ಆಳಂದ | ತೆರೆದ ಬಾವಿ ಕಾಮಗಾರಿಯಲ್ಲಿ ಅವ್ಯವಹಾರ; ಲೋಕಾಯುಕ್ತಗೆ ದೂರು

ಕಲಬುರಗಿ : ಆಳಂದ ತಾಲೂಕಿನ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ತೆರೆದ ಬಾವಿ ಕಾಮಗಾರಿಯಲ್ಲಿ ಅಕ್ರಮ ನಡೆಯುತ್ತಿದ್ದು, ಕೂಡಲೇ ಈ ಯೋಜನೆಯನ್ನು ತಡೆ ಹಿಡಿಯಬೇಕು ಅಲ್ಲದೇ ತಪ್ಪಿತಸ್ಥ ಅಧಿಕಾರಿಗಳು ಮತ್ತು ಅದರ ಹಿಂದಿರುವವರನ್ನು ಪತ್ತೆ ಹಚ್ಚಿ ಸೂಕ್ತ ತನಿಖೆ ನಡೆಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅವರು ಕರ್ನಾಟಕ ಲೋಕಾಯುಕ್ತರಿಗೆ ಬೆಂಗಳೂರಿನಲ್ಲಿ ದೂರು ಸಲ್ಲಿಸಿದ್ದಾರೆ.
ಎಲ್ಲಾ ಕಾಮಗಾರಿಗಳ ಅವ್ಯವಹಾರದ ಹಿಂದೇ ಶಾಸಕರ ಕುಮಕ್ಕಿನಿಂದ ಅವರ ಸಹೋದರ ಪುತ್ರ ಆರ್.ಕೆ.ಪಾಟೀಲ ತಮ್ಮ ಹಿಂಬಾಲಕರ ಮೂಲಕ ಅವ್ಯವಹಾರ ಎಸಗಿದ್ದಾರೆ. ಈ ಕುರಿತು ಸಮಗ್ರವಾಗಿ ತನಿಖೆಯಾಗಬೇಕು. ನೈಜ್ಯ ಕಾರ್ಮಿಕರಿಗೆ ಕೆಲಸ ದೊರೆಯಬೇಕು. ವೈಜ್ಞಾನಿಕ ಕಾಮಗಾರಿಳು ನಡೆಯಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ದೂರುಗಳು ನೀಡಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲವೆಂದರೆ, ಕೂಲಿ ಕಾರ್ಮಿಕರೊಂದಿಗೆ ಹಂತ ಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಈ ಹಿಂದೆ ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಸುಭಾಷ್ ಆರ್.ಗುತ್ತೇದಾರ ಅವರು ಎಚ್ಚರಿಕೆ ನೀಡಿದ್ದಾರೆ.