ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಸಿಗುವುದು ಶತಸಿದ್ಧ : ಡಿ.ಕೆ.ಶಿವಕುಮಾರ್
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಕಲಬುರಗಿ : ಪಂಚಾಯತಿಯಿಂದ ಪಾರ್ಲಿಮೆಂಟ್ ವರೆಗೂ ಹೆಣ್ಣು ಮಕ್ಕಳಿಗೆ ಮೀಸಲಾತಿ ಕಲ್ಪಿಸಿದೆ. ಮುಂದಿನ ದಿನದಲ್ಲಿ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಸಿಗುವುದು ಶತಸಿದ್ಧ, ಅಧಿಕಾರ ಚಲಾಯಿಸಲು ನೀವು ಸಿದ್ಧರಾಗಿ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಹಿಳೆಯರಿಗೆ ಕರೆ ನೀಡಿದರು.
ಶನಿವಾರ ಇಲ್ಲಿನ ಪಿ.ಡಿ.ಎ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ʼಅಂತರರಾಷ್ಟ್ರೀಯ ಮಹಿಳಾ ದಿನಾಚರಣೆʼ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮಹಿಳೆಯರ ಉನ್ನತಿಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
ಹೆಣ್ಣನ್ನು ತಾಯಿಗೆ ಮತ್ತು ಭೂಮಿ ತಾಯಿಗೆ ಹೋಲಿಸಿ ಗೌರವ ನೀಡುವ ಸಂಸ್ಕೃತಿ ನಮ್ಮದಾಗಿದೆ. ಹೆಣ್ಣು ಬೆಳೆದರೆ ಸಮಾಜ ಬೆಳೆಯುತ್ತದೆ ಎಂಬ ನಂಬಿಕೆಯಿಂದಲೇ ಮಹಿಳಾ ಕೇಂದ್ರಿತವಾಗಿ ಆರ್ಥಿಕ ಶಕ್ತಿ ತುಂಬುವ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ನುಡಿದಂತೆ ನಡೆದ ಸರ್ಕಾರ ನಮ್ಮದು ಎಂದ ಅವರು, ಹೆಣ್ಣು ಬೆಳೆದರೆ ಒಂದು ಕುಟುಂಬ ಬೆಳೆದಂತೆ ಎಂದರು.
ಪೌಷ್ಟಿಕ ಆಹಾರ ಕಿಟ್ ವಿತರಣೆ :
ಕಾರ್ಯಕ್ರಮದಲ್ಲಿ ನೀತಿ ಅಯೋಗದ ಮಹತ್ವಕಾಂಕ್ಣೆ ತಾಲೂಕುಗಳಾದ ಶಾಹಾಬಾದ್, ಕಾಳಗಿ ಹಾಗೂ ಅಫಜಲಪುರ ತಾಲೂಕಿನಲ್ಲಿ ಮೊದಲನೇ ಮಗುವಿನ ನಿರೀಕ್ಷೆಯಲ್ಲಿರುವ 18-35 ವಯಸ್ಸಿನ 1,257 ಮಹಿಳೆಯರಿಗೆ ಆರೋಗ್ಯ ಪುಷ್ಠಿ ಯೋಜನೆಯಡಿ ಪೌಷ್ಟಿಕ ಆಹಾರ ಒದಗಿಸುವ ಕಿಟ್ ವಿತರಿಸಲಾಯಿತು. 120 ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಆದೇಶ ಪತ್ರ ಮತ್ತು ಗೃಹ ಲಕ್ಷ್ಮೀ ಯೋಜನೆಯಡಿ ನೂತನವಾಗಿ ನೊಂದಣಿ ಮಾಡಿಕೊಂಡ ಮಹಿಳೆಯರಿಗೆ ಚೆಕ್ ಗಳನ್ನು ಮತ್ತು 4,944 ಮಕ್ಕಳಿಗೆ ಸುಕನ್ಯಾ ಸಮೃದ್ಧಿ ಯೋಜನೆಯಡಿ ಬ್ಯಾಂಕ್ ಪಾಸ್ ಬುಕ್ ಗಳನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಅವರು ಫಲಾನುಭವಿಗಳಿಗೆ ವಿತರಿಸಿದರು.
ಮಹಿಳೆಯರಿಗೆ ಸನ್ಮಾನ :
ಮಹಿಳಾ ದಿನಾಚರಣೆ ಅಂಗವಾಗಿ ವಿಶೇಷ ಚೇತನರಾಗಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಹಾಗೂ ಗೃಹ ಉಪಯೋಗಿ ವಸ್ತುಗಳು ತಯಾರಿಸಿ, ಆದಾಯೋತ್ಪನ್ನ ಚಟುವಟಿಕೆಯಲ್ಲಿ ಸಾಧನೆಗೈದ ಕುಮಾರಿ ನೀತಾ ಡಿ.ಕಾಬಾ, ಎರೆಹುಳು ಗೊಬ್ಬರದ ಘಟಕವನ್ನು ಪ್ರಾರಂಭಿಸಿ ಉತ್ತಮ ಇಳುವರಿಯನ್ನು ಪಡೆದು ಆರ್ಥಿಕವಾಗಿ ಸಬಲರಾಗಿ ಎಲ್ಲಾ ಮಹಿಳೆಯರಿಗೂ ಮಾದರಿಯಾಗಿದ್ದಕ್ಕಾಗಿ ಚಿತ್ತಾಪುರ ತಾಲೂಕಿನ ಗೋಟುರ್ ಗ್ರಾಮದ ಮಲ್ಲಿಗೆ ಹೂ ಸ್ತ್ರೀ ಶಕ್ತಿ ಸಂಘದ ಸದಸ್ಯರಾದ ರೈತ ಮಹಿಳೆ ಶಶಿಕಲಾ ಹನುಮಂತ ರಾವ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಅಂಗನವಾಡಿ ಕಾರ್ಯಕರ್ತೆ ಶರಣಮ್ಮ, ಅಂಗನವಾಡಿ ಸಹಾಯಕಿ ಶಕುಂತಲಾ ಹೊಸಮನಿ ಹಾಗೂ ಅಂಗನವಾಡಿ ಮೇಲ್ವಿಚಾರಕಿ ಕವಿತಾ ಪಾಟೀಲ್ಅವರಿಗೆ ಗೌರವಿಸಿ ಸನ್ಮಾನಿಸಲಾಯಿತು.
ಶಾಸಕ ಅಲ್ಲಮಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಐ.ಟಿ-ಬಿ.ಟಿ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಂ ಖಾನ್, ಜೇವರ್ಗಿ ಶಾಸಕ ಮತ್ತು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಅಜಯಸಿಂಗ್, ಆಳಂದ ಶಾಸಕ ಹಾಗೂ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಕರ್ನಾಟಕ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ವಿಧಾನ ಪರಿಷತ್ ಶಾಸಕರುಗಳಾದ ಶಶೀಲ ಜಿ. ನಮೋಶಿ, ತಿಮ್ಮಣ್ಣಪ್ಪ ಕಮಕನೂರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಕುಮಾರ ರಾಠೋಡ ಇದ್ದರು.