಲ್ಲಿ, ದೊಡ್ಡ ಪ್ರಮಾಣದಲ್ಲಿ ಹಾಲಿನ ಪೌಡರ್ ಶೇಖರಣೆ ಮಾಡಿರುವ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು, 1 ಕೆ.ಜಿಯ 175 ಹಾಲಿನ ಪಾಕೆಟ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಹಾಲನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಅಕ್ರಮ ದಂಧೆಯ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಮೇರೆಗೆ ಏಕಕಾಲಕ್ಕೆ ಅಧಿಕಾರಿಗಳು ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಶರಣು, ಮಲ್ಲು ಚಹ್ವಾಣ್ ಮತ್ತು ಸಂತೋಷ್ ಎಂಬುವರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಈ ಅಕ್ರಮದಲ್ಲಿ ಇನ್ನೂ ಹೆಚ್ಚಿನ ಜನರು ಶಾಮಿಲಾಗಿರುವ ಸಾಧ್ಯತೆ ಇದ್ದು, ಪೊಲೀಸರು ಮುಂದಿನ ತನಿಖೆ ಮುಂದುವರೆಸಿದ್ದಾರೆ.