ಎ.16ರಿಂದ ಪ್ರತಿದಿನ ಕಲಬುರಗಿ - ಬೆಂಗಳೂರು ನಡುವೆ ವಿಮಾನ ಸೇವೆ
ವಾರ್ತಾಭಾರತಿ ವರದಿ ಫಲಶ್ರುತಿ

ಕಲಬುರಗಿ, ಎ.10: ಕಲ್ಯಾಣ ಕರ್ನಾಟಕದ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಯಿಂದ ರಾಜಧಾನಿ ಬೆಂಗಳೂರಿಗೆ ವಿಮಾನ ಸೇವೆಯಲ್ಲಿ ವ್ಯತ್ಯಯ ಎದುರಾಗಿತ್ತು. ಇದರಿಂದ ಈ ಭಾಗದಲ್ಲಿ ಕೆಲಸ ಮಾಡುತ್ತಿರುವ ಉದ್ಯಮಿ, ಸರಕಾರಿ ಇಲಾಖೆಯ ಸಿಬ್ಬಂದಿಗೆ, ಪ್ರವಾಸಿಗರಿಗೆ, ಸ್ಥಳೀಯರಿಗೆ ಮತ್ತಿತರ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿತ್ತು. ಇದೀಗ ರಾಜಧಾನಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ನಿತ್ಯವೂ ವಿಮಾನ ಸೇವೆ ಸಿಗಲಿದೆ.
ವಿಮಾನ ಸೇವೆಯಲ್ಲಿ ವ್ಯತ್ಯಯ ಆಗಿರುವುದರ ಬಗ್ಗೆ ವಾರ್ತಾಭಾರತಿ ವರದಿ ಮಾಡಿತ್ತು. ಇದೀಗ ಅದರ ಫಲಶ್ರುತಿ ಇಂದು ಆಗಿದೆ.
ಕಳೆದ ವರ್ಷ 2024ರ ನವೆಂಬರ್ 13 ರಂದು ಪತ್ರಿಕೆ ಲೇಖನ ಪ್ರಕಟಿಸಿತ್ತು. ಇದೀಗ ಬರೋಬ್ಬರಿ 5 ತಿಂಗಳ ಬಳಿಕ ವರದಿಯ ಫಲಶ್ರುತಿಯ ಕಾರಣ ಕಲಬುರಗಿಯಿಂದ ರಾಜಧಾನಿ ಬೆಂಗಳೂರಿಗೆ ವಿಮಾನ ಸೇವೆ ಆರಂಭವಾಗಲಿದೆ.
ಸ್ಟಾರ್ ಏರ್‌ಲೈನ್ಸ್ ವತಿಯಿಂದ ಎ.16ರಿಂದ ಕಲಬುರಗಿ ಮತ್ತು ಬೆಂಗಳೂರು ನಡುವೆ ನಿತ್ಯ ವಿಮಾನ ಸಂಚಾರ ಪ್ರಾರಂಭವಾಗಲಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಶರಣು ಪಪ್ಪಾಮತ್ತು ಗೌರವ ಕಾರ್ಯದರ್ಶಿ ಶಿವರಾಜ ವಿ.ಇಂಗನಶೆಟ್ಟಿ ತಿಳಿಸಿದ್ದಾರೆ.
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ ನಾಯ್ಡು, ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಪ್ರಯತ್ನದಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ದಿನಾಲೂ ವಿಮಾನ ಸೇವೆ ಲಭ್ಯವಾಗಲಿದೆ. ಇನ್ನು ಮುಂದೆ ನಿತ್ಯವೂ ವಿಮಾನ ಸೇವೆ ಪ್ರಾರಂಭವಾಗುವುದರಿಂದ ಕಲಬುರಗಿ ಹಾಗೂ ಸುತ್ತಲಿನ ಜಿಲ್ಲೆಗಳ ಪ್ರಯಾಣಿಕರಿಗೆ ಅನುಕೂಲ ಆಗಲಿದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಕಲಬುರಗಿ - ಬೆಂಗಳೂರು ಮಧ್ಯೆ ದಿನಾಲೂ ವಿಮಾನ ಸೇವೆ ಆರಂಭವಾಗಲಿದೆ, ಇದಕ್ಕೆ ಕೇಂದ್ರ ಸರಕಾರ ಅನುಮೋದನೆ ಕೊಟ್ಟಿದೆ ಎಂದು ಸಂಸದ ರಾಧಾಕೃಷ್ಣ ದೊಡ್ಡಮನಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ವ್ಯಾಪಾರ ಮತ್ತು ಧಾರ್ಮಿಕ ಕ್ಷೇತ್ರಗಳ ಹಿನ್ನೆಲೆಯಲ್ಲಿ ದಿಲ್ಲಿ ಮತ್ತು ತಿರುಪತಿ ನಡುವೆ ಮತ್ತೆ ನಿತ್ಯ ವಿಮಾನ ಸಂಚಾರ ಆರಂಭವಾಗಬೇಕು. ಮುಂಬೈ, ಅಹಮದಾಬಾದ್, ರಾಜಸ್ಥಾನದ ಕಿಶನ್ ಗಡ್ ಮತ್ತು ಗೋವಾಕ್ಕೂ ವಿಮಾನ ಸೇವೆ ವಿಸ್ತರಣೆ ಮಾಡಬೇಕೆಂದು ಇಲ್ಲಿನ ಉದ್ಯಮಿಗಳು ಸರಕಾರವನ್ನು ಒತ್ತಾಯಿಸಿದ್ದಾರೆ.
ಕಲಬುರಗಿ - ಬೆಂಗಳೂರು ವಿಮಾನ ಸೇವೆ ನಿತ್ಯವೂ ಅರಂಭವಾಗಿರುವುದರಿಂದ ಇದಕ್ಕೆ ಕಾರಣಕರ್ತರಾಗಿ ವರದಿ ಪ್ರಕಟಿಸಿದ ವಾರ್ತಾಭಾರತಿ ಪತ್ರಿಕೆಗೆ ಪ್ರಯಾಣಿಕರು ಧನ್ಯವಾದ ತಿಳಿಸಿದ್ದಾರೆ.