ಅನಂತಕುಮಾರ್ ಹೆಗಡೆಯ ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿ ಪಕ್ಷದ ಅಧಿಕೃತ ಹೇಳಿಕೆಯಾಗಿದೆ: ಸಚಿವ ಪ್ರಿಯಾಂಕ್ ಖರ್ಗೆ
ಕಲಬುರಗಿ: ಸಂಸದ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿ ಪಕ್ಷದ ಅಧಿಕೃತ ಹೇಳಿಕೆಯಾಗಿದ್ದು, ಅವರ ಹೇಳಿಕೆ ಖಂಡನೆ ಮಾಡದೇ ಪ್ರಧಾನಿ ಸುಮ್ಮನಿದ್ದಾರೆ. ಸಂವಿಧಾನ ಬದಲಾವಣೆ ಉದ್ದೇಶದ ಹಿಂದೆ ಮೀಸಲಾತಿ ತೆಗೆಯುವ ಹುನ್ನಾರವಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಾಡಿ ಪಟ್ಟಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಲಾಗಿದ್ದ ಸಂವಿಧಾನ ಜಾಗೃತಿ ಜಾಥಾ ಸಮಾರೋಪ ಸಮಾರಂಭ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರ ಅನಾವರಣ, ಅಂದಾಜು 423.09 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಹಾಗೂ ಐದು ಗ್ಯಾರಂಟಿ ಯೋಜನೆಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
"ಕೆಲ ಪಟ್ಟಭದ್ರ ಹಿತಾಸಕ್ತಿಗಳಿಗೆ ಮೀಸಲಾತಿ ಸಹಿಸಲು ಆಗುತ್ತಿಲ್ಲ. ಜನರು ಒಂದಾಗಬೇಕಿದ್ದು ಅವರ ಹುನ್ನಾರ ಅರ್ಥ ಮಾಡಿಕೊಂಡು ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಬೇಕು" ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂವಿಧಾನ ಪೀಠಿಕೆಯನ್ನು ಬೋಧಿಸಲಾಯಿತು ಜೊತೆಗೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಗೌರವಿಸಲಾಯಿತು.
ಇದಕ್ಕೂ ಮುನ್ನ ಸಚಿವರು ಸೇರಿದಂತೆ ಇತರೆ ಗಣ್ಯರು ಪಟ್ಟಣದ ಬಸವೇಶ್ವರ ಹಾಗೂ ಡಾ ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ವೇದಿಕೆಯ ಮೇಲೆ ಸಿಎಂ ಸಲಹೆಗಾರ ಬಿ.ಆರ್.ಪಾಟೀಲ್, ಶಾಸಕರಾದ ಎಂ.ವೈ.ಪಾಟೀಲ್, ಅಲ್ಲಮಪ್ತಭು ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಮಜರ್ ಖಾನ್, ಮಾಜಿ ಸಚಿವ ರೇವುನಾಯಕ ಬೆಳಮಗಿ, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಸೇರಿದಂತೆ ಹಲವರಿದ್ದರು.