ರಷ್ಯಾದ ಸೇನೆಯಲ್ಲಿ ಸಿಲುಕಿದ್ದ 3 ಕನ್ನಡಿಗರು ಕಲಬುರಗಿಗೆ ವಾಪಸ್
ಕಲಬುರಗಿಯ ಮೂವರು ಸೇರಿದಂತೆ 6 ಮಂದಿ ತವರಿಗೆ ಮರಳಿದ್ದಾರೆ.
ಕಲಬುರಗಿ : 2023ರ ಡಿ.28ರಿಂದ ಸೆಕ್ಯೂರಿಟಿ ಗಾರ್ಡ್ ಕೆಲಸ ಎಂದು ಬಲವಂತವಾಗಿ ರಷ್ಯಾ ಆರ್ಮಿಗೆ ಸೇರಿ 9 ತಿಂಗಳು ಜೀವ ಭಯದಲ್ಲೇ ದಿನಕಳೆಯುತ್ತಿದ್ದ ಕಲಬುರಗಿ ಮೂಲದ ಮೂವರು ಯುವಕರು ಕೊನೆಗೂ ಸುರಕ್ಷಿತವಾಗಿ ಹುಟ್ಟೂರಿಗೆ ಮರಳಿದ್ದಾರೆ.
ಜಿಲ್ಲೆಯ ಹಾಗರಗಾ ಪ್ರದೇಶದ ನಿವಾಸಿ ಸೈಯದ್ ಇಲಿಯಾಸ್ ಹುಸೇನಿ, ಬಿರ್ ಬಂಗಾಲಿ ದರ್ಗಾದ ನಿವಾಸಿ ಮುಹಮ್ಮದ್ ಸಮೀರ್, ಮೊಮಿನ್ ಪುರಾ ಪ್ರದೇಶದ ಮುಹಮ್ಮದ್ ನಯಿಮ್ ವಾಪಸ್ ಆದ ಯುವಕರು.
ಒಂಬತ್ತು ತಿಂಗಳ ಹಿಂದೆ ಮುಂಬೈ ಮೂಲದ ಬಾಬಾ ಎಂಬ ಎಜೆಂಟ್ ಕೆಲಸ ಕೊಡಿಸುವುದಾಗಿ ವಂಚಿಸಿ, ನಮ್ಮನ್ನು ರಷ್ಯಾ ಸೇನೆಗೆ ಬಲವಂತವಾಗಿ ಸೇರಿಸಿದ್ದ. ಅಲ್ಲದೆ, ಯುದ್ಧ ಪೀಡಿತ ಪ್ರದೇಶದಲ್ಲಿ ನಮ್ಮನ್ನು ನಿಯೋಜನೆ ಮಾಡಲಾಗಿದೆ ಎಂದು ಕಲಬುರಗಿಯ ಯುವಕರು ವಿಡಿಯೋ ಮಾಡಿ ಅಳಲು ತೊಡಗಿಕೊಂಡಿದ್ದರು.
ಈ ಬೆನ್ನಲ್ಲೇ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್, ಖರ್ಗೆ, ಅಂದಿನ ಸಂಸದ ಡಾ.ಉಮೇಶ್ ಜಾಧವ್ ಸೇರಿ ಅನೇಕರು ಈ ಬಗ್ಗೆ ಕೇಂದ್ರದ ಗಮನ ಸೆಳೆದಿದ್ದರಲ್ಲದೆ, ವಿದೇಶಾಂಗ ಇಲಾಖೆಗೂ ಯುವಕರ ರಕ್ಷಣೆ ಮನವಿ ಮಾಡಿದ್ದರು.
ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಅವರು ರಷ್ಯಾ ಅಧ್ಯಕ್ಷ ಪ್ಲಾದಿಮಿರ್ ಪುಟಿನ್ ಹಾಗೂ ಅಲ್ಲಿನ ವಿದೇಶಾಂಗ ಇಲಾಖೆಯ ಜತೆಗೆ ನಡೆಸಿದ ಮಾತುಕತೆಯ ಫಲವಾಗಿ ಯುದ್ಧ ಭೂಮಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ಕಲಬುರಗಿ ಮೂಲದ ಮೂವರು ಯುವಕರು ಹೈದ್ರಾಬಾದ್ ವಿಮಾನ ನಿಲ್ದಾಣದ ಮೂಲಕ ತವರಿಗೆ ಮರಳಿದ್ದಾರೆ.