ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೈಲರ್ ಇರುವಾಗಲೇ ಮೊಬೈಲ್ ಬಳಕೆ ಮಾಡಿದ ಕೈದಿ : ಮತ್ತೊಂದು ವಿಡಿಯೋ ವೈರಲ್
ಕಲಬುರಗಿ : ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ರಾಜಾತಿಥ್ಯ ಸಿಗುತ್ತಿರುವ ಬಗ್ಗೆ ಈಗಾಗಲೇ ಸಾಕಷ್ಟು ವಿಡಿಯೋಗಳು ವೈರಲ್ ಆಗುತ್ತಿದ್ದು, ಈ ಮಧ್ಯೆ ಜೈಲರ್ ಇರುವಾಗಲೇ ಕೈದಿಯೊಬ್ಬ ರಾಜಾರೋಷವಾಗಿ ಮೊಬೈಲ್ ಬಳಸುತ್ತಿರುವ ಮತ್ತೊಂದು ವಿಡಿಯೋ ಬಯಲಾಗಿದೆ.
ಕಾರಾಗೃಹದಲ್ಲಿ ಜೈಲರ್ ಡಾ.ಅನಿತಾ ಅವರು ಕೈದಿಗಳನ್ನು ಸಾಲಾಗಿ ನಿಲ್ಲಿಸಿ ಪರೇಡ್ ಮಾಡಿದ್ದಾರೆ ಎನ್ನಲಾದ ವೀಡಿಯೊ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಪರೇಡ್ ಮಾಡಿದ ಕೆಲವೇ ಕ್ಷಣದಲ್ಲಿ ಪರೇಡ್ ಸಾಲಿನಲ್ಲಿ ನಿಂತ ಓರ್ವ ಕೈದಿ ತನ್ನ ಹಿಂಬದಿ ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಬಳಸಿ ಮತ್ತೆ ಜೇಬಿನಲ್ಲಿ ಇಟ್ಟಿಕೊಳ್ಳುತ್ತಾನೆ. ಅನಿತಾ ಅವರ ಜೊತೆ ಜೈಲಿನ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇರುವಾಗಲೇ ರಾಜರೋಷವಾಗಿ ಕೈದಿ ಮೊಬೈಲ್ ಬಳಸುವುದು ಮತ್ತು ವಿಡಿಯೋ ಮಾಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅ.26ರಂದು ಕಾರಾಗೃಹದಲ್ಲಿ ಕೈದಿಗಳು ಪ್ರತಿಭಟನೆ ಮಾಡಿ ಜಿಲ್ಲಾ ಸತ್ರ ನ್ಯಾಯಲಯದ ನ್ಯಾಯಧೀಶರಿಗೆ ಬರೆದಿದ್ದಾರೆ ಎನ್ನಲಾದ ಪತ್ರ ವೈರಲ್ ಆಗಿತ್ತು. ಮನವಿ ಪತ್ರದಲ್ಲಿ ಆಧೀಕ್ಷಕರ ವಿರುದ್ಧ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡುತ್ತಾರೆ. ಜೈಲಿನ ಮಹಿಳಾ ಸಿಬ್ಬಂದಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರಕರಣ ದಾಖಲಿಸುವ ಬೆದರಿಕೆ ಹಾಕುತ್ತಿದ್ದಾರೆ. ಬೇರೆ ಜೈಲಿಗೆ ವರ್ಗಾವಣೆ ಮಾಡುವುದಾಗಿ ಹೆದರಿಸುತ್ತಾರೆ. ದೈಹಿಕ ಹಿಂಸೆ ನೀಡಿ ನಂತರ ಅವರ ಪಿಎ ಮೂಲಕವೂ ಹಣದ ಬೇಡಿಕೆ ಹಾಕುತ್ತಾರೆ. ಆರೋಗ್ಯ ಸಮಸ್ಯೆ ಆದಾಗ ಹಣ ಕೊಟ್ಟರೆ ಹೊರ ಆಸ್ಪತ್ರೆಗೆ ಕಳುಹಿಸುತ್ತಾರೆ. ಇಲ್ಲದಿದ್ದರೆ ಸರಕಾರಿ ರಜೆ ದಿನ ಆಸ್ಪತ್ರೆಗೆ ಕಳಿಸುತ್ತಾರೆ. ಹಣ ನೀಡದಿದ್ದರೆ ನಮ್ಮ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಪ್ರತಿಭಟನೆ ನಡೆಸಿ, ಜೈಲರ್ ಅನಿತಾ ಅವರ ವಿರುದ್ಧ ಆರೋಪ ಮಾಡಿ ಕೈದಿಗಳು ಸಹಿ ಮಾಡಿದ್ದಾರೆ ಎನ್ನಲಾದ ಮನವಿ ಪತ್ರ ವೈರಲ್ ಆಗಿತ್ತು.
►ನನ್ನ ವಿರುದ್ಧ ಷಡ್ಯಂತ್ರ:
ಜೈಲಿನಲ್ಲಿ ಕೈದಿಗಳ ಐಷಾರಾಮಿ ಜೀವನದ ವಿಡಿಯೋಗಳು ವೈರಲ್ ಆಗಿದ್ದು, ಇದರ ಕುರಿತು ಪ್ರತಿಕ್ರಿಯೆ ನೀಡಿದ ಜೈಲರ್ ಡಾ.ಅನಿತಾ ಅವರು, ನಾನು ಜೈಲಿನಲ್ಲಿ ಅತ್ಯಂತ ಕಟ್ಟುನಿಟ್ಟಿನ ನಿಯಮ ತರುತ್ತಿದ್ದರಿಂದ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದು, ಬ್ಲ್ಯಾಕ್ ಮೇಲ್ ಮಾಡುವ ಮೂಲಕ ಪಿತೂರಿ ಮಾಡಿದ್ದಾರೆ. ಈಗಾಗಲೇ ಇದರ ವಿರುದ್ಧ ಫರಹತಾಬಾದ ಠಾಣೆಗೆ ದೂರು ನೀಡಿದ್ದೇನೆ. ಕೆಲ ಆರೋಪಿಗಳನ್ನು ವರ್ಗಾವಣೆ ಮಾಡಿದ ಬೆನ್ನಲ್ಲೇ, ವಿಡಿಯೋಗಳು ವೈರಲ್ ಆಗಿದೆ. ಇವುಗಳು ಅಕ್ಟೋಬರ್ 16 ರಿಂದ ನವೆಂಬರ್ 7 ರವರೆಗಿನ ವಿಡಿಯೋಗಳಾಗಿದ್ದು, ನನ್ನ ವಿರುದ್ದ ವ್ಯವಸ್ಥಿತವಾಗಿ ಕುತಂತ್ರ ನಡೆಯುತ್ತಿದೆ. ಇದರ ಕುರಿತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.