ಕಲಬುರಗಿ ಜಿಲ್ಲೆಯಲ್ಲಿ 23,40,518 ಜನ ಮತದಾರರು : ಬಿ.ಫೌಝಿಯಾ ತರನ್ನುಮ್
ಬಿ.ಫೌಝಿಯಾ ತರನ್ನುಮ್
ಕಲಬುರಗಿ : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜ.1ರಂದು ಅರ್ಹತಾ ದಿನಾಂಕವನ್ನಾಗಿ ಪರಿಗಣನೆಗೆ ತೆಗೆದುಕೊಂಡು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ-2025ರ ಅಂತಿಮ ಮತದಾರರ ಪಟ್ಟಿ ಸೋಮವಾರ ಪ್ರಕಟ ಮಾಡಲಾಗಿದ್ದು, ಜಿಲ್ಲೆಯಾದ್ಯಂತ 11,76,170 ಪುರುಷ, 11,64,009 ಮಹಿಳೆ ಹಾಗೂ 339 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 23,40,518 ಮತದಾರರು ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಬಿ.ಫೌಝಿಯಾ ತರನ್ನುಮ್ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿದ ಅವರು, ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿಗಳ ಕಚೇರಿ, ಕಲಬುರಗಿ ಮಹಾನಗರ ಪಾಲಿಕೆ ಕಚೇರಿ, ಸಹಾಯಕ ಆಯುಕ್ತರ ಕಚೇರಿ, ತಹಶೀಲ್ದಾರ್ ಕಚೇರಿ ಹಾಗೂ ಜಿಲ್ಲೆಯ ಎಲ್ಲಾ ಮತಗಟ್ಟೆ ಅಧಿಕಾರಿಗಳ ಕಾರ್ಯಾಲಯದಲ್ಲಿ ಸಾರ್ವಜನಿಕರ ಮಾಹಿತಿಗೆ ಪ್ರಕಟಿಸಲಾಗಿದೆ. ಇದಲ್ಲದೆ ಪಟ್ಟಿಯನ್ನು https://ceo.karnataka.nic.in ನಲ್ಲಿಯೂ ಪ್ರಚುರಪಡಿಸಲಾಗಿದೆ ಎಂದು ಅಂತಿಮ ಮತದಾರರ ಪಟ್ಟಿಯ ವಿವರ ನೀಡಿದರು.
ಇನ್ನು ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಬೂತ್ ಮಟ್ಟದ ಎಜೆಂಟರನ್ನು ಕೂಡಲೆ ನೇಮಿಸಿ ಸಂಬಂಧಪಟ್ಟ ಮತದಾರರ ನೋಂದಣಾಧಿಕಾರಿಗಳಾಗಿರುವ ತಹಶೀಲ್ದಾರರು, ಕಲಬುರಗಿ ಮತ್ತು ಸೇಡಂ ಸಹಾಯಕ ಆಯುಕ್ತರು, ಕಲಬುರಗಿ ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಗೆ ನೀಡುವಂತೆ ಡಿ.ಸಿ. ಅವರು ತಿಳಿಸಿದರು.
ಕ್ಷೇತ್ರವಾರು ಮತದಾರರ ವಿವರ :
ಅಂತಿಮ ಮತದಾರರ ಪಟ್ಟಿ ಪ್ರಕಾರ ವಿಧಾನಸಭಾ ಕ್ಷೇತ್ರವಾರು ನೋಡಿದಾಗ ಅಫಜಲಪೂರನಲ್ಲಿ 1,22,657 ಪುರುಷ, 1,17,750 ಮಹಿಳೆ, ಇತರೆ 22 ಸೇರಿ 2,40,429, ಜೇವರ್ಗಿಯಲ್ಲಿ 1,27,030 ಪುರುಷ, 1,24,364 ಮಹಿಳೆ, ಇತರೆ 23 ಸೇರಿ 2,51,417, ಚಿತ್ತಾಪೂರದಲ್ಲಿ 1,24,636 ಪುರುಷ, 1,26,213 ಮಹಿಳೆ, ಇತರೆ 16 ಸೇರಿ 2,50,865, ಸೇಡಂನಲ್ಲಿ 1,15,559 ಪುರುಷ, 1,19,581 ಮಹಿಳೆ, ಇತರೆ 31 ಸೇರಿ 2,35,171, ಚಿಂಚೋಳಿಯಲ್ಲ್ಲಿ 1,08,304 ಪುರುಷ, 1,05,508 ಮಹಿಳೆ, ಇತರೆ 14 ಸೇರಿ 2,13,826, ಗುಲಬರ್ಗಾ ಗ್ರಾಮೀಣದಲ್ಲಿ 1,38,831 ಪುರುಷ, 1,33,639 ಮಹಿಳೆ, ಇತರೆ 36 ಸೇರಿ 2,72,506, ಗುಲಬರ್ಗಾ ದಕ್ಷಿಣದಲ್ಲಿ 1,45,626 ಪುರುಷ, 1,49,722 ಮಹಿಳೆ, ಇತರೆ 61 ಸೇರಿ 2,95,409, ಗುಲಬರ್ಗಾ ಉತ್ತರದಲ್ಲಿ 1,61,091 ಪುರುಷ, 1,64,179 ಮಹಿಳೆ, ಇತರೆ 93 ಸೇರಿ 3,25,363 ಹಾಗೂ ಆಳಂದನಲ್ಲಿ 1,32,436 ಪುರುಷ, 1,23,053 ಮಹಿಳೆ, ಇತರೆ 43 ಸೇರಿ 2,55,532 ಜನ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿಸಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.
ಜಿಲ್ಲೆಯಲ್ಲಿ ಲಿಂಗಾನುಪಾತ ಮತದಾರರ ಅಂಕಿ ಸಂಖ್ಯೆ ಗಮನಿಸಿದಾಗ 1,000 ಪುರುಷ ಮತದಾರರಿಗೆ 990 ಮಹಿಳಾ ಮತದಾರರಿದ್ದಾರೆ. ಅದೇ ರೀತಿ ಜನಸಂಖ್ಯೆ ಅನುಪಾತ ನೋಡಿದಾಗ ಶೇ.71.03 ಜನ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ 18-19 ವಯೋಮಾನದ 16,466 ಪುರುಷ, 12,751 ಮಹಿಳೆ, ಇತರೆ 3 ಸೇರಿ ಸೇರಿ ಒಟ್ಟು 29,220 ಜನ ಮತದಾರರು ಮತ್ತು 883 ಪುರುಷ, 24 ಮಹಿಳೆ ಸೇರಿ ಒಟ್ಟು 907 ಸೇವಾ ಮತದಾರರು ಹೆಸರು ನೊಂದಾಯಿಸಿಕೊಂಡಿದ್ದಾರೆ.
2,400 ಮತಗಟ್ಟೆಗಳು :
ಕಲಬುರಗಿ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳ ನಗರ ಪ್ರದೇಶದಲ್ಲಿ 776 ಮತ್ತು ಗ್ರಾಮಾಂತರ ಪ್ರದೇಶದಲ್ಲಿ 1,624 ಸೇರಿ ಒಟ್ಟು 2,400 ಮತಗಟ್ಟೆ ಗುರುತಿಸಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಚುನಾವಣಾ ತಹಶೀಲ್ದಾರ್ ಪಂಪಯ್ಯ ಸೇರಿದಂತೆ ರಾಜಕೀಯ ಪಕ್ಷದ ಮುಖಂಡರುಗಳು ಇದ್ದರು. ಇದೇ ಸಂದರ್ಭದಲ್ಲಿ ರಾಜಕೀಯ ಮುಖಂಡರುಗಳಿಗೆ ಮತದಾರರ ಪಟ್ಟಿಯನ್ನು ನೀಡಲಾಯಿತು.