ಕಲಬುರಗಿ- ಬೆಂಗಳೂರು ಮಧ್ಯೆ ಮಾರ್ಚ್ 12ರಿಂದ ʼವಂದೇ ಭಾರತ್ʼ ರೈಲು ಸಂಚಾರ
ಕಲಬುರಗಿ: "ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕಲಬುರಗಿ ಜನತೆಗೆ ನೂತನ ವಂದೇ ಭಾರತ್ ರೈಲು ಘೋಷಣೆ ಮಾಡಿದ್ದು, ಮಾರ್ಚ್ 12ರಿಂದ ಸಂಚಾರ ಪ್ರಾರಂಭವಾಗಲಿದೆ" ಎಂದು ಸಂಸದ ಉಮೇಶ್ ಜಾಧವ್ ಹೇಳಿದರು.
"ಕೇಂದ್ರ ರೈಲ್ವೆ ಇಲಾಖೆಯಿಂದ ಇಂದು( ಮಾ.7) ಈ ಬಗ್ಗೆ ಮಾಹಿತಿ ಕೈ ಸೇರಿದ್ದು, ಮಾರ್ಚ್ 12ರಂದು ಪ್ರಧಾನ ಮಂತ್ರಿಗಳು ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಬೆಂಗಳೂರು- ಕಲಬುರಗಿ ಮಧ್ಯೆ ಪ್ರತ್ಯೇಕ ರೈಲು ಬೇಡಿಕೆಯು ದಶಕಗಳಷ್ಟು ಹಿಂದಿನದು. ಮೊನ್ನೆಯಷ್ಟೇ ಕಲಬುರಗಿ - ಬೆಂಗಳೂರು (ಬೈಯಪ್ಪನಹಳ್ಳಿ) ವಿಶೇಷ ರೈಲು ಘೋಷಣೆ ಮಾಡಿ ನಾಳೆ (ಮಾ.9) ಸಂಚಾರ ಪ್ರಾರಂಭವಾಗಲಿದೆ" ಎಂದರು.
"ಈ ಮಧ್ಯೆ ಪ್ರಧಾನಮಂತ್ರಿಯವರು ಕಲಬುರಗಿ ಜನತೆಗೆ ವಿಶೇಷ ಗಿಫ್ಟ್ ರೂಪದಲ್ಲಿ ವಂದೇ ಭಾರತ್ ರೈಲು ಘೋಷಣೆ ಮಾಡಿ ಐತಿಹಾಸಿಕ ನಿರ್ಣಯ ಕೈಗೊಂಡಿದ್ದಾರೆ. ಇದು ನನ್ನ ಜೀವನದ ಧನ್ಯತೆಯ ಕ್ಷಣವಾಗಿದೆ. ಕೇಳಿದ್ದು ಒಂದು ರೈಲು ಪ್ರಧಾನಿಯವರು ಕೊಟ್ಟದ್ದು ಎರಡು ರೈಲು. ಇದು ಕಲಬುರಗಿ ಜನತೆಯ ಮೇಲೆ ಪ್ರಧಾನಿಯವರಿಗೆ ಇರುವ ಪ್ರೀತಿಗೆ ಸಾಕ್ಷಿಯಾಗಿದೆ" ಎಂದು ಸಂಸದರು ಹೇಳಿದ್ದಾರೆ.
ಕಲಬುರಗಿ ಗತಿಶಕ್ತಿ ಕಾರ್ಗೋ ಟರ್ಮಿನಲ್ ಗೆ ಒಪ್ಪಿಗೆ
ಕಲಬುರಗಿ ಹಿರೇ ನಂದೂರು ಭಾರತ್ ಪೆಟ್ರೋಲಿಯಂ ನಿಗಮದ ಪೆಟ್ರೋಲಿಯಂ ಉತ್ಪನ್ನ ಸಂಗ್ರಹಕಾರವನ್ನು ಗತಿ ಶಕ್ತಿ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯು ಗುರುತಿಸಿ ಘೋಷಣೆ ಮಾಡಿರೋದು ಹೆಮ್ಮೆಯ ಸಂಗತಿ ಎಂದರು.