ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ಹೃದಯಾಘಾತದಿಂದ ನಿಧನ
ಕಲಬುರಗಿ: ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (80) ಅವರು ನಿಧನರಾಗಿದ್ದಾರೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಎರಡು ಅವಧಿಗೆ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಕೃಷಿ ಆಯೋಗದ ಅಧ್ಯಕ್ಷ, ಐಎಆರ್ ಐ ನಿರ್ದೇಶಕ ಹೀಗೆ ಹಲವು ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಣೆ ಮಾಡಿದ್ದರು.
ನಗರದ ಗೋದುತಾಯಿ ನಗರದ ನಿವಾಸದಲ್ಲಿ ಕಳೆದ ರಾತ್ರಿಮಲಗಿಕೊಂಡಿದ್ದ ವೇಳೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು. ಈ ವೇಳೆ ಮನೆಯಲ್ಲಿ ಯಾರೂ ಇದ್ದಿರಲಿಲ್ಲ. ಪಾಟೀಲ್ ಅವರು ಮನೆಯಿಂದ ಹೊರಗೆ ಬರದೇ ಇರುವುದನ್ನು ಗಮನಿಸಿದ ಕೆಳಗಡೆ ಬಾಡಿಗೆ ಇದ್ದವರು ಬಾಗಿಲು ಬಡಿದರೂ ತೆರೆಯಲಿಲ್ಲ. ಆಗ ಸಹೋದರರರಿಗೆ ಕರೆ ಮಾಡಿ ಕರೆಸಿ ಬಾಗಿಲು ತೆರೆದಾಗ ಮಲಗಿದಲ್ಲಿಯೇ ಮೃತಪಟ್ಟಿರುವುದು ತಿಳಿದು ಬಂದಿದೆ.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ಪಾರ್ಥಿವ ಶರೀರವನ್ನು ನಗರದ ಭಗವತಿ ನಗರದ ಮನೆಯಲ್ಲಿ ಇರಿಸಲಾಗಿದೆ. ಮೂವರು ಮಕ್ಕಳು ಅಮೆರಿಕದಲ್ಲಿ ಇರುವುದರಿಂದ ಅವರು ಬಂದ ನಂತರ ಅಂತ್ಯಕ್ರಿಯೆ ನೆರವೇರಿಸಲು ಸಹೋದರರು, ಆಪ್ತರು ನಿರ್ಧರಿಸಿದ್ದಾರೆ.