ಸಾಹಿತ್ಯ ಪ್ರಿಯ ಮನಗಳ ಸಮ್ಮಿಲನದ ಭಾವ ಸಮ್ಮಿಲನ: ಕನ್ನಡ ದೀಪೋತ್ಸವ
ನಾಳೆ ವಿಜಯೀಭವ ಕೃತಿ ಜನಾರ್ಪಣೆ
ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಯವರು ಮೂರು ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಸಾಹಿತ್ಯಪ್ರಿಯ ಮನಗಳ ಸಮ್ಮಿಲನದ ಭಾವ ಸಮ್ಮಿಲನ ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ ಹಾಗೂ ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ ಜಂಟಿಯಾಗಿ ತಿಳಿಸಿದ್ದಾರೆ.
ನಾವು ಕನ್ನಡ ಭವನದ ಅಂಗಳಕ್ಕೆ ಕಾಲಿಟ್ಟು ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವ ನಿಟ್ಟಿನಲ್ಲಿ, ಕಳೆದ ಮೂರು ವರ್ಷಗಳಲ್ಲಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಿರಂತರವಾಗಿ ಏರ್ಪಡಿಸುತ್ತಾ ಬರಲಾಗಿದೆ. ಜಿಲ್ಲೆಯನ್ನು ಸಾಂಸ್ಕೃತಿಕ ಜಿಲ್ಲೆಯನ್ನಾಗಿ ಮಾಡಬೇಕೆಂಬ ಏಕೈಕ ಗುರಿ, ವಿಶ್ವಾಸವನ್ನಿಟ್ಟುಕೊಂಡು, ಜಿಲ್ಲೆಯ ಹಲವರ ಸಹಕಾರದಿಂದ ಪರಿಷತ್ತಿನ ಚಟುವಟಿಕೆಗಳು ಏರ್ಪಡಿಸುತ್ತಾ ಬರಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಅಂದಿನ ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖರನ್ನು ಸತ್ಕರಿಸಲಾಗುವುದು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇತ್ತೀಚೆಗೆ ನಡೆಸಿದ ಸ್ಪೂರ್ತಿಯ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ-ಪ್ರಮಾಣ ಪತ್ರ ವಿತರಿಸಲಾಗುವುದು. ಜತೆಗೆ ಅಂದು ಸಾಯಂಕಾಲ 5.15 ಕ್ಕೆ ನಗರದ ಕನ್ನಡ ಭವನದ ಆವರಣದಲ್ಲಿ ಹಚ್ಚೇವು ಕನ್ನಡದ ದೀಪ ಎಂಬ ಕನ್ನಡ ದೀಪೋತ್ಸವ ಕಾರ್ಯಕ್ರಮವನ್ನು ವಿಶೇಷ ರೀತಿಯಲ್ಲಿ ನಡೆಸಲಾಗುತ್ತಿದೆ.
ಪಾಳಾದ ಕಟ್ಟಿಮನಿ ಹಿರೇಮಠ ಸಂಸ್ಥಾನದ ಗುರುಮೂರ್ತಿ ಶಿವಾಚಾರ್ಯರು ಇವರ ದಿವ್ಯ ಸಾನಿಧ್ಯದಲ್ಲಿ ಜರುಗಲಿರುವ ಸಮಾರಂಭವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಹಿಪಾಲ ರೆಡ್ಡಿ ಮುನ್ನೂರ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಧರ್ಮಣ್ಣ ಎಚ್ ಧನ್ನಿ ಸಂಪಾದಕತ್ವದ ವಿಜಯೀಭವ ಎಂಬ ಕೃತಿಯನ್ನು ವೈದ್ಯ ಚಿಂತಕಿ ಡಾ. ಪ್ರತೀಮಾ ಕಾಮರೆಡ್ಡಿ ಜನಾರ್ಪಣೆಗೊಳಿಸಲಿದ್ದು, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರಣಬಸಪ್ಪ ಕ್ಯಾತನಾಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.