ಆಳಂದ | ಸಂಭ್ರಮದ ಯುಗಾದಿ, ಈದ್-ಉಲ್-ಫಿತ್ರ್ ಆಚರಣೆ

ಕಲಬುರಗಿ: ಆಳಂದ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಭಾನುವಾರ ಯುಗಾದಿ ಹಬ್ಬವನ್ನು ಆಚರಿಸಿದರೆ ಸೋಮವಾರ ಈದ್-ಉಲ್-ಫಿತ್ರ್ ಹಬ್ಬವು ಸಡಗರ ಸಂಭ್ರಮದೊoದಿಗೆ ಆಚರಿಸಲಾಯಿತು.
ಈದ್-ಉಲ್-ಫಿತ್ರ್ ಪ್ರಯುಕ್ತ ಸೋಮವಾರ ಬೆಳಗಿನ ಜಾವ ಆಳಂದ ಪಟ್ಟಣದ ಈದ್ಗಾ ಮೈದಾನದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಬಳಿಕ ಪರಸ್ಪರ ಹೃದಯ ಸ್ಪರ್ಶಿಸಿ ಶುಭಾಷಯ ಕೋರಿದರು. ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ನೇತೃತ್ವದಲ್ಲಿ ಸಿಬ್ಬಂದಿಗಳು ನಾಲ್ಕು ಧಿಕ್ಕಿಗೆ ಕಾವಲು ನಿಂತು ಭದ್ರತೆ ಒದಗಿಸಿದರು.
ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬವು ಏಕಕಾಲಕ್ಕೆ ಈ ಎರಡೂ ಹಬ್ಬಕ್ಕೆ ಸರ್ವ ಧರ್ಮೀಯರು ಹೃದಯ ಸ್ಪರ್ಶಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಶುಭ ಹಾರೈಕೆಗಳನ್ನು ಹೇಳಿಕೊಂಡಿದ್ದು ಸಾಮಾನ್ಯವಾಗಿ ಕಂಡಿತು.
ಪಟ್ಟಣದಲ್ಲಿ ರಾಜ್ಯ ನೀತಿ ಆಯೋಗ ಉಪಾಧ್ಯಕ್ಷರಾದ ಶಾಸಕ ಬಿ.ಆರ್.ಪಾಟೀಲ್ ಅವರು ತಮ್ಮ ಅಭಿಮಾನಿಗಳ ಮನೆಗೆ ಭೇಟಿ ನೀಡಿ ಹಬ್ಬದ ಶುಭಾಷಯ ಕೋರಿ ಸುರಕುಂಬಾ ಸವಿದರು.
ಮುಸ್ಲಿಂ ಬಾಂಧವರಿಗೆ ಗುತ್ತೇದಾರ್ ಶುಭಹಾರೈಕೆ :
ತಾಲೂಕಿನ ತೆಲಾಕುಣಿ ಗ್ರಾಮದಲ್ಲಿ ಕಿಣ್ಣಿಸುಲ್ತಾನ ಗ್ರಾಮ ಪಂಚಾಯತ್ ಅಧ್ಯಕ್ಷ ಮಹಿಬೂಬಭಾಷಾ ಶೇಖ್ ಅವರ ನಿವಾಸದಲ್ಲಿ ಈದ್-ಉಲ್-ಫಿತ್ರ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಸೌಹಾರ್ದ ಕೂಟದಲ್ಲಿ ಮಾಜಿ ಶಾಸಕ ಸುಭಾಷ ಗುತ್ತೇದಾರ ಅವರು ಪಾಳ್ಗೊಂಡು ಸನ್ಮಾನ ಸ್ವೀಕರಿಸಿದರು.
ಈ ಬಾರಿ ಯುಗಾದಿ ಮತ್ತು ಈದ್-ಉಲ್-ಫಿತ್ರ್ ಹಬ್ಬಗಳು ಏಕಕಾಲದಲ್ಲಿ ಸಂಭ್ರಮ ಸಂಗಮವಾಗಿ ಬಂದಿರುವ ಈ ಶುಭ ಸಂದರ್ಭದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರ ಜೀವನದಲ್ಲಿ ಸುಖ, ಶಾಂತಿ ನೆಮ್ಮದಿ ತರಲಿ ಎಂದು ಅವರು ಶುಭಕೋರಿದರು.
ಈ ವೇಳೆ ಹಬ್ಬದ ವಿಶೇಷವಾದ ಸುರಕುಂಬಾ ಸವಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಂದಗುಳೆ, ಬಸವರಾಜ ಕೇರೂರ, ಶ್ರೀರಾಮ ಮಂದಿರ ಕಮೀಟಿ ಏಕನಾಥ ಏಟೆ, ನಿಜಲಿಂಗಪದಪ ಮೋದೆ, ಜಾಫರ್ ಮಖಾಂದರ, ಮೋದಿನ ಜಮಾದಾರ, ಸುನಿಲ ಹಿರೋಳಿಕರ್, ಮಲ್ಲಿನಾಥ ಹತ್ತೆ, ಕಸಾಪ ಅಧ್ಯಕ್ಷ ಹಣಮಂತ ಶೇರಿ ಮತ್ತಿತರರು ಇದ್ದರು.
ಗ್ರಾಪಂ ಅಧ್ಯಕ್ಷ ಮಹಿಬೂಬಭಾಷಾ ಶೇಖ್ ಸರ್ವರನ್ನು ಸ್ವಾಗತಿಸಿ ಸನ್ಮಾನಿಸಿದರು. ಶಶಿಕಾಂತ ಪಾಟೀಲ ವಂದಿಸಿದರು.
ಹಬ್ಬದ ನಿಮಿತ್ತ ಎಂದಿನoತೆ ಮುಸ್ಲಿಂ ಬಾಂಧವರು ಹಿಂದೂ ಬಾಂಧವರನ್ನು ತಮ್ಮ ಮನೆಗಳಿಗೆ ಅಹ್ವಾನಿಸಿ ಸಾಂಪ್ರದಾಯಿಕ ಸುರಕುಂಬಾ ಕುಡಿಸಿ ಪರಸ್ಪರ ಆತ್ಮೀಯತೆ ಮೆರೆದರು.